ಯೇಸುವಿಟ್ಟ ಮಾದರಿಯನ್ನು ಅನುಸರಿಸಿರಿ
1. ಯೇಸು ಯಾವ ಮಾದರಿಯನ್ನಿಟ್ಟನು?
1 ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಭಾಗವಹಿಸುವಾಗ, ನಾವಿಡುವ ಮಾದರಿಯು ನಮ್ಮನ್ನು ಗಮನಿಸುವವರ ಮೇಲೆ ಪ್ರಬಲವಾದ ಪರಿಣಾಮವನ್ನು ಬೀರುತ್ತದೆ ಎಂಬದನ್ನು ನಾವು ಮನಸ್ಸಿನಲ್ಲಿಡಬೇಕು. ಯೇಸು ತನ್ನ ನಡೆನುಡಿಯಿಂದ ಜನರಿಗೆ ಕಲಿಸಿದನು. ಅವನನ್ನು ಗಮನಿಸುತ್ತಿದ್ದ ಜನರು ಅವನಲ್ಲಿದ್ದ ಹುರುಪು, ಮನುಷ್ಯರಿಗಾಗಿರುವ ಪ್ರೀತಿ, ತನ್ನ ತಂದೆಯ ಹೆಸರನ್ನು ಪವಿತ್ರೀಕರಿಸಲು ಅವನಿಗಿದ್ದ ಪ್ರಧಾನ ಬಯಕೆ ಮತ್ತು ತನ್ನ ತಂದೆಯ ಚಿತ್ತವನ್ನು ಪೂರೈಸಲು ಅವನಿಗಿದ್ದ ದೃಢನಿಶ್ಚಯವನ್ನು ನೋಡಸಾಧ್ಯವಿತ್ತು.—1 ಪೇತ್ರ 2:21.
2. ನಮ್ಮ ಮಾದರಿಯು ಶುಶ್ರೂಷೆಯಲ್ಲಿ ನಮ್ಮೊಟ್ಟಿಗೆ ಕೆಲಸಮಾಡುವವರನ್ನು ಯಾವೆಲ್ಲ ವಿಧಗಳಲ್ಲಿ ಪ್ರಭಾವಿಸಬಹುದು?
2 ಮನೆಮನೆಯ ಶುಶ್ರೂಷೆಯಲ್ಲಿ: ಯೇಸುವಿನಂತೆ ನಮ್ಮ ಮಾದರಿಯೂ ಶುಶ್ರೂಷೆಯಲ್ಲಿ ನಮ್ಮೊಟ್ಟಿಗೆ ಕೆಲಸಮಾಡುವವರನ್ನು ಪ್ರಭಾವಿಸುತ್ತದೆ. ನಾವು ಶುಶ್ರೂಷೆಯಲ್ಲಿ ಹುರುಪಿನಿಂದ ಭಾಗವಹಿಸುವುದನ್ನು ಹೊಸಬರು ಮತ್ತು ಕಡಿಮೆ ಅನುಭವವಿರುವ ಪ್ರಚಾರಕರು ನೋಡುವಾಗ, ತಮ್ಮ ಸಾರುವ ಕೆಲಸದ ಗುಣಮಟ್ಟವನ್ನು ಉತ್ತಮಗೊಳಿಸಬೇಕೆಂಬ ಅನಿಸಿಕೆ ಅವರಿಗಾಗುತ್ತದೆ. ನಮ್ಮ ಆನಂದ ಮತ್ತು ಇತರರಲ್ಲಿನ ನಿಜವಾದ ಆಸಕ್ತಿಯನ್ನು ಗಮನಿಸುವಾಗ, ತಮ್ಮ ಶುಶ್ರೂಷೆಯಲ್ಲೂ ಇಂಥ ಗುಣಗಳನ್ನು ಪ್ರದರ್ಶಿಸುವುದು ಎಷ್ಟು ಪ್ರಾಮುಖ್ಯ ಎಂಬುದು ಅವರ ಮನಸ್ಸಿಗೆ ಬರುತ್ತದೆ. ಬೈಬಲ್ ವಚನಗಳನ್ನು ಉಪಯೋಗಿಸುವುದರಲ್ಲಿ, ಪುನರ್ಭೇಟಿಗಳನ್ನು ಮಾಡುವುದರಲ್ಲಿ ಮತ್ತು ಬೈಬಲ್ ಅಧ್ಯಯನಗಳನ್ನು ನಡೆಸುವುದರಲ್ಲಿ ನಮ್ಮ ಶ್ರದ್ಧೆಯನ್ನು ಗಮನಿಸಿ ಅವರು ಸಹ ಹಾಗೆಯೇ ಮಾಡಲು ಪ್ರಚೋದಿಸಲ್ಪಡುವರು.
