ಬೈಬಲ್ ಅಧ್ಯಯನ ಕಂಡುಕೊಳ್ಳಲು ಐದು ವಿಧಾನಗಳು
1 ಬೈಬಲ್ ಅಧ್ಯಯನಗಳನ್ನು ಯಾರೊಂದಿಗೆ ನಡೆಸಬೇಕು ಎಂಬ ಸವಾಲನ್ನು ನೀವು ಎದುರಿಸುತ್ತಾ ಇದ್ದೀರಾ? ನಿಮ್ಮ ಪ್ರಯತ್ನಗಳನ್ನು ನಿಲ್ಲಿಸಬೇಡಿ, ಹುಡುಕುತ್ತಲೇ ಇರಿ. ಪ್ರಯತ್ನಗಳನ್ನು ನಿಲ್ಲಿಸದೇ ಪರಿಶ್ರಮ ಪಡುತ್ತಿರುವವರಿಗೆ ಯೆಹೋವನು ಖಂಡಿತ ಆಶೀರ್ವದಿಸುತ್ತಾನೆ. (ಗಲಾ. 6:9) ನೀವು ಪ್ರಯತ್ನಿಸಬಹುದಾದ ಐದು ವಿಧಾನಗಳನ್ನು ನೋಡೋಣ ಬನ್ನಿ.
2 ನೇರ ವಿಧಾನ: ನಾವು ಕಾವಲಿನಬುರುಜು ಮತ್ತು ಎಚ್ಚರ ಪತ್ರಿಕೆಗಳನ್ನು ಓದಲು ಕೊಡುತ್ತೇವೆಂದು ಅನೇಕರಿಗೆ ಗೊತ್ತಿದೆ. ಆದರೆ ನಾವು ಬೈಬಲ್ ಅಧ್ಯಯನಗಳನ್ನು ಸಹ ನಡೆಸುತ್ತೇವೆ ಅಂತ ಅವರಿಗೆ ಗೊತ್ತಿಲ್ಲದೇ ಇರಬಹುದು. ಹಾಗಾಗಿ ಬೈಬಲ್ ಕಲಿಯಲು ಅವರಿಗೆ ಇಷ್ಟವಿದೆಯಾ ಎಂದು ನಾವೇ ಯಾಕೆ ಅವರನ್ನು ನೇರವಾಗಿ ಕೇಳಬಾರದು? ಪುನರ್ಭೇಟಿ ಮಾಡುವಾಗಲೂ ನೇರವಾಗಿ ಕೇಳಬಹುದು. ಒಂದುವೇಳೆ ಅವರು ಬೇಡವೆಂದರೆ ಪತ್ರಿಕೆಗಳನ್ನು ಕೊಡುವುದನ್ನು ನೀವು ಮುಂದುವರಿಸುತ್ತಾ ಆಸಕ್ತಿಯನ್ನು ಬೆಳೆಸಬಹುದು. ಸಹೋದರನೊಬ್ಬ ಅನೇಕ ವರ್ಷಗಳಿಂದ ಒಂದು ದಂಪತಿಗೆ ಪತ್ರಿಕೆಗಳನ್ನು ಕೊಡುತ್ತಾ ಇದ್ದನು. ಒಮ್ಮೆ ಹೊಸ ಪತ್ರಿಕೆಗಳನ್ನು ಕೊಟ್ಟು ಇನ್ನೇನು ಹಿಂದಿರುಗಬೇಕೆನ್ನುವಾಗ “ನಿಮಗೆ ಬೈಬಲ್ ಕಲಿಯಲು ಇಷ್ಟನಾ?” ಅಂತ ಕೇಳಿದನು. ಅವರು “ಹೌದು” ಎಂದಾಗ ಸಹೋದರನಿಗೆ ಆಶ್ಚರ್ಯವಾಯಿತು. ಈಗ ಆ ದಂಪತಿ ದೀಕ್ಷಾಸ್ನಾನ ಪಡೆದಿದ್ದಾರೆ.
