ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಸೆಪ್ಟೆಂಬರ್‌ ಪು. 26-30
  • ‘ನೆಟ್ಟಲ್ಲೇ ಬೆಳೆಯೋಕೆ’ ಯೆಹೋವ ಸಹಾಯ ಮಾಡಿದನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ನೆಟ್ಟಲ್ಲೇ ಬೆಳೆಯೋಕೆ’ ಯೆಹೋವ ಸಹಾಯ ಮಾಡಿದನು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಅನುರೂಪ ಮಾಹಿತಿ
  • ಯೆಹೋವನ ಸೇವೆಯಲ್ಲಿ ಇಷ್ಟು ಸಂತೋಷ ಸಿಗುತ್ತೆ ಅಂತ ನೆನಸಿರಲಿಲ್ಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಯೆಹೋವ ನಂಗೆ ‘ಸರಿ ದಾರಿ ತೋರಿಸಿದ್ದಾನೆ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಯೆಹೋವನು ನನ್ನ ಆಶ್ರಯದುರ್ಗವೂ ಬಲವೂ ಆಗಿದ್ದಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಸೆಪ್ಟೆಂಬರ್‌ ಪು. 26-30
ಮ್ಯಾಟ್ಸ್‌ ಮತ್ತು ಆ್ಯನ್‌ ಒಂದು ಹಳ್ಳಿಯಲ್ಲಿ ಇದ್ದಾರೆ, ಪಕ್ಕದಲ್ಲಿ ಅವ್ರ ಗಾಡಿ ಇದೆ.

ಜೀವನ ಕಥೆ

‘ನೆಟ್ಟಲ್ಲೇ ಬೆಳೆಯೋಕೆ’ ಯೆಹೋವ ಸಹಾಯ ಮಾಡಿದನು

ಮ್ಯಾಟ್ಸ್‌ ಮತ್ತು ಆ್ಯನ್‌ ಕ್ಯಾಟರಿನ್‌ ಕಸ್ಸೋಮ್‌ ಅವ್ರ ಮಾತಿನಲ್ಲಿ

‘ನೆಟ್ಟಲ್ಲೇ ಬೆಳೆಯಿರಿ’ ಅನ್ನೋ ಸಲಹೆ ಪಾಲಿಸೋಕೆ ಕಷ್ಟ ಅಂತ ಅನ್ಸುತ್ತೆ. ಆದ್ರೆ ಮ್ಯಾಟ್ಸ್‌ ಮತ್ತು ಆ್ಯನ್‌ ಕ್ಯಾಟರಿನ್‌ ಈ ಸಲಹೆನ ತುಂಬಾ ಚೆನ್ನಾಗಿ ಪಾಲಿಸಿದ್ದಾರೆ. ಅವರು ಹೇಗೆ ಪಾಲಿಸಿದ್ರು ಮತ್ತು ಆ ಸಲಹೆ ಅವ್ರಿಗೆ ಹೇಗೆ ಸಹಾಯ ಮಾಡ್ತು ಅಂತ ನೋಡೋಣ.

ಈ ದಂಪತಿ 1979ರಲ್ಲಿ ಗಿಲ್ಯಡ್‌ ಶಾಲೆಗೆ ಹಾಜರಾದರು. ಅದಾದ್ಮೇಲೆ, ಇರಾನ್‌, ಮಾರಿಷಸ್‌,ಮಯನ್ಮಾರ್‌, ತಾಂಜೇನಿಯಾ, ಉಗಾಂಡಾ ಮತ್ತು ಜಾಯಿರ್‌ನಲ್ಲಿ ಸೇವೆ ಮಾಡಿದ್ರು. ಗಿಲ್ಯಡ್‌ನಲ್ಲಿ ಜ್ಯಾಕ್‌ ರೆಡ್‌ಫೋರ್ಡ್‌ ಇವ್ರ ಇನ್ಸ್‌ಟ್ರಕ್ಟರ್‌ ಆಗಿದ್ರು. ಅವರು ‘ನೆಟ್ಟಲ್ಲೇ ಬೆಳೆಯಿರಿ’ ಅನ್ನೋ ಸಲಹೆ ಕೊಟ್ರು. ಇವ್ರಿಬ್ರನ್ನ ಬೇರೆ-ಬೇರೆ ಕಡೆ “ನೆಡಲಾಯಿತು,” “ತೆಗೆಯಲಾಯಿತು.” ಇದೆಲ್ಲದಕ್ಕೂ ಹೊಂದ್ಕೊಳ್ಳೋಕೆ ಆ ಸಲಹೆ ಇವ್ರಿಗೆ ಸಹಾಯ ಮಾಡ್ತು. ಅದು ಹೇಗೆ ಅಂತ ನೋಡೋಣ.

ಮ್ಯಾಟ್ಸ್‌, ನಿಮಗೆ ಸತ್ಯ ಹೇಗೆ ಸಿಕ್ತು?

ಮ್ಯಾಟ್ಸ್‌: 2ನೇ ಲೋಕ ಯುದ್ಧ ನಡೀಬೇಕಾದ್ರೆ ನಾವು ಪೋಲೆಂಡ್‌ ಅಲ್ಲಿದ್ವಿ. ಆಗ ಕ್ಯಾಥೋಲಿಕ್‌ ಚರ್ಚ್‌ನಲ್ಲಿ ಹೇಳೋದೇ ಒಂದು ಮಾಡೋದೆ ಒಂದು ಅಂತ ನಮ್ಮ ತಂದೆ ಗಮನಿಸಿದ್ರು. ಅದಾದ್ಮೇಲೆ ಅವರು “ಸತ್ಯ ಧರ್ಮ ಬೇರೆಲ್ಲೋ ಖಂಡಿತ ಇದೆ” ಅಂತ ಹೇಳಿದ್ರು. ‘ಸತ್ಯ ಧರ್ಮ ಇದೆ’ ಅಂತ ನಾನು ಅರ್ಥ ಮಾಡ್ಕೊಂಡೆ. ನಾನು ಸೆಕೆಂಡ್‌ ಆ್ಯಂಡ್‌ ಪುಸ್ತಕಗಳನ್ನ ತಗೊಂಡು ಬಂದು ಓದ್ತಾ ಇದ್ದೆ. ಒಂದಿನ ನನಗೆ ನಿತ್ಯಜೀವಕ್ಕೆ ನಡೆಸುವ ಸತ್ಯವು ಅನ್ನೋ ಪುಸ್ತಕ ಸಿಕ್ತು. ನಾನು ಅವತ್ತು ರಾತ್ರಿನೇ ಆ ಇಡೀ ಪುಸ್ತಕನ ಓದಿ ಬಿಟ್ಟೆ. ಆಮೇಲೆ ಇದೇ ಸತ್ಯ ಅಂತ ನನಗೆ ಅರ್ಥ ಆಯ್ತು.

