ಅಧ್ಯಯನ ಲೇಖನ 39
ಗೀತೆ 54 ಜೀವಕ್ಕಿದು ದಾರಿ!
ದೇವ್ರ ಬಗ್ಗೆ ತಡಮಾಡದೆ ಕಲಿಸಿ
“ಶಾಶ್ವತ ಜೀವ ಪಡೆಯೋ ಯೋಗ್ಯತೆ ಇದ್ದ ಒಳ್ಳೇ ಮನಸ್ಸಿನ ಜನ್ರೆಲ್ಲ ಶಿಷ್ಯರಾದ್ರು.”— ಅ. ಕಾ. 13:48.
ಈ ಲೇಖನದಲ್ಲಿ ಏನಿದೆ?
ಜನ್ರಿಗೆ ಬೈಬಲ್ ಅಧ್ಯಯನದ ಬಗ್ಗೆ ಯಾವಾಗ ಹೇಳ್ಬೇಕು, ಅವ್ರನ್ನ ಯಾವಾಗ ಕೂಟಗಳಿಗೆ ಕರಿಬೇಕು ಅಂತ ನೋಡೋಣ.
1. ಸಿಹಿಸುದ್ದಿ ಸಾರಿದಾಗ ಜನ ಹೇಗೆಲ್ಲ ಪ್ರತಿಕ್ರಿಯಿಸ್ತಾರೆ? (ಅಪೊಸ್ತಲರ ಕಾರ್ಯ 13:47, 48; 16:14, 15)
ಒಂದನೇ ಶತಮಾನದಲ್ಲಿ ಎಷ್ಟೋ ಜನ, ಸತ್ಯ ಕಿವಿಗೆ ಬಿದ್ದ ತಕ್ಷಣ ‘ನಾವು ಶಿಷ್ಯರಾಗಬೇಕು’ ಅಂದ್ಕೊಂಡ್ರು. (ಅಪೊಸ್ತಲರ ಕಾರ್ಯ 13:47, 48; 16:14, 15 ಓದಿ.) ಇವತ್ತೂ ಸಿಹಿಸುದ್ದಿ ಕೇಳಿದ ತಕ್ಷಣ ತುಂಬ ಜನ ಸತ್ಯ ಕಲಿಯೋಕೆ ಶುರು ಮಾಡ್ತಾರೆ. ಇನ್ನು ಕೆಲವರು ಮೊದಲು ಆಸಕ್ತಿ ತೋರಿಸ್ಲಿಲ್ಲ ಅಂದ್ರು ಆಮೇಲೆ ನಿಧಾನವಾಗಿ ಅದನ್ನ ಕಲೀತಾರೆ. ಹಾಗಾದ್ರೆ ಸೇವೆಲಿ ‘ಯೋಗ್ಯತೆ ಇರೋ ಒಳ್ಳೆ ಮನಸ್ಸಿನ ಜನ್ರು’ ಸಿಕ್ಕಾಗ ನಾವೇನು ಮಾಡಬೇಕು?
2. ಸಿಹಿಸುದ್ದಿ ಸಾರೋ ಕೆಲಸನ ಒಬ್ಬ ತೋಟಗಾರನಿಗೆ ಹೇಗೆ ಹೋಲಿಸಬಹುದು?
