ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಮೇ ಪು. 20-25
  • ಯೆಹೋವನ ಹೆಸ್ರು ಯೇಸುಗೆ ಎಷ್ಟು ಮುಖ್ಯ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಹೆಸ್ರು ಯೇಸುಗೆ ಎಷ್ಟು ಮುಖ್ಯ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಶಿಷ್ಯರಿಗೆ ನಿನ್ನ ಹೆಸ್ರನ್ನ ಚೆನ್ನಾಗಿ ಹೇಳಿಕೊಟ್ಟಿದ್ದೀನಿ”
  • ‘ನೀನು ನನಗೆ ನಿನ್ನ ಹೆಸ್ರನ್ನ ಕೊಟ್ಟೆ’
  • ‘ಅಪ್ಪಾ, ನಿನ್ನ ಹೆಸ್ರಿಗೆ ಗೌರವ ಬರಲಿ’
  • “ನನ್ನ ಪ್ರಾಣವನ್ನ . . . ಕೊಡ್ತೀನಿ”
  • “ನೀನು ಕೊಟ್ಟ ಕೆಲಸವನ್ನ ಮುಗಿಸಿದ್ದೀನಿ”
  • ಯೆಹೋವನ ಹೆಸ್ರು ನಿಮಗೆ ಎಷ್ಟು ಮುಖ್ಯ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • “ಯೆಹೋವನ ಹೆಸ್ರನ್ನ ಕೊಂಡಾಡಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಪ್ರೀತಿ ನ್ಯಾಯಕ್ಕೆ ಸಾಕ್ಷಿಯಾದ ಬಿಡುಗಡೆ ಬೆಲೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • “ನೀವು ಯಾರನ್ನ ಆರಾಧಿಸಬೇಕಂತ” ಇದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಮೇ ಪು. 20-25

ಅಧ್ಯಯನ ಲೇಖನ 22

ಗೀತೆ 23 ಯೆಹೋವನ ಆಳ್ವಿಕೆ ಆರಂಭ

ಯೆಹೋವನ ಹೆಸ್ರು ಯೇಸುಗೆ ಎಷ್ಟು ಮುಖ್ಯ?

“ನಾನು ನಿನ್ನ ಹೆಸ್ರನ್ನ ಇವ್ರಿಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ, ಇನ್ನೂ ಹೇಳ್ಕೊಡ್ತೀನಿ.”— ಯೋಹಾನ 17:26

ಈ ಲೇಖನದಲ್ಲಿ ಏನಿದೆ?

‘ಯೆಹೋವನ ಹೆಸ್ರನ್ನ ಚೆನ್ನಾಗಿ ಹೇಳಿ ಕೊಟ್ಟಿದ್ದೀನಿ’ ಅಂತ ಯೇಸು ಹೇಳಿದ ಮಾತಿನ ಅರ್ಥ ಏನು? ಯೇಸು ಯೆಹೋವನ ಹೆಸ್ರನ್ನ ಹೇಗೆ ಪವಿತ್ರ ಮಾಡಿದನು? ಮತ್ತು ಯೆಹೋವನ ಮೇಲೆ ಇರೋ ಆರೋಪಗಳೆಲ್ಲ ಸುಳ್ಳು ಅಂತ ಹೇಗೆ ಸಾಬೀತು ಮಾಡಿದನು ಅಂತ ನೋಡೋಣ.

1-2. (ಎ) ಯೇಸು ಸಾಯೋ ಹಿಂದಿನ ರಾತ್ರಿ ಏನು ಮಾಡಿದನು? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ನಾವು ಉತ್ರ ತಿಳ್ಕೊಳ್ತೀವಿ?

ಅವತ್ತು ಗುರುವಾರ ರಾತ್ರಿ, ನೈಸಾನ್‌ 14ನೇ ತಾರೀಕು, ಕ್ರಿಸ್ತ ಶಕ 33ನೇ ವರ್ಷ. ಯೇಸು ಅವನ ನಂಬಿಗಸ್ತ ಅಪೊಸ್ತಲರ ಜೊತೆಲಿ ಒಂದು ವಿಶೇಷ ಊಟ ಮಾಡ್ತಾನೆ. ತನ್ನ ಸ್ವಂತ ಶಿಷ್ಯನೇ ತನಗೆ ಇನ್ನೇನು ಮೋಸ ಮಾಡ್ತಾನೆ, ಅಲ್ಲಿನ ಮುಖಂಡರು ತನಗೆ ತಪ್ಪಾಗಿ ತೀರ್ಪು ಕೊಡ್ತಾರೆ, ಚಿತ್ರ ಹಿಂಸೆ ಕೊಟ್ಟು ಕೊನೆಗೆ ತನ್ನನ್ನ ಕೊಂದು ಹಾಕ್ತಾರೆ ಅಂತ ಯೇಸುಗೆ ಗೊತ್ತಿತ್ತು. ಅದಕ್ಕೆ ಯೇಸು ಊಟ ಆದ್ಮೇಲೆ ತನ್ನ ನಂಬಿಗಸ್ತ ಅಪೊಸ್ತಲರಿಗೆ ಧೈರ್ಯ ತುಂಬೋ, ಪ್ರೋತ್ಸಾಹ ಕೊಡೋ ಮಾತನ್ನ ಹೇಳ್ತಾನೆ. ಯೇಸು ಅವ್ರೆಲ್ರ ಜೊತೆ ತುಂಬ ಮುಖ್ಯವಾಗಿರೋ ಒಂದು ಪ್ರಾರ್ಥನೆ ಮಾಡ್ತಾನೆ. ಆ ಪ್ರಾರ್ಥನೆ ಯೋಹಾನ 17ನೇ ಅಧ್ಯಾಯದಲ್ಲಿ ಇದೆ.

2 ಯೇಸು ಮಾಡಿದ ಆ ಪ್ರಾರ್ಥನೆಯಿಂದ ನಾವು ತುಂಬ ಪಾಠ ಕಲಿಬಹುದು. ಯೇಸು ಆ ಪ್ರಾರ್ಥನೆಲಿ (1) ಯಾವ ವಿಷ್ಯದ ಬಗ್ಗೆ ತುಂಬ ಹೇಳಿದ್ದಾನೆ, (2) ಯೇಸು ಭೂಮಿಲಿದ್ದಾಗ ಅವನಿಗೆ ಯಾವ ವಿಷ್ಯ ತುಂಬ ಮುಖ್ಯ ಆಗಿತ್ತು ಅನ್ನೋ ಪ್ರಶ್ನೆಗಳಿಗೆ ಉತ್ರ ಇದೆ. ಈ ಲೇಖನದಲ್ಲಿ ಇದ್ರ ಬಗ್ಗೆ ನೋಡೋಣ.

“ಶಿಷ್ಯರಿಗೆ ನಿನ್ನ ಹೆಸ್ರನ್ನ ಚೆನ್ನಾಗಿ ಹೇಳಿಕೊಟ್ಟಿದ್ದೀನಿ”

3. (ಎ) ಯೇಸು ಯೋಹಾನ 17:6, 26ನೇ ವಚನದಲ್ಲಿ ಏನಂತ ಹೇಳಿದ್ದಾನೆ? (ಬಿ) ಯೇಸುವಿನ ಮಾತಿನ ಅರ್ಥ ಏನು?

