ಹಿಂಜರಿಯದಿರಿ!
1. ಯಾವ ವಿಧದಲ್ಲಿ ನಾವು ‘ಉಪಕಾರಮಾಡಲು’ ಹಿಂಜರಿಯುವುದಿಲ್ಲ?
1 ನಾವು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನಮ್ಮ ನೇಮಿತ ಟೆರಿಟೊರಿಯಲ್ಲಿರುವ ಜನರಿಗೆ ‘ಉಪಕಾರಮಾಡಲು ತಪ್ಪದಿರುವೆವು’ ಅಥವಾ ಹಿಂಜರಿಯದಿರುವೆವು. (ಜ್ಞಾನೋ. 3:27) ದೇವರ ಆಳ್ವಿಕೆಯಲ್ಲಿ ಬರಲಿರುವ ಅತ್ಯುತ್ತಮ ಸಮಯದ ಕುರಿತು ಮಾನವಕುಲದೊಂದಿಗೆ ಹಂಚಿಕೊಳ್ಳುವ ವಿಷಯಕ್ಕಿಂತ ಅತ್ಯುತ್ತಮವಾದ ಬೇರೊಂದು ಸಂದೇಶವಿಲ್ಲ. ಅನೌಪಚಾರಿಕವಾಗಿ ಸಾಕ್ಷಿ ನೀಡುವ ಮೂಲಕ ಅಥವಾ ಸಾಹಿತ್ಯಗಳನ್ನು ಕೊಡುವ ಮೂಲಕ ನೀವು ರಾಜ್ಯ ನಿರೀಕ್ಷೆಯನ್ನು ಉದಾತ್ತವಾಗಿ ಹಂಚುತ್ತಿರಬಹುದು. ಆದರೆ ನೀವಿನ್ನೂ ಒಂದು ಬೈಬಲ್ ಅಧ್ಯಯನವನ್ನು ನಡೆಸುತ್ತಿಲ್ಲವಾದರೆ, ಆ ಗುರಿಯನ್ನು ಇಡಬಹುದಲ್ಲಾ.
2. ಒಂದು ಬೈಬಲ್ ಅಧ್ಯಯನವನ್ನು ಆರಂಭಿಸದಂತೆ ನಮ್ಮನ್ನು ಯಾವುದು ತಡೆಯಬಲ್ಲದು?
2 ಕೆಲವೊಮ್ಮೆ ನಾವು ಬೈಬಲ್ ಅಧ್ಯಯನ ನಡೆಸುವುದಕ್ಕಿರುವ ಅತಿ ದೊಡ್ಡ ತಡೆಯೆಂದರೆ ಅದರ ಕುರಿತು ನಾವು ಆಲೋಚಿಸುವ ರೀತಿಯಾಗಿದೆ. ‘ಒಂದು ಅಧ್ಯಯನ ನಡೆಸುವಷ್ಟು ಸಾಮರ್ಥ್ಯ ನನಗಿಲ್ಲ’ ಅಥವಾ ‘ಅದಕ್ಕೆ ಬಿಡುವೇ ಇಲ್ಲ’ ಎಂದೆಣಿಸಿ ಕೆಲವರು ಬೈಬಲ್ ಅಧ್ಯಯನ ನಡೆಸಲು ಹಿಂಜರಿಯುತ್ತಾರೆ. ಹಾಗಿರುವಲ್ಲಿ, ನೀವು ಬೈಬಲ್ ಅಧ್ಯಯನವನ್ನು ನಡೆಸಲು ಹಿಂಜರಿಯದಂತೆ ಈ ಮುಂದಿನ ಸಲಹೆಗಳು ಸಹಾಯಮಾಡಬಲ್ಲವು.—ಮತ್ತಾ. 28:19; ಅ. ಕೃ. 20:20.
3. ಬೈಬಲ್ ವಿಷಯಗಳನ್ನು ಬೋಧಿಸಲು ನಾವು ಅರ್ಹರಾಗಿದ್ದೇವೆ ಏಕೆ?
