ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w22 ಜೂನ್‌ ಪು. 14-19
  • ಭಯಕ್ಕೆ ಪ್ರೀತಿನೇ ಮದ್ದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಯಕ್ಕೆ ಪ್ರೀತಿನೇ ಮದ್ದು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕುಟುಂಬವನ್ನ ನೋಡಿಕೊಳ್ಳೋಕೆ ಆಗಲ್ವೇನೋ ಅನ್ನೋ ಭಯ
  • ಮನುಷ್ಯನ ಭಯ
  • ಸಾವಿನ ಭಯ
  • ಭಯವನ್ನ ಹೊಡೆದೋಡಿಸಿ
  • ದೇವರಿಗೆ ಭಯಪಡಬೇಕು, ಮನುಷ್ಯರಿಗಲ್ಲ, ಯಾಕೆ?
    ಕಾವಲಿನಬುರುಜು—1990
  • ಮನುಷ್ಯನಿಗಲ್ಲ ದೇವರಿಗೆ ಭಯಪಡಲು ಐದು ಕಾರಣಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಯೆಹೋವನಿಗೆ ಭಯಪಟ್ಟು ಆತನ ಪವಿತ್ರ ನಾಮವನ್ನು ಘನಪಡಿಸಿರಿ
    ಕಾವಲಿನಬುರುಜು—1992
  • ಯೆಹೋವನಿಗೆ ಭಯಪಡುವಂಥ ಹೃದಯವನ್ನು ಬೆಳೆಸಿಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
w22 ಜೂನ್‌ ಪು. 14-19

ಅಧ್ಯಯನ ಲೇಖನ 26

ಭಯಕ್ಕೆ ಪ್ರೀತಿನೇ ಮದ್ದು

“ಯೆಹೋವ ನನ್ನ ಪಕ್ಷದಲ್ಲಿ ಇದ್ದಾನೆ, ನಾನು ಹೆದ್ರಲ್ಲ.”—ಕೀರ್ತ. 118:6.

ಗೀತೆ 3 “ದೇವರು ಪ್ರೀತಿಯಾಗಿದ್ದಾನೆ”

ಕಿರುನೋಟa

1. ನಮಗೆ ಯಾವಾಗೆಲ್ಲಾ ಭಯ ಆಗುತ್ತೆ?

ನಮ್ಮ ಸಹೋದರ ಸಹೋದರಿಯರಿಗೆ ಹೇಗನಿಸುತ್ತಿತ್ತು ಅಂತ ನೋಡಿ. ನೆಸ್ಟರ್‌ ಮತ್ತು ಅವರ ಹೆಂಡತಿ ಮರಿಯಗೆ ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡೋಕೆ ತುಂಬ ಆಸೆ ಇತ್ತು.b ಆದ್ರೆ ಅದನ್ನ ಮಾಡೋಕೆ ಅವರು ತಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನ ಮಾಡಿಕೊಳ್ಳಬೇಕಿತ್ತು. ಅವರು ತಮ್ಮ ಖರ್ಚನ್ನ ಕಡಿಮೆ ಮಾಡಿಕೊಳ್ಳಬೇಕಿತ್ತು. ಹಾಗಾಗಿ ಕಡಿಮೆ ದುಡ್ಡಲ್ಲಿ ಜೀವನ ಮಾಡಕ್ಕಾಗುತ್ತಾ ಅನ್ನೋ ಭಯ ಅವರಿಗಿತ್ತು. ಸಹೋದರ ವಿಲಿಯಮ್‌ ಯೆಹೋವನ ಸಾಕ್ಷಿಯಾದಾಗ ಅವರಿಗೆ ಹಿಂಸೆ, ವಿರೋಧ ಬರುತ್ತೆ ಅನ್ನೋ ಭಯ ಇತ್ತು. ಯಾಕಂದ್ರೆ ಅವರ ದೇಶದಲ್ಲಿ ಯೆಹೋವನ ಸಾಕ್ಷಿಗಳನ್ನ ಜನರು ತುಂಬ ವಿರೋಧಿಸುತ್ತಾರೆ. ಆದರೆ ಅದಕ್ಕಿಂತ ಹೆಚ್ಚಾಗಿ ಅವರ ಮನೆಯವರು ಏನಂತಾರೋ ಅಂತ ಹೆದರಿದ್ರು. ಸಹೋದರಿ ವನಿತಾಗೆ ಕ್ಯಾನ್ಸರ್‌ ಕಾಯಿಲೆ ಇತ್ತು. ಅದ್ರಿಂದ ಅವರಿಗೆ ಆಪರೇಷನ್‌ ಮಾಡಬೇಕಾಗಿ ಬಂತು. ಆದ್ರೆ ರಕ್ತ ಇಲ್ಲದೇ ಆಪರೇಷನ್‌ ಮಾಡೋ ಡಾಕ್ಟರ್‌ ಸಿಗ್ತಾರಾ? ಅವರು ಒಂದುವೇಳೆ ಸಿಕ್ಕಿಲ್ಲ ಅಂದ್ರೆ ನಾನು ಸತ್ತುಹೋಗ್ತೀನಾ? ಅನ್ನೋ ಭಯ ಅವರಿಗಿತ್ತು.

2. ಭಯನ ಮೆಟ್ಟಿನಿಲ್ಲೋಕೆ ನಾವ್ಯಾಕೆ ಪ್ರಯತ್ನ ಮಾಡಬೇಕು?

2 ನಾವು ಭಯವನ್ನ ಮೆಟ್ಟಿನಿಲ್ಲಲಿಲ್ಲ ಅಂದ್ರೆ ತಪ್ಪಾದ ನಿರ್ಣಯಗಳನ್ನ ಮಾಡಿಬಿಡುತ್ತೀವಿ. ಇದ್ರಿಂದ ಯೆಹೋವನ ಜೊತೆ ಇರೋ ನಮ್ಮ ಸಂಬಂಧನೂ ಹಾಳಾಗುತ್ತೆ. ಸೈತಾನನಿಗೆ ಬೇಕಾಗಿರೋದು ಇದೇನೇ. ನಾವು ಯೆಹೋವನ ಮಾತು ಕೇಳಬಾರದು, ಆತನು ಹೇಳೋ ಹಾಗೆ ನಡಕೊಳ್ಳಬಾರದು ಅನ್ನೋದೇ ಸೈತಾನನ ಆಸೆ. ಸಿಹಿಸುದ್ದಿ ಸಾರೋದನ್ನೂ ನಾವು ಬಿಟ್ಟುಬಿಡಬೇಕು ಅಂತ ಅವನು ಬಯಸುತ್ತಾನೆ. (ಪ್ರಕ. 12:17) ಸೈತಾನನಿಗೆ ತುಂಬ ಶಕ್ತಿ ಇದೆ ಮತ್ತು ಅವನು ತುಂಬ ಕ್ರೂರಿ. ನಮ್ಮನ್ನ ಹೇಗಾದರೂ ಮಾಡಿ ಸೋಲಿಸಬೇಕು ಅಂತ ಕಾಯ್ತಾ ಇದ್ದಾನೆ. ಆದ್ರೆ ನಾವು ಅವನಿಂದ ಹೇಗೆ ತಪ್ಪಿಸಿಕೊಳ್ಳಬಹುದು ಅಂತ ಈಗ ನೋಡೋಣ.