3 ಯೇಸು ಆ ಪ್ರಾರ್ಥನೆಲಿ ಶಿಷ್ಯರಿಗೆ ‘ನಾನು ನಿನ್ನ ಹೆಸ್ರನ್ನ ಇವ್ರಿಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ’ ಅಂತ ಹೇಳಿದನು. ನಾವು ಸರಿಯಾಗಿ ನೋಡಿದ್ರೆ ಯೇಸು ತನ್ನ ಶಿಷ್ಯರಿಗೆ ಯೆಹೋವನ ‘ಹೆಸ್ರನ್ನ ಹೇಳಿಕೊಟ್ಟಿದ್ದೀನಿ’ ಅಂತ ಎರಡು ಸಲ ಹೇಳಿದ್ದಾನೆ. (ಯೋಹಾ. 17:6, 26 ಓದಿ) ಯೇಸು ಹೇಳಿದ ಈ ಮಾತಿನ ಅರ್ಥ ಏನು? ಯೇಸುವಿನ ಶಿಷ್ಯರಿಗೆ ಯೆಹೋವನ ಹೆಸರು ಅಲ್ಲಿವರೆಗೂ ಗೊತ್ತೇ ಇರಲಿಲ್ವಾ? ಚೆನ್ನಾಗಿ ಗೊತ್ತಿತ್ತು. ಯಾಕಂದ್ರೆ ಯೇಸುವಿನ ಶಿಷ್ಯರೆಲ್ಲ ಯೆಹೂದ್ಯರಾಗಿದ್ರು. ಅವರು ಹೀಬ್ರೂ ವಚನಗಳಿಂದ ಈಗಾಗಲೇ ಯೆಹೋವನ ಹೆಸ್ರನ್ನ ತಿಳ್ಕೊಂಡಿದ್ರು. ಆ ವಚನಗಳಲ್ಲಿ ಯೆಹೋವನ ಹೆಸರು ಸಾವಿರಾರು ಸಲ ಇತ್ತು. ಹಾಗಾಗಿ ಯೇಸು ಇಲ್ಲಿ ಬರೀ ‘ಯೆಹೋವ’ ಅನ್ನೋ ಹೆಸ್ರಿನ ಬಗ್ಗೆ ಹೇಳ್ತಿರಲಿಲ್ಲ. ಬದ್ಲಿಗೆ ಯೆಹೋವ ಎಂಥ ದೇವರು ಅನ್ನೋದ್ರ ಬಗ್ಗೆ ಹೇಳ್ತಿದ್ದನು. ಅಂದ್ರೆ ಯೆಹೋವನ ವ್ಯಕ್ತಿತ್ವ ಎಂಥದ್ದು, ಆತನ ಉದ್ದೇಶ ಏನು, ಆತನು ಏನೆಲ್ಲಾ ಮಾಡ್ತಾನೆ, ಆತನಲ್ಲಿ ಯಾವೆಲ್ಲ ಗುಣಗಳಿವೆ ಅಂತ ಚೆನ್ನಾಗಿ ವಿವರಿಸಿ ಹೇಳಿದನು. ಇದನ್ನ ಯೇಸುವಷ್ಟು ಚೆನ್ನಾಗಿ ಬೇರೆ ಯಾರಿಗೂ ವಿವರಿಸೋಕೆ ಆಗ್ತಿರಲಿಲ್ಲ. ಯಾಕಂದ್ರೆ ಯೇಸು ಯೆಹೋವನನ್ನ ಅರ್ಥ ಮಾಡ್ಕೊಂಡ ಹಾಗೆ ಬೇರೆ ಯಾರೂ ಅರ್ಥ ಮಾಡ್ಕೊಂಡಿಲ್ಲ.

4-5. (ಎ) ಒಬ್ಬ ವ್ಯಕ್ತಿಯ ಹೆಸರು ಯಾವಾಗ ನಮಗೆ ಹೆಚ್ಚು ಅಮೂಲ್ಯ ಆಗುತ್ತೆ? ಉದಾಹರಣೆ ಕೊಡಿ. (ಬಿ) ಯೇಸುವಿನ ಶಿಷ್ಯರು ಹೇಗೆ ಯೆಹೋವನನ್ನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಂಡ್ರು?

4 ಬರೀ ಒಬ್ಬ ವ್ಯಕ್ತಿ ಹೆಸ್ರು ಗೊತ್ತಿರೋದಕ್ಕೂ ಆ ವ್ಯಕ್ತಿನ ಚೆನ್ನಾಗಿ ತಿಳ್ಕೊಳ್ಳೋದಕ್ಕೂ ವ್ಯತ್ಯಾಸ ಇದೆ. ಇದನ್ನ ನಾವು ಒಂದು ಉದಾಹರಣೆಯಿಂದ ಅರ್ಥ ಮಾಡ್ಕೊಳೋಣ. ನಿಮ್ಮ ಸಭೆಲಿ ಒಬ್ಬ ಹಿರಿಯರಿದ್ದಾರೆ, ಅವರ ಹೆಸ್ರು ಡೇವಿಡ್‌ ಮತ್ತು ಅವರು ಒಂದು ಆಸ್ಪತ್ರೆಯಲ್ಲಿ ಡಾಕ್ಟರ್‌ ಆಗಿ ಕೆಲಸ ಮಾಡ್ತಿದ್ದಾರೆ ಅಂತ ಅಂದ್ಕೊಳಿ. ನೀವು ಆ ಅವ್ರನ್ನ ಎಷ್ಟೋ ವರ್ಷಗಳಿಂದ ನೋಡಿದ್ದೀರ. ನಿಮಗೆ ಅವ್ರ ಒಳ್ಳೆ ಪರಿಚಯ ಇದೆ. ಒಂದಿನ ನಿಮಗೆ ಜೀವ ಹೋಗೋ ಪರಿಸ್ಥಿತಿ ಬಂದಾಗ ನಿಮ್ಮನ್ನ ಅದೇ ಆಸ್ಪತ್ರೆಯಲ್ಲೇ ಅಡ್ಮಿಟ್‌ ಮಾಡ್ತಾರೆ ಅಂತ ಅಂದ್ಕೊಳಿ. ಆಗ ಆ ಹಿರಿಯ ತುಂಬ ಕಷ್ಟಪಟ್ಟು ನಿಮಗೆ ಆಪರೇಷನ್‌ ಮಾಡಿ ನಿಮ್ಮ ಪ್ರಾಣ ಉಳಿಸ್ತಾರೆ. ಈಗ ನಿಮಗೆ ಡೇವಿಡ್‌ ಅನ್ನೋ ಹೆಸ್ರನ್ನ ಕೇಳಿದ್ರೆ ಏನು ನೆನಪಾಗುತ್ತೆ? ಬರೀ ನಿಮ್ಮ ಸಭೆ ಹಿರಿಯ ಅಂತಲ್ಲ, ನಿಮ್ಮ ಜೀವ ಉಳಿಸಿದ ಡಾಕ್ಟರ್‌ ಅಂತಾನೂ ನೆನಪಾಗುತ್ತಲ್ವಾ!

