ಯೆಹೋವನ ಸೇವೆಯಲ್ಲಿ ಪ್ರಯಾಸಪಡಲು ನಾವು ಹರ್ಷಿಸುತ್ತೇವೆ!
1 ಅಪೊಸ್ತಲ ಪೌಲನು ತನ್ನ ಕ್ರೈಸ್ತ ಶುಶ್ರೂಷೆಯನ್ನು ನೆರವೇರಿಸಲಿಕ್ಕಾಗಿ ತನ್ನನ್ನು ಸಂಪೂರ್ಣವಾಗಿ ‘ವೆಚ್ಚಮಾಡಿಕೊಂಡನು’ ಮತ್ತು ಈ ವಿಷಯದಲ್ಲಿ ಅವನು ಹರ್ಷಿಸಿದನು. (2 ಕೊರಿಂ. 12:15) ತದ್ರೀತಿಯಲ್ಲಿ ಇಂದು, ಅನೇಕ ಕ್ರೈಸ್ತರು ಪಯನೀಯರರಾಗಿ ಶ್ರದ್ಧೆಯಿಂದ ಕೆಲಸಮಾಡುತ್ತಾರೆ. ಕುಟುಂಬದ ಭಾರವಾದ ಜವಾಬ್ದಾರಿಗಳಿರುವ ಇತರರು ತಮ್ಮ ಬಿಡುವಿಲ್ಲದ ಕಾರ್ಯತಖ್ತೆಯ ನಡುವೆ ಶುಶ್ರೂಷೆಯಲ್ಲಿ ಭಾಗವಹಿಸಲು ಪ್ರತಿ ವಾರ ಸಮಯ ಮಾಡುತ್ತಾರೆ. ತೀವ್ರ ಆರೋಗ್ಯದ ಸಮಸ್ಯೆಯಿರುವ ಕೆಲವರಾದರೊ ತಮ್ಮ ಸೀಮಿತ ಬಲವನ್ನು ರಾಜ್ಯಾಭಿರುಚಿಗಳ ವೃದ್ಧಿಗಾಗಿ ವಿನಿಯೋಗಿಸುತ್ತಾರೆ. ಹೀಗೆ, ಯೆಹೋವನ ಜನರು ತಮ್ಮ ವಯಸ್ಸು ಅಥವಾ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಆತನ ಸೇವೆಯಲ್ಲಿ ಪ್ರಯಾಸಪಡುವುದನ್ನು ನೋಡುವುದು ಎಷ್ಟು ಪ್ರೋತ್ಸಾಹಕರ!
2 ನೆರೆಯವರಿಗಾಗಿ ಪ್ರೀತಿ: ದೇವರಿಗೆ ಮತ್ತು ನೆರೆಯವರಿಗೆ ಪ್ರೀತಿಯನ್ನು ತೋರಿಸಿ ಯೆಹೋವನನ್ನು ಸೇವಿಸಲು ನಮ್ಮಿಂದಾಗುವುದೆಲ್ಲವನ್ನು ಮಾಡುವುದರಿಂದ ನಮಗೆ ಶುದ್ಧ ಮನಸ್ಸಾಕ್ಷಿ ಸಿಗುತ್ತದೆ. ಸುವಾರ್ತೆ ಸಾರಲು ಪೌಲನು ತನ್ನ ಪ್ರಾಣವನ್ನು ಮುಡಿಪಾಗಿಟ್ಟದ್ದರಿಂದ ಅವನು ಉಲ್ಲಾಸದಿಂದ ಹೀಗೆ ಹೇಳ ಶಕ್ತನಾಗಿದ್ದನು: “ನಾನು ಎಲ್ಲಾ ಮನುಷ್ಯರ ರಕ್ತದ ಹೊಣೆಯಿಂದ ವಿಮುಕ್ತನಾಗಿದ್ದೇನೆ ಎಂದು ಈ ದಿನ ಸಾಕ್ಷಿಕೊಡುತ್ತೇನೆ.” (ಅ. ಕೃ. 20:24, 26, NIBV; 1 ಥೆಸ. 2:8) ನಮ್ಮ ಸನ್ನಿವೇಶಗಳು ಅನುಮತಿಸುವ ಮಟ್ಟಿಗೆ ಶುಶ್ರೂಷೆಯಲ್ಲಿ ಪಾಲುಗೊಳ್ಳುವ ಮೂಲಕ ನಾವು ರಕ್ತಾಪರಾಧದಿಂದ ತಪ್ಪಿಸಿಕೊಳ್ಳುತ್ತೇವೆ.—ಯೆಹೆ. 3:18-21.
