ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಏಪ್ರಿಲ್‌ ಪು. 2-7
  • “ನೀವು ಯಾರನ್ನ ಆರಾಧಿಸಬೇಕಂತ” ಇದ್ದೀರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನೀವು ಯಾರನ್ನ ಆರಾಧಿಸಬೇಕಂತ” ಇದ್ದೀರಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸು ಯೆಹೋವನನ್ನ ಯಾಕೆ ಆರಾಧನೆ ಮಾಡಿದನು?
  • ಯೆಹೋವನಿಗಿರೋ ಅರ್ಹತೆ
  • ನಾವ್ಯಾಕೆ ಯೆಹೋವನನ್ನ ಆರಾಧಿಸ್ತೀವಿ?
  • ಯೆಹೋವನನ್ನ ಆರಾಧಿಸ್ತಾ ಇರಿ
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • “ಯೆಹೋವ ಜೀವ ಇರೋ ದೇವರು” ಅಂತ ಯಾವಾಗ್ಲೂ ನೆನಪಿಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಯೆಹೋವ “ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಏಪ್ರಿಲ್‌ ಪು. 2-7

ಅಧ್ಯಯನ ಲೇಖನ 14

ಗೀತೆ 150 ನಮ್ಮ ರಕ್ಷಣೆಗಾಗಿ ಯೆಹೋವನ ನಂಬೋಣ

“ನೀವು ಯಾರನ್ನ ಆರಾಧಿಸಬೇಕಂತ” ಇದ್ದೀರಾ?

“ನಾನು ಮತ್ತು ನನ್ನ ಕುಟುಂಬದವರು ಯೆಹೋವನನ್ನೇ ಆರಾಧಿಸ್ತೀವಿ.”—ಯೆಹೋ. 24:15.

ಈ ಲೇಖನದಲ್ಲಿ ಏನಿದೆ?

ನಾವೆಲ್ಲ ಯೆಹೋವನನ್ನ ಆರಾಧಿಸೋಕೆ ಕಾರಣ ಏನು ಅಂತ ಈ ಲೇಖನ ನೆನಪಿಸುತ್ತೆ.

1. (ಎ) ನಾವು ನಿಜವಾಗ್ಲೂ ಖುಷಿಯಾಗಿ ಇರಬೇಕಂದ್ರೆ ಏನು ಮಾಡ್ಲೇಬೇಕು? (ಬಿ) ಯಾಕೆ ಅದನ್ನ ಮಾಡ್ಲೇಬೇಕು? (ಯೆಶಾಯ 48:17, 18)

ನಮ್ಮಪ್ಪ ಯೆಹೋವ ನಮ್ಮೆಲ್ರನ್ನ ತುಂಬ ಪ್ರೀತಿಸ್ತಾನೆ. ನಾವು ಈಗ್ಲೂ ಮುಂದೇನೂ ಖುಷಿಯಾಗಿರಬೇಕು ಅಂತ ಬಯಸ್ತಾನೆ. (ಪ್ರಸಂ. 3:12, 13) ಆತನು ನಮಗೆ ತುಂಬ ಬುದ್ಧಿಶಕ್ತಿ ಕೊಟ್ಟಿದ್ರೂ ಆತನ ಸಹಾಯ ಇಲ್ಲದೆ ಖುಷಿಯಾಗಿ ಬದುಕೋ ಸಾಮರ್ಥ್ಯ ನಮಗಿಲ್ಲ. ಯಾವುದು ಸರಿ ಯಾವುದು ತಪ್ಪು ಅಂತ ನಾವೇ ತೀರ್ಮಾನ ಮಾಡೋ ಶಕ್ತಿನೂ ನಮಗಿಲ್ಲ. (ಪ್ರಸಂ. 8:9; ಯೆರೆ. 10:23) ಹಾಗಾಗಿ ಯೆಹೋವನನ್ನ ಆರಾಧಿಸಿದ್ರೆ, ಆತನು ಹೇಳೋ ತರಾನೇ ಜೀವನ ಮಾಡಿದ್ರೆ ನಿಜವಾಗ್ಲೂ ಖುಷಿಯಾಗಿ ಇರ್ತೀವಿ ಅಂತ ಆತನಿಗೆ ಗೊತ್ತು. ನಮಗೂ ಅದನ್ನ ತಿಳಿಸಿದ್ದಾನೆ.—ಯೆಶಾಯ 48:17, 18 ಓದಿ.

2. (ಎ) ಯಾವ ಸುಳ್ಳನ್ನ ನಾವು ನಂಬಬೇಕಂತ ಸೈತಾನ ಬಯಸ್ತಾನೆ? (ಬಿ) ಅದು ಸುಳ್ಳು ಅಂತ ನಮಗೆ ಅರ್ಥ ಮಾಡಿಸೋಕೆ ಯೆಹೋವ ಏನು ಮಾಡಿದ್ದಾನೆ?

2 ‘ಯೆಹೋವನ ಸಹಾಯ ಇಲ್ಲದೆನೂ ಮನುಷ್ಯರು ಚೆನ್ನಾಗಿ ಇರೋಕಾಗುತ್ತೆ’ ಅಂತ ಎಲ್ರೂ ನಂಬಬೇಕು ಅಂತ ಸೈತಾನ ಬಯಸ್ತಾನೆ. (ಆದಿ. 3:4, 5) ಅವನು ಹೇಳ್ತಿರೋದು ಸುಳ್ಳು ಅಂತ ಅರ್ಥ ಮಾಡಿಸೋಕೆ ‘ಸಂತೋಷವಾಗಿ ಇರೋಕೆ ನಿಮ್ಮಿಂದ ಆಗೋದೆಲ್ಲಾ ಮಾಡಿ’ ಅಂತ ದೇವರು ಸ್ವಲ್ಪ ಸಮಯ ಬಿಟ್ಕೊಟ್ಟಿದ್ದಾನೆ. ಮನುಷ್ಯರು ಎಷ್ಟೇ ಪ್ರಯತ್ನ ಹಾಕಿದ್ರೂ ಏನೂ ಪ್ರಯೋಜ್ನ ಆಗಿಲ್ಲ! ಆದ್ರೆ ಯಾರೆಲ್ಲ ಯೆಹೋವನನ್ನ ಆರಾಧನೆ ಮಾಡೋಕೆ ಪ್ರಯತ್ನ ಹಾಕಿದ್ರೋ ಅವ್ರೆಲ್ಲಾ ಜೀವನದಲ್ಲಿ ತುಂಬಾ ಖುಷಿಯಾಗಿದ್ದಾರೆ. ಈ ವಿಷ್ಯದಲ್ಲಿ ನಮ್ಮೆಲ್ರಿಗೂ ಮಾದರಿ ಯೇಸು ಕ್ರಿಸ್ತನೇ. ಯೇಸು ಯಾಕೆ ಯೆಹೋವನನ್ನ ಆರಾಧನೆ ಮಾಡೋಕೆ ಆಯ್ಕೆ ಮಾಡಿದನು? ಯೆಹೋವ ದೇವ್ರನ್ನ ನಾವು ಆರಾಧನೆ ಮಾಡೋಕೆ ಆತನಿಗೆ ಯಾವ ಅರ್ಹತೆ ಇದೆ? ನಾವ್ಯಾಕೆ ಯೆಹೋವನನ್ನ ಆರಾಧನೆ ಮಾಡಬೇಕು? ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.

