ಕ್ಷೇತ್ರ ಸೇವಾ ಗುಂಪಿನಿಂದ ಪ್ರಯೋಜನ ಪಡೆಯಿರಿ
1. ಸಭಾ ಪುಸ್ತಕ ಅಧ್ಯಯನದಿಂದ ಸಿಗುತ್ತಿದ್ದ ಯಾವ ಪ್ರಯೋಜನಗಳು ಇಂದು ಸಹ ಲಭ್ಯವಿದೆ?
1 ಮೊದಲು ನಡೆಯುತ್ತಿದ್ದ ಸಭಾ ಪುಸ್ತಕ ಅಧ್ಯಯನದ ನೆನಪಿದೆಯಾ? ಆಗೆಲ್ಲಾ ಚಿಕ್ಕಚಿಕ್ಕ ಗುಂಪಾಗಿ ಕೂಡಿಬರುತ್ತಿದ್ದೆವು. ಎಲ್ಲರೊಂದಿಗೆ ಬೆರೆಯಲು, ಸ್ನೇಹ ಬೆಳೆಸಿಕೊಳ್ಳಲು ನೆರವಾಗುತ್ತಿತ್ತು. ಒಬ್ಬರನ್ನೊಬ್ಬರು ನಂಬಿಕೆಯಲ್ಲಿ ಬಲಪಡಿಸಲು ಸಾಧ್ಯವಾಗುತ್ತಿತ್ತು. (ಜ್ಞಾನೋ. 18:24) ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರು ಪ್ರತಿಯೊಬ್ಬರಲ್ಲಿ ಆಸಕ್ತಿ ವಹಿಸಿ ಉತ್ತೇಜನ ಕೊಡಲು ಸಾಧ್ಯವಾಗುತ್ತಿತ್ತು. (ಜ್ಞಾನೋ. 27:23; 1 ಪೇತ್ರ 5:2, 3) ಇಂಥ ಎಲ್ಲ ಪ್ರಯೋಜನಗಳು ಇಂದು ಕ್ಷೇತ್ರ ಸೇವಾ ಗುಂಪಿನಲ್ಲೂ ಲಭ್ಯವಿದೆ.
2. ಕ್ಷೇತ್ರಸೇವಾ ಗುಂಪಿನ ಸದಸ್ಯರೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ನಾವೇನು ಮಾಡಬಹುದು?
2 ಮೊದಲ ಹೆಜ್ಜೆ ತೆಗೆದುಕೊಳ್ಳಿ: ಪುಸ್ತಕ ಅಧ್ಯಯನ ಗುಂಪುಗಳಂತೆ ಕ್ಷೇತ್ರ ಸೇವಾ ಗುಂಪುಗಳೂ ಚಿಕ್ಕದಾಗಿವೆ. ಇತರರೊಂದಿಗೆ “ಒಂದಾಗಿ” ಸೇವೆಮಾಡುವಾಗ ಆಪ್ತ ಸ್ನೇಹ ಬೆಳೆಯುತ್ತೆ. (ಫಿಲಿ. 1: 27) ನಿಮ್ಮ ಸೇವಾ ಗುಂಪಿನಲ್ಲಿರುವ ಎಲ್ಲರೊಂದಿಗೆ ನೀವು ಸೇವೆ ಮಾಡಿದ್ದೀರಾ? ಇಲ್ಲವಾದರೆ ಮಾಡಲು ಇದೊಂದು ಒಳ್ಳೆ ಅವಕಾಶ. (2 ಕೊರಿಂ. 6:13) ಇದಲ್ಲದೆ, ನಿಮ್ಮ ಗುಂಪಿನಲ್ಲಿ ಯಾರನ್ನಾದರೂ ನೀವು ಕುಟುಂಬ ಆರಾಧನೆಯ ಸಂಜೆಗೆ ಅಥವಾ ಊಟಕ್ಕೆ ಕರೆಯಬಹುದು. ಕೆಲವು ಸಭೆಗಳಲ್ಲಿ ಸಂದರ್ಶಕ ಭಾಷಣಗಾರರಿಗೆ ಅತಿಥಿಸತ್ಕಾರ ತೋರಿಸಲು ಕ್ಷೇತ್ರಸೇವಾ ಗುಂಪುಗಳು ಸರದಿ ತೆಗೆದುಕೊಳ್ಳುತ್ತವೆ. ಒಂದುವೇಳೆ ಭಾಷಣಗಾರ ಊಟಕ್ಕೆ ಬರದಿದ್ದರೂ ಆ ಗುಂಪಿನ ಸದಸ್ಯರೆಲ್ಲರೂ ಒಟ್ಟುಸೇರಿ ಊಟದಲ್ಲಿ ಹಾಗೂ ಸಾಹಚರ್ಯದಲ್ಲಿ ಆನಂದಿಸುತ್ತಾರೆ.