3. ಭಯನ ಮೆಟ್ಟಿನಿಲ್ಲೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

3 ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅನ್ನೋ ಭರವಸೆ ನಮಗಿದ್ರೆ ಸೈತಾನ ನಮ್ಮನ್ನ ಹೆದರಿಸೋಕೆ ಆಗಲ್ಲ. (ಕೀರ್ತ. 118:6) 118ನೇ ಕೀರ್ತನೆ ಬರೆದ ಕೀರ್ತನೆಗಾರನಿಗೂ ಇದೇ ರೀತಿಯ ಸನ್ನಿವೇಶಗಳಿದ್ದವು. ಅವನಿಗೆ ತುಂಬ ವಿರೋಧಿಗಳಿದ್ರು, ದೊಡ್ಡದೊಡ್ಡ ಅಧಿಕಾರಿಗಳೂ ಅವನನ್ನ ದ್ವೇಷಿಸುತ್ತಿದ್ದರು (ವಚನ 9, 10). ಕೆಲವೊಮ್ಮೆ ಅವನು ತುಂಬ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಹಾಕೊಂಡಿದ್ದ (ವಚನ 13). ಅಷ್ಟೇ ಅಲ್ಲ, ಅವನು ಮಾಡಿದ ತಪ್ಪಿಗೆ ಯೆಹೋವ ಶಿಸ್ತನ್ನೂ ಕೊಟ್ಟನು (ವಚನ 18). ಇಷ್ಟೆಲ್ಲಾ ಕಷ್ಟಗಳಿದ್ರೂ ಕೀರ್ತನೆಗಾರ “ನಾನು ಹೆದ್ರಲ್ಲ” ಅಂತ ಹೇಳಿದ. ಅವನಿಗೆ ಯಾಕೆ ಹಾಗನಿಸ್ತು? ಯೆಹೋವನಿಂದ ಶಿಸ್ತು ಸಿಕ್ಕಿದ್ರೂ ಆತನು ತನ್ನನ್ನ ಪ್ರೀತಿಸ್ತಾನೆ ಅಂತ ಅವನಿಗೆ ಗೊತ್ತಿತ್ತು. ಜೀವನದಲ್ಲಿ ಏನೇ ಆದ್ರೂ ಯೆಹೋವ ತನಗೆ ಸಹಾಯ ಮಾಡೋಕೆ ಯಾವಾಗಲೂ ರೆಡಿಯಾಗಿರ್ತಾನೆ ಅಂತ ಅವನು ಅರ್ಥಮಾಡಿಕೊಂಡಿದ್ದ.—ಕೀರ್ತ. 118:29.

4. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅನ್ನೋ ನಂಬಿಕೆ ನಮಗಿದ್ರೆ ಯಾವ ಭಯದಿಂದ ಹೊರಬರಬಹುದು?

4 ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ನಾವು ಪೂರ್ತಿಯಾಗಿ ನಂಬಬೇಕು. ಇದ್ರಿಂದ ನಾವು ಮೂರು ತರದ ಭಯವನ್ನ ಮೆಟ್ಟಿನಿಲ್ಲಬಹುದು. (1) ಕುಟುಂಬವನ್ನ ಚೆನ್ನಾಗಿ ನೋಡಿಕೊಳ್ಳೋಕೆ ಆಗುತ್ತೋ ಇಲ್ವೋ ಅನ್ನೋ ಚಿಂತೆ ಅಥವಾ ಭಯ, (2) ಮನುಷ್ಯನ ಭಯ (3) ಸಾವಿನ ಭಯ. ಮೊದಲನೇ ಪ್ಯಾರದಲ್ಲಿ ನೋಡಿದ ಸಹೋದರ ಸಹೋದರಿಯರಿಗೆ ಯೆಹೋವ ತಮ್ಮನ್ನ ಪ್ರೀತಿಸ್ತಾನೆ ಅಂತ ಪೂರ್ತಿ ಭರವಸೆ ಇತ್ತು. ಹಾಗಾಗಿ ತಮಗಿದ್ದ ಭಯದಿಂದ ಹೊರಬಂದ್ರು.

ಕುಟುಂಬವನ್ನ ನೋಡಿಕೊಳ್ಳೋಕೆ ಆಗಲ್ವೇನೋ ಅನ್ನೋ ಭಯ

ಒಬ್ಬ ಸಹೋದರ ಮರದ ಕಟ್ಟೆ ಮೇಲೆ ನಿಂತುಕೊಂಡು ಮೀನು ಹಿಡಿಯೋಕೆ ಬಲೆ ಬೀಸ್ತಿದ್ದಾರೆ. ಅವರ ಮಗ ಪಕ್ಕದಲ್ಲಿ ಕೂತಿದ್ದಾನೆ.

ಒಬ್ಬ ಸಹೋದರ ತನ್ನ ಮನೆಯವರನ್ನ ನೋಡಿಕೊಳ್ಳೋಕೆ ಮೀನು ಹಿಡಿಯೋ ಕೆಲಸ ಮಾಡ್ತಿದ್ದಾರೆ. ಅವರ ಮಗ ಪಕ್ಕದಲ್ಲಿ ಕೂತಿದ್ದಾನೆ (ಪ್ಯಾರ 5 ನೋಡಿ)

5. ಕುಟುಂಬದ ಯಜಮಾನರಿಗೆ ಯಾವೆಲ್ಲಾ ಭಯ ಅಥವಾ ಚಿಂತೆ ಇದೆ? (ಮುಖಪುಟ ಚಿತ್ರ ನೋಡಿ.)

5 ತನ್ನ ಕುಟುಂಬದವರಿಗೆ ಊಟ, ಬಟ್ಟೆ ಕೊಟ್ಟು ಚೆನ್ನಾಗಿ ನೋಡಿಕೊಳ್ಳೋ ಜವಾಬ್ದಾರಿ ಕುಟುಂಬದ ಯಜಮಾನನಿಗೆ ಇದೆ. (1 ತಿಮೊ. 5:8) ಸಹೋದರರೇ, ಕೊರೋನ ಕಾಯಿಲೆ ಬಂದಾಗಿಂದ ‘ನಾನೆಲ್ಲಿ ಕೆಲಸ ಕಳಕೊಂಡು ಬಿಡ್ತೀನೋ’ ಅಂತ ನಿಮಗೆ ಭಯ ಆಗಿರಬಹುದು. ಕೆಲಸ ಕಳಕೊಂಡು ಬಿಟ್ರೆ ಇನ್ನೊಂದು ಕೆಲಸ ಸಿಗೋದು ತುಂಬ ಕಷ್ಟ. ಆಗ ಮನೆನ ಹೇಗೆ ನೋಡಿಕೊಳ್ಳೋದು, ಬಾಡಿಗೆ ಹೇಗೆ ಕಟ್ಟೋದು ಅಂತ ನಿಮಗೆ ಯೋಚನೆಯಾಗಬಹುದು. ಕಡಿಮೆ ಸಂಬಳದಲ್ಲಿ ಜೀವನ ಮಾಡೋದು ಹೇಗೆ ಅಂತ ನೆಸ್ಟರ್‌ ಮತ್ತು ಮರಿಯ ತರ ನಿಮಗೂ ಚಿಂತೆಯಾಗಬಹುದು. ಕೆಲವರು ಈ ರೀತಿ ಭಯಪಡ್ತಾ ಇದ್ದಿದ್ರಿಂದ ಸೈತಾನ ಅದನ್ನೇ ಅಸ್ತ್ರವಾಗಿಟ್ಟುಕೊಂಡು ಅವರಿಗೆ ಯೆಹೋವನ ಸೇವೆ ಮಾಡೋಕೆ ಆಗದೇ ಇರೋ ಹಾಗೆ ಮಾಡಿದ್ದಾನೆ.

6. ಸೈತಾನ ಏನಂತ ನಂಬಿಸೋಕೆ ಪ್ರಯತ್ನಿಸುತ್ತಾನೆ?

6 ಯೆಹೋವ ನಮ್ಮನ್ನ ಪ್ರೀತಿಸಲ್ಲ, ಆತನಿಗೆ ನಮ್ಮ ಬಗ್ಗೆ ಕಾಳಜಿ ಇಲ್ಲ, ನಮ್ಮ ಕುಟುಂಬವನ್ನ ನಾವೇ ನೋಡಿಕೊಳ್ಳಬೇಕು, ಅದಕ್ಕೆ ಆತನು ಯಾವ ಸಹಾಯನೂ ಮಾಡಲ್ಲ ಅಂತ ನಂಬೋ ತರ ಸೈತಾನ ಮಾಡ್ತಾನೆ. ಅದಕ್ಕೇ ಈಗಿರೋ ಕೆಲಸನ ಹೇಗಾದ್ರೂ ಮಾಡಿ ಉಳಿಸಿಕೊಳ್ಳಬೇಕು, ಯೆಹೋವನ ಜೊತೆ ಇರೋ ಸಂಬಂಧ ಹಾಳಾದ್ರೂ ಪರವಾಗಿಲ್ಲ ಅಂತ ನಮಗೆ ಅನಿಸಿಬಿಡಬಹುದು.

