ಶುಶ್ರೂಷೆಯು ದೇವರಲ್ಲಿ ನಮಗಿರುವ ಪ್ರೀತಿಯ ಪ್ರತೀಕ
1. ದೇವರ ಮೇಲಣ ಪ್ರೀತಿ ಯೇಸುವನ್ನು ಏನು ಮಾಡುವಂತೆ ಪ್ರಚೋದಿಸಿತು?
1 ಶುಶ್ರೂಷೆಯನ್ನು ಪೂರ್ಣವಾಗಿ ಮಾಡಿಮುಗಿಸಲು ಯೇಸುವನ್ನು ಪ್ರಚೋದಿಸಿದ್ದು ಪ್ರೀತಿಯೇ. ಯೇಸುವಿನ ಶುಶ್ರೂಷೆಯ ಪ್ರತಿಯೊಂದು ಅಂಶವು ಯೆಹೋವನಲ್ಲಿ ಅವನಿಗಿದ್ದ ಪ್ರೀತಿಯ ಅಲ್ಲಗಳೆಯಲಾಗದ ಸಾಕ್ಷ್ಯ. ಯೇಸುವಂದದ್ದು: “ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದನ್ನು ಲೋಕವು ತಿಳಿಯುವಂತೆ, ತಂದೆಯು ನನಗೆ ಮಾಡಲು ಆಜ್ಞಾಪಿಸಿದ್ದನ್ನೇ ನಾನು ಮಾಡುತ್ತೇನೆ.” (ಯೋಹಾ. 14:31) ಯೇಸುವಿನ ಹೆಜ್ಜೆಯ ಜಾಡನ್ನು ಅನುಸರಿಸುವವರಾದ ನಮಗೂ ದೇವರ ಮೇಲಿರುವ ಆಳವಾದ ಪ್ರೀತಿಯನ್ನು ನಮ್ಮ ಶುಶ್ರೂಷೆಯಲ್ಲಿ ಪ್ರತಿಬಿಂಬಿಸುವ ಸುಯೋಗವಿದೆ.—ಮತ್ತಾ. 22:37; ಎಫೆ. 5:1, 2.
2. ಯೆಹೋವನಲ್ಲಿ ನಮಗಿರುವ ಪ್ರೀತಿಯು ನಮ್ಮ ಶುಶ್ರೂಷೆಯನ್ನು ಹೇಗೆ ಪ್ರಭಾವಿಸುತ್ತದೆ?
2 “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ”: ಯೆಹೋವನ ಮತ್ತು ಆತನ ರಾಜ್ಯದ ಕುರಿತು ಇತರರಿಗೆ ತಿಳಿಸಲು ಪ್ರತಿಯೊಂದು ಅವಕಾಶವನ್ನು ಹುರುಪಿನಿಂದ ಉಪಯೋಗಿಸುವಾಗ ನಾವು ಆತನ ಮೇಲಿರುವ ಪ್ರೀತಿಯನ್ನು ತೋರಿಸುತ್ತೇವೆ. ಹೀಗೆ ನಾವು ಆತನ ನಾಮದ ಪವಿತ್ರೀಕರಣಕ್ಕೆ ಸಹಾಯಮಾಡುತ್ತೇವೆ. (ಕೀರ್ತ. 83:18; ಯೆಹೆ. 36:23; ಮತ್ತಾ. 6:9) ಯೇಸುವಿನ ಶುಶ್ರೂಷೆಯು ಹೇಗೋ ಹಾಗೆ ನಮ್ಮ ಶುಶ್ರೂಷೆಯು ಸಹ ಯೆಹೋವನ ನಾಮದ ಪವಿತ್ರೀಕರಣ ಹಾಗೂ ಆತನ ಚಿತ್ತವನ್ನು ಮಾಡುವ ನಮ್ಮ ಪ್ರಾಮಾಣಿಕ ಅಪೇಕ್ಷೆಯ ಪ್ರತೀಕವಾಗಿದೆ.—ಮತ್ತಾ. 26:39.
3. ಯೆಹೋವನಲ್ಲಿ ನಮಗಿರುವ ಪ್ರೀತಿಯು ಅಡಚಣೆಗಳನ್ನು ಪರಿಹರಿಸಲು ಹೇಗೆ ಸಹಾಯಮಾಡುತ್ತದೆ?
