ನಿಮ್ಮ ಮಕ್ಕಳು ಸಿದ್ಧರಾಗಿದ್ದಾರಾ?
1. ಶಾಲೆಗೆ ಹೋಗುವ ಮಕ್ಕಳು ಯಾವುದಕ್ಕಾಗಿ ಸಿದ್ಧರಾಗಿರಬೇಕು?
1 ಇನ್ನೇನು ರಜೆ ಮುಗಿದು ಶಾಲೆ ಆರಂಭವಾಗಲಿದೆ. ನಿಮ್ಮ ಮಕ್ಕಳು ಈ ವರ್ಷವೂ ಹೊಸ ಸವಾಲುಗಳನ್ನು, ಒತ್ತಡಗಳನ್ನು ಎದುರಿಸುವರು. ಅಲ್ಲದೆ ಸತ್ಯದ ಕುರಿತು ಸಾಕ್ಷಿಕೊಡುವ ಹೊಸ ಅವಕಾಶಗಳು ಸಹ ಅವರಿಗೆ ಸಿಗುವವು. (ಯೋಹಾ. 18:37) ಇದೆಲ್ಲದಕ್ಕೆ ಅವರು ಸಿದ್ಧರಾಗಿದ್ದಾರಾ?
2. ಮಕ್ಕಳು ಸಿದ್ಧರಾಗಿರಬೇಕಾದರೆ ಅವರಿಗೆ ಏನೆಲ್ಲಾ ತಿಳಿದಿರಬೇಕು?
2 ಯಾವ್ಯಾವ ಚಟುವಟಿಕೆಗಳು ದೇಶಭಕ್ತಿಗೆ ಮತ್ತು ಧಾರ್ಮಿಕ ಹಬ್ಬಗಳಿಗೆ ಸಂಬಂಧಿಸಿದೆ ಎಂದು ನಿಮ್ಮ ಮಕ್ಕಳು ಸ್ಪಷ್ಟವಾಗಿ ಗ್ರಹಿಸಿದ್ದಾರಾ? ಅವುಗಳಲ್ಲಿ ಭಾಗವಹಿಸುವುದು ಏಕೆ ತಪ್ಪೆಂದು ಅವರಿಗೆ ತಿಳಿದಿದೆಯಾ? ಉನ್ನತ ಶಿಕ್ಷಣ, ಡೇಟಿಂಗ್, ಮದ್ಯಪಾನ ಇಲ್ಲವೆ ಡ್ರಗ್ಸ್ ಬಳಕೆ ಮಾಡುವಂತೆ ಬರುವ ಒತ್ತಡ ಎದುರಿಸಲು ಅವರು ಸನ್ನದ್ಧರಾಗಿದ್ದಾರಾ? ಕ್ರೈಸ್ತರಿಗೆ ಆಕ್ಷೇಪಾರ್ಹವಾದ ವಿಷಯಗಳ ಬಗ್ಗೆ ಅವರನ್ನು ಯಾರಾದರೂ ಪ್ರಶ್ನಿಸಿದಾಗ ‘ನಾವು ಯೆಹೋವನ ಸಾಕ್ಷಿಗಳು ಅದನ್ನು ಮಾಡುವುದಿಲ್ಲ’ ಎಂದು ಮಾತ್ರ ಹೇಳುವರಾ? ಅಥವಾ ತಮ್ಮ ನಂಬಿಕೆಗಳ ಬಗ್ಗೆ ವಿವರಿಸುವುದು ಹೇಗೆಂದು ಅವರಿಗೆ ಗೊತ್ತಾ?—1 ಪೇತ್ರ 3:15.
3. ತಮ್ಮ ಮಕ್ಕಳನ್ನು ಅಣಿಗೊಳಿಸಲು ಹೆತ್ತವರು ಕುಟುಂಬ ಆರಾಧನಾ ಸಂಜೆಯನ್ನು ಹೇಗೆ ಬಳಸಬಹುದು?
