ಪ್ರಶ್ನಾ ಚೌಕ
◼ ಸೇವೆಯಲ್ಲಿರುವಾಗ ಕೂಟಗಳಲ್ಲಿರುವಾಗ ಮೊಬೈಲ್ ಫೋನ್‌ಗಳ ಬಳಕೆ ಬಗ್ಗೆ ಯಾವ ಬೈಬಲ್ ತತ್ವಗಳು ಮಾರ್ಗದರ್ಶನೆ ನೀಡುತ್ತವೆ?
“ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” (ಪ್ರಸಂಗಿ 3:1): ಮೊಬೈಲ್‌ಗಳಿಂದ ತುಂಬ ಉಪಯೋಗವಿದೆ. ಯಾರೊಂದಿಗಾದರೂ ಯಾವಾಗಲಾದರೂ ಮಾತಾಡಬಹುದು, ಮೆಸೆಜ್ ಮಾಡಬಹುದು. ಆದರೂ ಕ್ರೈಸ್ತರು ಕೆಲವು ಸಂದರ್ಭಗಳಲ್ಲಿ ಮೊಬೈಲ್ ಬಳಕೆಯಿಂದ ದೂರವಿರಬೇಕಾಗುತ್ತೆ. ಉದಾಹರಣೆಗೆ, ನಮ್ಮ ಕೂಟಗಳು. ಕೂಟಗಳು ಯೆಹೋವ ದೇವರಿಗೆ ಆರಾಧನೆ ಸಲ್ಲಿಸುವ ಸಮಯ. ಆಧ್ಯಾತ್ಮಿಕ ಮಾರ್ಗದರ್ಶನೆ ಪಡಕೊಳ್ಳುವ ಸಮಯ. ಒಬ್ಬರಿಂದೊಬ್ಬರು ಉತ್ತೇಜನ ಪಡೆಯುವ ಸಮಯ. (ಧರ್ಮೋ. 31:12; ಕೀರ್ತ. 22:22; ರೋಮ. 1:11, 12) ಹಾಗಾದರೆ ಕೂಟಗಳು ನಡೆಯುತ್ತಿರುವಾಗ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿ ಇಡಬಹುದಾ? ಮೊಬೈಲ್‌ಗಳನ್ನು ಆನ್ ಇಡಲೇ ಬೇಕಾದ ಪರಿಸ್ಥಿತಿಯಲ್ಲಿ ಅದನ್ನು ಇತರರಿಗೆ ತೊಂದರೆಯಾಗದಂಥ ಸೆಟ್ಟಿಂಗ್‌ನಲ್ಲಿ ಇಡಬಹುದಾ?
“ಎಲ್ಲವನ್ನೂ ಸುವಾರ್ತೆಗೋಸ್ಕರವೇ” ಮಾಡಿ. (1 ಕೊರಿಂ. 9:23): ಕೆಲವೊಮ್ಮೆ ಕ್ಷೇತ್ರಸೇವೆಯಲ್ಲಿ ಮೊಬೈಲ್ ಬಳಸಬೇಕಾಗುತ್ತೆ. ಉದಾ: ಸೇವೆಯ ನೇತೃತ್ವ ವಹಿಸುವ ಸಹೋದರರಿಗೆ ಸೇವೆಗೆ ಹೋಗಿರುವ ಬೇರೆ ಪ್ರಚಾರಕರ ನಿಗಾ ವಹಿಸಲು ಮೊಬೈಲ್ ಸಹಾಯಕ. ಒಂದುವೇಳೆ ಸೇವಾಕ್ಷೇತ್ರದಲ್ಲಿ ಸಮಸ್ಯೆ ಏಳುವಂತೆ ಕಾಣುವಲ್ಲಿ ಇತರ ಪ್ರಚಾರಕರನ್ನು ಜಾಗ್ರತಗೊಳಿಸಲು ಅಥವಾ ಜನರು ನಮ್ಮ ಮೇಲೆ ಆಕ್ರಮಣ ಮಾಡುವುದಾದರೆ ಇಲ್ಲವೇ ಪೊಲೀಸರನ್ನು ಕರೆಸಿರುವುದಾದರೆ ಸಭಾ ಹಿರಿಯರಿಗೆ ವಿಷಯ ತಲಪಿಸಲು ಫೋನ್ ಉಪಯುಕ್ತ. ಪುನರ್ಭೇಟಿಗೆ, ಬೈಬಲ್ ಅಧ್ಯಯನಕ್ಕೆ ಹೋಗುವ ಮುಂಚೆ, ಅದರಲ್ಲೂ ಆಸಕ್ತವ್ಯಕ್ತಿಗಳು ದೂರದಲ್ಲಿ ವಾಸಿಸುತ್ತಿರುವುದಾದರೆ ಅಲ್ಲಿಗೆ ಹೋಗುವ ಮುನ್ನ ಅವರನ್ನು ಸಂಪರ್ಕಿಸಲು ಫೋನ್ ಸಹಕಾರಿ. ಆದರೆ ಸೇವೆಯಲ್ಲಿ ಮನೆಯವರೊಂದಿಗೆ ಮಾತಾಡುತ್ತಿರುವಾಗ ನಮ್ಮ ಮೊಬೈಲ್‌ನಿಂದ ಸಂಭಾಷಣೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. (2 ಕೊರಿಂ. 6:3) ನಮ್ಮ ಜೊತೆ ಸೇವೆಮಾಡಲಿರುವ ಪ್ರಚಾರಕರಿಗಾಗಿ ಕಾಯುತ್ತಿರುವಾಗ ಸ್ನೇಹಿತರಿಗೆ ಫೋನ್/ಮೆಸೆಜ್ ಮಾಡುತ್ತಾ ಸಮಯ ಕಳೆಯುವ ಬದಲು ಆ ಸಮಯವನ್ನು ಸದುಪಯೋಗಿಸಿಕೊಳ್ಳಬಹುದೇ? ಸೇವೆಯ ಬಗ್ಗೆನೋ ನಮ್ಮ ಜತೆ ಸೇವೆಮಾಡುವ ಪ್ರಚಾರಕರಿಗೆ ಸಹಾಯಮಾಡೋ ಬಗ್ಗೆನೋ ಯೋಚಿಸಬಹುದಲ್ಲವೆ?
ಪರಹಿತ. (1 ಕೊರಿಂ. 10:24; ಫಿಲಿ. 2:4): ‘ಕ್ಷೇತ್ರಸೇವಾ ಕೂಟಕ್ಕೆ ಹೋಗದಿದ್ದರೂ ನಡೆಯುತ್ತೆ ಮೊಬೈಲ್ ಇದ್ಯಲ್ಲಾ ನಾನು ಯಾರ ಜತೆ ಎಲ್ಲಿ ಸೇವೆ ಮಾಡಬೇಕು ಅಂತ ಫೋನ್ ಅಥವಾ ಮೆಸೆಜ್ ಮಾಡಿ ಕೇಳಿಕೊಂಡರಾಯಿತು’ ಅನ್ನೋ ಮನೋಭಾವ ಇಟ್ಟುಕೊಳ್ಳಬಾರದು. ಕ್ಷೇತ್ರಸೇವಾ ಕೂಟಕ್ಕೆ ಲೇಟಾಗಿ ಹೋಗುವುದಾದರೆ ಗುಂಪು ಮೇಲ್ವಿಚಾರಕರು ಈಗಾಗಲೇ ಮಾಡಿದ ಏರ್ಪಾಡಿನಲ್ಲಿ ಮತ್ತೆ ಬದಲಾವಣೆ ಮಾಡಬೇಕಾಗಬಹುದು. ಕೆಲವೊಮ್ಮೆ ಸನ್ನಿವೇಶ ನಮ್ಮ ಕೈಯಲ್ಲಿರಲ್ಲ ಆಗ ಲೇಟಾಗಿ ಬಿಡಬಹುದು. ಆದರೆ ಸಮಯಕ್ಕೆ ಸರಿಯಾಗಿ ಹಾಜರಾಗುವ ರೂಢಿ ಬೆಳೆಸಿಕೊಳ್ಳಬೇಕು. ಈ ಮೂಲಕ ಯೆಹೋವ ದೇವರು ಮಾಡಿರುವ ಏರ್ಪಾಡಿಗೆ, ಸೇವೆಯ ನೇತೃತ್ವ ವಹಿಸುವ ಸಹೋದರರಿಗೆ ಮತ್ತು ನಮ್ಮ ಜೊತೆ ಸೇವೆ ಮಾಡುವ ಪ್ರಚಾರಕರಿಗೆ ಗೌರವ ತೋರಿಸುತ್ತೀವಿ.