3. ನಮ್ಮ ಕ್ಷೇತ್ರಸೇವಾ ಗುಂಪಿನಲ್ಲಿ ಹಿರಿಯರ ಪರಿಪಾಲನೆ ಹೇಗೆ ಸಿಗುತ್ತೆ?
3 ವಾರಕ್ಕೆ ಎರಡೇ ಬಾರಿ ಕೂಟಗಳು ನಡೆಯುತ್ತಿರುವುದರಿಂದ ನಮಗೆ ಹಿರಿಯರಿಂದ ಸಿಗುತ್ತಿರುವ ಪರಿಪಾಲನೆ ಕಮ್ಮಿಯಾಯಿತು ಅಂತ ಅರ್ಥನಾ? ಇಲ್ಲ. ಗುಂಪಿನ ಪ್ರತಿಯೊಬ್ಬರಿಗೆ ಪ್ರೋತ್ಸಾಹ ಮತ್ತು ಸುವಾರ್ತೆ ಸಾರಲು ತರಬೇತಿ ನೀಡುವಂತೆ ಗುಂಪು ಮೇಲ್ವಿಚಾರಕರನ್ನು ನೇಮಿಸಲಾಗಿದೆ. ನಿಮ್ಮ ಗುಂಪು ಮೇಲ್ವಿಚಾರಕ ಇಲ್ಲಿಯವರೆಗೆ ನಿಮ್ಮೊಂದಿಗೆ ಸೇವೆ ಮಾಡದಿದ್ದಲ್ಲಿ, ನೀವೇ ಹೋಗಿ ಯಾಕೆ ಅವರನ್ನು ಕೇಳಬಾರದು? ಇದಲ್ಲದೆ ಸೇವಾ ಮೇಲ್ವಿಚಾರಕ ಪ್ರತಿ ತಿಂಗಳ ವಾರಾಂತ್ಯದಲ್ಲಿ ಒಂದೊಂದು ಗುಂಪಿನೊಂದಿಗೆ ಸೇವೆಮಾಡುತ್ತಾರೆ. ಒಂದುವೇಳೆ ಸಭೆಯಲ್ಲಿ ಕಮ್ಮಿ ಕ್ಷೇತ್ರ ಸೇವಾ ಗುಂಪುಗಳಿರುವಲ್ಲಿ ಸೇವಾ ಮೇಲ್ವಿಚಾರಕ, ಪ್ರತಿ ಗುಂಪನ್ನು ವರ್ಷಕ್ಕೆ ಎರಡಾವರ್ತಿ ಭೇಟಿ ಮಾಡಬಹುದು. ಅವರು ನಿಮ್ಮ ಗುಂಪಿಗೆ ಭೇಟಿ ನೀಡುವಾಗ ಅವರೊಂದಿಗೆ ಸೇವೆ ಮಾಡಲು ಸಿದ್ಧತೆ ಮಾಡಿಕೊಳ್ಳುವಿರಾ?
