ನೀವು “ಮಕೆದೋನ್ಯಕ್ಕೆ” ಹೋಗಬಲ್ಲಿರೊ?
1. ಪೌಲನೂ ಅವನ ಸಂಗಡಿಗರೂ ಮಕೆದೋನ್ಯಕ್ಕೆ ಹೋದದ್ದೇಕೆ?
1 ಅಪೊಸ್ತಲ ಪೌಲನು ಕ್ರಿ.ಶ. 49ರಷ್ಟಕ್ಕೆ ತನ್ನ ಎರಡನೇ ಮಿಷನೆರಿ ಸಂಚಾರಕ್ಕಾಗಿ ಸಿರಿಯದ ಅಂತಿಯೋಕ್ಯದಿಂದ ಹೊರಟನು. ಅವನು ಏಷ್ಯಾ ಮೈನರ್ನ ಎಫೆಸ ಹಾಗೂ ಇತರ ಪಟ್ಟಣಗಳನ್ನು ಸಂದರ್ಶಿಸಬೇಕೆಂದಿದ್ದನು. ಆದರೆ ಅಲ್ಲಿಗೆ ಹೋಗುವ ಬದಲು “ಮಕೆದೋನ್ಯಕ್ಕೆ” ಹೋಗುವಂತೆ ಪವಿತ್ರಾತ್ಮ ಪ್ರೇರಿತ ದರ್ಶನವೊಂದರಲ್ಲಿ ಅವನಿಗೆ ಹೇಳಲಾಯಿತು. ಅವನೂ ಅವನ ಸಂಗಡಿಗರೂ ಆ ಆಮಂತ್ರಣಕ್ಕೆ ಸಂತೋಷದಿಂದ ಓಗೊಟ್ಟರು. ಹೀಗೆ ಆ ಪ್ರದೇಶದಲ್ಲಿ ಪ್ರಪ್ರಥಮ ಸಭೆಯನ್ನು ಸ್ಥಾಪಿಸುವ ಸುಯೋಗ ಅವರದ್ದಾಯಿತು. (ಅ. ಕಾ. 16:9, 10; 17:1, 2, 4) ಇಂದು, ಜಗದ್ವ್ಯಾಪಕ ಕ್ಷೇತ್ರದ ಕೆಲವೊಂದು ಭಾಗಗಳಲ್ಲಿ ಹೆಚ್ಚೆಚ್ಚು ಕೊಯ್ಲುಗಾರರ ಅಗತ್ಯವಿದೆ. (ಮತ್ತಾ. 9:37, 38) ನೀವು ಸಹಾಯ ಮಾಡಬಲ್ಲಿರೊ?
2. ಕೆಲವರು ಇನ್ನೊಂದು ಊರಿಗೆ ಸ್ಥಳಾಂತರಿಸುವುದರ ಬಗ್ಗೆ ಯಾಕೆ ಯೋಚಿಸಿಲ್ಲ?
2 ನಿಮಗೆ ಪೌಲನಂತೆ ಮಿಷನೆರಿಯಾಗಲು ಮನಸ್ಸಿದ್ದರೂ ಇನ್ನೊಂದು ಊರಿಗೆ ಸ್ಥಳಾಂತರಿಸುವುದರ ಬಗ್ಗೆ ನೀವು ಗಂಭೀರವಾಗಿ ಯೋಚಿಸಿರಲಿಕ್ಕಿಲ್ಲ. ಬಹುಶಃ ನಿಮ್ಮ ವಯಸ್ಸಿನ ಕಾರಣವೋ, ನೀವು ಅವಿವಾಹಿತ ಸಹೋದರಿ ಆಗಿರುವುದರಿಂದಲೊ, ನಿಮಗೆ ಚಿಕ್ಕ ಮಕ್ಕಳಿರುವ ಕಾರಣವೊ ಗಿಲ್ಯಡ್ ತರಬೇತಿ ಇಲ್ಲವೆ ಇನ್ನಿತರ ವಿಶೇಷ ರೀತಿಯ ತರಬೇತಿ ಪಡೆಯಲು ಸಾಧ್ಯವಿರಲಿಕ್ಕಿಲ್ಲ. ಇಲ್ಲವೆ ನಿಮಗೆ ಇನ್ನೊಂದು ಭಾಷೆ ಕಲಿಯಲು ಸಾಧ್ಯವಿಲ್ಲವೆಂದು ಅನಿಸುವುದರಿಂದ ಬೇರೆ ಊರಿಗೆ ಸ್ಥಳಾಂತರಿಸುವುದರ ಬಗ್ಗೆ ಯೋಚಿಸಿರಲಿಕ್ಕಿಲ್ಲ. ಇಲ್ಲವೆ, ನೀವು ಪರವೂರಿಗೆ ಕೆಲಸಕ್ಕಾಗಿ ವಲಸೆ ಹೋಗಿರುವುದರಿಂದ ವಾಪಸ್ ನಿಮ್ಮ ಊರಿಗೆ ಬರಲು ಹಿಂಜರಿಯುತ್ತಿರಬಹುದು. ಹೀಗಿದ್ದರೂ ಪ್ರಾರ್ಥನಾಪೂರ್ವಕವಾಗಿ ಇದರ ಬಗ್ಗೆ ಯೋಚಿಸುವಲ್ಲಿ, ಪ್ರಚಾರಕರ ಅಗತ್ಯವಿರುವ ಇನ್ನೊಂದು ಊರಿಗೆ ಸ್ಥಳಾಂತರಿಸಲು ಈ ಎಲ್ಲ ಕಾರಣಗಳು ನಿಮ್ಮನ್ನು ತಡೆಯಬೇಕಾಗಿಲ್ಲವೆಂದು ನಿಮಗೆ ತಿಳಿದುಬಂದೀತು.
