ಏಕೆ ಸಾರುತ್ತಾ ಇರಬೇಕು?
1 ರಾಜ್ಯ ಸಾರುವಿಕೆಯ ಕೆಲಸವು ನಿಮ್ಮ ಸಮಾಜದಲ್ಲಿ ತುಂಬ ಸಮಯದಿಂದ ನಡೆಸಲ್ಪಟ್ಟಿದೆಯೋ? (ಮತ್ತಾ. 24:14) ಹೌದಾದರೆ, ಸಭೆಯ ಟೆರಿಟೊರಿಯು ಸಾಕಷ್ಟು ಪೂರ್ಣವಾಗಿ ಆವರಿಸಲ್ಪಟ್ಟಿದೆ ಎಂದು ನಿಮಗೆ ಅನಿಸಬಹುದು. ಈಗ ನೀವು ಸಾರುವಾಗ, ನೀವು ಭೇಟಿಯಾಗುವ ಹೆಚ್ಚಿನ ಜನರು ರಾಜ್ಯ ಸಂದೇಶದೆಡೆಗೆ ಅನಾಸಕ್ತರಾಗಿ ಕಂಡುಬರಬಹುದು. ಹೀಗಿರುವುದಾದರೂ, ಯೇಸುವಿನ ನಿಜ ಶಿಷ್ಯರ ಕುರಿತಾಗಿ ಯೆಶಾಯನ ಪ್ರವಾದನೆ II ಪುಸ್ತಕದ 141ನೇ ಪುಟದಲ್ಲಿ ಏನು ಹೇಳಲ್ಪಟ್ಟಿದೆ ಎಂಬುದನ್ನು ಗಮನಿಸಿರಿ: “ಕೆಲವು ಸ್ಥಳಗಳಲ್ಲಿ, ಅವರು ಮಾಡಿರುವ ಕೆಲಸ ಮತ್ತು ಪ್ರಯತ್ನದ ಮೊತ್ತಕ್ಕೆ ಹೋಲಿಸುವಾಗ ಅವರ ಶುಶ್ರೂಷೆಗೆ ಸಿಕ್ಕಿರುವ ಪ್ರತಿಫಲವು ಅಲ್ಪವಾಗಿ ಕಂಡುಬರಬಹುದು. ಹೀಗಿದ್ದರೂ, . . . ಅವರು ತಾಳಿಕೊಳ್ಳುತ್ತಾರೆ.” ಆದರೆ ಏಕೆ ಸಾರುತ್ತಾ ಇರಬೇಕು?
2 ಯೆರೆಮೀಯನನ್ನು ಜ್ಞಾಪಿಸಿಕೊಳ್ಳಿರಿ: ನಾವು ಸಾರುವ ಕೆಲಸದಲ್ಲಿ ನಂಬಿಗಸ್ತಿಕೆಯಿಂದ ತಾಳಿಕೊಳ್ಳುವುದು, ಜನರು ನಮಗೆ ಕಿವಿಗೊಡುತ್ತಾರೋ ಇಲ್ಲವೋ ಎಂಬುದರ ಮೇಲೆ ಆಧಾರಿಸಿರಬಾರದು. ಯೆರೆಮೀಯನಿಗೆ ಸ್ವಲ್ಪವೇ ಜನರು ಕಿವಿಗೊಟ್ಟು, ಹೆಚ್ಚಿನವರು ಅವನ ಸಂದೇಶಕ್ಕೆ ವಿರೋಧವಾಗಿದ್ದರೂ, ಅವನು ಒಂದೇ ಟೆರಿಟೊರಿಯಲ್ಲಿ 40 ವರ್ಷಗಳ ವರೆಗೆ ಸಾರಿದನು. ಯೆರೆಮೀಯನು ಪ್ರಯತ್ನವನ್ನು ಬಿಟ್ಟುಬಿಡಲಿಲ್ಲವೇಕೆ? ಏಕೆಂದರೆ ಅವನು ದೇವರು ಆಜ್ಞಾಪಿಸಿದ ಒಂದು ಕೆಲಸವನ್ನು ಮಾಡುತ್ತಿದ್ದನು ಮತ್ತು ಭವಿಷ್ಯದಲ್ಲಿ ಏನು ಸಂಭವಿಸಲಿಕ್ಕಿದೆ ಎಂಬುದರ ಕುರಿತಾದ ಅರಿವು ಅವನು ಧೈರ್ಯದಿಂದ ಮಾತಾಡುತ್ತಿರುವಂತೆ ಬಲವಂತಪಡಿಸಿತು.—ಯೆರೆ. 1:17; 20:9.
3 ನಮ್ಮ ಪರಿಸ್ಥಿತಿಯೂ ತದ್ರೀತಿಯದ್ದಾಗಿದೆ. ಯೇಸು, “ಆತನೇ ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನು ಎಂಬದನ್ನು ಜನರಿಗೆ ಸಾರಿ ಸಾಕ್ಷಿಹೇಳಬೇಕೆಂದು ನಮಗೆ ಅಪ್ಪಣೆಕೊಟ್ಟನು.” (ಅ. ಕೃ. 10:42) ನಾವು ಸಾರಿಹೇಳುತ್ತಿರುವ ಸಂದೇಶವು, ನಮಗೆ ಕಿವಿಗೊಡುವವರಿಗೆ ಜೀವಮರಣದ ಸಂಗತಿಯಾಗಿದೆ. ಅವರು ಸುವಾರ್ತೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಆಧಾರದ ಮೇಲೆ ಜನರಿಗೆ ನ್ಯಾಯತೀರಿಸಲ್ಪಡುವುದು. ವಿಷಯವು ಹೀಗಿರುವ ಕಾರಣ, ನಮಗೆ ಆಜ್ಞಾಪಿಸಲ್ಪಟ್ಟಿರುವುದಕ್ಕೆ ತಕ್ಕ ಹಾಗೆ ನಾವು ವರ್ತಿಸುವುದು ನಮ್ಮ ಜವಾಬ್ದಾರಿಯಾಗಿದೆ. ಜನರು ಕಿವಿಗೊಡಲು ನಿರಾಕರಿಸುವಾಗಲೂ, ನಾವು ಏನು ಮಾಡಬೇಕೋ ಅದರಲ್ಲಿ ನಾವು ಪಟ್ಟುಹಿಡಿಯುವುದು, ಅವರಿಗಾಗಿ ನಾವು ಹೊಂದಿರುವ ಪ್ರೀತಿಯ ಗಾಢತೆಯನ್ನು ಮತ್ತು ಯೆಹೋವನಿಗಾಗಿರುವ ನಮ್ಮ ಪೂಜ್ಯಭಕ್ತಿಯನ್ನು ವ್ಯಕ್ತಪಡಿಸಲು ಒಂದು ಅವಕಾಶವನ್ನು ಕೊಡುತ್ತದೆ. ಆದರೆ ಇದಕ್ಕಿಂತ ಹೆಚ್ಚಿನದ್ದು ಇದೆ.