3 ಭರವಸೆಯ ಕೊರತೆ: ಪ್ರಾಯಶಃ ನಿಮ್ಮ ಸೀಮಿತ ವಿದ್ಯಾಭ್ಯಾಸದ ಕಾರಣದಿಂದಲೋ ಅಥವಾ ಇತರ ಕಾರಣದಿಂದಲೋ ಬೈಬಲ್ ಅಧ್ಯಯನವನ್ನು ನಡೆಸುವ ನಿಮ್ಮ ಸಾಮರ್ಥ್ಯದಲ್ಲಿ ನಿಮಗಷ್ಟು ಭರವಸೆ ಇರಲಿಕ್ಕಿಲ್ಲ. ಪ್ರಥಮ ಶತಮಾನದಲ್ಲಿದ್ದ ನುರಿತ ಕ್ರೈಸ್ತ ಶುಶ್ರೂಷಕರು ಸಹ “ಶಾಸ್ತ್ರಾಭ್ಯಾಸ ಮಾಡದ ಸಾಧಾರಣ” ಜನರಾಗಿದ್ದರು. ಇತರರಿಗೆ ಸತ್ಯವನ್ನು ಬೋಧಿಸಲು ಅವರನ್ನು ಯಾವುದು ಸಮರ್ಥರನ್ನಾಗಿ ಮಾಡಿತು? ‘ಅವರು ಯೇಸುವಿನ ಸಂಗಡ ಇದ್ದದ್ದೇ.’ (ಅ. ಕೃ. 4:13, 14) ಹೌದು, ಅವರು ಮಹಾ ಬೋಧಕನಾದ ಯೇಸುವಿನಿಂದ ಕಲಿತುಕೊಂಡರು. ಯೇಸುವಿನ ಬೋಧನೆಗಳು ಮತ್ತು ಬೋಧನಾ ವಿಧಾನಗಳು ನಮಗಾಗಿ ಬೈಬಲಿನಲ್ಲಿ ಸಂರಕ್ಷಿಸಲಾಗಿದೆ. ನಿಮ್ಮ ವಿದ್ಯಾಭ್ಯಾಸ ಸೀಮಿತವಾಗಿರುವುದಾದರೂ, ನೀವು ಆಧ್ಯಾತ್ಮಿಕ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದೀರಿ. ಇದು ಯಾವುದೇ ರೀತಿಯ ವಿದ್ಯಾಭ್ಯಾಸಕ್ಕಿಂತ ಎಷ್ಟೋ ಮಿಗಿಲಾಗಿದೆ.—ಯೆಶಾ. 50:4; 2 ಕೊರಿಂ. 3:5.
4. ಆಮೋಸನ ಉದಾಹರಣೆಯಿಂದ ನಾವೇನನ್ನು ಕಲಿಯಬಲ್ಲೆವು?
4 ಕೆಲವೊಮ್ಮೆ ಯೆಹೋವನು ತಪ್ಪಿತಸ್ಥ ಅರಸರನ್ನು ಅಥವಾ ಉನ್ನತ ಸ್ಥಾನದಲ್ಲಿದ್ದ ಇತರರನ್ನು ಖಂಡಿಸಲು ಪ್ರವಾದಿಗಳನ್ನು ಉಪಯೋಗಿಸಿದನು. ಅವರಲ್ಲಿ ಆಮೋಸನಂಥ ಕೆಲವು ಪ್ರವಾದಿಗಳು ಸಾಧಾರಣ ಹಿನ್ನೆಲೆಯಿಂದ ಬಂದವರಾಗಿದ್ದರು. ಆಮೋಸನು ಒಪ್ಪಿಕೊಂಡದ್ದು: “ನಾನು ಪ್ರವಾದಿಯಲ್ಲ, ಪ್ರವಾದಿ ಮಂಡಲಿಗೆ ಸೇರಿದವನೂ ಅಲ್ಲ, ನಾನು ಗೊಲ್ಲನು, ಅತ್ತಿಹಣ್ಣು ಕೀಳುವವನು.” (ಆಮೋ. 7:14) ಹೀಗಿದ್ದರೂ, ಬಸವಾರಾಧನೆ ಮಾಡುತ್ತಿದ್ದ ಯಾಜಕ ಅಮಚ್ಯನಿಗೆ ಯೆಹೋವನ ತೀರ್ಪಿನ ಸಂದೇಶವನ್ನು ತಿಳಿಸಲು ಆಮೋಸನು ಹಿಂಜರಿಯಲಿಲ್ಲ. (ಆಮೋ. 7:16, 17) ನಾವು ಮಾಡುತ್ತಿರುವುದು ಯೆಹೋವನ ಕೆಲಸವಾದದ್ದರಿಂದ ಅದಕ್ಕಾಗಿ ಆತನು ನಮ್ಮನ್ನು ಸಾಕಷ್ಟು ಅರ್ಹರನ್ನಾಗಿ ಮಾಡುವನು ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು.—2 ತಿಮೊ. 3:17.