7. ಯೇಸು ಏನಂತ ಧೈರ್ಯ ಕೊಡ್ತಿದ್ದಾನೆ?

7 ನಮ್ಮೆಲ್ಲರಿಗಿಂತ ಯೇಸುಗೆ ಯೆಹೋವನ ಬಗ್ಗೆ ತುಂಬ ಚೆನ್ನಾಗಿ ಗೊತ್ತು. ಅದಕ್ಕೆ ಆತನು “ನೀವು ಕೇಳೋ ಮುಂಚೆನೇ ನಿಮಗೆ ಏನು ಬೇಕಂತ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಗೊತ್ತು” ಅಂತ ಹೇಳಿದನು. (ಮತ್ತಾ. 6:8) ನಮಗೆ ಬೇಕಾಗಿರೋದನ್ನ ಯೆಹೋವ ಕೊಟ್ಟೇ ಕೊಡ್ತಾನೆ ಅಂತ ಯೇಸು ಇಲ್ಲಿ ಹೇಳ್ತಿದ್ದಾನೆ. ಯಾಕಂದ್ರೆ ನಾವೆಲ್ಲ ಆತನ ಮಕ್ಕಳು. ಕುಟುಂಬದ ಯಜಮಾನರು ಏನು ಮಾಡಬೇಕು ಅಂತ 1 ತಿಮೊತಿ 5:8ರಲ್ಲಿ ಯೆಹೋವ ಹೇಳಿದ್ದಾನೋ ಅದನ್ನ ಆತನೂ ಕುಟುಂಬದ ಯಜಮಾನನಾಗಿ ಮಾಡೇ ಮಾಡ್ತಾನೆ.

ಒಬ್ಬ ಸಹೋದರಿ ಮತ್ತು ಅವರ ಮಗಳು ಬಟ್ಟೆ ಒಗೆಯುತ್ತಿದ್ದಾರೆ. ಒಬ್ಬ ಸಹೋದರ ಮತ್ತು ಅವರ ಹೆಂಡತಿ ಇವರಿಬ್ಬರಿಗೂ ಊಟ ತರುತ್ತಿದ್ದಾರೆ.

ಯೆಹೋವ ನಮ್ಮ ಸಹೋದರ ಸಹೋದರಿಯರ ಮೂಲಕ ನಮಗೆ ಬೇಕಾಗಿರೋದನ್ನ ಕೊಡ್ತಾನೆ (ಪ್ಯಾರ 8 ನೋಡಿ)d

8. (ಎ) ಕುಟುಂಬದವರನ್ನ ಚೆನ್ನಾಗಿ ನೋಡಿಕೊಳ್ಳೋಕೆ ಆಗುತ್ತೋ ಇಲ್ವೋ ಅನ್ನೋ ಭಯದಿಂದ ಹೊರಬರೋಕೆ ಯಾವುದು ಸಹಾಯಮಾಡುತ್ತೆ? (ಮತ್ತಾಯ 6:31-33) (ಬಿ) ಚಿತ್ರದಲ್ಲಿರೋ ದಂಪತಿಗಳಿಂದ ನಾವೇನು ಕಲಿತೀವಿ?

8 ಯೆಹೋವ ದೇವರು ನಮ್ಮನ್ನ ಮತ್ತು ನಮ್ಮ ಕುಟುಂಬದವರನ್ನ ಪ್ರೀತಿಸ್ತಾನೆ ಅಂತ ಮನವರಿಕೆಯಾದ್ರೆ ಆತನು ನಮಗೆ ಬೇಕಾಗಿರೋದನ್ನ ಕೊಟ್ಟೇ ಕೊಡ್ತಾನೆ ಅಂತ ನಂಬೋಕೆ ಆಗುತ್ತೆ. (ಮತ್ತಾಯ 6:31-33 ಓದಿ.) ಯೆಹೋವ ದೇವರು ನಮಗೆ ಬೇಕಾಗಿರೋದನ್ನ ಧಾರಾಳವಾಗಿ ಕೊಡ್ತಾನೆ. ನಮ್ಮನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಆಸೆ ಆತನಿಗಿದೆ. ಆತನು ಈ ಭೂಮಿಯನ್ನ ಸೃಷ್ಟಿಮಾಡಿದಾಗ ನಮಗೆ ಬದುಕೋಕೆ ಏನು ಬೇಕೋ ಅದನ್ನ ಮಾತ್ರ ಮಾಡಿ ಸುಮ್ಮನಾಗಲಿಲ್ಲ, ನಾವು ಖುಷಿಯಾಗಿರೋಕೆ ಏನು ಬೇಕೋ ಅದನ್ನೆಲ್ಲ ಕೊಟ್ಟನು. (ಆದಿ. 2:9) ಕೆಲವೊಮ್ಮೆ ನಿಮಗೆ ಅಗತ್ಯ ಇರೋದು ಮಾತ್ರ ನಿಮ್ಮ ಹತ್ರ ಇರಬಹುದು. ಆದ್ರೆ ಅದನ್ನೂ ಯೆಹೋವನೇ ಕೊಟ್ಟಿರೋದು ಅನ್ನೋದನ್ನ ಮರೆಯಬೇಡಿ. (ಮತ್ತಾ. 6:11) ಯೆಹೋವ ಯಾವತ್ತೂ ನಮ್ಮನ್ನ ತಬ್ಬಲಿಗಳ ತರ ಬಿಟ್ಟಿಲ್ಲ. ನಾವು ಆತನಿಗೋಸ್ಕರ ತುಂಬ ತ್ಯಾಗಗಳನ್ನ ಮಾಡಿರಬಹುದು. ಆದ್ರೆ ಅವನ್ನ ಯೆಹೋವ ಕೊಡಲಿರೋ ಆಶೀರ್ವಾದಗಳಿಗೆ ಹೋಲಿಸಿದ್ರೆ ಅವು ಏನೇನೂ ಅಲ್ಲ ಅನ್ನೋದನ್ನ ಮನಸ್ಸಲ್ಲಿಡಿ. ನೆಸ್ಟರ್‌ ಮತ್ತು ಮರಿಯನೂ ಇದನ್ನ ಅರ್ಥಮಾಡಿಕೊಂಡರು. —ಯೆಶಾ. 65:21, 22.

9. ನೆಸ್ಟರ್‌ ಮತ್ತು ಮರಿಯ ಅವರಿಂದ ನಾವೇನು ಕಲಿಬಹುದು?

