ಯಾವುದು ಸರಿ ಯಾವುದು ತಪ್ಪು? ಬೈಬಲ್ ಅದನ್ನ ತೋರಿಸ್ಕೊಡುತ್ತೆ
ನಮಗೆ ಸರಿ ಅನಿಸಿದ್ದನ್ನ ಅಥವಾ ಬೇರೆಯವ್ರಿಗೆ ಸರಿ ಅನಿಸಿದ್ದನ್ನ ಮನಸ್ಸಲ್ಲಿ ಇಟ್ಕೊಂಡು ತೀರ್ಮಾನಗಳನ್ನ ಮಾಡಿದ್ರೆ ಅದ್ರಿಂದ ಯಾವಾಗ್ಲೂ ಒಳ್ಳೇದೇ ಆಗುತ್ತೆ ಅಂತ ಹೇಳಕ್ಕಾಗಲ್ಲ. ಅದಕ್ಕೆ ಕಾರಣ ಏನು ಅಂತ ಬೈಬಲ್ ಹೇಳುತ್ತೆ. ಅಷ್ಟೇ ಅಲ್ಲ, ಯಾವುದು ಸರಿ ಯಾವುದು ತಪ್ಪು ಅಂತಾನೂ ತೋರಿಸ್ಕೊಡುತ್ತೆ. ಅದ್ರಲ್ಲಿ ಹೇಳೋ ತರ ತೀರ್ಮಾನಗಳನ್ನ ಮಾಡಿದ್ರೆ ನಾವು ಜೀವನಪೂರ್ತಿ ಖುಷಿಯಾಗಿ ಇರ್ತೀವಿ.
ನಮಗೆ ದೇವರ ಸಹಾಯ ಬೇಕು
ಯಾವುದು ಸರಿ ಯಾವುದು ತಪ್ಪು ಅಂತ ತೀರ್ಮಾನ ಮಾಡುವಾಗ ನಾವು ಯೆಹೋವ ದೇವರa ಹತ್ರ ಕೇಳಬೇಕು ಅನ್ನೋದು ಆತನ ಆಸೆ. ಯಾಕಂದ್ರೆ ನಾವಾಗೇ ತೀರ್ಮಾನ ಮಾಡ್ಕೊಳ್ಳೋಕೆ ನಮ್ಮಿಂದ ಆಗಲ್ಲ ಅಂತ ಬೈಬಲ್ ಹೇಳುತ್ತೆ. (ಯೆರೆಮೀಯ 10:23) ಅದಕ್ಕೇ ಯೆಹೋವ ದೇವರು ಯಾವುದು ಸರಿ ಯಾವುದು ತಪ್ಪು ಅಂತ ಬೈಬಲಲ್ಲಿ ಬರೆಸಿದ್ದಾನೆ. ದೇವರಿಗೆ ನಾವಂದ್ರೆ ಪಂಚಪ್ರಾಣ. ನಾವು ತಪ್ಪು ಮಾಡಿ ಪಾಠ ಕಲಿಯೋದು ದೇವರಿಗೆ ಸ್ವಲ್ಪನೂ ಇಷ್ಟ ಇಲ್ಲ. (ಧರ್ಮೋಪದೇಶಕಾಂಡ 5:29; 1 ಯೋಹಾನ 4:8) ಅದೂ ಅಲ್ದೆ, ಆತನು ನಮ್ಮ ಸೃಷ್ಟಿಕರ್ತ. ನಮಗೆ ಏನು ಒಳ್ಳೇದು ಅಂತ ಆತನಿಗೆ ಗೊತ್ತಿರೋಷ್ಟು ಬೇರೆ ಯಾರಿಗೂ ಗೊತ್ತಿಲ್ಲ. ಹಾಗಾಗಿ ನಮ್ಮ ಜೀವನದಲ್ಲಿ ಸರಿ ದಾರಿ ಯಾವುದು ಅಂತ ಆತನಷ್ಟು ಚೆನ್ನಾಗಿ ಬೇರೆ ಯಾರಿಂದನೂ ತೋರಿಸೋಕೆ ಆಗಲ್ಲ. (ಕೀರ್ತನೆ 100:3; 104:24) ಆದ್ರೂ ದೇವರು ‘ನನ್ನ ಮಾತು ಕೇಳಿ’ ಅಂತ ಯಾರನ್ನೂ ಯಾವತ್ತೂ ಒತ್ತಾಯ ಮಾಡಲ್ಲ.
ಯೆಹೋವ ದೇವರು ಈ ಭೂಮಿ ಮೇಲೆ ಮೊದಮೊದ್ಲು ಆದಾಮ ಮತ್ತು ಹವ್ವನ ಸೃಷ್ಟಿ ಮಾಡಿ ಅವರು ಖುಷಿಯಾಗಿ ಇರೋಕೆ ಏನೆಲ್ಲ ಬೇಕೋ ಅದನ್ನೆಲ್ಲಾ ಕೊಟ್ಟನು. (ಆದಿಕಾಂಡ 1:28, 29; 2:8, 15) ಅದ್ರ ಜೊತೆಗೆ ಕೆಲವು ಚಿಕ್ಕಪುಟ್ಟ ನಿಯಮಗಳನ್ನ ಕೊಟ್ಟು ಅದನ್ನ ಪಾಲಿಸೋಕೆ ಹೇಳಿದನು. ಆದ್ರೆ ಒತ್ತಾಯ ಮಾಡಲಿಲ್ಲ. ಅದನ್ನ ಪಾಲಿಸಬೇಕಾ ಬೇಡ್ವಾ ಅನ್ನೋ ಆಯ್ಕೆನ ಅವ್ರಿಗೇ ಬಿಟ್ಟುಬಿಟ್ಟನು. (ಆದಿಕಾಂಡ 2:9, 16, 17) ಆದ್ರೆ ಆದಾಮ-ಹವ್ವ ದೇವರ ಮಾತನ್ನ ಕೇಳದೆ ತಮಗೆ ಇಷ್ಟ ಬಂದ ಹಾಗೆ ಮಾಡಿದ್ರು. (ಆದಿಕಾಂಡ 3:6) ಇದ್ರಿಂದ ಏನಾಯ್ತು? ಅವರು ತಮ್ಮ ಜೀವನದಲ್ಲಿ ಸುಖ-ನೆಮ್ಮದಿನೆಲ್ಲ ಕಳ್ಕೊಂಡ್ರು. ಅವತ್ತಿಂದ ಇವತ್ತಿನ ತನಕ ಯಾರೆಲ್ಲ ದೇವರ ಮಾತನ್ನ ಕೇಳದೆ ತಮಗಿಷ್ಟ ಬಂದ ಹಾಗೆ ನಡ್ಕೊಂಡಿದ್ದಾರೋ ಅವರು ಯಾರೂ ಜೀವನದಲ್ಲಿ ನಿಜವಾಗ್ಲೂ ಖುಷಿಯಾಗಿ ಇಲ್ಲ.—ಪ್ರಸಂಗಿ 8:9.
ಹಾಗಾಗಿ ನಾವು ಬೈಬಲಲ್ಲಿ ಇರೋದನ್ನ ಪಾಲಿಸಿದ್ರೆ ಜೀವನಪೂರ್ತಿ ಖುಷಿಯಾಗಿ ಇರ್ತೀವಿ, ಸರಿಯಾದ ತೀರ್ಮಾನಗಳನ್ನ ಮಾಡ್ತೀವಿ. ಈ ಪುಸ್ತಕ ಎಲ್ಲಾ ತರದ ಜನ್ರಿಗೂ ಸಹಾಯ ಮಾಡುತ್ತೆ. (2 ತಿಮೊತಿ 3:16, 17; “ಎಲ್ರಿಗೋಸ್ಕರ ಇರೋ ಪುಸ್ತಕ” ಅನ್ನೋ ಚೌಕ ನೋಡಿ.) ಅದು ಹೇಗೆ ಅಂತ ನೋಡೋಣ್ವಾ?
ಬೈಬಲಲ್ಲಿ ಇರೋದು ನಿಜವಾಗ್ಲೂ ‘ದೇವರ ಮಾತೇ’ ಅಂತ ನಾವ್ಯಾಕೆ ನಂಬಬಹುದು?—1 ಥೆಸಲೊನೀಕ 2:13. ಅದನ್ನ ತಿಳ್ಕೊಳ್ಳೋಕೆ jw.orgನಲ್ಲಿ ಬೈಬಲನ್ನು ಯಾರು ಬರೆಸಿದರು? ಅನ್ನೋ ವಿಡಿಯೋ ನೋಡಿ.
