ನಮ್ಮೊಳಗಿರುವ ಅಡೆತಡೆಗಳನ್ನು ಜಯಿಸೋಣ —ಸಮಯದ ಅಭಾವ
1. ಬೈಬಲ್ ಅಧ್ಯಯನ ನಡೆಸಲು ಕೆಲವರು ಹಿಂಜರಿಯುವುದೇಕೆ?
1 ಕಾರ್ಯವ್ಯಸ್ತ ಜೀವನ ನಡೆಸುವ ಕೆಲವರು ಸಮಯದ ಅಭಾವವಿರುವ ಕಾರಣ ಬೈಬಲ್ ಅಧ್ಯಯನ ನಡೆಸಲು ಹಿಂಜರಿಯುತ್ತಾರೆ. ಬೈಬಲ್ ವಿದ್ಯಾರ್ಥಿಗಾಗಿ ತುಂಬ ಸಮಯ ವ್ಯಯಿಸಬೇಕಾಗುತ್ತೆ. ಬೈಬಲ್ ಅಧ್ಯಯನಕ್ಕಾಗಿ ತಯಾರಿಮಾಡಲು, ಅಧ್ಯಯನ ನಿರ್ವಹಿಸಲು, ಬೈಬಲ್ ವಿದ್ಯಾರ್ಥಿಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಜಯಿಸುವುದಕ್ಕಾಗಿ ಸಹಾಯನೀಡಲು ಸಮಯ ವ್ಯಯಿಸಬೇಕಾಗುತ್ತೆ. ಥೆಸಲೊನೀಕದವರು ಯೆಹೋವನನ್ನು ತಿಳಿದುಕೊಳ್ಳುವಂತೆ ನೆರವಾಗಲು ಅಪೊಸ್ತಲ ಪೌಲ ತನ್ನ ಜೀವವನ್ನೇ ಕೊಡಲೂ ಸಿದ್ಧನಿದ್ದನೆಂದು ಹೇಳಿದನು. (1 ಥೆಸ. 2:7, 8) ತುಂಬ ಕಾರ್ಯಮಗ್ನರಾಗಿದ್ದರೂ ನಾವೊಂದು ಬೈಬಲ್ ಅಧ್ಯಯನ ನಿರ್ವಹಿಸಬಲ್ಲೆವು. ಹೇಗೆ?
2. ಯೆಹೋವನ ಮೇಲೆ ನಮಗಿರುವ ಪ್ರೀತಿ ನಾವು ಸಮಯವನ್ನು ಬಳಸುವ ವಿಧದ ಮೇಲೆ ಹೇಗೆ ಪರಿಣಾಮ ಬೀರುತ್ತೆ?
2 ಯೆಹೋವನಿಗಾಗಿ ಸಮಯ ಖರೀದಿಸಿ: ನಿಜವೇನೆಂದರೆ ಯೆಹೋವ ದೇವರ ಆರಾಧನೆಗೆಂದು ನಾವು ಸಮಯವನ್ನು ಮೀಸಲಿಡಲೇಬೇಕು. ಉದಾಹರಣೆಗೆ, ಕೂಟಗಳಿಗೆ ಹಾಜರಾಗಲು, ಸೇವೆಯಲ್ಲಿ ಭಾಗವಹಿಸಲು, ಬೈಬಲ್ ಓದಲು, ಪ್ರಾರ್ಥನೆ ಮಾಡಲು ನಾವು ನಿಯಮಿತವಾಗಿ ಸಮಯ ವ್ಯಯಿಸುತ್ತೇವೆ. ವಿವಾಹಿತರು ಎಷ್ಟೇ ಬ್ಯುಸಿಯಾಗಿದ್ದರೂ ತಮ್ಮ ಸಂಗಾತಿಗೆಂದು ಸಮಯ ವ್ಯಯಿಸಲು ಹಿಂಜರಿಯಲ್ಲ. ಹಾಗಾದರೆ ಯೆಹೋವನನ್ನು ಪ್ರೀತಿಸುವ ನಾವು ಆತನ ಆರಾಧನೆಗಾಗಿ ಅದೆಷ್ಟು ಸಂತೋಷದಿಂದ ‘ಸಮಯವನ್ನು ಖರೀದಿಸಬೇಕಲ್ಲವೆ?’ (ಎಫೆ. 5:15-17; 1 ಯೋಹಾ. 5:3) ನಮ್ಮ ಆರಾಧನೆಯ ಒಂದು ಪ್ರಾಮುಖ್ಯ ಭಾಗ ಶಿಷ್ಯರನ್ನಾಗಿ ಮಾಡುವ ಕೆಲಸ ಎಂದು ಯೇಸು ಹೇಳಿದ್ದಾನೆ. (ಮತ್ತಾ. 28:19, 20) ಇದನ್ನು ಸದಾ ಮನಸ್ಸಿನಲ್ಲಿಟ್ಟರೆ ಬೈಬಲ್ ಅಧ್ಯಯನ ನಡೆಸುವ ಜವಾಬ್ದಾರಿಯನ್ನು ಸ್ವೀಕರಿಸಲು ನಾವು ಹಿಂಜರಿಯಲ್ಲ.
