ದೇವರ ಮಾತನ್ನು ಆಲಿಸಲು ಜನರಿಗೆ ನೆರವಾಗಿ
1. ‘ದೇವರ ರಾಜ್ಯ ಬರಲಿ’ ಜಿಲ್ಲಾ ಅಧಿವೇಶನದಲ್ಲಿ ಯಾವೆರಡು ಕಿರುಹೊತ್ತಗೆಗಳನ್ನು ಬಿಡುಗಡೆ ಮಾಡಲಾಯಿತು? ಇವು ಯಾಕೆ ಉಪಯುಕ್ತ ಸಾಧನಗಳು?
1 ‘ದೇವರ ರಾಜ್ಯ ಬರಲಿ’ ಜಿಲ್ಲಾ ಅಧಿವೇಶನದಲ್ಲಿ ಎರಡು ಕಿರುಹೊತ್ತಗೆಗಳನ್ನು ಬಿಡುಗಡೆ ಮಾಡಲಾಯಿತು. ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಮತ್ತು ಅದರ ಸರಳೀಕೃತ ಆವೃತ್ತಿ ದೇವರ ಮಾತನ್ನು ಆಲಿಸಿ. ಇವುಗಳಲ್ಲಿ ಹೆಚ್ಚು ವಾಕ್ಯಗಳಿಲ್ಲದ ಕಾರಣ ಬೇಗನೆ, ಸುಲಭವಾಗಿ ಭಾಷಾಂತರ ಮಾಡಬಹುದು. ಹಾಗಾಗಿ ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಯ ಬಿಡುಗಡೆಗೆ ಮುನ್ನವೇ 431 ಭಾಷೆಗಳಲ್ಲಿ ಅದನ್ನು ಅನುವಾದಿಸಲು ಅನುಮತಿ ಕೊಡಲಾಯಿತು.
2. ಈ ಕಿರುಹೊತ್ತಗೆಗಳು ಯಾರಿಗೆ ಪ್ರಯೋಜನಕಾರಿ?
2 ಈ ಕಿರುಹೊತ್ತಗೆಗಳಿಂದ ಯಾರಿಗೆ ಪ್ರಯೋಜನವಾಗಲಿದೆ? ಪ್ರಪಂಚದೆಲ್ಲೆಡೆ ಸಾಮಾನ್ಯವಾಗಿ ಕಂಡುಬರುವ ಈ ಕೆಳಗಿನ ಸನ್ನಿವೇಶಗಳಲ್ಲಿ ಇವು ಬಹು ಉಪಯುಕ್ತ:
• ಮನೆಯವ ಅನಕ್ಷರಸ್ಥ ಅಥವಾ ಚೆನ್ನಾಗಿ ಓದಲು ಬಾರದವ ಎಂದು ಪ್ರಚಾರಕನಿಗೆ ಪ್ರಥಮ ಭೇಟಿ ಅಥವಾ ಪುನರ್ಭೇಟಿಯಲ್ಲಿ ಗೊತ್ತಾದಾಗ.
• ನಮ್ಮ ಕೆಲವೇ ಸಾಹಿತ್ಯಗಳಿರುವ ಅಥವಾ ಸಾಹಿತ್ಯಗಳೇ ಇಲ್ಲದ ಭಾಷೆಯ ವ್ಯಕ್ತಿಗೆ ಸಾರುವಾಗ. ಅಥವಾ ಸೇವಾಕ್ಷೇತ್ರದಲ್ಲಿ ಹೆಚ್ಚಿನ ಜನರಿಗೆ ಚೆನ್ನಾಗಿ ಮಾತಾಡಲು ಬರುವ ಭಾಷೆ ಓದಲು ಬಾರದಾಗ.
• ಕಿವುಡರಿಗೆ ಸನ್ನೆಭಾಷೆಯಲ್ಲಿ ಸುವಾರ್ತೆ ಸಾರುವಾಗ.
• ಇನ್ನೂ ಓದಲು ಕಲಿತಿರದ ತಮ್ಮ ಮಗುವಿಗೆ ಹೆತ್ತವರು ಸತ್ಯ ಕಲಿಸುವಾಗ.
3. ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಹೇಗೆ ವಿನ್ಯಾಸಿಸಲಾಗಿದೆ?
3 ಕಿರುಹೊತ್ತಗೆಗಳ ವಿನ್ಯಾಸ: ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯಲ್ಲಿ ಕಡಿಮೆ ವಾಕ್ಯಗಳಿವೆ. ಪ್ರತಿ ಪುಟದ ಕೆಳಬದಿಯಲ್ಲಿ ಸರಳವಾದ ಒಂದು ಇಲ್ಲವೇ ಎರಡು ವಾಕ್ಯ ಮತ್ತು ಬೈಬಲ್ ವಚನಗಳಿವೆ. ಅವು ಮುಖ್ಯ ಅಂಶಗಳನ್ನು ತಿಳಿಸುತ್ತವೆ. ಕಡಿಮೆ ವಾಕ್ಯಗಳನ್ನು ಕೊಟ್ಟ ಉದ್ದೇಶ? ಊಹಿಸಿ, ಯಾರೋ ನಿಮಗೆ ಗೊತ್ತಿರದ ಭಾಷೆಯ ಕಿರುಹೊತ್ತಗೆಯನ್ನು ಕೊಡುತ್ತಾರೆ. ಅದರಲ್ಲಿ ಸುಂದರ ಚಿತ್ರಗಳಿದ್ದರೂ ನಿಮಗದು ಪ್ರಯೋಜನ ತರುವುದೇ? ಇಲ್ಲ ಅಲ್ಲವೇ. ಹಾಗೇ ಓದಲು ಬಾರದ ಜನರಿಗೆ ಪದಗಳಿಂದ ತುಂಬಿದ ಸಾಹಿತ್ಯ ನೋಡಿದಾಕ್ಷಣ ಬೇಡವೆನಿಸುತ್ತದೆ. ಹಾಗಾಗಿಯೇ ಈ ಕಿರುಹೊತ್ತಗೆಯಲ್ಲಿ ವಾಕ್ಯಗಳು ಕಡಿಮೆ, ತುಂಬ ಯೋಚಿಸಿ ಬಿಡಿಸಿರುವ ಚಿತ್ರಗಳು ಹೆಚ್ಚು. ಯಾವುದರ ನಂತರ ಯಾವುದನ್ನು ಚರ್ಚಿಸಬೇಕೆಂದು ತಿಳಿಯಲು ಒಂದು ಚಿತ್ರದಿಂದ ಇನ್ನೊಂದಕ್ಕೆ ಬಾಣದ ಗುರುತು ಹಾಕಲಾಗಿದೆ.
4. ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಯನ್ನು ಹೇಗೆ ವಿನ್ಯಾಸಿಸಲಾಗಿದೆ?
4 ಎರಡೂ ಕಿರುಹೊತ್ತಗೆಗಳಲ್ಲಿನ ಚಿತ್ರಗಳು ಒಂದೇ ಆಗಿದ್ದರೂ ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಯನ್ನು ವಿನ್ಯಾಸಿಸಿರುವುದು ಅಷ್ಟಾಗಿ ಓದಲು ಬಾರದ ಇಲ್ಲವೆ ಓದಲು ಕಲಿಯುತ್ತಿರುವ ಜನರೊಂದಿಗೆ ಅಧ್ಯಯನ ಮಾಡಲೆಂದು. ಅಲ್ಲದೆ, ವಿದ್ಯಾರ್ಥಿಯ ಬಳಿ ಯಾವುದೇ ಕಿರುಹೊತ್ತಗೆ ಇದ್ದರೂ ಅಧ್ಯಯನ ನಡೆಸುವವರು ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಯನ್ನು ಬಳಸಬಹುದು. ಈ ಕಿರುಹೊತ್ತಗೆಯ ಪ್ರತಿ ಪಾಠ ಎರಡು ಪುಟಗಳನ್ನು ಆವರಿಸುತ್ತದೆ. ಎಡಬದಿಯ ಪುಟದ ಮೇಲ್ಭಾಗದಲ್ಲಿ ಒಂದು ಪ್ರಶ್ನೆ ಇದ್ದು, ಅದಕ್ಕೆ ಆ ಪಾಠದಲ್ಲಿ ಉತ್ತರವಿರುತ್ತದೆ. ಚಿತ್ರಗಳು, ಹೇಳಿಕೆಗಳು, ವಚನಗಳೂ ಇರುತ್ತವೆ. ಹೆಚ್ಚಿನ ಪುಟಗಳ ಕೆಳಭಾಗದ ಮೂಲೆಯಲ್ಲಿ ಇನ್ನಷ್ಟು ಅಂಶಗಳು, ವಚನಗಳು ಇರುವ ಚಿಕ್ಕ ಚೌಕವಿರುತ್ತದೆ. ವಿದ್ಯಾರ್ಥಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಅದನ್ನು ಚರ್ಚಿಸಬಹುದು.
5. ಈ ಕಿರುಹೊತ್ತಗೆಗಳನ್ನು ಯಾವಾಗ ಮತ್ತು ಹೇಗೆ ನೀಡಬಹುದು?
5 ಬಳಸುವ ವಿಧ: ಈ ಕಿರುಹೊತ್ತಗೆಗಳನ್ನು ತಿಂಗಳ ನೀಡುವಿಕೆಯಾಗಿರುವಾಗ ಮಾತ್ರ ನೀಡಬೇಕೆಂದಿಲ್ಲ. ಮನೆಮನೆ ಸೇವೆಗೆ ಹೋದಾಗ ಮನೆಯವರಿಗೆ ಇದು ಉಪಯುಕ್ತವೆಂದು ನಿಮಗನಿಸುವಲ್ಲಿ ನೀಡಬಹುದು. (“ಹೇಗೆ ನೀಡಬೇಕು?” ಚೌಕ ನೋಡಿ.) ಪುನರ್ಭೇಟಿಯಲ್ಲೂ ನೀಡಬಹುದು. ‘ನಿಮಗೋಸ್ಕರ ನಾನಿದನ್ನು ತಂದಿದ್ದೇನೆ’ ಎಂದು ಹೇಳಿ ಅದನ್ನು ಮನೆಯವರಿಗೆ ಕೊಡಬಹುದು.
6. ಈ ಕಿರುಹೊತ್ತಗೆಗಳನ್ನು ಬಳಸಿ ಹೇಗೆ ಬೈಬಲ್ ಅಧ್ಯಯನ ನಡೆಸಬಹುದು?