ಯೇಸು ಯೆಹೋವನನ್ನ ಯಾಕೆ ಆರಾಧನೆ ಮಾಡಿದನು?

3. (ಎ) ಯೇಸು ಏನು ಮಾಡಬೇಕು ಅಂತ ಸೈತಾನ ಹೇಳಿದನು? (ಬಿ) ಆದ್ರೆ ಯೇಸು ಯಾವ ಆಯ್ಕೆ ಮಾಡಿದನು?

3 ಯೇಸು ಮನುಷ್ಯನಾಗಿ ಭೂಮಿಲಿದ್ದಾಗ ಯಾರನ್ನ ಆರಾಧನೆ ಮಾಡಬೇಕು ಅನ್ನೋ ನಿರ್ಧಾರನ ಮಾಡಬೇಕಿತ್ತು. ಯೇಸು ದೀಕ್ಷಾಸ್ನಾನ ತಗೊಂಡ ಸ್ವಲ್ಪ ಸಮಯದಲ್ಲೇ ಸೈತಾನ ಎಲ್ಲಾ ಸಾಮ್ರಾಜ್ಯಗಳನ್ನ ತೋರಿಸಿ, ‘ನನಗೆ ಒಂದೇ ಒಂದು ಸಲ ನೀನು ಆರಾಧನೆ ಮಾಡು, ಇದನ್ನೆಲ್ಲಾ ಕೊಟ್ಬಿಡ್ತೀನಿ’ ಅಂದ. ಅದಕ್ಕೆ ಯೇಸು “ಸೈತಾನ ಇಲ್ಲಿಂದ ತೊಲಗಿ ಹೋಗು! ‘ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆ ಮಾಡಬೇಕು’ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ” ಅಂತ ಹೇಳಿದನು. ಹೀಗೆ ಕೊನೆ ಉಸಿರು ಇರೋವರೆಗೂ ಯೆಹೋವನನ್ನ ಆರಾಧಿಸೋ ಆಯ್ಕೆ ಮಾಡಿದ್ದೀನಿ ಅಂತ ಯೇಸು ತೋರಿಸ್ಕೊಟ್ಟನು. (ಮತ್ತಾ. 4:8-10) ಯೇಸು ಯಾಕೆ ಈ ಆಯ್ಕೆ ಮಾಡಿದನು ಅಂತ ನೋಡೋಣ.

4-5. ಯೇಸು ಯೆಹೋವನನ್ನೇ ಆರಾಧನೆ ಮಾಡೋಕೆ ಯಾವೆಲ್ಲ ಕಾರಣ ಇತ್ತು?

4 ಒಂದಲ್ಲ, ಎರಡಲ್ಲ, ಯೇಸು ಯೆಹೋವನನ್ನೇ ಆರಾಧನೆ ಮಾಡೋಕೆ ನೂರಾರು ಕಾರಣ ಇದೆ! ಅದ್ರಲ್ಲಿ ಮುಖ್ಯವಾಗಿರೋದು ಯೇಸುಗೆ ತನ್ನ ತಂದೆ ಯೆಹೋವನ ಮೇಲಿದ್ದ ಬೆಟ್ಟದಷ್ಟು ಪ್ರೀತಿನೇ. (ಯೋಹಾ. 14:31) ಇದ್ರ ಜೊತೆಗೆ ಯೆಹೋವನನ್ನ ಆರಾಧನೆ ಮಾಡೋದೇ ಸರಿಯಾಗಿರೋ ಕೆಲಸ ಅಂತ ಯೇಸುಗೆ ಗೊತ್ತಿತ್ತು. (ಯೋಹಾ. 8:28, 29; ಪ್ರಕ. 4:11) ಯೆಹೋವನೇ ಎಲ್ರಿಗೂ ಜೀವ ಕೊಟ್ಟಿರೋದು, ಆತನು ಎಲ್ರಿಗೂ ಒಳ್ಳೇದು ಮಾಡ್ತಾನೆ, ಆತನನ್ನ ನಂಬಬಹುದು ಅಂತ ಅರ್ಥ ಮಾಡ್ಕೊಂಡಿದ್ದನು. (ಕೀರ್ತ. 33:4; 36:9; ಯಾಕೋ. 1:17) ಯೆಹೋವ ಯಾವಾಗ್ಲೂ ಸತ್ಯನೇ ಹೇಳ್ತಾನೆ ಅಂತ ಯೇಸುಗೆ ಗೊತ್ತಿತ್ತು. ಯೇಸು ಹತ್ರ ಇದ್ದಿದ್ದನ್ನೆಲ್ಲ ಕೊಟ್ಟಿದ್ದೂ ಯೆಹೋವನೇ. ಹೀಗೆ ಯೆಹೋವ ದೇವ್ರ ಬಗ್ಗೆ ಯೇಸು ಚೆನ್ನಾಗಿ ತಿಳ್ಕೊಂಡಿದ್ದನು. (ಯೋಹಾ. 1:14) ಅಷ್ಟೇ ಅಲ್ಲ ಸೈತಾನನ ನಿಜ ಬಣ್ಣನೂ ಯೇಸುಗೆ ಗೊತ್ತಿತ್ತು. ಎಲ್ರೂ ಸಾಯೋಕೆ ಇವನೇ ಮುಖ್ಯ ಕಾರಣ. ಇವನೊಬ್ಬ ಸುಳ್ಳುಗಾರ, ಸ್ವಾರ್ಥಿ, ಇವನಲ್ಲಿ ದುರಾಸೆ ಇದೆ ಅಂತ ಯೇಸು ಅರ್ಥ ಮಾಡ್ಕೊಂಡಿದ್ದನು. (ಯೋಹಾ. 8:44) ಅದಕ್ಕೆ ಸೈತಾನ ಎಷ್ಟೇ ಪುಸಲಾಯಿಸಿದ್ರೂ ಯೆಹೋವ ದೇವ್ರಿಗೆ ತಿರುಗಿ ಬೀಳೋದ್ರ ಬಗ್ಗೆ ಯೇಸು ಕನಸು ಮನಸ್ಸಲ್ಲೂ ಯೋಚ್ನೆ ಮಾಡ್ಲಿಲ್ಲ.—ಫಿಲಿ. 2:5-8.

5 ಯೇಸು ಯೆಹೋವನನ್ನೇ ಆರಾಧನೆ ಮಾಡೋಕೆ ಇನ್ನೊಂದು ಕಾರಣ ಏನು? ಯೆಹೋವನಿಗೆ ನಿಯತ್ತಾಗಿದ್ದು ಆತನ ಸೇವೆ ಮಾಡಿದ್ರೆ ಮುಂದೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಅರ್ಥಮಾಡ್ಕೊಂಡಿದ್ದನು. (ಇಬ್ರಿ. 12:2) ಉದಾಹರಣೆಗೆ, ಯೆಹೋವನಿಗೆ ನಿಯತ್ತಾಗಿದ್ದು ಸೇವೆ ಮಾಡಿದ್ರೆ ಯೆಹೋವನ ಹೆಸರು ಪವಿತ್ರ ಆಗುತ್ತೆ, ಸೈತಾನನಿಂದ ಮನುಷ್ಯರಿಗೆ ಬಂದಿರೋ ಪಾಪ ಸಾವನ್ನ ತೆಗೆದು ಹಾಕೋಕೆ ಆಗುತ್ತೆ ಅಂತ ಯೇಸು ತಿಳ್ಕೊಂಡಿದ್ದನು. ಅದಕ್ಕೆ ಯೆಹೋವನನ್ನೇ ಆರಾಧನೆ ಮಾಡೋ ಆಯ್ಕೆ ಮಾಡಿದನು.

