ನಾವೇಕೆ ಪದೇ ಪದೇ ಹೋಗುತ್ತೇವೆ?
1. ನಮ್ಮ ಸಾರುವಿಕೆಯ ಕುರಿತು ಯಾವ ಪ್ರಶ್ನೆ ಏಳುತ್ತದೆ?
1 ಹಲವಾರು ಸ್ಥಳಗಳಲ್ಲಿ, ನಾವು ಟೆರಿಟೊರಿಯನ್ನು ಹೆಚ್ಚು ಬೇಗ ಆವರಿಸುತ್ತೇವೆ. ಹೋದ ಮನೆಗಳಿಗೆಯೇ ನಾವು ಪದೇ ಪದೇ ಹೋಗುತ್ತೇವೆ ಮತ್ತು ಹೀಗೆ, ತಮಗೆ ಆಸಕ್ತಿಯಿಲ್ಲವೆಂದು ಹೇಳಿದವರನ್ನೂ ನಾವು ಅನೇಕ ಸಲ ಭೇಟಿಮಾಡುತ್ತಾ ಇರುತ್ತೇವೆ. ಹಿಂದೆ ಒಳ್ಳೇ ಪ್ರತಿಕ್ರಿಯೆ ತೋರಿಸದಿದ್ದ ಜನರನ್ನು ನಾವು ಏಕೆ ಭೇಟಿಮಾಡುತ್ತಲೇ ಇರುತ್ತೇವೆ?
2. ನಾವು ಶುಶ್ರೂಷೆಯಲ್ಲಿ ಪಟ್ಟುಹಿಡಿಯುವುದರ ಮುಖ್ಯ ಕಾರಣ ಯಾವುದು?
2 ಯೆಹೋವನ ಮೇಲೆ ಮತ್ತು ಜನರ ಮೇಲೆ ಪ್ರೀತಿ: ನಾವು ಶುಶ್ರೂಷೆಯಲ್ಲಿ ಪಟ್ಟುಹಿಡಿಯುವುದಕ್ಕೆ ಮುಖ್ಯ ಕಾರಣ ಯೆಹೋವನ ಮೇಲೆ ನಮಗಿರುವ ಪ್ರೀತಿಯೇ. ನಮ್ಮ ಮಹಾನ್ ದೇವರ ಕುರಿತು ಇತರರಿಗೆ ಹೇಳುತ್ತಾ ಇರುವಂತೆ ನಮ್ಮ ಹೃದಯ ನಮ್ಮನ್ನು ಪ್ರಚೋದಿಸುತ್ತದೆ. (ಲೂಕ 6:45) ಯೆಹೋವನ ಮೇಲೆ ನಮಗಿರುವ ಪ್ರೀತಿಯು ನಾವಾತನ ಆಜ್ಞೆಗಳಿಗೆ ವಿಧೇಯರಾಗಲು ಮತ್ತು ಇತರರೂ ಅದನ್ನು ಮಾಡಲು ನೆರವಾಗುವಂತೆ ಪ್ರಚೋದಿಸುತ್ತದೆ. (ಜ್ಞಾನೋ. 27:11; 1 ಯೋಹಾ. 5:3) ನಾವು ಈ ಕೆಲಸದಲ್ಲಿ ನಂಬಿಗಸ್ತಿಕೆಯಿಂದ ತಾಳಿಕೊಳ್ಳುವುದು ಜನರ ಪ್ರತಿಕ್ರಿಯೆಯ ಮೇಲೆ ಅವಲಂಬಿಸಿಲ್ಲ. ಪ್ರಥಮ ಶತಮಾನದ ಕ್ರೈಸ್ತರು ಹಿಂಸೆಗೊಳಗಾದಾಗಲೂ “ಎಡೆಬಿಡದೆ” ಸಾರುವುದನ್ನು ಮುಂದುವರಿಸಿದರು. (ಅ. ಕೃ. 5:42) ಜನರು ಕಿವಿಗೊಡಲು ನಿರಾಕರಿಸುವಾಗ ನಾವು ನಿರುತ್ತೇಜಿತರಾಗದೆ, ಅಚಲರಾಗಿದ್ದು ಯೆಹೋವನ ಮೇಲಿರುವ ನಮ್ಮ ಪ್ರೀತಿ ಹಾಗೂ ಭಕ್ತಿ ಎಷ್ಟು ಗಾಢವಾಗಿದೆ ಎಂಬದನ್ನು ತೋರಿಸುತ್ತೇವೆ.