3. ಅಡೆತಡೆ ಎದುರಾದರೂ ಬೈಬಲ್ ಅಧ್ಯಯನವನ್ನು ನಿಯಮಿತವಾಗಿ ನಡೆಸಿಕೊಂಡು ಹೋಗಲು ನಾವೇನು ಮಾಡಬಹುದು?
3 ಆದರೆ ಉದ್ಯೋಗ, ತೀವ್ರ ಆರೋಗ್ಯ ಸಮಸ್ಯೆ ಇಲ್ಲವೆ ದೇವಪ್ರಭುತ್ವಾತ್ಮಕ ನೇಮಕಗಳು ತಡೆ ಒಡ್ಡುವಲ್ಲಿ ಆಗೇನು? ಕೆಲವು ಸಾರಿ ಬೇರೆ ಊರಿಗೆ ಹೋಗಬೇಕಾದ ಪರಿಸ್ಥಿತಿ ಬಂದಾಗ ಸಹೋದರರು ತಮ್ಮ ಬೈಬಲ್ ಅಧ್ಯಯನವನ್ನು ಫೋನಿನ ಮೂಲಕ ಇಲ್ಲವೆ ಕಂಪ್ಯೂಟರ್ ಕಾನ್ಫರೆನ್ಸ್ ಮೂಲಕ ನಡೆಸುತ್ತಾರೆ. ತೀವ್ರ ಆರೋಗ್ಯ ಸಮಸ್ಯೆ ಇರುವವರು ತಮ್ಮ ಮನೆಗೇ ವಿದ್ಯಾರ್ಥಿಯನ್ನು ಕರೆಸಿ ಅಧ್ಯಯನ ನಡೆಸುತ್ತಾರೆ. ಇನ್ನು ಕೆಲವರು ಅಧ್ಯಯನ ನಡೆಸಲು ತಮ್ಮಿಂದ ಆಗದಾಗ ಭರವಸಾರ್ಹ ಪ್ರಚಾರಕರ ನೆರವು ಪಡೆದುಕೊಳ್ಳುತ್ತಾರೆ.
4. ಬೈಬಲ್ ಅಧ್ಯಯನ ನಡೆಸುವುದರಿಂದ ಯಾವ ಆಶೀರ್ವಾದಗಳು ಸಿಗುವುವು?
4 ಇತರರಿಗೆ ಸತ್ಯ ಕಲಿಸಲು ಪೌಲ ತನ್ನ ಸಮಯ, ಶಕ್ತಿಯನ್ನು ವ್ಯಯಿಸಿದಾಗ ಹೆಚ್ಚು ಸಂತೋಷ ಪಡೆದುಕೊಂಡನು. (ಅ. ಕಾ. 20:35) ಥೆಸಲೊನೀಕದಲ್ಲಿ ಪೌಲ ಯಾರಿಗೆಲ್ಲ ಸಹಾಯ ಮಾಡಿದನೋ ಅವರ ಬಗ್ಗೆ ಯೋಚಿಸಿದಾಗ ಯೆಹೋವನಿಗೆ ಕೃತಜ್ಞತೆ ಸಲ್ಲಿಸಲು ಪ್ರೇರಿತನಾದನು. (1 ಥೆಸ. 1:2) ನಮಗೆ ಸೇವೆಯಿಂದ ಸಿಗುವ ಸಂತೋಷ, ತೃಪ್ತಿ ಹೆಚ್ಚಾಗಬೇಕಾದರೆ ಬೈಬಲ್ ಅಧ್ಯಯನ ನಡೆಸಲೇಬೇಕು. ಇದಕ್ಕೆ ನಮ್ಮ ಕಾರ್ಯಮಗ್ನ ಜೀವನ ತಡೆಯಾಗದಿರಲಿ.