5 ಅದೇ ತರಾನೇ ಯೇಸುವಿನ ಶಿಷ್ಯರೂ ಯೆಹೋವನ ಹೆಸ್ರನ್ನ, ಯೆಹೋವನ ಬಗ್ಗೆ ಒಂದಿಷ್ಟು ವಿಷ್ಯನ ಓದಿ, ಬೇರೆಯವ್ರಿಂದ ಕೇಳಿಸ್ಕೊಂಡು ತಿಳ್ಕೊಂಡಿದ್ರು. ಆದ್ರೆ ಯೆಹೋವನನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದು ಯೇಸು ಭೂಮಿಗೆ ಬಂದು ಆತನ ಬಗ್ಗೆ ಕಲಿಸಿದಾಗಲೇ! ನಾವು ಯಾಕೆ ಆ ತರ ಹೇಳ್ತೀವಿ? ಯೇಸು ಮಾತಾಡಿದ ರೀತಿ, ಜನರ ಜೊತೆ ನಡ್ಕೊಂಡ ರೀತಿನ ನೋಡಿದಾಗ ಶಿಷ್ಯರಿಗೆ ಯೆಹೋವ ಜನ್ರ ಜೊತೆ ಹೇಗೆ ನಡ್ಕೊಳ್ತಾನೆ, ಅವ್ರನ್ನ ಎಷ್ಟು ಪ್ರೀತಿಸ್ತಾನೆ ಅನ್ನೋದು ಚೆನ್ನಾಗಿ ಅರ್ಥ ಆಯ್ತು. ಈ ಕಾರಣದಿಂದನೇ ಯೇಸು ಕಲಿಸ್ತಿದ್ದ ಮತ್ತು ಜನ್ರ ಜೊತೆ ನಡ್ಕೊಳ್ತಿದ್ದ ರೀತಿನ ನೋಡಿ ಅಪೊಸ್ತಲರು ಯೆಹೋವನನ್ನ ಚೆನ್ನಾಗಿ ತಿಳ್ಕೊಂಡ್ರು ಅಂತ ನಾವು ಹೇಳಬಹುದು.—ಯೋಹಾ. 14:9; 17:3.

‘ನೀನು ನನಗೆ ನಿನ್ನ ಹೆಸ್ರನ್ನ ಕೊಟ್ಟೆ’

6. ‘ಯೆಹೋವ ತನ್ನ ಹೆಸ್ರನ್ನ ಯೇಸುಗೆ ಕೊಟ್ಟ’ ಅನ್ನೋ ಮಾತಿನ ಅರ್ಥ ಏನು? (ಯೋಹಾ. 17:11, 12)

6 ಯೇಸು ತನ್ನ ಶಿಷ್ಯರಿಗೋಸ್ಕರ ಮಾಡಿದ ಪ್ರಾರ್ಥನೆಲಿ ಯೆಹೋವನ ಹತ್ರ, “ಅಪ್ಪಾ, ಇವರನ್ನ ಕಾಪಾಡು. ನೀನು ನನಗೆ ಕೊಟ್ಟಿರೋ ಆ ಹೆಸ್ರಿಗೆ ಕಳಂಕ ಬರಬಾರದು” ಅಂತ ಬೇಡಿಕೊಂಡನು. (ಯೋಹಾ. 17:11, 12 ಓದಿ.) ಇಲ್ಲಿ ಯೇಸು, ‘ನನಗೆ ನಿನ್ನ ಹೆಸ್ರನ್ನ ಕೊಟ್ಟೆ’ ಅಂತ ಹೇಳ್ತಿದ್ದಾನೆ. ಅದ್ರ ಅರ್ಥ ಇನ್ಮೇಲೆ ಯೇಸುನ ಯೆಹೋವ ಅಂತ ಕರಿಬೇಕಂತಾನಾ? ಇಲ್ಲ. ನೀವು ಆ ಪ್ರಾರ್ಥನೆಲಿ ಯೇಸು ಹೇಳಿದ ಮಾತನ್ನ ಸರಿಯಾಗಿ ಗಮನಿಸಿದ್ರೆ ಯೇಸು, ‘ನಿನ್ನ ಹೆಸರು’ ಅಂತ ಹೇಳಿದ್ದಾನೆ. ಅಂದ್ರೆ ಆ ಹೆಸ್ರು ಯೆಹೋವನಿಗೆ ಸೇರಿದ್ದು ಅಂತ ಹೇಳಿದ್ದಾನೆ. ಇದ್ರ ಅರ್ಥ, ಅದು ಯೆಹೋವನಿಗೆ ಮಾತ್ರ ಸೇರಿದ ಹೆಸರು! ಯೇಸುವಿನ ಹೆಸರು ಅಲ್ಲ ಅಂತ. ಹಾಗಾದ್ರೆ ‘ನಿನ್ನ ಹೆಸ್ರನ್ನ ನನಗೆ ಕೊಟ್ಟೆ’ ಅಂತ ಯೇಸು ಹೇಳಿದ ಮಾತಿನ ಅರ್ಥ ಏನು? ಯೇಸು ಯೆಹೋವನ ಪ್ರತಿನಿಧಿಯಾಗಿದ್ದಾನೆ, ಆತನ ಪರ ಮಾತಾಡ್ತಾನೆ. ಯೇಸು ಈ ಭೂಮಿಗೆ ಯೆಹೋವನಿಗಾಗಿ ಬಂದನು, ಯೆಹೋವನ ಹೆಸ್ರಲ್ಲಿ ಅದ್ಭುತಗಳನ್ನ ಮಾಡಿದನು ಅಂತರ್ಥ. (ಯೋಹಾ. 5:43; 10:25) ಅಷ್ಟೇ ಅಲ್ಲ, ಯೇಸುವಿನ ಹೆಸ್ರಿನ ಅರ್ಥನೇ ‘ಯೆಹೋವನು ರಕ್ಷಣೆ ಆಗಿದ್ದಾನೆ’ ಅಂತ. ಇನ್ನೊಂದು ಮಾತಲ್ಲಿ ಹೇಳೋದಾದ್ರೆ ಯೇಸುವಿನ ಹೆಸ್ರಿನ ಅರ್ಥದಲ್ಲಿ ಯೆಹೋವನ ಹೆಸರೂ ಇದೆ.

7. ಯೇಸು ಯೆಹೋವನ ಪರವಾಗಿ ಅಥವಾ ಆತನ ಹೆಸ್ರಲ್ಲಿ ಮಾತಾಡಿದ ಅಂದ್ರೆ ಏನರ್ಥ? ಉದಾಹರಣೆ ಕೊಡಿ.

7 ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ಒಬ್ಬ ರಾಜನಿಗೆ ಒಬ್ಬ ರಾಯಭಾರಿ ಇರ್ತಾನೆ. ಈ ರಾಯಭಾರಿ ರಾಜನ ಪರವಾಗಿ ಜನ್ರ ಹತ್ರ ಹೋಗಿ ಮಾತಾಡ್ತಾನೆ. ಈ ರಾಯಭಾರಿ ಏನಾದ್ರೂ ಹೇಳಿದ್ರೆ, ಜನ ರಾಜನೇ ಹೇಳ್ತಿದ್ದಾನೆ ಅಂತ ಅದಕ್ಕೆ ಬೆಲೆ ಕೊಡ್ತಾರೆ. ಅದೇ ತರಾನೇ ಯೇಸು ಯೆಹೋವನ ರಾಯಭಾರಿಯಾಗಿದ್ದನು. ಹಾಗಾಗಿ ಯೇಸು ಜನ್ರ ಹತ್ರ ಯೆಹೋವನ ಹೆಸ್ರಿನಲ್ಲಿ ಯೆಹೋವನ ಪರವಾಗಿ ಮಾತಾಡಿದನು.—ಮತ್ತಾ. 21:9; ಲೂಕ 13:35.

8. ಯೇಸು ಭೂಮಿಗೆ ಬರೋಕೆ ಮುಂಚೆನೇ ‘ತನ್ನ ಹೆಸ್ರಲ್ಲಿ ಬರ್ತಾನೆ’ ಅಂತ ಯೆಹೋವ ಯಾಕೆ ಹೇಳಿದನು? (ವಿಮೋ. 23:20, 21)

8 ಬೈಬಲ್‌ ಯೇಸುನ ‘ವಾಕ್ಯ’ ಅಂತಾನೂ ಹೇಳುತ್ತೆ. ಯಾಕಂದ್ರೆ ಯೆಹೋವ ದೇವರು ಹೇಳೋ ವಿಷ್ಯನ ಮತ್ತು ನಿರ್ದೇಶನನ ಯೇಸು ಬೇರೆ ದೇವದೂತರಿಗೆ ಮತ್ತು ಮನುಷ್ಯರಿಗೆಲ್ಲ ಹೇಳ್ತಿದ್ದನು. (ಯೋಹಾ. 1:1-3) ಯೆಹೋವ ಇಸ್ರಾಯೇಲ್ಯರನ್ನ ಈಜಿಪ್ಟ್‌ನಿಂದ ಬಿಡಿಸೋಕೆ ಒಬ್ಬ ದೇವದೂತನನ್ನ ಬಳಸಿದನು. ಆ ದೇವದೂತ ಯೇಸುನೇ ಆಗಿರಬಹುದು. ಅದಕ್ಕೆ ಯೆಹೋವ ಇಸ್ರಾಯೇಲ್ಯರಿಗೆ ಈ ದೇವದೂತನ ಮಾತನ್ನ ಕೇಳಿ ಅಂತ ಹೇಳ್ತಾ “ಅವನು ನನ್ನ ಹೆಸ್ರಲ್ಲಿ ಬರ್ತಾನೆ”ಅಂತ ಹೇಳಿದನು.a (ವಿಮೋ. 23:20, 21 ಓದಿ.) “ನನ್ನ ಹೆಸ್ರಲ್ಲಿ ಬರ್ತಾನೆ” ಅನ್ನೋ ಮಾತಿನ ಅರ್ಥ ಏನು? ಯೇಸು ಯೆಹೋವನ ಪರವಾಗಿ ಮಾತಾಡ್ತಾನೆ. ಯೆಹೋವ ಮಾಡೋದೆಲ್ಲ ಸರಿಯಾಗಿರುತ್ತೆ, ಆತನ ಹೆಸರು ಪವಿತ್ರವಾಗಿರುತ್ತೆ ಅಂತ ಎಲ್ಲರಿಗೂ ಅರ್ಥ ಮಾಡಿಸ್ತಾನೆ ಅಂತರ್ಥ.

‘ಅಪ್ಪಾ, ನಿನ್ನ ಹೆಸ್ರಿಗೆ ಗೌರವ ಬರಲಿ’

9. ಯೇಸುಗೆ ಯೆಹೋವನ ಹೆಸರು ಎಷ್ಟು ಮುಖ್ಯವಾಗಿತ್ತು ಅಂತ ವಿವರಿಸಿ?

9 ಇಲ್ಲಿವರೆಗೂ ನೋಡಿದಂತೆ ಯೇಸು ಭೂಮಿಗೆ ಬರೋಕಿಂತ ಮುಂಚೆಯಿಂದಾನೂ ಯೆಹೋವನ ಹೆಸ್ರಿಗೆ ತುಂಬ ಬೆಲೆ ಕೊಡ್ತಿದ್ದನು. ಆ ಹೆಸರು ಯೇಸುವಿಗೆ ತುಂಬ ಮುಖ್ಯ ಆಗಿತ್ತು. ಯೇಸು ಭೂಮಿಗೆ ಬಂದ್ಮೇಲೂಆತನು ಮಾಡಿದ ಪ್ರತಿಯೊಂದ್ರಲ್ಲೂ ಯೆಹೋವನ ಹೆಸರು ತನಗೆ ಎಷ್ಟು ಮುಖ್ಯ ಅಂತ ತೋರಿಸಿದನು. ತನ್ನ ಜೀವನದ ಕೊನೇ ದಿನಗಳಲ್ಲಿ ಯೇಸು ಯೆಹೋವನಿಗೆ “‘ಅಪ್ಪಾ, ಎಲ್ಲ ಜನ್ರಿಗೂ ನಿನ್ನ ಹೆಸ್ರು ಗೊತ್ತಾಗಲಿ, ಅವರು ಅದಕ್ಕೆ ಗೌರವ ಕೊಡಲಿ’ ಅಂದನು. ಆಗ ‘ಅದಕ್ಕೆ ಗೌರವ ಬರೋ ತರ ಮಾಡಿದ್ದೀನಿ. ಇನ್ಮುಂದೆನೂ ಮಾಡ್ತೀನಿ’ ಅನ್ನೋ ಧ್ವನಿ ಸ್ವರ್ಗದಿಂದ ಬಂತು.”—ಯೋಹಾ. 12:28.

10-11. (ಎ) ಯೇಸು ಹೇಗೆ ಯೆಹೋವನ ಹೆಸ್ರಿಗೆ ಗೌರವ ಕೊಟ್ಟನು? (ಚಿತ್ರ ನೋಡಿ) (ಬಿ) ಯೆಹೋವನ ಹೆಸರು ಯಾಕೆ ಪವಿತ್ರ ಆಗಬೇಕು? (ಸಿ) ಯೆಹೋವನ ಹೆಸ್ರಿನ ಮೇಲೆ ಬಂದಿರೋ ಆರೋಪ ಸುಳ್ಳು ಅಂತ ಯಾಕೆ ಸಾಬೀತು ಮಾಡಬೇಕು?

10 ಯೇಸು ಯೆಹೋವನ ಹೆಸ್ರಿಗೆ ಗೌರವ ಕೊಡೋಕೆ ಏನು ಮಾಡಿದನು? ಯೆಹೋವನಲ್ಲಿ ಎಂಥ ಅದ್ಭುತ ಗುಣಗಳಿವೆ, ಯೆಹೋವನು ಎಷ್ಟೆಲ್ಲಾ ಒಳ್ಳೆ ಕೆಲಸಗಳನ್ನ ಮಾಡ್ತಾನೆ ಅಂತ ಜನ್ರಿಗೆ ಮನ ಮುಟ್ಟೋ ಹಾಗೆ ಕಲಿಸಿದನು. ಆದ್ರೆ ಯೆಹೋವನ ಹೆಸ್ರಿಗೆ ಗೌರವ ತರೋದ್ರಲ್ಲಿ ಇನ್ನೂ ಜಾಸ್ತಿ ವಿಷ್ಯಗಳನ್ನ ಮಾಡಬೇಕಿತ್ತು. ಯೆಹೋವನ ಹೆಸ್ರನ್ನ ಪವಿತ್ರ ಮಾಡಬೇಕಿತ್ತು, ಆತನ ಹೆಸ್ರಿನ ಮೇಲೆ ಬಂದಿರೋ ಆರೋಪಗಳೆಲ್ಲ ಸುಳ್ಳು ಅಂತ ಸಾಬೀತು ಮಾಡಬೇಕಿತ್ತು. ಅದಕ್ಕೆ ಯೇಸು ತನ್ನ ಶಿಷ್ಯರಿಗೆ ಮಾದರಿ ಪ್ರಾರ್ಥನೆ ಕಲಿಸುವಾಗ “ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ” ಅಂತ ಹೇಳಿದನು. ಹೀಗೆ ಯೆಹೋವನ ಹೆಸರು ಪವಿತ್ರವಾಗೋದು ಎಷ್ಟು ಮುಖ್ಯ ಅಂತ ಅವ್ರೆಲ್ರಿಗೂ ಕಲಿಸಿದನು.—ಮತ್ತಾ. 6:9.

