ನಿಷ್ಕ್ರಿಯರಾಗಿರುವವರನ್ನು ಮರೆಯದಿರಿ
1. ನಾವು ನಿಷ್ಕ್ರಿಯರಾದವರನ್ನು ಉತ್ತೇಜಿಸಲು ಪ್ರಯತ್ನಿಸಬೇಕು ಏಕೆ?
1 ನಿಷ್ಕ್ರಿಯರಾಗಿರುವ ಯಾವುದೇ ವ್ಯಕ್ತಿಯ ಪರಿಚಯ ನಿಮಗಿದೆಯೇ? ಬಹುಶಃ ಅವರು ಸಭೆಯೊಂದಿಗೆ ಸಹವಸಿಸುವುದನ್ನು ನಿಲ್ಲಿಸಿ ದೂರಸರಿದಿರಬಹುದು. ನೀವು ಅಂಥ ವ್ಯಕ್ತಿಯನ್ನು ಮನೆಮನೆಯ ಸೇವೆಯಲ್ಲಿ ಭೇಟಿಯಾಗಿರಬಹುದು. ನಿಷ್ಕ್ರಿಯನಾಗಿರುವವನು ಈಗಲೂ ನಮ್ಮ ಆಧ್ಯಾತ್ಮಿಕ ಸಹೋದರನಾಗಿದ್ದಾನೆ ಎಂಬುದನ್ನು ನಾವು ಮನಸ್ಸಿನಲ್ಲಿಡಬೇಕು. ನಾವು ಅವನನ್ನು ಈಗಲೂ ಪ್ರೀತಿಸುತ್ತೇವೆಂದು ಅವನಿಗೆ ಆಶ್ವಾಸನೆ ಕೊಡಬೇಕು. ಅಲ್ಲದೆ ಅವನು ಸಭೆಗೆ ಮತ್ತು ‘ನಮ್ಮ ಆತ್ಮಗಳನ್ನು ಕಾಯುವ ಕುರುಬನೂ ಅಧ್ಯಕ್ಷನೂ ಆಗಿರುವಾತನ ಬಳಿಗೆ’ ಹಿಂದಿರುಗುವಂತೆ ಸಹಾಯಮಾಡಬೇಕು.—1 ಪೇತ್ರ 2:25.
2. ನಿಷ್ಕ್ರಿಯ ವ್ಯಕ್ತಿಗೆ ನಾವು ಹೇಗೆ ಉತ್ತೇಜನ ನೀಡಬಹುದು?
2 ಆಸಕ್ತಿ ತೋರಿಸಿರಿ: ನಿಷ್ಕ್ರಿಯರಾದವರಿಗೆ ಒಂದು ಫೋನ್ ಕರೆ ಮಾಡುವುದು ಅಥವಾ ಅವರನ್ನು ಭೇಟಿಮಾಡುವುದು, ನಾವು ಇನ್ನೂ ಅವರನ್ನು ಮರೆತಿಲ್ಲ ಎಂಬ ಆಶ್ವಾಸನೆಯನ್ನು ಅವರಿಗೆ ಕೊಡುವುದು. ನಾವು ಏನು ಹೇಳಬಹುದು? ನಾವು ಅವರ ಬಗ್ಗೆ ಆಗಾಗ್ಗೆ ನೆನಸಿಕೊಳ್ಳುತ್ತೇವೆ ಎಂದು ಅವರಿಗೆ ತಿಳಿಸುವ ಮೂಲಕ ಅವರನ್ನು ಉತ್ತೇಜಿಸಬಹುದು. ನಮ್ಮ ಸಂಭಾಷಣೆಯು ಸಕಾರಾತ್ಮಕವು ಮತ್ತು ಅವರನ್ನು ಕಟ್ಟುವಂಥದ್ದು ಆಗಿರಬೇಕು. (ಫಿಲಿ. 4:8) ಇತ್ತೀಚಿನ ಕೂಟದಲ್ಲಿ ನಮಗೆ ಇಷ್ಟವಾದ ಒಂದು ಅಂಶವನ್ನು ಅವರೊಂದಿಗೆ ಹಂಚಿಕೊಳ್ಳಬಹುದು. ಮುಂದಿನ ಕೂಟಕ್ಕಾಗಲಿ ಅಥವಾ ಸಮ್ಮೇಳನಕ್ಕಾಗಲಿ ನಾವು ಅವನನ್ನು ಆಮಂತ್ರಿಸಲೂಬಹುದು ಮತ್ತು ಅವನಿಗಾಗಿ ಸಾರಿಗೆ ವ್ಯವಸ್ಥೆ ಮಾಡುವೆವು ಇಲ್ಲವೆ ಆಸನವನ್ನು ಕಾದಿರಿಸುವೆವು ಎಂದು ಹೇಳಬಹುದು.
