ಪ್ರಶ್ನಾ ಚೌಕ
◼ ಒಂದು ಧಾರ್ಮಿಕ ಸಂಸ್ಥೆಯಿಂದ ನಡೆಸಲ್ಪಡುವ ಆಸ್ಪತ್ರೆಯಲ್ಲಿ ಅಥವಾ ನರ್ಸಿಂಗ್ ಹೋಮ್‌ನಲ್ಲಿ ಒಬ್ಬ ಯೆಹೋವನ ಸಾಕ್ಷಿ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆಯುವುದು ಸೂಕ್ತವೋ?
ಹಲವಾರು ಧಾರ್ಮಿಕ ಸಂಸ್ಥೆಗಳು ವೈದ್ಯಕೀಯ ಚಿಕಿತ್ಸೆಯನ್ನು ಅಥವಾ ದೀರ್ಘಕಾಲಿಕ ಆರೈಕೆಯನ್ನು ನೀಡುವಂಥ ಆಸ್ಪತ್ರೆಗಳನ್ನು ಅಥವಾ ನರ್ಸಿಂಗ್ ಹೋಮ್‌ಗಳನ್ನು ನಡೆಸುತ್ತವೆ. ಸಾಮಾನ್ಯವಾಗಿ ಇಂತಹ ಸೌಕರ್ಯಗಳು ಮಹಾ ಬಾಬೆಲ್‌ನ ಮೇಲ್ಮೆಗಾಗಿ ಸ್ಥಾಪಿಸಲ್ಪಟ್ಟವುಗಳಾಗಿರುವುದಿಲ್ಲ. (ಪ್ರಕ. 18:2, 4) ಆರಂಭದಲ್ಲಿ, ಹಣವನ್ನು ಗಳಿಸುವ ಉದ್ದೇಶಕ್ಕಾಗಿ ಅವು ಒಂದು ಧಾರ್ಮಿಕ ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟಿದ್ದಿರಬಹುದು. ಇಂದು, ಕೆಲವು ಆಸ್ಪತ್ರೆಗಳ ಹೆಸರೇ ಧರ್ಮಕ್ಕೆ ಸಂಬಂಧಪಟ್ಟಿರುತ್ತವೆ; ಇನ್ನು ಕೆಲವು ಆಸ್ಪತ್ರೆಗಳಲ್ಲಿ ಪುರೋಹಿತ ವರ್ಗದ ಸದಸ್ಯರು ಕೆಲಸಮಾಡುತ್ತಿರಬಹುದು.
ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಿಗೆ ಆಸ್ಪತ್ರೆಯ ಅಥವಾ ನರ್ಸಿಂಗ್ ಆರೈಕೆಯು ಬೇಕಾಗಿರುವಲ್ಲಿ ಒಂದು ಧಾರ್ಮಿಕ ಸಂಸ್ಥೆಯೊಂದಿಗೆ ಸಂಬಂಧಿಸಿರಬಹುದಾದ ಸೌಕರ್ಯಕ್ಕೆ ಹೋಗುವನೋ ಇಲ್ಲವೋ ಎಂಬುದು ಅವನು ಸ್ವತಃ ತೆಗೆದುಕೊಳ್ಳಬೇಕಾದ ತೀರ್ಮಾನವಾಗಿದೆ. ಒಬ್ಬನ ಮನಸ್ಸಾಕ್ಷಿ ಇದನ್ನು ಒಪ್ಪುವಾಗ ಇನ್ನೊಬ್ಬನ ಮನಸ್ಸಾಕ್ಷಿ ಇದನ್ನು ಒಪ್ಪದಿರಬಹುದು. (1 ತಿಮೊ. 1:5) ಕೆಲವು ನಿರ್ದಿಷ್ಟ ಸನ್ನಿವೇಶಗಳು ಒಬ್ಬನು ಮಾಡುವ ತೀರ್ಮಾನದ ಮೇಲೆ ಪ್ರಭಾವಬೀರಬಹುದು ಮತ್ತು ಇವುಗಳನ್ನು ಪರಿಗಣಿಸುವುದು ಒಳ್ಳೇದು.