3. ಇನ್ನೊಂದು ಊರಿನಲ್ಲಿ ಸಾರುವಾಗ ಯಶಸ್ವಿಗಳಾಗಬೇಕಾದರೆ ವಿಶೇಷ ತರಬೇತಿ ಇರಲೇಬೇಕೆಂದಿಲ್ಲ ಏಕೆ?
3 ವಿಶೇಷವಾದ ತರಬೇತಿ ಅವಶ್ಯವೊ? ಪೌಲನೂ ಅವನ ಸಂಗಡಿಗರೂ ಸೇವೆಯಲ್ಲಿ ಯಶಸ್ವಿಗಳಾದದ್ದು ಹೇಗೆ? ಅವರು ಯೆಹೋವನ ಮತ್ತು ಆತನ ಪವಿತ್ರಾತ್ಮದ ಮೇಲೆ ಆತುಕೊಂಡರು. (2 ಕೊರಿಂ. 3:1-5) ಆದ್ದರಿಂದ ನಿಮ್ಮ ಪರಿಸ್ಥಿತಿಗಳ ನಿಮಿತ್ತ ನಿಮಗೆ ವಿಶೇಷ ತರಬೇತಿ ಹೊಂದಲು ಸಾಧ್ಯವಿಲ್ಲದಿದ್ದರೂ ಇನ್ನೊಂದು ಊರಿಗೆ ಹೋಗಿ ಸಾರುವ ಕೆಲಸದಲ್ಲಿ ಖಂಡಿತ ಯಶಸ್ವಿಗಳಾಗಬಲ್ಲಿರಿ. ನೆನಪಿಡಿ, ನಿಮಗೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಹಾಗೂ ಸೇವಾ ಕೂಟದ ಮೂಲಕ ತರಬೇತಿ ಸಿಗುತ್ತಾ ಇದೆ. ಅಲ್ಲದೆ, ವಿಶೇಷ ತರಬೇತಿಯ ಒಂದು ಸ್ಕೂಲ್ಗೆ ಹೋಗುವ ಗುರಿ ನಿಮಗಿದ್ದರೆ, ಸೇವೆಮಾಡಲು ಇನ್ನೊಂದು ಊರಿಗೆ ಸ್ಥಳಾಂತರಿಸುವುದರಿಂದ ಸಿಗುವ ಅಮೂಲ್ಯವಾದ ಅನುಭವವು, ಮುಂದೆಂದಾದರೂ ಹೆಚ್ಚಿನ ತರಬೇತಿಗಾಗಿ ಕರೆಯಲಾಗುವಲ್ಲಿ ನಿಮಗೆ ಸಹಾಯಕಾರಿಯಾಗಿರುವುದು.
4. ಸಾರುವ ಕೆಲಸಕ್ಕಾಗಿ ಇನ್ನೊಂದು ಊರಿಗೆ ಸ್ಥಳಾಂತರಿಸಲು ಸಾಧ್ಯವಿಲ್ಲವೆಂದು ವೃದ್ಧರು ಯಾಕೆ ನೆನಸಬಾರದು?
4 ವೃದ್ಧರು: ಸಾಧಾರಣಮಟ್ಟಿಗೆ ಒಳ್ಳೇ ಆರೋಗ್ಯವಿದ್ದು ಆಧ್ಯಾತ್ಮಿಕವಾಗಿ ಪ್ರೌಢರಾಗಿರುವ ವೃದ್ಧರು ಸಹ, ಪ್ರಚಾರಕರ ಅಗತ್ಯವಿರುವಂಥ ಸ್ಥಳಗಳಲ್ಲಿ ತುಂಬ ಸಹಾಯಮಾಡಬಲ್ಲರು. ನೀವು ಐಹಿಕ ಕೆಲಸದಿಂದ ನಿವೃತ್ತರಾಗಿದ್ದೀರೊ? ಮಿತವಾದ ಪಿಂಚಣಿ ಪಡೆಯುತ್ತಿರುವವರು ಸಹ, ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯ ಖರ್ಚು ಸೇರಿದಂತೆ ಇತರ ಖರ್ಚುಗಳು ಸಹ ತುಂಬ ಕಡಿಮೆ ಆಗಿರುವ ಇನ್ನೊಂದು ಊರಿಗೆ ಸ್ಥಳಾಂತರಿಸಲು ಶಕ್ತರಾಗಿದ್ದಾರೆ.
5. ಪ್ರಚಾರಕರ ಅಗತ್ಯವಿದ್ದಲ್ಲಿಗೆ ಸ್ಥಳಾಂತರಿಸಿದ ಒಬ್ಬ ನಿವೃತ್ತ ಸಹೋದರನ ಅನುಭವ ತಿಳಿಸಿ.
5 ಆಂಗ್ಲ ಭಾಷೆಯ ದೇಶವೊಂದರಲ್ಲಿ ಹಿರಿಯರೂ ಪಯನೀಯರರೂ ಆದ ನಿವೃತ್ತ ಸಹೋದರರೊಬ್ಬರು, ಆಗ್ನೇಯ ಏಷ್ಯಾದ ಒಂದು ಜನಪ್ರಿಯ ಪ್ರವಾಸ ಕ್ಷೇತ್ರಕ್ಕೆ ಸ್ಥಳಾಂತರಿಸಿದರು. ಅವರ ಉದ್ದೇಶ ಅಲ್ಲಿನ, 9 ಪ್ರಚಾರಕರುಳ್ಳ ಆಂಗ್ಲ ಭಾಷಾ ಗುಂಪಿಗೆ ನೆರವಾಗುವುದೇ. ಈ ಗುಂಪು ಆ ಕ್ಷೇತ್ರದಲ್ಲಿ ವಾಸಿಸುತ್ತಿದ್ದ 30,000 ಆಂಗ್ಲರಿಗೆ ಸಾರಿತು. ಎರಡೇ ವರ್ಷಗಳಲ್ಲಿ ಕೂಟದ ಹಾಜರಿ 50ಕ್ಕೇರಿತು. ಆ ಸಹೋದರರು ಬರೆದದ್ದು: “ನಾನಿಲ್ಲಿಗೆ ಸ್ಥಳಾಂತರಿಸಿದ್ದರಿಂದ ಹಿಂದೆಂದೂ ಅನುಭವಿಸಿರದಷ್ಟು ಅದ್ಭುತವಾದ ಆಶೀರ್ವಾದಗಳನ್ನು ಆನಂದಿಸಿದ್ದೇನೆ. ಅವುಗಳಲ್ಲಿ ಸ್ವಲ್ಪವನ್ನು ಹೇಳೋಣವೆಂದರೂ ಸಮಯ ಸಾಲದು!”