ಯೆಹೋವನಿಗಿರೋ ಅರ್ಹತೆ

6-7. (ಎ) ಇವತ್ತು ಯಾಕೆ ತುಂಬಾ ಜನ ಯೆಹೋವನನ್ನ ಆರಾಧನೆ ಮಾಡ್ತಿಲ್ಲ? (ಬಿ) ಯೆಹೋವನಿಗೆ ಮಾತ್ರನೇ ಆರಾಧನೆ ಪಡ್ಕೊಳ್ಳೋ ಅರ್ಹತೆ ಇದೆ ಅಂತ ಯಾಕೆ ಹೇಳಬಹುದು?

6 ಪೌಲ ಅಥೆನ್ಸ್‌ನಲ್ಲಿ ಸಾರಿದಾಗ ಅಲ್ಲಿದ್ದವ್ರಿಗೆ ಯೆಹೋವ ಯಾರು, ಆತನಲ್ಲಿ ಯಾವೆಲ್ಲ ಗುಣ ಇದೆ, ಅವ್ರಿಗೋಸ್ಕರ ಆತನು ಏನೆಲ್ಲಾ ಮಾಡಿದ್ದಾನೆ ಅನ್ನೋದ್ರ ಬಗ್ಗೆ ಗೊತ್ತಿರ್ಲಿಲ್ಲ. ಇವತ್ತೂ ಎಷ್ಟೋ ಜನ್ರಿಗೆ ಯೆಹೋವನ ಬಗ್ಗೆ ಗೊತ್ತಿಲ್ಲದೇ ಇರೋದ್ರಿಂದ ಅವರು ಆತನನ್ನ ಆರಾಧನೆ ಮಾಡ್ತಿಲ್ಲ.—ಅ. ಕಾ. 17:19, 20, 30, 34.

7 ಸತ್ಯದೇವರೇ “ಎಲ್ರಿಗೂ ಜೀವವನ್ನ, ಉಸಿರನ್ನ, ಎಲ್ಲವನ್ನೂ ಕೊಡ್ತಾನೆ.” “ಒಬ್ಬ ಮನುಷ್ಯನಿಂದಾನೇ ಎಲ್ಲಾ ದೇಶದ ಜನ್ರನ್ನ ಸೃಷ್ಟಿ ಮಾಡಿದ್ದಾನೆ.” “ಆತನಿಂದಾನೇ ನಾವು ಬದುಕಿದ್ದೀವಿ, ನಡೆದಾಡ್ತೀವಿ, ಇವತ್ತು ಇಲ್ಲಿದ್ದೀವಿ” ಅಂತ ಪೌಲ ಅಥೆನ್ಸ್‌ನ ಜನ್ರಿಗೆ ವಿವರಿಸಿ ಹೇಳ್ದ. ಅದಕ್ಕೆ ಆತನಿಗೆ ಮಾತ್ರನೇ ನಮ್ಮ ಆರಾಧನೆ ಪಡ್ಕೊಳ್ಳೋ ಅರ್ಹತೆ ಇದೆ.—ಅ. ಕಾ. 17:25, 26, 28.

8. (ಎ) ಯೆಹೋವ ಯಾವತ್ತೂ ಏನು ಮಾಡೋಕೆ ಹೋಗಲ್ಲ? (ಬಿ) ಏನು ಮಾಡ್ತಾನೆ?

8 ನಮ್ಮ ಸುತ್ತಮುತ್ತ ಇರೋ ಪ್ರತಿಯೊಂದನ್ನೂ ಯೆಹೋವನೇ ಸೃಷ್ಟಿ ಮಾಡಿರೋದು. ಆತನಿಗಿರೋಷ್ಟು ಅಧಿಕಾರ ಇಡೀ ವಿಶ್ವದಲ್ಲೇ ಯಾರಿಗೂ ಇಲ್ಲ. ಹಾಗಂತ ‘ನನ್ನನ್ನೇ ಆರಾಧನೆ ಮಾಡಿ’ ಅಂತ ಆತನು ಯಾವತ್ತೂ ಯಾರನ್ನೂ ಒತ್ತಾಯ ಮಾಡಲ್ಲ. ಬದಲಿಗೆ ‘ನಾನು ನಿಜವಾಗ್ಲೂ ಇದ್ದೀನಿ. ನಾನು ನಿಮ್ಮನ್ನ ತುಂಬಾ ಪ್ರೀತಿಸ್ತೀನಿ’ ಅನ್ನೋದಕ್ಕೆ ಆಧಾರಗಳನ್ನ ಕೊಟ್ಟು ಅರ್ಥ ಮಾಡಿಸ್ತಿದ್ದಾನೆ. ಎಲ್ರೂ ಆತನ ಜೊತೇಲಿ ಸ್ನೇಹ ಬೆಳೆಸ್ಕೊಬೇಕು ಅಂತ ಆಸೆ ಪಡ್ತಾನೆ. (1 ತಿಮೊ. 2:3, 4) ಅದಕ್ಕೆ ಆತನ ಉದ್ದೇಶ ಮತ್ತು ಆತನು ಕೊಡೋ ಆಶೀರ್ವಾದಗಳ ಬಗ್ಗೆ ನಾವು ಜನ್ರಿಗೆ ಹೇಳಬೇಕು. ಇದನ್ನ ಮಾಡೋಕೆ ಯೆಹೋವ ನಮಗೆ ತರಬೇತಿ ಕೊಡ್ತಿದ್ದಾನೆ. (ಮತ್ತಾ. 10:11-13; 28:19, 20) ನಮ್ಮೆಲ್ರಿಗೂ ಸಭೆ ಅನ್ನೋ ಏರ್ಪಾಡನ್ನ ಮಾಡಿದ್ದಾನೆ. ಅಲ್ಲಿ ನಾವು ಆತನನ್ನ ಆರಾಧಿಸೋಕಾಗುತ್ತೆ. ನಮಗೆ ಬೇಕಾಗಿರೋ ಸಹಾಯನೂ ಹಿರಿಯರಿಂದ ಅಲ್ಲಿ ಸಿಗುತ್ತೆ.—ಅ. ಕಾ. 20:28.

9. ಯೆಹೋವ ದೇವ್ರಿಗೆ ಎಲ್ಲ ಮನುಷ್ಯರ ಮೇಲೂ ಪ್ರೀತಿ ಇದೆ ಅಂತ ಹೇಗೆ ಹೇಳಬಹುದು?