3 ಸಭೆಗೆ ಬರುವ ಆಸಕ್ತರನ್ನು ವಿಚಾರಿಸಿ: ಸಭೆಗೆ ಬರುತ್ತಿರುವ ಎಲ್ಲ ಆಸಕ್ತರು ಬೈಬಲ್ ಅಧ್ಯಯನ ಪಡೆದುಕೊಳ್ಳುತ್ತಿದ್ದಾರೆ ಅಂತ ನೆನಸಬೇಡಿ. ಒಬ್ಬ ಸಹೋದರ ಹೇಳಿದ್ದು: “ನನಗೆ ಸಿಕ್ಕಿದ್ದ ಅರ್ಧಕ್ಕರ್ಧ ಬೈಬಲ್ ಅಧ್ಯಯನಗಳು ಸಭೆಗೆ ಬರುತ್ತಿದ್ದ ಆಸಕ್ತ ಜನರದ್ದು.” ಇನ್ನೊಬ್ಬ ಸಹೋದರಿ, ತುಂಬ ಮುಜುಗರ ಸ್ವಭಾವದ ಸ್ತ್ರೀಯೊಬ್ಬರ ಬಳಿ ಹೋಗಿ ಮಾತಾಡಿದಳು. 15ವರ್ಷಗಳಿಂದ ಆ ಸ್ತ್ರೀ ಸಭೆಗೆ ಬರುತ್ತಿದ್ದರು. ಅವರ ಮಕ್ಕಳು ಈಗಾಗಲೇ ದೀಕ್ಷಾಸ್ನಾನ ಪಡೆದಿದ್ದರು. ಆದರೆ ಆ ಸ್ತ್ರೀ ಪ್ರತಿಬಾರಿ ಕೂಟ ಆರಂಭವಾಗುವ ಸಮಯಕ್ಕೆ ಬರುತ್ತಿದ್ದರು, ಕೂಟ ಮುಗಿದ ತಕ್ಷಣ ಹೋಗಿ ಬಿಡುತ್ತಿದ್ದರು. ಅವರ ಬಳಿ ಬೈಬಲ್ ಅಧ್ಯಯನದ ಬಗ್ಗೆ ಸಹೋದರಿ ಕೇಳಿದಾಗ ಒಪ್ಪಿಕೊಂಡರು ಮತ್ತು ಕ್ರಮೇಣ ಸತ್ಯಕ್ಕೆ ಬಂದರು. ಸಹೋದರಿ ಬರೆದ ಪತ್ರದಲ್ಲಿ ಹೀಗಿತ್ತು: “ಬೈಬಲ್ ಅಧ್ಯಯನ ಬೇಕಾ ಅಂತ ಆ ಸ್ತ್ರೀಯನ್ನು ಕೇಳಲು ನಾನು 15ವರ್ಷಗಳ ಕಾದಿದ್ದಕ್ಕೆ ನಾನು ವ್ಯಸನ ಪಡುತ್ತೇನೆ!”
4 ಪರಿಚಯಿಸಿಕೊಡುವಂತೆ ಕೇಳಿ: ಒಬ್ಬ ಸಹೋದರಿ ಇತರರ ಬೈಬಲ್ ಅಧ್ಯಯನಗಳಿಗೆ ಅವರೊಂದಿಗೆ ಜೊತೆಗೂಡುತ್ತಾರೆ. ಅವರ ಅಧ್ಯಯನದ ಕೊನೆಯಲ್ಲಿ ಬೈಬಲ್ ಅಧ್ಯಯನ ನಡೆಸುತ್ತಿರುವ ಸಹೋದರಿಯ ಅನುಮತಿ ಕೇಳಿ, ವಿದ್ಯಾರ್ಥಿಗೆ ‘ನಿಮ್ಮ ಹಾಗೆ ಬೈಬಲ್ ಅಧ್ಯಯನ ತೆಗೆದುಕೊಳ್ಳಲು ಬಯಸುವ ಯಾರದಾದರೂ ಪರಿಚಯ ನಿಮಗಿದೆಯಾ?’ ಅಂತ ಕೇಳುತ್ತಾರೆ. ಹಾಗೆಯೇ ನಾವು ಸಹ ಪುನರ್ಭೇಟಿಗಳಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕ ಕೊಡುವಾಗ ಹೀಗೆ ಕೇಳಬಹುದು: “ಈ ಪುಸ್ತಕವನ್ನು ಓದಲು ಇಷ್ಟುಪಡುವವರು ಯಾರಾದರೂ ನಿಮಗೆ ಗೊತ್ತಿದ್ದಾರಾ?” ಕೆಲವೊಂದು ಸಾರಿ ಸನ್ನಿವೇಶ ಹೇಗಿರುತ್ತದೆ ಅಂದರೆ ಪ್ರಚಾರಕರಿಗೆ ಹಾಗೂ ಪಯನೀಯರರಿಗೆ ತಮ್ಮ ಕ್ಷೇತ್ರದಲ್ಲಿ ಭೇಟಿಯಾದ ಎಲ್ಲ ಆಸಕ್ತ ಜನರಿಗೆ ಬೈಬಲ್ ಕಲಿಸಲು ಆಗುವುದಿಲ್ಲ. ಆದ್ದರಿಂದ ನೀವು ಬೈಬಲ್ ಅಧ್ಯಯನ ನಡೆಸಲು ತಯಾರಾಗಿದ್ದೀರಿ ಅಂತ ಆ ಪ್ರಚಾರಕರಿಗೆ ತಿಳಿಯಪಡಿಸಿ.