6. ಸೌವಾರ್ತಿಕರ ಹೆಚ್ಚು ಅಗತ್ಯವಿದ್ದ ದೇಶಕ್ಕೆ ಸ್ಥಳಾಂತರಿಸಿದ ಅವಿವಾಹಿತ ಸಹೋದರಿಯೊಬ್ಬಳ ಅನುಭವ ತಿಳಿಸಿ.
6 ಅವಿವಾಹಿತ ಸಹೋದರಿಯರು: ಸೌವಾರ್ತಿಕರ ಹೆಚ್ಚು ಅಗತ್ಯವಿರುವ ಊರುಗಳಲ್ಲಿ ಸುವಾರ್ತೆಯನ್ನು ಹಬ್ಬಿಸಲು ಯೆಹೋವನು ಸಹೋದರಿಯರನ್ನು ಮಹತ್ತರವಾದ ರೀತಿಯಲ್ಲಿ ಬಳಸಿದ್ದಾನೆ. (ಕೀರ್ತ. 68:11) ಒಬ್ಬಾಕೆ ಯುವ ಅವಿವಾಹಿತ ಸಹೋದರಿಗೆ ವಿದೇಶವೊಂದರಲ್ಲಿ ತನ್ನ ಸೇವೆಯನ್ನು ಹೆಚ್ಚಿಸುವ ಗುರಿಯಿತ್ತು. ಆಕೆಯ ಹೆತ್ತವರಿಗಾದರೊ ಸಹಜವಾಗಿಯೇ ಆಕೆಯ ಸುರಕ್ಷತೆಯ ಬಗ್ಗೆ ಚಿಂತೆಯಿತ್ತು. ಆದ್ದರಿಂದ ರಾಜಕೀಯವಾಗಿ, ಆರ್ಥಿಕವಾಗಿ ಸ್ಥಿರವಾದ ಪರಿಸ್ಥಿತಿಗಳಿದ್ದ ದೇಶವೊಂದನ್ನು ಆಕೆ ಆಯ್ಕೆಮಾಡಿ, ಬ್ರಾಂಚ್ ಆಫೀಸಿಗೆ ಪತ್ರ ಬರೆದಳು. ಅಲ್ಲಿಂದ ಆಕೆಗೆ ಸಹಾಯಕಾರಿಯಾದ ನಿರ್ದಿಷ್ಟ ಮಾಹಿತಿ ಸಿಕ್ಕಿತು. ಆ ದೇಶದಲ್ಲಿ ಆಕೆ ಕಳೆದ ಆರು ವರ್ಷಗಳಲ್ಲಿ ಅನೇಕ ಆಶೀರ್ವಾದಗಳನ್ನು ಆನಂದಿಸಿದಳು. ಆಕೆ ಹೇಳುವುದು: “ಸ್ವದೇಶದಲ್ಲಿ ನನಗೆ ಬೈಬಲ್ ಅಧ್ಯಯನಗಳನ್ನು ನಡೆಸಲು ತೀರ ಕಡಿಮೆ ಅವಕಾಶಗಳಿರುತ್ತಿದ್ದವು. ಆದರೆ ಅಗತ್ಯ ಹೆಚ್ಚಿದ್ದ ದೇಶದಲ್ಲಿ ಸೇವೆಮಾಡಿದ್ದರಿಂದ ನನಗೆ ಹಲವಾರು ಅಧ್ಯಯನಗಳನ್ನು ನಡೆಸಲು ಮಾತ್ರವಲ್ಲ, ನನ್ನ ಬೋಧನಾ ಸಾಮರ್ಥ್ಯವನ್ನೂ ನಿಜವಾಗಿ ಹರಿತಗೊಳಿಸಲು ಸಾಧ್ಯವಾಯಿತು.”
7. ಇನ್ನೊಂದು ಊರಿಗೆ ಸ್ಥಳಾಂತರಿಸಿದ ಒಂದು ಕುಟುಂಬದ ಅನುಭವ ತಿಳಿಸಿ.
7 ಕುಟುಂಬಗಳು: ನಿಮಗೆ ಮಕ್ಕಳಿದ್ದಾರೆಂಬ ಮಾತ್ರಕ್ಕೆ, ಸಾರುವ ಕೆಲಸವನ್ನು ಹೆಚ್ಚಿಸಲಿಕ್ಕಾಗಿ ನೀವು ಬೇರೊಂದು ಊರಿಗೆ ಸ್ಥಳಾಂತರಿಸಸಾಧ್ಯವಿಲ್ಲ ಎಂದರ್ಥವೊ? 8 ಮತ್ತು 10 ವರ್ಷದ ಇಬ್ಬರು ಮಕ್ಕಳಿದ್ದ ಕುಟುಂಬ ಇದನ್ನು ಪ್ರಯತ್ನಿಸಿ ನೋಡಿತು. ತಾಯಿ ಆ ಅನುಭವದ ಬಗ್ಗೆ ಬರೆದದ್ದು: “ನಮ್ಮ ಮಕ್ಕಳನ್ನು ನಾವು ಇಲ್ಲಿ ಬೆಳೆಸಲು ಸಾಧ್ಯವಾದದ್ದಕ್ಕಾಗಿ ನಮಗೆ ತುಂಬ ಸಂತೋಷ. ಯಾಕೆಂದರೆ ಇಲ್ಲಿ ಅವರಿಗೆ ವಿಶೇಷ ಪಯನೀಯರರ ಹಾಗೂ ಮಿಷನೆರಿಗಳ ಸಹವಾಸ ಸಿಕ್ಕಿತು. ಸೌವಾರ್ತಿಕರ ಹೆಚ್ಚಿನ ಅಗತ್ಯವಿರುವ ದೇಶದಲ್ಲಿ ಸೇವೆಮಾಡಿದ್ದರಿಂದ ನಮ್ಮ ಬದುಕು ಹಸನಾಗಿದೆ.”
