ನಮಗೆ ಸರಿ ಅನಿಸೋದು ಯಾವಾಗ್ಲೂ ಸರಿಯಾಗೇ ಇರುತ್ತಾ?
ಯಾವುದು ಸರಿ ಯಾವುದು ತಪ್ಪು? ಜನ್ರು ಹೇಗೆ ತೀರ್ಮಾನ ಮಾಡ್ತಾರೆ?
ಕೆಲವೊಂದು ವಿಷ್ಯಗಳಲ್ಲಿ ಜನ್ರಿಗೆ ಯಾವುದು ಸರಿ ಯಾವುದು ತಪ್ಪು ಅಂತ ಸುಲಭವಾಗಿ ಗೊತ್ತಾಗಿಬಿಡುತ್ತೆ. ಉದಾಹರಣೆಗೆ, ಕೊಲೆ, ಅತ್ಯಾಚಾರ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಇದೆಲ್ಲ ತುಂಬ ತಪ್ಪು ಅಂತ ಒಪ್ಕೊತಾರೆ. ಜನ್ರ ಜೊತೆ ಚೆನ್ನಾಗಿ ನಡ್ಕೊಳ್ಳೋದು, ಕರುಣೆ ತೋರಿಸೋದು, ಬೇರೆಯವ್ರನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋದು ಇದೆಲ್ಲ ತುಂಬ ಒಳ್ಳೇದು, ಇದೆಲ್ಲ ಸರಿ ಅಂತ ಹೇಳ್ತಾರೆ. ಆದ್ರೆ ಇನ್ನು ಕೆಲವು ವಿಷ್ಯಗಳಲ್ಲಿ ಉದಾಹರಣೆಗೆ ಸೆಕ್ಸ್ ಬಗ್ಗೆ, ಪ್ರಾಮಾಣಿಕವಾಗಿ ಇರೋದ್ರ ಬಗ್ಗೆ, ಮಕ್ಕಳನ್ನ ಬೆಳೆಸೋದ್ರ ಬಗ್ಗೆ ಸರಿ ತಪ್ಪು ಅಂತೇನಿಲ್ಲ, ಅದೆಲ್ಲ ಅವ್ರವ್ರಿಗೆ ಬಿಟ್ಟ ವಿಷ್ಯ ಅಂತ ಹೇಳ್ತಾರೆ. ಈ ತರ ಜನ್ರು ಅವ್ರಿಗೆ ಇಷ್ಟ ಬಂದ ತರ, ಅವ್ರ ಸುತ್ತಮುತ್ತ ಇರೋರಿಗೆ ಇಷ್ಟ ಆಗೋ ತರ ತೀರ್ಮಾನಗಳನ್ನ ತಗೊತಾರೆ. ಈ ತರ ತೀರ್ಮಾನ ತಗೊಳ್ಳೋದು ಯಾವಾಗ್ಲೂ ಒಳ್ಳೇದಾಗಿರುತ್ತಾ?
ನಮಗೆ ಸರಿ ಅನಿಸೋದು ಯಾವಾಗ್ಲೂ ಸರಿಯಾಗೇ ಇರುತ್ತಾ?