4. (ಎ) ಕ್ಷೇತ್ರಸೇವಾ ಕೂಟಗಳನ್ನು ಹೇಗೆ ಸಂಘಟಿಸಲಾಗುತ್ತದೆ? (ಬಿ)ಕ್ಷೇತ್ರಸೇವಾ ಕೂಟಗಳಿಗಾಗಿ ನಮ್ಮ ಮನೆಯನ್ನು ಲಭ್ಯಗೊಳಿಸುವ ಬಗ್ಗೆ ನಾವೇಕೆ ಪರಿಗಣಿಸಬೇಕು?
4 ವಾರಾಂತ್ಯಗಳಲ್ಲಿ ಪ್ರತಿ ಸೇವಾ ಗುಂಪು ಪ್ರತ್ಯೇಕವಾಗಿ ಕೂಡಿಬರುವುದು ಹೆಚ್ಚಾಗಿ ಪ್ರಯೋಜನಕರ. ಪ್ರಚಾರಕರಿಗೆ ಕ್ಷೇತ್ರ ಸೇವಾಕೂಟಕ್ಕೆ ಹಾಜರಾಗಲು ಸುಲಭವಾಗುತ್ತೆ. ಪ್ರಚಾರಕರನ್ನು ಸಂಘಟಿಸಿ ಬೇಗನೆ ಸೇವಾಕ್ಷೇತ್ರಕ್ಕೆ ಕಳುಹಿಸಲು ಸಾಧ್ಯವಾಗುತ್ತೆ. ಸೇವಾಕ್ಷೇತ್ರಕ್ಕೆ ಪ್ರಯಾಣಿಸುವ ದೂರ ಕಡಿಮೆಯಾಗುತ್ತೆ. ಗುಂಪು ಮೇಲ್ವಿಚಾರಕನಿಗೆ ಗುಂಪಿನಲ್ಲಿರುವ ಪ್ರತಿಯೊಬ್ಬರ ಬಗ್ಗೆ ಹೆಚ್ಚು ಆಸಕ್ತಿವಹಿಸಲು ಸಾಧ್ಯವಾಗುತ್ತೆ. ಕೆಲವೊಮ್ಮೆ ಎರಡು ಅಥವಾ ಹೆಚ್ಚು ಗುಂಪುಗಳನ್ನು ಒಟ್ಟುಸೇರಿಸುವುದು ಉತ್ತಮವಾಗಿರಬಹುದು. ತಿಂಗಳ ಮೊದಲ ಶನಿವಾರದಂದು ಅಥವಾ ಕಾವಲಿನಬುರುಜು ಅಧ್ಯಯನದ ಬಳಿಕ ಸೇವೆಗಾಗಿ ಇಡೀ ಸಭೆ ಕೂಡಿಬರುವಲ್ಲಿ, ಪ್ರತಿಯೊಂದು ಗುಂಪು ಒಟ್ಟಿಗೆ ಕೂತುಕೊಳ್ಳುವುದು ಒಳ್ಳೇದು. ಆಗ ಕ್ಷೇತ್ರಸೇವಾ ಕೂಟ ಪ್ರಾರ್ಥನೆಯೊಂದಿಗೆ ಮುಕ್ತಾಯವಾಗುವುದರೊಳಗೆ ಗುಂಪು ಮೇಲ್ವಿಚಾರಕನಿಗೆ ತನ್ನ ಗುಂಪನ್ನು ಸಂಘಟಿಸಲು ಕೆಲವು ನಿಮಿಷಗಳು ದೊರೆಯುವವು.—“ನಿಮ್ಮ ಮನೆಯನ್ನು ಲಭ್ಯಗೊಳಿಸುವಿರಾ?” ಚೌಕ ನೋಡಿ.
5. ಸಭಾ ಪುಸ್ತಕ ಅಧ್ಯಯನ ಈಗ ಇಲ್ಲವಾದರೂ ಯಾವ ವಿಷಯದಲ್ಲಿ ಭರವಸದಿಂದಿರಬಲ್ಲೆವು?