3. ನಮ್ಮ ಮಾದರಿಯು ಬೈಬಲ್ ವಿದ್ಯಾರ್ಥಿಗಳಿಗೆ ಏನನ್ನು ಕಲಿಸಬಲ್ಲದು?
3 ಬೈಬಲ್ ಅಧ್ಯಯನಗಳನ್ನು ನಡೆಸುವಾಗ: ನಮ್ಮ ಬೈಬಲ್ ವಿದ್ಯಾರ್ಥಿಗಳು ಮುಖ್ಯವಾಗಿ ನಮ್ಮ ನಡತೆಯನ್ನು ಗಮನಿಸುತ್ತಾರೆ. ಉದಾಹರಣೆಗೆ, ಅಧ್ಯಯನಕ್ಕೆ ಮುಂಚಿತವಾಗಿ ತಯಾರಿ ಮಾಡುವ, ವಚನಗಳನ್ನು ತೆರೆದು ನೋಡುವ ಮತ್ತು ಮುಖ್ಯ ಅಂಶಗಳಿಗೆ ಅಡಿಗೆರೆ ಹಾಕುವ ಮಹತ್ತ್ವದ ಕುರಿತು ನಾವು ಅವರಿಗೆ ವಿವರಿಸಿ ಹೇಳುವುದಾದರೂ ಸ್ವತಃ ನಾವು ತಯಾರಿ ಮಾಡಿದ್ದೇವೊ ಇಲ್ಲವೊ ಎಂಬುದನ್ನು ಅವರು ಗಮನಿಸುತ್ತಾರೆ. (ರೋಮಾ. 2:21) ಅಧ್ಯಯನ ಮಾಡಲು ಬರುವೆವೆಂದು ಹೇಳಿದ ಸಮಯಕ್ಕೆ ಸರಿಯಾಗಿ ನಾವು ಹೋಗುವುದಾದರೆ, ಬೈಬಲ್ ಅಧ್ಯಯನದ ಸಮಯದಲ್ಲಿ ಬೇರೆ ವಿಷಯಗಳು ಅಡ್ಡಬರದಂತೆ ಅವರು ಸಹ ನೋಡಿಕೊಳ್ಳುವರು. ಶುಶ್ರೂಷೆಗಾಗಿರುವ ನಮ್ಮ ಸ್ವತ್ಯಾಗದ ಮನೋವೃತ್ತಿ ಮತ್ತು ನಮ್ಮ ಅಚಲವಾದ ನಂಬಿಕೆಯನ್ನು ಅವರು ನಿಶ್ಚಯವಾಗಿಯೂ ಗಮನಿಸುವರು. ಹಾಗಾಗಿ, ಯೇಸುವಿನ ಮಾದರಿಯನ್ನು ನಿಕಟವಾಗಿ ಅನುಸರಿಸುವವರ ವಿದ್ಯಾರ್ಥಿಗಳು ಬಹುತೇಕ ಹುರುಪುಳ್ಳ ಫಲಪ್ರದ ಸೌವಾರ್ತಿಕರಾಗುವುದರಲ್ಲಿ ಅಚ್ಚರಿಯೇನಿಲ್ಲ.
4. ಸಭಾ ಕೂಟಗಳಿಗೆ ಹಾಜರಾಗುವಾಗ ನಮ್ಮ ಮಾದರಿಯಿಂದ ನಾವೇನು ಕಲಿಸುತ್ತೇವೆ?
