ಕ್ಷೇತ್ರ ಸೇವೆಯಲ್ಲಿ ಪೂರ್ಣಾತ್ಮದಿಂದಿರ್ರಿ
ಭಾಗ 3: ಇತರರ ಪ್ರಗತಿಗೆ ನೆರವಾಗಿರಿ
1 ಹಿರಿಯ ಸಹೋದರನಾದ ಪೌಲ ಮತ್ತು ಭಯಭಕ್ತಿಯ ಯುವಕ ತಿಮೊಥಿಯ ನಡುವಣ ಸಂಬಂಧವು, ಶುಶ್ರೂಷೆಯ ತರಬೇತಿಯ ಒಂದು ಉತ್ತಮ ಮಾದರಿಯಾಗಿ ಆಗಿಂದಾಗ್ಯೆ ಹೇಳಲ್ಪಡುತ್ತದೆ. (1 ಕೊರಿ. 4:17) ತಾನು ಪಡೆದ ಅದೇ ತಿಳುವಳಿಕೆ ಮತ್ತು ತರಬೇತನ್ನು ಇತರರಿಗೂ ಕೊಡುವಂತೆ ತಿಮೊಥಿಗೆ ಪೌಲನು ಮಾರ್ಗದರ್ಶಿಸಿದ್ದನು. (2 ತಿಮೊ. 2:1, 2) ಇದೇ ವಿಧಾನವನ್ನು ಇಂದು ನಮ್ಮ ಸಭೆಯಲ್ಲಿ ನಾವು ಅನುಸರಿಸುವುದು ಒಳ್ಳೆಯದು.
2 ಇತರರನ್ನು ತರಬೇತು ಮಾಡಿರಿ: ಭಾರತದಲ್ಲಿ ಮೂರು ವರ್ಷಗಳ ಹಿಂದೆ ಇದ್ದ ಪ್ರಚಾರಕರಿಗಿಂತ ಇಂದು ಸುಮಾರು 3,500 ಹೆಚ್ಚಾಗಿರುವುದನ್ನು ನಾವು ಮನಗಾಣುವಾಗ, ತರಬೇತಿಯ ಅಗತ್ಯವು ನಮಗೆ ಸ್ಪಷ್ಟವಾಗುತ್ತದೆ. ಅವರಲ್ಲಿ ಹೆಚ್ಚಿನವರು ಅನುಭವಸ್ಥ ಪ್ರಚಾರಕರು ಕೊಡಬಲ್ಲ ತರಬೇತಿನಿಂದ ಪ್ರಯೋಜನ ಹೊಂದುವದು ಅತಿ ಸಂಭವನೀಯ. ಸಾಮಾನ್ಯವಾಗಿ ತಿಂಗಳಿಗೆ ಕೇವಲ ಒಂದೆರಡು ತಾಸುಗಳನ್ನು ಕ್ಷೇತ್ರ ಸೇವೆಯಲ್ಲಿ ಕಳೆಯುತ್ತಿದ್ದ ಒಬ್ಬ ಸಹೋದರಿಗೆ ಒಬ್ಬ ಅನುಭವಿ ಪ್ರಚಾರಕಳು ಸಹಾಯ ಕೊಟ್ಟಾಗ, ಆಕೆ ಮನೆಬಾಗಲಲ್ಲಿ ಪರಿಣಾಮಕಾರಿಯಾಗಿ ಮಾತಾಡ ಶಕ್ತಳಾದಳು. ಕ್ಷೇತ್ರಸೇವೆಯಲ್ಲಿ ಭಾಗವಹಿಸಲು ಅವಳಿಗಿದ್ದ ಹಿಂದಣ ಅನಿಚ್ಛೆಯು ಮಾಯವಾಯಿತು, ಮತ್ತು ಆಕೆ ಸುವಾರ್ತೆಯ ಹುರುಪಿನ ಪ್ರಚಾರಕಳಾದಳು. ಈಗ ಒಬ್ಬ ನುರಿತ ಪಯನೀಯಳಾಗಿರುವ ಆಕೆ ಹಿಂದಣ ಸಮಯವನ್ನು ನೆನಸುತ್ತಾ ಅನ್ನುವದು: “ಏನು ಹೇಳುವದೆಂಬದನ್ನು ಕಲಿಸಿಕೊಡುವದು ನನಗೆ ಬೇಕಾಗಿತ್ತು, ಆ ಮೇಲೆ ನಾನು ಶುಶ್ರೂಷೆಯಲ್ಲಿ ಆನಂದಿಸಲಾರಂಭಿಸಿದೆ.”
3 ನೀವೊಬ್ಬ ಹಿರಿಯರು, ಶುಶ್ರೂಷೆ ಸೇವಕರು ಅಥವಾ ಅನುಭವಸ್ಥ ಪ್ರಚಾರಕರು ಆಗಿದ್ದಲ್ಲಿ, ಇತರರ ಪ್ರಗತಿಗಾಗಿ ನೀವು ಹೇಗೆ ನೆರವಾಗಬಲ್ಲಿರಿ? ಇನ್ನೊಬ್ಬ ಪ್ರಚಾರಕನಿಗೆ ನೆರವಾಗಲು ನೀವು ಬಯಸುತ್ತೀರಿ ಎಂದು ನಿಮ್ಮ ಸಭಾ ಪುಸ್ತಕಭ್ಯಾಸ ನಿರ್ವಾಹಕನಿಗೆ ತಿಳಿಸುವದೇ ಅದರ ಮೊದಲಹೆಜ್ಜೆ.