11 ಯೆಹೋವನ ಹೆಸರು ಯಾಕೆ ಪವಿತ್ರ ಆಗಬೇಕು? ಯೆಹೋವನ ಹೆಸ್ರಿನ ಮೇಲೆ ಬಂದಿರೋ ಆರೋಪ ಸುಳ್ಳು ಅಂತ ಯಾಕೆ ಸಾಬೀತು ಮಾಡಬೇಕು? ಏದೆನ್‌ ತೋಟದಲ್ಲಿ ಏನಾಯ್ತು ಅಂತ ಯೋಚ್ನೆ ಮಾಡಿ. ಸೈತಾನ ಯೆಹೋವ ದೇವರ ಹೆಸ್ರಿಗೆ ಅವಮಾನ ಮಾಡಿದ. ಯೆಹೋವನ ಮೇಲೆ ಎಷ್ಟೋ ಆರೋಪಗಳನ್ನ ಹಾಕಿದ. ‘ಯೆಹೋವ ಒಬ್ಬ ಸುಳ್ಳುಗಾರ, ಆದಾಮ ಹವ್ವಗೆ ಒಳ್ಳೇದು ಆಗಬಾರದು ಅಂತ ಕುಯುಕ್ತಿ ಮಾಡ್ತಿದ್ದಾನೆ’ ಅಂತ ಅವನು ಹೇಳಿದ. (ಆದಿ. 3:1-5) ‘ಯೆಹೋವ ಯಾವುದನ್ನೂ ನ್ಯಾಯವಾಗಿ ಮಾಡ್ತಿಲ್ಲ’ ಅಂತ ಹೇಳಿದ. ಹೀಗೆ ಯೆಹೋವನ ಹೆಸ್ರಿಗೆ, ಆತನ ಗೌರವಕ್ಕೆ ಧಕ್ಕೆ ತಂದ, ಅವಮಾನ ಮಾಡಿದ. ಸಾವಿರಾರು ವರ್ಷ ಆದ್ಮೇಲೆ ಯೋಬನ ಸಮಯದಲ್ಲಿ ‘ಯೆಹೋವನನ್ನ ಆರಾಧಿಸೋ ಜನ್ರೆಲ್ಲ ಬರೀ ಸ್ವಾರ್ಥಕ್ಕೆ ಆರಾಧಿಸ್ತಾರೆ ಅಷ್ಟೇ. ಯಾರೂ ಪ್ರೀತಿಯಿಂದ ಆರಾಧಿಸಲ್ಲ. ಒಂದ್ಸಲ ಕಷ್ಟಗಳು ಬರಲಿ ಯೆಹೋವನನ್ನ ಆರಾಧನೆ ಮಾಡೋದನ್ನ, ಆತನನ್ನ ಪ್ರೀತಿಸೋದನ್ನೆಲ್ಲ ಬಿಟ್ಟುಬಿಡ್ತಾರೆ’ ಅಂತ ಹೇಳಿದ. (ಯೋಬ 1:9-11; 2:4) ಹಾಗಾಗಿ ಇಲ್ಲಿ ಯಾರು ಸುಳ್ಳು ಹೇಳ್ತಿದ್ದಾರೆ? ಯೆಹೋವನಾ? ಸೈತಾನನಾ? ಅಂತ ಒಂದೇ ರಾತ್ರಿಲಿ ಸಾಬೀತು ಮಾಡೋಕೆ ಆಗ್ತಿರಲಿಲ್ಲ. ಸಮಯನೇ ಇದಕ್ಕೆ ಉತ್ರ ಕೊಡಬೇಕಾಗಿತ್ತು.

ಯೇಸು ಬೆಟ್ಟದ ಭಾಷಣ ಮಾಡ್ತಿದ್ದಾನೆ.

ಯೆಹೋವನ ಹೆಸ್ರಿಗೆ ಗೌರವ ಕೊಡೋದು ಎಷ್ಟು ಮುಖ್ಯ ಅಂತ ಯೇಸು ತನ್ನ ಶಿಷ್ಯರಿಗೆ ಕಲಿಸಿದನು (ಪ್ಯಾರ 10 ನೋಡಿ)


“ನನ್ನ ಪ್ರಾಣವನ್ನ . . . ಕೊಡ್ತೀನಿ”

12. ಯೆಹೋವನ ಮೇಲಿದ್ದ ಪ್ರೀತಿಯಿಂದಾಗಿ ಯೇಸು ಏನು ಮಾಡೋಕೂ ರೆಡಿ ಇದ್ದನು?

12 ಯೇಸು ಯೆಹೋವನ ಮೇಲೆ ಜೀವನೇ ಇಟ್ಕೊಂಡಿದ್ದಾನೆ! ಅದಕ್ಕೆ, ಆತನ ಹೆಸ್ರನ್ನ ಪವಿತ್ರ ಮಾಡೋಕೆ, ಆತನ ಹೆಸ್ರಿನ ಮೇಲೆ ಬಂದಿರೋ ಆರೋಪ ಸುಳ್ಳು ಅಂತ ಸಾಬೀತು ಮಾಡೋಕೆ ಯೇಸು ಯಾವಾಗ್ಲೂ ರೆಡಿ ಇದ್ದನು. ಹಾಗಾಗಿ ಯೇಸು “ನನ್ನ ಪ್ರಾಣವನ್ನ . . . ಕೊಡ್ತೀನಿ” ಅಂತಾನೂ ಹೇಳಿದನು. (ಯೋಹಾ. 10:17, 18) ನೋಡಿದ್ರಾ? ಯೆಹೋವನ ಹೆಸ್ರಿಗೋಸ್ಕರ ಯೇಸು, ಪ್ರಾಣ ಕೊಡೋಕೂ ರೆಡಿ ಇದ್ದನು.b ಆದ್ರೆ ಆದಾಮ ಹವ್ವ ಯೆಹೋವನಿಗೆ ದ್ರೋಹ ಮಾಡಿದ್ರು. ಸೈತಾನನ ಜೊತೆಲಿ ಕೈಜೋಡಿಸಿದ್ರು. ಆದ್ರೆ ಯೇಸು ಮಾತ್ರ ಯೆಹೋವನಿಗೆ ದ್ರೋಹ ಬಗೆಯೋದ್ರ ಬಗ್ಗೆ ಕನಸು ಮನಸ್ಸಲ್ಲೂ ಯೋಚಿಸಲಿಲ್ಲ. (ಇಬ್ರಿ. 4:15; 5:7-10) ಯೇಸು ಭೂಮಿಯಲ್ಲಿ ಜೀವಿಸ್ವಾಗ,ಅದ್ರಲ್ಲೂ ಹಿಂಸಾ ಕಂಬದ ಮೇಲೆ ನರಳಿ-ನರಳಿ ಸಾಯುವಾಗ್ಲೂ ಯೆಹೋವನಿಗೆ ನಿಯತ್ತಾಗಿದ್ದನು. (ಇಬ್ರಿ. 12:2) ಹೀಗೆ ಯೆಹೋವನ ಮೇಲೆ ಮತ್ತು ಆ ಹೆಸ್ರಿನ ಮೇಲೆ ತನಗೆ ಎಷ್ಟು ಪ್ರೀತಿ ಇದೆ ಅಂತ ತೋರಿಸಿದನು.