8. ಹೊಸ ಭಾಷೆ ಕಲಿಯದೇ ಇನ್ನೊಂದು ಸ್ಥಳದಲ್ಲಿ ಸೇವೆಮಾಡಲು ಸಾಧ್ಯವೊ? ವಿವರಿಸಿ.
8 ಭಾಷಾ ಸಮಸ್ಯೆಗಳು: ಹೊಸ ಭಾಷೆಯನ್ನು ಕಲಿಯಲು ನಿಮ್ಮಿಂದ ಸಾಧ್ಯವಿಲ್ಲ ಎಂಬ ಯೋಚನೆಯು ನಿಮ್ಮನ್ನು ಇನ್ನೊಂದು ಊರಿಗೆ ಸ್ಥಳಾಂತರಿಸುವುದರಿಂದ ತಡೆಯುತ್ತದೊ? ಹೆಚ್ಚು ರಾಜ್ಯ ಪ್ರಚಾರಕರ ಅಗತ್ಯವಿರುವ ಬೇರೆ ಸ್ಥಳಗಳಲ್ಲಿ ನಿಮ್ಮ ಭಾಷೆಯನ್ನಾಡುವ ಜನರಿರಬಹುದಲ್ಲಾ? ಆಂಗ್ಲ ದಂಪತಿಯೊಂದು ಸ್ಪ್ಯಾನಿಷ್ ಭಾಷೆಯ ಪ್ರದೇಶಕ್ಕೆ ಸ್ಥಳಾಂತರಿಸಿತು ಏಕೆಂದರೆ ಅಲ್ಲಿ ಗಣನೀಯ ಸಂಖ್ಯೆಯ ಆಂಗ್ಲ ವಲಸಿಗರು ವಾಸಿಸುತ್ತಿದ್ದರು. ಆಂಗ್ಲ ಸೌವಾರ್ತಿಕರ ಅಗತ್ಯವಿದ್ದ ಹಲವಾರು ಆಂಗ್ಲ ಸಭೆಗಳ ಕುರಿತ ಮಾಹಿತಿಯನ್ನು ಬ್ರಾಂಚ್ ಆಫೀಸ್ ಅವರಿಗೆ ಕಳುಹಿಸಿದಾಗ ಅವರು ಒಂದು ಸಭೆಯನ್ನು ಆಯ್ಕೆಮಾಡಿ ಎರಡು ಸಲ ಅಲ್ಲಿಗೆ ಭೇಟಿಯಿತ್ತರು. ಅವರು ಹಿಂದಿರುಗಿ ಬಂದು, ತಮ್ಮ ತಿಂಗಳ ಖರ್ಚುವೆಚ್ಚ ಕಡಿಮೆಮಾಡಿ, ಒಂದು ವರ್ಷದ ವರೆಗೆ ಹಣ ಉಳಿತಾಯ ಮಾಡಿದರು. ಅವರು ಸ್ಥಳಾಂತರಿಸಲು ಸಿದ್ಧರಾದಾಗ, ಅಲ್ಲಿನ ಸಹೋದರರು ಸೂಕ್ತ ಮನೆಯನ್ನು ಹುಡುಕಲು ಅವರಿಗೆ ಸಹಾಯಮಾಡಿದರು.
9, 10. ಸ್ವಂತ ಊರು ಬಿಟ್ಟು ಹೋದವರು ಯಾವುದರ ಬಗ್ಗೆ ಯೋಚಿಸಬಹುದು? ಏಕೆ?
9 ವಲಸಿಗರು: ನೀವು ಸ್ವದೇಶ ಬಿಟ್ಟು ಇನ್ನೊಂದು ದೇಶಕ್ಕೆ ಇಲ್ಲವೆ ನಿಮ್ಮ ದೇಶದೊಳಗೇ ಇನ್ನೊಂದು ಊರಿಗೆ ವಲಸೆಹೋಗಿದ್ದೀರೊ? ಬಹುಶಃ ಸತ್ಯ ಕಲಿಯುವ ಮುಂಚೆ ನೀವಲ್ಲಿಗೆ ಹೋಗಿದ್ದೀರಿ. ಆದರೆ ನಿಮ್ಮ ಸ್ವಂತ ಊರು ಇಲ್ಲವೇ ಹಳ್ಳಿಯಲ್ಲಿ ಕೊಯ್ಲುಗಾರರ ತುಂಬ ಅಗತ್ಯವಿರಬಹುದು. ಈ ಕೆಲಸದಲ್ಲಿ ನೆರವಾಗಲು ನೀವು ಅಲ್ಲಿಗೆ ವಾಪಸ್ ಹೋಗುವುದರ ಬಗ್ಗೆ ಯೋಚಿಸಬಲ್ಲಿರೊ? ಪರವೂರಿನಿಂದ ಬರುವವರಿಗಿಂತ ನಿಮಗೆ ಅಲ್ಲಿ ಕೆಲಸ ಹಾಗೂ ವಸತಿ ಸುಲಭವಾಗಿ ಸಿಗಬಹುದು. ನಿಮಗೆ ಸ್ಥಳೀಯ ಭಾಷೆಯೂ ಗೊತ್ತಿರಬಹುದು. ಅಷ್ಟುಮಾತ್ರವಲ್ಲ, ಅಲ್ಲಿನ ಜನರು ಹೊರಗಿನವರಿಗಿಂತ ತಮ್ಮದೇ ಊರಿನ ವ್ಯಕ್ತಿಯಾದ ನೀವು ಸಾರುವ ರಾಜ್ಯ ಸಂದೇಶಕ್ಕೆ ಹೆಚ್ಚು ಕಿವಿಗೊಡಬಹುದು.