4 ಸಂಸ್ಥಾಪಿಸಿಕೊಳ್ಳಿ ಮತ್ತು ತಯಾರಾಗಿರ್ರಿ: ಒಟ್ಟಾಗಿ ಕಾರ್ಯ ನಡಿಸಲು ನಿಶ್ಚಿತ ಕಾಲ ಸಮಯ ನೇಮಿಸುವದು ಸಹಾಯಕಾರಿ. ನಿಮ್ಮ ಸಂಗಡಿಗನು ಪ್ರಾರಂಭದಲ್ಲಿ ಅನಿಶ್ಚಿತನೂ ಗಾಬರಿಯವನೂ ಆಗಿರಬಹುದು, ಆದರೆ ಅಗತ್ಯ ಬಿದ್ದಾಗ ನೆರವಾಗಲು ಯಾರಾದರೂ ಇದ್ದಾರೆ ಎಂಬದನ್ನು ಅವನು ಗಣ್ಯ ಮಾಡುವನು. (ಪ್ರಸ. 4:9) ಸಾಧ್ಯವಿದ್ದರೆ, ಬೈಬಲ್ ವಿಷಯಗಳಲ್ಲಿ ಸಂಭಾಷಣೆ ಮಾಡಲು ಮನಸ್ಸಿರುವ ಜನರು ಎಲ್ಲಿ ಹೆಚ್ಚೆದ್ದಾರೋ ಆ ಕ್ಷೇತ್ರವನ್ನು ಆರಿಸಿಕೊಳ್ಳಿರಿ. ಇದು ಹೊಸಬನಿಗೆ ಒಳಗೂಡಲು ಮತ್ತು ಹೀಗೆ ಆತ್ಮವಿಶ್ವಾಸವನ್ನು ಗಳಿಸಲು ಸಹಾಯ ಮಾಡುವದು.
5 ಪ್ರಗತಿಪೂರ್ವಕವಾದ ತರಬೇತನ್ನು ಮುಂದರಿಸಲು, ಕಂಡುಕೊಂಡ ಆಸಕ್ತಿಯನ್ನು ಪುನಃ ಸಂದರ್ಶಿಸುವದು ಹೇಗೆ ಎಂಬದನ್ನು ಚರ್ಚಿಸುವದು ಪ್ರಯೋಜನಕಾರಿ. ಅದಕ್ಕೆ ತಳಪಾಯವನ್ನು, ಆರಂಭದ ಭೇಟಿಯಲ್ಲಿ ಮನೆಯವನೊಂದಿಗೆ ಒಂದು ಪ್ರಶ್ನೆಯನ್ನು ಬಿಟ್ಟುಹೋಗುವ ಮೂಲಕ ಹಾಕಬಹುದು, ಮತ್ತು ಪುನಃಭೇಟಿಯಲ್ಲಿ ಅದನ್ನು ಉತ್ತರಿಸುವೆವು ಎಂದು ಹೇಳಬಹುದು. ಅನಾನುಭವಿ ಪ್ರಚಾರಕನಿಗೆ ಅದನ್ನು ತಯಾರಿಸಲು ಸಹಾಯ ಮಾಡಿರಿ ಮತ್ತು ಅವನೊಂದಿಗೆ ಸಂದರ್ಶನೆಗೆ ತಪ್ಪದೆ ಹೋಗಿರಿ. ಅಭ್ಯಾಸ ಪ್ರಾರಂಭಿಸಿದರೆ, ಮತ್ತು ಹೊಸ ಪ್ರಚಾರಕನಿನ್ನೂ ತನ್ನ ಸ್ವಂತ ಸಾಮರ್ಥ್ಯದ ಬಗ್ಗೆ ಅನಿಶ್ಚಿತನಿದ್ದರೆ, ಅನುಭವಸ್ಥ ಪ್ರಚಾರಕನು ಆ ಅಭ್ಯಾಸವನ್ನು ಹೊಸಬನು ಯೋಗ್ಯತೆ ಪಡೆಯುವ ತನಕ ಹಲವು ಸಲ ನಡಿಸಲು ಇಷ್ಟಪಡಬಹುದು.
6 ಸಂಸ್ಥೆಯೊಳಗೆ ಬಹಳ ಮಂದಿ ಹೊಸಬರು ಬರುತ್ತಿರಲಾಗಿ, ಕ್ಷೇತ್ರಸೇವೆಯಲ್ಲಿ ತೀವ್ರ ಶಿಕ್ಷಣವನ್ನು ಒದಗಿಸುವ ವಿವೇಕವು ತಾನೇ ವ್ಯಕ್ತವಾಗುತ್ತದೆ. ಸಾರುವ ಚಟುವಟಿಕೆಯಲ್ಲಿ ತಮ್ಮ ನಿಪುಣತೆಯನ್ನು ಗಳಿಸಿದವರಿಂದ ಸಹಾಯವು ಬೇಕಾಗಿದೆ. ನೀವು ಯಾರಿಗಾದರೂ ಸಹಾಯ ಮಾಡಲು ಶಕ್ತರಾದರೆ, ತಕ್ಕ ಸಮಯದಲ್ಲಿ ಅವನೂ “ಇತರರಿಗೆ ತಕ್ಕದಾಗಿ ಬೋಧಿಸಲು ಶಕ್ತನಾಗುವನು.”—2 ತಿಮೊ. 2:2