13. ಸೈತಾನ ಸುಳ್ಳುಗಾರ ಅಂತ ಸಾಬೀತು ಮಾಡೋದ್ರಲ್ಲಿ ಯೇಸುಗೆ ಸರಿಸಾಟಿ ಯಾರೂ ಇಲ್ಲ ಅಂತ ಯಾಕೆ ಹೇಳಬಹುದು? (ಚಿತ್ರ ನೋಡಿ.)

13 ಯೇಸು ಮಾಡಿದ ಒಂದೊಂದು ಕೆಲಸಾನೂ ‘ಸೈತಾನನೇ ಸುಳ್ಳುಗಾರ, ಯೆಹೋವನು ಸತ್ಯವಂತ!’ ಅಂತ ಸಾಬೀತು ಮಾಡಿತು. (ಯೋಹಾ. 8:44) ಇಡೀ ಪ್ರಪಂಚದಲ್ಲಿ ಯೆಹೋವನ ಬಗ್ಗೆ ಯೇಸು ಅಷ್ಟು ಬೇರೆ ಯಾರಿಗೂ ಗೊತ್ತಿಲ್ಲ. ಒಂದುವೇಳೆ ಸೈತಾನ ಹಾಕಿದ ಆರೋಪಗಳಲ್ಲಿ ಎಳ್ಳಷ್ಟಾದ್ರೂ ಸತ್ಯ ಇದ್ದಿದ್ರೆ ಅದು ಯೇಸುಗೆ ಗೊತ್ತಿರ್ತಿತ್ತು. ಆದ್ರೆ ಅದ್ರಲ್ಲಿ ಯಾವ ಸತ್ಯಾನೂ ಇಲ್ಲದೇ ಇರೋದ್ರಿಂದಾನೇ ಯೇಸು ಕೊನೆವರೆಗೂ ಯೆಹೋವನ ಪರವಾಗಿ ನಿಂತ್ಕೊಂಡನು. ಆತನ ಹೆಸ್ರನ್ನ ಪವಿತ್ರ ಮಾಡಿದನು. ಒಂದು ಸಂದರ್ಭದಲ್ಲಿ ತನ್ನ ಪ್ರಾಣ ಹೋಗೋದನ್ನ ಯೆಹೋವ ತಡಿಯಲ್ಲ ಅಂತ ಗೊತ್ತಾದ್ಮೇಲೂ ಯೇಸು ಯೆಹೋವನಿಗೆ ನಿಯತ್ತಾಗಿದ್ದನು. ಆತನಿಗೆ ದ್ರೋಹ ಮಾಡೋದ್ರ ಬಗ್ಗೆ ಯೋಚ್ನೆನೂ ಮಾಡಲಿಲ್ಲ.—ಮತ್ತಾ. 27:46.c

ಯೇಸು ಹಿಂಸಾ ಕಂಬದಲ್ಲಿ ನೋವನ್ನ ಅನುಭವಿಸ್ತಿದ್ದಾನೆ.

ಯೇಸು ಮಾಡಿದ ಒಂದೊಂದು ಕೆಲಸಾನೂ ‘ಸೈತಾನನೇ ಸುಳ್ಳುಗಾರ, ಯೆಹೋವ ಸತ್ಯವಂತ’ ಅಂತ ಸಾಬೀತು ಮಾಡಿತು! (ಪ್ಯಾರ 13 ನೋಡಿ)


“ನೀನು ಕೊಟ್ಟ ಕೆಲಸವನ್ನ ಮುಗಿಸಿದ್ದೀನಿ”

14. ಯೇಸು ನಿಯತ್ತಾಗಿ ಇದ್ದಿದ್ದನ್ನ ನೋಡಿ ಯೆಹೋವ ಯಾವ ಬಹುಮಾನ ಕೊಟ್ಟನು?

14 ಯೇಸು ಸಾಯೋ ಹಿಂದಿನ ರಾತ್ರಿ ಪ್ರಾರ್ಥನೆಲಿ ಯೆಹೋವನಿಗೆ “ನೀನು ಕೊಟ್ಟ ಕೆಲಸವನ್ನ ಮುಗಿಸಿದ್ದೀನಿ” ಅಂತ ಹೇಳಿದನು. ಯೇಸು ನಿಯತ್ತಾಗಿ ಈ ಕೆಲಸ ಮುಗಿಸಿದ್ರಿಂದ ಯೆಹೋವ ತನಗೆ ಬಹುಮಾನ ಕೊಡ್ತಾನೆ ಅಂತ ನಂಬಿಕೆ ಇಟ್ಟಿದ್ದನು. (ಯೋಹಾ. 17:4, 5) ಯೇಸು ಇಟ್ಟಿದ್ದ ನಂಬಿಕೆನ ಯೆಹೋವ ದೇವರು ಉಳಿಸ್ಕೊಂಡನು. ಯೇಸು ಸತ್ತಮೇಲೆ ಆತನನ್ನ ಸಮಾಧಿಯಲ್ಲೇ ಬಿಟ್ಟು ಬಿಡಲಿಲ್ಲ. (ಅ. ಕಾ. 2:23, 24) ಆತನನ್ನ ಜೀವಂತವಾಗಿ ಎಬ್ಬಿಸಿದನು. ಆತನಿಗೆ ಸ್ವರ್ಗದಲ್ಲಿ ಅತೀ ಉನ್ನತ ಸ್ಥಾನವನ್ನ ಕೊಟ್ಟನು. (ಫಿಲಿ. 2:8, 9) ಯೇಸು ಆಮೇಲೆ ದೇವ್ರ ಆಳ್ವಿಕೆಯ ರಾಜನಾಗಿ ಅಧಿಕಾರ ಸ್ವೀಕರಿಸಿದನು. ದೇವ್ರ ಆಳ್ವಿಕೆ ಏನು ಮಾಡುತ್ತೆ? ಇದಕ್ಕೆ ಉತ್ರನ ಯೇಸು ಮಾದರಿ ಪ್ರಾರ್ಥನೆಲಿ ಹೇಳಿದ್ದಾನೆ. ಅಲ್ಲಿ, “ನಿನ್ನ [ಯೆಹೋವನ] ಆಳ್ವಿಕೆ ಬರಲಿ. ನಿನ್ನ ಇಷ್ಟ ಸ್ವರ್ಗದಲ್ಲಿ ನೆರವೇರೋ ತರ ಭೂಮಿಯಲ್ಲೂ ನೆರವೇರಲಿ” ಅಂತ ಇದೆ.—ಮತ್ತಾ. 6:10.

15. ಯೇಸು ಇನ್ನೂ ಏನೆಲ್ಲಾ ಮಾಡ್ತಾನೆ?

