ಶುಶ್ರೂಷೆಗಾಗಿ ನಮ್ಮ ಹುರುಪನ್ನು ಕಾಪಾಡಿಕೊಳ್ಳಬೇಕು
1ಇಸವಿ 1992ರಿಂದ ಆರಂಭಿಸಿ ಪ್ರತಿವರ್ಷ ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾದ ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನೂರು ಕೋಟಿಗಿಂತಲೂ ಹೆಚ್ಚಿನ ತಾಸುಗಳನ್ನು ಹುರುಪಿನಿಂದ ವ್ಯಯಿಸಿದ್ದಾರೆ. ಅಂತಹ ಮಹಾನ್ ಸಾಧನೆಯಲ್ಲಿ ನಮಗಿದ್ದ ಚಿಕ್ಕ ಪಾಲಿಗಾಗಿ ನಾವೆಷ್ಟು ಸಂತೋಷಿತರು!—ಮತ್ತಾ. 28:19, 20.
2ಈ “ಕಠಿನಕಾಲ”ಗಳಲ್ಲೂ ಶುಶ್ರೂಷೆಯಲ್ಲಿ ನಮ್ಮನ್ನು ಬೆಂಬಲಿಸಿದ ಹಾಗೂ ಅಗತ್ಯವಾದುದನ್ನು ಒದಗಿಸಿದ ಯೆಹೋವನಿಗೆ ಖಂಡಿತವಾಗಿ ಎಲ್ಲಾ ಉಪಕಾರಸ್ತುತಿಗಳು ಸಲ್ಲಬೇಕು. (2 ತಿಮೊ. 3:1) ಈ ಮಹತ್ವಪೂರ್ಣ ಕೆಲಸವನ್ನು ಹುರುಪಿನಿಂದ ಮುಂದುವರಿಸಲು ನಮ್ಮಿಂದ ಏನು ಅವಶ್ಯ?
3ಹುರುಪಿಗೆ ಆಧಾರ: ದೇವರ ಮತ್ತು ನೆರೆಯವರ ಮೇಲೆ ಆಳವಾದ ಪ್ರೀತಿ ಅಲ್ಲದೆ ನಮ್ಮ ಸಮರ್ಪಣೆಗನುಸಾರ ಜೀವಿಸುವ ಹೃತ್ಪೂರ್ವಕ ಬಯಕೆ ರಾಜ್ಯ ಸೇವೆಗೆ ನಮ್ಮನ್ನು ಪ್ರೇರಿಸುತ್ತದೆ. (ಮತ್ತಾ. 22:37-39; 1 ಯೋಹಾ. 5:3) ಸಾರುವ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ತ್ಯಾಗಗಳನ್ನು ಮಾಡುವಂತೆ ಪ್ರೀತಿ ನಮ್ಮನ್ನು ಪ್ರಚೋದಿಸುತ್ತದೆ.—ಲೂಕ 9:23.
4ಹುರುಪನ್ನು ಕಾಪಾಡಿಕೊಳ್ಳಲು ಶ್ರದ್ಧೆಯಿಂದ ಪ್ರಯತ್ನಿಸಿ: ನಮ್ಮ ವಿರೋಧಿಯಾದ ಪಿಶಾಚನು ಶುಶ್ರೂಷೆಗಾಗಿರುವ ನಮ್ಮ ಹುರುಪನ್ನು ಕುಂದಿಸಲು ಸಕಲ ಪ್ರಯತ್ನ ಮಾಡುವನು. ಟೆರಿಟೊರಿಯಲ್ಲಿನ ಜನರ ನಿರ್ಲಕ್ಷ್ಯ ಮನೋಭಾವ, ಈ ಲೋಕದ ಅಪಕರ್ಷಣೆಗಳು, ದೈನಂದಿನ ಜೀವನದ ಒತ್ತಡಗಳು ಮತ್ತು ಕುಗ್ಗುತ್ತಿರುವ ನಮ್ಮ ಆರೋಗ್ಯದ ಬಗ್ಗೆ ಚಿಂತೆ, ಇವು ಸೈತಾನನು ನಮ್ಮ ಧೈರ್ಯಗೆಡಿಸಲು ಉಪಯೋಗಿಸುವ ವಿಷಯಗಳಲ್ಲಿ ಕೆಲವಾಗಿವೆ.
5ಆದ್ದರಿಂದ ನಮ್ಮ ಹುರುಪನ್ನು ಸಜೀವವಾಗಿಡಲು ನಾವು ಪರಿಶ್ರಮಪಡಬೇಕು. ‘ಮೊದಲು ನಮಗಿದ್ದ ಪ್ರೀತಿಯನ್ನು’ ನಾವೆಲ್ಲರೂ ಬೆಳೆಸಿಕೊಳ್ಳುವುದು ಪ್ರಾಮುಖ್ಯ. ಇದರಲ್ಲಿ ದೇವರ ವಾಕ್ಯವಾದ ಬೈಬಲನ್ನು ಕ್ರಮವಾಗಿ ಓದುವುದು ಮತ್ತು ಧ್ಯಾನಿಸುವುದು ಹಾಗೂ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವು ಮಾಡುವ ಆಧ್ಯಾತ್ಮಿಕ ಏರ್ಪಾಡುಗಳ ಪೂರ್ಣ ಪ್ರಯೋಜನ ಪಡೆಯುವುದು ಸೇರಿದೆ.—ಪ್ರಕ. 2:4; ಮತ್ತಾ. 24:45; ಕೀರ್ತ. 119:97.
6ಬೈಬಲ್ ಪ್ರವಾದನೆಗಳು ಸ್ಪಷ್ಟವಾಗಿ ತೋರಿಸುವಂತೆ ಭಕ್ತಿಹೀನ ಜನರ ನಾಶನಕ್ಕಾಗಿ ಯೆಹೋವನ ದಿನವು ವೇಗದಿಂದ ಸಮೀಪಿಸುತ್ತಿದೆ. (2 ಪೇತ್ರ 2:3; 3:10) ಅದನ್ನು ಮನಸ್ಸಿನಲ್ಲಿಡುತ್ತಾ ಶುಶ್ರೂಷೆಗಾಗಿರುವ ನಮ್ಮ ಹುರುಪನ್ನು ಕಾಪಾಡಿಕೊಳ್ಳಲು ಪರಿಶ್ರಮಪಡೋಣ. ಈಗ ನಡೆಯುತ್ತಿರುವ ಲೋಕವ್ಯಾಪಕ ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳೋಣ.