ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
1. ‘ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?’ ಕಿರುಹೊತ್ತಗೆಯ ಅಧ್ಯಯನವನ್ನು ಯಾವ ವಾರದಿಂದ ಆರಂಭಿಸತ್ತೇವೆ? ಇದರಿಂದ ನಮಗ್ಯಾವ ಪ್ರಯೋಜನಗಳಿವೆ?
1 ಜೂನ್ 23ರ ವಾರದಿಂದ ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ? ಎಂಬ ಕಿರುಹೊತ್ತಗೆಯನ್ನು ಸಭಾ ಬೈಬಲ್ ಅಧ್ಯಯನದಲ್ಲಿ ಚರ್ಚಿಸಲಾಗುವುದು. “ಹೃದಯವನ್ನು ಕಾಪಾಡಿಕೊಳ್ಳಿ” ಎಂಬ ಜಿಲ್ಲಾ ಅಧಿವೇಶನದಲ್ಲಿ ಈ ಹೊಸ ಕಿರುಹೊತ್ತಗೆ ಬಿಡುಗಡೆಯಾಯಿತು. ಬೈಬಲ್ ವಿದ್ಯಾರ್ಥಿಗಳನ್ನು ಸಂಘಟನೆಯ ಕಡೆಗೆ ಮಾರ್ಗದರ್ಶಿಸುವ ಉದ್ದೇಶದಿಂದ ಇದನ್ನು ವಿನ್ಯಾಸಿಸಲಾಗಿದೆ. ಈ ಕಿರುಹೊತ್ತಗೆಯ ಅಧ್ಯಯನ, ಯೆಹೋವನ ಸಂಘಟನೆಯಲ್ಲಿ ನಾವು ಒಬ್ಬರಾಗಿರುವುದಕ್ಕಾಗಿ ನಮ್ಮ ಕೃತಜ್ಞತೆ ಹೆಚ್ಚಿಸುತ್ತದೆ ಮತ್ತು ಶುಶ್ರೂಷೆಗಾಗಿರುವ ಈ ಅಮೂಲ್ಯ ಸಾಧನದ ಒಳ್ಳೆಯ ಪರಿಚಯ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.—ಕೀರ್ತ. 48:13.
2. ಈ ಕಿರುಹೊತ್ತಗೆಯನ್ನು ಸಭೆಯಲ್ಲಿ ಹೇಗೆ ಅಧ್ಯಯನ ಮಾಡಲಾಗುತ್ತದೆ?
2 ಅಧ್ಯಯನ ಮಾಡುವ ವಿಧಾನ: ಪ್ರತಿ ವಾರ ಒಂದಕ್ಕಿಂತ ಹೆಚ್ಚು ಅಧ್ಯಾಯಗಳನ್ನು ಪರಿಗಣಿಸುವುದರಿಂದ ಅಧ್ಯಯನ ನಿರ್ವಾಹಕನು ತನಗಿರುವ ಸಮಯವನ್ನು, ಪ್ರತಿಯೊಂದು ಅಧ್ಯಾಯಕ್ಕೂ ಸಮನಾಗಿ ವಿಭಾಗಿಸುತ್ತಾನೆ. ಮೊದಲು ಪ್ರಶ್ನಾ ರೂಪದಲ್ಲಿರುವ ಅಧ್ಯಾಯದ ಶೀರ್ಷಿಕೆಯನ್ನು ಪರಿಚಯಿಸಿ, ನಂತರ ಮೊದಲ ಪ್ಯಾರವನ್ನು ಓದುವಂತೆ ವಾಚಕನಿಗೆ ಹೇಳುತ್ತಾನೆ. ಓದಿದ ನಂತರ ಆ ಪ್ಯಾರಕ್ಕೆ ಸಂಬಂಧಿಸಿ, ತಾನು ತಯಾರಿಸಿದ ಪ್ರಶ್ನೆಯನ್ನು ಕೇಳುತ್ತಾನೆ. ದಪ್ಪಕ್ಷರದ ಉಪಶೀರ್ಷಿಕೆಗಳಿರುವ ಪ್ರತಿಯೊಂದು ಭಾಗವನ್ನೂ ಓದಿಸಿ, ಚರ್ಚಿಸುತ್ತಾನೆ. ಪ್ರತಿಯೊಂದು