5. ನಾವು ಕಾರ್ಯಮಗ್ನರಾಗಿರುವುದಾದರೂ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲು ಪ್ರಯತ್ನಿಸಬೇಕು ಏಕೆ?
5 ಕಾರ್ಯಮಗ್ನ ಜೀವನ: ನೀವು ಒಂದುವೇಳೆ ಕಾರ್ಯಮಗ್ನ ಜೀವನ ನಡೆಸುತ್ತಿದ್ದರೂ ಶುಶ್ರೂಷೆಯಲ್ಲಿ ಕ್ರಮವಾಗಿ ಪಾಲ್ಗೊಳ್ಳಲು ಈಗಾಗಲೇ ಸಮಯವನ್ನು ಬದಿಗಿರಿಸಿರಬಹುದು. ಆದರೂ ಒಂದು ಬೈಬಲ್ ಅಧ್ಯಯನವನ್ನು ನಡೆಸುವುದು ಶುಶ್ರೂಷೆಯ ಅತಿ ಹರ್ಷಕರ ವೈಶಿಷ್ಟ್ಯವಾಗಿದೆ. ಯೆಹೋವನ ವಾಕ್ಯವು ಒಬ್ಬ ವ್ಯಕ್ತಿಯ ಜೀವನದಲ್ಲಿ ಬದಲಾವಣೆ ಉಂಟುಮಾಡುವುದನ್ನು ಕಣ್ಣಾರೆ ಕಾಣುವುದು ಒಂದು ಅಪೂರ್ವ ಅವಕಾಶವೇ ಸರಿ. (ಇಬ್ರಿ. 4:12) ಇತರರು ‘ಸತ್ಯದ ಜ್ಞಾನಕ್ಕೆ ಸೇರಲಿಕ್ಕಾಗಿ’ ನಾವು ವೈಯಕ್ತಿಕ ತ್ಯಾಗಗಳನ್ನು ಮಾಡುವಾಗ ಯೆಹೋವನಿಗೆ ಹೃದಯೋಲ್ಲಾಸವಾಗುತ್ತದೆ. (1 ತಿಮೊ. 2:4) ದೇವದೂತರು ಸಹ ಯಾರಾದರೂ ತಮ್ಮ ಹಿಂದಿನ ಜೀವನಮಾರ್ಗಕ್ಕಾಗಿ ಪಶ್ಚಾತ್ತಾಪಪಟ್ಟು ಆಧ್ಯಾತ್ಮಿಕ ಪ್ರಗತಿಯನ್ನು ಮಾಡುವಾಗ ತುಂಬ ಹರ್ಷಿಸುತ್ತಾರೆ.—ಲೂಕ 15:10.
6. ದೇವರ ಚಿತ್ತವನ್ನು ಪೂರೈಸುತ್ತಿರುವುದರಲ್ಲಿ ನಮಗೆ ಯಾವ ಸದವಕಾಶವಿದೆ?
6 “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು [ದೇವರ] ಚಿತ್ತವಾಗಿದೆ.” (1 ತಿಮೊ. 2:4) ಬೈಬಲ್ ಅಧ್ಯಯನಗಳನ್ನು ನಡೆಸಲು ಹಿಂಜರಿಯದಿರುವ ಮೂಲಕ ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಕೆಲಸಮಾಡುವುದು ಎಂಥ ವಿಶೇಷ ಅವಕಾಶವಾಗಿದೆ!