ಬೈಬಲಿನಲ್ಲಿ ದಾಖಲಾಗಿರುವ ಬೇರೆಬೇರೆ ವಿವರಗಳನ್ನು ದೃಶ್ಯರೂಪದಲ್ಲಿ ತೋರಿಸುವ ಫೋಟೋಗಳು, ಚಿತ್ರಗಳು, ಧ್ವನಿರಹಿತ ವಿಡಿಯೋಗಳು ಮತ್ತು ಆ್ಯನಿಮೇಶನ್‌ಗಳು.
ಬೇತ್ಫಗೆ, ಆಲಿವ್ ಗುಡ್ಡ ಮತ್ತು ಯೆರೂಸಲೇಮ್
ಈ ಚಿಕ್ಕ ವಿಡಿಯೋದಲ್ಲಿ ಯೆರೂಸಲೇಮಿಗೆ ಪೂರ್ವ ದಿಕ್ಕಿನ ಕಡೆಯಿಂದ ಹೋಗುವ ದಾರಿಯನ್ನು ತೋರಿಸಲಾಗಿದೆ. ಇದು ಈಗಿನ ಎಟ್-ಟರ್ ಎಂಬ ಹಳ್ಳಿಯಿಂದ ಆಲಿವ್ ಗುಡ್ಡದ ಎತ್ತರದ ಪ್ರದೇಶಗಳಲ್ಲೊಂದಕ್ಕೆ ಹೋಗುತ್ತದೆ. ಎಟ್-ಟರ್ ಎನ್ನುವುದು ಬೈಬಲ್‌ನಲ್ಲಿ ತಿಳಿಸಲಾದ ಬೇತ್ಫಗೆ ಆಗಿರಬೇಕೆಂದು ಭಾವಿಸಲಾಗಿದೆ. ಬೇತ್ಫಗೆ ಆಲಿವ್ ಗುಡ್ಡದ ಪೂರ್ವ ಇಳಿಜಾರಿನಲ್ಲಿ ಇದೆ. ಬೇತ್ಫಗೆಯ ಪೂರ್ವದಲ್ಲಿ ಬೇಥಾನ್ಯ ಇದೆ. ಯೇಸು ಮತ್ತು ಅವನ ಶಿಷ್ಯರು ಯೆರೂಸಲೇಮಿನಲ್ಲಿದ್ದಾಗ ಬೇಥಾನ್ಯದಲ್ಲೇ ತಂಗುತ್ತಿದ್ದರು. ಇದನ್ನು ಈಗ ಎಲ್ ಅಜಾರೀಯಾ (ಎಲ್ ಐಜರೀಯಾ) ಪಟ್ಟಣ ಎಂದು ಕರೆಯಲಾಗುತ್ತದೆ. ಇದು ಅರೇಬಿಕ್ ಹೆಸರಾಗಿದ್ದು ಇದರರ್ಥ “ಲಾಜರನ ಊರು” ಎಂದಾಗಿದೆ. ಯೇಸು ಇಲ್ಲಿ ಮಾರ್ಥ, ಮರಿಯ ಮತ್ತು ಲಾಜರನ ಮನೆಯಲ್ಲೇ ತಂಗುತ್ತಿದ್ದನು ಎನ್ನುವುದರಲ್ಲಿ ಸಂಶಯವಿಲ್ಲ. (ಮತ್ತಾ 21:17; ಮಾರ್ಕ 11:11; ಲೂಕ 21:37; ಯೋಹಾ 11:1 ) ಅವರ ಮನೆಯಿಂದ ಯೆರೂಸಲೇಮಿಗೆ ಪ್ರಯಾಣಿಸಲು ಯೇಸು, ವಿಡಿಯೋದಲ್ಲಿ ತೋರಿಸಲಾದಂಥ ದಾರಿಯನ್ನೇ ಬಳಸಿರಬೇಕು. ಕ್ರಿ.ಶ. 33ರ ನೈಸಾನ್ 9ರಂದು ಯೇಸು ಕತ್ತೆಮರಿಯನ್ನೇರಿ ಆಲಿವ್ ಗುಡ್ಡದಿಂದ ಯೆರೂಸಲೇಮಿಗೆ ಬರುವಾಗ ಬೇತ್ಫಗೆಯಿಂದ ಯೆರೂಸಲೇಮಿಗೆ ಹೋಗುವ ಈ ದಾರಿಯನ್ನೇ ಬಳಸಿರಬೇಕು.