9 ತನ್ನ ಮೇಲೆ ನಂಬಿಕೆನೇ ಇಡದೇ ಇರೋ ಜನ್ರಿಗೂ ದೇವರು ಒಳ್ಳೇದನ್ನ ಮಾಡ್ತಿದ್ದಾನೆ. ಉದಾಹರಣೆಗೆ, ಯೆಹೋವ ದೇವರು ಯಾವುದು ಸರಿ ಯಾವುದು ತಪ್ಪು ಅಂತ ಜನ್ರಿಗೆ ಕಲಿಸ್ತಾ ಬಂದಿದ್ದಾನೆ. ಹಾಗಿದ್ರೂ ಕೆಲವರು ಅದನ್ನ ಕಿವಿಗೇ ಹಾಕೊಳ್ಳದೆ ಸಾವಿರಾರು ವರ್ಷಗಳಿಂದ ಅವ್ರ ಮನಸ್ಸಿಗೆ ಬಂದ ಹಾಗೆ ಬದುಕ್ತಾ ಇದ್ದಾರೆ. ಆದ್ರೂ ಯೆಹೋವ ಅವರು ಬದುಕೋಕೆ ಬೇಕಾಗಿರೋ ಗಾಳಿ, ನೀರು, ಮಳೆ ಎಲ್ಲಾನೂ ಕೊಡ್ತಿದ್ದಾನೆ. (ಮತ್ತಾ. 5:44, 45; ಅ. ಕಾ. 14:16, 17) ಅಷ್ಟೇ ಅಲ್ಲ ಅವ್ರಿಗೆ ಕುಟುಂಬನ, ಸ್ನೇಹಿತ್ರನ್ನ, ಖುಷಿಯಾಗಿರೋಕೆ ಈ ರೀತಿಯ ಸಂಬಂಧಗಳನ್ನೆಲ್ಲ ಕೊಟ್ಟಿದ್ದಾನೆ. ಜೀವನ ಕಟ್ಕೊಳ್ಳೋಕೆ ಬೇಕಾಗಿರೋ ಬುದ್ಧಿಶಕ್ತಿನೂ ಕೊಟ್ಟಿದ್ದಾನೆ. (ಕೀರ್ತ. 127:3; ಪ್ರಸಂ. 2:24) ಇದನ್ನೆಲ್ಲಾ ನೋಡಿದ್ರೆ ನಮ್ಮ ಅಪ್ಪ ಯೆಹೋವ ನಮ್ಮಲ್ಲಿ ಒಬ್ಬೊಬ್ರ ಮೇಲೂ ಜೀವಾನೇ ಇಟ್ಕೊಂಡಿದ್ದಾನೆ ಅಂತ ಅನಿಸಲ್ವಾ? (ವಿಮೋ. 34:6) ನಾವ್ಯಾಕೆ ಯೆಹೋವ ದೇವರನ್ನ ಆರಾಧಿಸ್ತೀವಿ? ತನ್ನನ್ನ ಆರಾಧಿಸೋರನ್ನ ಆತನು ಹೇಗೆ ಆಶೀರ್ವದಿಸ್ತಾನೆ ಅಂತ ನಾವೀಗ ನೋಡೋಣ.

ನಾವ್ಯಾಕೆ ಯೆಹೋವನನ್ನ ಆರಾಧಿಸ್ತೀವಿ?

10. (ಎ) ನಾವು ಯೆಹೋವನನ್ನ ಆರಾಧಿಸೋಕೆ ಮುಖ್ಯ ಕಾರಣ ಏನು? (ಮತ್ತಾಯ 22:37) (ಬಿ) ಯೆಹೋವ ನಿಮ್ಮ ಜೊತೆ ತಾಳ್ಮೆಯಿಂದ ನಡ್ಕೊಂಡಿರೋದ್ರಿಂದ ಯಾವ ಪ್ರಯೋಜ್ನ ಆಗಿದೆ? (ಕೀರ್ತನೆ 103:13, 14)

10 ನಮಗೂ ಯೇಸು ತರಾನೇ ಯೆಹೋವನ ಮೇಲೆ ಬೆಟ್ಟದಷ್ಟು ಪ್ರೀತಿ ಇದೆ. ಅದಕ್ಕೆ ನಾವು ಆತನನ್ನ ಆರಾಧಿಸ್ತೀವಿ. (ಮತ್ತಾಯ 22:37 ಓದಿ.) ಆತನಲ್ಲಿರೋ ಮುತ್ತಿನಂಥ ಗುಣಗಳ ಬಗ್ಗೆ ತಿಳ್ಕೊಂಡಾಗ ಆತನನ್ನ ಪ್ರೀತಿಸಬೇಕು ಅಂತ ಅನಿಸುತ್ತೆ. ಉದಾಹರಣೆಗೆ, ಯೆಹೋವ ತಾಳ್ಮೆಯಿಂದ ನಡ್ಕೊಳ್ತಾನೆ. ಇಸ್ರಾಯೇಲ್ಯರು ತಪ್ಪು ಮಾಡ್ದಾಗ ಯೆಹೋವ ಕೋಪ ಮಾಡ್ಕೊಳ್ಳಲಿಲ್ಲ. “ದಯವಿಟ್ಟು ನೀವು ಕೆಟ್ಟ ದಾರಿ ಬಿಟ್ಟುಬಿಡಿ” ಅಂತ ಬೇಡ್ಕೊಂಡ ಅಂತ ಬೈಬಲ್‌ ಹೇಳುತ್ತೆ. (ಯೆರೆ. 18:11) ನಾವು ತಪ್ಪು ಮಾಡ್ದಾಗ ನಾವು ಧೂಳಾಗಿದ್ದೀವಿ ಅಂತ ಅರ್ಥ ಮಾಡ್ಕೊಂಡು ಕ್ಷಮಿಸ್ತಾನೆ. (ಕೀರ್ತನೆ 103:13, 14 ಓದಿ.) ಯೆಹೋವ ನಿಮಗೂ ತಾಳ್ಮೆ ತೋರ್ಸಿದ್ದಾನಾ? ನಿಮ್ಮನ್ನ ಕ್ಷಮಿಸಿದ್ದಾನಾ? ಒಂದ್ಸಲ ಅದನ್ನೆಲ್ಲಾ ನೆನಪಿಸ್ಕೊಳ್ಳಿ. ನೆನಪಿಸ್ಕೊಂಡ್ರೆ ಕೊನೇ ಉಸಿರು ಇರೋ ತನಕ ಆತನನ್ನೇ ಆರಾಧಿಸಬೇಕು ಅಂತ ನಿಮಗೆ ಅನಿಸಲ್ವಾ?

11. ಯೆಹೋವ ದೇವ್ರನ್ನ ಆರಾಧನೆ ಮಾಡೋಕೆ ನಮಗೆ ಇನ್ಯಾವ ಕಾರಣ ಇದೆ?

11 ಯೆಹೋವನ ಆರಾಧನೆ ಮಾಡೋದೇ ಸರಿಯಾಗಿರೋ ಕೆಲಸ. ಅದಕ್ಕೆ ನಾವು ಯೆಹೋವ ದೇವ್ರನ್ನ ಆರಾಧನೆ ಮಾಡೋ ನಿರ್ಧಾರ ಮಾಡಿದ್ದೀವಿ. (ಮತ್ತಾ. 4:10) ನಾವು ನಿಯತ್ತಾಗಿದ್ದು ಯೆಹೋವನ ಆರಾಧನೆ ಮಾಡ್ತಾ ಇದ್ರೆ ಅದ್ರಿಂದ ತುಂಬಾ ಪ್ರಯೋಜನ ಇದೆ. ಉದಾಹರಣೆಗೆ, ಯೆಹೋವ ದೇವ್ರ ಹೆಸ್ರನ್ನ ಪವಿತ್ರ ಮಾಡ್ತೀವಿ, ಆತನ ಹೃದಯನ ಖುಷಿ ಪಡಿಸ್ತೀವಿ. ಸೈತಾನ ಸುಳ್ಳುಗಾರ ಅಂತ ತೋರಿಸ್ತೀವಿ. ಮುಂದೇನೂ ಯೆಹೋವನ ಆರಾಧನೆ ಮಾಡ್ತಾ ಖುಷಿಯಾಗಿ ಶಾಶ್ವತವಾಗಿ ಜೀವನ ಮಾಡಬಹುದು!—ಯೋಹಾ. 17:3.

