“ಅಂಜಬೇಡ”
1. ಯೆರೆಮೀಯನಂತೆ ನಮಗೂ ಯಾವ ರೀತಿಯ ಅಂಜಿಕೆ ಇರಬಹುದು?
1 ಯೆರೆಮೀಯನು ಪ್ರವಾದಿಯಾಗಿ ನೇಮಕಗೊಂಡಾಗ ತಾನು ಅದಕ್ಕೆ ಅಸಮರ್ಥನೆಂಬ ಭಾವನೆ ಅವನಲ್ಲಿತ್ತು. ಆಗ ಯೆಹೋವನು ಅವನಿಗೆ “ಅಂಜಬೇಡ” ಎಂದು ಧೈರ್ಯ ತುಂಬಿಸಿ, ಆ ನೇಮಕ ಪೂರೈಸಲು ದಯಾಭಾವದಿಂದ ಅವನನ್ನು ಬಲಪಡಿಸಿದನು. (ಯೆರೆ. 1:6-10) ಇಂದು ಸಹ ನಮ್ಮ ನಾಚಿಕೆ ಸ್ವಭಾವ ಅಥವಾ ಆತ್ಮವಿಶ್ವಾಸದ ಕೊರತೆ ಶುಶ್ರೂಷೆಗೆ ತಡೆಗಳಾಗಿರಬಹುದು. ಜನರು ಹೇಗೆ ಪ್ರತಿಕ್ರಿಯಿಸುತ್ತಾರೋ, ನಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೋ ಎಂಬ ಅಂಜಿಕೆಯೂ ಕೆಲವೊಮ್ಮೆ ಇರಬಹುದು. ಇಂಥ ಅಂಜಿಕೆಗಳನ್ನು ನಿವಾರಿಸುವುದು ಹೇಗೆ? ನಿವಾರಿಸಿದರೆ ಸಿಗುವ ವೈಯಕ್ತಿಕ ಆಶೀರ್ವಾದಗಳಾವುವು?
2. ತಯಾರಿ ಮಾಡಿದರೆ ಶುಶ್ರೂಷೆಯ ಬಗ್ಗೆ ನಮ್ಮ ಅಂಜಿಕೆ ತಗ್ಗುವುದು ಹೇಗೆ?
2 ಮುಂಚೆಯೇ ತಯಾರಿಸಿ: ಚೆನ್ನಾಗಿ ತಯಾರಿಸುವಲ್ಲಿ ನಮ್ಮ ಅಂಜಿಕೆ ಬಹುಮಟ್ಟಿಗೆ ತಗ್ಗುವುದು. ಉದಾಹರಣೆಗೆ, ಯಾವ್ಯಾವ ಸಂಭಾಷಣಾ ತಡೆಗಟ್ಟುಗಳು ಬರಬಹುದೆಂದು ಮುಂಚೆಯೇ ಯೋಚಿಸಿದರೆ ಸಾಮಾನ್ಯವಾಗಿ ಬರುವ ಆಕ್ಷೇಪಣೆಗಳಿಗೆ ಉತ್ತರಿಸಲು ಸಿದ್ಧರಾಗಿರುವೆವು. (ಜ್ಞಾನೋ. 15:28) ಶಾಲೆಯಲ್ಲಿ ಮತ್ತು ಶುಶ್ರೂಷೆಯಲ್ಲಿ ಬರುವ ಭಿನ್ನ ಭಿನ್ನ ಸವಾಲುಗಳನ್ನು ನಿಭಾಯಿಸಲಿಕ್ಕಾಗಿ ತಯಾರಾಗಲು ನೀವು ಕುಟುಂಬ ಆರಾಧನೆಯಲ್ಲಿ ಪ್ರ್ಯಾಕ್ಟಿಸ್ ಸೆಷನ್ ಮಾಡಬಾರದೇಕೆ?—1 ಪೇತ್ರ 3:15.
3. ಯೆಹೋವನಲ್ಲಿನ ಭರವಸೆ ಅಂಜಿಕೆಯನ್ನು ಹೊಡೆದೋಡಿಸುತ್ತದೆ ಹೇಗೆ?