15 ಯೇಸು ತುಂಬ ಬೇಗ ದೇವ್ರ ಶತ್ರುಗಳ ವಿರುದ್ಧ ಅರ್ಮಗದೋನ್‌ ಯುದ್ಧ ಮಾಡ್ತಾನೆ. (ಪ್ರಕ. 16:14, 16; 19:11-16) ಅಲ್ಲಿ ದುಷ್ಟರನ್ನೆಲ್ಲಾ ನಾಶ ಮಾಡ್ತಾನೆ. ಅದಾದ ತಕ್ಷಣ ಸೈತಾನನ್ನ “ಅಗಾಧ ಸ್ಥಳಕ್ಕೆ” ಹಾಕ್ತಾನೆ. ಅಲ್ಲಿ ಅವನ ಕೈ ಕಟ್ಟಾಕಿದ ಹಾಗೆ ಇರುತ್ತೆ. ಅವನ ಕೈಯಲ್ಲಿ ಏನೂ ಮಾಡೋಕಾಗಲ್ಲ. (ಪ್ರಕ. 20:1-3) ಆಗ ಯೇಸು ಸಾವಿರ ವರ್ಷ ಆಳ್ವಿಕೆ ಮಾಡ್ತಾನೆ. ಈ ಭೂಮಿಲಿ ಶಾಂತಿ ಮತ್ತು ಪರಿಪೂರ್ಣತೆಯನ್ನ ಮನುಷ್ಯರಿಗೆ ಪೂರ್ತಿಯಾಗಿ ವಾಪಸ್‌ ಕೊಡ್ತಾನೆ. ಸತ್ತವ್ರೆಲ್ಲ ಮತ್ತೆ ಜೀವಂತವಾಗಿ ಎದ್ದು ಬರ್ತಾರೆ. ಇಡೀ ಭೂಮಿ ಒಂದು ಸುಂದರ ಪರದೈಸ್‌ ಆಗುತ್ತೆ. ಹೀಗೆ ಯೆಹೋವನ ಉದ್ದೇಶ ನೆರವೇರುತ್ತೆ.—ಪ್ರಕ. 21:1-4.

16. ಸಾವಿರ ವರ್ಷದ ಆಳ್ವಿಕೆ ಆದ್ಮೇಲೆ ಏನಾಗುತ್ತೆ?

16 ಸಾವಿರ ವರ್ಷದ ಆಳ್ವಿಕೆ ಆದ್ಮೇಲೆ ಏನಾಗುತ್ತೆ? ಮನುಷ್ಯರ ಪಾಪ ಮತ್ತು ಅಪರಿಪೂರ್ಣತೆ ಸಂಪೂರ್ಣವಾಗಿ ಹೋಗಿ ಬಿಟ್ಟಿರುತ್ತೆ. ಆಗ ಬಿಡುಗಡೆಯ ಬೆಲೆಯ ಆಧಾರದ ಮೇಲೆ ನಾವೆಲ್ಲ ಕ್ಷಮೆ ಕೇಳೋ ಅಗತ್ಯ ಇರಲ್ಲ. ಆದ್ರಿಂದ ಆಗ 1,44,000 ಅಭಿಷಿಕ್ತರು ಪುರೋಹಿತರಾಗಿರಲ್ಲ ಮತ್ತು ಯೇಸು ಮಹಾ ಪುರೋಹಿತನಾಗಿ ಇರಲ್ಲ. ನಾವೆಲ್ಲ ನೇರವಾಗಿ ಯೆಹೋವನ ಜೊತೆ ಸ್ನೇಹ ಸಂಬಂಧ ಇಟ್ಕೊಬಹುದು. ಆಗ “ಕೊನೇ ಶತ್ರು ಆಗಿರೋ ಸಾವನ್ನ ಆತನು [ಯೆಹೋವ] ನಾಶಮಾಡ್ತಾನೆ.” ಸಮಾಧಿಗಳೆಲ್ಲಾ ಖಾಲಿಯಾಗಿ ಹೋಗುತ್ತೆ. ಸತ್ತು ಹೋಗಿರೋ ಜನ್ರೆಲ್ಲ ಮತ್ತೆ ಎದ್ದು ಬಂದಿರ್ತಾರೆ. ಆಗ ಭೂಮಿಯಲ್ಲಿ ಇರೋವ್ರೆಲ್ಲ ಪರಿಪೂರ್ಣರಾಗಿ ಇರ್ತಾರೆ, ಸಂತೋಷವಾಗಿ ಜೀವನ ಮಾಡ್ತಾರೆ.—1 ಕೊರಿಂ. 15:25, 26.

17-18. (ಎ)ಸಾವಿರ ವರ್ಷದ ಕೊನೇಲಿ ಏನಾಗುತ್ತೆ? (ಬಿ) ಯೇಸು ತನ್ನ ಆಳ್ವಿಕೆ ಮುಗಿದ ಮೇಲೆ ಏನು ಮಾಡ್ತಾನೆ? (1 ಕೊರಿಂಥ 15:24, 28) (ಚಿತ್ರ ನೋಡಿ.)

17 ಸಾವಿರ ವರ್ಷ ಆದ್ಮೇಲೆ ಇನ್ನೇನಾಗುತ್ತೆ? ಆಗ ಒಂದು ವಿಶೇಷ ವಿಷ್ಯ ನಡೆಯುತ್ತೆ. ಯೆಹೋವನ ಹೆಸರು ಪೂರ್ತಿಯಾಗಿ ಪವಿತ್ರ ಆಗುತ್ತೆ! ಸಾವಿರಾರು ವರ್ಷಗಳಿಂದ ನಡೀತಾ ಬಂದಿರೋ ವಾದ-ವಿವಾದ ಕೊನೆ ಆಗುತ್ತೆ. ಹೇಗೆ? ಏದೆನ್‌ ತೋಟದಲ್ಲಿ ಸೈತಾನ ಯೆಹೋವ ದೇವ್ರನ್ನ ‘ಒಬ್ಬ ಸುಳ್ಳುಗಾರ, ಆತನು ಮನುಷ್ಯರನ್ನ ಪ್ರೀತಿಯಿಂದ ನೋಡ್ಕೊಳ್ಳಲ್ಲ’ ಅಂತ ಆರೋಪ ಹಾಕಿದ್ದು ನೆನಪಿದ್ಯಾ? ಆವತ್ತಿಂದ ಇವತ್ತಿನವರೆಗೂ ತನ್ನ ಆರಾಧಕರು ಯೆಹೋವನಿಗೆ ನಂಬಿಗಸ್ತರಾಗಿ ಸೇವೆ ಮಾಡ್ತಾ ಆತನ ಹೆಸ್ರೇ ಪವಿತ್ರ ಅಂತ ಪದೇಪದೇ ರುಜು ಮಾಡಿದ್ದಾರೆ. ಹಾಗಾಗಿ ಸಾವಿರ ವರ್ಷದ ಕೊನೇಲಿ ಸೈತಾನ ಯೆಹೋವನ ಮೇಲೆ ಹಾಕಿರೋ ಆರೋಪ ಸುಳ್ಳು ಅಂತ ಸದಾಕಾಲಕ್ಕೂ ಸಾಬೀತಾಗುತ್ತೆ. ಆಗ ಯೆಹೋವನು ಒಬ್ಬ ಪ್ರೀತಿ ಇರೋ ತಂದೆ ಅಂತ ಇಡೀ ವಿಶ್ವಕ್ಕೆ ನಿರೂಪಿಸಲಾಗುತ್ತೆ.

