ಕುಟುಂಬವಾಗಿ ಯೆಹೋವನನ್ನು ಆರಾಧಿಸುವುದು
1 ಬೈಬಲಿನ ಕಾಲಗಳಲ್ಲಿ ಕುಟುಂಬ ಸದಸ್ಯರು ಅನೇಕ ವಿಷಯಗಳನ್ನು ಜೊತೆಯಾಗಿ ಮಾಡುತ್ತಿದ್ದರು. ದಿನನಿತ್ಯದ ಕೆಲಸಗಳನ್ನು ಮಾತ್ರವಲ್ಲದೆ ಮುಖ್ಯವಾಗಿ ಯೆಹೋವನ ಆರಾಧನೆಯನ್ನು ಅವರು ಕುಟುಂಬವಾಗಿ ಜೊತೆಗೂಡಿ ಮಾಡುತ್ತಿದ್ದರು. (ಯಾಜ. 10:12-14; ಧರ್ಮೋ. 31:12) ಅನೇಕ ಸ್ಥಳಗಳಲ್ಲಿ ಇಂದು ಕುಟುಂಬ ಸದಸ್ಯರು ಜೊತೆಗೂಡಿ ಮಾಡುವ ಚಟುವಟಿಕೆಗಳು ಬಹಳ ಕಡಿಮೆ. ಕ್ರೈಸ್ತರಾದರೋ ಕುಟುಂಬವಾಗಿ ಕಾರ್ಯನಡಿಸುವುದನ್ನು ಮಹತ್ವದ್ದಾಗಿ ಎಣಿಸುತ್ತಾರೆ, ವಿಶೇಷವಾಗಿ ಆರಾಧನೆಯ ಸಂಬಂಧದಲ್ಲಿ. ಕುಟುಂಬಗಳು ಈ ರೀತಿ ಐಕ್ಯವಾಗಿ ತನ್ನ ಸೇವೆ ಮಾಡುವುದನ್ನು ಕಾಣುವಾಗ ಕುಟುಂಬದ ಮೂಲಕರ್ತನಿಗೆ ಅದೆಷ್ಟು ಸಂತೋಷ ಆಗುತ್ತಿರಬೇಕು!
2 ಜೊತೆಗೂಡಿ ಸಾರಿರಿ: ಸುವಾರ್ತೆಯನ್ನು ಸಾರುವುದಕ್ಕಾಗಿ ಒಟ್ಟಾಗಿ ಕೆಲಸಮಾಡುವುದರಿಂದ ಕುಟುಂಬದ ಐಕ್ಯತೆ ಬಲಗೊಳ್ಳುತ್ತದೆ. ಆದುದರಿಂದ ಒಬ್ಬ ಹಿರಿಯನು ಸಭೆಯ ಇತರರೊಂದಿಗೆ ಸಾರುವುದರಲ್ಲಿ ಜೊತೆಗೂಡುವನು ಮಾತ್ರವಲ್ಲ, ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಸಹ ಕ್ರಮವಾಗಿ ಸೇವೆಮಾಡುವನು. (1 ತಿಮೊ. 3:4, 5) ಸಂಚರಣ ಮೇಲ್ವಿಚಾರಕರಿಗೆ ಕಾರ್ಯಮಗ್ನ ಶೆಡ್ಯೂಲ್ ಇದ್ದರೂ ಅವರು ಸಹ ತಮ್ಮ ಪತ್ನಿಯರೊಂದಿಗೆ ಶುಶ್ರೂಷೆಯಲ್ಲಿ ಕೆಲಸಮಾಡಲು ಸಮಯ ಮಾಡುತ್ತಾರೆ.