2 ಒಂದು ಉದಾಹರಣೆ ನೋಡೋಣ. ಸಿಹಿಸುದ್ದಿ ಸಾರೋ ಕೆಲಸಾನ ಒಬ್ಬ ತೋಟಗಾರನಿಗೆ ನಾವು ಹೋಲಿಸಬಹುದು. ತೋಟಗಾರ ತೋಟದಲ್ಲಿ ಏನೇ ಕೆಲಸ ಮಾಡ್ತಿದ್ರೂ ಯಾವುದೋ ಒಂದು ಮರದಲ್ಲಿ ಹಣ್ಣಾಗಿದೆ ಅಂತ ಗೊತ್ತಾದಾಗ ಹೋಗಿ ಆ ಹಣ್ಣುಗಳನ್ನ ಕೀಳ್ತಾನೆ. ಅದೇ ತರಾನೇ ನಾವು ಸಿಹಿಸುದ್ದಿ ಸಾರಿದಾಗ ಆಸಕ್ತಿ ತೋರಿಸೋ ಜನ್ರಿಗೆ ಆದಷ್ಟು ಬೇಗ ಶಿಷ್ಯರಾಗೋಕೆ ಬೇಕಿರೋ ಸಹಾಯ ಮಾಡಬೇಕು. ಆದ್ರೆ ಇನ್ನು ಕೆಲವು ಜನ್ರಿಗೆ ನಿಧಾನವಾಗಿ ಆಸಕ್ತಿ ಬರುತ್ತೆ. ಅಂಥವ್ರಿಗೆ ಆಸಕ್ತಿ ಹೆಚ್ಚು ಮಾಡ್ಕೊಳ್ಳೋಕೆ ಬೇಕಾಗಿರೋ ಸಹಾಯ ಮಾಡ್ತಾ ಇರ್ಬೇಕು. (ಯೋಹಾ. 4:35, 36) ಒಬ್ಬ ವ್ಯಕ್ತಿಗೆ ಈಗಾಗ್ಲೇ ಆಸಕ್ತಿ ಇದ್ಯಾ ಅಥವಾ ನಿಧಾನವಾಗಿ ಆಸಕ್ತಿ ಬರ್ತೀದ್ಯಾ ಅಂತ ತಿಳ್ಕೊಳ್ಳೋಕೆ ನಮಗೆ ವಿವೇಚನೆ ಬೇಕಾಗುತ್ತೆ. ಹಾಗಾಗಿ ಈ ಲೇಖನದಲ್ಲಿ, ನಾವು ಮೊದಲ ಭೇಟಿಯಲ್ಲೇ ಆಸಕ್ತಿ ಇರೋರಿಗೆ ಹೇಗೆ ಸಹಾಯ ಮಾಡೋದು ಅಂತ ನೋಡೋಣ. ಅದಾದ್ಮೇಲೆ ಆ ವ್ಯಕ್ತಿ ಪ್ರಗತಿ ಮಾಡ್ತಾ ಹೋಗೋಕೆ ನಾವು ಹೇಗೆಲ್ಲ ಸಹಾಯ ಮಾಡಬಹುದು ಅಂತಾನೂ ಕಲಿಯೋಣ.
ಕಲಿಯೋಕೆ ಆಸಕ್ತಿ ಇರೋರಿಗೆ . . .
3. ದೇವ್ರ ಬಗ್ಗೆ ಕಲಿಯೋಕೆ ಆಸಕ್ತಿ ಇರೋರು ಸಿಕ್ಕಾಗ ನಾವು ಏನು ಮಾಡಬೇಕು? (1 ಕೊರಿಂಥ 9:26)
3 ಸೇವೆಲಿ ನಮಗೆ ದೇವ್ರ ಬಗ್ಗೆ ಕಲಿಯೋಕೆ ಆಸಕ್ತಿ ಇರೋ ಜನ್ರು ಸಿಗ್ತಾರೆ. ಅಂಥವರು ಜೀವದ ದಾರಿಯಲ್ಲಿ ಬರೋಕೆ ನಾವು ತಡ ಮಾಡದೇ ಸಹಾಯ ಮಾಡಬೇಕು. ಅವ್ರಿಗೆ ನಾವು ತಕ್ಷಣ ಬೈಬಲ್ ಅಧ್ಯಯನದ ಬಗ್ಗೆ ಹೇಳಬೇಕು ಮತ್ತು ಮೊದಲ ಭೇಟಿಯಲ್ಲೇ ನಮ್ಮ ಕೂಟಗಳಿಗೆ ಅವ್ರನ್ನ ಕರಿಯೋಕೆ ಹಿಂದೆ ಮುಂದೆ ನೋಡಬಾರದು.—1 ಕೊರಿಂಥ 9:26 ಓದಿ.
4. ತಕ್ಷಣ ಬೈಬಲ್ ಸ್ಟಡಿಗೆ ಒಪ್ಕೊಂಡ ಒಂದು ಅನುಭವ ಹೇಳಿ.