1972 ಏಪ್ರಿಲ್‌ ತಿಂಗಳಿಂದ, ನಾನು ಯೆಹೋವನ ಸಾಕ್ಷಿಗಳ ಪುಸ್ತಕಗಳನ್ನ ಓದೋಕೆ ಶುರು ಮಾಡಿದೆ. ಆಗ ನನ್ನ ಪ್ರಶ್ನೆಗಳಿಗೆ ಉತ್ರ ಸಿಕ್ತು. ಆಗ ನನಗೆ ಯೇಸು ಹೇಳಿದ ಕಥೆಯಲ್ಲಿದ್ದ ವ್ಯಾಪಾರಿ ತರ ಅನಿಸ್ತು. ಅವನು ಬೆಲೆಬಾಳೋ ಒಂದು ಮುತ್ತುಗೋಸ್ಕರ ತನ್ನ ಹತ್ರ ಇದ್ದ ಎಲ್ಲವನ್ನ ಮಾರಿಬಿಟ್ಟ. ಅದೇ ತರ ನಾನು ಸತ್ಯದ ಮುತ್ತನ್ನ ಪಡ್ಕೊಳ್ಳೋಕೆ ಹೆಚ್ಚು ಓದಿ ಡಾಕ್ಟರ್‌ ಆಗಬೇಕು ಅನ್ನೋ ಆಸೆನ ‘ಮಾರಿಬಿಟ್ಟೆ.’ (ಮತ್ತಾ. 13:45, 46) ಅದಕ್ಕೆ ಡಿಸೆಂಬರ್‌ 10, 1972ರಲ್ಲಿ ದೀಕ್ಷಾಸ್ನಾನ ತಗೊಂಡೆ.

ಒಂದು ವರ್ಷದೊಳಗೆ ನನ್ನ ಅಪ್ಪ-ಅಮ್ಮ ಮತ್ತು ತಮ್ಮನೂ ದೀಕ್ಷಾಸ್ನಾನ ತಗೊಂಡ್ರು. ಜುಲೈ 1973ರಲ್ಲಿ ನಾನು ಪೂರ್ಣ ಸಮಯದ ಸೇವೆ ಶುರು ಮಾಡಿದೆ. ಆಗ ನಮ್ಮ ಸಭೇಲಿ ಹುರುಪಿಂದ ಪಯನೀಯರ್‌ ಸೇವೆ ಮಾಡ್ತಿದ್ದ ಒಬ್ಬ ಸಿಸ್ಟರ್‌ ಇದ್ರು. ಅವ್ರ ಹೆಸರು ಆ್ಯನ್‌ ಕ್ಯಾಟರಿನ್‌. ನಾವಿಬ್ರು ಒಬ್ರನ್ನೊಬ್ರು ತುಂಬಾ ಪ್ರೀತಿಸಿದ್ವಿ. 1975ರಲ್ಲಿ ಮದುವೆ ಆದ್ವಿ. ಅದಾದ್ಮೇಲೆ ಸ್ವೀಡನ್‌ನ ಸ್ಟ್ರಾಂಸಂಡ್‌ ಅನ್ನೋ ಪಟ್ಟಣದಲ್ಲಿ ನಾಲ್ಕು ವರ್ಷ ಸೇವೆ ಮಾಡಿದ್ವಿ. ಇಲ್ಲಿ ತುಂಬ ಜನ್ರಿಗೆ ಸತ್ಯ ಕಲಿಬೇಕು ಅನ್ನೋ ಆಸೆ ಇತ್ತು.

ಆ್ಯನ್‌ ಕ್ಯಾಟರಿನ್‌: ನನ್ನ ತಂದೆಗೆ ಸ್ಟಾಕ್‌ಹೋಮ್‌ ಅನ್ನೋ ಪಟ್ಟಣದಲ್ಲಿ ಇನ್ನೇನು ಓದು ಮುಗಿಸಬೇಕಾದ್ರೆ ಸತ್ಯ ಸಿಕ್ತು. ಆಗ ನನಗೆ ಮೂರು ತಿಂಗಳಷ್ಟೇ. ಅವರು ನನ್ನನ್ನ ಅವ್ರ ಜೊತೆ ಸೇವೆಗೆ, ಕೂಟಗಳಿಗೆಲ್ಲಾ ಕರ್ಕೊಂಡು ಹೋಗ್ತಿದ್ರು. ಆದ್ರೆ ನಮ್ಮ ಅಮ್ಮನಿಗೆ ಇದು ಇಷ್ಟ ಆಗ್ಲಿಲ್ಲ. ‘ಯೆಹೋವನ ಸಾಕ್ಷಿಗಳು ಹೇಳೋದೆಲ್ಲಾ ಸುಳ್ಳು ಅಂತ ಸಾಬೀತು ಮಾಡಬೇಕು’ ಅಂತ ಅಂದ್ಕೊಂಡ್ರು. ಆದ್ರೆ ಅವ್ರ ಕೈಯಲ್ಲಿ ಮಾಡಕ್ಕಾಗಿಲ್ಲ. ಅದಕ್ಕೆ ಅವರೂ ದೀಕ್ಷಾಸ್ನಾನ ತಗೊಂಡ್ರು. ನನಗೆ 13 ವರ್ಷ ಆದಾಗ ನಾನು ದೀಕ್ಷಾಸ್ನಾನ ತಗೊಂಡೆ. ಆಮೇಲೆ 16 ವರ್ಷ ಆದಾಗ ನಾನು ಪಯನೀಯರ್‌ ಸೇವೆ ಶುರು ಮಾಡಿದೆ. ಆಮೇಲೆ ಅಗತ್ಯ ಇದ್ದ ಉಮಾವೋ ಅನ್ನೋ ಸ್ಥಳಕ್ಕೆ ಬಂದು ಅಲ್ಲಿ ವಿಶೇಷ ಪಯನೀಯರ್‌ ಸೇವೆನ ಶುರು ಮಾಡಿದೆ.

ನಾವಿಬ್ರು ಮದುವೆ ಆದ್ಮೇಲೆ ತುಂಬಾ ಜನ್ರಿಗೆ ಸತ್ಯ ಕಲಿಸೋದ್ರಲ್ಲಿ ಸಂತೋಷ ಕಂಡ್ಕೊಂಡ್ವಿ. ಅದ್ರಲ್ಲಿ ಒಬ್ಬಳು ಮೈವರ್‌. ಆಟ ಆಡೋದ್ರಲ್ಲೇ ತನ್ನ ಜೀವನ ಕಟ್ಕೊಬೇಕು ಅಂತಿದ್ದಳು. ಆದ್ರೆ ಅದನ್ನೆಲ್ಲ ತ್ಯಾಗ ಮಾಡಿ ಅವಳು ನನ್ನ ತಂಗಿ ಜೊತೆ ಪಯನೀಯರ್‌ ಸೇವೆ ಶುರು ಮಾಡಿದ್ಲು. ಅವ್ರಿಬ್ರೂ 1984ರಲ್ಲಿ ಗಿಲ್ಯಡ್‌ ಶಾಲೆಗೆ ಹೋದ್ರು. ಈಗ ಈಕ್ವೆಡಾರ್‌ನಲ್ಲಿ ಮಿಷನರಿಗಳಾಗಿ ಸೇವೆ ಮಾಡ್ತಿದ್ದಾರೆ.

“ನೆಟ್ಟಲ್ಲೇ ಬೆಳೆಯಿರಿ” ಅನ್ನೋ ಈ ಸಲಹೆನ ಹೇಗೆ ಪಾಲಿಸಿದ್ದೀರಾ?

