ದೇವರ ಮಹಾದಾನಕ್ಕಾಗಿ ಕೃತಜ್ಞತೆ
1. ನಾವು ಯೆಹೋವನಿಗೆ ಏಕೆ ವಿಶೇಷವಾಗಿ ಕೃತಜ್ಞರಾಗಿದ್ದೇವೆ?
1 ಯೆಹೋವನ ಅನೇಕ ‘ಒಳ್ಳೆಯ ದಾನಗಳಲ್ಲಿ’ ಆತನ ಪ್ರಿಯ ಮಗನ ವಿಮೋಚನಾ ಮೌಲ್ಯ ಯಜ್ಞವು ಅತೀ ಮಹತ್ತಾದದ್ದು. (ಯಾಕೋ. 1:17) ನಮ್ಮ ಪಾಪಗಳ ಕ್ಷಮಾಪಣೆಯೂ ಸೇರಿದಂತೆ ಅದು ಅನೇಕ ಆಶೀರ್ವಾದಗಳನ್ನು ಸಾಧ್ಯಗೊಳಿಸುತ್ತದೆ. (ಎಫೆ. 1:7) ಇದಕ್ಕಾಗಿ ನಾವು ಸದಾ ಕೃತಜ್ಞರು. ವಿಶೇಷವಾಗಿ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ನಾವು ಈ ಅಮೂಲ್ಯ ದಾನದ ಕುರಿತಾಗಿ ಧ್ಯಾನಿಸಲು ಸಮಯ ತಕ್ಕೊಳ್ಳುತ್ತೇವೆ.
2. ವಿಮೋಚನಾ ಮೌಲ್ಯ ಯಜ್ಞಕ್ಕಾಗಿ ನಮ್ಮ ಕುಟುಂಬದ ಹಾಗೂ ಸ್ವತಃ ನಮ್ಮ ಗಣ್ಯತೆಯನ್ನು ನಾವು ಹೇಗೆ ಬೆಳೆಸಬಲ್ಲೆವು?
2 ಗಣ್ಯತೆಯನ್ನು ಬೆಳೆಸಿ: ಮಾರ್ಚ್ 30ರ ಜ್ಞಾಪಕಾಚರಣೆಯ ಹಿಂದಿನ ವಾರಗಳಲ್ಲಿ ನಿಮ್ಮ ಕುಟುಂಬದ ಗಣ್ಯತೆಯನ್ನು ಬೆಳೆಸಲಿಕ್ಕೋಸ್ಕರ ವಿಮೋಚನಾ ಮೌಲ್ಯ ಯಜ್ಞದ ಕುರಿತ ಮಾಹಿತಿಯನ್ನು ಪರಾಮರ್ಶಿಸಲು ಕುಟುಂಬ ಆರಾಧನೆಯ ಸಂಜೆಯ ಸಮಯವನ್ನು ಉಪಯೋಗಿಸಿರಿ. ಅಲ್ಲದೆ ಜ್ಞಾಪಕಾಚರಣೆಯ ಅವಧಿಯಲ್ಲಿ ಮಾಡುವ ವಿಶೇಷ ಬೈಬಲ್ ವಾಚನವನ್ನು ಕುಟುಂಬವಾಗಿ ಪ್ರತಿದಿನ ಪರಿಗಣಿಸಿರಿ. ವಿಮೋಚನಾ ಮೌಲ್ಯ ಯಜ್ಞವು ನಿಮಗೆ ಹೇಗೆ ಪ್ರಯೋಜನ ತಂದಿದೆ ಮತ್ತು ಯೆಹೋವನ ಕುರಿತ, ನಿಮ್ಮ, ಇತರರ ಹಾಗೂ ಭವಿಷ್ಯತ್ತಿನ ಕುರಿತ ನಿಮ್ಮ ನೋಟವನ್ನು ಹೇಗೆ ಪ್ರಭಾವಿಸಿದೆ ಎಂಬುದನ್ನು ವೈಯಕ್ತಿಕವಾಗಿ ಪರ್ಯಾಲೋಚಿಸಿರಿ.—ಕೀರ್ತ. 77:12.
3. ನಮ್ಮ ಗಣ್ಯತೆಯನ್ನು ನಾವು ಹೇಗೆ ವ್ಯಕ್ತಪಡಿಸಬಹುದು?
3 ಕೃತಜ್ಞತಾ ಅಭಿವ್ಯಕ್ತಿಗಳು: ವಿಮೋಚನಾ ಮೌಲ್ಯ ಯಜ್ಞಕ್ಕಾಗಿ ನಮ್ಮ ಗಣ್ಯತೆಯು ಯೆಹೋವನ ಕುರಿತು ಹಾಗೂ ತನ್ನ ಮಗನನ್ನು ಕಳುಹಿಸಿದ್ದರಲ್ಲಿ ಆತನು ತೋರಿಸಿದ ಮಹಾ ಪ್ರೀತಿಯ ಕುರಿತು ಇತರರಿಗೆ ತಿಳಿಸುವಂತೆ ಪ್ರಚೋದಿಸುತ್ತದೆ. (ಕೀರ್ತ. 145:2-7) ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ತಮ್ಮ ಕುಟುಂಬದ ಒಬ್ಬರಾದರೂ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವಂತೆ ಏರ್ಪಡಿಸುವ ಮೂಲಕ ಕೆಲವು ಕುಟುಂಬಗಳು ಗಣ್ಯತೆಯನ್ನು ತೋರಿಸುತ್ತವೆ. ಇದು ಸಾಧ್ಯವಾಗದಿದ್ದರೆ, ಕಡಿಮೆಪಕ್ಷ ಶುಶ್ರೂಷೆಯಲ್ಲಿ ನಿಮ್ಮ ಪಾಲನ್ನು ಹೆಚ್ಚಿಸಲಿಕ್ಕಾಗಿ ‘ಸಮಯವನ್ನು ಖರೀದಿಸಿಕೊಳ್ಳಬಲ್ಲಿರೊ?’ (ಎಫೆ. 5:16) ಇತರರು ಜ್ಞಾಪಕಾಚರಣೆಗೆ ನಮ್ಮೊಂದಿಗೆ ಹಾಜರಾಗುವಂತೆ ಸಹಾಯಮಾಡಲು ಸಹ ಕೃತಜ್ಞತೆಯು ನಮ್ಮನ್ನು ಪ್ರೇರೇಪಿಸುವುದು. (ಪ್ರಕ. 22:17) ನಿಮ್ಮ ಪುನರ್ಭೇಟಿಗಳನ್ನು, ಬೈಬಲ್ ವಿದ್ಯಾರ್ಥಿಗಳನ್ನು, ಸಂಬಂಧಿಕರನ್ನು, ಸಹೋದ್ಯೋಗಿಗಳನ್ನು ಹಾಗೂ ನೆರೆಯವರನ್ನು ಆಮಂತ್ರಿಸಲಿಕ್ಕಾಗಿ ಒಂದು ಪಟ್ಟಿಮಾಡಲಾರಂಭಿಸಿ ಮತ್ತು ಜ್ಞಾಪಕಾಚರಣೆಯ ವಿಶೇಷ ಆಮಂತ್ರಣ ಪತ್ರಗಳನ್ನು ವಿತರಿಸುವ ಕಾರ್ಯಾಚರಣೆಯಲ್ಲಿ ಪೂರ್ಣವಾಗಿ ಭಾಗವಹಿಸಿ.
4. ಜ್ಞಾಪಕಾಚರಣೆಯ ಅವಧಿಯನ್ನು ನಾವು ಯಾವ ವಿಧಗಳಲ್ಲಿ ವಿವೇಕಪ್ರದವಾಗಿ ಉಪಯೋಗಿಸಬಲ್ಲೆವು?
4 ಯೆಹೋವನು ಮಾನವಕುಲಕ್ಕೆ ಕೊಟ್ಟ ದಾನವನ್ನು ನಾವೆಷ್ಟು ಗಣ್ಯಮಾಡುತ್ತೇವೆ ಎಂದು ಆತನಿಗೆ ತೋರಿಸಲು ಜ್ಞಾಪಕಾಚರಣೆಯ ಅವಧಿಯು ಹೊಸ ಸಂದರ್ಭಗಳನ್ನು ಒದಗಿಸುತ್ತದೆ. ವಿಮೋಚನಾ ಮೌಲ್ಯ ಯಜ್ಞಕ್ಕಾಗಿಯೂ “ಕ್ರಿಸ್ತನ ಅಗಾಧವಾದ ಐಶ್ವರ್ಯ” ಎಲ್ಲವುಗಳಿಗಾಗಿಯೂ ನಮ್ಮ ಕೃತಜ್ಞತೆಯನ್ನು ಬೆಳೆಸಿಕೊಳ್ಳಲು ಹಾಗೂ ವ್ಯಕ್ತಪಡಿಸಲು ನಾವೀ ಸಮಯವನ್ನು ಉಪಯೋಗಿಸೋಣ.—ಎಫೆ. 3:8.