4 ಬೈಬಲ್ ಅಧ್ಯಯನದ ಬಗ್ಗೆ ಹೇಳಿ. ಸೇವೆಲಿ ಸ್ವಲ್ಪ ಜನ ತಕ್ಷಣ ಬೈಬಲ್ ಅಧ್ಯಯನ ತಗೊಳೋಕೆ ರೆಡಿ ಇರ್ತಾರೆ. ಉದಾಹರಣೆಗೆ, ಒಂದಿನ ಗುರುವಾರ ಕೆನಡಾದಲ್ಲಿ ತಳ್ಳುಬಂಡಿ ಸಾಕ್ಷಿಕಾರ್ಯ ಮಾಡ್ತಾ ಇರ್ವಾಗ ಒಬ್ಬ ಸ್ತ್ರೀ ಬಂದು ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆನ ತಗೊಂಡ್ರು. ಆಗ ನಮ್ಮ ಸಹೋದರಿ, ‘ಈ ಪತ್ರಿಕೆನ ಬಳಸಿ ನಾವು ಉಚಿತವಾಗಿ ಬೈಬಲ್ ಸ್ಟಡಿ ಮಾಡ್ತೀವಿ’ ಅಂತ ಹೇಳಿದ್ರು. ಆ ಸ್ತ್ರೀಗೆ ಆಸಕ್ತಿ ಬಂತು. ಅವಳು ತನ್ನ ನಂಬರ್ ಕೊಟ್ಳು. ಅವತ್ತು ಸಂಜೆ ಆ ಸ್ತ್ರೀ ಮೆಸೇಜ್ ಮಾಡಿ ‘ಸ್ಟಡಿ ಬಗ್ಗೆ ಹೇಳಿದ್ರಲ್ವಾ, ಯಾವಾಗ ಸಿಗೋಣ?’ ಅಂತ ಕೇಳಿದ್ಳು. ಆಗ ಸಹೋದರಿ ‘ಈ ಶನಿವಾರ ಅಥವಾ ಭಾನುವಾರ ಸಿಗೋಣ್ವಾ?’ ಅಂತ ಕೇಳಿದ್ರು. ಅದಕ್ಕೆ ಆ ಸ್ತ್ರೀ ‘ನಾನು ನಾಳೆ ಫ್ರೀ ಇದೀನಿ. ನಿಮಗೆ ನಾಳೆನೇ ಬರೋಕಾಗುತ್ತಾ?’ ಅಂತ ಕೇಳಿದ್ಳು. ಶುಕ್ರವಾರನೇ ಅವ್ರಿಬ್ರೂ ಕೂತು ಬೈಬಲ್ ಸ್ಟಡಿನ ಶುರು ಮಾಡಿದ್ರು. ನಿಮಗೆ ಗೊತ್ತಾ? ಅದೇ ಭಾನುವಾರ ಆ ಸ್ತ್ರೀ ಕೂಟಕ್ಕೂ ಹೋದ್ಲು! ಈಗ ತುಂಬಾ ಚೆನ್ನಾಗಿ ಪ್ರಗತಿ ಮಾಡ್ತಿದ್ದಾಳೆ.
5. ತಕ್ಷಣ ಆಸಕ್ತಿ ತೋರಿಸದೇ ಇರೋರಿಗೆ ನಾವೇನು ಮಾಡ್ಬೇಕು? (ಚಿತ್ರ ನೋಡಿ.)
5 ನಮಗೆ ಸಿಗೋ ಎಲ್ರೂ ಆ ಸ್ತ್ರೀ ತರಾನೇ ತಕ್ಷಣ ಬೈಬಲ್ ಸ್ಟಡಿಗೆ ಒಪ್ಕೊತ್ತಾರೆ ಅಂತ ಹೇಳೋಕಾಗಲ್ಲ. ಕೆಲವೊಬ್ರಿಗೆ ನಿಧಾನವಾಗಿ ಆಸಕ್ತಿ ಬರುತ್ತೆ. ಅಂಥವ್ರಿಗೆ ಯಾವ ವಿಷ್ಯ ಇಷ್ಟ ಆಗುತ್ತೆ ಅಂತ ತಿಳ್ಕೊಂಡು ಅದ್ರ ಬಗ್ಗೆ ಮೊದಲು ಮಾತಾಡಬೇಕು. ಅವರೂ ನಿಧಾನವಾಗಿ ಸತ್ಯಕ್ಕೆ ಬರ್ತಾರೆ ಅಂತ ನಂಬಬೇಕು, ಅವ್ರ ಬಗ್ಗೆ ಚೆನ್ನಾಗಿ ತಿಳ್ಕೊಬೇಕು ಮತ್ತು ಅವ್ರ ಮೇಲೆ ಆಸಕ್ತಿ ತೋರಿಸಬೇಕು. ಈ ತರ ಮಾಡಿದ್ರೆ ತುಂಬ ಬೇಗ ನಾವು ಅವರ ಜೊತೇಲಿ ಬೈಬಲ್ ಸ್ಟಡಿ ಮಾಡಬಹುದು. ಆದ್ರೆ ಬೈಬಲ್ ಸ್ಟಡಿ ಬಗ್ಗೆ ಮಾತಾಡ್ವಾಗ ಅವ್ರಿಗೆ ಏನಂತ ಹೇಳಬೇಕು? ಇದೇ ಪ್ರಶ್ನೆನ ತುಂಬಾ ಚೆನ್ನಾಗಿ ಬೈಬಲ್ ಸ್ಟಡಿಗಳನ್ನ ಮಾಡ್ತಿರೋ ಕೆಲವು ಸಹೋದರ ಸಹೋದರಿಯರಿಗೆ ಕೇಳಿದ್ವಿ. ಅವರು ಏನು ಹೇಳಿದ್ರು ಅಂತ ನೋಡೋಣ ಬನ್ನಿ.