9 ನೆಸ್ಟರ್‌ ಮತ್ತು ಮರಿಯ ಕೊಲಂಬಿಯಾದಲ್ಲಿದ್ದಾಗ ಅವರಿಗೆ ಸ್ವಂತ ಮನೆಯಿತ್ತು, ಕೈತುಂಬ ಸಂಬಳ ಸಿಗೋ ಕೆಲಸನೂ ಇತ್ತು. “ಆದ್ರೆ ಸೇವೆನ ಜಾಸ್ತಿ ಮಾಡೋಕೋಸ್ಕರ ನಾವು ಜೀವನದಲ್ಲಿ ಕೆಲವು ಬದಲಾವಣೆಗಳನ್ನ ಮಾಡಿಕೊಳ್ಳಬೇಕು ಅಂತ ಅಂದುಕೊಂಡ್ವಿ. ಆದ್ರೆ ಕಮ್ಮಿ ದುಡ್ಡಲ್ಲಿ ಜೀವನ ಮಾಡೋಕಾಗುತ್ತಾ, ಖುಷಿಯಾಗಿರೋಕೆ ಆಗುತ್ತಾ ಅನ್ನೋ ಭಯನೂ ಇತ್ತು” ಅಂತ ಅವರು ಹೇಳ್ತಾರೆ. ಆ ಭಯನ ಹೊಡೆದು ಓಡಿಸೋಕೆ ಅವರಿಗೆ ಯಾವುದು ಸಹಾಯಮಾಡ್ತು? ಈ ಮುಂಚೆ ಯೆಹೋವ ಅವರಿಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ, ಪ್ರೀತಿ ತೋರಿಸಿದ್ದಾನೆ ಅನ್ನೋದನ್ನ ಅವರು ನೆನಪಿಸಿಕೊಂಡ್ರು. ಇನ್ಮುಂದೆನೂ ಯೆಹೋವ ತಮ್ಮನ್ನ ಚೆನ್ನಾಗಿ ನೋಡಿಕೊಳ್ತಾನೆ ಅಂತ ಅವರು ನಂಬಿದರು. ಅದಕ್ಕೆ ಅವರು ಕೆಲಸ ಬಿಟ್ರು ಮತ್ತು ಮನೆಯನ್ನ ಮಾರಿದ್ರು ಮತ್ತು ಸಿಹಿಸುದ್ದಿ ಸಾರೋಕೆ ಹೆಚ್ಚಿನ ಪ್ರಚಾರಕರ ಅಗತ್ಯ ಇರೋ ಕಡೆ ಹೋದ್ರು. ತಾವು ಮಾಡಿದ ನಿರ್ಧಾರದ ಬಗ್ಗೆ ನೆಸ್ಟರ್‌ ಏನು ಹೇಳ್ತಾರೆ ಅಂದ್ರೆ, “ಮತ್ತಾಯ 6:33ರಲ್ಲಿರೋ ಮಾತು ನಮ್ಮ ಜೀವನದಲ್ಲಿ ನಿಜ ಆಯ್ತು. ಯೆಹೋವ ನಮ್ಮನ್ನ ಯಾವ ಕೊರತೆನೂ ಇಲ್ಲದ ಹಾಗೆ ನೋಡಿಕೊಂಡಿದ್ದಾನೆ. ನಾವು ಈಗ ತುಂಬ ಖುಷಿಯಾಗಿದ್ದೀವಿ.”

ಮನುಷ್ಯನ ಭಯ

10. ಜನರಲ್ಲಿ ಮನುಷ್ಯನ ಭಯ ಯಾಕಿದೆ?

10 ಇತಿಹಾಸದ ಪುಟಗಳನ್ನ ತೆರೆದು ನೋಡಿದ್ರೆ ಮನುಷ್ಯರು ಒಳ್ಳೇ ಕೆಲಸಗಳಿಗಿಂತ ಕೆಟ್ಟ ಕೆಲಸಗಳನ್ನೇ ಜಾಸ್ತಿ ಮಾಡಿದ್ದಾರೆ. (ಪ್ರಸಂ. 8:9) ಉದಾಹರಣೆಗೆ, ಅಧಿಕಾರಿಗಳು ತಮ್ಮ ಅಧಿಕಾರನ ದುರುಪಯೋಗಿಸ್ತಾ ಇದ್ದಾರೆ. ಕೆಟ್ಟವರು ಮಾಡೋ ಅಪರಾಧಗಳು ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾ ಇದೆ. ಶಾಲೆಗಳಲ್ಲಿ ಮಕ್ಕಳು ರಾಗಿಂಗ್‌ ಮಾಡ್ತಾರೆ, ಹೊಡೆದಾಡುತ್ತಾರೆ. ಕೆಲವು ಜನರು ಸ್ವಂತ ಮನೆಯವರ ಜೊತೆನೇ ಕ್ರೂರವಾಗಿ ನಡಕೊಳ್ತಾ ಇದ್ದಾರೆ. ಹಾಗಾಗಿ ಮನುಷ್ಯ ಮನುಷ್ಯನನ್ನ ನೋಡಿ ಭಯಪಡಬೇಕಾದ ಕಾಲ ಬಂದಿದೆ. ಮನುಷ್ಯರಿಗಿರೋ ಈ ಭಯನ ಸೈತಾನ ಅಸ್ತ್ರವಾಗಿ ಹೇಗೆ ಬಳಸಿಕೊಳ್ತಾ ಇದ್ದಾನೆ?

11-12. ಸೈತಾನ ಮನುಷ್ಯನ ಭಯ ಅನ್ನೋ ಅಸ್ತ್ರನ ನಮ್ಮ ವಿರುದ್ಧ ಹೇಗೆ ಬಳಸ್ತಾನೆ?

11 ಮನುಷ್ಯನ ಭಯನ ಸೈತಾನ ಅಸ್ತ್ರವಾಗಿಟ್ಟುಕೊಂಡು ಸಾರುವ ಕೆಲಸನ ನಿಲ್ಲಿಸೋಕೆ ಪ್ರಯತ್ನಿಸ್ತಿದ್ದಾನೆ. ಅವನ ಕೈಕೆಳಗಿರೋ ಸರ್ಕಾರಗಳು ಇವತ್ತು ಯೆಹೋವನ ಸಾಕ್ಷಿಗಳ ಕೆಲಸನ ಬ್ಯಾನ್‌ ಮಾಡಿವೆ ಮತ್ತು ಯೆಹೋವನ ಸಾಕ್ಷಿಗಳಿಗೆ ಹಿಂಸೆ ಕೊಡುತ್ತಿವೆ. (ಲೂಕ 21:12; ಪ್ರಕ. 2:10) ಅಷ್ಟೇ ಅಲ್ಲ, ತುಂಬ ಜನರು ಯೆಹೋವನ ಸಾಕ್ಷಿಗಳ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನ ಹಬ್ಬಿಸಿದ್ದಾರೆ. ಇಂಥ ಅಂತೆ-ಕಂತೆಗಳನ್ನ ನಂಬಿಕೊಂಡಿರೋ ಜನ ನಮ್ಮನ್ನ ನೋಡಿ ಅವಮಾನ ಮಾಡಬಹುದು, ನಮಗೆ ಹೊಡಿಬಹುದು (ಮತ್ತಾ. 10:36) ಆದ್ರೆ ಸೈತಾನ ಉಪಯೋಗಿಸ್ತಾ ಇರೋ ಈ ಕುತಂತ್ರಗಳು ಹೊಸದೇನಲ್ಲ. ಒಂದನೇ ಶತಮಾನದಲ್ಲೂ ಅವನು ಇಂಥ ಕುತಂತ್ರಗಳನ್ನ ಮಾಡಿದ್ದಾನೆ.—ಅ. ಕಾ. 5:27, 28, 40.

ಒಬ್ಬ ಸಹೋದರ ನೀಟಾಗಿ ಡ್ರೆಸ್‌ ಮಾಡಿಕೊಂಡು ಧೈರ್ಯವಾಗಿ ಸಭಾಕೂಟಕ್ಕೆ ಹೋಗ್ತಿದ್ದಾರೆ. ಮನೆ ಬಾಗಿಲ ಹತ್ರ ನಿಂತುಕೊಂಡು ಅವರ ಅಪ್ಪ ಅಮ್ಮ ಬೈತಿದ್ದಾರೆ.

