ನವೆಂಬರ್ ತಿಂಗಳಲ್ಲಿ ನೀಡಲಾಗುವ ಎಚ್ಚರ! ಪತ್ರಿಕೆಯ ವಿಶೇಷ ಸಂಚಿಕೆ!
1 ಅನೇಕರಿಗೆ ಬೈಬಲಿನ ಮೌಲ್ಯದ ಕುರಿತು ಈ ಯಥಾರ್ಥ ಪ್ರಶ್ನೆಗಳಿವೆ: ‘ಬೈಬಲನ್ನು ಮನುಷ್ಯರು ಬರೆದಿದ್ದರೆ ಅದನ್ನು ದೇವರ ವಾಕ್ಯವೆಂದು ಹೇಗೆ ಹೇಳಬಹುದು? ನನ್ನ ಹೆಜ್ಜೆಗಳನ್ನು ಮಾರ್ಗದರ್ಶಿಸಲು ನಾನು ಬೈಬಲಿನಲ್ಲಿ ಏಕೆ ಭರವಸೆಯನ್ನಿಡಬೇಕು? ಬೈಬಲನ್ನು ಓದಿ ಅಧ್ಯಯನ ಮಾಡಲು ಸಮಯ ಕೊಡುವುದರಿಂದ ಹಾಗೂ ಶ್ರಮಿಸುವುದರಿಂದ ಯಾವ ಪ್ರಯೋಜನಗಳಿವೆ? ಬೈಬಲ್ನ ಯಾವ ತರ್ಜುಮೆಯನ್ನು ನಾನು ಬಳಸಬೇಕು?’ ಈ ಕೆಲವು ಪ್ರಶ್ನೆಗಳಿಗೆ ನವೆಂಬರ್ ತಿಂಗಳಿನ ಎಚ್ಚರ! ಪತ್ರಿಕೆಯ ವಿಶೇಷ ಸಂಚಿಕೆ ಉತ್ತರಗಳನ್ನು ಕೊಡುತ್ತದೆ. ಈ ಸಂಚಿಕೆಯ ಶೀರ್ಷಿಕೆಯು “ಬೈಬಲಿನಲ್ಲಿ ನೀವು ಭರವಸೆಯಿಡಬಲ್ಲಿರೋ?” ಎಂದಾಗಿದೆ. ಇದು ಇಂಗ್ಲಿಷ್, ಮಲೆಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಿದೆ. ನೀವು ಎಚ್ಚರ! ಪತ್ರಿಕೆಯನ್ನು ಬೇರೆ ಭಾಷೆಗಳಲ್ಲಿ ನೀಡುತ್ತಿರುವುದಾದರೆ ಅಕ್ಟೋಬರ್-ಡಿಸೆಂಬರ್ ಸಂಚಿಕೆಯನ್ನು ತೋರಿಸಿ, “ಒಳ್ಳೇ ಹೆತ್ತವರಾಗಲು ಏಳು ಹೆಜ್ಜೆಗಳು” ಎಂಬ ವಿಷಯದ ಕಡೆಗೆ ಅವರ ಗಮನ ಸೆಳೆಯಬಹುದು.
2 ನಮ್ಮ ಟೆರಿಟೊರಿಯಲ್ಲಿ ಈ ವಿಶೇಷ ಸಂಚಿಕೆ ಅಥವಾ ಅಕ್ಟೋಬರ್-ಡಿಸೆಂಬರ್ ಸಂಚಿಕೆಯನ್ನು ವ್ಯಾಪಕವಾಗಿ ವಿತರಿಸುವೆವು. ಸಾಧ್ಯವಾದರೆ ನವೆಂಬರ್ ತಿಂಗಳ ಪ್ರತಿ ಶನಿವಾರ ಸಭೆಯೊಂದಿಗೆ ಮನೆ-ಮನೆಯ ಶುಶ್ರೂಷೆಯಲ್ಲಿ ಭಾಗವಹಿಸಿರಿ. ಎಚ್ಚರ! ಪತ್ರಿಕೆಯ ಈ ಸಂಚಿಕೆಯನ್ನು ನಿಮ್ಮ ಸಂಬಂಧಿಕರಿಗೆ, ನೆರೆಯವರಿಗೆ, ಸಹೋದ್ಯೋಗಿಗಳಿಗೆ, ಅಧ್ಯಾಪಕರಿಗೆ, ಸಹಪಾಠಿಗಳಿಗೆ ಮತ್ತು ನೀವು ಪುನರ್ಭೇಟಿ ಮಾಡುವವರಿಗೆ ತೋರಿಸಿರಿ. ಷಾಪಿಂಗ್ ಅಥವಾ ಪ್ರಯಾಣ ಮಾಡುವಾಗ ಅದರ ಪ್ರತಿಗಳನ್ನು ನಿಮ್ಮೊಂದಿಗಿಡಿ. ಸಭೆಯಲ್ಲಿ ಸಾಕಷ್ಟು ಪ್ರತಿಗಳಿರುವಂತೆ ಹಿರಿಯರು ಹೆಚ್ಚು ಪತ್ರಿಕೆಗಳಿಗಾಗಿ ವಿನಂತಿಸಿದ್ದಾರೆ.
