ಸಾರಲು ಹೊಸಬರಿಗೆ ತರಬೇತಿ ಕೊಡುವುದು ಹೇಗೆ?
1. ನೀವು ಮೊತ್ತಮೊದಲ ಬಾರಿ ಶುಶ್ರೂಷೆಯಲ್ಲಿ ಪಾಲ್ಗೊಂಡಾಗ ಹೇಗನಿಸಿತು?
1 ಮೊತ್ತಮೊದಲ ಬಾರಿ ನೀವು ಮನೆಮನೆಯ ಸೇವೆಗೆ ಹೋದ ಸಂದರ್ಭ ನೆನಪಿದೆಯೋ? ನಿಮಗೆ ತುಂಬ ಹೆದರಿಕೆ ಆಗಿದ್ದಿರಬಹುದಲ್ಲವೇ? ಆಗ ನಿಮ್ಮೊಂದಿಗಿದ್ದ ನಿಮ್ಮ ಬೈಬಲ್ ಶಿಕ್ಷಕ/ಕಿ ಇಲ್ಲವೆ ಇನ್ನೊಬ್ಬ ಪ್ರಚಾರಕನು ನೆರವುನೀಡಿದ್ದರಿಂದ ನಿಮಗೆ ಖಂಡಿತ ಸಂತೋಷವಾಗಿರಬೇಕು. ಆದರೆ ಈಗ ಶುಶ್ರೂಷಕರಾಗಿ ನೀವು ಗಳಿಸಿರುವ ಅನುಭವದಿಂದಾಗಿ ಸಾರಲು ಹೊಸಬರಿಗೆ ತರಬೇತಿ ಕೊಡುವ ಸ್ಥಾನದಲ್ಲಿದ್ದೀರಿ.
2. ಹೊಸ ಪ್ರಚಾರಕರು ಏನೆಲ್ಲಾ ಕಲಿಯಬೇಕು?
2 ಮನೆಯವರೊಂದಿಗೆ ಸಂಭಾಷಣೆ ಆರಂಭಿಸುವುದು, ಶುಶ್ರೂಷೆಯಲ್ಲಿ ಬೈಬಲನ್ನು ಬಳಸುವುದು, ಪುನರ್ಭೇಟಿ ಮಾಡುವುದು, ಬೈಬಲ್ ಅಧ್ಯಯನಗಳನ್ನು ಆರಂಭಿಸಿ ನಡೆಸುವುದು ಇದೆಲ್ಲವನ್ನೂ ಮಾಡುವುದು ಹೇಗೆಂದು ಹೊಸ ಪ್ರಚಾರಕರು ಕಲಿಯಬೇಕಾಗುತ್ತದೆ. ಸಾರುವ ವಿಭಿನ್ನ ವಿಧಾನಗಳ ಬಗ್ಗೆ, ಉದಾಹರಣೆಗೆ ಬೀದಿ ಸಾಕ್ಷಿಕಾರ್ಯವನ್ನೂ ವ್ಯಾಪಾರದ ಕ್ಷೇತ್ರಗಳಲ್ಲಿ ಸಾರುವುದನ್ನೂ ಅವರು ಕಲಿಯಬೇಕು. ಇತರರ ಧಾರ್ಮಿಕ ಭಾವನೆಗಳಿಗೆ ಗೌರವ ತೋರಿಸುತ್ತಾ, ಜಾಣ್ಮೆಯಿಂದಲೂ ಮುಂಜಾಗ್ರತೆಯಿಂದಲೂ ಸಾಕ್ಷಿಕೊಡಲು ಅವರು ಕಲಿಯಬೇಕು. (ಕೊಲೊ. 4:6) ಈ ವಿಷಯಗಳಲ್ಲಿ ನಿಮ್ಮ ಮಾದರಿ ಹಾಗೂ ಸಲಹೆಗಳ ಮೂಲಕ ಅವರಿಗೆ ಸಹಾಯಮಾಡಬಲ್ಲಿರಿ.
3. ನಮ್ಮ ಮಾದರಿಯಿಂದ ಹೇಗೆ ಇತರರಿಗೆ ಸಹಾಯಮಾಡಬಹುದು?