10 ಅಲ್ಬೇನಿಯದಿಂದ ಇಟಲಿಗೆ ನಿರಾಶ್ರಿತನಾಗಿ ಹೋದ ಒಬ್ಬ ವ್ಯಕ್ತಿಗೆ ಅಲ್ಲಿ ಒಳ್ಳೇ ಉದ್ಯೋಗ ಸಿಕ್ಕಿತು. ಅವನು ಅಲ್ಬೇನಿಯದಲ್ಲಿದ್ದ ತನ್ನ ಕುಟುಂಬಕ್ಕೆ ಹಣ ಕಳುಹಿಸುತ್ತಿದ್ದನು. ಸತ್ಯಕ್ಕೆ ಬಂದ ನಂತರ ಅವನು, ಇಟಲಿಯ ಸ್ಪೆಷಲ್ ಪಯನೀಯರರ ಒಂದು ಗುಂಪಿಗೆ ಅಲ್ಬೇನಿಯನ್ ಭಾಷೆ ಕಲಿಸಲಾರಂಭಿಸಿದನು. ಏಕೆಂದರೆ ಈ ಪಯನೀಯರರು ಹೆಚ್ಚು ಸೌವಾರ್ತಿಕರ ಅಗತ್ಯವಿದ್ದ ಅಲ್ಬೇನಿಯಕ್ಕೆ ಸ್ಥಳಾಂತರಿಸಲಿದ್ದರು. ಆ ಸಹೋದರನು ಬರೆದದ್ದು: “ಇವರು ನಾನು ಬಿಟ್ಟುಬಂದಿದ್ದ ದೇಶಕ್ಕೆ ಹೋಗಲು ಹೊರಟಿದ್ದರು. ಅವರಿಗೆ ಅಲ್ಲಿಯ ಭಾಷೆ ಗೊತ್ತಿರದಿದ್ದರೂ ಹೋಗಲು ತವಕದಿಂದಿದ್ದರು. ನನ್ನ ಭಾಷೆಯೂ ಸಂಸ್ಕೃತಿಯೂ ಅಲ್ಬೇನಿಯನ್ ಆಗಿತ್ತು. ಹೀಗಿರುವಾಗ ನಾನಿಲ್ಲಿ ಇಟಲಿಯಲ್ಲಿದ್ದು ಏನು ಮಾಡುತ್ತಿದ್ದೇನೆ? ಎಂದು ಯೋಚಿಸಲಾರಂಭಿಸಿದೆ.” ಈ ಸಹೋದರನು ಸಾರುವ ಕೆಲಸದಲ್ಲಿ ನೆರವಾಗಲಿಕ್ಕಾಗಿ ಅಲ್ಬೇನಿಯಕ್ಕೆ ವಾಪಸ್ ಹೋದನು. ಅವನನ್ನುವುದು: “ಇಟಲಿಯಲ್ಲಿ ನನಗಿದ್ದ ಕೆಲಸ, ಸಿಗುತ್ತಿದ್ದ ಹಣ ಇವನ್ನೆಲ್ಲ ಬಿಟ್ಟುಬಂದದ್ದಕ್ಕೆ ನನಗೇನಾದರೂ ಬೇಸರವಿದೆಯೋ? ಸ್ವಲ್ಪವೂ ಇಲ್ಲ! ಅಲ್ಬೇನಿಯದಲ್ಲಿ ನನಗೆ ಸಿಕ್ಕಿದ್ದೇ ನಿಜವಾದ ಕೆಲಸ. ನಮ್ಮ ಬಳಿ ಇದ್ದದ್ದನ್ನೆಲ್ಲ ಬಳಸಿ ಯೆಹೋವನ ಸೇವೆ ಮಾಡುವುದೇ ಮುಖ್ಯವಾದ ಕೆಲಸ ಹಾಗೂ ಬಾಳುವ ಆನಂದ ತರುವ ಕೆಲಸವೆಂಬುದು ನನ್ನ ಅಭಿಪ್ರಾಯ.”
11, 12. ಪ್ರಚಾರಕರ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಲು ಯೋಚಿಸುವವರು ಏನು ಮಾಡಬೇಕು?
11 ನೀವೇನು ಮಾಡಬೇಕು? ಮಕೆದೋನ್ಯಕ್ಕೆ ಹೋಗುವ ಮುಂಚೆ ಪೌಲನೂ ಅವನ ಸಂಗಡಿಗರೂ ಪಶ್ಚಿಮ ದಿಕ್ಕಿಗೆ ಹೋಗಬೇಕೆಂದಿದ್ದರು. ಆದರೆ ಅವರನ್ನು “ಪವಿತ್ರಾತ್ಮವು ನಿಷೇಧಿಸಿದ್ದರಿಂದ” ಉತ್ತರ ದಿಕ್ಕಿನತ್ತ ಪ್ರಯಾಣಿಸಿದರು. (ಅ. ಕಾ. 16:6) ಅವರು ಬಿಥೂನ್ಯಕ್ಕೆ ಹತ್ತಿರಹತ್ತಿರ ಬಂದಾಗ ಯೇಸು ಅವರನ್ನು ತಡೆದನು. (ಅ. ಕಾ. 16:7) ಇಂದು ಕೂಡ ಯೇಸುವಿನ ಮುಖಾಂತರ ಯೆಹೋವನು ಸಾರುವ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದಾನೆ. (ಮತ್ತಾ. 28:20) ಆದ್ದರಿಂದ ನೀವು ಪ್ರಚಾರಕರ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಲು ಯೋಚಿಸುತ್ತಿರುವಲ್ಲಿ ಪ್ರಾರ್ಥನಾಪೂರ್ವಕವಾಗಿ ಯೆಹೋವನ ಮಾರ್ಗದರ್ಶನವನ್ನು ಪಡೆಯಿರಿ.—ಲೂಕ 14:28-30; ಯಾಕೋ. 1:5; “ನೀವು ಹೋಗಲಿಚ್ಛಿಸುವ ಊರಿನಲ್ಲಿ ಸೌವಾರ್ತಿಕರ ಅಗತ್ಯವಿದೆಯೊ ಎಂದು ತಿಳಿದುಕೊಳ್ಳುವುದು ಹೇಗೆ?” ಎಂಬ ಚೌಕ ನೋಡಿ.
