ಬೋಧಿಸುತ್ತದೆ ಪುಸ್ತಕದ ವೈಶಿಷ್ಟ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ
ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂದು ವಿದ್ಯಾರ್ಥಿಯು ಕಲಿತು ಅನ್ವಯಿಸಿಕೊಂಡರೆ, ಖಂಡಿತ ಅವನು ಆಧ್ಯಾತ್ಮಿಕವಾಗಿ ಬೆಳೆದು ಉತ್ತಮ ಫಲ ಕೊಡುವನು. (ಕೀರ್ತ. 1:1-3) ನಾವು ಬೈಬಲ್ ಬೋಧಿಸುತ್ತದೆ ಪುಸ್ತಕದಲ್ಲಿರುವ ಕೆಲವೊಂದು ವಿಷಯಗಳನ್ನು ಉಪಯೋಗಿಸಿ ವಿದ್ಯಾರ್ಥಿ ಪ್ರಗತಿ ಮಾಡಲು ಸಹಾಯ ಮಾಡಬಹುದು.
ಅಧ್ಯಾಯದ ಆರಂಭದಲ್ಲಿರುವ ಪ್ರಶ್ನೆಗಳು: ಈ ಪ್ರಶ್ನೆಗಳಿಗೆ ಉತ್ತರ ಅದೇ ಅಧ್ಯಾಯದಲ್ಲಿರುತ್ತದೆ. ಅಧ್ಯಾಯದ ಆರಂಭದಲ್ಲೇ ಈ ಪ್ರಶ್ನೆಗಳನ್ನು ಓದಬಹುದು ಅಥವಾ ಪ್ರತಿಯೊಂದು ಪ್ರಶ್ನೆಗೆ ಚುಟುಕಾಗಿ ಉತ್ತರಿಸುವಂತೆ ವಿದ್ಯಾರ್ಥಿಯನ್ನು ಕೇಳಿಕೊಳ್ಳಬಹುದು. ಅವನು ಕೊಡುವ ಉತ್ತರ ತಪ್ಪಾಗಿದ್ದರೆ ಅದನ್ನು ಆಗಲೇ ಸರಿಪಡಿಸುವ ಅಗತ್ಯವಿಲ್ಲ. ಅವನ ಉತ್ತರಗಳಿಂದಲೇ ಯಾವ ವಿಷಯಕ್ಕೆ ಹೆಚ್ಚಿನ ಒತ್ತು ಕೊಡಬೇಕು ಅಂತ ಗೊತ್ತಾಗುತ್ತದೆ.—ಜ್ಞಾನೋ. 16:23; 18:13.
ಪರಿಶಿಷ್ಟ: ವಿದ್ಯಾರ್ಥಿ ಅಧ್ಯಾಯದಲ್ಲಿರುವ ವಿಷಯಗಳನ್ನು ಅರ್ಥಮಾಡಿಕೊಂಡು ಒಪ್ಪಿದರೆ ತನ್ನ ಸ್ವಂತ ಸಮಯದಲ್ಲಿ ಪರಿಶಿಷ್ಟವನ್ನು ಓದಿಕೊಳ್ಳುವಂತೆ ಉತ್ತೇಜಿಸಿ. ಮುಂದಿನ ಅಧ್ಯಯನದಲ್ಲಿ ಕೆಲವು ನಿಮಿಷ ತೆಗೆದುಕೊಂಡು ಅವನು ಅದನ್ನು ಅರ್ಥಮಾಡಿಕೊಂಡಿದ್ದಾನಾ ಎಂದು ಖಚಿತಪಡಿಸಿಕೊಳ್ಳಿ. ಆದರೆ, ಪರಿಶಿಷ್ಟವನ್ನು ಚರ್ಚಿಸುವುದು ತುಂಬಾ ಪ್ರಾಮುಖ್ಯವೆಂದು ಅನಿಸಿದರೆ ಅದರಲ್ಲಿರುವ ವಿಷಯಗಳನ್ನು ಚರ್ಚಿಸಲು ಸಮಯ ತೆಗೆದುಕೊಳ್ಳಿ. ಪ್ರತಿಯೊಂದು ಪ್ಯಾರಗಳನ್ನು ಓದಿ, ನೀವು ತಯಾರಿಸಿದ ಪ್ರಶ್ನೆಗಳನ್ನು ಕೇಳಿ.
ಪುನರವಲೋಕನ ಚೌಕ: ಅಧ್ಯಾಯದ ಆರಂಭದಲ್ಲಿರುವ ಪ್ರಶ್ನೆಗಳ ಸಂಕ್ಷಿಪ್ತ ಉತ್ತರ ಈ ಚೌಕದಲ್ಲಿರುತ್ತದೆ. ವಿದ್ಯಾರ್ಥಿ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನಾ ಮತ್ತು ಅದರಲ್ಲಿರುವ ಮುಖ್ಯ ವಿಷಯಗಳನ್ನು ವಿವರಿಸಲು ಅವನಿಂದಾಗುತ್ತದಾ ಎಂದು ತಿಳಿಯಲು ಈ ಚೌಕವನ್ನು ಉಪಯೋಗಿಸಬಹುದು. ಚೌಕದಲ್ಲಿರುವ ಪ್ರತಿಯೊಂದು ಹೇಳಿಕೆಗಳನ್ನು ಮತ್ತು ಕೊಡಲಾಗಿರುವ ವಚನಗಳನ್ನು ಒಟ್ಟಾಗಿ ಓದಿ. ಈ ಹೇಳಿಕೆಗಳು ಸತ್ಯವಾಗಿವೆ ಅಂತ ರುಜುಪಡಿಸಲು ವಚನಗಳು ಹೇಗೆ ಸಹಾಯ ಮಾಡುತ್ತವೆ ಎಂದು ವಿದ್ಯಾರ್ಥಿಯನ್ನು ಕೇಳಿ.—ಅ. ಕಾ. 17:2, 3.