ಅಕ್ಟೋಬರ್ನಲ್ಲಿ ವಿತರಿಸಲಾಗುವ ಎಚ್ಚರ! ಪತ್ರಿಕೆಯ ವಿಶೇಷ ಸಂಚಿಕೆ
1 ಹಕ್ಕಿಗಳ ಗಾಯನವನ್ನು ಮತ್ತು ಸೂರ್ಯಾಸ್ತಮಾನದ ದೃಶ್ಯವನ್ನು ಬಹುಮಟ್ಟಿಗೆ ಎಲ್ಲರೂ ಆನಂದಿಸುತ್ತಾರೆ. ಆದರೆ, ಇವುಗಳನ್ನೆಲ್ಲಾ ಪ್ರೀತಿಭರಿತನಾದ ಒಬ್ಬ ಸ್ವರ್ಗೀಯ ತಂದೆಯು ಸೃಷ್ಟಿಸಿದ್ದಾನೆಂದು ಅನೇಕರು ಒಪ್ಪಿಕೊಳ್ಳುವುದಿಲ್ಲ. ಹೀಗಿರುವುದರಿಂದ, ಎಚ್ಚರ! ಪತ್ರಿಕೆಯ ಒಂದು ವಿಶೇಷ ಸಂಚಿಕೆಯನ್ನು ವಿತರಿಸುವ ಮೂಲಕ ಯೆಹೋವನ ಸೃಷ್ಟಿಕರ್ತೃತ್ವವನ್ನು ಸಮರ್ಥಿಸಲು ನಮಗೊಂದು ಅಪೂರ್ವ ಸಂದರ್ಭವಿದೆ. (ಯೆಶಾ. 40:28; 43:10) ಎಚ್ಚರ!ದ ಅಕ್ಟೋಬರ್-ಡಿಸೆಂಬರ್ ತಿಂಗಳ ಇಡೀ ಸಂಚಿಕೆಯು “ಒಬ್ಬ ಸೃಷ್ಟಿಕರ್ತನು ಇದ್ದಾನೊ?” ಎಂಬ ಮುಖ್ಯವಿಷಯಕ್ಕೆ ಮುಡಿಪಾಗಿಡಲ್ಪಟ್ಟಿದೆ.
2 ಟೆರಿಟೊರಿಯಲ್ಲಿ: ಸಾಧ್ಯವಿರುವಲ್ಲಿ ಪ್ರತಿ ಶನಿವಾರ ಸಭೆಯಾಗಿ ಮನೆಯಿಂದ ಮನೆಯ ಸೇವೆಯಲ್ಲಿ ಭಾಗವಹಿಸಲು ಏರ್ಪಾಡುಮಾಡಿರಿ. ಆದರೆ ವಾರದ ಇತರ ಸಮಯಗಳಲ್ಲೂ ನೀವು ಈ ವಿಶೇಷ ಸಂಚಿಕೆಯನ್ನು ನೀಡಬಹುದು. ವಿಶೇಷವಾಗಿ, ಶಿಕ್ಷಕರು ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೆಲಸಮಾಡುವ ಇತರರು ಈ ಸಂಚಿಕೆಯನ್ನು ಓದುವುದರಲ್ಲಿ ಹೆಚ್ಚು ಆಸಕ್ತರಾಗಿರುವರು. ಆದಕಾರಣ, ನಿಮ್ಮ ಟೆರಿಟೊರಿಯಲ್ಲಿರುವ ಅಂಥ ಜನರನ್ನು ಭೇಟಿಮಾಡಲು ವಿಶೇಷ ಏರ್ಪಾಡುಗಳನ್ನು ಮಾಡಬಹುದು.
3 ಒಂದುವೇಳೆ ಯಾರಾದರೂ ಆಸಕ್ತಿಯನ್ನು ತೋರಿಸುವಲ್ಲಿ, ನೀವು ಮುಂದಿನ ಭೇಟಿಯಲ್ಲಿ ಉತ್ತರಿಸಲಿಕ್ಕಾಗಿ ಒಂದು ಪ್ರಶ್ನೆಯನ್ನು ಬಿಟ್ಟುಬನ್ನಿರಿ. ಉದಾಹರಣೆಗೆ, ಪ್ರೀತಿಪೂರ್ಣನಾದ ಒಬ್ಬ ಸೃಷ್ಟಿಕರ್ತನು ಇಷ್ಟೊಂದು ಕಷ್ಟಸಂಕಟಗಳನ್ನು ಏಕೆ ಅನುಮತಿಸುವನು ಎಂಬ ವಿಷಯದ ಕುರಿತು ನೀವು ಒಂದು ಪ್ರಶ್ನೆಯನ್ನು ಎಬ್ಬಿಸಸಾಧ್ಯವಿದೆ. ತದನಂತರ ಪುನರ್ಭೇಟಿ ಮಾಡುವಾಗ, ಬೈಬಲ್ ಬೋಧಿಸುತ್ತದೆ ಪುಸ್ತಕದ ಅಧ್ಯಾಯ 1 ಅಥವಾ ಅಧ್ಯಾಯ 11ರಲ್ಲಿರುವ ಪ್ರಾಮುಖ್ಯ ಅಂಶಗಳ ಕಡೆಗೆ ಗಮನಸೆಳೆಯಸಾಧ್ಯವಿದೆ. ಅಥವಾ ಭೂಮಿಗಾಗಿ ಸೃಷ್ಟಿಕರ್ತನಿಗಿರುವ ಉದ್ದೇಶದ ಕುರಿತು ನೀವೊಂದು ಪ್ರಶ್ನೆಯನ್ನು ಕೇಳಬಹುದು. ಬಳಿಕ ಪುನರ್ಭೇಟಿ ಮಾಡುವಾಗ 3ನೇ ಅಧ್ಯಾಯವನ್ನು ಪರಿಗಣಿಸಬಹುದು.