12 ನಿಮ್ಮ ಹಿರಿಯರ ಹಾಗೂ ಇತರ ಪ್ರೌಢ ಕ್ರೈಸ್ತರ ಬಳಿ ಸಲಹೆ ಕೇಳಿ. (ಜ್ಞಾನೋ. 11:14; 15:22) ಹೆಚ್ಚಿನ ಸೌವಾರ್ತಿಕರ ಅಗತ್ಯವಿರುವ ಸ್ಥಳದಲ್ಲಿ ಸೇವೆಮಾಡುವುದರ ಬಗ್ಗೆ ನಮ್ಮ ಪ್ರಕಾಶನಗಳಲ್ಲಿರುವ ವಿಷಯವನ್ನು ಓದಿ. ಅಲ್ಲದೆ, ನೀವು ಹೋಗಬೇಕೆಂದಿರುವ ಸ್ಥಳದ ಕುರಿತು ಮಾಹಿತಿಯನ್ನು ಕಲೆಹಾಕಿ. ಅಲ್ಲಿಗೆ ಹೋಗಿಬನ್ನಿ. ಬರೇ ಕೆಲವೇ ದಿನಗಳಿಗಲ್ಲ ಬದಲಾಗಿ ಹೆಚ್ಚು ಸಮಯ ಅಲ್ಲಿ ಇದ್ದು ಬನ್ನಿ. ಬಳಿಕ ಅಲ್ಲಿಗೆ ಸ್ಥಳಾಂತರಿಸುವ ಪಕ್ಕಾ ನಿರ್ಣಯಮಾಡುವಲ್ಲಿ, ಹೆಚ್ಚಿನ ಮಾಹಿತಿಗಾಗಿ ಬ್ರಾಂಚ್ ಆಫೀಸಿಗೆ ಬರೆಯಿರಿ. ಆದರೆ ನಿಮ್ಮ ಪತ್ರವನ್ನು ನೇರವಾಗಿ ಬ್ರಾಂಚ್ ಆಫೀಸಿಗೆ ಕಳುಹಿಸುವ ಬದಲು ಮೊದಲು ಅದನ್ನು ನಿಮ್ಮ ಸಭೆಯ ಹಿರಿಯರಿಗೆ ಕೊಡಿ. ಅವರು ತಮ್ಮ ಹೇಳಿಕೆಗಳನ್ನು ಸೇರಿಸಿ ಬ್ರಾಂಚ್ಗೆ ಕಳುಹಿಸುವರು.—ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು, ಪುಟ 111-112.
13. ಬ್ರಾಂಚ್ ಆಫೀಸ್ ನಿಮಗೆ ಹೇಗೆ ಸಹಾಯ ಮಾಡುವುದು? ಆದರೆ ಯಾವ ಕೆಲಸಗಳನ್ನು ನೀವೇ ಮಾಡಬೇಕು?
13 ನಿಮಗೆ ನಿರ್ಣಯಗಳನ್ನು ಮಾಡಲು ನೆರವಾಗುವಂಥ ಮಾಹಿತಿಯನ್ನು ಬ್ರಾಂಚ್ ಆಫೀಸು ಕಳುಹಿಸುವುದು. ಆದರೆ ಆಫೀಸು ನಿಮಗಾಗಿ ಕಾನೂನು ಸಂಬಂಧಿತ ಫಾರ್ಮ್ಗಳನ್ನು/ಡಾಕ್ಯುಮೆಂಟ್ಗಳನ್ನು ಕೊಡಲು ಇಲ್ಲವೆ ಮನೆ ಹುಡುಕಿ ಕೊಡಲು ಸಾಧ್ಯವಿಲ್ಲ. ಇವೆಲ್ಲ, ಸ್ಥಳಾಂತರಿಸುವ ಮುಂಚೆ ನೀವೇ ಜಾಗರೂಕತೆಯಿಂದ ಪರಿಶೀಲಿಸಿ, ಮಾಡಬೇಕಾದ ವೈಯಕ್ತಿಕ ಕೆಲಸಗಳು. ಸ್ಥಳಾಂತರಿಸುವವರು ತಮ್ಮ ಸ್ವಂತ ಅಗತ್ಯಗಳನ್ನೂ ಕಾನೂನುರೀತ್ಯ ವಿಧಿವಿಧಾನಗಳನ್ನೂ ಪೂರೈಸಲು ಶಕ್ತರಾಗಿರಬೇಕು.—ಗಲಾ. 6:5.
14. ಸಾರುವ ಕೆಲಸಕ್ಕೆ ನಿರ್ಬಂಧವಿರುವ ದೇಶವನ್ನು ಸಂದರ್ಶಿಸಲು ಇಲ್ಲವೆ ಅಲ್ಲಿಗೆ ಸ್ಥಳಾಂತರಿಸಲು ಬಯಸುವಲ್ಲಿ ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು?