3 ಕುಟುಂಬ ಆರಾಧನಾ ಸಂಜೆ ಬಳಸಿ: ಶೈಕ್ಷಣಿಕ ವರ್ಷದಾದ್ಯಂತ ಮಕ್ಕಳು ಸಮಸ್ಯೆಗಳನ್ನು ಎದುರಿಸುವಾಗೆಲ್ಲ ನೀವವರಿಗೆ ಸಹಾಯಮಾಡುತ್ತೀರಿ ನಿಜ. ಆದರೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಶಾಲೆ ಆರಂಭವಾಗುವ ಮುನ್ನವೇ ಚರ್ಚಿಸಿ ಅವರನ್ನು ಸಿದ್ಧಗೊಳಿಸಿದರೆ ಅವರಲ್ಲಿ ಆತ್ಮವಿಶ್ವಾಸ ಮೂಡುವುದು. ಹೀಗೆ ಮಾಡಲು ಕುಟುಂಬ ಆರಾಧನಾ ಸಂಜೆ ಬಳಸಿ. ಶಾಲೆ ಶುರುವಾಗುವುದನ್ನು ಯೋಚಿಸುವಾಗ ಯಾವ ಚಿಂತೆ ನಿಮ್ಮನ್ನು ಕಾಡುತ್ತದೆ ಎಂದು ಮಕ್ಕಳನ್ನು ಕೇಳಿ. ಹಿಂದಿನ ವರ್ಷಗಳಲ್ಲಿ ನೀವು ಚರ್ಚಿಸಿದ ವಿಷಯಗಳನ್ನು ಪುನಃ ಅವರ ನೆನಪಿಗೆ ತನ್ನಿ. (ಕೀರ್ತ. 78:5) ಈಗ ಅವರು ಇನ್ನೂ ದೊಡ್ಡವರಾಗಿರುವ ಕಾರಣ ವಿಷಯವನ್ನು ಹೆಚ್ಚು ಉತ್ತಮವಾಗಿ ಗ್ರಹಿಸಬಲ್ಲರು. ಪ್ರ್ಯಾಕ್ಟಿಸ್ ಸೆಷನ್ಗಳನ್ನೂ ಮಾಡಿ, ಅದರಲ್ಲಿ ನೀವು ಶಿಕ್ಷಕ, ಕೌನ್ಸಲರ್ ಇಲ್ಲವೆ ಸಹಪಾಠಿಯಂತೆ ನಟಿಸಿ. ಪ್ರಶ್ನೆಗಳಿಗೆ ಬೈಬಲಿನಿಂದ ಹೇಗೆ ಉತ್ತರಿಸುವುದು ಎಂದು ಕಲಿಸಿ. ಚರ್ಚೆಗಾಗಿ ಬೈಬಲ್ ವಿಷಯಗಳು ಪುಸ್ತಿಕೆ, ಯುವ ಜನರ ಪ್ರಶ್ನೆಗಳು ಪುಸ್ತಕ ಮತ್ತು ಎಚ್ಚರ! ಪತ್ರಿಕೆಯಲ್ಲಿನ ಯುವಜನರ ಪ್ರಶ್ನೆ ಲೇಖನಗಳನ್ನು ಹೇಗೆ ಬಳಸಬಹುದೆಂದು ಕಲಿಸಿ. ಓರ್ವ ತಾಯಿ ಹೀಗೆ ಪ್ರ್ಯಾಕ್ಟಿಸ್ ಸೆಷನ್ ಮಾಡಿ, ಮಕ್ಕಳು ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ತಮ್ಮ ಹೊಸ ಶಿಕ್ಷಕರಿಗೆ ತಾವು ಯೆಹೋವನ ಸಾಕ್ಷಿಗಳೆಂದು ಹೇಳುವುದು ಹೇಗೆ ಎನ್ನುವುದನ್ನು ಕಲಿಸುತ್ತಿದ್ದಳು.—2010 ಡಿಸೆಂಬರ್ 15ರ ಕಾವಲಿನಬುರುಜು ಪುಟ 3-5 ಓದಿ.
4. ಜಾಣ ಹೆತ್ತವರು ಏನು ಮಾಡುವರು?
4 ಈ ಕಡೇ ದಿವಸಗಳಲ್ಲಿ “ನಿಭಾಯಿಸಲು ಕಷ್ಟಕರವಾದ” ಸವಾಲುಗಳನ್ನು ಕ್ರೈಸ್ತ ಮಕ್ಕಳು ಎದುರಿಸುತ್ತಿದ್ದಾರೆ. (2 ತಿಮೊ. 3:1) ಹಾಗಾಗಿ ಯಾವ್ಯಾವ ಸಮಸ್ಯೆ ಬರಬಹುದೆಂದು ಜಾಣ ಹೆತ್ತವರು ಮುಂಗಂಡು ಅವರನ್ನು ಅಣಿಗೊಳಿಸುವರು. (ಜ್ಞಾನೋ. 22:3) ಹೊಸ ಶೈಕ್ಷಣಿಕ ವರ್ಷ ಆರಂಭವಾಗುವ ಮುಂಚೆಯೇ ನಿಮ್ಮ ಮಕ್ಕಳನ್ನು ಸಿದ್ಧಗೊಳಿಸಲು ನಿಮ್ಮಿಂದಾದದ್ದೆಲ್ಲ ಮಾಡಿ.