3. ಜನರ ಮೇಲಿರುವ ಪ್ರೀತಿಯು ಸಾರುವುದನ್ನು ಮುಂದುವರಿಸಲು ನಮಗೆ ಹೇಗೆ ಸಹಾಯ ಮಾಡುವುದು?
3 ನಾವು ನಮ್ಮ ನೆರೆಯವರನ್ನು ಪ್ರೀತಿಸುವ ಕಾರಣದಿಂದಲೂ ಪಟ್ಟುಹಿಡಿಯುತ್ತೇವೆ. (ಲೂಕ 10:27) ಯಾವನಾದರೂ ನಾಶವಾಗುವುದನ್ನು ಯೆಹೋವನು ಬಯಸುವುದಿಲ್ಲ. (2 ಪೇತ್ರ 3:9) ಪದೇ ಪದೇ ಸಾರಲ್ಪಟ್ಟ ಟೆರಿಟೊರಿಗಳಲ್ಲಿಯೂ ಯೆಹೋವನನ್ನು ಸೇವಿಸಬಯಸುವ ಜನರನ್ನು ನಾವು ಈಗಲೂ ಕಂಡುಕೊಳ್ಳುತ್ತಲೇ ಇದ್ದೇವೆ. ಉದಾಹರಣೆಗಾಗಿ ಗ್ವಾಡೆಲೋಪ್ ಎಂಬ ಪ್ರದೇಶವನ್ನು ತೆಗೆದುಕೊಳ್ಳಿ. ಅಲ್ಲಿ ಪ್ರತಿ 56 ಮಂದಿಯಲ್ಲಿ ಒಬ್ಬನು ಯೆಹೋವನ ಸಾಕ್ಷಿಯಾಗಿದ್ದರೂ ಕಳೆದ ವರ್ಷ 214 ಮಂದಿ ದೀಕ್ಷಾಸ್ನಾನ ಪಡೆದುಕೊಂಡರು. ಅಲ್ಲದೆ ಜ್ಞಾಪಕಾಚರಣೆಗೆ ಸುಮಾರು 20,000 ಮಂದಿ ಹಾಜರಾದರು. ಅಂದರೆ, ಗ್ವಾಡೆಲೋಪ್ನಲ್ಲಿ ವಾಸಿಸುವ ಪ್ರತಿ 22 ಮಂದಿಯಲ್ಲಿ ಒಬ್ಬನು ಅಲ್ಲಿ ಹಾಜರಾಗಿದ್ದನು!
4. ಟೆರಿಟೊರಿಗಳು ಯಾವ ವಿಧಗಳಲ್ಲಿ ಬದಲಾಗುತ್ತವೆ?
4 ಟೆರಿಟೊರಿಯಲ್ಲಿ ಬದಲಾವಣೆಗಳು: ಯಾವಾಗಲೂ ನಮ್ಮ ಟೆರಿಟೊರಿಯಲ್ಲಿ ಬೇರೆ ಬೇರೆ ಜನರು ಬರುತ್ತಾ ಇರುತ್ತಾರೆ. ಹಿಂದೆ ಒಳ್ಳೇ ಪ್ರತಿಕ್ರಿಯೆ ತೋರಿಸದಿದ್ದ ಮನೆಯವರನ್ನು ನಾವು ಮತ್ತೊಮ್ಮೆ ಭೇಟಿಯಾಗುವಾಗ, ಪ್ರಾಯಶಃ ನಮ್ಮ ಸಂದೇಶವನ್ನು ಈ ವರೆಗೆ ಕೇಳಿರದಿದ್ದ ಮನೆಯ ಸದಸ್ಯನೊಬ್ಬನು ಬಾಗಿಲನ್ನು ತೆರೆದು ನಮಗೆ ಕಿವಿಗೊಡಬಹುದು. ಅಥವಾ ಬಂದಿರುವ ಹೊಸ ಬಿಡಾರದವರು ಆಸಕ್ತರಾಗಿರುವುದನ್ನು ನಾವು ಕಂಡುಕೊಳ್ಳಬಹುದು. ವಿರೋಧಿಸುವ ಹೆತ್ತವರಿದ್ದ ಮಕ್ಕಳು, ದೊಡ್ಡವರಾಗಿ ಬೇರೆ ಕಡೆಗೆ ಹೋಗಬಹುದು. ಇಂಥವರು ರಾಜ್ಯ ಸಂದೇಶವನ್ನು ಕೇಳಲು ಸಿದ್ಧರಾಗಿರಬಹುದು.