12-13. ಜೇನ್‌ ಮತ್ತು ಪಾಮ್‌ ಅನುಭವದಿಂದ ನೀವೇನು ಕಲಿತ್ರಿ?

12 ಚಿಕ್ಕವರಿದ್ದಾಗ್ಲೇ ನಾವು ಯೆಹೋವನ ಮೇಲೆ ಪ್ರೀತಿ ಬೆಳೆಸ್ಕೊಂಡ್ರೆ, ದೊಡ್ಡವರಾಗ್ತಾ ಆ ಪ್ರೀತಿ ಒಂದು ದೊಡ್ಡ ಮರದ ತರ ಆಗುತ್ತೆ. ಇದ್ರ ಬಗ್ಗೆ ಜೇನ್‌ ಮತ್ತು ಪಾಮ್‌ ಅವರ ಅನುಭವ ನೋಡೋಣ.a ಬೈಬಲ್‌ ಕಲಿಯೋಕೆ ಶುರು ಮಾಡಿದಾಗ, ಜೇನ್‌ಗೆ 11 ವರ್ಷ, ಪಾಮ್‌ಗೆ ಬರೀ 10 ವರ್ಷ ಅಷ್ಟೇ. ಆದ್ರೆ ಇದು ಅವ್ರ ಅಪ್ಪಅಮ್ಮನಿಗೆ ಇಷ್ಟ ಇರ್ಲಿಲ್ಲ. ಅವರು ಅಪ್ಪಅಮ್ಮ ಹತ್ರ ಪರ್ಮಿಷನ್‌ ಕೇಳಿದಾಗ, ‘ನೀವು ಬಿಡದೇ ನಮ್ಮ ಜೊತೆ ಚರ್ಚಿಗೆ ಬರೋದಾದ್ರೆ ಮಾತ್ರ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋಕೆ ಪರ್ಮಿಷನ್‌ ಕೊಡ್ತೀವಿ’ ಅಂತ ಹೇಳಿದ್ರು. ಇವರು ಬೈಬಲ್‌ ಕಲ್ತಿದ್ರಿಂದ ಏನಾದ್ರೂ ಪ್ರಯೋಜ್ನ ಆಯ್ತಾ? “ನನಗೆ ಸ್ಕೂಲಲ್ಲಿ ಡ್ರಗ್ಸ್‌ ತಗೋಳೋಕೆ, ಅನೈತಿಕ ವಿಷ್ಯಗಳನ್ನ ಮಾಡೋಕೆ ತುಂಬಾ ಒತ್ತಡ ಇತ್ತು. ಆದ್ರೆ ನಾನು ಬೈಬಲ್‌ ಕಲ್ತಿದ್ರಿಂದ ಅದನ್ನೆಲ್ಲ ಮಾಡಲಿಲ್ಲ” ಅಂತ ಜೇನ್‌ ಹೇಳ್ತಾಳೆ.

13 ಕೆಲವು ವರ್ಷ ಆದ್ಮೇಲೆ ಇವ್ರಿಬ್ರು ದೀಕ್ಷಾಸ್ನಾನ ತಗೊಂಡ್ರು. ಆಮೇಲೆ ಪಯನೀಯರ್‌ ಸೇವೆ ಮಾಡ್ತಾ ವಯಸ್ಸಾದ ಅಪ್ಪಅಮ್ಮನನ್ನ ನೋಡ್ಕೊತಿದ್ರು. ಯೆಹೋವ ಇಷ್ಟು ವರ್ಷ ಅವ್ರನ್ನ ಕಾಪಾಡಿದ್ರ ಬಗ್ಗೆ ನೆನಪಿಸ್ಕೊಂಡು ಜೇನ್‌ ಈಗ ಹೇಳೋದು, “ಯೆಹೋವ ತನ್ನ ಸ್ನೇಹಿತರ ಕೈಯನ್ನ ಯಾವತ್ತೂ ಬಿಡಲ್ಲ. 2 ತಿಮೊತಿ 2:19 ಹೇಳೋ ಹಾಗೆ ‘ತನ್ನವರು ಯಾರು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು.’ ನಾವು ಯೆಹೋವನನ್ನ ಪ್ರೀತಿಸಿದ್ರೆ, ಆತನನ್ನ ಆರಾಧಿಸಿದ್ರೆ, ಅದೇನೇ ಆಗ್ಲಿ ಯೆಹೋವ ನಮ್ಮನ್ನ ಕಾಪಾಡೇ ಕಾಪಾಡ್ತಾನೆ.”

14. ನಾವು ಹೇಗೆ ನಮ್ಮ ಬೆಸ್ಟ್‌ ಫ್ರೆಂಡಾಗಿರೋ ಯೆಹೋವನ ಪರವಾಗಿ ನಿಂತು ಮಾತಾಡಬಹುದು? (ಚಿತ್ರಗಳನ್ನ ನೋಡಿ.)

14 ಇವತ್ತು ಯೆಹೋವ ದೇವ್ರ ಬಗ್ಗೆ ಜನ ಎಷ್ಟೊಂದು ಸುಳ್ಳುಗಳನ್ನ ಹಬ್ಬಿಸಿದ್ದಾರೆ. ಅದೆಲ್ಲ ಸುಳ್ಳು ಅಂತ ನಾವೇ ಜನ್ರಿಗೆ ಹೋಗಿ ಅರ್ಥ ಮಾಡಿಸ್ಬೇಕು. ಇದನ್ನ ಹೇಗೆ ಮಾಡೋದು? ಒಂದು ಉದಾಹರಣೆ ನೋಡಿ. ನಿಮಗೆ ಒಂದೊಳ್ಳೆ ಫ್ರೆಂಡ್‌ ಇದ್ದಾನೆ. ಅವನು ಎಲ್ರ ಜೊತೆ ತುಂಬಾ ಚೆನ್ನಾಗಿ ನಡ್ಕೊಳ್ತಾನೆ, ತಪ್ಪು ಮಾಡಿದ್ರೆ ಕ್ಷಮಿಸ್ತಾನೆ, ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡ್ತಾನೆ. ಅಂಥವನ ಬಗ್ಗೆ ಯಾವನೋ ಒಬ್ಬ ‘ಇವನು ಮೋಸಗಾರ, ಸುಳ್ಳುಗಾರ, ಕಳ್ಳಸುಳ್ಳ’ ಅಂತ ಬಾಯಿಗೆ ಬಂದಂಗೆ ಬೈತಿದ್ದಾನೆ. ಆಗ ನೀವು ನೋಡ್ಕೊಂಡು ಸುಮ್ನೆ ಇರ್ತೀರಾ? ನಿಮ್ಮ ಫ್ರೆಂಡ್‌ ಪರವಾಗಿ ಮಾತಾಡ್ತೀರ ತಾನೇ? ಅದೇ ತರಾನೇ ನಮ್ಮ ಬೆಸ್ಟ್‌ ಫ್ರೆಂಡಾಗಿರೋ ಯೆಹೋವನ ಬಗ್ಗೆ ಸೈತಾನ ಮತ್ತು ಅವನ ಜನ ಸುಳ್ಳುಗಳನ್ನ ಹೇಳ್ತಿದ್ದಾರೆ. ಈಗ ನಾವೇನು ಮಾಡಬೇಕು? ನಾವು ಜನರತ್ರ ಹೋಗಿ ಯೆಹೋವ ಎಷ್ಟು ಒಳ್ಳೆಯವನು ಅಂತ ಆತನ ಬಗ್ಗೆ ಸತ್ಯವನ್ನ ಸಾರಿ ಹೇಳ್ಬೇಕು. ಆತನ ಪರವಾಗಿ ನಿಲ್ಲಬೇಕು ತಾನೇ? (ಕೀರ್ತ. 34:1; ಯೆಶಾ. 43:10) ಈ ತರ ಮಾಡಿದಾಗ ನಾವು ಯೆಹೋವ ದೇವ್ರನ್ನ ಆರಾಧಿಸ್ತೀವಿ ಅಂತ ಬರೀ ಬಾಯಿಮಾತಲ್ಲಿ ಹೇಳದೆ ನಮ್ಮ ನಡತೆಲೂ ತೋರಿಸ್ತೀವಿ.

ಒಬ್ಬ ಲೇವಿಯ ತಾಮ್ರದ ಯಜ್ಞವೇದಿ ಮತ್ತು ದೇವಾಲಯದ ಮಂಟಪದ ಮಧ್ಯೆ ನಿಂತಿದ್ದಾನೆ.

ನೀವು ಯೆಹೋವನ ಪರವಾಗಿ ಮಾತಾಡ್ತೀರಾ? (ಪ್ಯಾರ 14 ನೋಡಿ)b


15. ಪೌಲ ಬದಲಾವಣೆ ಮಾಡ್ಕೊಂಡಿದ್ರಿಂದ ಏನು ಪ್ರಯೋಜ್ನ ಆಯ್ತು? (ಫಿಲಿಪ್ಪಿ 3:7, 8)

15 ಯೆಹೋವ ದೇವ್ರಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಮತ್ತು ಆತನ ಸೇವೆನ ಜಾಸ್ತಿ ಮಾಡೋಕೆ ನಾವು ಬದಲಾವಣೆಗಳನ್ನ ಮಾಡ್ಕೊತ್ತೀವಿ. ಉದಾಹರಣೆಗೆ, ಪೌಲ ಇದನ್ನೆಲ್ಲ ಮಾಡೋಕೆ ತನಗಿದ್ದ ಸ್ಥಾನಮಾನ ಬಿಟ್ಟು ಬಂದ. (ಗಲಾ. 1:14) ಅವನ ತ್ಯಾಗಕ್ಕೆ ಏನಾದ್ರು ಪ್ರತಿಫಲ ಸಿಕ್ತಾ? ಅವನಿಗೆ ಜೀವನದಲ್ಲಿ ಸಂತೃಪ್ತಿ ಸಿಕ್ತು. ಈಗ ಅವನಿಗೆ ಯೇಸುವಿನ ಜೊತೆ ಸ್ವರ್ಗದಿಂದ ಆಳೋ ಅವಕಾಶ ಸಿಕ್ಕಿದೆ. ‘ಅಯ್ಯೋ, ನಾನು ಯೆಹೋವನ ಸೇವೆ ಮಾಡೋ ಆಯ್ಕೆ ಮಾಡಿ, ತಪ್ಪು ಮಾಡಿಬಿಟ್ಟೆ!’ ಅಂತ ಅವನು ಯಾವತ್ತೂ ಅಂದ್ಕೊಳ್ಳಲಿಲ್ಲ. ನಾವೂ ಯೆಹೋವನ ಆರಾಧನೆ ಮಾಡೋಕೆ ನಿರ್ಧಾರ ಮಾಡಿದ್ರೆ ಜೀವನದಲ್ಲಿ ಯಾವತ್ತೂ ಬೇಜಾರುಪಡಲ್ಲ.—ಫಿಲಿಪ್ಪಿ 3:7, 8 ಓದಿ.

16. ಜೂಲಿಯಾ ಇಂದ ಏನು ಕಲಿತ್ರಿ? (ಚಿತ್ರಗಳನ್ನ ನೋಡಿ.)

16 ನಮ್ಮ ಜೀವನದಲ್ಲಿ ಯೆಹೋವನ ಸೇವೆನ ಮುಖ್ಯವಾಗಿ ಇಟ್ಕೊಂಡ್ರೆ ಈಗ್ಲೂ, ಮುಂದೇನೂ ಖುಷಿಯಾಗಿ ಇರ್ತೀವಿ. ಈಗ ಜೂಲಿಯಾ ಅವ್ರ ಅನುಭವ ನೋಡೋಣ. ಸತ್ಯ ಕಲಿಯೋ ಮುಂಚೆ ಜೂಲಿಯಾ ಚಿಕ್ಕ ವಯಸ್ಸಿಂದಾನೇ ಚರ್ಚಲ್ಲಿ ಹಾಡ್ತಿದ್ಳು. ಇವಳಲ್ಲಿರೋ ಟ್ಯಾಲೆಂಟ್‌ ನೋಡಿ ಒಬ್ರು ಒಪೆರಾದಲ್ಲಿ ಅಂದ್ರೆ ದೊಡ್ಡ ಆರ್ಕೆಸ್ಟ್ರಾದಲ್ಲಿ ಹಾಡೋಕೆ ಬೇಕಾಗಿರೋ ತರಬೇತಿನ ಕೊಟ್ರು. ಜೂಲಿಯಾ ಬೇಗ ಹೆಸರುವಾಸಿ ಆದಳು. ಫೇಮಸ್‌ ಆಗಿರೋ ಜಾಗದಲ್ಲೆಲ್ಲಾ ಹೋಗಿ ಹಾಡೋಕೆ ಶುರು ಮಾಡಿದ್ಳು. ಒಂದು ಮ್ಯೂಸಿಕ್‌ ಶಾಲೆಲಿ ತರಬೇತಿ ಪಡ್ಕೊಳ್ತಿದ್ದಾಗ ಅವಳ ಕ್ಲಾಸ್‌ಮೇಟ್‌ ಇವಳ ಹತ್ರ ದೇವ್ರ ಹೆಸ್ರು ಯೆಹೋವ ಅಂತ ಹೇಳಿದ್ಳು. ಸ್ವಲ್ಪ ದಿನಗಳಾದ್ಮೇಲೆ ವಾರದಲ್ಲಿ ಎರಡು ದಿನ ಬೈಬಲ್‌ ಸ್ಟಡಿ ಮಾಡೋಕೆ ಇವಳು ಶುರು ಮಾಡಿದ್ಳು. ‘ಮ್ಯೂಸಿಕಲ್ಲೇ ನನ್ನ ಜೀವನ ಕಳೆಯೋಕ್ಕಿಂತ ಯೆಹೋವನಿಗೋಸ್ಕರ ಜೀವಿಸೋಣ’ ಅಂತ ತೀರ್ಮಾನ ಮಾಡಿದಳು. ಆದ್ರೆ ಇದನ್ನ ಮಾಡೋದು ಅಷ್ಟು ಸುಲಭ ಆಗಿರಲಿಲ್ಲ. ಯಾಕಂದ್ರೆ ಎಷ್ಟೋ ಜನ ಅವಳತ್ರ ಬಂದು ‘ನಿನ್ನ ಜೀವನನ ನೀನು ವೇಸ್ಟ್‌ ಮಾಡ್ಕೊಳ್ತಿದ್ಯ’ ಅಂತ ಹೇಳ್ತಿದ್ರು. ಆದ್ರೆ ‘ನಂಗೆ ನನ್ನ ಜೀವನನ ಯೆಹೋವನಿಗೆ ಕೊಡಬೇಕಂತ ಆಸೆ ಇತ್ತು’ ಅಂತ ಆಕೆ ಹೇಳ್ತಾಳೆ. ಆಕೆ ಈ ನಿರ್ಧಾರ ಮಾಡಿ ಈಗ 30 ವರ್ಷ ಆಗಿದೆ. ಈಗ ಆಕೆಗೆ ತನ್ನ ನಿರ್ಧಾರದ ಬಗ್ಗೆ ಹೇಗನಿಸುತ್ತೆ? “ನಾನೀಗ ನೆಮ್ಮದಿಯಿಂದ ಇದ್ದೀನಿ. ನನ್ನ ಮನಸ್ಸಲ್ಲಿರೋ ಆಸೆಗಳನ್ನ ಯೆಹೋವ ಖಂಡಿತ ಭವಿಷ್ಯದಲ್ಲಿ ನಿಜ ಮಾಡ್ತಾನೆ ಅಂತ ನಾನು ನಂಬಿದ್ದೀನಿ” ಅಂತ ಆಕೆ ಹೇಳ್ತಾಳೆ.—ಕೀರ್ತ. 145:16.