ಮ್ಯಾಟ್ಸ್‌: ನಮ್ಮ ನೇಮಕದಲ್ಲಿ ನಮ್ಮನ್ನ ‘ಬೇರೆ-ಬೇರೆ ಕಡೆ ನೆಡಲಾಯಿತು.’ ಆಗೆಲ್ಲ ನಾವು ಯೇಸುವಿನ ಮಾದರಿನ ಪಾಲಿಸಿದ್ವಿ. ಮುಖ್ಯವಾಗಿ ಆತನ ದೀನತೆನ ಪಾಲಿಸಿದ್ರಿಂದ ಇದನ್ನ ಮಾಡೋಕಾಯ್ತು. (ಕೊಲೊ. 2:6, 7) ಉದಾಹರಣೆಗೆ, ನಮ್ಮನ್ನ ಯಾವುದಾದ್ರೂ ಹೊಸ ಜಾಗಕ್ಕೆ ಹಾಕಿದಾಗ ಅಲ್ಲಿರೋ ಸಾಕ್ಷಿಗಳು ನಮಗೆ ಹೊಂದ್ಕೊಬೇಕು ಅಂತ ನಾವು ಅಂದ್ಕೊಳ್ಳಲಿಲ್ಲ. ಬದಲಿಗೆ ಅವರು ಯಾಕೆ ಈ ತರ ಇದ್ದಾರೆ, ಯಾಕೆ ಈ ತರ ಯೋಚಿಸ್ತಾರೆ, ಅವ್ರ ಸಂಸ್ಕೃತಿ ಏನು ಅಂತ ನಾವು ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಮಾಡಿದ್ವಿ. ಯೇಸುವಿನ ಮಾದರಿನ ನಾವು ಎಷ್ಟು ಹೆಚ್ಚು ಪಾಲಿಸಿದ್ವೋ, ಅಷ್ಟು ಹೆಚ್ಚಾಗಿ ನಮಗೆ “ನೀರಿನ ಕಾಲುವೆಗಳ ಹತ್ರ ಇರೋ ಮರದ ತರ” ಅನಿಸ್ತು.—ಕೀರ್ತ. 1:2, 3.

ಮ್ಯಾಟ್ಸ್‌ ಮತ್ತು ಆ್ಯನ್‌ ಅವ್ರ ಲಗೇಜ್‌ ಹಾಗು ಸ್ವಲ್ಪ ಊಟನ ಹಿಡ್ಕೊಂಡಿದ್ದಾರೆ.

ನಾವು ಬೇರೆ-ಬೇರೆ ಸಭೆಗಳನ್ನ ಭೇಟಿ ಮಾಡೋಕೆ ಯಾವಾಗ್ಲೂ ಪ್ರಯಾಣ ಮಾಡ್ತಿದ್ವಿ

ಆ್ಯನ್‌ ಕ್ಯಾಟರಿನ್‌: ಒಂದು ಮರನಾ ಬೇರೊಂದು ಜಾಗದಲ್ಲಿ ನೆಟ್ಟ ಮೇಲೆ ಅದು ಬೆಳಿಬೇಕಂದ್ರೆ ಅದಕ್ಕೆ ‘ಸೂರ್ಯನ’ ಬೆಳಕು ಬೇಕು. ಯೆಹೋವನು ನಮಗೆ ಸೂರ್ಯನ ತರ ಇದ್ದಾನೆ. (ಕೀರ್ತ. 84:11) ಆತನು ನಮಗೆ ತುಂಬಾ ಪ್ರೀತಿ ತೋರಿಸೋ ಸಹೋದರರನ್ನ ಕೊಟ್ಟಿದ್ದಾನೆ. ಉದಾಹರಣೆಗೆ, ಇರಾನ್‌ನ ತೆಹ್ರಾನ್ನಲ್ಲಿರೋ ಒಂದು ಸಭೇಲಿದ್ದಾಗ ಅಲ್ಲಿದ್ದವರು ನಮಗೆ ತುಂಬಾ ಅತಿಥಿಸತ್ಕಾರ ತೋರಿಸ್ತಿದ್ರು. ಅವ್ರನ್ನ ನೋಡಿದ್ರೆ ಬೈಬಲ್‌ ಸಮ್ಯದಲ್ಲಿ ತೋರಿಸ್ತಿದ್ದ ಅತಿಥಿಸತ್ಕಾರ ನೆನಪಾಗ್ತಿತ್ತು. ನಾವು ಇರಾನ್‌ನಲ್ಲೇ ಇರೋಕೆ ತುಂಬಾ ಇಷ್ಟಪಟ್ವಿ. ಆದ್ರೆ 1980ರ ಜುಲೈ ತಿಂಗಳಲ್ಲಿ ಸರ್ಕಾರ ಯೆಹೋವನ ಸಾಕ್ಷಿಗಳನ್ನ ಅಲ್ಲಿ ನಿಷೇಧ ಮಾಡ್ತು. ಅದಾದ್ಮೇಲೆ ನಮಗೆ, ‘48 ಗಂಟೆಗಳಲ್ಲಿ ನೀವು ದೇಶ ಬಿಟ್ಟು ಹೋಗಬೇಕು’ ಅಂತ ಹೇಳ್ತು. ಆಮೇಲೆ ನಮ್ಮನ್ನ ಆಫ್ರಿಕಾದ ಜಾಯಿರ್‌ ಅನ್ನೋ ಜಾಗಕ್ಕೆ ನೇಮಕ ಮಾಡಿದ್ರು. ಈಗ ಅದನ್ನ ಕಾಂಗೋ ಅಂತ ಕರೀತಾರೆ.

ಜಾಯಿರ್‌ ಹಳ್ಳಿಯಲ್ಲಿದ್ದ ಒಂದು ಪುಟ್ಟ ಮನೆ.

ಜಾಯಿರ್‌ನಲ್ಲಿ ಕಳೆದ ಸವಿನೆನಪುಗಳು, 1982

ನಮ್ಮನ್ನ ಆಫ್ರಿಕಾಗೆ ಕಳಿಸ್ತಿದ್ದಾರೆ ಅಂತ ಗೊತ್ತಾದಾಗ ನಾನು ತುಂಬಾ ಅತ್ತೆ. ಆಫ್ರಿಕಾದಲ್ಲಿ ಬರೀ ಹಾವುಗಳು, ಕಾಯಿಲೆಗಳು ಅಂತ ನಾನು ಕೇಳಿಸ್ಕೊಂಡಿದ್ದೆ. ಆದ್ರೆ ಆಫ್ರಿಕಾದಲ್ಲಿ ಈಗಾಗಲೇ ಸೇವೆ ಮಾಡಿದ್ದ ನನ್ನ ಇಬ್ರು ಫ್ರೆಂಡ್ಸ್‌ ನನಗೆ ‘ನೀನು ಇನ್ನು ಅಲ್ಲಿಗೇ ಹೋಗಲೇ ಇಲ್ಲ, ಒಂದ್ಸಲ ಹೋಗಿ ನೋಡು ನಿನಗೆ ತುಂಬಾ ಇಷ್ಟ ಆಗುತ್ತೆ’ ಅಂತ ಹೇಳಿದ್ರು. ಅವರು ಹೇಳಿದ್ದು ನಿಜ. ಇಲ್ಲಿರೋ ಸಹೋದರ ಸಹೋದರಿಯರು ತುಂಬಾ ಪ್ರೀತಿ ತೋರಿಸ್ತಾರೆ. 6 ವರ್ಷ ಆದ್ಮೇಲೆ ಯೆಹೋವನ ಸಾಕ್ಷಿಗಳ ಕೆಲಸದ ಮೇಲೆ ಅಲ್ಲಿ ನಿಷೇಧ ಬಂತು. ಆಗ ನಾವು ಆ ದೇಶನ ಬಿಟ್ಟು ಹೋಗಬೇಕಾಯ್ತು. ಆಗ ನಾನು ಯೆಹೋವನಿಗೆ “ದಯವಿಟ್ಟು ಆಫ್ರಿಕಾದಲ್ಲೇ ಇರೋ ತರ ಮಾಡಿ ಯೆಹೋವ” ಅಂತ ಕೇಳ್ಕೊಂಡೆ.