ಕುಟುಂಬದವರು ವಿರೋಧಿಸಿದ್ರೂ ಯೆಹೋವ ಪ್ರೀತಿಸ್ತಾನೆ (ಪ್ಯಾರ 12-14 ನೋಡಿ)e

12 ಸೈತಾನ ನಮ್ಮನ್ನ ಹೆದರಿಸೋಕೆ ಸರ್ಕಾರಗಳನ್ನ ಮಾತ್ರ ಉಪಯೋಗಿಸುತ್ತಿಲ್ಲ, ಇನ್ನೂ ಒಂದು ಕುತಂತ್ರ ಮಾಡ್ತಾನೆ. ಕೆಲವರಿಗೆ ‘ನಾನು ಯೆಹೋವನ ಸಾಕ್ಷಿಯಾದ್ರೆ ಮನೆಯವರು ಏನು ಅಂದುಕೊಳ್ತಾರೋ’ ಅನ್ನೋ ಭಯ ಇದೆ. ‘ಹೊರಗಿನವರು ಎರಡು ಏಟು ಹೊಡೆದ್ರೂ ಪರವಾಗಿಲ್ಲ, ನಾನು ಸಹಿಸಿಕೊಳ್ತೀನಿ. ಆದ್ರೆ ನನ್ನ ಮನೆಯವರು ನನಗೆ ಏನಾದ್ರೂ ಅಂದ್ರೆ ಆ ನೋವನ್ನ ಸಹಿಸಿಕೊಳ್ಳೋಕಾಗಲ್ಲ’ ಅಂತ ಕೆಲವರು ನೆನಸುತ್ತಾರೆ. ನಿಜ, ನಮ್ಮ ಕುಟುಂಬದವರು ಮತ್ತು ಸಂಬಂಧಿಕರೆಲ್ಲಾ ಸತ್ಯಕ್ಕೆ ಬರಬೇಕು ಅನ್ನೋ ಆಸೆ ನಮ್ಮೆಲ್ಲರಿಗೂ ಇದೆ. ಆದ್ರೆ ಅವರು ಯೆಹೋವನ ಬಗ್ಗೆ, ನಮ್ಮ ಸಹೋದರ ಸಹೋದರಿಯರ ಬಗ್ಗೆ ತಪ್ಪಾಗಿ ಮಾತಾಡಿದಾಗ ಅಥವಾ ಅವರಿಗೆ ಅವಮಾನ ಮಾಡಿದಾಗ ನಮಗೆ ತುಂಬ ಬೇಜಾರಾಗುತ್ತೆ. ಆದ್ರೆ ಈ ರೀತಿ ವಿರೋಧಿಸುತ್ತಿದ್ದ ಎಷ್ಟೋ ಜನ ಸತ್ಯಕ್ಕೆ ಬಂದಿದ್ದಾರೆ. ಒಂದುವೇಳೆ ನಮ್ಮ ಮನೆಯವರೇ “ನಿನಗೂ ನಮಗೂ ಇನ್ನುಮೇಲೆ ಯಾವ ಸಂಬಂಧನೂ ಇಲ್ಲ” ಅಂತ ಹೇಳಿಬಿಟ್ರೆ ಏನು ಮಾಡೋದು?

13. ಕುಟುಂಬದವರು ಕೈಬಿಟ್ಟರೂ ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ನಾವು ಯಾಕೆ ಹೇಳಬಹುದು? (ಕೀರ್ತನೆ 27:10)

13 ಕೀರ್ತನೆ 27:10 ಓದಿ. ಈ ವಚನವನ್ನ ಓದಿದ್ರೆ ನಮಗೆ ನೆಮ್ಮದಿ ಸಿಗುತ್ತೆ. ಅದರಲ್ಲಿ ಹೇಳಿರೋದು ನೂರಕ್ಕೆ ನೂರು ಸತ್ಯ. ನಮಗೆ ಎಷ್ಟೇ ವಿರೋಧಗಳು ಬಂದ್ರೂ ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ ಅನ್ನೋ ವಿಷಯನ ಮನಸ್ಸಲ್ಲಿಟ್ರೆ ನಮಗೆ ಧೈರ್ಯ ಸಿಗುತ್ತೆ. ಹೀಗೆ ನಾವು ಸಹಿಸಿಕೊಳ್ತಾ ಇದ್ರೆ ಯೆಹೋವ ನಮ್ಮನ್ನ ಆಶೀರ್ವದಿಸುತ್ತಾನೆ. ಯೆಹೋವ ದೇವರು ನಮ್ಮ ಜೀವನಕ್ಕೆ ಬೇಕಾಗಿರೋದನ್ನ ಕೊಡ್ತಾನೆ, ನಾವು ಖುಷಿಖುಷಿಯಾಗಿರೋಕೆ, ಆತನ ಫ್ರೆಂಡ್‌ ಆಗಿರೋಕೆ ಸಹಾಯ ಮಾಡ್ತಾನೆ. ಯೆಹೋವನ ತರ ನಮ್ಮನ್ನ ಚೆನ್ನಾಗಿ ನೋಡಿಕೊಳ್ಳೋಕೆ ಯಾರಿಂದಾನೂ ಆಗಲ್ಲ. ಸಹೋದರ ವಿಲಿಯಮ್‌ಗೂ ಹೀಗೇ ಅನಿಸಿತು.

14. ವಿಲಿಯಮ್‌ನ ಉದಾಹರಣೆಯಿಂದ ನೀವೇನು ಕಲಿತ್ರಿ?

14 ಹಿಂಸೆ ವಿರೋಧ ಬರುತ್ತೆ ಅಂತ ಗೊತ್ತಿದ್ರೂ ವಿಲಿಯಮ್‌ ಯೆಹೋವನ ಸಾಕ್ಷಿಯಾದ. ಯೆಹೋವ ತನ್ನನ್ನ ಪ್ರೀತಿಸ್ತಾನೆ ಅನ್ನೋ ನಂಬಿಕೆ ಅವನಿಗೆ ಇದ್ದಿದ್ರಿಂದ ಮನುಷ್ಯನ ಭಯನ ಅವನಿಂದ ಮೆಟ್ಟಿನಿಲ್ಲೋಕಾಯ್ತು. ಅವನು ಹೇಳೋದು: “ಹಿಂಸೆ ಬರುತ್ತೆ ಅಂತ ನನಗೆ ಗೊತ್ತಿತ್ತು. ಆದ್ರೆ ಇಷ್ಟರ ಮಟ್ಟಿಗೆ ಬರುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಸರ್ಕಾರದಿಂದ ಬರೋ ವಿರೋಧದ ಬಗ್ಗೆ ನಾನು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ನನ್ನ ಕುಟುಂಬದವರು ಏನು ಮಾಡ್ತಾರೆ ಅನ್ನೋದೇ ನನಗೆ ತುಂಬ ಭಯ ಆಗಿತ್ತು. ನಾನು ಯೆಹೋವನ ಸಾಕ್ಷಿಯಾದ್ರೆ ನಮ್ಮಪ್ಪ ಬೇಜಾರು ಮಾಡಿಕೊಳ್ತಾರೇನೋ ಅಥವಾ ಮನೆಯವರೆಲ್ಲ ನನ್ನನ್ನ ದ್ವೇಷಿಸ್ತಾರೇನೋ ಅಂತ ಹೆದರಿದ್ದೆ.” ಆದ್ರೆ ಯೆಹೋವ ದೇವರು ತನ್ನವರನ್ನ ಕಣ್ಮಣಿಗಳ ತರ ನೋಡಿಕೊಳ್ತಾನೆ ಅಂತ ಅವನಿಗೆ ಚೆನ್ನಾಗಿ ಗೊತ್ತಿದ್ರಿಂದ ವಿಲಿಯಮ್‌ ಹೀಗೆ ಹೇಳಿದ: “ಸಹೋದರರಿಗೆ ಹಣಕಾಸಿನ ತೊಂದರೆ ಇದ್ದಾಗ ಅಥವಾ ಜನ ಅವರನ್ನ ಕೀಳಾಗಿ ನೋಡಿದಾಗ, ಜನರ ಗುಂಪು ಅವರನ್ನ ಹಿಂಸಿಸಿದಾಗ ಯೆಹೋವ ಅವರಿಗೆ ಸಹಾಯ ಮಾಡಿದ್ದರ ಬಗ್ಗೆ ನಾನು ನೆನಪಿಸಿಕೊಂಡೆ. ಏನೇ ಆದರೂ ನಾನು ಯೆಹೋವನ ಜೊತೆ ಇದ್ರೆ ಆತನು ನನ್ನನ್ನ ಖಂಡಿತ ಆಶೀರ್ವದಿಸುತ್ತಾನೆ. ಪೊಲೀಸರು ತುಂಬ ಸಲ ನನ್ನನ್ನ ಬಂಧಿಸಿ ಹಿಂಸೆ ಕೊಟ್ಟಿದ್ದಾರೆ. ಆಗಲೂ ಯೆಹೋವ ನನಗೆ ತುಂಬ ಸಹಾಯ ಮಾಡಿದ್ದಾರೆ.” ವಿಲಿಯಮ್‌ಗೆ ಯೆಹೋವ ದೇವರೇ ತಂದೆಯಾಗಿದ್ದನು. ಸಹೋದರ ಸಹೋದರಿಯರೇ ಕುಟುಂಬದವರಾಗಿದ್ರು.