4 ಶಾಲೆಯಲ್ಲಿ: ಒಂದುವೇಳೆ ನೀವಿನ್ನೂ ಶಾಲೆಯಲ್ಲಿ ಓದುತ್ತಿರುವುದಾದರೆ, ನಿಮ್ಮ ಉಪಾಧ್ಯಾಯರಿಗೆ ಹಾಗೂ ಸಹಪಾಠಿಗಳಿಗೆ ಎಚ್ಚರ!ದ ಈ ವಿಶೇಷ ಸಂಚಿಕೆಯನ್ನು ಏಕೆ ನೀಡಬಾರದು? ಕೇವಲ ನಿಮ್ಮ ಮೇಜಿನ ಮೇಲೆ ಒಂದು ಪತ್ರಿಕೆಯನ್ನಿಡುವುದು ತಾನೇ, ನಮ್ಮ ನಂಬಿಕೆಗಳ ಕುರಿತು ಪ್ರಶ್ನೆಗಳನ್ನು ಕೇಳುವಂತೆ ಅವರನ್ನು ಪ್ರೇರಿಸಬಹುದು. ತರಗತಿಯಲ್ಲಿನ ಕೆಲವು ಚರ್ಚೆಗಳಲ್ಲಿ ಮತ್ತು ಪ್ರಬಂಧಗಳನ್ನು ಬರೆಯುವ ಸಮಯದಲ್ಲಿ ನಿಮ್ಮ ನಂಬಿಕೆಯನ್ನು ಸಮರ್ಥಿಸುವಾಗ ಈ ಪತ್ರಿಕೆಯಲ್ಲಿರುವ ಮಾಹಿತಿಯನ್ನು ಉಪಯೋಗಿಸುವ ಸಂದರ್ಭಗಳು ನಿಮಗೆ ಬಂದೊದಗಬಹುದು. ನಿಮಗೆ ಸಹಾಯಮಾಡಲಿಕ್ಕಾಗಿಯೇ ಈ ಸಂಚಿಕೆಯ “ಯುವ ಜನರು ಪ್ರಶ್ನಿಸುವುದು” ಅಂಕಣದಲ್ಲಿ “ಸೃಷ್ಟಿಯಲ್ಲಿನ ನನ್ನ ನಂಬಿಕೆಯನ್ನು ಹೇಗೆ ಸಮರ್ಥಿಸಬಲ್ಲೆ?” ಎಂಬ ಶೀರ್ಷಿಕೆಯುಳ್ಳ ಲೇಖನವಿದೆ.
5 ಯೆಹೋವನು ಏನನ್ನು ಸೃಷ್ಟಿಸಿದ್ದಾನೋ ಅದಕ್ಕಾಗಿ ಘನಮಾನವನ್ನು ಹೊಂದುವುದಕ್ಕೆ ಅರ್ಹನಾಗಿದ್ದಾನೆ. (ಪ್ರಕ. 4:11) ನಾವು, ಎಚ್ಚರ!ದ ಅಕ್ಟೋಬರ್-ಡಿಸೆಂಬರ್ ಸಂಚಿಕೆಯನ್ನು ಉತ್ಸಾಹಪೂರ್ವಕವಾಗಿ ನೀಡುವ ಮೂಲಕ ನಮ್ಮ ಸೃಷ್ಟಿಕರ್ತನಿಗೆ ಘನಮಾನಗಳನ್ನು ಸಲ್ಲಿಸಸಾಧ್ಯವಿದೆ. ಮತ್ತು ಇತರರೂ ಹಾಗೆ ಮಾಡುವಂತೆ ಸಹಾಯಮಾಡಸಾಧ್ಯವಿದೆ.