3. ಒಬ್ಬ ಸಹೋದರಿಯು ಪುನಃ ಸಕ್ರಿಯಳಾಗುವಂತೆ ಹೇಗೆ ಸಹಾಯಮಾಡಲಾಯಿತು?
3 ಸುಮಾರು 20ಕ್ಕಿಂತಲೂ ಹೆಚ್ಚು ವರ್ಷ ನಿಷ್ಕ್ರಿಯಳಾಗಿದ್ದ ಒಬ್ಬ ಸಹೋದರಿಯನ್ನು ಕ್ಷೇತ್ರಸೇವೆಯಲ್ಲಿ ಭೇಟಿಮಾಡಲಾಯಿತು. ಅವಳಿಗೆ ಬೈಬಲ್ ಅಧ್ಯಯನಮಾಡಲು ಮನಸ್ಸಿರಲಿಲ್ಲ. ಆದರೂ, ಅವಳನ್ನು ಭೇಟಿಮಾಡಿದ ಸಹೋದರಿಯು ಅವಳನ್ನು ಪುನಃ ಪುನಃ ಸಂದರ್ಶಿಸಿ, ಪ್ರಸ್ತುತ ಪತ್ರಿಕೆಗಳನ್ನು ನೀಡುತ್ತಾ ಬಂದಳು. ಈ ಪ್ರಚಾರಕಳು ತಾನು ಹಾಜರಾದ ಜಿಲ್ಲಾ ಅಧಿವೇಶನದ ಕೆಲವೊಂದು ಮುಖ್ಯಾಂಶಗಳನ್ನು ನಿಷ್ಕ್ರಿಯಳಾದ ಸಹೋದರಿಯೊಂದಿಗೆ ಹಂಚಿಕೊಂಡಳು ಮತ್ತು ಕೊನೆಗೆ ಅವಳು ಪುನಃ ಸಕ್ರಿಯಳಾದಳು.
4. ಒಬ್ಬರು ಕೂಟಗಳಿಗೆ ಹಾಜರಾಗುತ್ತಾ ಪುನಃ ಸಭೆಯೊಂದಿಗೆ ಸಹವಸಿಸುವುದನ್ನು ಆರಂಭಿಸುವಲ್ಲಿ ಅವರನ್ನು ನಾವು ಹೇಗೆ ಉಪಚರಿಸಬೇಕು?
4 ಒಬ್ಬರು ಹಿಂದಿರುಗಿ ಬಂದಾಗ: ನಿಷ್ಕ್ರಿಯನಾಗಿರುವ ಸಹೋದರನು ಮತ್ತೆ ಕೂಟಕ್ಕೆ ಹಾಜರಾಗಲು ಪ್ರಾರಂಭಿಸುವುದಾದರೆ, ನಾವು ಅವನನ್ನು ಹೇಗೆ ಉಪಚರಿಸಬೇಕು? ತಾತ್ಕಾಲಿಕವಾಗಿ ತನ್ನನ್ನು ತೊರೆದು ಹೋಗಿದ್ದ ಶಿಷ್ಯರನ್ನು ಯೇಸು ಹೇಗೆ ಉಪಚರಿಸಿದನು? ಯೇಸು ಅವರನ್ನು ಹೃತ್ಪೂರ್ವಕವಾಗಿ ‘ನನ್ನ ಸಹೋದರರು’ ಎಂದು ಕರೆದನು ಮತ್ತು ಅವರಲ್ಲಿ ತನಗೆ ಭರವಸವಿದೆ ಎಂಬುದನ್ನು ತೋರಿಸಿಕೊಟ್ಟನು. ಅವರಿಗೆ ಒಂದು ಮಹತ್ವಪೂರ್ಣ ನೇಮಕವನ್ನು ಸಹ ಕೊಟ್ಟನು. (ಮತ್ತಾ. 28:10, 18, 19) ಇದಾದ ಸ್ವಲ್ಪದರಲ್ಲೇ, ಅವರು “ಎಡೆಬಿಡದೆ” ಸುವಾರ್ತೆಯನ್ನು ಸಾರುವುದರಲ್ಲಿ ಕಾರ್ಯಮಗ್ನರಾದರು.—ಅ. ಕೃ. 5:42.