3 ಇತರರಿಗೆ ಸಹಾಯ ಮಾಡಲು ಶ್ರಮಿಸುವುದರಿಂದ ನಮಗೆ ಸಂತೋಷ ಸಿಗುತ್ತದೆ. (ಅ. ಕೃ. 20:35) ಒಬ್ಬ ಸಹೋದರನು ಹೇಳಿದ್ದು: “ಯೆಹೋವನ ಸೇವೆಯಲ್ಲಿ ಇಡೀ ದಿನವನ್ನು ಕಳೆದು ಸಂಜೆ ಮನೆಗೆ ಮರಳುವಾಗ ನನಗೆ ಆಯಾಸವಾಗುತ್ತದೆ ನಿಜ. ಆದರೆ ನಾನು ಸಂತೋಷಿತನಾಗಿದ್ದೇನೆ ಮತ್ತು ಯಾರಿಂದಲೂ ಕಸಿದುಕೊಳ್ಳಲಾಗದ ಆನಂದವನ್ನು ನನಗೆ ಕೊಟ್ಟದ್ದಕ್ಕಾಗಿ ಯೆಹೋವನಿಗೆ ಉಪಕಾರ ಹೇಳುತ್ತೇನೆ.”
4 ದೇವರಿಗಾಗಿ ಪ್ರೀತಿ: ನಾವು ಯೆಹೋವನ ಸೇವೆಯಲ್ಲಿ ಪ್ರಯಾಸಪಡಲು ಇರುವ ಪ್ರಾಮುಖ್ಯ ಕಾರಣ ನಮ್ಮ ಸ್ವರ್ಗೀಯ ಪಿತನನ್ನು ಮೆಚ್ಚಿಸುವುದೇ ಆಗಿದೆ. ದೇವರಿಗಾಗಿರುವ ಪ್ರೀತಿಯು, ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವಂತೆ ನಮ್ಮನ್ನು ಪ್ರಚೋದಿಸುತ್ತದೆ ಮತ್ತು ಇವುಗಳಲ್ಲಿ ಸಾರುವುದು ಹಾಗೂ ಶಿಷ್ಯರನ್ನಾಗಿ ಮಾಡುವುದು ಸೇರಿವೆ. (1 ಯೋಹಾ. 5:3) ಜನರು ನಿರಾಸಕ್ತರಾಗಿರುವಾಗ ಅಥವಾ ವಿರೋಧಿಸುವಾಗ ಸಹ ನಾವು ಆನಂದದಿಂದ ಯೆಹೋವನಿಗಾಗಿ ಶ್ರಮಪಟ್ಟು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.
5 ನಾವು ಜೀವಿಸುವ ಈ ಅವಧಿಯು ನಿಧಾನಿಸುವ ಸಮಯವಲ್ಲ. ನಾವು ಕೊಯ್ಲಿನ ಸಮಯದಲ್ಲಿ ಜೀವಿಸುತ್ತಿದ್ದೇವೆ. (ಮತ್ತಾ. 9:37) ಒಬ್ಬ ರೈತನು ಕೊಯ್ಲಿನ ಸಮಯದಲ್ಲಿ ಸಾಮಾನ್ಯವಾಗಿ ಹೆಚ್ಚು ಗಂಟೆಕಾಲ ದುಡಿಯುತ್ತಾನೆ. ಏಕೆಂದರೆ ಬೆಳೆಯು ಹಾಳಾಗಲು ತೊಡಗುವ ಮುನ್ನ ಅದನ್ನು ಕೂಡಿಸಿಕೊಳ್ಳಲು ಅವನಿಗಿರುವ ಸಮಯವು ಸೀಮಿತವಾಗಿರುತ್ತದೆ. ಅಂತೆಯೇ, ಆಧ್ಯಾತ್ಮಿಕ ಕೊಯ್ಲಿಗೆ ನಿಗದಿಪಡಿಸಿದ ಸಮಯ ಸಹ ಸೀಮಿತವಾಗಿದೆ. ನಾವು ಜೀವಿಸುತ್ತಿರುವ ಕಾಲವನ್ನು ನೆನಪಿನಲ್ಲಿಟ್ಟುಕೊಂಡು ನಾವೆಲ್ಲರು ಹುರುಪಿನಿಂದ ಶುಶ್ರೂಷೆಯಲ್ಲಿ ಪ್ರಯಾಸಪಟ್ಟು ದುಡಿಯಲು ಮುಂದುವರಿಯೋಣ.—ಲೂಕ 13:24; 1 ಕೊರಿಂ. 7:29-31.