6 ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯಲ್ಲಿ ಚರ್ಚೆಗಾಗಿ ಪ್ರಶ್ನೆಗಳಿಲ್ಲ. ಹಾಗಾಗಿ ಬೈಬಲ್ ಬೋಧಿಸುತ್ತದೆ ಪುಸ್ತಕದಂತೆ ಪ್ರಶ್ನೋತ್ತರ ಚರ್ಚೆ ಮಾಡಲಾಗುವುದಿಲ್ಲ. ಎಲ್ಲ ಸಂಸ್ಕೃತಿಗಳಲ್ಲೂ ಜನರಿಗೆ ಕಥೆ ಕೇಳುವುದೆಂದರೆ ಬಲು ಇಷ್ಟ. ಆದಕಾರಣ ಚಿತ್ರಕ್ಕೆ ಸಂಬಂಧಿಸಿದ ಬೈಬಲ್ ಕಥೆಗಳನ್ನು ಹೇಳಿ. ಹೇಳುವಾಗ ಚಿತ್ರಗಳನ್ನು ತೋರಿಸಿ, ವಿವರಿಸಿ. ಉತ್ಸುಕರಾಗಿರಿ. ವಿದ್ಯಾರ್ಥಿ ತನ್ನ ಗಮನಕ್ಕೆ, ಮನಸ್ಸಿಗೆ ಬಂದದ್ದನ್ನು ತಿಳಿಸುವಂತೆಯೂ ಹೇಳಿ. ಪುಟಗಳ ಕೆಳಭಾಗದಲ್ಲಿನ ವಚನಗಳನ್ನು ಓದಿ, ಚರ್ಚಿಸಿ. ವಿದ್ಯಾರ್ಥಿಯನ್ನು ಚರ್ಚೆಯಲ್ಲಿ ಒಳಗೂಡಿಸಲು, ಅವರಿಗೆ ಅರ್ಥವಾಗಿದೆಯಾ ಎಂದು ತಿಳಿದುಕೊಳ್ಳಲು ಪ್ರಶ್ನೆಗಳನ್ನು ಕೇಳಿ. ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಯನ್ನು ವಿದ್ಯಾರ್ಥಿ ಬಳಸುತ್ತಿದ್ದರೆ ಪ್ರತಿ ಚಿತ್ರವನ್ನು ಚರ್ಚಿಸುತ್ತಿರುವಾಗ ಕೊಡಲಾದ ವಾಕ್ಯಗಳನ್ನು, ವಚನಗಳನ್ನು ಓದಿ.
7. ಪ್ರಗತಿಮಾಡಲು ನಮ್ಮ ಬೈಬಲ್ ವಿದ್ಯಾರ್ಥಿಗೆ ಹೇಗೆ ಸಹಾಯ ಮಾಡಬಲ್ಲೆವು?
7 ಪ್ರಗತಿಮಾಡಲು ವಿದ್ಯಾರ್ಥಿಗೆ ಸಹಾಯಮಾಡಿ: ನೀವು ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯಿಂದ ಅಧ್ಯಯನ ನಡೆಸುತ್ತಾ ಹೋದಂತೆ, ಯೆಹೋವನ ಬಗ್ಗೆ ಜ್ಞಾನ ಪಡೆಯಲಿಕ್ಕೆ ತಾನೇ ಓದಲು ಕಲಿಯಬೇಕೆಂಬ ಆಶೆ ವಿದ್ಯಾರ್ಥಿಯಲ್ಲಿ ಹುಟ್ಟಬಹುದು. (ಮತ್ತಾ. 5:3; ಯೋಹಾ. 17:3) ಆಗ ನೀವು ವಿದ್ಯಾರ್ಥಿಗೆ ಓದಲು ಕಲಿಸಬಹುದು. ಅಲ್ಲದೆ ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಗೆ ಅಧ್ಯಯನವನ್ನು ಬದಲಾಯಿಸಬಹುದು. ಈ ಎರಡರಲ್ಲಿ ಯಾವುದೇ ಕಿರುಹೊತ್ತಗೆಯನ್ನು ಬಳಸಿದರೂ ಅದು ಮುಗಿದಾಗ ವಿದ್ಯಾರ್ಥಿ ದೀಕ್ಷಾಸ್ನಾನ ಪಡೆಯಲು ಅರ್ಹನಾಗುವುದಿಲ್ಲ. ಹಾಗಾಗಿ ಬೈಬಲ್ ಬೋಧಿಸುತ್ತದೆ ಪುಸ್ತಕ ಅಥವಾ ಇನ್ಯಾವುದೇ ಸೂಕ್ತ ಪ್ರಕಾಶನದಿಂದ ಅಧ್ಯಯನ ನಡೆಸತಕ್ಕದ್ದು. ಇದರಿಂದ ವಿದ್ಯಾರ್ಥಿಗೆ ಇನ್ನೂ ಹೆಚ್ಚು ಜ್ಞಾನ ಪಡೆಯಲು ಸಾಧ್ಯವಾಗುವದು.
8. ಈ ಹೊಸ ಸಾಧನಗಳಿಗಾಗಿ ನಾವೇಕೆ ಕೃತಜ್ಞರಾಗಿರಬೇಕು?