ದೇವರು ಹೇಳೋ ಬುದ್ಧಿಮಾತು ಬೈಬಲಲ್ಲಿ ಇದೆ
ಬೈಬಲಲ್ಲಿ ಯೆಹೋವ ದೇವರು ಜನ್ರ ಜೊತೆ ಹೇಗೆಲ್ಲ ನಡ್ಕೊಂಡನು ಅನ್ನೋದ್ರ ಬಗ್ಗೆ ಇದೆ. ಅದನ್ನ ನೀವು ಓದುವಾಗ ದೇವರು ಯಾವುದನ್ನ ಸರಿ ಯಾವುದನ್ನ ತಪ್ಪು ಅಂತಾನೆ ಅಂತ ತಿಳ್ಕೊಳ್ಳೋಕೆ ಆಗುತ್ತೆ. ಏನು ಮಾಡಿದ್ರೆ ನಮಗೆ ಒಳ್ಳೇದಾಗುತ್ತೆ, ಏನು ಮಾಡಿದ್ರೆ ಕೆಟ್ಟದಾಗುತ್ತೆ ಅಂತನೂ ಗೊತ್ತಾಗುತ್ತೆ. (ಕೀರ್ತನೆ 19:7, 11) ಅದ್ರಲ್ಲಿರೋ ಬುದ್ಧಿಮಾತುಗಳು ಹಿಂದಿನ ಕಾಲಕ್ಕಷ್ಟೇ ಅಲ್ಲ ಈಗ್ಲೂ ಮುಂದಕ್ಕೂ ಒಳ್ಳೇ ತೀರ್ಮಾನಗಳನ್ನ ಮಾಡೋಕೆ ಸಹಾಯ ಮಾಡುತ್ತೆ.
ಉದಾಹರಣೆಗೆ ಜ್ಞಾನೋಕ್ತಿ 13:20ರಲ್ಲಿರೋ ಬುದ್ಧಿಮಾತನ್ನ ನೋಡಿ. ಅಲ್ಲಿ, “ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ, ಮೂರ್ಖನ ಜೊತೆ ಸೇರುವವನು ಹಾಳಾಗಿ ಹೋಗ್ತಾನೆ” ಅಂತ ಹೇಳುತ್ತೆ. ಈ ಮಾತು ಹಿಂದಿನ ಕಾಲದಲ್ಲಿ ಎಷ್ಟು ಸತ್ಯನೋ ಈಗ್ಲೂ ಅಷ್ಟೇ ಸತ್ಯ. ಬೈಬಲಲ್ಲಿ ಇದೊಂದೇ ಅಲ್ಲ ಇನ್ನೂ ತುಂಬ ಬುದ್ಧಿಮಾತುಗಳಿವೆ.—“ಮನುಷ್ಯನಿಗೆ ಎಷ್ಟೇ ವಯಸ್ಸಾದ್ರೂ ಬೈಬಲಿಗೆ ವಯಸ್ಸಾಗಲ್ಲ” ಅನ್ನೋ ಚೌಕ ನೋಡಿ.
‘ಇದೆಲ್ಲ ಸರಿ, ಆದ್ರೆ ಬೈಬಲ್ ನನಗೆ ಹೇಗೆ ಸಹಾಯ ಮಾಡುತ್ತೆ’ ಅಂತ ಯೋಚ್ನೆ ಮಾಡ್ತಾ ಇದ್ದೀರಾ? ಅದನ್ನ ತಿಳ್ಕೊಬೇಕಂದ್ರೆ ಮೊದ್ಲು ಬೈಬಲ್ ಬೇರೆಯವ್ರಿಗೆ ಹೇಗೆಲ್ಲ ಸಹಾಯ ಮಾಡಿದೆ ಅಂತ ತಿಳ್ಕೊಬೇಕು. ಅದನ್ನ ಮುಂದಿನ ಲೇಖನದಲ್ಲಿ ನೋಡೋಣ.
a ಯೆಹೋವ ಅನ್ನೋದು ದೇವರ ಹೆಸ್ರು.—ಕೀರ್ತನೆ 83:18.