ನಮ್ಮ ಮನಸ್ಸು ಯಾವುದು ಸರಿ ಯಾವುದು ತಪ್ಪು ಅಂತ ಹೇಳುತ್ತೆ. ಅದನ್ನ ನಾವು ಮನಸಾಕ್ಷಿ ಅಂತ ಹೇಳ್ತೀವಿ. (ರೋಮನ್ನರಿಗೆ 2:14, 15) ಚಿಕ್ಕ ಮಕ್ಕಳಿಗೂ ಮನಸಾಕ್ಷಿ ಇರುತ್ತೆ. ಅದಕ್ಕೇ ಅವರೇನಾದ್ರೂ ತಪ್ಪು ಮಾಡಿದಾಗ ‘ಅಯ್ಯೋ ಹಿಂಗ್ ಮಾಡಿಬಿಟ್ನಲ್ಲಾ’ ಅಂತ ಬೇಜಾರ್ ಮಾಡ್ಕೊತಾರೆ. ಆದ್ರೆ ಬೆಳಿತಾ ಬೆಳಿತಾ ಯಾವುದು ಸರಿ ಯಾವುದು ತಪ್ಪು ಅಂತ ಕುಟುಂಬದವರು, ಫ್ರೆಂಡ್ಸು, ಟೀಚರ್ಸ್, ನಮ್ಮ ಧರ್ಮ, ಸಮಾಜ, ಸಂಸ್ಕೃತಿ ಹೇಳ್ಕೊಡುತ್ತೆ. ಅದಕ್ಕೆ ತಕ್ಕ ಹಾಗೆ ನಾವೇನಾದ್ರೂ ತೀರ್ಮಾನ ತಗೊಂಡಾಗ ಅದು ಸರಿನಾ, ತಪ್ಪಾ ಅಂತ ಮನಸಾಕ್ಷಿ ಹೇಳುತ್ತೆ.
ಈ ತರ ನಾವು ಯಾವುದು ಸರಿ ಯಾವುದು ತಪ್ಪು ಅಂತ ತಿಳ್ಕೊಂಡಿದ್ರೆ ಬೇರೆಯವ್ರ ಜೊತೆ ಚೆನ್ನಾಗಿ ನಡ್ಕೊತೀವಿ, ಸಹಾಯ ಮಾಡ್ತೀವಿ. ಅವರು ಮಾಡಿದ ಸಹಾಯನೂ ನೆನಸ್ಕೊಳ್ತೀವಿ. ಅಷ್ಟೇ ಅಲ್ಲ, ಬೇರೆಯವ್ರ ಮನಸ್ಸನ್ನೂ ನೋಯಿಸೋಕೆ ಹೋಗಲ್ಲ. ನಮ್ಮ ಮಾನ ಮರ್ಯಾದೆ ಹೋಗೋ ಕೆಲಸಕ್ಕೂ ಕೈ ಹಾಕಲ್ಲ. ಜೊತೆಗೆ, ‘ಯಾಕಾದ್ರೂ ಹೀಗೆ ಮಾಡಿದ್ನೋ’ ಅಂತ ಮುಂದೆ ವಿಷಾದ ಪಡೋ ಕೆಲಸನೂ ಮಾಡಕ್ಕೆ ಹೋಗಲ್ಲ.
ನಮಗೆ ಸರಿ ಅಂದತಕ್ಷಣ ಅದು ಯಾವಾಗ್ಲೂ ಸರಿಯಾಗೇ ಇರುತ್ತೆ ಅಂತ ಅರ್ಥನಾ? ಗೆರಿಕ್ ಅನ್ನೋ ಯುವಕನ ಉದಾಹರಣೆ ನೋಡಿ. ಅವನು “ಇದು ನನ್ನ ಜೀವನ. ನನಗೆ ಸರಿ ಅನ್ಸಿದ್ದನ್ನ ನಾನು ಮಾಡ್ತೀನಿ” ಅಂತ ಹೇಳ್ತಿದ್ದ. ಆದ್ರೆ “ಇದ್ರಿಂದ ನನ್ನ ಜೀವನದಲ್ಲಿ ಸಂತೋಷನೇ ಇರಲಿಲ್ಲ. ನಾನು ಅನೈತಿಕತೆ ಮಾಡಿದೆ, ತುಂಬ ಕುಡಿತಿದ್ದೆ, ಡ್ರಗ್ಸ್ ತಗೊಳ್ತಿದ್ದೆ, ಹೊಡೆದಾಡ್ತಿದ್ದೆ” ಅಂತ ಅವನು ಹೇಳ್ತಾನೆ.