5 ಸತ್ಯದಲ್ಲಿಲ್ಲದ ಸಂಗಾತಿಯನ್ನು ಕೇಳಿನೋಡಿ: ಸತ್ಯದಲ್ಲಿ ಇಲ್ಲದವರನ್ನು ಮದುವೆಯಾದ ಪ್ರಚಾರಕರು ನಿಮ್ಮ ಸಭೆಯಲ್ಲಿ ಇದ್ದಾರಾ? ಸಾಮಾನ್ಯವಾಗಿ ಸತ್ಯದಲ್ಲಿಲ್ಲದ ವ್ಯಕ್ತಿಗೆ ತನ್ನ ಸಂಗಾತಿಯೊ ಅಥವಾ ಕುಟುಂಬದ ಸದಸ್ಯರೊ ಬೈಬಲ್ ಬಗ್ಗೆ ಹೇಳುವಾಗ ಇಷ್ಟವಾಗುವುದಿಲ್ಲ. ಆದರೆ ಬೇರೆ ಯಾರಾದರೂ ಬೈಬಲ್ ಅಧ್ಯಯನದ ಬಗ್ಗೆ ಕೇಳಿದರೆ ಸ್ವೀಕರಿಸುವ ಸಾಧ್ಯತೆ ಇದೆ. ಹಾಗಾಗಿ ಪ್ರಚಾರಕರಾಗಿರುವ ಅವರ ಪತಿ/ಪತ್ನಿಯ ಬಳಿ ಹೋಗಿ ಮೊದಲು ಮಾತಾಡಿ. ಆಗ ಅವರ ಬಳಿ ಹೇಗೆ ಮಾತಾಡಬೇಕೆಂದು ತಿಳಿದುಕೊಳ್ಳುವಿರಿ.
6 ಪ್ರಾರ್ಥನೆ: ಪ್ರಾರ್ಥನೆಗಿರುವ ಶಕ್ತಿಯನ್ನು ಕಡೆಗಣಿಸಬೇಡಿ. (ಯಾಕೋ. 5:16) ತನ್ನ ಚಿತ್ತಕ್ಕೆ ಹೊಂದಿಕೆಯಲ್ಲಿರುವ ಬಿನ್ನಹಗಳನ್ನು ಕೇಳಲು ಯೆಹೋವನು ಸದಾ ಸಿದ್ಧನು. (1 ಯೋಹಾ. 5:14) ಕೆಲಸದಲ್ಲಿ ಯಾವಾಗಲೂ ಬ್ಯುಸಿ ಇರುವ ಒಬ್ಬ ಸಹೋದರ ಒಂದು ಬೈಬಲ್ ಅಧ್ಯಯನ ಕಂಡುಕೊಳ್ಳಲು ಸಹಾಯಮಾಡುವಂತೆ ಯೆಹೋವನಲ್ಲಿ ಬಿನ್ನಹಿಸಿದರು. ಅವರ ಪರಿಸ್ಥಿತಿಯನ್ನು ಅರಿತ ಹೆಂಡತಿ ಸಹ ಯೆಹೋವನಲ್ಲಿ ಪ್ರಾರ್ಥಿಸಿದರು. ಬೈಬಲ್ ವಿದ್ಯಾರ್ಥಿಗಾಗಿ ಸಾಕಷ್ಟು ಸಮಯ ವ್ಯಯಿಸಲು ತನ್ನ ಗಂಡನಿಂದ ಸಾಧ್ಯವಾಗುವುದೇ ಎಂಬೆಲ್ಲ ಚಿಂತೆಗಳನ್ನು ಆಕೆ ಯೆಹೋವನಲ್ಲಿ ತೋಡಿಕೊಂಡರು. ಅವರ ಸಭೆಯ ಪಯನೀಯರರೊಬ್ಬರು ಬೈಬಲ್ ಅಧ್ಯಯನಕ್ಕಾಗಿ ಕೇಳಿಕೊಂಡ ಒಬ್ಬ ವ್ಯಕ್ತಿಯ ಪರಿಚಯವನ್ನು ಸಹೋದರರಿಗೆ ಮಾಡಿಕೊಟ್ಟರು. ಹೀಗೆ ಅವರಿಬ್ಬರ ಪ್ರಾರ್ಥನೆಗೆ ಎರಡು ವಾರದಲ್ಲಿ ಸಿಕ್ಕಿತು. ಆ ಸಹೋದರನ ಹೆಂಡತಿ ಹೇಳಿದ್ದು: “ನನ್ನಿಂದ ಬೈಬಲ್ ಅಧ್ಯಯನ ಮಾಡಲು ಆಗೋದಿಲ್ಲ ಅಂತ ಅಂದುಕೊಳ್ಳುವವರಿಗೆ ನಾನು ಹೇಳೋದು ಇಷ್ಟೇ: ಯೆಹೋವನಿಗೆ ಪ್ರಾರ್ಥಿಸುವುದನ್ನು ನಿಲ್ಲಿಸಬೇಡಿ, ನಿಮ್ಮ ಪ್ರಾರ್ಥನೆಯಲ್ಲಿ ನಿರ್ದಿಷ್ಟ ವಿಷಯಗಳಿರಲಿ. ನಾವು ಊಹಿಸಿದ್ದಕ್ಕಿಂತ ಹೆಚ್ಚಿನ ಖುಷಿ ನಮಗೆ ಸಿಗುತ್ತೆ.” ನಿಮ್ಮ ಪಟ್ಟುಬಿಡದ ಪ್ರಯತ್ನದಿಂದ ನಿಮಗೂ ಬೈಬಲ್ ಅಧ್ಯಯನ ಸಿಗುತ್ತೆ ಮತ್ತು ‘ನಿತ್ಯಜೀವಕ್ಕೆ ಹೋಗುವ ಬಾಗಲಿನ’ ಕಡೆಗೆ ಇತರರನ್ನು ಮಾರ್ಗದರ್ಶಿಸಿದ್ದಕ್ಕೆ ಖುಷಿನೂ ಸಿಗುತ್ತೆ.—ಮತ್ತಾ. 7:13, 14.
[ಅಧ್ಯಯನ ಪ್ರಶ್ನೆಗಳು]
1. ಬೈಬಲ್ ಅಧ್ಯಯನ ಸಿಗುತ್ತಿಲ್ಲವಾದರೆ ಏನು ಮಾಡಬೇಕು ಮತ್ತು ಏಕೆ?
2. ಬೈಬಲ್ ಅಧ್ಯಯನ ಆರಂಭಿಸಲು ನಾವು ನೇರ ವಿಧಾನವನ್ನು ಹೇಗೆ ಬಳಸಬಲ್ಲೆವು?
3. ಸಭೆಗೆ ಬರುವ ಎಲ್ಲ ಆಸಕ್ತರು ಬೈಬಲ್ ಕಲಿಯುತ್ತಿದ್ದಾರೆಂದು ನೆನಸುವುದು ತಪ್ಪಾಗಿದೆ. ಯಾಕೆ?
4. ಬೈಬಲ್ ಅಧ್ಯಯನ ಪಡೆಯುವವರನ್ನು ಹಾಗೂ ನಡೆಸುವವರನ್ನು ಕೇಳಿದರೆ ನಮಗೆ ಹೇಗೆ ಬೈಬಲ್ ಅಧ್ಯಯನ ಸಿಗುತ್ತೆ?
5. ಸಭೆಯಲ್ಲಿರುವ ಪ್ರಚಾರಕರೊಬ್ಬರ ಸಂಗಾತಿ ಸತ್ಯದಲ್ಲಿಲ್ಲವಾದರೆ ‘ನಿಮಗೆ ಬೈಬಲ್ ಅಧ್ಯಯನ ಮಾಡಲು ಇಷ್ಟವಿದೆಯಾ’ ಎಂದು ನಾವೇ ಹೋಗಿ ಅವರನ್ನು ಕೇಳಬೇಕೇಕೆ?
6. ಬೈಬಲ್ ಅಧ್ಯಯನ ಕಂಡುಕೊಳ್ಳಲು ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತೆ?