ಕೃತ್ಯದಲ್ಲಿ ಕೃತಜ್ಞತೆ ತೋರಿಸೋಣ ಜ್ಞಾಪಕಾಚರಣೆ ಏಪ್ರಿಲ್ 17ರಂದು
1. ಕೀರ್ತನೆಗಾರನ ಯಾವ ಭಾವ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ವಿಶೇಷವಾಗಿ ಸೂಕ್ತವಾದದ್ದು?
1 ಯೆಹೋವನು ಕೀರ್ತನೆಗಾರನಿಗೆ ಎಷ್ಟೋ ಬಾರಿ ಕರುಣೆ ತೋರಿಸಿದನು ಹಾಗೂ ರಕ್ಷಿಸಿದನು. ಇದಕ್ಕೆಲ್ಲ ಕೃತಜ್ಞನಾಗಿ ಅವನು “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?” ಎಂದು ಕೇಳಿದನು. (ಕೀರ್ತ. 116:12) ಕೃತಜ್ಞರಾಗಿರಲು ಅವನಿಗಿಂತಲೂ ಇನ್ನೂ ಹೆಚ್ಚು ಕಾರಣಗಳು ದೇವರ ಇಂದಿನ ಸೇವಕರಿಗಿದೆ. ದೇವಪ್ರೇರಣೆಯಿಂದ ಕೀರ್ತನೆಗಾರ ಆ ಮಾತುಗಳನ್ನು ಬರೆದ ಶತಮಾನಗಳ ನಂತರ ಯೆಹೋವನು ಮಾನವಕುಲಕ್ಕೆ ಎಲ್ಲಕ್ಕಿಂತಲೂ ಶ್ರೇಷ್ಠ ಉಡುಗೊರೆಯೊಂದನ್ನು ಕೊಟ್ಟನು. ಅದೇ ವಿಮೋಚನಾ ಮೌಲ್ಯ. ಏಪ್ರಿಲ್ 17ರಂದು ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ನಾವೆಲ್ಲರೂ ತಯಾರಿ ನಡೆಸುತ್ತಿರುವಾಗ ದೇವರಿಗೆ ನಮ್ಮ ಕೃತಜ್ಞತೆ ತೋರಿಸಲು ಸಕಾರಣವಿದೆ.—ಕೊಲೊ. 3:15.
2. ವಿಮೋಚನಾ ಮೌಲ್ಯಕ್ಕಾಗಿ ಕೃತಜ್ಞರಾಗಿರಲು ನಮಗಿರುವ ಕೆಲವು ಕಾರಣಗಳಾವುವು?
2 ವಿಮೋಚನಾ ಮೌಲ್ಯದ ಆಶೀರ್ವಾದಗಳು: ವಿಮೋಚನಾ ಮೌಲ್ಯದಿಂದಾಗಿ ‘ನಮ್ಮ ಪಾಪಗಳಿಗೆ ಕ್ಷಮಾಪಣೆ ದೊರೆಯುತ್ತದೆ.’ (ಕೊಲೊ. 1:13, 14) ನಾವು ಶುದ್ಧ ಮನಸ್ಸಾಕ್ಷಿಯಿಂದ ಯೆಹೋವನನ್ನು ಆರಾಧಿಸಲು ಸಾಧ್ಯವಾಗಿದೆ. (ಇಬ್ರಿ. 9:13, 14) ಯೆಹೋವನಿಗೆ ಪ್ರಾರ್ಥಿಸುವಾಗ ವಾಕ್ಸರಳತೆಯಿಂದ ಯಾವುದೇ ಆತಂಕಗಳಿಲ್ಲದೆ ನಮ್ಮ ಮನಸ್ಸಿನಲ್ಲಿರುವುದನ್ನು ವ್ಯಕ್ತಪಡಿಸಬಲ್ಲೆವು. (ಇಬ್ರಿ. 4:14-16) ವಿಮೋಚನಾ ಮೌಲ್ಯದಲ್ಲಿ ನಂಬಿಕೆ ಇಡುವವರಿಗಾಗಿ ನಿತ್ಯಜೀವದ ಭವ್ಯ ನಿರೀಕ್ಷೆಯಿದೆ.—ಯೋಹಾ. 3:16.
3. ವಿಮೋಚನಾ ಮೌಲ್ಯಕ್ಕಾಗಿ ನಾವು ಯೆಹೋವನಿಗೆ ಹೇಗೆ ಕೃತಜ್ಞತೆ ತೋರಿಸಬಲ್ಲೆವು?
3 ಕೃತಜ್ಞತೆ ತೋರಿಸುವ ಕೃತ್ಯಗಳು: ಜ್ಞಾಪಕಾಚರಣೆಯ ಬೈಬಲ್ ಓದುವಿಕೆಯನ್ನು ಪ್ರತಿದಿನ ಮಾಡಿ, ಅದನ್ನು ಧ್ಯಾನಿಸುವುದು ಕೃತಜ್ಞತೆ ತೋರಿಸುವ ಒಂದು ವಿಧ. ವಿಮೋಚನಾ ಮೌಲ್ಯವನ್ನು ನಾವೆಷ್ಟು ಅಮೂಲ್ಯವಾಗಿ ಎಣಿಸುತ್ತೇವೆಂದು ಹೃತ್ಪೂರ್ವಕ ಪ್ರಾರ್ಥನೆಯಲ್ಲೂ ಯೆಹೋವನಿಗೆ ಹೇಳಬಹುದು. (1 ಥೆಸ. 5:17, 18) ಯೇಸುವಿನ ಆಜ್ಞೆಯಂತೆ ಆತನ ಮರಣವನ್ನು ಸ್ಮರಿಸಲಿಕ್ಕಾಗಿ ಕೂಡಿಬರುವ ಮೂಲಕವೂ ಕೃತಜ್ಞತೆ ತೋರಿಸಬಲ್ಲೆವು. (1 ಕೊರಿಂ. 11:24, 25) ಅಷ್ಟಲ್ಲದೆ, ತುಂಬುಹೃದಯದ ಪ್ರೀತಿ ತೋರಿಸುವ ಯೆಹೋವನನ್ನು ಅನುಕರಿಸುತ್ತಾ ನಾವು ಸಾಧ್ಯವಾದಷ್ಟು ಹೆಚ್ಚು ಜನರನ್ನು ಆಮಂತ್ರಿಸಬಹುದು.—ಯೆಶಾ. 55:1-3.
4. ನಮ್ಮ ದೃಢಸಂಕಲ್ಪ ಏನಾಗಿರಬೇಕು?
4 ಯೆಹೋವನ ಸೇವಕರಾದ ನಮಗೆ ಕೃತಜ್ಞತಾಭಾವವಿದ್ದರೆ ‘ಬೇರೆ ಕೂಟಗಳಂತೆ ಜ್ಞಾಪಕಾಚರಣೆಯೂ ಒಂದು ಕೂಟ ಅಷ್ಟೇ’ ಎಂದೆಣಿಸುವುದಿಲ್ಲ. ಅದು ಇಡೀ ವರ್ಷದಲ್ಲಿ ನಡೆಯುವ ಕೂಟಗಳಲ್ಲೇ ಬಹುಮುಖ್ಯ ಕೂಟ! ಜ್ಞಾಪಕಾಚರಣೆ ಹತ್ತಿರ ಹತ್ತಿರ ಬರುತ್ತಿರುವುದರಿಂದ ನಮ್ಮ ದೃಢಸಂಕಲ್ಪ ಕೀರ್ತನೆಗಾರನಂತಿರಲಿ: “ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.”—ಕೀರ್ತ. 103:2.