5 ಸಭಾ ಪುಸ್ತಕ ಅಧ್ಯಯನ ಏರ್ಪಾಡು ಈಗ ಇಲ್ಲವಾದರೂ ಯೆಹೋವನು ತನ್ನ ಚಿತ್ತವನ್ನು ಮಾಡಲು ನಮಗೆ ಸಕಲವನ್ನು ಕೊಡುತ್ತಾ ಬಂದಿದ್ದಾನೆ. (ಇಬ್ರಿ. 13:20, 21) ಯೆಹೋವನ ಪರಿಪಾಲನೆಯ ಕೆಳಗೆ ನಮಗೆ ಯಾವ ಕೊರತೆಯೂ ಇಲ್ಲ. (ಕೀರ್ತ. 23:1) ನಮ್ಮ ಕ್ಷೇತ್ರಸೇವಾ ಗುಂಪಿನ ಮೂಲಕ ನಮಗೆ ಅನೇಕ ಆಶೀರ್ವಾದಗಳು ಲಭ್ಯ. ನಾವು ಮೊದಲ ಹೆಜ್ಜೆಯನ್ನಿಟ್ಟು ‘ಬಹಳವಾಗಿ ಬಿತ್ತುವಲ್ಲಿ ಬಹಳವಾಗಿ ಕೊಯ್ಯುವೆವು.’—2 ಕೊರಿಂ. 9:6.
[ಪುಟ 6ರಲ್ಲಿರುವ ಚೌಕ]
ನಿಮ್ಮ ಮನೆಯನ್ನು ಲಭ್ಯಗೊಳಿಸುವಿರಾ?
ಕೂಡಿ ಬರಲು ಮನೆಗಳು ಲಭ್ಯವಿಲ್ಲದ ಕಾರಣ ಕೆಲವು ಸಭೆಗಳು ವಾರಾಂತ್ಯದಲ್ಲಿ ಸೇವಾ ಗುಂಪುಗಳನ್ನು ಒಟ್ಟುಸೇರಿಸುತ್ತಾರೆ. ಕ್ಷೇತ್ರ ಸೇವೆಗಾಗಿ ಕೂಡಿಬರುವುದು ಸಭಾ ಏರ್ಪಾಡಿನ ಭಾಗವಾಗಿದೆ. ಆದಕಾರಣ ನಮ್ಮ ಮನೆಗಳನ್ನು ಅದಕ್ಕಾಗಿ ನೀಡುವುದು ನಿಜಕ್ಕೂ ನಮಗಿರುವ ಸುಯೋಗ. ಹಾಗಾಗಿ ನಿಮ್ಮ ಮನೆಯನ್ನು ಲಭ್ಯಗೊಳಿಸುವಿರಾ? ನಿಮ್ಮ ಮನೆ ಸಾಧಾರಣ ಮನೆಯೆಂಬ ಕಾರಣಕ್ಕೆ ಅದನ್ನು ನೀಡಲು ಹಿಂಜರಿಯಬೇಡಿ. ನಿಮ್ಮ ಮನೆ ಇರುವ ಸ್ಥಳ ಮತ್ತು ಇತರ ವಿಷಯಗಳನ್ನು ಹಿರಿಯರು ಪರಿಗಣಿಸಿ, ಹಿಂದಿನ ಪುಸ್ತಕ ಅಧ್ಯಯನ ಸ್ಥಳಗಳನ್ನು ಆರಿಸಿದಂತೆ ಆಯ್ಕೆ ಮಾಡುವರು. ಮನೆಯನ್ನು ನೀಡುವ ಮನಸ್ಸಿದ್ದಲ್ಲಿ ನಿಮ್ಮ ಗುಂಪು ಮೇಲ್ವಿಚಾರಕರಿಗೆ ತಿಳಿಸಿ.