14 ಸಾರುವ ಕೆಲಸಕ್ಕೆ ನಿರ್ಬಂಧವಿರುವ ದೇಶಗಳು: ಕೆಲವೊಂದು ದೇಶಗಳಲ್ಲಿ ಸ್ಥಳೀಯ ಸಹೋದರ ಸಹೋದರಿಯರು ತಮ್ಮ ಆರಾಧನಾ ಚಟುವಟಿಕೆಗಳನ್ನು ತುಂಬ ಎಚ್ಚರವಹಿಸಿ ನಡೆಸಬೇಕಾಗುತ್ತದೆ. (ಮತ್ತಾ. 10:16) ಹಾಗಾಗಿ ಅಂಥ ದೇಶಗಳನ್ನು ಸಂದರ್ಶಿಸುವ ಇಲ್ಲವೆ ಅಲ್ಲಿಗೆ ಸ್ಥಳಾಂತರಿಸುವ ಪ್ರಚಾರಕರು ಅರಿವಿಲ್ಲದೆ, ನಮ್ಮ ಚಟುವಟಿಕೆಯ ಕಡೆಗೆ ಅನುಚಿತ ಗಮನ ಸೆಳೆದು ಹೀಗೆ ಸ್ಥಳೀಯ ಸಹೋದರರ ಸುರಕ್ಷತೆಯನ್ನು ಗಂಡಾಂತರಕ್ಕೆ ಒಡ್ಡಬಹುದು. ಆದ್ದರಿಂದ ನೀವು ಅಂಥ ದೇಶವೊಂದಕ್ಕೆ ಸ್ಥಳಾಂತರಿಸಲು ಯೋಚಿಸುತ್ತಿರುವಲ್ಲಿ ಯಾವುದೇ ಮುಂದಿನ ಹೆಜ್ಜೆ ತೆಗೆದುಕೊಳ್ಳುವ ಮುನ್ನ, ನಿಮ್ಮ ಸಭೆಯ ಹಿರಿಯರ ಮಂಡಳಿಯ ಮುಖಾಂತರ ನಿಮ್ಮ ದೇಶದ ಬ್ರಾಂಚ್ ಆಫೀಸಿಗೆ ದಯವಿಟ್ಟು ಆ ಬಗ್ಗೆ ಬರೆಯಿರಿ.
15. ಇನ್ನೊಂದೆಡೆಗೆ ಸ್ಥಳಾಂತರಿಸಲು ಸಾಧ್ಯವಿಲ್ಲದವರು ಹೇಗೆ ತಮ್ಮ ಶುಶ್ರೂಷೆಯನ್ನು ಹೆಚ್ಚಿಸಬಹುದು?
15 ನಿಮಗೆ ಸ್ಥಳಾಂತರಿಸಲು ಸಾಧ್ಯವಿಲ್ಲದಿದ್ದರೆ ಏನು? ನಿಮ್ಮ ಸನ್ನಿವೇಶದಿಂದಾಗಿ ನೀವು ದೂರದ ಊರಿಗೆ ಸ್ಥಳಾಂತರಿಸಲು ಸಾಧ್ಯವಿಲ್ಲದಿದ್ದರೆ ನಿರುತ್ಸಾಹಗೊಳ್ಳಬೇಡಿ. ನಿಮಗಾಗಿ ಬಹುಶಃ ಇನ್ನೊಂದು “ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರವು” ತೆರೆದಿದೆ. (1 ಕೊರಿಂ. 16:8, 9) ನೀವೀಗ ವಾಸಿಸುತ್ತಿರುವ ಸ್ಥಳದಿಂದ ಹೆಚ್ಚು ದೂರವಿಲ್ಲದ ಕ್ಷೇತ್ರಗಳ ಬಗ್ಗೆ ನಿಮ್ಮ ಸರ್ಕಿಟ್ ಮೇಲ್ವಿಚಾರಕರಿಗೆ ಗೊತ್ತಿರಬಹುದು. ಬಹುಶಃ ಹತ್ತಿರದ ಒಂದು ಸಭೆಗೊ ಗುಂಪಿಗೊ ನೀವು ನೆರವು ನೀಡಬಲ್ಲಿರಿ. ಇಲ್ಲವೆ ನೀವೀಗ ಇರುವ ಸಭೆಯಲ್ಲೇ ನಿಮ್ಮ ಶುಶ್ರೂಷೆಯನ್ನು ಹೆಚ್ಚಿಸಬಲ್ಲಿರಿ. ನಿಮ್ಮ ಪರಿಸ್ಥಿತಿಗಳು ಏನೇ ಆಗಿರಲಿ ನಿಮ್ಮ ಆರಾಧನೆ ಪೂರ್ಣಪ್ರಾಣದ್ದಾಗಿರಬೇಕೆಂಬುದೇ ಪ್ರಾಮುಖ್ಯ ಸಂಗತಿ.—ಕೊಲೊ. 3:23.
16. ಹೆಚ್ಚಿನ ಸೌವಾರ್ತಿಕರ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಲು ಇಚ್ಛಿಸುವವರ ಕಡೆಗೆ ನಮ್ಮ ಮನೋಭಾವ ಏನಾಗಿರಬೇಕು?