ಚಿತ್ರಗಳು: ಜೂಲಿಯಾ ಜೀವನದ ಬಗ್ಗೆ ಅಭಿನಯಿಸಿರೋ ಚಿತ್ರಗಳು. 1. ಜೂಲಿಯಾ ಜನ್ರ ಮುಂದೆ ಸ್ಟೇಜಲ್ಲಿ ನಿಂತು ಹಾಡ್ತಿದ್ದಾಳೆ. 2. ಅವಳು ಕೂಟದಲ್ಲಿ ತನ್ನ ಗಂಡನ ಜೊತೆ ನಿಂತ್ಕೊಂಡು ಹಾಡ್ತಿದ್ದಾಳೆ.

ನಾವು ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಟ್ರೆ ನಮ್ಮ ಜೀವನದಲ್ಲಿ ಖುಷಿಗೆ ಕೊರತೆನೇ ಇರಲ್ಲ (ಪ್ಯಾರ 16 ನೋಡಿ)c


ಯೆಹೋವನನ್ನ ಆರಾಧಿಸ್ತಾ ಇರಿ

17. (ಎ) ಯೆಹೋವನನ್ನ ಆರಾಧನೆ ಮಾಡದೆ ಇರೋರು ಈಗ್ಲೇ ಏನು ಮಾಡಬೇಕು? (ಬಿ) ಈಗಾಗ್ಲೇ ಯೆಹೋವನನ್ನ ಆರಾಧನೆ ಮಾಡ್ತಿರೋರು ಏನು ಮಾಡ್ತಾ ಇರಬೇಕು?

17 ಈ ಲೋಕದ ಅಂತ್ಯದ ಬಗ್ಗೆ ಹೇಳ್ತಾ ಪೌಲ ‘ಅಂತ್ಯಕ್ಕೆ ಸ್ವಲ್ಪ ಸಮಯ ಇದೆ ಅಷ್ಟೇ, ಬರ್ತಾ ಇರೋ ಯೇಸು ತಡಮಾಡಲ್ಲ’ ಅಂತ ಬರೆದಿದ್ದಾನೆ. (ಇಬ್ರಿ. 10:37) ಉಳಿದಿರೋ ಸಮಯ ಸ್ವಲ್ಪನೇ ಆಗಿರೋದ್ರಿಂದ ಏನು ಮಾಡಬೇಕು? ಒಂದು, ಯೆಹೋವನನ್ನ ಆರಾಧನೆ ಮಾಡೋಕೆ ಜನ ಈಗ್ಲೇ ನಿರ್ಧಾರ ಮಾಡ್ಬೇಕು. (1 ಕೊರಿಂ. 7:29) ಎರಡನೇದು, ಈಗಾಗ್ಲೇ ಯೆಹೋವನನ್ನ ಆರಾಧಿಸ್ತಾ ಇರೋರು ಕಷ್ಟಗಳನ್ನ ಕೊನೆವರೆಗೂ ತಾಳ್ಕೊಳ್ತಾ ಇರಬೇಕು. ಆದ್ರೆ ನಮಗೆ ಗೊತ್ತಿರೋ ಹಾಗೆ ನಾವು ಸ್ವಲ್ಪ ಸಮಯ ತಾಳ್ಕೊಬೇಕಷ್ಟೇ. ಯಾಕಂದ್ರೆ ಅಂತ್ಯ ಹತ್ರ ಇದೆ.

18. ನಾವೇನು ಮಾಡ್ತಾ ಇರಬೇಕು ಅಂತ ಯೇಸು ಮತ್ತು ಯೆಹೋವ ಹೇಳಿದ್ದಾರೆ?

18 ಯೇಸು ತನ್ನ ಶಿಷ್ಯರಿಗೆ, ‘ನೀವು ಒಂದ್ಸಲ ನನ್ನ ಶಿಷ್ಯರಾಗಿ, ಆಮೇಲೆ ಬಿಟ್ಟು ಬಿಡಿ’ ಅಂತ ಹೇಳಲಿಲ್ಲ. ನೀವು ಯಾವಾಗ್ಲೂ ನನ್ನ ಶಿಷ್ಯರಾಗಿ ನಡ್ಕೊಳ್ತಾ ಇರಿ ಅಂತ ಹೇಳಿದನು. (ಮತ್ತಾ. 16:24) ಒಂದುವೇಳೆ ನಾವು ಸುಮಾರು ವರ್ಷದಿಂದ ಯೆಹೋವನ ಸೇವೆ ಮಾಡ್ತಾ ಇರೋದಾದ್ರೆ, ಯಾವ ಕಾರಣಕ್ಕೂ ಅದನ್ನ ನಿಲ್ಲಿಸೋದು ಬೇಡ. ಈ ತರ ಕೊನೆವರೆಗೂ ದೇವರ ಸೇವೆ ಮಾಡ್ತಾ ಇರೋದು ಅಷ್ಟು ಸುಲಭ ಅಲ್ಲ. ಆದ್ರೆ ನಾವು ಆತನ ಸೇವೆ ಮಾಡ್ತಾ ಇದ್ರೆ ಅದ್ರಿಂದ ನಮಗೆ ಸಿಗೋ ಸಂತೃಪ್ತಿ, ಆಶೀರ್ವಾದಗಳಿಗೆ ಬೆಲೆನೇ ಕಟ್ಟೋಕಾಗಲ್ಲ!—ಕೀರ್ತ. 35:27.