ಇಷ್ಟೂ ವರ್ಷಗಳಲ್ಲಿ ನಿಮಗೆ ಯಾವೆಲ್ಲಾ ಅನುಭವ ಸಿಕ್ಕಿದೆ?

ವೋಕ್ಸ್‌ವೇಗನ್‌ ಕೊಂಬಿ ಅನ್ನೋ ವ್ಯಾನ್‌ ಹೊರಗೆ ಆ್ಯನ್‌ ಕ್ಯಾಟರಿನ್‌ ಚೇರ್‌ ಹಾಕೊಂಡು ಕೂತಿದ್ದಾಳೆ.

ತಾಂಜೇನಿಯಾದಲ್ಲಿ ನಮ್ಮ ಮನೆ, 1988

ಮ್ಯಾಟ್ಸ್‌: ಹೇಳ್ತಾ ಹೋದ್ರೆ ಒಂದು ದೊಡ್ಡ ಲಿಸ್ಟ್‌ ಇದೆ. ಮೊದ್ಲು ನನ್ನ ನೆನಪಿಗೆ ಬರೋದು ಬೇರೆ-ಬೇರೆ ದೇಶಗಳಿಂದ ಬಂದ ಮಿಷನರಿಗಳ ಜೊತೇಲಿ ನಮಗೆ ಸಿಕ್ಕ ಸ್ನೇಹ. ಕೆಲವೊಂದು ನೇಮಕಗಳಲ್ಲಿ ನಮಗೆ ತುಂಬಾ ಬೈಬಲ್‌ ಅಧ್ಯಯನ ಮಾಡೋಕಾಯ್ತು. ನಾನು ಮತ್ತು ನನ್ನ ಹೆಂಡತಿ ಒಬ್ಬೊಬ್ಬರು 20-20 ಬೈಬಲ್‌ ಅಧ್ಯಯನ ಮಾಡ್ತಾ ಇದ್ವಿ. ಆಫ್ರಿಕಾದ ಸಹೋದರ ಸಹೋದರಿಯರು ತೋರಿಸಿದ ಪ್ರೀತಿ ಮತ್ತು ಅತಿಥಿಸತ್ಕಾರನಂತೂ ನಾವು ಮರೆಯೋಕಾಗಲ್ಲ. ನಾವು ತಾಂಜೇನಿಯಾ ಸಭೆಗೆ ಭೇಟಿ ಮಾಡೋಕೆ ಹೋಗ್ತಿದ್ದಾಗ ನಾವು ಮಲಗ್ತಿದ್ದ ವೋಕ್ಸ್‌ವೇಗನ್‌ ಕೊಂಬಿ ಅನ್ನೋ ವ್ಯಾನ್‌ ಸಹೋದರ ಸಹೋದರಿಯರ ಮನೆ ಪಕ್ಕದಲ್ಲೇ ನಿಲ್ಲಿಸ್ತಿದ್ವಿ. ಅವರು ಬಡವರಾಗಿದ್ರೂ ನಮಗೆ ತುಂಬ ಸಹಾಯ ಮಾಡ್ತಿದ್ರು. (2 ಕೊರಿಂ. 8:3) ಇದೆಲ್ಲದ್ರ ಜೊತೆ ನನಗೂ ನನ್ನ ಹೆಂಡತಿಗೂ ತುಂಬಾ ಇಷ್ಟ ಆಗಿದ್ದ ಇನ್ನೊಂದು ವಿಷ್ಯ ಸ್ಟೋರಿ ಟೈಮ್‌. ಪ್ರತಿದಿನ ಸಾಯಂಕಾಲ ನಾನು ಮತ್ತು ನನ್ನ ಹೆಂಡತಿ ಕೂತ್ಕೊಂಡು ಬೆಳಗ್ಗೆಯಿಂದ ಏನೆಲ್ಲಾ ಆಯ್ತು ಅಂತ ಮಾತಾಡ್ತಾ ಇದ್ವಿ. ಆಗ ನಾವು ಜೊತೆ ಸೇರಿ ಯೆಹೋವನಿಗೆ ಪ್ರಾರ್ಥನೆಯಲ್ಲಿ ಥ್ಯಾಂಕ್ಸ್‌ ಹೇಳ್ತಿದ್ವಿ.

ಆ್ಯನ್‌ ಕ್ಯಾಟರಿನ್‌: ಬೇರೆ-ಬೇರೆ ದೇಶದ ಸಹೋದರ ಸಹೋದರಿಯರನ್ನ ಭೇಟಿ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. ನಾನು ಪಾರ್ಸಿ, ಫ್ರೆಂಚ್‌, ಲುಗಾಂಡಾ, ಸ್ವಾಹೀಲಿ ಅನ್ನೋ ಹೊಸ-ಹೊಸ ಭಾಷೆಗಳನ್ನ ಕಲಿತೆ. ಅಲ್ಲಿನ ಸಂಸ್ಕೃತಿಗಳನ್ನ ಅರ್ಥಮಾಡ್ಕೊಂಡೆ. ಹೊಸದಾಗಿ ಸತ್ಯಕ್ಕೆ ಬಂದವ್ರಿಗೆ ತರಬೇತಿ ಕೊಟ್ವಿ. ನಿಜ ಸ್ನೇಹಿತ್ರನ್ನ ಮಾಡ್ಕೊಂಡ್ವಿ. ಇದ್ರ ಜೊತೆ, “ಹೆಗಲಿಗೆ ಹೆಗಲು ಕೊಟ್ಟು” ಯೆಹೋವನ ಸೇವೆ ಮಾಡಿದ್ವಿ.—ಚೆಫ. 3:9.

ಯೆಹೋವನ ಸೃಷ್ಟಿನ ನೋಡಿ ಕಣ್ಣು ತುಂಬ್ಕೊಳ್ಳೋ ಅವಕಾಶ ನಮಗೆ ಸಿಕ್ತು. ನಾವು ಪ್ರತಿಸಲ ಯೆಹೋವನ ಸೇವೆ ಮಾಡೋಕೆ ಹೊಸ ಜಾಗಕ್ಕೆ ಹೋದಾಗ ಯೆಹೋವನೇ ನಮ್ಮ ಕೈ ಹಿಡ್ಕೊಂಡು ಟೂರ್‌ ಗೈಡ್‌ ತರ ನಮ್ಮ ಜೊತೆ ಪ್ರಯಾಣ ಮಾಡಿದಂಗಿತ್ತು. ನಾವು ನಮ್ಮಷ್ಟಕ್ಕೆ ಇದ್ದಿದ್ರೆ ಇಂತಹ ಅದ್ಭುತ ಅನುಭವಗಳನ್ನ ಖಂಡಿತ ಪಡೆಯೋಕೆ ಆಗ್ತಿರಲಿಲ್ಲ.

ಚಿತ್ರ: 1. ಮ್ಯಾಟ್ಸ್‌ ಮತ್ತು ಆ್ಯನ್‌ ಒಬ್ಬ ತಾಯಿಗೆ ಹಾಗೂ ಅವಳ ಮಕ್ಕಳಿಗೆ ಸಿಹಿಸುದ್ದಿ ಸಾರ್ತಿದ್ದಾರೆ. 2. ಆ್ಯನ್‌ ಕ್ಯಾಟರಿನ್‌ ಒಬ್ಬ ಮಸಾಯಿ ಹುಡುಗನಿಗೆ ಸಿಹಿಸುದ್ದಿ ಸಾರ್ತಿದ್ದಾಳೆ.

ತಾಂಜೇನಿಯಾದಲ್ಲಿ ಸೇವೆ

ನಿಮಗೆ ಏನೆಲ್ಲಾ ಕಷ್ಟಗಳು ಬಂತು, ನೀವದನ್ನ ಹೇಗೆ ಎದುರಿಸಿದ್ರಿ?

ಮ್ಯಾಟ್ಸ್‌: ಇಷ್ಟು ವರ್ಷಗಳಲ್ಲಿ ನಮಗೆ ಬೇರೆ-ಬೇರೆ ಕಾಯಿಲೆಗಳು ಬಂತು. ಅದ್ರಲ್ಲೊಂದು ಮಲೇರಿಯ. ನನ್ನ ಹೆಂಡತಿಗೆ ದಿಢೀರ್‌ ಅಂತ ಕೆಲವು ಆಪರೇಷನ್‌ ಮಾಡಬೇಕಾಯ್ತು. ಅದ್ರ ಜೊತೆ ನಮ್ಮಿಬ್ರ ಅಪ್ಪ ಅಮ್ಮಂಗೂ ವಯಸ್ಸಾಗ್ತಾ ಇತ್ತು. ಅವ್ರನ್ನ ನಮ್ಮ ತಮ್ಮ-ತಂಗಿಯರೇ ಖುಷಿಯಿಂದ, ಪ್ರೀತಿಯಿಂದ, ತಾಳ್ಮೆಯಿಂದ ನೋಡ್ಕೊಳ್ತಾ ಇದ್ರು. (1 ತಿಮೊ. 5:4) ಆದ್ರೂ ಆಗಾಗ ‘ನಾವು ದೂರದಲ್ಲಿದ್ದೀವಿ, ಹತ್ರದಲ್ಲಿದ್ದಿದ್ರೆ ಅವ್ರಿಗೆ ಎಷ್ಟೊಂದು ಸಹಾಯ ಮಾಡಬಹುದಿತ್ತು’ ಅಂತ ಒಳಗೆ-ಒಳಗೆ ಕೊರಗ್ತಾ ಇದ್ವಿ.

ಆ್ಯನ್‌ ಕ್ಯಾಟರಿನ್‌: 1983ರಲ್ಲಿ ನಾವು ಜಾಯಿರ್‌ನಲ್ಲಿ ಸೇವೆ ಮಾಡಬೇಕಾದ್ರೆ ನನಗೆ ಕಾಲರಾ ಕಾಯಿಲೆ ಬಂದು ತುಂಬಾ ಕಷ್ಟಪಟ್ಟೆ. ಆಗ ಡಾಕ್ಟರ್‌ ಮ್ಯಾಟ್ಸ್‌ಗೆ, ‘ಇವತ್ತೇ ಬೇರೆ ದೇಶಕ್ಕೆ ಹೋಗಿ ನಿನ್ನ ಹೆಂಡತಿಗೆ ಟ್ರೀಟ್ಮೆಂಟ್‌ ಕೊಡ್ಸು’ ಅಂತ ಹೇಳಿದ್ರು. ಮುಂದಿನ ದಿನಾನೇ ಲಗೇಜ್‌ ಎತ್ಕೊಂಡು ಹೋಗ್ತಿದ್ದ ಒಂದು ಪ್ಲೇನ್‌ನಲ್ಲಿ ನಾವು ಸ್ವೀಡನ್‌ಗೆ ಹೋಗಿಬಿಟ್ವಿ.

ಮ್ಯಾಟ್ಸ್‌: ಇನ್ಮೇಲೆ ನಮ್ಮ ಕೈಯಲ್ಲಿ ಮಿಷನರಿ ಸೇವೆ ಮಾಡೋಕಾಗಲ್ಲ ಅಂತ ನಾವಿಬ್ರು ಕೂತು ಕಣ್ಣೀರು ಹಾಕಿದ್ವಿ. ಆದ್ರೆ ಡಾಕ್ಟರ್‌ ಹೇಳಿದಂಗೆ ಏನು ಆಗ್ಲಿಲ್ಲ. ನನ್ನ ಹೆಂಡತಿ ಚೆನ್ನಾಗಿ ಇದ್ದಳು. ಒಂದು ವರ್ಷ ಆದ್ಮೇಲೆ ನಾವು ವಾಪಾಸ್‌ ಜಾಯಿರ್‌ಗೆ ಹೋದ್ವಿ. ಆದರೆ ಈ ಸಲ ಲುಬುಂಬಾಶಿ ಜಾಗದಲ್ಲಿದ್ದ ಸ್ವಾಹೀಲಿ ಭಾಷೆ ಮಾತಾಡೋ ಸಭೆಗೆ ಹೋದ್ವಿ.

ಆ್ಯನ್‌ ಕ್ಯಾಟರಿನ್‌: ನಾವು ಲುಬುಂಬಾಶಿಯಲ್ಲಿದ್ದಾಗ, ನನ್ನ ಹೊಟ್ಟೆಯಲ್ಲಿದ್ದ ಮಗು ಸತ್ತು ಹೋಯ್ತು. ನಾವು ನಮಗೆ ಮಕ್ಕಳಾಗಬೇಕು, ನಮ್ಮ ಕುಟುಂಬ ದೊಡ್ಡದಾಗಬೇಕು ಅಂತ ಅಂದ್ಕೊಂಡಿರಲಿಲ್ಲ. ಆದ್ರೆ ಆ ಪುಟಾಣಿ ಮಗು ಸತ್ತು ಹೋದಾಗ ದುಃಖನ ನನ್ನ ಕೈಯಲ್ಲಿ ತಡ್ಕೊಳ್ಳೋಕೆ ಆಗಲಿಲ್ಲ. ನಾವು ಆ ದುಃಖದಲ್ಲಿದ್ದಾಗ ಯೆಹೋವ ನಮಗೆ ಬೇರೆ ರೀತಿಯಲ್ಲಿ ಖುಷಿ ಕೊಟ್ಟನು. ನಾವು ಇಲ್ಲಿವರೆಗೂ ಮಾಡಿದ್ದಕ್ಕಿಂತ ಜಾಸ್ತಿ ಬೈಬಲ್‌ ಅಧ್ಯಯನಗಳನ್ನ ಮಾಡೋಕೆ ಶುರು ಮಾಡಿದ್ವಿ. ಒಂದು ವರ್ಷದೊಳಗೆ, ನಮ್ಮ ಸಭೆಯಲ್ಲಿ 35 ಪ್ರಚಾರಕರಿಂದ 70 ಪ್ರಚಾರಕರಾದರು. ಮೀಟಿಂಗ್‌ಗೆ 40 ಜನ ಬರ್ತಿದ್ದವರು, ಈಗ 220 ಜನ ಬರೋಕೆ ಶುರು ಮಾಡಿದ್ರು. ಸೇವೆಯಲ್ಲೇ ನಾವು ಮುಳುಗಿ ಹೋದ್ವಿ. ಈ ತರ ಯೆಹೋವ ದೇವರು ನಮ್ಮ ದುಃಖನ ಕಡಿಮೆ ಮಾಡ್ಕೊಳ್ಳೋಕೆ ಒಂದು ಅವಕಾಶ ಕೊಟ್ಟನು. ಆದ್ರೂ ಆಗಾಗ ಆ ಪುಟಾಣಿ ಮಗು ಬಗ್ಗೆನೇ ಯೋಚ್ನೆ ಮಾಡ್ತೀವಿ. ನಾನು ನನ್ನ ಗಂಡ ಅದ್ರ ಬಗ್ಗೆ ಮಾತಾಡ್ತಾ ಇರ್ತೀವಿ. ಪರದೈಸಲ್ಲಿ ಯೆಹೋವ ದೇವರು ನಮ್ಮ ಆ ನೋವನ್ನ ಹೇಗೆ ತೀರಿಸ್ತಾರೆ ಅಂತ ನೋಡೋಕೆ ನಾವು ಕಾಯ್ತಾ ಇದ್ದೀವಿ.

ಮ್ಯಾಟ್ಸ್‌: ನನಗೆ ಕರುಳಿನ ಕ್ಯಾನ್ಸರ್‌ ಬಂತು. ಅದು ನಾಲ್ಕನೇ ಸ್ಟೇಜ್‌ ಅಲ್ಲಿತ್ತು. ಒಂದು ದೊಡ್ಡ ಆಪರೇಷನ್‌ ಮಾಡಬೇಕಾಯ್ತು. ಇದನ್ನೆಲ್ಲಾ ನೋಡಿ ನನ್ನ ಹೆಂಡತಿ ಕುಗ್ಗಿ ಹೋದಳು. ಅವಳಿಗೆ ಶಕ್ತಿನೇ ಇರಲಿಲ್ಲ. ಆದ್ರೆ ಇವತ್ತು ನಾನು ಚೆನ್ನಾಗಿದ್ದೀನಿ. ಅವಳೂ ಅವಳ ಕೈಲಾದಷ್ಟು ಮಟ್ಟಿಗೆ ಚೆನ್ನಾಗಿ ಸೇವೆ ಮಾಡ್ತಿದ್ದಾಳೆ.

ನಮ್ಮ ತರಾನೇ ಕಷ್ಟಗಳನ್ನ ನಮ್ಮ ಸಹೋದರ ಸಹೋದರಿಯರು ಕೂಡ ಎದುರಿಸ್ತಿದ್ದಾರೆ ಅಂತ ಅರ್ಥ ಮಾಡ್ಕೊಂಡಿದ್ದೀವಿ. 1994ರಲ್ಲಿ ರುವಾಂಡದಲ್ಲಿ ಒಂದು ದೊಡ್ಡ ಹತ್ಯಾಕಾಂಡ ಆಯ್ತು. ಅದಾದ್ಮೇಲೆ ನಿರಾಶ್ರಿತರ ಶಿಬಿರಗಳಲ್ಲಿ ನಮ್ಮ ಎಷ್ಟೋ ಸ್ನೇಹಿತ್ರನ್ನ ನಾವು ಭೇಟಿ ಮಾಡಿದ್ವಿ. ಆಗಲೂ ಅವ್ರಲ್ಲಿ ಇದ್ದ ನಂಬಿಕೆ, ತಾಳ್ಮೆನ ನೋಡಿ ನಮಗೆ ಆಶ್ಚರ್ಯ ಆಯ್ತು. ಅಂತಹ ಪರಿಸ್ಥಿತಿಯಲ್ಲೂ ಅವರು ಅತಿಥಿಸತ್ಕಾರನ ಬಿಡಲಿಲ್ಲ. ಇದನ್ನೆಲ್ಲಾ ನೋಡಿದಾಗ ತನ್ನ ಜನ್ರಿಗೆ ಅದೆಂಥ ಕಷ್ಟಗಳು ಬಂದ್ರೂ ಯೆಹೋವ ಅವ್ರನ್ನ ಕಾಪಾಡ್ತಾನೆ, ಆ ಸಾಮರ್ಥ್ಯ ಆತನಿಗಿದೆ ಅಂತ ನಮಗೆ ಅರ್ಥ ಆಯ್ತು.—ಕೀರ್ತ. 55:22.

ಆ್ಯನ್‌ ಕ್ಯಾಟರಿನ್‌: 2007ರಲ್ಲಿ ಉಗಾಂಡಾ ಬ್ರಾಂಚ್‌ನ ಸಮರ್ಪಣೆ ನಡೀತು. ನಾವು ಅಲ್ಲಿಗೆ ಹೋಗಿ ಬರಬೇಕಾದ್ರೆ ನಮಗೆ ಇನ್ನೊಂದು ಸವಾಲು ಎದುರಾಯ್ತು. 25 ಮಿಷನರಿಗಳು ಮತ್ತು ಬೆತೆಲೈಟ್ಸ್‌ ಎಲ್ಲರೂ ಕೀನ್ಯಾದ ನೈರೋಬಿಗೆ ಒಂದು ಗಾಡಿಯಲ್ಲಿ ಬರ್ತಾ ಇದ್ವಿ. ಇನ್ನೇನು ಕೀನ್ಯಾ ಗಡಿ ತಲುಪುವಾಗ, ಒಂದು ಲಾರಿ ಜೋರಾಗಿ ಬಂದು ನಮಗೆ ಗುದ್ದಿಬಿಡ್ತು. ಆ ಆಕ್ಸಿಡೆಂಟಲ್ಲಿ ಡ್ರೈವರ್‌ ಮತ್ತು ನಮ್ಮ 5 ಸ್ನೇಹಿತರು ತಕ್ಷಣ ಸತ್ತು ಹೋದ್ರು. ಒಬ್ಬ ಸಿಸ್ಟರ್‌ ಹಾಸ್ಪಿಟಲಲ್ಲಿ ಸತ್ತು ಹೋದ್ರು. ನಮ್ಮ ಆ ಎಲ್ಲ ಸ್ನೇಹಿತ್ರನ್ನ ನಾವು ಮತ್ತೆ ನೋಡೋಕೆ ಕಾಯ್ತಾ ಇದ್ದೀವಿ.—ಯೋಬ 14:13-15.

ನಿಧಾನವಾಗಿ ನಮಗಾಗಿದ್ದ ಗಾಯಗಳಿಂದ ನಾವು ಚೇತರಿಸ್ಕೊಂಡ್ವಿ. ಆದ್ರೆ ನಮ್ಮಿಬ್ರ ಜೊತೆ ಇನ್ನೂ ಕೆಲವ್ರಿಗೆ ಆ ಆಕ್ಸಿಡೆಂಟಿಂದಾಗಿ ಆಗಿದ್ದ ಶಾಕಿಂದ ಹೊರಗೆ ಬರೋಕೆ ಕಷ್ಟ ಆಗ್ತಿತ್ತು. ನಾನಂತೂ ರಾತ್ರಿಯಲ್ಲಿ ಬೆಚ್ಚಿ ಬೀಳ್ತಿದ್ದೆ. ನನಗೆ ಹಾರ್ಟ್‌ ಅಟ್ಯಾಕ್‌ ಆದಂಗೆ ಅನಿಸ್ತಿತ್ತು. ಅದನ್ನ ನೆನಸ್ಕೊಂಡ್ರೆ ಭಯ ಆಗುತ್ತೆ. ಆದ್ರೆ ನಾನು ಯೆಹೋವನಿಗೆ ಪ್ರಾರ್ಥನೆ ಮಾಡ್ತಿದ್ದೆ. ಆಗ ನನಗೆ ಸಮಾಧಾನ ಆಗ್ತಿತ್ತು, ನಂಗೆ ಇಷ್ಟವಾದ ಬೈಬಲ್‌ ವಚನಗಳು ಇದನ್ನೆಲ್ಲ ನಿಭಾಯಿಸೋಕೆ ಸಹಾಯ ಮಾಡಿದೆ. ನಾವು ಡಾಕ್ಟರ್‌ ಹತ್ರನೂ ಹೋಗಿ ಸಹಾಯ ತಗೊಂಡ್ವಿ. ನಮಗೆ ಈ ಸಮಸ್ಯೆ ಈಗ ಸ್ವಲ್ಪ ಕಮ್ಮಿ ಆಗ್ತಾ ಬಂದಿದೆ ‘ನಮ್ಮ ತರ ಯಾರು ಇಂಥ ಕಷ್ಟಗಳನ್ನ ಪಡ್ತಿದ್ದಾರೋ ಅವ್ರಿಗೂ ಸಹಾಯ ಮಾಡಪ್ಪ’ ಅಂತ ನಾವು ಯೆಹೋವನ ಹತ್ರ ಯಾವಾಗ್ಲೂ ಪ್ರಾರ್ಥನೆ ಮಾಡ್ತಿರ್ತೀವಿ.

ಈ ಕಷ್ಟಗಳನ್ನ ನಿಭಾಯಿಸುವಾಗ ಯೆಹೋವ ನಿಮ್ಮನ್ನ ‘ಮೊಟ್ಟೆಗಳ’ ತರ ಹಿಡ್ಕೊಂಡ ಅಂತ ನೀವು ಹೇಳಿದ್ರಿ. ಏನಿದ್ರ ಅರ್ಥ ಅಂತ ಹೇಳ್ತೀರಾ?

ಮ್ಯಾಟ್ಸ್‌: ಅದು ಸ್ವಾಹೀಲಿ ಭಾಷೆಯಲ್ಲಿ ಇರೋ ಒಂದು ಮಾತು “ತುಮೆಬೆಬ್ವಾ ಕಾಮ ಮಾಯಾಯಿ ಮಾಬೀಚಿ” ಅಥವಾ ‘ನಮ್ಮನ್ನ ಮೊಟ್ಟೆಗಳ ತರ ಹಿಡ್ಕೊಂಡ’ ಅಂತ. ಒಬ್ಬ ವ್ಯಕ್ತಿ ಮೊಟ್ಟೆಗಳು ಎಲ್ಲಿ ಹೊಡೆಯುತ್ತೋ ಅಂತ ಜೋಪಾನವಾಗಿ ಹಿಡ್ಕೊಳ್ಳೋ ತರನೇ ನಾವು ನಮ್ಮ ಪ್ರತಿಯೊಂದು ನೇಮಕಕ್ಕೆ ಹೋದಾಗ ಯೆಹೋವ ದೇವರು ನಮ್ಮನ್ನ ಜೋಪಾನವಾಗಿ ಕಾಪಾಡಿದ್ದಾನೆ. ನಮಗೇನು ಅಗತ್ಯ ಇದೆಯೋ ಅದು ಯಾವಾಗಲೂ ಇರೋ ತರ ಯೆಹೋವನು ನೋಡ್ಕೊಂಡಿದ್ದಾನೆ. ನಿಜ ಹೇಳಬೇಕಾದ್ರೆ ನಮ್ಮ ಅಗತ್ಯಕ್ಕಿಂತ ಜಾಸ್ತಿನೇ ಕೊಟ್ಟಿದ್ದಾನೆ. ಆಡಳಿತ ಮಂಡಲಿ ನಮ್ಮನ್ನ ತುಂಬಾ ಚೆನ್ನಾಗಿ ಅರ್ಥ ಮಾಡ್ಕೊಂಡಿದೆ. ಇದ್ರ ಮೂಲಕ ಯೆಹೋವನು ನಮ್ಮನ್ನ ಎಷ್ಟು ಪ್ರೀತಿಸ್ತಾನೆ, ನಮಗೆ ಹೇಗೆಲ್ಲಾ ಸಹಾಯ ಮಾಡ್ತಾನೆ ಅಂತ ನಾವು ಅರ್ಥ ಮಾಡ್ಕೊಳ್ಳೋಕೆ ಆಗಿದೆ.