ಬೇರೆಯವ್ರಿಗೆ ಸರಿ ಅನಿಸೋದು ಯಾವಾಗ್ಲೂ ಸರಿಯಾಗೇ ಇರುತ್ತಾ?
ನಾವು ಒಂದು ತೀರ್ಮಾನ ಮಾಡುವಾಗ ನಮಗೆ ಹೇಗನಿಸುತ್ತೆ ಅಂತಷ್ಟೇ ಅಲ್ಲ, ಬೇರೆಯವ್ರಿಗೆ ಹೇಗನಿಸುತ್ತೆ ಅಂತನೂ ಯೋಚ್ನೆ ಮಾಡ್ತೀವಿ. ಅದಕ್ಕೇ ನಾವು ನಮ್ಮ ಮನೆಯವ್ರ ಹತ್ರ, ನಮ್ಮ ಫ್ರೆಂಡ್ಸ್ ಹತ್ರ ಒಂದ್ ಮಾತು ಕೇಳಿನೋಡ್ತೀವಿ. ಆಗ ಅವ್ರಿಗಿರೋ ಅನುಭವದಿಂದ, ತಿಳುವಳಿಕೆಯಿಂದ ನಮಗೆ ಒಳ್ಳೇದೂ ಆಗುತ್ತೆ, ಅವ್ರ ಪ್ರೀತಿ-ವಿಶ್ವಾಸನೂ ಗಳಿಸೋಕಾಗುತ್ತೆ.
ಬೇರೆಯವರು ಸರಿ ಅಂದತಕ್ಷಣ ಅದು ಯಾವಾಗ್ಲೂ ಸರಿಯಾಗೇ ಇರುತ್ತೆ ಅಂತ ಅರ್ಥನಾ? ಪ್ರಿಸಿಲ್ಲ ಅನ್ನೋ ಯುವ ಸಹೋದರಿಯ ಉದಾಹರಣೆ ನೋಡಿ. ಅವ್ರ ಫ್ರೆಂಡ್ಸು ಮದುವೆಗೆ ಮುಂಚೆ ಸೆಕ್ಸ್ ಮಾಡ್ತಿದ್ರು. ಇದು ತಪ್ಪಲ್ಲ ಅಂತನೂ ಹೇಳ್ತಿದ್ರು. ಅವ್ರನ್ನ ನೋಡಿ ಪ್ರಿಸಿಲ್ಲನೂ ಹಾಗೇ ಮಾಡಿಬಿಟ್ರು. ಆದ್ರೆ ಇದ್ರಿಂದ ಅವರು ಜೀವನದಲ್ಲಿ ಖುಷಿಯಾಗಿ ಇರಲಿಲ್ಲ. “ಬೇರೆಯವರು ಮಾಡೋದೆಲ್ಲ ಸರಿ ಅಂತ ನಾನು ಅಂದ್ಕೊಂಡಿದ್ದೆ. ಇದ್ರಿಂದ ನಾನು ಕೆಟ್ಟ ಕೆಲಸಗಳನ್ನ ಮಾಡಿಬಿಟ್ಟೆ. ಇಲ್ದೆ ಇರೋ ಕಷ್ಟಗಳನ್ನ ಮೈಮೇಲೆ ಎಳ್ಕೊಂಬಿಟ್ಟೆ. ನಾನು ಹೀಗೆ ಮಾಡಿದ್ರಿಂದ ನನಗೇನೂ ಒಳ್ಳೇದಾಗಲಿಲ್ಲ” ಅಂತ ಪ್ರಿಸಿಲ್ಲ ಹೇಳ್ತಾರೆ.
ಇದಕ್ಕಿಂತ ಒಳ್ಳೇ ದಾರಿ ಇದ್ಯಾ?
