ನಮ್ಮ ಪತ್ರಿಕೆಗಳು ಅನೇಕ ರೀತಿಯ ಜನರಿಗೆ ಹಿಡಿಸುವಂತೆ ರಚಿಸಲಾಗಿವೆ
1. ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ವರ್ಗ ಅಪೊಸ್ತಲ ಪೌಲನನ್ನು ಹೇಗೆ ಅನುಕರಿಸುತ್ತದೆ?
1 ಅಪೊಸ್ತಲ ಪೌಲನು ‘ಎಲ್ಲ ರೀತಿಯ ಜನರನ್ನು’ ಸಂಪಾದಿಸಲು ಸುವಾರ್ತೆಯನ್ನು ಅವರಿಗೆ ಹೊಂದಿಕೆಯಾಗುವ ರೀತಿಯಲ್ಲಿ ಪ್ರಸ್ತುತಪಡಿಸಿದನು. ಹಾಗೆಯೇ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ವರ್ಗವು ವಿಭಿನ್ನ ಹಿನ್ನೆಲೆ, ನಂಬಿಕೆಗಳ ಜನರಿಗೆ ಸುವಾರ್ತೆ ತಲಪಿಸಲಿಕ್ಕಾಗಿ ಪತ್ರಿಕೆಗಳನ್ನು ಬಳಸುತ್ತದೆ. (1 ಕೊರಿಂ. 9:22, 23) ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಸದುಪಯೋಗ ಮಾಡಬೇಕಾದರೆ ಈ ಪತ್ರಿಕೆಗಳನ್ನು ಯಾರಿಗಾಗಿ ಬರೆಯಲಾಗಿದೆ ಎಂಬದನ್ನು ಮನಸ್ಸಿನಲ್ಲಿಡುವುದು ಒಳ್ಳೇದು.
2. ಎಚ್ಚರ! ಪತ್ರಿಕೆಯನ್ನು ಯಾರಿಗಾಗಿ ರಚಿಸಲಾಗಿದೆ?
2 ಎಚ್ಚರ!: ಅಪೊಸ್ತಲ ಪೌಲನು ಯಾರನ್ನು “ಅಥೆನ್ಸಿನ ಜನರೇ” ಎಂದು ಸಂಬೋಧಿಸಿ ಮಾತಾಡಿದನೊ ಅದೇ ರೀತಿಯ ಜನರಿಗೆ ಸುವಾರ್ತೆ ತಲಪಿಸುವುದು ಈ ಪತ್ರಿಕೆಯ ಗುರಿ. (ಅ. ಕಾ. 17:22) ಆ ಜನರಿಗೆ ಕ್ರೈಸ್ತತ್ವದ ಬಗ್ಗೆ ಗೊತ್ತಿರಲಿಲ್ಲ. ಅವರಿಗೆ ಶಾಸ್ತ್ರವಚನಗಳ ಬಗ್ಗೆ ಸ್ವಲ್ಪವೇ ತಿಳಿದಿತ್ತು. ಹಾಗೆಯೇ, ಬೈಬಲ್ ಬಗ್ಗೆ ಅಲ್ಪಸ್ವಲ್ಪ ತಿಳಿದಿರುವ ಇಲ್ಲವೆ ಏನೂ ತಿಳಿದಿರದ ಜನರಿಗಾಗಿ ಎಚ್ಚರ! ಪತ್ರಿಕೆಯನ್ನು ರಚಿಸಲಾಗಿದೆ. ಅವರಿಗೆ ಕ್ರೈಸ್ತ ಬೋಧನೆಗಳ ಬಗ್ಗೆ ಏನೂ ತಿಳಿದಿರಲಿಕ್ಕಿಲ್ಲ. ಧರ್ಮದ ಮೇಲೆ ಅಷ್ಟೇನೂ ನಂಬಿಕೆ ಇರಲಿಕ್ಕಿಲ್ಲ. ಅಥವಾ ಬೈಬಲಿನ ಪ್ರಾಯೋಗಿಕ ಮೌಲ್ಯದ ಬಗ್ಗೆ ಏನೂ ಗೊತ್ತಿರಲಿಕ್ಕಿಲ್ಲ. ಎಚ್ಚರ! ಪತ್ರಿಕೆಯ ಮುಖ್ಯ ಉದ್ದೇಶವು, ಸತ್ಯ ದೇವರು ಇದ್ದಾನೆಂದು ಓದುಗನಿಗೆ ಮನದಟ್ಟು ಮಾಡಿಸುವುದೇ ಆಗಿದೆ. ಬೈಬಲಿನಲ್ಲಿ ನಂಬಿಕೆಯನ್ನು ಬೆಳೆಸುವುದು ಮತ್ತು ಯೆಹೋವನ ಸಾಕ್ಷಿಗಳು ಇತರ ಧಾರ್ಮಿಕ ಗುಂಪುಗಳಿಗಿಂತ ಭಿನ್ನರಾಗಿದ್ದಾರೆಂದು ಗ್ರಹಿಸಲು ಓದುಗರಿಗೆ ಸಹಾಯ ಮಾಡುವುದೂ ಈ ಪತ್ರಿಕೆಯ ಗುರಿಯಾಗಿದೆ.