3 ಯೆಹೋವನಲ್ಲಿ ಭರವಸೆಯಿಡಿ: ನಮ್ಮ ಅಂಜಿಕೆಗೆ ದೇವರಲ್ಲಿನ ಭರವಸೆಯೇ ಒಳ್ಳೇ ಮದ್ದು. ನಮಗೆ ಸಹಾಯ ಮಾಡುವನೆಂದು ಯೆಹೋವನು ಮಾತುಕೊಟ್ಟಿದ್ದಾನೆ. (ಯೆಶಾ. 41:10-13) ಇದಕ್ಕಿಂತ ಹೆಚ್ಚಿನ ಸುರಕ್ಷೆ ನಮಗೆ ಬೇಕೇ? ಅಷ್ಟೇ ಅಲ್ಲ, ಅನಿರೀಕ್ಷಿತ ಸನ್ನಿವೇಶಗಳು ಎದುರಾದಾಗಲೂ ಉತ್ತಮ ಸಾಕ್ಷಿಕೊಡಲು ದೇವರ ಪವಿತ್ರಾತ್ಮ ನಮಗೆ ನೆರವಾಗುವುದೆಂದು ಯೇಸು ಆಶ್ವಾಸನೆ ನೀಡಿದ್ದಾನೆ. (ಮಾರ್ಕ 13:11) ಆದ್ದರಿಂದ ಪವಿತ್ರಾತ್ಮಕ್ಕಾಗಿ ಯೆಹೋವನಿಗೆ ನಿಯತವಾಗಿ ಬೇಡಿಕೊಳ್ಳಿರಿ.—ಲೂಕ 11:13.
4. ಸವಾಲುಗಳಿದ್ದರೂ ಶುಶ್ರೂಷೆಯಲ್ಲಿ ಪಟ್ಟುಹಿಡಿಯುವುದರಿಂದ ಯಾವ ಆಶೀರ್ವಾದಗಳು ಸಿಗುವವು?
4 ಆಶೀರ್ವಾದಗಳು: ಸವಾಲುಗಳಿದ್ದರೂ ಶುಶ್ರೂಷೆಯಲ್ಲಿ ಪಟ್ಟುಹಿಡಿಯುವಾಗ ಭವಿಷ್ಯತ್ತಿನಲ್ಲಿ ಎದುರಾಗುವ ಕಷ್ಟಗಳನ್ನು ಯಶಸ್ವಿಯಾಗಿ ನಿಭಾಯಿಸಲು ನಮಗೆ ಬಲ ಸಿಗುವುದು. ಅಲ್ಲದೆ, ಪವಿತ್ರಾತ್ಮಭರಿತ ಜನರಲ್ಲಿರುವ ಸಾಹಸ ಮತ್ತು ಧೈರ್ಯವೆಂಬ ಗುಣಗಳನ್ನು ಬೆಳೆಸಿಕೊಳ್ಳುವೆವು. (ಅ. ಕಾ. 4:31) ಇನ್ನೂ ಹೆಚ್ಚಾಗಿ, ಯೆಹೋವನ ನೆರವಿನಿಂದ ಅಂಜಿಕೆಯನ್ನು ಹೊಡೆದೋಡಿಸುವಾಗ ನಮ್ಮನ್ನು ರಕ್ಷಿಸುವ ದೇವರ ಭುಜಬಲದಲ್ಲಿ ನಮ್ಮ ನಂಬಿಕೆ, ಭರವಸೆ ಹೆಚ್ಚಾಗುವುದು. (ಯೆಶಾ. 33:2) ಅಷ್ಟಲ್ಲದೆ, ನಮ್ಮ ಸ್ವರ್ಗೀಯ ತಂದೆಗೆ ಸಂತೋಷ ತರುತ್ತಿದ್ದೇವೆಂಬ ಹರ್ಷ, ಸಂತೃಪ್ತಿ ನಮಗಿರುವುದು. (1 ಪೇತ್ರ 4:13, 14) ಹೀಗಿರಲಾಗಿ ಯೆಹೋವನ ಸಹಾಯ ಇದೆಯೆಂಬ ಭರವಸೆಯೊಂದಿಗೆ ರಾಜ್ಯ ಸಂದೇಶವನ್ನು ಅಂಜದೆ ಧೈರ್ಯದಿಂದ ಪ್ರಕಟಿಸೋಣ!