ಸಾವಿನ ಭಯ

15. ಸಾಮಾನ್ಯವಾಗಿ ನಾವು ಸಾವಿಗೆ ಯಾಕೆ ಹೆದರುತ್ತೀವಿ?

15 ಬೈಬಲ್‌ ಸಾವನ್ನ ಶತ್ರು ಅಂತ ಕರೆಯುತ್ತೆ. (1 ಕೊರಿಂ. 15:25, 26) ಸಾವಿನ ಬಗ್ಗೆ ನೆನಸಿಕೊಂಡ್ರೆನೇ ತುಂಬ ಭಯ ಆಗುತ್ತೆ. ಅದ್ರಲ್ಲೂ ನಮಗೆ ಮತ್ತು ನಮ್ಮ ಮನೆಯವರಿಗೆ ಹುಷಾರಿಲ್ಲದೆ ಇದ್ದಾಗ ಸಾವಿನ ಭಯ ಇನ್ನೂ ಕಾಡುತ್ತೆ. ನಾವು ಯಾಕೆ ಸಾವಿಗೆ ಇಷ್ಟು ಹೆದರುತ್ತೀವಿ? ಯಾಕಂದ್ರೆ ಶಾಶ್ವತವಾಗಿ ಜೀವಿಸೋ ಆಸೆ ಇಟ್ಟು ಯೆಹೋವ ನಮ್ಮನ್ನ ಸೃಷ್ಟಿಮಾಡಿದ್ದಾನೆ. (ಪ್ರಸಂ. 3:11) ನಮಗೆ ಸಾವಿನ ಭಯ ಇದ್ರೆ ಜೀವಕ್ಕೆ ಬೆಲೆ ಕೊಡ್ತೀವಿ. ಅದನ್ನ ಕಾಪಾಡಿಕೊಳ್ಳೋಕೆ ಪ್ರಯತ್ನ ಮಾಡ್ತೀವಿ. ಹಾಗಾಗಿ ನಾವು ಪೌಷ್ಟಿಕ ಆಹಾರ ತಿನ್ನುತ್ತೀವಿ, ವ್ಯಾಯಾಮ ಮಾಡ್ತೀವಿ, ಹುಷಾರಿಲ್ಲದೆ ಇದ್ದಾಗ ಡಾಕ್ಟರ್‌ ಹತ್ರ ಹೋಗ್ತೀವಿ, ಅವರು ಕೊಡೋ ಔಷಧಿ ತಗೋತೀವಿ. ನಮ್ಮ ಜೀವಕ್ಕೆ ಅಪಾಯ ತರೋ ಎಲ್ಲಾ ವಿಷಯಗಳಿಂದ ದೂರ ಇರ್ತೀವಿ.

16. ನಮಗೆ ಸಾವಿನ ಭಯ ಇರೋದ್ರಿಂದ ಸೈತಾನ ಏನು ಮಾಡ್ತಾನೆ?

16 ನಾವು ಜೀವಕ್ಕೆ ತುಂಬ ಬೆಲೆ ಕೊಡ್ತೀವಿ ಅಂತ ಸೈತಾನನಿಗೆ ಚೆನ್ನಾಗಿ ಗೊತ್ತು. ಅದನ್ನ ಕಾಪಾಡಿಕೊಳ್ಳೋಕೆ ನಾವು ಏನು ಬೇಕಾದ್ರೂ ತ್ಯಾಗ ಮಾಡ್ತೀವಿ, ಯೆಹೋವನ ಜೊತೆ ಇರೋ ಸ್ನೇಹನ ಬಿಟ್ಟುಕೊಡೋಕೂ ನಾವು ರೆಡಿ ಅಂತ ಅವನು ಅಂದುಕೊಂಡಿದ್ದಾನೆ. (ಯೋಬ 2:4, 5) ಆದ್ರೆ ಅದು ಶುದ್ಧ ಸುಳ್ಳು. ಜನರು ಸಾಮಾನ್ಯವಾಗಿ ಸಾವಿಗೆ ಹೆದರುತ್ತಾರೆ ಅಂತ ಸೈತಾನನಿಗೆ ಚೆನ್ನಾಗಿ ಗೊತ್ತು. ಅಷ್ಟೇ ಅಲ್ಲ, ಅವನಿಗೆ “ಸಾಯಿಸೋಕೆ ಶಕ್ತಿ” ಇದೆ. ಹಾಗಾಗಿ ಸಾವಿನ ಭಯನ ನಮ್ಮ ಮುಂದಿಟ್ಟು ಯೆಹೋವನಿಂದ ನಮ್ಮನ್ನ ದೂರಮಾಡೋಕೆ ಪ್ರಯತ್ನಿಸುತ್ತಾನೆ. (ಇಬ್ರಿ. 2:14, 15) ಉದಾಹರಣೆಗೆ, ಸೈತಾನನ ಕೈಗೊಂಬೆಯಾಗಿರೋ ಅಧಿಕಾರಿಗಳು ಯೆಹೋವನ ಸಾಕ್ಷಿಗಳಿಗೆ “ಸಾರೋದನ್ನ ನಿಲ್ಲಿಸದೆ ಇದ್ರೆ ಸಾಯಿಸಿಬಿಡ್ತೀವಿ” ಅಂತ ಜೀವಬೆದರಿಕೆ ಹಾಕೋ ತರ ಮಾಡಿದ್ದಾನೆ. ಇನ್ನೂ ಕೆಲವೊಮ್ಮೆ ನಮಗೆ ಏನಾದ್ರೂ ಕಾಯಿಲೆ ಬಂದು ಚಿಕಿತ್ಸೆ ತಗೊಳ್ಳೋ ಪರಿಸ್ಥಿತಿ ಬಂದಾಗ ಡಾಕ್ಟರ್‌ ಮತ್ತು ನಮ್ಮ ಸಂಬಂಧಿಕರು ರಕ್ತ ತಗೊಳ್ಳೋಕೆ ಹೇಳಬಹುದು. ಇನ್ನೂ ಕೆಲವರು, ಬೈಬಲ್‌ ಒಪ್ಪದೆ ಇರೋ ಬೇರೆ ಚಿಕಿತ್ಸೆ ಪಡಕೊಳ್ಳೋಕೆ ಒತ್ತಾಯ ಮಾಡಬಹುದು. ಹೀಗೆ ನಮ್ಮ ಜೀವ ಉಳಿಸಿಕೊಳ್ಳೋಕೆ ದೇವರ ನಿಯಮನ ಮುರಿದ್ರೂ ಪರವಾಗಿಲ್ಲ ಅಂತ ನಮಗೆ ಅನಿಸೋ ತರ ಸೈತಾನ ಮಾಡಿಬಿಡಬಹುದು.

17. ರೋಮನ್ನರಿಗೆ 8:37-39ರಲ್ಲಿ ಹೇಳೋ ಹಾಗೆ ನಾವ್ಯಾಕೆ ಸಾವಿಗೆ ಹೆದರೋ ಅವಶ್ಯಕತೆ ಇಲ್ಲ?