3. ಕಾವಲಿನಬುರುಜುವಿನ ಸಾರ್ವಜನಿಕ ಹಾಗೂ ಅಧ್ಯಯನ ಆವೃತ್ತಿಗಳು ಯಾರಿಗಾಗಿ ಇವೆ?
3 ಕಾವಲಿನಬುರುಜು: ಈ ಪತ್ರಿಕೆಯ ಸಾರ್ವಜನಿಕ ಆವೃತ್ತಿಯನ್ನು ದೇವರನ್ನೂ ಬೈಬಲನ್ನೂ ಗೌರವಿಸುವವರಿಗಾಗಿ ತಯಾರಿಸಲಾಗಿದೆ. ಇವರಿಗೆ ಬೈಬಲಿನ ಬಗ್ಗೆ ಕೊಂಚ ತಿಳಿದಿದ್ದರೂ ಅದರ ಬೋಧನೆಗಳ ನಿಷ್ಕೃಷ್ಟ ತಿಳುವಳಿಕೆ ಇಲ್ಲ. ಪೌಲನು ಯಾರನ್ನು “ದೇವಭಯವುಳ್ಳ” ಜನರೆಂದು ಕರೆದನೊ ಅಂಥ ಜನರು ಅವರಾಗಿದ್ದಾರೆ. (ಅ. ಕಾ. 13:14-16) ಕಾವಲಿನಬುರುಜುವಿನ ಅಧ್ಯಯನ ಆವೃತ್ತಿಯನ್ನು ಮುಖ್ಯವಾಗಿ ಯೆಹೋವನ ಸಾಕ್ಷಿಗಳಿಗಾಗಿ ತಯಾರಿಸಲಾಗಿದೆ. ಪೌಲನು ತನ್ನ ಪತ್ರಗಳನ್ನು ಬರೆದದ್ದು ಶಾಸ್ತ್ರವಚನಗಳ ಪರಿಚಯ ಹಾಗೂ ಸತ್ಯದ ನಿಷ್ಕೃಷ್ಟ ಜ್ಞಾನವಿದ್ದವರಿಗಾಗಿ. (1 ಕೊರಿಂ. 1:1, 2) ಹಾಗೆಯೇ ಅಧ್ಯಯನ ಆವೃತ್ತಿಯ ಲೇಖನಗಳನ್ನು ನಮ್ಮ ಕೂಟಗಳಿಗೆ ಹಾಜರಾಗುತ್ತಿದ್ದು, ಸಾಕ್ಷಿಗಳು ಬಳಸುವಂಥ ಪದಗಳು ಹಾಗೂ ಅವರ ನಂಬಿಕೆಗಳ ತಿಳುವಳಿಕೆ ಇರುವವರಿಗಾಗಿ ಬರೆಯಲಾಗಿದೆ.
4. ನಾವು ಕ್ಷೇತ್ರದಲ್ಲಿ ಬಳಸುವ ಪತ್ರಿಕೆಗಳ ಒಳ್ಳೇ ಪರಿಚಯ ಮಾಡಿಕೊಳ್ಳಬೇಕು ಏಕೆ?
4 ಸಾಮಾನ್ಯವಾಗಿ ನಾವು ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಯನ್ನು ಜೊತೆಯಾಗಿ ನೀಡುತ್ತೇವಾದರೂ, ನಿರೂಪಣೆಯಲ್ಲಿ ಕೇವಲ ಒಂದು ಪತ್ರಿಕೆಯ ಬಗ್ಗೆ ಮಾತಾಡುತ್ತೇವೆ. ಹಾಗಾಗಿ ಈ ಎರಡೂ ಸಂಚಿಕೆಗಳ ಒಳ್ಳೇ ಪರಿಚಯ ಮಾಡಿಕೊಳ್ಳಿ. ಆಗ, ನೀವು ಭೇಟಿಯಾಗುವಂಥ ವ್ಯಕ್ತಿಗಳಿಗೆ ಯಾವ ವಿಷಯ ಹಿಡಿಸುವುದೊ ಆ ಬಗ್ಗೆ ಅವರೊಂದಿಗೆ ಮಾತಾಡಲು ಸನ್ನದ್ಧರಾಗಿರುವಿರಿ.