ಬೇಥಾನ್ಯದಿಂದ ಬೇತ್ಫಗೆಗೆ ಹೋಗುವ ದಾರಿ
ಬೇತ್ಫಗೆ
ಆಲಿವ್ ಗುಡ್ಡ
ಕಿದ್ರೋನ್ ಕಣಿವೆ
ದೇವಾಲಯ ಬೆಟ್ಟ
ಹಿಮ್ಮಡಿಯ ಮೂಳೆಯಲ್ಲಿ ಮೊಳೆ
ಈ ಚಿತ್ರವು ಕಬ್ಬಿಣದ ಮೊಳೆ ತೂರಿಕೊಂಡಿರುವ ಮಾನವ ಹಿಮ್ಮಡಿ ಮೂಳೆಯ ನಕಲು ಆಗಿದೆ. ನಿಜವಾದ ಮೂಳೆಯು 1968ರಲ್ಲಿ, ಉತ್ತರ ಯೆರೂಸಲೇಮಿನಲ್ಲಿ ಭೂಅಗೆತ ಮಾಡುವಾಗ ಸಿಕ್ಕಿತು. ಇದು ರೋಮನ್ನರ ಸಮಯದ್ದಾಗಿತ್ತು. ಆ ಮೂಳೆಯಲ್ಲಿದ್ದ ಮೊಳೆಯ ಉದ್ದ 11.5 ಸೆಂ.ಮೀ. (4.5 ಇಂಚು). ಮರಣಶಿಕ್ಷೆ ವಿಧಿಸಲಾದ ವ್ಯಕ್ತಿಯನ್ನು ಮರದ ಕಂಬಕ್ಕೆ ಜಡಿಯಲಿಕ್ಕಾಗಿ ಬಹುಶಃ ಮೊಳೆಗಳನ್ನು ಉಪಯೋಗಿಸಲಾಗುತ್ತಿತ್ತು ಎನ್ನಲು ಇದು ಪುರಾತತ್ವಶಾಸ್ತ್ರ ಕೊಡುವ ಆಧಾರ ಆಗಿದೆ. ರೋಮನ್ ಸೈನಿಕರು ಯೇಸುವನ್ನು ಕಂಬಕ್ಕೆ ಜಡಿಯಲು ಇಂಥದ್ದೇ ಮೊಳೆಗಳನ್ನು ಬಳಸಿರಬೇಕು. ಈ ಮೂಳೆಯು ಒಂದು ಕಲ್ಲಿನ ಪೆಟ್ಟಿಗೆಯಲ್ಲಿ ಸಿಕ್ಕಿತು. ಮೃತ ವ್ಯಕ್ತಿಯ ದೇಹ ಕೊಳೆತುಹೋಗಿ ಬರೀ ಮೂಳೆ ಉಳಿದಾಗ ಅದನ್ನು ಈ ಕಲ್ಲಿನ ಪೆಟ್ಟಿಗೆಯಲ್ಲಿ ಹಾಕಲಾಗಿತ್ತು. ಮರದ ಕಂಬಕ್ಕೆ ಜಡಿದು ಮರಣಶಿಕ್ಷೆ ಅನುಭವಿಸಿದ ವ್ಯಕ್ತಿಯನ್ನು ಸಮಾಧಿ ಮಾಡುವ ಅವಕಾಶವಿತ್ತು ಎಂದು ಇದರಿಂದ ಗೊತ್ತಾಗುತ್ತದೆ.—ಮತ್ತಾ 27:35 .