16 ಹೆಚ್ಚಿನ ಸೌವಾರ್ತಿಕರ ಅಗತ್ಯವಿರುವ ಸ್ಥಳದಲ್ಲಿ ಸೇವೆಮಾಡುವ ಗುರಿಯುಳ್ಳ ಆಧ್ಯಾತ್ಮಿಕವಾಗಿ ಪ್ರೌಢ ಕ್ರೈಸ್ತರೊಬ್ಬರ ಪರಿಚಯ ನಿಮಗಿದೆಯೊ? ಹಾಗಿದ್ದರೆ ಅವರನ್ನು ಬೆಂಬಲಿಸಿ, ಪ್ರೋತ್ಸಾಹಿಸಿ! ಪೌಲನು ಸಿರಿಯದ ಅಂತಿಯೋಕ್ಯದಿಂದ ಹೊರಟಾಗ ಅದು ಆ ಕಾಲದಲ್ಲಿ ರೋಮನ್ ಸಾಮ್ರಾಜ್ಯದ ಮೂರನೇ (ಮೊದಲನೇದು ರೋಮ್, ಎರಡನೇದು ಅಲೆಕ್ಸಾಂಡ್ರಿಯ) ದೊಡ್ಡ ಪಟ್ಟಣವಾಗಿತ್ತು. ಹಾಗಾಗಿ ಅಂತಿಯೋಕ್ಯ ಸಭೆಗೆ ಒಂದು ದೊಡ್ಡ ಟೆರಿಟೊರಿಯಿತ್ತು. ಅವರಿಗೆ ಪೌಲನ ಸಹಾಯ ಖಂಡಿತ ಬೇಕಾಗಿತ್ತು. ಅವನು ಅಲ್ಲಿಂದ ಹೋದರೆ ಅವರಿಗೆ ದೊಡ್ಡ ನಷ್ಟವಾಗಲಿತ್ತು. ಹಾಗಿದ್ದರೂ ಆ ಸಹೋದರರು ಪೌಲನನ್ನು ತಡೆದರೆಂದು ಬೈಬಲಲ್ಲಿ ಎಲ್ಲಿಯೂ ಸೂಚಿಸಲಾಗಿಲ್ಲ. ಅವರು ಬರೇ ತಮ್ಮ ಕ್ಷೇತ್ರದ ಬಗ್ಗೆ ಯೋಚಿಸುವ ಬದಲು, “ಹೊಲವೆಂದರೆ ಈ ಲೋಕ” ಎಂಬ ಸಂಗತಿಯನ್ನು ನೆನಪಿನಲ್ಲಿಟ್ಟಿದ್ದರೆಂದು ತೋರುತ್ತದೆ.—ಮತ್ತಾ. 13:38.
17. “ಮಕೆದೋನ್ಯಕ್ಕೆ” ಹೋಗುವುದರ ಬಗ್ಗೆ ನೀವು ಯೋಚಿಸಲು ಯಾವ ಕಾರಣಗಳಿವೆ?
17 ಮಕೆದೋನ್ಯಕ್ಕೆ ಹೋಗುವಂತೆ ಕೊಡಲಾದ ಕರೆಗೆ ಓಗೊಟ್ಟದ್ದಕ್ಕಾಗಿ ಪೌಲನೂ ಅವನ ಸಂಗಡಿಗರೂ ಹೇರಳ ಆಶೀರ್ವಾದಗಳನ್ನು ಪಡೆದರು. ಮಕೆದೋನ್ಯದ ಫಿಲಿಪ್ಪಿ ಪಟ್ಟಣದಲ್ಲಿ ಲುದ್ಯ ಎಂಬಾಕೆಯನ್ನು ಭೇಟಿಯಾದರು. “ಪೌಲನು ಹೇಳುತ್ತಿದ್ದ ಮಾತುಗಳಿಗೆ ನಿಕಟವಾಗಿ ಗಮನಕೊಡುವಂತೆ ಯೆಹೋವನು ಅವಳ ಹೃದಯವನ್ನು ವಿಶಾಲವಾಗಿ ತೆರೆದನು.” (ಅ. ಕಾ. 16:14) ಲುದ್ಯ ಮತ್ತು ಆಕೆಯ ಮನೆಯವರೆಲ್ಲರೂ ದೀಕ್ಷಾಸ್ನಾನ ಹೊಂದಿದಾಗ ಪೌಲ ಮತ್ತವನ ಮಿಷನೆರಿ ಸಂಗಡಿಗರಿಗಾದ ಆನಂದವನ್ನು ಸ್ವಲ್ಪ ಊಹಿಸಿ! ಲುದ್ಯಳಂಥ ಸಹೃದಯದ ಜನರು ಅನೇಕ ಸ್ಥಳಗಳಲ್ಲಿದ್ದಾರೆ. ರಾಜ್ಯ ಸಂದೇಶವು ಈ ವರೆಗೂ ಅವರ ಕಿವಿಗೆ ಬಿದ್ದಿಲ್ಲ. “ಮಕೆದೋನ್ಯಕ್ಕೆ” ಹೋದರೆ ಅಂಥವರನ್ನು ಕಂಡುಹಿಡಿದು ಅವರಿಗೆ ನೆರವಾಗುವ ಆನಂದ ನಿಮ್ಮದಾಗಬಲ್ಲದು!
[ಪುಟ 5ರಲ್ಲಿರುವ ಚೌಕ]
ನೀವು ಹೋಗಲಿಚ್ಛಿಸುವ ಊರಿನಲ್ಲಿ ಸೌವಾರ್ತಿಕರ ಅಗತ್ಯವಿದೆಯೊ ಎಂದು ತಿಳಿದುಕೊಳ್ಳುವುದು ಹೇಗೆ?
• ನಿಮ್ಮ ಸಭಾ ಹಿರಿಯರನ್ನೂ ಸರ್ಕಿಟ್ ಮೇಲ್ವಿಚಾರಕರನ್ನೂ ಕೇಳಿನೋಡಿ.
• ಆ ಊರಿಗೆ ಭೇಟಿನೀಡಿರುವ ಇಲ್ಲವೆ ಅಲ್ಲಿ ವಾಸಿಸಿದ್ದ ಪ್ರಚಾರಕರೊಂದಿಗೆ ಮಾತಾಡಿ.
• ನಿಮ್ಮ ಮಾತೃಭಾಷೆಯಲ್ಲಿ ಸಾರಲು ಸಾಧ್ಯವಾಗುವಂಥ ಊರಿಗೆ ಹೋಗಲು ಯೋಚಿಸುತ್ತಿರುವಲ್ಲಿ, ನಿಮ್ಮ ಭಾಷೆಯನ್ನಾಡುವ ಎಷ್ಟು ಜನರು ಅಲ್ಲಿದ್ದಾರೆಂದು ತಿಳಿದುಕೊಳ್ಳಲು ಐಹಿಕ ಮೂಲಗಳನ್ನು (ಉದಾ: ಇಂಟರ್ನೆಟ್) ನೋಡಿ.