ಉದಾಹರಣೆಗೆ, ಧಾರ್ಮಿಕ ಹೆಸರನ್ನು ಹೊಂದಿರುವಂಥ ಒಂದು ಆಸ್ಪತ್ರೆ ಅಥವಾ ನರ್ಸಿಂಗ್ ಹೋಮ್ ಮಾತ್ರ ಹತ್ತಿರದಲ್ಲಿರಬಹುದು. ಅಥವಾ ಮತ್ತೊಂದು ಸೌಕರ್ಯವು ಹತ್ತಿರದಲ್ಲಿರಬಹುದಾದರೂ ಪ್ರಾಯಶಃ ಧಾರ್ಮಿಕ ಸಂಬಂಧಗಳನ್ನು ಹೊಂದಿರುವಂಥ ಆಸ್ಪತ್ರೆಯಲ್ಲಿ ಉತ್ತಮ ಸೇವೆಯು ಸಿಗಬಹುದು. ನಿರ್ದಿಷ್ಟ ಚಿಕಿತ್ಸೆಗೆ ಬೇಕಾದ ಸಾಧನಸೌಕರ್ಯವಿರುವ ಏಕಮಾತ್ರ ಆಸ್ಪತ್ರೆಯು ಅದಾಗಿರಬಹುದು ಅಥವಾ ನಿಮ್ಮ ವೈದ್ಯನು ಇಲ್ಲವೆ ಶಸ್ತ್ರಚಿಕಿತ್ಸಕನು ಚಿಕಿತ್ಸೆಯನ್ನು ನೀಡುವ ಏಕಮಾತ್ರ ಆಸ್ಪತ್ರೆಯು ಅದಾಗಿರಬಹುದು. ಇದಲ್ಲದೆ ಕ್ರೈಸ್ತರಾಗಿ ರಕ್ತದ ಉಪಯೋಗದ ವಿಷಯದಲ್ಲಿ ನೀವು ತೆಗೆದುಕೊಳ್ಳುವ ನಿಲುವನ್ನು ಕೆಲವೊಮ್ಮೆ ಧಾರ್ಮಿಕ ಸಂಬಂಧಗಳನ್ನು ಹೊಂದಿರುವಂಥ ಆಸ್ಪತ್ರೆಗಳು ಮಾನ್ಯಮಾಡಬಹುದು, ಆದರೆ ಇತರ ಖಾಸಗಿ ಅಥವಾ ಸರ್ಕಾರೀ ಆಸ್ಪತ್ರೆಗಳು ಅದನ್ನು ಮಾನ್ಯಮಾಡದೇ ಇರಬಹುದು. ಆದುದರಿಂದ ಯಾವ ಸೌಕರ್ಯವನ್ನು ಉಪಯೋಗಿಸುವುದು ಎಂದು ತೀರ್ಮಾನಿಸುವುದರಲ್ಲಿ ಈ ಕೆಲವು ಅಂಶಗಳನ್ನು ನೀವು ಪರಿಗಣಿಸಬೇಕಾಗಿರಬಹುದು.
ಧಾರ್ಮಿಕ ಸಂಬಂಧಗಳನ್ನು ಹೊಂದಿರುವಂಥ ಒಂದು ಆಸ್ಪತ್ರೆಯನ್ನೋ ನರ್ಸಿಂಗ್ ಹೋಮನ್ನೋ ಉಪಯೋಗಿಸಲು ನೀವು ತೀರ್ಮಾನಿಸುವುದಾದರೆ ನೀವು ಪಾವತಿಸುವ ಹಣವನ್ನು ಒದಗಿಸಲ್ಪಟ್ಟ ಸೇವೆಗಳಿಗಾಗಿ ಕೊಡುವ ಹಣವೆಂದು ಭಾವಿಸಬಹುದು. ಧಾರ್ಮಿಕ ಸಂಸ್ಥೆಯು ಒಂದು ವ್ಯಾಪಾರವನ್ನು ನಡೆಸುತ್ತಿದೆಯೆಂದು ನೀವು ನೆನಸಬಹುದು; ಇಂಥ ವ್ಯಾಪಾರದಿಂದ ಒಂದು ಸೇವೆಯನ್ನು ಹೊಂದುವ ಮೂಲಕ ನೀವು ನೇರವಾಗಿ ಆ ಸುಳ್ಳು ಧರ್ಮಕ್ಕೆ ಬೆಂಬಲಿಸಿದಂತಾಗುವುದಿಲ್ಲ. ನೀವು ಕೇವಲ ಆ ವಸ್ತುವಿಗೆ ಅಥವಾ ಸೇವೆಗೆ ತಗಲುವ ಹಣವನ್ನು ಕೊಡುತ್ತಿದ್ದೀರಿ ಅಷ್ಟೆ.