4 ನಾವು ಪ್ರಯೋಜನ ಪಡೆದುಕೊಳ್ಳುತ್ತಿದ್ದೇವೆ: ಟೆರಿಟೊರಿಯಲ್ಲಿ ನಾವು ಪಡೆದುಕೊಳ್ಳುವ ಪ್ರತಿಕ್ರಿಯೆಯ ಕುರಿತು ಚಿಂತಿಸದೇ ದೇವರ ಚಿತ್ತವನ್ನು ಮಾಡುತ್ತಾ ಮುಂದುವರಿಯುವುದು, ಬೇರಾವುದೇ ರೀತಿಯಲ್ಲಿ ಕಂಡುಕೊಳ್ಳಲಾಗದ ಆಂತರಿಕ ಶಾಂತಿ, ಸಂತೃಪ್ತಿ, ಮತ್ತು ಸಂತೋಷವನ್ನು ನಮಗೆ ಕೊಡುತ್ತದೆ. (ಕೀರ್ತ. 40:8) ನಮ್ಮ ಜೀವಿತಗಳಿಗೆ ನಿಜವಾದ ಅರ್ಥ ಮತ್ತು ಉದ್ದೇಶ ಸಿಗುತ್ತದೆ. ನಾವು ಶುಶ್ರೂಷೆಯಲ್ಲಿ ಎಷ್ಟು ಹೆಚ್ಚು ಪಾಲ್ಗೊಳ್ಳುತ್ತೇವೋ ಅಷ್ಟು ಹೆಚ್ಚು ನಮ್ಮ ಹೃದಮನಗಳು ದೇವರ ಹೊಸ ಲೋಕದಲ್ಲಿ ಜೀವಿಸುವುದರ ನಿರೀಕ್ಷೆ ಮತ್ತು ಆನಂದದ ಮೇಲೆ ಕೇಂದ್ರೀಕರಿಸಲ್ಪಡುವವು. ಈ ಶಾಸ್ತ್ರೀಯ ವಾಗ್ದಾನಗಳ ಕುರಿತು ಮನನಮಾಡುವುದು ನಮ್ಮ ಆತ್ಮಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸುತ್ತದೆ.
5 ನಮ್ಮ ಸಾರುವ ಚಟುವಟಿಕೆಯಲ್ಲಿ ಆ ಕೂಡಲೆ ಪರಿಣಾಮಗಳು ಕಂಡುಬರದಿದ್ದರೂ, ಒಬ್ಬ ವ್ಯಕ್ತಿಯ ಹೃದಯದಲ್ಲಿ ಸತ್ಯದ ಬೀಜವೊಂದು ಬಿತ್ತಲ್ಪಟ್ಟಿರಬಹುದು ಮತ್ತು ಅದು ಯೆಹೋವನ ತಕ್ಕ ಸಮಯದಲ್ಲಿ ಚಿಗುರುವುದು. (ಯೋಹಾ. 6:44; 1 ಕೊರಿಂ. 3:6) ಸ್ಥಳಿಕವಾಗಿ ಅಥವಾ ಲೋಕವ್ಯಾಪಕವಾಗಿ, ಯೆಹೋವನ ಜನರ ಪ್ರಯತ್ನಗಳಿಂದಾಗಿ ಇನ್ನೂ ಎಷ್ಟು ಜನರು ರಾಜ್ಯದ ಕುರಿತು ಕಲಿತುಕೊಳ್ಳುವರು ಎಂಬುದು ನಮಗ್ಯಾರಿಗೂ ಗೊತ್ತಿಲ್ಲ.
6 ಹಿಂದಿಗಿಂತ ಹೆಚ್ಚು ತುರ್ತುಭಾವದೊಂದಿಗೆ ನಾವು ಯೇಸುವಿನ ಈ ಉಪದೇಶಕ್ಕೆ ಕಿವಿಗೊಡಬೇಕು: “ಆ ಕಾಲವು ಯಾವಾಗ ಬರುವದೋ ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಜಾಗರೂಕರಾಗಿರಿ. ನಾನು ನಿಮಗೆ ಹೇಳಿದ್ದನ್ನು ಎಲ್ಲರಿಗೂ ಹೇಳುತ್ತೇನೆ. ಎಚ್ಚರವಾಗಿರಿ.” (ಮಾರ್ಕ 13:33, 37) ಆದುದರಿಂದ, ಯೆಹೋವನ ಮಹಾನ್ ಮತ್ತು ಪರಿಶುದ್ಧ ನಾಮದ ಪವಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾ, ನಾವೆಲ್ಲರೂ ರಾಜ್ಯದ ಸುವಾರ್ತೆಯನ್ನು ಪ್ರಕಟಪಡಿಸುತ್ತಾ ಇರೋಣ.