19. ಜೀನ್‌ ಅನುಭವದಿಂದ ನೀವೇನು ಕಲಿತ್ರಿ?

19 ‘ಯೆಹೋವನ ಸೇವೆ ಮಾಡೋದ್ರಲ್ಲಿ ಏನೂ ಖುಷಿಯಿಲ್ಲ’ ಅಂತ ಕೆಲವರು ಹೇಳ್ತಾರೆ. ಯುವಜನ್ರೇ, ನೀವು ಯೆಹೋವನ ಸೇವೆ ಮಾಡಿದ್ರೆ ಜೀವನದಲ್ಲಿ ಏನೋ ಕಳ್ಕೊಬಿಡ್ತೀರಾ ಅಂತ ಅನಿಸುತ್ತಾ? ಇದ್ರ ಬಗ್ಗೆ ಜೀನ್‌ ಅನ್ನೋ ಯುವ ಸಹೋದರ ಏನು ಹೇಳ್ತಾನೆ ನೋಡಿ. “ಯೆಹೋವನ ಸಾಕ್ಷಿ ಆಗಿರೋದು ಕೈ ಕಟ್ಟಾಕಿರೋ ತರ ಅನ್ಸುತ್ತೆ. ನನ್ನ ವಯಸ್ಸಿನಲ್ಲಿ ಇರೋರೆಲ್ಲ ಪಾರ್ಟಿ ಮಾಡ್ತಾ, ಪ್ರೀತಿ ಪ್ರೇಮ ಅಂತ, ಇಷ್ಟ ಬಂದ ವಿಡಿಯೋ ಗೇಮ್ಸ್‌ ಆಡ್ತಾ ಖುಷಿ ಖುಷಿಯಾಗಿದ್ದಾರೆ. ಆದ್ರೆ ನಾನು ಈ ಮೀಟಿಂಗ್‌, ಸೇವೆ ಅಂತ ಅಂದ್ಕೊಂಡು ನನ್ನ ಜೀವನನ ಹಾಳು ಮಾಡ್ಕೊಳ್ತಾ ಇದ್ದೀನಿ ಅಂತ ಅಂದ್ಕೊಂಡಿದ್ದೆ.” ಈ ತರ ಅಂದ್ಕೊಂಡಿದ್ರಿಂದ ಏನಾಯ್ತು? “ಸಭೇಲಿ ಒಂಥರ, ಹೊರಗಡೆ ಒಂಥರ ಇರ್ತಿದ್ದೆ. ಇದೆಲ್ಲಾ ಸ್ವಲ್ಪ ದಿನಗಳವರೆಗೆ ಚೆನ್ನಾಗಿತ್ತು. ಆದ್ರೆ ನಾನು ಜಾಸ್ತಿ ದಿನ ಖುಷಿಯಾಗಿ ಇರಲಿಲ್ಲ. ಆಗ ಯಾವೆಲ್ಲ ಬೈಬಲ್‌ ಸಲಹೆನ ಗಾಳಿಗೆ ತೂರಿದ್ದೀನಿ ಅಂತ ಯೋಚಿಸಿದೆ. ಆಮೇಲೆ ಯೆಹೋವನನ್ನ ಪೂರ್ಣ ಹೃದಯದಿಂದ ಆರಾಧಿಸಬೇಕು ಅಂತ ನಿರ್ಧಾರ ಮಾಡಿದೆ. ಈ ತರ ನಿಯತ್ತಾಗಿ ನಡ್ಕೊಳ್ತಾ ಇರೋದ್ರಿಂದ ಯೆಹೋವ ನನ್ನ ಪ್ರತಿ ಪ್ರಾರ್ಥನೆಗೂ ಉತ್ತರ ಕೊಡ್ತಿದ್ದಾನೆ.”

20. ನಾವೆಲ್ರೂ ಯಾವ ತೀರ್ಮಾನ ಮಾಡೋದು ಒಳ್ಳೇದು?

20 ಕೀರ್ತನೆ ಬರೆದವನು ಯೆಹೋವನ ಬಗ್ಗೆ ಹೇಳ್ತಾ, “ನಿನ್ನ ಅಂಗಳದಲ್ಲಿ ವಾಸಿಸೋಕೆ ನೀನು ಯಾರನ್ನ ಆರಿಸಿಕೊಳ್ತೀಯೋ ನೀನು ಯಾರನ್ನ ಕರೀತೀಯೋ ಅವನು ಭಾಗ್ಯವಂತ” ಅಂತ ಹೇಳಿದ್ದಾನೆ. (ಕೀರ್ತ. 65:4) ಅದಕ್ಕೆ ನಾವು ಯೆಹೋಶುವ ಹೇಳಿದ ಹಾಗೆ “ನಾನು ಮತ್ತು ನನ್ನ ಕುಟುಂಬದವರು ಯೆಹೋವನನ್ನೇ ಆರಾಧಿಸ್ತೀವಿ” ಅಂತ ಹೇಳೋಣ. ಅದೇ ತರ ನಡ್ಕೊಳ್ಳೋಣ!—ಯೆಹೋ. 24:15.

ನೀವೇನು ಹೇಳ್ತಿರಾ?

  • ಯೇಸು ಯಾಕೆ ಯೆಹೋವನನ್ನ ಆರಾಧನೆ ಮಾಡೋಕೆ ನಿರ್ಧಾರ ಮಾಡಿದ?

  • ನಮ್ಮ ಆರಾಧನೆ ಪಡ್ಕೊಳೋಕೆ ಯೆಹೋವ ಯಾಕೆ ಅರ್ಹನಾಗಿದ್ದಾನೆ?

  • ನೀವು ಯೆಹೋವನನ್ನ ಯಾಕೆ ಆರಾಧನೆ ಮಾಡ್ತಿದ್ದೀರಾ?

ಗೀತೆ 28 ಯೆಹೋವನ ಸ್ನೇಹವನ್ನು ಗಳಿಸೋಣ

a ಕೆಲವ್ರ ಹೆಸ್ರನ್ನ ಬದಲಾಯಿಸಲಾಗಿದೆ.

b ಚಿತ್ರ ವಿವರಣೆ: ಒಬ್ಬ ಹೆಂಗಸು, ಅಧಿವೇಶನದ ಹೊರಗಡೆ ವಿರೋಧಿಗಳು ನಮ್ಮ ವಿರುದ್ಧ ಕೂಗಾಡ್ತಿರೋದನ್ನ ಕೇಳಿಸ್ಕೊಂಡು ತಳ್ಳುಬಂಡಿ ಹತ್ರ ಬಂದು ನಿಜ ಏನಂತ ಕೇಳಿ ತಿಳ್ಕೊಳ್ತಿದ್ದಾಳೆ.

c ಚಿತ್ರ ವಿವರಣೆ: ಜೂಲಿಯಾ ಯೆಹೋವನ ಆರಾಧನೆ ಮಾಡೋಕೆ ತನ್ನ ಜೀವನದಲ್ಲಿ ಯಾವ ಬದಲಾವಣೆ ಮಾಡ್ಕೊಂಡ್ಳು ಅಂತ ಈ ಚಿತ್ರಗಳಲ್ಲಿ ತೋರಿಸಲಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