ಯುದ್ಧ ಮತ್ತು ಹೊಡೆದಾಟಗಳು ಅದ್ರಿಂದ ಆಗ್ತಿರೋ ತೊಂದ್ರೆಗಳು
“ಎರಡನೇ ಮಹಾಯುದ್ಧ ಆದ್ಮೇಲೆ ಪ್ರಪಂಚದಲ್ಲಿ ಹೊಡೆದಾಟಗಳು ಮತ್ತು ಹಿಂಸೆ ಜಾಸ್ತಿ ಆಗಿದೆ. ಪ್ರಪಂಚದಲ್ಲಿರೋ ಕಾಲುಭಾಗದಷ್ಟು ಜನ ಅಂದ್ರೆ 200 ಕೋಟಿ ಜನ ಹೊಡೆದಾಟಗಳು ಆಗ್ತಿರೋ ಜಾಗದಲ್ಲಿ ಇದ್ದಾರೆ.”
ವಿಶ್ವಸಂಸ್ಥೆಯ ಉಪ ಪ್ರಧಾನ-ಕಾರ್ಯದರ್ಶಿ ಅಮೀನಾ ಜೆ. ಮೊಹಮ್ಮದ್, ಜನವರಿ 26, 2023.
ಶಾಂತಿ-ಸಮಾಧಾನ ಇರೋ ಜಾಗದಲ್ಲೂ ದಿಢೀರಂತ ಯುದ್ಧ, ಹೊಡೆದಾಟಗಳು ಶುರುವಾಗಬಹುದು. ಇದ್ರಿಂದ ಆ ಜಾಗದಲ್ಲಿ ಇರೋರಿಗೆ ಮಾತ್ರ ಅಲ್ಲ, ದೂರದಲ್ಲಿ ಇರೋರಿಗೂ ತೊಂದ್ರೆ ಆಗುತ್ತೆ. ಅವರು ಟಿ.ವಿಯಲ್ಲಿ, ಇಂಟರ್ನೆಟಲ್ಲಿ ಇದನ್ನೆಲ್ಲ ನೋಡೋದ್ರಿಂದ ಅವ್ರ ನೆಮ್ಮದಿ ಹಾಳಾಗುತ್ತೆ. ಅಷ್ಟೇ ಅಲ್ಲ, ಒಂದು ದೇಶದಲ್ಲಿ ಯುದ್ಧ ಆದ್ರೆ ಬೇರೆ ದೇಶದಲ್ಲಿ ಬೆಲೆ ಏರಿಕೆ, ಆರ್ಥಿಕ ನಷ್ಟ ಆಗುತ್ತೆ. ಎಷ್ಟೋ ಸಲ ಯುದ್ಧ ನಿಂತ್ರೂ ಅದ್ರಿಂದಾಗೋ ಕೆಟ್ಟ ಪರಿಣಾಮಗಳು ವರ್ಷಗಳಾದ್ರೂ ಹಾಗೇ ಇರುತ್ತೆ. ಯುದ್ಧದಿಂದ ಆಗೋ ಕೆಲವು ತೊಂದ್ರೆಗಳನ್ನ ಈಗ ನೋಡೋಣ:
ಆಹಾರದ ಕೊರತೆ. ವಿಶ್ವ ಆಹಾರ ಸಂಸ್ಥೆಯ ಪ್ರಕಾರ “ಜನ್ರು ಹಸಿವಿಂದ ನರಳ್ತಾ ಇರೋದಕ್ಕೆ ಯುದ್ಧಗಳೇ ಮುಖ್ಯ ಕಾರಣ. ಅವ್ರಲ್ಲಿ 70% ಜನ್ರು ಯುದ್ಧ, ಹೊಡೆದಾಟಗಳು ನಡಿಯೋ ಜಾಗದಲ್ಲಿದ್ದಾರೆ.”
ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು. ‘ಯುದ್ಧ ಯಾವಾಗ ಶುರುವಾಗುತ್ತೋ, ನಮಗೇನು ತೊಂದ್ರೆ ಆಗುತ್ತೋ’ ಅನ್ನೋ ಭಯದಿಂದ ಜನ್ರು ಒತ್ತಡ, ಚಿಂತೆಲಿ ಮುಳುಗಿಹೋಗ್ತಾರೆ. ಯುದ್ಧ ಮತ್ತು ಹೊಡೆದಾಟಗಳು ನಡೆಯೋ ಜಾಗದಲ್ಲಿರೋ ಜನ್ರ ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಗಾಯ ಆಗುತ್ತೆ. ಇದ್ರಿಂದ ಮಾನಸಿಕ ಕಾಯಿಲೆಗಳು ಶುರುವಾಗುತ್ತೆ. ಅದಕ್ಕೆ ಚಿಕಿತ್ಸೆ ಕೂಡ ಅಲ್ಲಿ ಸುಲಭವಾಗಿ ಸಿಗಲ್ಲ.
ಮನಸ್ಸಿಲ್ಲದೇ ಇದ್ರೂ ಮನೆಬಿಟ್ಟು ಹೋಗಬೇಕಾಗುತ್ತೆ. ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಪ್ರಕಾರ, ಸೆಪ್ಟೆಂಬರ್ 2023ರಷ್ಟಲ್ಲಿ ಪ್ರಪಂಚದಲ್ಲಿರೋ 11 ಕೋಟಿ 40 ಲಕ್ಷಕ್ಕಿಂತ ಜಾಸ್ತಿ ಜನ ಮನೆ ಬಿಟ್ಟು ಬೇರೆ ಕಡೆ ಹೋಗಬೇಕಾಯ್ತು. ಇದಕ್ಕೆಲ್ಲಾ ಯುದ್ಧ ಮತ್ತು ಹೊಡೆದಾಟಗಳೇ ದೊಡ್ಡ ಕಾರಣ.
ಹಣಕಾಸಿನ ಸಮಸ್ಯೆ. ಯುದ್ಧಗಳಿಂದ ಜನ್ರು ಹಣಕಾಸಿನ ಸಮಸ್ಯೆ ಎದುರಿಸಬೇಕಾಗುತ್ತೆ. ಯಾಕಂದ್ರೆ ಅಂಥ ಸಮಯದಲ್ಲಿ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗುತ್ತೆ. ಜನ್ರ ಆರೋಗ್ಯ ಕಾಪಾಡೋಕೆ ಮತ್ತು ಶಿಕ್ಷಣ ಕೊಡೋಕಂತ ಇರೋ ಹಣವನ್ನ ಸರ್ಕಾರ ಮಿಲಿಟರಿ ಕೆಲಸಗಳಿಗೆ ಉಪಯೋಗಿಸುತ್ತೆ. ಇದ್ರಿಂದ ಸಿಗಬೇಕಾಗಿರೋ ಸೌಲಭ್ಯಗಳು ಸಿಗದೇ ಜನ್ರಿಗೆ ತೊಂದ್ರೆ ಆಗುತ್ತೆ. ಅಷ್ಟೇ ಅಲ್ಲ, ಯುದ್ಧದಿಂದ ಹಾಳಾಗಿರೋದನ್ನೆಲ್ಲ ಸರಿಮಾಡೋಕೆ ತುಂಬ ಹಣ ಖರ್ಚಾಗುತ್ತೆ.
ಪರಿಸರ ಹಾಳಾಗುತ್ತೆ. ಯುದ್ಧದಿಂದ ಪರಿಸರ ನಾಶ ಆಗುತ್ತೆ. ಇದ್ರಿಂದ ಜನ್ರಿಗೆ ತೊಂದ್ರೆ ಆಗುತ್ತೆ. ಕಲುಷಿತ ಆಗಿರೋ ನೀರು, ಗಾಳಿ ಮತ್ತು ಮಣ್ಣಿಂದ ಬರೋ ಕಾಯಿಲೆಗಳು ತುಂಬ ವರ್ಷಗಳ ತನಕ ಇರುತ್ತೆ. ಯುದ್ಧ ಮುಗಿದ್ರೂ ಮಣ್ಣೊಳಗೆ ಮುಚ್ಚಿಟ್ಟಿರೋ ನೆಲಬಾಂಬ್ಗಳಿಂದ ಅಪಾಯಗಳು ತಪ್ಪಿದ್ದಲ್ಲ.
ಯುದ್ಧದಿಂದ ನಾಶನೂ ಆಗುತ್ತೆ, ನಷ್ಟನೂ ಆಗುತ್ತೆ.