17 ನಮಗೆ ಯಾರಿಗೂ ಸಾಯೋಕೆ ಇಷ್ಟ ಇಲ್ಲ ನಿಜ. ಆದ್ರೆ ನಾವು ಸತ್ರೂ ಯೆಹೋವ ನಮ್ಮನ್ನ ಪ್ರೀತಿಸೋದನ್ನ ನಿಲ್ಲಿಸಲ್ಲ ಅಂತ ನಮಗೆ ಗೊತ್ತು. (ರೋಮನ್ನರಿಗೆ 8:37-39 ಓದಿ.) ಯಾಕಂದ್ರೆ ಆತನ ಸೇವಕರಲ್ಲಿ ಎಷ್ಟೋ ಜನ ಈಗಾಗಲೇ ತೀರಿಹೋಗಿದ್ರೂ ಆತನ ನೆನಪಲ್ಲಿ ಅವರು ಇನ್ನೂ ಜೀವಂತವಾಗಿದ್ದಾರೆ. (ಲೂಕ 20:37, 38) ಅವರಿಗೆಲ್ಲಾ ಮತ್ತೆ ಜೀವ ಕೊಡೋಕೆ ಆತನು ತುದಿಗಾಲಲ್ಲಿ ನಿಂತಿದ್ದಾನೆ. (ಯೋಬ 14:15) ನಾವು “ಶಾಶ್ವತ ಜೀವ ಪಡ್ಕೊಳ್ಳಬೇಕು” ಅಂತ ದೊಡ್ಡ ತ್ಯಾಗನೇ ಮಾಡಿದ್ದಾನೆ. (ಯೋಹಾ. 3:16) ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ, ನಮ್ಮ ಕಾಳಜಿ ವಹಿಸ್ತಾನೆ ಅಂತ ನಮಗೆ ಗೊತ್ತು. ಹಾಗಾಗಿ ನಮಗೆ ಕಷ್ಟ ಬಂದಾಗ ಅಥವಾ ಸಾಯೋ ಪರಿಸ್ಥಿತಿ ಬಂದಾಗ ಯೆಹೋವನನ್ನು ಬಿಟ್ಟುಹೋಗೋ ಬದಲು ಅದನ್ನ ಸಹಿಸಿಕೊಳ್ಳೋಕೆ ಶಕ್ತಿ ಕೊಡಪ್ಪಾ, ಸರಿಯಾದ ನಿರ್ಣಯ ಮಾಡೋಕೆ ವಿವೇಕ ಕೊಡಪ್ಪಾ ಅಂತ ಯೆಹೋವನ ಹತ್ರ ಕೇಳಿಕೊಳ್ಳಬೇಕು. ಅದನ್ನೇ ಸಹೋದರಿ ವನಿತಾ ಮತ್ತು ಅವರ ಗಂಡ ಮಾಡಿದ್ರು.—ಕೀರ್ತ. 41:3.

18. ವನಿತಾರವರ ಉದಾಹರಣೆಯಿಂದ ನೀವೇನು ಕಲಿತ್ರಿ?

18 ಸಹೋದರಿ ವನಿತಾಗೆ 35 ವರ್ಷ ಇದ್ದಾಗ ಕ್ಯಾನ್ಸರ್‌ ಇದೆ ಅಂತ ಗೊತ್ತಾಯ್ತು. ಯೆಹೋವನ ಮೇಲಿದ್ದ ಪ್ರೀತಿ ಅವರಿಗೆ ಸಾವಿನ ಭಯವನ್ನ ಮೆಟ್ಟಿನಿಲ್ಲೋಕೆ ಸಹಾಯಮಾಡ್ತು. “ನನಗೆ ಕ್ಯಾನ್ಸರ್‌ ಇದೆ ಅಂತ ಗೊತ್ತಾದಾಗ ಆಕಾಶನೇ ತಲೆಮೇಲೆ ಬಿದ್ದಹಾಗಾಯ್ತು. ನಮಗೆ ಏನು ಮಾಡಬೇಕು ಅಂತಾನೇ ಗೊತ್ತಾಗಲಿಲ್ಲ. ನಾವು ಡಾಕ್ಟರ್‌ ಹತ್ರ ಮಾತಾಡಿದಾಗ ಅವರು ಆಪರೇಷನ್‌ ಮಾಡಬೇಕು ಅಂತ ಹೇಳಿದ್ರು. ಆದ್ರೆ ಆಪರೇಷನ್‌ ಮಾಡುವಾಗ ರಕ್ತ ಕೊಡಬೇಕು ಅಂತಾನೂ ಹೇಳಿದ್ರು. ರಕ್ತ ಇಲ್ಲದೇ ಚಿಕಿತ್ಸೆ ಕೊಡಕ್ಕಾಗುತ್ತಾ ಅಂತ ನಾವು ಬೇರೆಬೇರೆ ಡಾಕ್ಟರ್‌ ಹತ್ರ ಕೇಳಿ ನೋಡಿದ್ವಿ. ಅವರು ಯಾರೂ ಒಪ್ಪಿಕೊಳ್ಳಲಿಲ್ಲ. ಆಗ ನನಗೆ ತುಂಬ ಭಯ ಆಯ್ತು. ದೇವರ ನಿಯಮನ ಮುರಿದು ರಕ್ತ ತಗೊಳ್ಳೋಕೆ ನನಗೆ ಮನಸ್ಸಾಗಲಿಲ್ಲ. ಯೆಹೋವ ನನ್ನನ್ನ ಇಷ್ಟರ ತನಕ ತುಂಬ ಚೆನ್ನಾಗಿ ನೋಡಿಕೊಂಡಿದ್ದಾನೆ, ನನಗೆ ಪ್ರೀತಿ ತೋರಿಸಿದ್ದಾನೆ. ಆದ್ರೆ ಈಗ, ನಾನು ಆತನನ್ನ ಎಷ್ಟು ಪ್ರೀತಿಸ್ತೀನಿ ಅಂತ ತೋರಿಸೋ ಅವಕಾಶ ನನಗೆ ಸಿಕ್ಕಿದೆ. ನನ್ನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಅಂತ ಡಾಕ್ಟರ್‌ ಹೇಳಿದಾಗೆಲ್ಲಾ ನಾನು ಯೆಹೋವನಿಗೆ ಹೆಮ್ಮೆ ಆಗೋ ತರ ನಡೆದುಕೊಳ್ಳಬೇಕು, ಸೈತಾನನನ್ನ ಗೆಲ್ಲೋಕೆ ಬಿಡಬಾರದು ಅನ್ನೋದೇ ನನ್ನ ಮನಸ್ಸಲ್ಲಿ ಓಡುತ್ತಿತ್ತು. ಕೊನೆಗೆ ರಕ್ತ ಇಲ್ಲದೇ ಆಪರೇಷನ್‌ ನಡೀತು. ಏನೂ ತೊಂದರೆಯಾಗಲಿಲ್ಲ. ಚಿಕಿತ್ಸೆ ನಡೆದ ಮೇಲೂ ಕೆಲವು ಆರೋಗ್ಯ ಸಮಸ್ಯೆಗಳು ಬಂದವು. ಆದ್ರೆ ಯೆಹೋವ ನನ್ನನ್ನ ಚೆನ್ನಾಗಿ ನೋಡಿಕೊಂಡನು. ನನಗೆ ಇನ್ನೂ ಚೆನ್ನಾಗಿ ನೆನಪಿದೆ, ಕ್ಯಾನ್ಸರ್‌ ಕಾಯಿಲೆ ಇದೆ ಅಂತ ಗೊತ್ತಾಗೋಕೆ ಒಂದು ವಾರ ಮುಂಚೆ “ಧೃತಿಗೆಡದೆ ಸಂಕಷ್ಟಗಳನ್ನು ನಿಭಾಯಿಸಿ” ಅನ್ನೋ ಲೇಖನನ ನಾವು ಕೂಟದಲ್ಲಿ ಚರ್ಚೆಮಾಡಿದ್ವಿ.c ಈ ಲೇಖನ ನಮಗೆ ಸರಿಯಾದ ಸಮಯಕ್ಕೆ ಧೈರ್ಯ ಕೊಡ್ತು. ಅದನ್ನ ನಾವು ಆಗಾಗ ಓದುತ್ತಾ ಇದ್ವಿ. ಇಂಥ ಲೇಖನಗಳನ್ನ ಓದಿದ್ರಿಂದ ಮತ್ತು ಕೂಟಗಳಿಗೆ ತಪ್ಪದೇ ಹೋಗ್ತಾ ಇದ್ದಿದ್ರಿಂದ ಮತ್ತು ಸಿಹಿಸುದ್ದಿಯನ್ನ ಸಾರುತ್ತಾ ಇದ್ದಿದ್ರಿಂದ ನಮಗೆ ಬೇಕಾದ ಧೈರ್ಯ ಸಿಕ್ತು. ಇದ್ರಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳೋಕೆ ಸಹಾಯ ಆಯ್ತು.