3 ಹೆತ್ತವರು ತಮ್ಮ ಮಕ್ಕಳ ಜೊತೆಯಲ್ಲಿ ಸಾರುವಾಗ ಅವರಿಗೆ ಸೌವಾರ್ತಿಕರಾಗಿ ಪ್ರಗತಿಮಾಡಲು ಸಹಾಯ ಕೊಡಶಕ್ತರಾಗುತ್ತಾರೆ. ಆಗ ಶುಶ್ರೂಷೆಯಲ್ಲಿ ತಮ್ಮ ಹೆತ್ತವರು ಪಡುವ ಸಂತೋಷ ಮತ್ತು ಸಂತೃಪ್ತಿಯನ್ನು ಮಕ್ಕಳು ಅವಲೋಕಿಸುವರು ಮಾತ್ರವಲ್ಲ ಯೆಹೋವನಿಗೂ ಜೊತೆಮಾನವರಿಗೂ ಹೆತ್ತವರು ತಮ್ಮ ಸ್ವಂತ ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ಸಹ ಕಾಣುವರು. (ಧರ್ಮೋ. 6:5-7) ಮನೆಯಲ್ಲಿ ಮಕ್ಕಳು ಬೆಳೆದು ದೊಡ್ಡವರಾದಾಗಲೂ ಇದರ ಮಹತ್ವವು ಕಡಿಮೆಯಾಗುವುದಿಲ್ಲ. ಒಂದು ದಂಪತಿಯ 15-21ರ ನಡುವಣ ಪ್ರಾಯದ ಮೂವರು ಗಂಡುಮಕ್ಕಳು ಇನ್ನೂ ತಮ್ಮ ಹೆತ್ತವರೊಂದಿಗೆ ಕ್ರಮವಾಗಿ ಸೇವೆಯಲ್ಲಿ ಜೊತೆಗೂಡುತ್ತಾರೆ. ಅವರ ತಂದೆ ಹೇಳಿದ್ದು: “ಪ್ರತಿಸಲ ನಾವು ಅವರಿಗೆ ಒಂದಲ್ಲ ಒಂದು ವಿಷಯವನ್ನು ಕಲಿಸುತ್ತೇವೆ. ಮತ್ತು ನಿಶ್ಚಯವಾಗಿ ಅದೊಂದು ಆನಂದಕರ ಹಾಗೂ ಪ್ರೋತ್ಸಾಹನೀಯ ಅನುಭವವಾಗಿರುವಂತೆ ನೋಡಿಕೊಳ್ಳುತ್ತೇವೆ.”
4 ಜೊತೆಗೂಡಿ ತಯಾರಿಸಿರಿ: ಶುಶ್ರೂಷೆಗಾಗಿ ಒಟ್ಟಾಗಿ ತಯಾರಿಸುವುದನ್ನು ಕುಟುಂಬಗಳು ಪ್ರಯೋಜನಕರವಾಗಿ ಕಂಡಿವೆ. ಕುಟುಂಬ ಸದಸ್ಯರೊಂದಿಗೆ, ಪ್ರಚಾರಕರಾಗಿ ಅಥವಾ ಮನೆಯವರಾಗಿ ನಟಿಸುತ್ತಾ ಪ್ರ್ಯಾಕ್ಟಿಸ್ ಸೆಷನ್ ಮಾಡುವುದನ್ನು ಮಕ್ಕಳು ಹೆಚ್ಚಾಗಿ ಆನಂದಿಸುತ್ತಾರೆ. ಇದನ್ನು ಕೆಲವು ಕುಟುಂಬಗಳು ತಮ್ಮ ಕುಟುಂಬ ಅಧ್ಯಯನದ ಕೊನೆಯ ಕೆಲವು ನಿಮಿಷಗಳಲ್ಲಿ ಮಾಡುತ್ತಾರೆ.
5 ನಮ್ಮ ಪ್ರಿಯ ಜನರೊಂದಿಗೆ ಮಹತ್ವದ ಮತ್ತು ಸಂತೃಪ್ತಿಕರ ಕೆಲಸಗಳಲ್ಲಿ ಭಾಗವಹಿಸುವಾಗ ನಮ್ಮ ಸಂತೋಷವು ಇನ್ನೂ ಅಧಿಕಗೊಳ್ಳುತ್ತದೆ. ಮನೆಮನೆಯ ಸೇವೆಯಲ್ಲಿ ಹಾಗೂ ಪುನರ್ಭೇಟಿ ಮತ್ತು ಬೈಬಲಧ್ಯಯನಗಳಲ್ಲಿ ಜೊತೆಗೂಡಿ ಸೇವೆಮಾಡುವುದು ಕುಟುಂಬ ಸದಸ್ಯರಿಗೆ ಅದೆಷ್ಟು ಸಂತೋಷಕರ! ನೀವು ಹೀಗೆ ನಿಮ್ಮ ಕುಟುಂಬದ ಜೊತೆಯಲ್ಲಿ ಯೆಹೋವನನ್ನು ಆರಾಧಿಸುವಾಗ, “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು” ಎಂದು ಹರ್ಷದಿಂದ ನೀವೂ ಘೋಷಿಸಬಲ್ಲಿರಿ.—ಯೆಹೋ. 24:15.