5. ಜನರು ನಮ್ಮ ಸಂದೇಶಕ್ಕೆ ಒಳ್ಳೇದಾಗಿ ಪ್ರತಿಕ್ರಿಯಿಸುವಂತೆ ಯಾವುದು ಕಾರಣವಾಗಿರಬಹುದು?
5 ಜನರು ಸಹ ಬದಲಾಗುತ್ತಾರೆ. ಒಂದು ಕಾಲದಲ್ಲಿ, ಅಪೊಸ್ತಲ ಪೌಲನು ‘ದೂಷಕನೂ ಹಿಂಸಕನೂ ಬಲಾತ್ಕಾರಿಯೂ ಆಗಿದ್ದನು.’ (1 ತಿಮೊ. 1:13) ಅಂತೆಯೇ ಇಂದು ಯೆಹೋವನನ್ನು ಸೇವಿಸುತ್ತಿರುವ ಅನೇಕರಿಗೆ ಒಂದೊಮ್ಮೆ ಸತ್ಯದಲ್ಲಿ ಆಸಕ್ತಿಯಿರಲಿಲ್ಲ. ಕೆಲವರು ಮುಂಚೆ, ಸುವಾರ್ತೆಯನ್ನು ವಿರೋಧಿಸಿದ್ದಿರಲೂಬಹುದು. ಈ ಪ್ರಪಂಚದ ಸನ್ನಿವೇಶಗಳು ಬದಲಾದಂತೆ, ವಿರೋಧಿಸುವ ಅಥವಾ ನಿರಾಸಕ್ತರಾಗಿದ್ದ ಕೆಲವರಿಗೆ ಕಿವಿಗೊಡಲು ಮನಸ್ಸಾಗಬಹುದು. ಇನ್ನೂ ಕೆಲವರು ವೈಯಕ್ತಿಕ ದುರಂತಗಳಾದ ಕುಟುಂಬದಲ್ಲಿನ ಸಾವು, ಕೆಲಸವನ್ನು ಕಳಕೊಳ್ಳುವುದು, ಆರ್ಥಿಕ ಅಥವಾ ಆರೋಗ್ಯ ಸಮಸ್ಯೆಯನ್ನು ಅನುಭವಿಸಿದ ನಂತರ ನಮ್ಮ ಸಂದೇಶಕ್ಕೆ ಒಳ್ಳೇದಾಗಿ ಪ್ರತಿಕ್ರಿಯಿಸಬಹುದು.
6. ಉತ್ಸುಕತೆಯಿಂದ ಸಾರುವುದನ್ನು ನಾವು ಏಕೆ ಮುಂದುವರಿಸಬೇಕು?
6 ಈ ವಿಷಯಗಳ ವ್ಯವಸ್ಥೆಯ ಅಂತ್ಯ ಸಮೀಪಿಸುತ್ತಿದೆಯಾದರೂ ನಮ್ಮ ಸಾರುವ ಮತ್ತು ಕಲಿಸುವ ಕೆಲಸವೊ ಹೆಚ್ಚು ವೇಗವಾಗಿ ಮುಂದೆಸಾಗುತ್ತಿದೆ. (ಯೆಶಾ. 60:22) ಹಾಗಾಗಿ ನಾವು ಉತ್ಸುಕತೆಯಿಂದ ಸಾರುವುದನ್ನು ಮುಂದುವರಿಸುತ್ತೇವೆ ಮತ್ತು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ನಾವು ಭೇಟಿಯಾಗುವ ಮುಂದಿನ ವ್ಯಕ್ತಿ ಕಿವಿಗೊಡಬಹುದು. ಏನೇ ಆಗಲಿ, ನಾವು ಮಾತಾಡುತ್ತಲೇ ಇರಬೇಕು! ‘ಹೀಗಿರುವದರಿಂದ ನಮ್ಮನ್ನೂ ನಮ್ಮ ಉಪದೇಶ ಕೇಳುವವರನ್ನೂ ರಕ್ಷಿಸುವೆವು.’—1 ತಿಮೊ. 4:16.