ಆ್ಯನ್‌ ಕ್ಯಾಟರಿನ್‌: ಯೆಹೋವನು ನಮ್ಮನ್ನ ಜೋಪಾನವಾಗಿ ನೋಡ್ಕೊಂಡ ಒಂದು ಅನುಭವನ ನಾನು ಹೇಳೋಕೆ ಇಷ್ಟಪಡ್ತೀನಿ. ಒಂದು ದಿನ ಸ್ವೀಡನ್‌ನಿಂದ ನನಗೊಂದು ಫೋನ್‌ ಬಂತು. ನಮ್ಮ ಅಪ್ಪನಿಗೆ ಹುಷಾರಿಲ್ಲದೇ ಹಾಸ್ಪಿಟಲ್‌ನಲ್ಲಿ ಅಡ್ಮಿಟ್‌ ಮಾಡಿದ್ದಾರೆ ಅಂತ ಹೇಳಿದ್ರು. ನನ್ನ ಗಂಡ ಆಗ್ತಾನೇ ಮಲೇರಿಯ ಕಾಯಿಲೆಯಿಂದ ಚೇತರಿಸಿಕೊಳ್ತಾ ಇದ್ರು. ಸ್ವೀಡನ್‌ಗೆ ಹೋಗೋಕೆ ಟಿಕೆಟ್ಸ್‌ ತಗೊಳೋಕೆ ಬೇಕಾಗಿರೋ ಹಣ ನಮ್ಮ ಹತ್ರ ಇರಲಿಲ್ಲ. ಅದಕ್ಕೆ ನಾವು ನಮ್ಮ ಹತ್ರ ಇರೋ ಕಾರನ್ನ ಮಾರಿಬಿಡೋಣ ಅಂತ ಅಂದ್ಕೊಂಡ್ವಿ. ಆಗ ನಮಗೆ ಇಬ್ರಿಂದ ಫೋನ್‌ ಕಾಲ್‌ ಬಂತು. ಒಂದು ಫೋನ್‌ ಒಂದು ದಂಪತಿಯಿಂದ ಬಂತು. ಅವರು ನಮ್ಮ ಪರಿಸ್ಥಿತಿನ ಅರ್ಥ ಮಾಡ್ಕೊಂಡು ಒಂದು ಟಿಕೆಟ್‌ ತಗೊಳೋಕೆ ಬೇಕಾಗಿರೋ ಹಣ ಕೊಟ್ರು. ಇನ್ನೊಂದು ಫೋನ್‌ ಒಂದು ವಯಸ್ಸಾಗಿರೋ ಸಿಸ್ಟರ್‌ ಮಾಡಿದ್ರು. ಅವರು ಒಂದು ಡಬ್ಬಿಯಲ್ಲಿ ಹಣನ ಕೂಡಿಸಿಡ್ತಾ ಇದ್ರು. ಆ ಡಬ್ಬಿ ಮೇಲೆ “ಅಗತ್ಯ ಇರೋರಿಗೆ” ಅನ್ನೋ ಲೇಬಲ್‌ ಹಾಕಿದ್ರು. ನಮಗೆ ಕಷ್ಟ ಇದೆ ಅಂತ ಗೊತ್ತಾದ ಕೆಲವೇ ನಿಮಿಷಗಳಲ್ಲಿ ಯೆಹೋವನು ನಮಗೆ ಬೇಕಾದ ಸಹಾಯ ಕೊಟ್ಟುಬಿಟ್ಟನು.—ಇಬ್ರಿ. 13:6.

50 ವರ್ಷದ ನಿಮ್ಮ ಪೂರ್ಣ ಸಮಯದ ಸೇವೆಯಲ್ಲಿ ನೀವೇನು ಕಲಿತ್ರಿ?

ಮ್ಯಾಟ್ಸ್‌ ಮತ್ತು ಆ್ಯನ್‌ ಖುಷಿಯಾಗಿ ಪಕ್ಕ-ಪಕ್ಕದಲ್ಲಿ ನಿಂತಿದ್ದಾರೆ.

ಈಗ ಮಯನ್ಮಾರ್‌ನಲ್ಲಿ

ಆ್ಯನ್‌ ಕ್ಯಾಟರಿನ್‌: “ಶಾಂತಿಯಿಂದ ಇದ್ದು ಭರವಸೆ ಇಟ್ರೆ ನಿಮಗೆ ಬಲ ಸಿಗುತ್ತೆ” ಅನ್ನೋದನ್ನ ನಾನೀಗ ಚೆನ್ನಾಗಿ ಅರ್ಥ ಮಾಡ್ಕೊಂಡಿದೀನಿ. ನಾವು ಯೆಹೋವನ ಮೇಲೆ ಭರವಸೆ ಇಡೋದಾದ್ರೆ ನಮ್ಮ ಹೋರಾಟನಾ ಯೆಹೋವನೇ ಹೋರಾಡ್ತಾನೆ. (ಯೆಶಾ. 30:15; 2 ಪೂರ್ವ. 20:15, 17) ನಮಗೆ ಸಿಗೋ ಪ್ರತಿಯೊಂದು ನೇಮಕದಲ್ಲಿ ನಮ್ಮ ಕೈಲಾದಷ್ಟು ಮಟ್ಟಿಗೆ ಯೆಹೋವನ ಸೇವೆ ಮಾಡೋದಾದ್ರೆ, ತುಂಬಾ ಆಶೀರ್ವಾದ ಪಡ್ಕೊಳ್ಳಬಹುದು. ಬೇರೆ ಯಾವ ಕೆಲಸ ಮಾಡಿದ್ರೂ ಇಷ್ಟು ಆಶೀರ್ವಾದ ಪಡ್ಕೊಳ್ಳೋಕೆ ಸಾಧ್ಯನೇ ಇಲ್ಲ.

ಮ್ಯಾಟ್ಸ್‌: ನಾನು ಕಲಿತಿರೋ ಒಂದು ಮುಖ್ಯವಾದ ಪಾಠ ಇದೆ. ಅದೇನೇ ಕಷ್ಟ ಬರಲಿ ಎಲ್ಲ ಸಂದರ್ಭದಲ್ಲೂ ನಾವು ಯೆಹೋವನ ಮೇಲೆ ಆತ್ಕೊಳ್ಳಬೇಕು. (ಕೀರ್ತ. 37:5) ಯೆಹೋವನು ನಮಗೋಸ್ಕರ ಏನು ಮಾಡ್ತಾನೆ ಅಂತ ಕಾದು ನೋಡಬೇಕು. ಯೆಹೋವ ಕೊಟ್ಟ ಮಾತನ್ನ ಯಾವುದೇ ಕಾರಣಕ್ಕೂ, ಯಾವತ್ತೂ ತಪ್ಪೋದಿಲ್ಲ. ಈಗ ನಾವು ಮಯನ್ಮಾರ್‌ ಬೆತೆಲ್‌ನಲ್ಲಿ ಸೇವೆ ಮಾಡ್ತಿದ್ದೀವಿ. ಯೆಹೋವನು ಈಗಲೂ ನಮಗೆ ಸಹಾಯ ಮಾಡ್ತಿರೋದನ್ನ ನಾವು ಕಣ್ಣಾರೆ ನೋಡ್ತಿದ್ದೀವಿ.

ಯೆಹೋವನು ನಮಗೆ ಕೊಟ್ಟ ಪ್ರೀತಿ, ಸಹಾಯನ ಆತನ ಸೇವೆನ ಹೆಚ್ಚು ಮಾಡೋಕೆ ಮುಂದೆ ಬರೋ ಯುವಕರಿಗೂ ಖಂಡಿತ ಕೊಡ್ತಾನೆ ಅನ್ನೋ ನಂಬಿಕೆ ನಮಗಿದೆ. ತಮ್ಮ ನೇಮಕದಲ್ಲಿ ಬೆಳೆಯೋಕೆ ಯೆಹೋವನು ಬೇಕಾದ ಸಹಾಯನ ಖಂಡಿತ ನಮ್ಮೆಲ್ರಿಗೂ ಕೊಡ್ತಾನೆ. ಯುವಕರು ಈ ಸಹಾಯನ ಪಡ್ಕೊಳ್ಳೋದಾದ್ರೆ ಬದಲಾವಣೆಗೆ ಹೊಂದಾಣಿಕೆ ಮಾಡ್ಕೊಳ್ತಾರೆ ಮತ್ತು ತಮ್ಮ ಸೇವೆಲಿ ಸಂತೋಷ ಕಂಡ್ಕೊಳ್ತಾರೆ ಅನ್ನೋ ನಂಬಿಕೆ ನಮಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