4 ಸಭಾ ಕೂಟಗಳಿಗೆ ಹಾಜರಾಗುವಾಗ: ಕ್ರೈಸ್ತ ಸಭೆಯಲ್ಲಿರುವ ಎಲ್ಲರು ಸಭಾ ಕೂಟಗಳಲ್ಲಿ ಒಳ್ಳೇ ಮಾದರಿಯನ್ನಿಡುವ ಮೂಲಕ ಬೋಧಿಸುವುದರಲ್ಲಿ ಭಾಗವಹಿಸುತ್ತಾರೆ. ಕೂಟಗಳಿಗೆ ಹಾಜರಾಗಲು ಆರಂಭಿಸುವ ಆಸಕ್ತ ಜನರು ಸಭೆಯಲ್ಲಿ ತಾವು ಗಮನಿಸುವ ಒಳ್ಳೇ ಮಾದರಿಯಿಂದ ಪ್ರಯೋಜನ ಪಡೆಯುತ್ತಾರೆ. ಬೆಚ್ಚಗಿನ ಸಹೋದರತ್ವ, ಕ್ರೈಸ್ತ ಐಕ್ಯ ಮತ್ತು ಹಾಜರಿರುವವರ ಸಭ್ಯ ಉಡುಪು ಹಾಗೂ ಕೇಶಾಲಂಕಾರವನ್ನು ಅವರು ಗಮನಿಸುತ್ತಾರೆ. (ಕೀರ್ತ. 133:1) ನಾವು ಸಭಾ ಕೂಟಗಳಿಗೆ ನಿಷ್ಠೆಯಿಂದ ಹಾಜರಾಗುವ ಮತ್ತು ನಮ್ಮ ನಂಬಿಕೆಯನ್ನು ಅಲ್ಲಿ ಬಹಿರಂಗವಾಗಿ ಅರಿಕೆಮಾಡುವ ನಮ್ಮ ಮಾದರಿಯನ್ನು ಅವರು ಗಮನಿಸುವರು. ಕೂಟಕ್ಕೆ ಬಂದಿದ್ದ ಒಬ್ಬ ವ್ಯಕ್ತಿಯು ಪುಟ್ಟ ಹುಡುಗಿಯೊಬ್ಬಳು ಭಾಷಣಕರ್ತನು ಹೇಳಿದ ವಚನವನ್ನು ಎಷ್ಟು ಬೇಗನೇ ತನ್ನ ಬೈಬಲಿನಲ್ಲಿ ತೆರೆದಳು ಮತ್ತು ಅವನದನ್ನು ಓದುವಾಗ ಹೇಗೆ ನಿಕಟವಾಗಿ ಅನುಸರಿಸಿದಳು ಎಂಬುದನ್ನು ಗಮನಿಸಿದನು. ಅವಳ ಮಾದರಿಯು ಅವನು ಬೈಬಲ್ ಅಧ್ಯಯನಕ್ಕಾಗಿ ವಿನಂತಿಸುವಂತೆ ಮಾಡಿತು.
5. ನಮ್ಮ ಮಾದರಿಯ ಮೌಲ್ಯವನ್ನು ನಾವೇಕೆ ಎಂದೂ ಕಡಿಮೆಅಂದಾಜು ಮಾಡಬಾರದು?
5 ಪರಸ್ಪರರ ಒಳ್ಳೇ ಮಾದರಿಯನ್ನು ಅನುಸರಿಸುವಂತೆ ಶಾಸ್ತ್ರವಚನಗಳು ನಮ್ಮನ್ನು ಪ್ರೋತ್ಸಾಹಿಸುತ್ತವೆ. (ಫಿಲಿ. 3:17; ಇಬ್ರಿ. 13:7) ಆದುದರಿಂದ, ಯೇಸುವಿಟ್ಟ ಮಾದರಿಯನ್ನು ನಾವು ನಿಕಟವಾಗಿ ಅನುಸರಿಸಿದರೆ, ಬೇರೆಯವರು ಅದನ್ನು ಗಮನಿಸುವರು ಮತ್ತು ಅದು ಅವರ ಮೇಲೆ ಒಳ್ಳೇ ಪ್ರಭಾವ ಬೀರಬಲ್ಲದು ಎಂಬದನ್ನು ನಾವು ನೆನಪಿನಲ್ಲಿಡಬೇಕು. ಇದನ್ನು ಅರಿತವರಾಗಿ, 1 ತಿಮೊಥೆಯ 4:16ರಲ್ಲಿರುವ ಈ ಮಾತುಗಳನ್ನು ನಾವು ಮನಸ್ಸಿಗೆ ತೆಗೆದುಕೊಳ್ಳುವೆವು: “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು.”