ಯಾವುದು ಸರಿ ಯಾವುದು ತಪ್ಪು ಅಂತ ನಾವು ತೀರ್ಮಾನ ಮಾಡುವಾಗ ನಮಗೇನು ಅನ್ಸುತ್ತೆ, ಬೇರೆಯವ್ರಿಗೆ ಏನು ಅನ್ಸುತ್ತೆ ಅಂತ ಯೋಚ್ನೆ ಮಾಡ್ತೀವಿ. ಅದು ಒಳ್ಳೇದೇ. ಆದ್ರೆ ಅದು ಯಾವಾಗ್ಲೂ ಸರಿಯಾಗೇ ಇರುತ್ತೆ ಅಂತ ಹೇಳಕ್ಕಾಗಲ್ಲ. ಯಾಕಂದ್ರೆ ಕೆಲವೊಮ್ಮೆ ನಾವು ಮಾಡೋ ತೀರ್ಮಾನಗಳಿಂದ ಮುಂದೆ ಏನು ಅಪಾಯ ಆಗುತ್ತೆ ಅಂತ ನಮಗೆ ಗೊತ್ತಾಗಲ್ಲ. ಆಗ ನಾವೂ ಬೇರೆಯವ್ರೂ ಎಲ್ರೂ ತೊಂದ್ರೆ ಅನುಭವಿಸಬೇಕಾಗುತ್ತೆ. (ಜ್ಞಾನೋಕ್ತಿ 14:12) ಅಷ್ಟೇ ಅಲ್ಲ, ನಾವು ಮಾಡೋ ತೀರ್ಮಾನ ಬೇರೆಯವ್ರಿಗೆ ಸರಿ ಅನಿಸಿದ್ರೂ ಅದ್ರಿಂದ ಒಳ್ಳೇದೇ ಆಗುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಅದೂ ಅಲ್ದೆ, ಕಾಲ ಹೋದಂಗೆ ಜನ ಯೋಚ್ನೆ ಮಾಡೋ ರೀತಿನೂ ಬದಲಾಗ್ತಾ ಇದೆ. ಜನ್ರು ಒಂದ್ ಕಾಲದಲ್ಲಿ ಸರಿ ಅಂದಿದ್ದನ್ನ ಈಗ ತಪ್ಪು ಅಂತಿದ್ದಾರೆ, ತಪ್ಪು ಅಂದಿದ್ದನ್ನ ಈಗ ಸರಿ ಅಂತಿದ್ದಾರೆ.
ಬೇರೆಯವ್ರಿಗೆ ಸರಿ ಅನಿಸೋದು ಯಾವಾಗ್ಲೂ ಸರಿಯಾಗೇ ಇರುತ್ತಾ?
ಹಾಗಾಗಿ ಯಾವುದು ಸರಿ ಯಾವುದು ತಪ್ಪು ಅಂತ ಕಂಡುಹಿಡಿಯೋಕೆ ಬೇರೆ ದಾರಿ ಇದ್ಯಾ? ಜೀವನಪೂರ್ತಿ ಸಂತೋಷವಾಗಿ ಇರೋ ತರ ತೀರ್ಮಾನಗಳನ್ನ ಮಾಡೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
ಒಂದು ಪುಸ್ತಕ ಸಹಾಯ ಮಾಡುತ್ತೆ. ಅದು ತೋರಿಸೋ ದಾರಿ ಯಾವಾಗ್ಲೂ ಸರಿಯಾಗೇ ಇರುತ್ತೆ. ಅದನ್ನ ನಾವು ಯಾವಾಗ್ಲೂ ನಂಬಬಹುದು. ಅದ್ರಿಂದ ಎಲ್ಲಾ ತರದ ಜನ್ರಿಗೂ, ಎಲ್ಲಾ ಕಡೆ ಇರೋ ಜನ್ರಿಗೂ ಸಹಾಯ ಆಗಿದೆ. ಅದು ಯಾವುದು ಅಂತ ಮುಂದಿನ ಲೇಖನದಲ್ಲಿ ನೋಡಿ.