5. ನಿಷ್ಕ್ರಿಯರಾಗಿರುವವರ ಸಂಬಂಧದಲ್ಲಿ ಯಾವ ಸನ್ನಿವೇಶಗಳ ಕುರಿತು ನಾವು ಹಿರಿಯರೊಂದಿಗೆ ಮಾತಾಡಬೇಕು?
5 ನಿಷ್ಕ್ರಿಯರಾಗಿದ್ದ ಒಬ್ಬರೊಂದಿಗೆ ಬೈಬಲ್ ಅಧ್ಯಯನ ಅರಂಭಿಸುವ ಮುಂಚೆ ಅಥವಾ ಬಹಳ ಸಮಯ ನಿಷ್ಕ್ರಿಯನಾಗಿದ್ದ ಒಬ್ಬ ಸಹೋದರನನ್ನು ಸೇವೆಯಲ್ಲಿ ನಮ್ಮೊಂದಿಗೆ ಜೊತೆಗೂಡುವಂತೆ ಆಮಂತ್ರಿಸುವ ಮೊದಲು, ನಾವು ಹಿರಿಯರಿಂದ ನಿರ್ದೇಶನಗಳನ್ನು ಪಡೆದುಕೊಳ್ಳತಕ್ಕದ್ದು. ನಮ್ಮ ಟೆರಿಟೊರಿಯಲ್ಲಿ ನಿಷ್ಕ್ರಿಯನಾಗಿರುವ ಪ್ರಚಾರಕನೊಬ್ಬನನ್ನು ನಾವು ಭೇಟಿಮಾಡುವಲ್ಲಿ, ಹಿರಿಯರಿಗೆ ಅದನ್ನು ತಿಳಿಸಬೇಕು ಮತ್ತು ಅವರು ಅವನಿಗೆ ಆವಶ್ಯಕ ನೆರವನ್ನು ನೀಡುವರು.
6. ನಿಷ್ಕ್ರಿಯರಾಗಿರುವವರಿಗೆ ಸಹಾಯಮಾಡುವ ಮೂಲಕ ಯಾವ ಸಂತೋಷ ನಮಗಿರಬಲ್ಲದು?
6 ಬೈಬಲ್ ಸ್ಪಷ್ಟವಾಗಿ ತಿಳಿಸುವಂತೆ, ಯಾರು ಕ್ರೈಸ್ತ ಓಟವನ್ನು ಕಡೇವರೆಗೂ ಓಡುತ್ತಾರೊ ಅವರು ಮಾತ್ರ ರಕ್ಷಣೆ ಹೊಂದುವರು. (ಮತ್ತಾ. 24:13) ಆದುದರಿಂದ, ಯಾರು ಎಡವಿದ್ದಾರೊ ಅಥವಾ ದೂರಸರಿದಿದ್ದಾರೋ ಅವರಿಗೆ ಲಕ್ಷ್ಯಕೊಡಿರಿ. ಅಂಥವರ ಬಗ್ಗೆ ಯಥಾರ್ಥವಾದ ಆಸಕ್ತಿಯನ್ನು ತೋರಿಸುವ ಮೂಲಕ ನಾವು ತಾಳ್ಮೆಯಿಂದ ಯೆಹೋವನ ಪ್ರೀತಿಯನ್ನು ವ್ಯಕ್ತಪಡಿಸುವುದಾದರೆ, ಅವರೂ ನಮ್ಮೊಂದಿಗೆ ಪವಿತ್ರ ಸೇವೆಯಲ್ಲಿ ಪುನಃ ಜೊತೆಗೂಡುವುದನ್ನು ನೋಡುವ ಸಂತೋಷ ನಮಗಿರುವುದು.—ಲೂಕ 15:4-10.