ಭಯವನ್ನ ಹೊಡೆದೋಡಿಸಿ

19. ಆದಷ್ಟು ಬೇಗ ಏನಾಗುತ್ತೆ?

19 ಯೆಹೋವನ ಸಹಾಯದಿಂದ ಆತನ ಜನರು ಸೈತಾನನನ್ನ ಸೋಲಿಸಿದ್ದಾರೆ. ನಿಮ್ಮಿಂದಾನೂ ಅವನನ್ನ ಸೋಲಿಸೋಕೆ ಆಗುತ್ತೆ. (1 ಪೇತ್ರ 5:8, 9) ಆದಷ್ಟು ಬೇಗ ಯೆಹೋವ ದೇವರು ಯೇಸುಗೆ ಮತ್ತು ಆತನ ಜೊತೆ ಆಳೋ ರಾಜರಿಗೆ, ‘ಸೈತಾನ ಹಾಳುಮಾಡಿರೋ ಕೆಲಸಗಳನ್ನ ಸರಿ ಮಾಡೋಕೆ’ ಹೇಳ್ತಾನೆ. (1 ಯೋಹಾ. 3:8) ಅದಾದ ಮೇಲೆ ಯೆಹೋವನ ಜನರು ಈ ಭೂಮಿ ಮೇಲೆ ‘ಯಾವ ಭಯ, ಹೆದರಿಕೆನೂ ಇಲ್ಲದೇ’ ಆತನ ಸೇವೆ ಮಾಡಬಹುದು. (ಯೆಶಾ. 54:14; ಮೀಕ 4:4) ಆದ್ರೆ ಅಲ್ಲಿ ತನಕ ನಾವು ನಮ್ಮಲ್ಲಿರೋ ಭಯವನ್ನ ಹೊಡೆದೋಡಿಸೋಕೆ ತುಂಬ ಪ್ರಯತ್ನ ಹಾಕಬೇಕು.

20. ಭಯನ ಮೆಟ್ಟಿನಿಲ್ಲೋಕೆ ಯಾವುದು ನಮಗೆ ಸಹಾಯ ಮಾಡುತ್ತೆ?

20 ಯೆಹೋವ ನಮ್ಮನ್ನ ಪ್ರೀತಿಸ್ತಾನೆ, ನಮ್ಮನ್ನ ಕಾಪಾಡ್ತಾನೆ ಅಂತ ನಾವು ನಂಬಬೇಕು. ಅದಕ್ಕೆ ಯೆಹೋವ ಈ ಮುಂಚೆ ತನ್ನ ಸೇವಕರನ್ನ ಹೇಗೆಲ್ಲಾ ಕಾಪಾಡಿದ್ದಾನೆ ಅನ್ನೋದರ ಬಗ್ಗೆ ಯೋಚಿಸಬೇಕು ಮತ್ತು ಅದರ ಬಗ್ಗೆ ಸಹೋದರ ಸಹೋದರಿಯರ ಹತ್ರ ಮಾತಾಡಬೇಕು. ಅಷ್ಟೇ ಅಲ್ಲ, ನಾವು ಕಷ್ಟದಲ್ಲಿದ್ದಾಗ ಯೆಹೋವ ನಮಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅಂತ ನಾವು ನೆನಪಿಸಿಕೊಳ್ಳಬೇಕು. ಯೆಹೋವನ ಸಹಾಯ ಇದ್ರೆ ನಾವು ಯಾವುದಕ್ಕೂ ಹೆದರಲ್ಲ. ಆಗ ನಾವು ಭಯ ನಮ್ಮನ್ನ ಸೋಲಿಸೋಕೆ ಬಿಡಲ್ಲ, ನಾವೇ ಅದನ್ನ ಸೋಲಿಸ್ತೀವಿ.—ಕೀರ್ತ. 34:4.

ಯೆಹೋವನ ಮೇಲಿರೋ ಪ್ರೀತಿ ಈ ಭಯವನ್ನ ಮೆಟ್ಟಿನಿಲ್ಲೋಕೆ ಹೇಗೆ ಸಹಾಯ ಮಾಡುತ್ತೆ?

  • ಕುಟುಂಬವನ್ನ ಚೆನ್ನಾಗಿ ನೋಡಿಕೊಳ್ತೀನಾ ಅನ್ನೋ ಭಯ

  • ಮನುಷ್ಯನ ಭಯ

  • ಸಾವಿನ ಭಯ

ಗೀತೆ 154 ತಾಳಿಕೊಳ್ಳುತ್ತಾ ಇರೋಣ

a ಭಯ ಇದ್ರೆ ನಾವು ಅಪಾಯದಿಂದ ದೂರ ಇರ್ತೀವಿ. ಹಾಗಂತ ನಾವು ಎಲ್ಲದಕ್ಕೂ ಭಯಪಡಬಾರದು. ಯಾಕಂದ್ರೆ ಈ ಭಯದಿಂದ ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನ ಮಾಡೋ ಹಾಗೆ ಸೈತಾನ ಮಾಡಿಬಿಡ್ತಾನೆ. ಹಾಗಾಗಿ ಆ ಭಯನ ಮೆಟ್ಟಿನಿಲ್ಲೋಕೆ ನಾವು ತುಂಬ ಪ್ರಯತ್ನ ಮಾಡಬೇಕು.ಯೆಹೋವ ನಮ್ಮ ಜೊತೆ ಇದ್ದಾನೆ, ನಮ್ಮನ್ನ ಪ್ರೀತಿಸ್ತಾನೆ ಅಂತ ನಾವು ಅರ್ಥಮಾಡಿಕೊಂಡ್ರೆ ಭಯನ ಹೊಡೆದು ಓಡಿಸೋಕೆ ಆಗುತ್ತೆ. ಇದನ್ನೇ ನಾವು ಈ ಲೇಖನದಲ್ಲಿ ನೋಡೋಣ ಬನ್ನಿ.

b ಕೆಲವರ ಹೆಸರು ಬದಲಾಗಿದೆ.

c ಅಕ್ಟೋಬರ್‌ 15, 2012ರ ಕಾವಲಿನಬುರುಜುವಿನ ಪುಟ 7-11 ನೋಡಿ.

d ಚಿತ್ರ ವಿವರಣೆ: ಒಬ್ಬ ದಂಪತಿ ಅವರ ಸಭೆಯಲ್ಲಿರೋ ಒಬ್ಬ ಸಹೋದರಿ ಮತ್ತು ಅವರ ಮಗಳಿಗೆ ಊಟ ತಂದುಕೊಡ್ತಿದ್ದಾರೆ.

e ಚಿತ್ರ ವಿವರಣೆ: ಅಪ್ಪ-ಅಮ್ಮ ವಿರೋಧಿಸಿದ್ರೂ ಯೆಹೋವ ತನಗೆ ಸಹಾಯ ಮಾಡ್ತಾನೆ ಅಂತ ಒಬ್ಬ ಸಹೋದರ ನಂಬಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