ವಾಸ್ತವದಲ್ಲಿ ಒಬ್ಬ ಕ್ರೈಸ್ತನಾಗಿ ಇಂತಹ ಸಂದರ್ಭಗಳಲ್ಲಿ ನೀವು ಯಾವುದೇ ರೀತಿಯ ಸುಳ್ಳು ಆರಾಧನೆಯ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮಾತ್ರವಲ್ಲದೆ ಆಸ್ಪತ್ರೆಗಳಲ್ಲಿ ಕೆಲಸಮಾಡುತ್ತಿರಬಹುದಾದ ಇಲ್ಲವೆ ಅಲ್ಲಿಗೆ ಭೇಟಿಕೊಡಬಹುದಾದ ವ್ಯಕ್ತಿಗಳು ಸಾಮಾನ್ಯವಾಗಿ “ಫಾದರ್” ಅಥವಾ “ಸಿಸ್ಟರ್” ಎಂಬಂಥ ಧಾರ್ಮಿಕ ಬಿರುದುಗಳಿಂದ ಸಂಬೋಧಿಸಲ್ಪಡುತ್ತಾರೆ; ಆದರೆ ನೀವು ಅವುಗಳನ್ನು ಉಪಯೋಗಿಸದಿರುವಿರಿ. (ಮತ್ತಾ. 23:9) ಇದು ಕೇವಲ ಒಂದು ವ್ಯಾಪಾರದ ಏರ್ಪಾಡಾಗಿದ್ದು ನೀವು ಚಿಕಿತ್ಸೆ ಮತ್ತು ಸೇವೆಯನ್ನು ಪಡೆದುಕೊಳ್ಳುತ್ತಿರುವುದಲ್ಲದೆ ಬೇರೆ ಏನೂ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಆಸ್ಪತ್ರೆಗೆ ದಾಖಲಿಸಲ್ಪಡುವಾಗ, ನೀವು ಒಬ್ಬ ಯೆಹೋವನ ಸಾಕ್ಷಿಯಾಗಿದ್ದೀರಿ ಮತ್ತು ಸ್ಥಳಿಕ ಹಿರಿಯರು ನಿಮ್ಮನ್ನು ಭೇಟಿಮಾಡುವುದನ್ನು ಇಷ್ಟಪಡುತ್ತೀರಿ ಎಂದು ತಿಳಿಸಿರಿ. ಇದರಿಂದ ನೀವು ಅಲ್ಲಿರುವಾಗ ಸರಿಯಾದ ಆಧ್ಯಾತ್ಮಿಕ ಬೆಂಬಲವು ನಿಮಗೆ ಸಿಗುವಂತಾಗುವುದು.—1 ಥೆಸ. 5:14.
ವಿಶ್ವಾಸಿಗಳಾದ ಕುಟುಂಬ ಸದಸ್ಯರು, ಸ್ಥಳಿಕ ಹಿರಿಯರು ಮತ್ತು ಸಭೆಯಲ್ಲಿರುವ ಇತರ ಸದಸ್ಯರು ನರ್ಸಿಂಗ್ ಹೋಮ್‌ಗಳಲ್ಲಿ ವಾಸಿಸುತ್ತಿರುವ ವಯೋವೃದ್ಧ ಸಹೋದರ ಸಹೋದರಿಯರ ಆಧ್ಯಾತ್ಮಿಕ ಅಗತ್ಯಗಳನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳತಕ್ಕದ್ದು; ವಿಶೇಷವಾಗಿ ಅದು ಒಂದು ಧಾರ್ಮಿಕ ಸಂಸ್ಥೆಯಿಂದ ನಡೆಸಲ್ಪಡುವಾಗ ಈ ವಿಷಯದಲ್ಲಿ ಹೆಚ್ಚಿನ ಗಮನವನ್ನು ಕೊಡಬೇಕು. ಇದನ್ನು ಶ್ರದ್ಧಾಪೂರ್ವಕವಾಗಿ ಮಾಡುವಾಗ ಇಂತಹ ವಯೋವೃದ್ಧರಿಗೆ ತುಂಬ ಪ್ರೋತ್ಸಾಹದಾಯಕವಾಗಿರುವುದು ಮತ್ತು ಇಂತಹ ಸೌಕರ್ಯಗಳಲ್ಲಿ ನಡೆಸಲ್ಪಡುವ ಧಾರ್ಮಿಕ ಆಚರಣೆಗಳಲ್ಲಿ, ಸಂಭ್ರಮಗಳಲ್ಲಿ ಅಥವಾ ತದ್ರೀತಿಯ ಇತರ ಚಟುವಟಿಕೆಗಳಲ್ಲಿ ಅವರು ಗೊತ್ತಿಲ್ಲದೆ ಒಳಗೂಡುವುದನ್ನು ಇದು ತಡೆಗಟ್ಟುವುದು.
ಈ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಒಳಗೂಡಿರುವ ಎಲ್ಲ ಸಂಗತಿಗಳನ್ನು ಪರಿಗಣಿಸಿದ ಮೇಲೆ ಯಾವ ಆಸ್ಪತ್ರೆ ಅಥವಾ ನರ್ಸಿಂಗ್ ಹೋಮನ್ನು ಉಪಯೋಗಿಸುವನು ಎಂಬ ವಿಷಯದಲ್ಲಿ ಪ್ರತಿಯೊಬ್ಬನು ಸ್ವಂತ ತೀರ್ಮಾನವನ್ನು ಮಾಡುವನು.—ಗಲಾ. 6:5.