ವೈಯಕ್ತಿಕ ಮತ್ತು ಕುಟುಂಬ ಬೈಬಲ್ ಅಧ್ಯಯನಗಳು ಅತ್ಯಗತ್ಯ!
1. ನಾವು ಜೀವಿಸುತ್ತಿರುವ ಈ ಸಮಯದಲ್ಲಿ ಆಡಳಿತ ಮಂಡಲಿಗೆ ನಮ್ಮ ಕಡೆಗೆ ಯಾವ ವಿಶೇಷ ಕಾಳಜಿಯಿದೆ, ಮತ್ತು ಏಕೆ?
1 ಪ್ರಥಮ ಶತಮಾನದಲ್ಲಿದ್ದಂತೆಯೇ, ಆಡಳಿತ ಮಂಡಲಿಗೆ ಯೆಹೋವನ ಜನರ ಹಿತಕ್ಷೇಮದ ಬಗ್ಗೆ ಬಹಳ ಕಾಳಜಿಯಿದೆ. (ಅ. ಕೃ. 15:6, 28) ಮಹಾ ಸಂಕಟದ ಕಾರ್ಮೋಡಗಳು ಕವಿಯುತ್ತಿರುವುದರಿಂದ, ಪ್ರತಿಯೊಬ್ಬ ರಾಜ್ಯ ಪ್ರಚಾರಕನು ಯೆಹೋವನೊಂದಿಗೆ ಸುಭದ್ರವಾದ ಸಂಬಂಧವನ್ನು ಹೊಂದಿರುವುದು ಬಹಳ ಪ್ರಾಮುಖ್ಯ. ಈ ಮುಂಚೆ ಸಭಾ ಪುಸ್ತಕ ಅಧ್ಯಯನಕ್ಕಾಗಿ ಮೀಸಲಾಗಿಟ್ಟ ಸಮಯದಲ್ಲಿ ನೀವೀಗ ಏನು ಮಾಡುವಿರಿ? ಈ ಸಮಯವನ್ನು ಎಲ್ಲರೂ ಕುಟುಂಬ ಆರಾಧನೆಗೆ ಉಪಯೋಗಿಸುವಂತೆ ಪ್ರೋತ್ಸಾಹಿಸುತ್ತೇವೆ. ಈ ಸಮಯವನ್ನು ನಾವು ಜಾಣತನದಿಂದ ಉಪಯೋಗಿಸುವುದಾದರೆ, ದೇವರ ವಾಕ್ಯದಲ್ಲಿ ಆಳವಾಗಿ ಅಗೆದು ಅದರ ಜೀವದಾಯಕ ಜಲವನ್ನು ಪಡೆಯುವೆವು.—ಕೀರ್ತ. 1:1-3; ರೋಮಾ. 11:33, 34.
2. ನಮ್ಮ ಕುಟುಂಬ ಆರಾಧನೆಯ ಸಂಜೆಯನ್ನು ಹೇಗೆ ಏರ್ಪಡಿಸಬಹುದು?
2 ಕುಟುಂಬ ಆರಾಧನೆಯ ಸಂಜೆ: ಕ್ರಮವಾದ ಹಾಗೂ ಅರ್ಥಭರಿತ ಕುಟುಂಬ ಬೈಬಲ್ ಅಧ್ಯಯನದ ರೂಢಿಯನ್ನು ಹೊಂದಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯು ಯೆಹೋವನ ಮುಂದೆ ಕುಟುಂಬದ ತಲೆಗಳಿಗೆ ಇದೆ. (ಧರ್ಮೋ. 6:6, 7) ಕುಟುಂಬ ಜವಾಬ್ದಾರಿಗಳಿಲ್ಲದ ಅವಿವಾಹಿತ ಸಹೋದರ ಸಹೋದರಿಯರು ಈ ಸಮಯವನ್ನು ವೈಯಕ್ತಿಕ ಬೈಬಲ್ ಅಧ್ಯಯನ ಮತ್ತು ಸಂಶೋಧನೆಗಾಗಿ ಉಪಯೋಗಿಸಸಾಧ್ಯವಿದೆ. ಈ ‘ಕೆಟ್ಟ ದಿನಗಳನ್ನು’ ಎದುರಿಸಲು ಬೇಕಾದ ಆಧ್ಯಾತ್ಮಿಕ ಬಲವನ್ನು ಪಡೆದುಕೊಳ್ಳುವ ಸಲುವಾಗಿ ಅಧ್ಯಯನ ಮತ್ತು ಧ್ಯಾನಿಸುವಿಕೆಗಾಗಿ ‘ಸಮಯವನ್ನು ಕೊಂಡುಕೊಳ್ಳುವುದು’ ಅತ್ಯಗತ್ಯ.—ಎಫೆ. 5:15, 16, NW.
3, 4. ಅಧ್ಯಯನ ಮಾಡಬಹುದಾದ ವಿಷಯಗಳ ಕುರಿತು ಯಾವ ಸಲಹೆಗಳನ್ನು ಕೊಡಲಾಗಿದೆ, ಮತ್ತು ಅಧ್ಯಯನ ಮಾಡುವಾಗ ಏನನ್ನು ಮನಸ್ಸಿನಲ್ಲಿಡಬೇಕು?