3 ಬೈಬಲ್ ಅಧ್ಯಯನ ಆರಂಭಿಸಿರಿ: ಮನೆಯವರು ಪತ್ರಿಕೆಯನ್ನು ಸ್ವೀಕರಿಸಿದರೆ, ಸಂಭಾಷಣೆಯನ್ನು ಮುಗಿಸುವ ಮೊದಲು ಬೈಬಲ್ ಅಧ್ಯಯನಕ್ಕೆ ನೀವು ತಳಪಾಯ ಹಾಕಬಲ್ಲಿರಿ. ಉದಾಹರಣೆಗೆ ನವೆಂಬರ್ ತಿಂಗಳ ವಿಶೇಷ ಸಂಚಿಕೆಯನ್ನು ನೀಡಿದ ಬಳಿಕ ನೀವು ಹೀಗೆ ಹೇಳಬಹುದು: “ನಾನು ಇನ್ನೊಮ್ಮೆ ಬರುವಾಗ, ‘ಭೂಮಿಗಾಗಿ ದೇವರ ಉದ್ದೇಶವೇನು?’ ಎಂಬ ಪ್ರಶ್ನೆಗೆ ಬೈಬಲ್ ಕೊಡುವ ಉತ್ತರವನ್ನು ನಿಮಗೆ ತೋರಿಸುವೆ.” ತದನಂತರ, ಪುನರ್ಭೇಟಿಯಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕದ 4-5ನೇ ಪುಟಗಳನ್ನು ಮನೆಯವನಿಗೆ ತೋರಿಸಿರಿ ಇಲ್ಲವೇ 3ನೇ ಅಧ್ಯಾಯದ 1-3ನೇ ಪ್ಯಾರಗಳನ್ನು ಪರಿಗಣಿಸಿರಿ. ಅಥವಾ ನೀವು ಮನೆಯವರಿಗೆ ಹೀಗೆ ಹೇಳಬಹುದು: “ಬೈಬಲನ್ನು ಓದುವಾಗ ಅನೇಕರಿಗೆ ಅದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಇನ್ನೊಮ್ಮೆ ಬಂದಾಗ ನೀವು ನಿಮ್ಮ ಬೈಬಲನ್ನು ಹೆಚ್ಚು ಉತ್ತಮವಾಗಿ ಹೇಗೆ ಅರ್ಥಮಾಡಿಕೊಳ್ಳಸಾಧ್ಯವಿದೆ ಎಂಬುದನ್ನು ತೋರಿಸುತ್ತೇನೆ.” ಮುಂದಿನ ಭೇಟಿಯಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಪರಿಚಯಿಸಿ ಅಧ್ಯಯನ ಹೇಗೆ ಮಾಡುವುದೆಂಬದನ್ನು ತೋರಿಸಿರಿ. ನೀವು ಎಚ್ಚರ! ಪತ್ರಿಕೆಯ ಅಕ್ಟೋಬರ್-ಡಿಸೆಂಬರ್ ಸಂಚಿಕೆಯನ್ನು ನೀಡಿದ ನಂತರ ಹೀಗೆ ಹೇಳಬಹುದು: “ಬೈಬಲ್ ಮೂಲತತ್ತ್ವಗಳು ಕುಟುಂಬ ಜೀವನವನ್ನು ಹೇಗೆ ಸಂತೋಷಕರವನ್ನಾಗಿ ಮಾಡಬಲ್ಲವು ಎಂಬುದನ್ನು ನಾನು ಇನ್ನೊಮ್ಮೆ ಬಂದಾಗ ತಿಳಿಸುತ್ತೇನೆ.” ಪುನರ್ಭೇಟಿಯಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕದ 14ನೇ ಅಧ್ಯಾಯದ 1-2ನೇ ಪ್ಯಾರವನ್ನು ಒಟ್ಟಾಗಿ ಪರಿಗಣಿಸಿರಿ.
4 ‘ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿರುವ’ “ಪರಿಶುದ್ಧಗ್ರಂಥ” ಬೈಬಲೊಂದೇ ಆಗಿದೆ. (2 ತಿಮೊ. 3:15) ಆದುದರಿಂದ, ಜನರು ಬೈಬಲಿನಲ್ಲಿ ಭರವಸೆಯನ್ನು ಬೆಳೆಸಿಕೊಳ್ಳಲು ಸಹಾಯಮಾಡುವಂತೆ ನಾವೆಲ್ಲರೂ ಎಚ್ಚರ! ಪತ್ರಿಕೆಯ ಈ ಸಂಚಿಕೆಗಳನ್ನು ಹುರುಪಿನಿಂದ ವಿತರಿಸೋಣ!