3 ಅಡಚಣೆಗಳನ್ನು ಪರಿಹರಿಸಲು ಪ್ರೀತಿಯು ಪ್ರೇರಿಸುತ್ತದೆ: ಯೆಹೋವನ ಮೇಲಿರುವ ಪ್ರೀತಿಯು ಎಲ್ಲಾ ತಡೆಗಟ್ಟುಗಳನ್ನು ನಿವಾರಿಸುತ್ತದೆ. (1 ಕೊರಿಂ. 13:4, 7) ಯೇಸು ತನ್ನ ಜೀವಿತದಲ್ಲಿ ಎದುರಿಸಿದ ಹಲವಾರು ಸನ್ನಿವೇಶಗಳು ಅವನನ್ನು ತನ್ನ ಶುಶ್ರೂಷೆಯನ್ನು ನಿರ್ವಹಿಸುವುದರಿಂದ ತಡೆಗಟ್ಟಸಾಧ್ಯವಿರುತ್ತಿತ್ತು. ಆದರೂ ಯೆಹೋವನಲ್ಲಿ ಅವನಿಗಿದ್ದ ಅಪಾರ ಪ್ರೀತಿ ಮತ್ತು ಆತನ ಚಿತ್ತವನ್ನು ಮಾಡಲು ಇದ್ದ ಅಪೇಕ್ಷೆಯು ತಡೆಗಟ್ಟನ್ನು ಜಯಿಸಲು ಸಹಾಯಮಾಡಿತು. (ಮಾರ್ಕ 3:21; 1 ಪೇತ್ರ 2:18-23) ನಾವು ಕೂಡ ಅನೇಕ ಅಡಚಣೆಗಳನ್ನು ಎದುರಿಸುತ್ತೇವೆ. ಆದರೆ ದೇವರಲ್ಲಿ ನಮಗಿರುವ ಪ್ರೀತಿಯು ಅವುಗಳನ್ನು ಪರಿಹರಿಸಲು ಸಹಾಯಮಾಡುವುದು. ಕ್ರಿಸ್ತನು ಇಟ್ಟ ಮಾದರಿಯನ್ನು ಅನುಸರಿಸುವ ಮೂಲಕ ನಾವು ನಮ್ಮ ಶುಶ್ರೂಷೆಯನ್ನು ಪೂರೈಸಲು ದೃಢಚಿತ್ತರೂ ನಿಶ್ಚಲರೂ ಆಗಿರುವೆವು. ಕುಟುಂಬ ವಿರೋಧ, ಅನಾರೋಗ್ಯ, ವೃದ್ಧಾಪ್ಯ, ಶುಶ್ರೂಷೆಯಲ್ಲಿ ವಿರೋಧ ಅಥವಾ ಜನರು ತೋರಿಸುವ ನಿರಾಸಕ್ತಿ ನಮ್ಮನ್ನು ಪ್ರಭಾವಿಸಬಹುದು. ಆದರೂ ನಮ್ಮಿಂದಾದಷ್ಟು ಪರಿಣಾಮಕಾರಿ ಶುಶ್ರೂಷೆಯನ್ನು ಬಿಡದೆ ನಡೆಸುವ ಮೂಲಕ ಯೆಹೋವನಲ್ಲಿ ನಮಗಿರುವ ಪ್ರೀತಿಯನ್ನು ತೋರಿಸುತ್ತೇವೆ.
4. ಯೆಹೋವನಲ್ಲಿ ನಮಗಿರುವ ಪ್ರೀತಿಯು ನಮಗೆ ಯಾವ ಸುಯೋಗವನ್ನು ಕೊಡುತ್ತದೆ?
4 ಪ್ರೀತಿ ಅತಿ ಶಕ್ತಿಶಾಲಿ. ದೇವರ ಮೇಲಣ ಪೂರ್ಣ ಪ್ರಾಣದ ಪ್ರೀತಿಯನ್ನು ನಮ್ಮ ಶುಶ್ರೂಷೆಯಲ್ಲಿ ತೋರಿಸುವ ಸುಯೋಗವನ್ನು ದೇವರು ನಮಗೆ ಕೊಟ್ಟಿದ್ದಾನೆ. (1 ಕೊರಿಂ. 13:13) ಯೆಹೋವನ ನಾಮವು ಸದಾಕಾಲಕ್ಕೂ ಪವಿತ್ರೀಕರಿಸಲ್ಪಡುವ ಸಮಯವು ಈಗ ಬೇಗನೆ ಬರಲಿರುವುದರಿಂದ ‘ನಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಸಮೃದ್ಧಿಹೊಂದಲಿ.’—ಫಿಲಿ. 1:9; ಮತ್ತಾ. 22:36-38.