ಭಾಗವನ್ನು ಓದಿದ ನಂತರ ನಿರ್ವಾಹಕನು ಮುಖ್ಯ ಶೀರ್ಷಿಕೆಯಲ್ಲಿರುವ ಪ್ರಶ್ನೆಗೆ ಆ ಭಾಗ ಹೇಗೆ ಉತ್ತರಿಸುತ್ತದೆ ಎಂದು ಕೇಳುತ್ತಾನೆ. ಈ ಕಿರುಹೊತ್ತಗೆಯಲ್ಲಿರುವ ಚಿತ್ರಗಳನ್ನು ಸಹ ಚರ್ಚಿಸಿ, ಸಮಯವಿರುವುದಾದರೆ ಮುಖ್ಯ ವಚನಗಳನ್ನು ಸಹ ಓದಿಸುತ್ತಾನೆ. ಮುಂದಿನ ಅಧ್ಯಾಯಕ್ಕೆ ಹೋಗುವ ಮುಂಚೆ ಅಧ್ಯಾಯದ ಕೊನೆಯಲ್ಲಿರುವ ಪ್ರಶ್ನೆಗಳನ್ನು ಕೇಳುತ್ತಾ ಈಗಾಗಲೇ ಚರ್ಚಿಸಿದ ವಿಷಯವನ್ನು ನಿರ್ವಾಹಕನು ಪುನರವಲೋಕಿಸುತ್ತಾನೆ. “ಇನ್ನಷ್ಟು ತಿಳಿಯಲು. . . ” ಎಂಬ ಚೌಕವಿರುವುದಾದರೆ ಅದನ್ನೂ ಓದಿಸುತ್ತಾನೆ. ಅದರಲ್ಲಿರುವ ಸಲಹೆಗಳನ್ನು ಅನ್ವಯಿಸುವುದಾದರೆ ಬೈಬಲ್ ವಿದ್ಯಾರ್ಥಿಗಳಿಗೆ ಯಾವೆಲ್ಲಾ ಪ್ರಯೋಜನಗಳಾಗುತ್ತವೆ ಎಂದು ತಿಳಿಸುವಂತೆ ಸಭಿಕರನ್ನು ಕೇಳುತ್ತಾನೆ. ಅಧ್ಯಯನದ ಕೊನೆಯಲ್ಲಿ ಇನ್ನೂ ಸಮಯವಿರುವುದಾದರೆ ಶೀರ್ಷಿಕೆಯಲ್ಲಿರುವ ಪ್ರಶ್ನೆಯನ್ನು ಉಪಯೋಗಿಸುತ್ತಾ ಮತ್ತೊಮ್ಮೆ ಪುನರವಲೋಕಿಸಬಹುದು. ಆದರೆ ಮನೆ ಬೈಬಲ್ ಅಧ್ಯಯನವನ್ನು ಇದೇ ರೀತಿಯಲ್ಲಿ ನಡೆಸಬೇಕೆಂದೇನಿಲ್ಲ.
3. ನಾವು ಈ ಕಿರುಹೊತ್ತಗೆಯ ಅಧ್ಯಯನದಿಂದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವುದು ಹೇಗೆ?
3 ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದರೆ ಕೂಟಕ್ಕೆ ಚೆನ್ನಾಗಿ ತಯಾರಿಸಿ ಬನ್ನಿ. ಚರ್ಚೆಯಲ್ಲಿ ಹೇಳಿಕೆಗಳನ್ನು ಕೊಡಲು ನಿಮ್ಮಿಂದಾದಷ್ಟು ಪ್ರಯತ್ನಿಸಿ ಮತ್ತು ‘ಈ ವಿಷಯ ಬೈಬಲ್ ವಿದ್ಯಾರ್ಥಿಗಳಿಗೆ ಹೇಗೆ ಪ್ರಯೋಜನವಾಗುತ್ತದೆ’ ಎಂದು ಯೋಚಿಸಿ. ನಮ್ಮಂತೆಯೇ ಇತರರು ಸಹ ದೇವರ ಇಷ್ಟವನ್ನು ಮಾಡಲು ನಾವು ನೆರವಾಗಬೇಕು. ಇದನ್ನು ಮಾಡಲು ಈ ಕಿರುಹೊತ್ತಗೆಯ ಅಧ್ಯಯನ ನಮಗೆ ಸಹಾಯ ಮಾಡುತ್ತದೆ. ಹೀಗೆ ಅವರು ಸಹ ನಿತ್ಯಜೀವನದ ನಿರೀಕ್ಷೆಯನ್ನು ಪಡೆಯುವಂತಾಗಲಿ.—1 ಯೋಹಾ. 2:17.