ಸುವಾರ್ತೆ ಹಂಚಿಕೊಳ್ಳಲು ನನ್ನಲ್ಲೇನು ಅರ್ಹತೆಯಿದೆ?
1. ಸುವಾರ್ತೆ ಹಂಚಿಕೊಳ್ಳಲು ಅರ್ಹತೆಯಿಲ್ಲವೆಂದು ನಮಗೇಕೆ ಅನಿಸಬಾರದು?
1 ಈ ಪ್ರಶ್ನೆ ನಿಮ್ಮ ಮನಸ್ಸಿಗೆ ಬಂದದ್ದುಂಟೋ? ಹಾಗಿದ್ದಲ್ಲಿ ಧೈರ್ಯಗೆಡಬೇಡಿ! ಶುಶ್ರೂಷೆಗೆ ನಮ್ಮನ್ನು ಅರ್ಹರನ್ನಾಗಿ ಮಾಡುವುದು ಶಾಲಾಕಾಲೇಜುಗಳ ಶಿಕ್ಷಣವಾಗಲಿ ಅಸಾಧಾರಣವಾದ ಹುಟ್ಟುಸಾಮರ್ಥ್ಯವಾಗಲಿ ಅಲ್ಲ. ಯೇಸುವಿನ ಆರಂಭದ ಶಿಷ್ಯರಲ್ಲಿ ಕೆಲವರನ್ನು ಬೇರೆಯವರು “ಹೆಚ್ಚು ವಿದ್ಯಾಭ್ಯಾಸವಿಲ್ಲದ ಸಾಧಾರಣ ವ್ಯಕ್ತಿಗಳೆಂದು” ಕರೆದರು. ಹಾಗಿದ್ದರೂ ಅವರು ಪರಿಣಾಮಕಾರಿ ಸೌವಾರ್ತಿಕರಾಗಿದ್ದರು. ಏಕೆಂದರೆ ಯೇಸುವಿನ ಮಾದರಿಯನ್ನು ಅನುಸರಿಸಲು ಅವರು ದೃಢನಿಶ್ಚಯದಿಂದಿದ್ದರು.—ಅ. ಕಾ. 4:13; 1 ಪೇತ್ರ 2:21.
2. ಯೇಸುವಿನ ಬೋಧನಾ ವಿಧಾನದ ಕೆಲವು ವೈಶಿಷ್ಟ್ಯಗಳು ಯಾವುವು?
2 ಯೇಸು ಕಲಿಸಿದ ವಿಧ: ಯೇಸುವಿನ ಬೋಧನಾ ವಿಧಾನ ಸರಳ, ವ್ಯಾವಹಾರಿಕ, ಸುಲಭಗ್ರಾಹ್ಯವಾಗಿತ್ತು. ಅವನ ಪ್ರಶ್ನೆಗಳು, ದೃಷ್ಟಾಂತಗಳು, ಗೊಂದಲರಹಿತ ಪೀಠಿಕೆಗಳು ಕೇಳುಗರ ಗಮನವನ್ನು ಸೆರೆಹಿಡಿದವು. (ಮತ್ತಾ. 6:26) ಜನರಲ್ಲಿ ಅವನು ಯಥಾರ್ಥ ಆಸಕ್ತಿ ತೋರಿಸಿದನು. (ಮತ್ತಾ. 14:14) ಮಾತ್ರವಲ್ಲ ಯೇಸು ನಿಶ್ಚಿತಾಭಿಪ್ರಾಯದಿಂದಲೂ ಅಧಿಕಾರದಿಂದಲೂ ಮಾತಾಡಿದನು. ಏಕೆಂದರೆ ಆ ನೇಮಕವನ್ನು ಕೊಟ್ಟವನು ಮತ್ತು ಅದನ್ನು ಪೂರೈಸಲು ಶಕ್ತಗೊಳಿಸುತ್ತಿರುವವನು ಯೆಹೋವನೇ ಎಂದು ಅವನಿಗೆ ತಿಳಿದಿತ್ತು.—ಲೂಕ 4:18.
3. ನಮ್ಮ ಶುಶ್ರೂಷೆಯನ್ನು ಪೂರೈಸಲು ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ?
3 ಯೆಹೋವನು ಸಹಾಯಮಾಡುತ್ತಾನೆ: ಸುವಾರ್ತೆಯನ್ನು ಯಶಸ್ವಿಕರವಾಗಿ ಹಂಚಿಕೊಳ್ಳಲು ಬೇಕಾದ ತರಬೇತಿಯನ್ನು ನಮ್ಮ ಮಹೋನ್ನತ ಬೋಧಕನಾದ ಯೆಹೋವನು ತನ್ನ ವಾಕ್ಯ ಮತ್ತು ಸಂಘಟನೆಯ ಮೂಲಕ ನೀಡುತ್ತಾನೆ. (ಯೆಶಾ. 54:13) ಆತನು ಯೇಸುವಿನ ಬೋಧನಾ ವಿಧಾನಗಳ ದಾಖಲೆಯನ್ನು ಜೋಪಾನವಾಗಿಟ್ಟಿರುವ ಕಾರಣ ಅವುಗಳನ್ನು ಪರಿಶೀಲಿಸಿ ಅನುಕರಿಸಲು ನಮಗೆ ಸಾಧ್ಯ. ಯೆಹೋವನು ನಮಗೆ ತನ್ನ ಪವಿತ್ರಾತ್ಮವನ್ನು ಕೊಡುತ್ತಾನೆ ಮತ್ತು ಸಭಾ ಕೂಟಗಳ ಮೂಲಕ ತರಬೇತಿ ನೀಡುತ್ತಾನೆ. (ಯೋಹಾ. 14:26) ಅಲ್ಲದೆ, ನಾವು ಇನ್ನಷ್ಟು ಪರಿಣಾಮಕಾರಿಯಾಗುವಂತೆ ಸಹಾಯಕ್ಕಾಗಿ ಅನುಭವಸ್ಥ ಪ್ರಚಾರಕರನ್ನೂ ಆತನು ಒದಗಿಸಿದ್ದಾನೆ.
4. ಇತರರೊಂದಿಗೆ ಸುವಾರ್ತೆ ಹಂಚಿಕೊಳ್ಳಲಿಕ್ಕಾಗಿ ನಾವು ಅರ್ಹರೆಂದು ಎಣಿಸಲು ಸಕಾರಣವಿದೆ ಏಕೆ?
4 “ನಾವು ತಕ್ಕಷ್ಟು ಅರ್ಹರಾಗಿರುವುದು ದೇವರಿಂದಲೇ.” ಆದಕಾರಣ ಸಾರಲಿಕ್ಕಾಗಿ ನಾವು ಅರ್ಹರೆಂದು ಎಣಿಸಲು ನಮಗೆ ಸಕಾರಣವಿದೆ. (2 ಕೊರಿಂ. 3:5) ಯೆಹೋವನ ಮೇಲೆ ಹೊಂದಿಕೊಂಡು ಆತನು ಮಾಡಿರುವ ಎಲ್ಲ ಪ್ರೀತಿಪರ ಏರ್ಪಾಡುಗಳನ್ನು ನಂಬಿಗಸ್ತಿಕೆಯಿಂದ ಸದುಪಯೋಗಿಸೋಣ. ಆಗ ನಾವು ‘ಪೂರ್ಣ ಸಮರ್ಥರಾಗಿ ಸಕಲ ಸತ್ಕಾರ್ಯಗಳಿಗೆ ಸಂಪೂರ್ಣವಾಗಿ ಸನ್ನದ್ಧರಾಗುವೆವು.’—2 ತಿಮೊ. 3:17.