18 ಸೈತಾನನ ನಿಜ ಬಣ್ಣ ಆಗ ಕೊನೆಗೂ ಬಯಲಾಗುತ್ತೆ. ಸೈತಾನ ಸುಳ್ಳುಗಾರ ಅಂತ ಎಲ್ರಿಗೂ ಸ್ಪಷ್ಟವಾಗಿ ಗೊತ್ತಾಗುತ್ತೆ. ಯೇಸು ಸಾವಿರ ವರ್ಷ ಆಳ್ವಿಕೆ ಮಾಡಿದ ಮೇಲೆ ಏನ್‌ ಮಾಡ್ತಾನೆ? ಅವನು ಸೈತಾನನ ತರ ಯೆಹೋವನ ವಿರುದ್ಧ ತಿರುಗಿ ಬೀಳ್ತಾನಾ? ಇಲ್ವೇ ಇಲ್ಲ! (1 ಕೊರಿಂ. 15:24, 28 ಓದಿ.) ಯೇಸು ತನ್ನ ಆಳ್ವಿಕೆನ ತನ್ನ ತಂದೆಗೆ ವಾಪಸ್‌ ಕೊಡ್ತಾನೆ. ಯೆಹೋವನ ಆಳ್ವಿಕೆಯ ಕೆಳಗೆ ಆತನು ಅಧೀನನಾಗಿ ನಡ್ಕೊತಾನೆ. ಯೇಸು ಯೆಹೋವನನ್ನ ಪ್ರೀತಿಸೋದ್ರಿಂದ ತನ್ನ ಹತ್ರ ಇರೋದನ್ನೆಲ್ಲಾ ಮನಸಾರೆ ವಾಪಸ್‌ ಕೊಡ್ತಾನೆ.

ಯೇಸು ತನ್ನ ಕಿರೀಟವನ್ನ ಯೆಹೋವನಿಗೆ ಕೊಡ್ತಿದ್ದಾನೆ.

ಸಾವಿರ ವರ್ಷದ ಆಳ್ವಿಕೆಯ ಕೊನೇಲಿ ಯೇಸು ಮನಸಾರೆ ತನ್ನ ಆಳ್ವಿಕೆಯನ್ನ ಯೆಹೋವನಿಗೆ ವಾಪಸ್‌ ಕೊಡ್ತಾನೆ (ಪ್ಯಾರ 18 ನೋಡಿ)


19. ಯೇಸುಗೆ ಯೆಹೋವನ ಹೆಸರು ಎಷ್ಟು ಮುಖ್ಯ ಆಗಿತ್ತು?

19 ಯೇಸು ಯೆಹೋವನಿಗೆ ಎಷ್ಟು ಒಳ್ಳೆ ಮಗ ಅಲ್ವಾ? ಅದಕ್ಕೆ ಯೆಹೋವ ತನ್ನ ಹೆಸ್ರನ್ನ ತನ್ನ ಮಗನಿಗೆ ಕೊಟ್ಟಿದ್ದು! ಯೇಸು ಪ್ರತಿಯೊಂದು ವಿಷ್ಯದಲ್ಲೂ ಯೆಹೋವನ ತರಾನೇ ಇದ್ದನು. ಅದಕ್ಕೆ ಯೇಸುನ ಯೆಹೋವನ ಪ್ರತಿಬಿಂಬ ಅಂತ ಹೇಳಬಹುದು. ಯೇಸುಗೆ ಯೆಹೋವನ ಹೆಸರು ಎಷ್ಟು ಮುಖ್ಯ ಆಗಿತ್ತು? ಅದಕ್ಕೋಸ್ಕರ ತನ್ನ ಪ್ರಾಣನೇ ಕೊಟ್ಟ ಅಂದ್ರೆ ಆತನಿಗೆ ಅದು ಎಷ್ಟು ಮುಖ್ಯ ಆಗಿತ್ತು ನೀವೇ ಯೋಚ್ನೆ ಮಾಡಿ. ಸಾವಿರ ವರ್ಷದ ಕೊನೆಲಿ ತನ್ನ ಹತ್ರ ಇರೋದನ್ನೆಲ್ಲ ಆತನು ಮನಸಾರೆ ಯೆಹೋವನಿಗೆ ವಾಪಸ್‌ ಕೊಡೋಕೂ ರೆಡಿ ಇದ್ದಾನೆ. ಯೇಸುವಿನ ಈ ಅತ್ಯುತ್ತಮ ಮಾದರಿನ ನಾವು ಹೇಗೆ ಅನುಕರಿಸಬಹುದು? ಈ ಪ್ರಶ್ನೆಗೆ ನಾವು ಮುಂದಿನ ಲೇಖನದಲ್ಲಿ ಉತ್ರ ತಿಳ್ಕೊಳ್ಳೋಣ.

ನೀವೇನು ಹೇಳ್ತೀರಾ?

  • ಯೇಸು ಶಿಷ್ಯರಿಗೆ ಯೆಹೋವನ ಹೆಸ್ರನ್ನ ಹೇಗೆ ಚೆನ್ನಾಗಿ ಹೇಳ್ಕೊಟ್ಟನು?

  • ‘ಯೆಹೋವ ತನ್ನ ಹೆಸ್ರನ್ನ ಯೇಸುಗೆ ಕೊಟ್ಟನು’ ಅನ್ನೋ ಮಾತಿನ ಅರ್ಥ ಏನು?

  • ಯೆಹೋವನ ಹೆಸ್ರಿಗೋಸ್ಕರ ಯೇಸು ಏನೆಲ್ಲಾ ಮಾಡೋಕೆ ರೆಡಿ ಇದ್ದಾನೆ?

ಗೀತೆ 18 ವಿಮೋಚನಾ ಬಲಿಗಾಗಿ ಚಿರಋಣಿ!

a ಕೆಲವೊಮ್ಮೆ ದೇವದೂತರು ಯೆಹೋವನ ಸಂದೇಶವನ್ನ ಮನುಷ್ಯರಿಗೆ ತಿಳಿಸುವಾಗ ದೇವ್ರ ಪ್ರತಿನಿಧಿಗಳಾಗಿ ಕೆಲಸ ಮಾಡಿದ್ದಾರೆ. ಅದಕ್ಕೆ ಬೈಬಲಲ್ಲಿ ಕೆಲವು ಕಡೆ ಒಬ್ಬ ದೇವದೂತ ಮಾತಾಡುವಾಗ ಯೆಹೋವನೇ ಮಾತಾಡ್ತಿದ್ದಾನೆ ಅಂತ ಹೇಳಲಾಗಿದೆ. (ಆದಿ. 18:1-33) ಉದಾಹರಣೆಗೆ ಬೈಬಲಲ್ಲಿ, ಮೋಶೆಗೆ ನಿಯಮ ಪುಸ್ತಕನ ಯೆಹೋವ ಕೊಟ್ಟ ಅಂತ ಹೇಳಿದೆ. ಆದ್ರೆ ಬೇರೆ ವಚನಗಳನ್ನ ನೋಡೋದಾದ್ರೆ ಯೆಹೋವ ನಿಯಮ ಪುಸ್ತಕ ಕೊಡೋಕೆ ತನ್ನ ಪರವಾಗಿ ಬೇರೆ ದೇವದೂತರನ್ನ ಬಳಸಿದ್ದಾನೆ ಅನ್ನೋದು ಗೊತ್ತಾಗುತ್ತೆ.—ಯಾಜ. 27:34 ಅ. ಕಾ. 7:38, 53; ಗಲಾ. 3:19; ಇಬ್ರಿ. 2:2-4.

b ಯೇಸುವಿನ ಪ್ರಾಣ ತ್ಯಾಗ ಮನುಷ್ಯರು ಶಾಶ್ವತ ಜೀವ ಪಡ್ಕೊಳ್ಳೋಕೆ ಅವಕಾಶ ಮಾಡ್ಕೊಡ್ತು.

c ಕಾವಲಿನಬುರುಜು, ಏಪ್ರಿಲ್‌ 2021, ಪುಟ 30-31ರ “ವಾಚಕರಿಂದ ಪ್ರಶ್ನೆಗಳು” ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