3 ಮಾದರಿಯಿಂದ ಕಲಿಸಿ: ಹೇಗೆ ಸಾರಬೇಕೆಂದು ಯೇಸು ತನ್ನ ಶಿಷ್ಯರಿಗೆ ತೋರಿಸಿಕೊಟ್ಟನು. (ಲೂಕ 8:1; 1 ಪೇತ್ರ 2:21) ಹೊಸ ಪ್ರಚಾರಕರೊಂದಿಗೆ ನೀವು ಸೇವೆಮಾಡಲಿರುವಾಗ ಅವರು ಅನುಕರಿಸಸಾಧ್ಯವಿರುವ ಒಂದು ಸರಳ ನಿರೂಪಣೆಯನ್ನು ತಯಾರಿಸಿ. ಇದಕ್ಕಾಗಿ ನಮ್ಮ ಪ್ರಕಾಶನಗಳಲ್ಲಿರುವ ಮಾದರಿ ನಿರೂಪಣೆಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು. ನೀವು ಹೇಗೆ ಮಾತಾಡುತ್ತೀರೆಂದು ಆ ಪ್ರಚಾರಕರು ಗಮನಿಸಲಿಕ್ಕಾಗುವಂತೆ ಮೊದಲ ಮನೆಯಲ್ಲಿ ನೀವೇ ಮಾತಾಡಿರಿ. ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವಾಗ ಸಿಗುವ ಸಮಯದಲ್ಲಿ, ನಿಮ್ಮ ನಿರೂಪಣೆ ಯಾಕೆ ಪರಿಣಾಮಕಾರಿ ಆಗಿತ್ತು ಎಂಬದರ ಬಗ್ಗೆ ಆ ಹೊಸ ಪ್ರಚಾರಕರ ಅಭಿಪ್ರಾಯ ಕೇಳಿ. ಇದರಿಂದ ಅವರಿಗೆ ಬೇರೆಬೇರೆ ಪ್ರಚಾರಕರೊಂದಿಗೆ ಸೇವೆಮಾಡುವುದರ ಪ್ರಯೋಜನವೇನೆಂದು ತಿಳಿದುಬರುವುದು. ಅಲ್ಲದೆ, ಅವರ ನಿರೂಪಣೆಯ ಬಗ್ಗೆ ನೀವು ಕೊಡುವ ಸಲಹೆಗಳನ್ನು ಸ್ವೀಕರಿಸಲೂ ಅವರಿಗೆ ಸುಲಭವಾಗುವುದು.
4. ಹೊಸ ಪ್ರಚಾರಕರ ನಿರೂಪಣೆಯನ್ನು ಆಲಿಸಿದ ಬಳಿಕ ನಾವು ಹೇಗೆ ಸಹಾಯಮಾಡಬಹುದು?
4 ಸಲಹೆಗಳನ್ನು ಕೊಡಿ: ಹೇಗೆ ಸಾರಬೇಕೆಂದು ಯೇಸು ತನ್ನ ಶಿಷ್ಯರಿಗೆ ಸೂಚನೆಗಳನ್ನೂ ಕೊಟ್ಟನು. (ಮತ್ತಾ. 10:5-14) ಹೊಸ ಪ್ರಚಾರಕರಿಗೂ ನೀವು ಅದೇ ರೀತಿ ಸಹಾಯಮಾಡಬಹುದು. ಒಂದು ಮನೆಯಲ್ಲಿ ಅವರು ಮಾತಾಡುತ್ತಿರುವಾಗ ಗಮನಕೊಟ್ಟು ಆಲಿಸಿರಿ. ಅಲ್ಲಿಂದ ಹೊರಟ ಬಳಿಕ ನಿರ್ದಿಷ್ಟ ಅಂಶಗಳ ಬಗ್ಗೆ ಯಥಾರ್ಥವಾಗಿ ಅವರನ್ನು ಉದಾರಮನಸ್ಸಿನಿಂದ ಶ್ಲಾಘಿಸಿರಿ. ಅವರು ಬಹುಶಃ ಹೆದರಿಕೆಯಿಂದ ಕೆಲವೊಂದು ವಿಷಯಗಳನ್ನು ಸರಿಯಾಗಿ ಮಾಡಿರಲಿಕ್ಕಿಲ್ಲ. ಆದುದರಿಂದ ಮುಂದಿನ ಮನೆಯಲ್ಲಿ ಅವರು ಆ ವಿಷಯಗಳಲ್ಲಿ ಏನಾದರೂ ಅಭಿವೃದ್ಧಿಮಾಡಿದ್ದಾರೊ ಎಂದು ಗಮನಿಸಿ ನಂತರವೇ ಸಲಹೆ ಕೊಡಿ. ಅಷ್ಟುಮಾತ್ರವಲ್ಲ ಇದನ್ನೂ ಮನಸ್ಸಿನಲ್ಲಿಡಿ: ಎಲ್ಲರಿಗೂ ಒಂದೇ ರೀತಿಯ ಸಾಮರ್ಥ್ಯಗಳಿರುವುದಿಲ್ಲ ಮತ್ತು ಹೆಚ್ಚಾಗಿ ಒಂದು ಕೆಲಸವನ್ನು ಸರಿಯಾಗಿ ಮಾಡಲು ಹಲವಾರು ವಿಧಾನಗಳಿರುತ್ತವೆ.—1 ಕೊರಿಂ. 12:4-7.