8 ಸದಾಕಾಲ ಜೀವಿಸಬೇಕಾದರೆ ಜನರು ವಿಶ್ವದ ಪರಮಾಧಿಕಾರಿಯ ಮಾತನ್ನು ಆಲಿಸಬೇಕು. (ಯೆಶಾ. 55:3) “ಎಲ್ಲ ರೀತಿಯ ಜನರು,” ಓದು ಬಾರದ ವ್ಯಕ್ತಿಗಳು ಸಹ ದೇವರ ಮಾತನ್ನು ಆಲಿಸಲು ಕಲಿಯಬೇಕೆನ್ನುವುದು ದೇವರಿಚ್ಛೆ. (1 ತಿಮೊ. 2:3, 4) ಇದನ್ನು ಮಾಡಲು ಯೆಹೋವನು ಕೊಟ್ಟಿರುವ ಈ ಹೊಸ ಸಾಧನಗಳಿಗಾಗಿ ನಾವಾತನಿಗೆ ಕೃತಜ್ಞರು.
[ಪುಟ 3ರಲ್ಲಿರುವ ಚೌ]
ಹೇಗೆ ನೀಡಬೇಕು?
ಮನೆಯವರಿಗೆ 2ನೇ, 3ನೇ ಪುಟ ತೋರಿಸುತ್ತಾ ಹೀಗನ್ನಿ: “ಇಂಥಾ ಸುಂದರ ಲೋಕದಲ್ಲಿ ಜೀವಿಸಲು ನೀವು ಇಷ್ಟಪಡುತ್ತೀರಾ? [ಉತ್ತರಕ್ಕಾಗಿ ಕಾಯಿರಿ.] ದೇವರು ಬೇಗನೆ ಇಡೀ ಭೂಮಿಯನ್ನು ಈ ರೀತಿಯ ಸುಂದರ, ಶಾಂತಿನೆಮ್ಮದಿಯ ತಾಣವನ್ನಾಗಿ ಮಾಡುವನು ಮತ್ತು ಅಲ್ಲಿ ಬಡತನವಾಗಲಿ, ಅನಾರೋಗ್ಯವಾಗಲಿ ಇರುವುದಿಲ್ಲ ಎಂದು ಬೈಬಲ್ [ಅಥವಾ ಈ ಪವಿತ್ರ ಗ್ರಂಥ] ಮಾತು ಕೊಡುತ್ತದೆ. ಅದರಲ್ಲಿ ಜೀವಿಸಬೇಕಾದರೆ ಈಗ ನಾವೇನು ಮಾಡಬೇಕು ಅಂತ ಇಲ್ಲಿ ಹೇಳುತ್ತದೆ. [ಪುಟ 3ರಲ್ಲಿರುವ ಯೆಶಾಯ 55:3 ಓದಿ.] ನಾವು ದೇವರ ‘ಬಳಿ ಬರಬೇಕು,’ ಆತನ ಮಾತನ್ನು ‘ಆಲಿಸಬೇಕು’ ಎಂದು ಇಲ್ಲಿ ಹೇಳುತ್ತದೆ. ಆದರೆ ದೇವರ ಮಾತನ್ನು ಆಲಿಸುವುದಾದರೂ ಹೇಗೆ?” ಪುಟ 4, 5 ತೋರಿಸಿ ಅಲ್ಲಿ ಕೊಡಲಾದ ಉತ್ತರವನ್ನು ಚರ್ಚಿಸಿ. ಒಂದುವೇಳೆ ಮನೆಯವರಿಗೆ ಸಮಯವಿಲ್ಲದಿದ್ದಲ್ಲಿ ಕಿರುಹೊತ್ತಗೆಯನ್ನು ಅವರಿಗೇ ಕೊಟ್ಟು ಉತ್ತರವನ್ನು ಚರ್ಚಿಸಲಿಕ್ಕಾಗಿ ಪುನರ್ಭೇಟಿಯ ಏರ್ಪಾಡು ಮಾಡಿ.