3 ಅಧ್ಯಯನದ ವಿಷಯಗಳು: ಹೆಚ್ಚಿನ ಮಾಹಿತಿಯನ್ನು ಪಡೆಯಲು ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಅಥವಾ ವಾಚ್ಟವರ್ ಲೈಬ್ರರಿ ಆನ್ ಸಿಡಿ-ರಾಮ್ ಅನ್ನು ಉಪಯೋಗಿಸಬಹುದು. ಹೀಗೆ ಮಾಡುವುದರಿಂದ ನಿಮ್ಮ ಬೈಬಲ್ ಅಧ್ಯಯನವನ್ನು ಹೆಚ್ಚು ಆನಂದವುಳ್ಳದ್ದಾಗಿ ಕಂಡುಕೊಳ್ಳುವಿರಿ. ಕುಟುಂಬಗಳು ಕಾವಲಿನಬುರುಜು ಪತ್ರಿಕೆಯಲ್ಲಿ ಕ್ರಮವಾಗಿ ಮೂಡಿಬರುವ “ಕುಟುಂಬ ಸಂತೋಷಕ್ಕೆ ಕೀಲಿಕೈಗಳು,” “ನಿಮ್ಮ ಮಕ್ಕಳಿಗೆ ಕಲಿಸಿರಿ” ಮತ್ತು “ನಮ್ಮ ಯುವ ಜನರಿಗಾಗಿ,” ಮುಂತಾದ ಲೇಖನಗಳನ್ನು ಚರ್ಚಿಸಬಹುದು. ಅಥವಾ ಎಚ್ಚರ! ಪತ್ರಿಕೆಯಲ್ಲಿ ಬರುವ “ಯುವ ಜನರು ಪ್ರಶ್ನಿಸುವುದು” ಲೇಖನಮಾಲೆಯನ್ನೂ ಸೃಷ್ಟಿಯ ಅದ್ಭುತಗಳ ಕುರಿತಾದ ಚಿತ್ತಾಕರ್ಷಕ ಲೇಖನಗಳನ್ನೂ ಪರಿಗಣಿಸಬಹುದು.
4 ತರಾತುರಿಯಿಲ್ಲದೆ ಸಾವಧಾನವಾಗಿ ಬೈಬಲ್ ಓದುವುದಾದರೆ ಕುಟುಂಬದಲ್ಲಿರುವ ಎಲ್ಲರ ಹೃದಮನಗಳಲ್ಲಿ ದೈವಿಕ ಮೂಲತತ್ತ್ವಗಳು ಮತ್ತು ಪಾಠಗಳು ಅಚ್ಚೊತ್ತುವವು. (ಇಬ್ರಿ. 4:12) ಕೆಲವೊಂದು ಸಂದರ್ಭಗಳಲ್ಲಿ, ಸಂಘಟನೆಯ ಯಾವುದಾದರೊಂದು ವಿಡಿಯೊವನ್ನು ನೋಡಿ, ಅದನ್ನು ಚರ್ಚಿಸಬಹುದು. ಏನು ಮತ್ತು ಹೇಗೆ ಅಧ್ಯಯನ ಮಾಡಬೇಕೆಂಬುದನ್ನು ನೀವು ಜಾಣ್ಮೆ ಮತ್ತು ಸೃಜನಶೀಲತೆಯಿಂದ ಆಯ್ಕೆ ಮಾಡಬಹುದು. ಯಾವುದನ್ನು ಅಧ್ಯಯನ ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದರ ಕುರಿತು ನಿಮ್ಮ ಕುಟುಂಬ ಸದಸ್ಯರನ್ನು ನೀವೇಕೆ ಕೇಳಬಾರದು?
5. ವೈಯಕ್ತಿಕ ಮತ್ತು ಕುಟುಂಬ ಬೈಬಲ್ ಅಧ್ಯಯನಗಳು ಈಗ ನಮ್ಮ ಜೀವಿತದಲ್ಲಿ ಏಕೆ ಅತಿ ಪ್ರಾಮುಖ್ಯವಾಗಿವೆ?
5 ಈಗ ಇದು ಬಹಳ ಪ್ರಾಮುಖ್ಯ: ನಮ್ಮ ಆಧ್ಯಾತ್ಮಿಕತೆಯನ್ನು ಬಲಪಡಿಸುವುದು ‘ಸ್ಥಿರವಾಗಿ ನಿಂತು ಯೆಹೋವನ ರಕ್ಷಣಾಕಾರ್ಯವನ್ನು ನೋಡುವಂತೆ’ ನಮ್ಮನ್ನು ಸಿದ್ಧಗೊಳಿಸುವುದು. (ವಿಮೋ. 14:13, NW.) “ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ” ಮಕ್ಕಳನ್ನು ಬೆಳೆಸಲು ಹೆತ್ತವರಿಗೆ ದೈವಿಕ ಮಾರ್ಗದರ್ಶನ ಬೇಕೇಬೇಕು. (ಫಿಲಿ. 2:15) ಇಂದು ಶಾಲೆಯಲ್ಲಿ ಹದಗೆಡುತ್ತಿರುವ ನೈತಿಕ ವಾತವರಣದಲ್ಲಿ ಸರಿಯಾದ ರೀತಿಯಲ್ಲಿ ವ್ಯವಹರಿಸಲು ಮಕ್ಕಳಿಗೆ ಸಹಾಯ ಬೇಕು. (ಜ್ಞಾನೋ. 22:3, 6) ತಮ್ಮ “ಮೂರು ಹುರಿಯ ಹಗ್ಗ”ದಂತಿರುವ ಬಾಂಧವ್ಯವನ್ನು ಯೆಹೋವನೊಂದಿಗೆ ಬಲವಾಗಿರಿಸಲು ವಿವಾಹಿತ ದಂಪತಿಗಳು ಪ್ರಯತ್ನಿಸಬೇಕು. (ಪ್ರಸಂ. 4:12) ನಮ್ಮ ‘ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯಲ್ಲಿ’ ಅಭಿವೃದ್ಧಿಯಾಗಲು ನಾವೆಲ್ಲರೂ ಉಳಿದಿರುವ ಸಮಯವನ್ನು ವಿವೇಕದಿಂದ ಉಪಯೋಗಿಸೋಣ.—ಯೂದ 20.