5. ಸಲಹೆ ನೀಡಲು ನಾವೇ ಮುಂದಾಗುವಾಗ ಏನು ಹೇಳಬಹುದು?
5 ಕೆಲವೊಮ್ಮೆ ಹೊಸ ಪ್ರಚಾರಕರು ತಾವಾಗಿಯೇ ನಿಮ್ಮ ಸಲಹೆಗಳನ್ನು ಕೇಳಬಹುದು. ಕೇಳದಿದ್ದರೆ, ಅವರಿಗೆ ಸಹಾಯ ನೀಡಲು ನೀವೇ ಮುಂದಾಗಿ. ಇದನ್ನು ಜಾಣ್ಮೆಯಿಂದ ಮಾಡುವುದು ಹೇಗೆ? ಕೆಲವು ಅನುಭವೀ ಪ್ರಚಾರಕರು ಹೀಗೆ ಕೇಳುತ್ತಾರೆ: “ನಿಮಗೊಂದು ಸಲಹೆ ಕೊಡಬಹುದಾ?” ಅಥವಾ “ನೀವು ಆ ಮನೆಯಲ್ಲಿ ಮಾತಾಡಿದ್ದು ನಿಮಗೆ ಹೇಗನಿಸಿತು? ತೃಪ್ತಿಯಾಯಿತಾ?” ಇನ್ನೊಂದು ವಿಧಾನ ಹೀಗಿದೆ: “ನಾನು ಹೊಸ ಪ್ರಚಾರಕನಾಗಿದ್ದಾಗ ನನಗೂ . . . ತುಂಬ ಕಷ್ಟ ಆಗುತ್ತಿತ್ತು. ಆದರೆ ನನಗೆ . . . ಸಹಾಯಮಾಡಿತು.” ಕೆಲವೊಮ್ಮೆ, ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯನ್ನು ನೀವಿಬ್ಬರೂ ಸೇರಿ ತೆರೆದು ನೋಡುವುದು ಒಳ್ಳೇದು. ಸಲಹೆಗಳ ಸುರಿಮಳೆಗೈಯುವ ಬದಲು ಒಂದೇ ಅಂಶದ ಬಗ್ಗೆ ಸಲಹೆನೀಡಿ.
6. ಶುಶ್ರೂಷೆಯ ವಿಷಯದಲ್ಲಿ ‘ಕಬ್ಬಿಣವು ಕಬ್ಬಿಣವನ್ನು ಹೇಗೆ ಹರಿತಮಾಡುತ್ತದೆ?’
6 ಕಬ್ಬಿಣದಿಂದ ಕಬ್ಬಿಣ ಹರಿತವಾಗುತ್ತದೆ: ತಿಮೊಥೆಯನು ಒಬ್ಬ ಅನುಭವೀ ಸೌವಾರ್ತಿಕನಾಗಿದ್ದರೂ ಬೋಧಿಸುತ್ತಾ, ಅಭಿವೃದ್ಧಿಮಾಡುತ್ತಾ ಇರುವಂತೆ ಪೌಲನು ಪ್ರೋತ್ಸಾಹಿಸಿದನು. (1 ತಿಮೊ. 4:13, 15) ನೀವು ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಆರಂಭಿಸಿ ಅನೇಕ ವರ್ಷಗಳು ದಾಟಿದ್ದರೂ, ನಿಮ್ಮ ಕೌಶಲಗಳನ್ನು ಇನ್ನಷ್ಟು ಉತ್ತಮಗೊಳಿಸುವುದನ್ನು ನೀವೆಂದೂ ನಿಲ್ಲಿಸಬಾರದು. ನಿಮ್ಮೊಂದಿಗೆ ಸೇವೆಮಾಡುವ ಪ್ರಚಾರಕರಿಗೆ ಶುಶ್ರೂಷೆಯಲ್ಲಿ ಕಡಿಮೆ ಅನುಭವವಿದ್ದರೂ ಅವರಿಂದ ಕಲಿಯಿರಿ. ಅಲ್ಲದೆ ಇತರರಿಗೆ, ವಿಶೇಷವಾಗಿ ಹೊಸಬರಿಗೆ ಸುವಾರ್ತೆಯ ಕೌಶಲಭರಿತ ಶುಶ್ರೂಷಕರಾಗುವಂತೆ ದಯೆಯಿಂದ ಸಹಾಯಮಾಡಲು ಸದಾ ಎಚ್ಚರವಾಗಿರಿ.—ಜ್ಞಾನೋ. 27:17.