ಇವ್ರಿಗೆ ಬೈಬಲ್ ಸ್ಟಡಿ ಮನ ಮುಟ್ಟಬೇಕಾದ್ರೆ ಏನು ಮಾಡಬೇಕು? (ಪ್ಯಾರ 5 ನೋಡಿ)a
6. ಬೈಬಲ್ ಸ್ಟಡಿ ಶುರು ಮಾಡೋಕೆ ಕೆಲವು ಪಯನೀಯರು ಮತ್ತು ಪ್ರಚಾರಕರು ಯಾವ ಸಲಹೆ ಕೊಟ್ಟಿದ್ದಾರೆ?
6 ಬೇರೆಬೇರೆ ದೇಶದ ಕೆಲವು ಪ್ರಚಾರಕರಿಗೆ ಮತ್ತು ಪಯನೀಯರಿಗೆ ಜನ್ರ ಹತ್ರ ಬೈಬಲ್ ಸ್ಟಡಿ ಶುರುಮಾಡೋದ್ರ ಬಗ್ಗೆ ಪ್ರಶ್ನೆ ಕೇಳಿದ್ವಿ. ಆಗ ಅವರು ‘ಜನರ ಹತ್ರ “ಸ್ಟಡಿ,” “ಅಧ್ಯಯನ,” “ಬೈಬಲ್ ಕೋರ್ಸ್,” ಮತ್ತು “ಕಲಿಸ್ತೀವಿ” ಅನ್ನೋ ಪದಗಳನ್ನ ಹೇಳ್ದೆ “ನಾವು ಮಾತಾಡೋಣ್ವಾ,” “ಚರ್ಚೆ ಮಾಡೋಣ್ವಾ,” ಮತ್ತು “ಬೈಬಲ್ ಬಗ್ಗೆ ತಿಳ್ಕೊಳೋಣ್ವಾ” ಅಂತ ಹೇಳಿದ್ರೆ ಚೆನ್ನಾಗಿರುತ್ತೆ’ ಅಂತ ಹೇಳಿದ್ದಾರೆ. ಅವ್ರ ಹತ್ರ ನೀವು ಮತ್ತೆ ಮಾತನ್ನ ಮುಂದುವರೆಸೋಕೆ, “ಜೀವನದಲ್ಲಿ ನಮಗಿರೋ ಪ್ರಶ್ನೆಗಳಿಗೆ ಬೈಬಲ್ಲಲ್ಲಿ ಉತ್ರ ಇದೆ. ಅದನ್ನೆಲ್ಲ ತಿಳ್ಕೊಳೋದು ಎಷ್ಟು ಚೆನ್ನಾಗಿರುತ್ತಲ್ವಾ?” ಅನ್ನಬಹುದು ಅಥವಾ “ಬೈಬಲ್ ಬರೀ ಕ್ರೈಸ್ತರಿಗೆ ಅಂತೇನಲ್ಲ ಅದ್ರಲ್ಲಿ ಇರೋ ಸಲಹೆಗಳು ಜೀವನ ಮಾಡೋಕೆ ಎಲ್ರಿಗೂ ಸಹಾಯ ಮಾಡುತ್ತೆ” ಅಂತ ಹೇಳಬಹುದು. ಇದ್ರ ಜೊತೆಗೆ, “ಇದಕ್ಕೆಲ್ಲ ಜಾಸ್ತಿ ಟೈಮ್ ಆಗುತ್ತೆ ಅಂತೇನಿಲ್ಲ. ಬರೀ 10-15 ನಿಮಿಷ ಸಾಕು, ಅದ್ರಲ್ಲೇ ತುಂಬಾ ಮುಖ್ಯವಾಗಿರೋ ವಿಷ್ಯಗಳನ್ನ ಕಲಿಬಹುದು” ಅಂತಾನೂ ಹೇಳಬಹುದು. ನೀವು ನಿಮ್ಮ ಮಾತಲ್ಲಿ “ಪ್ರತಿವಾರ,” “ನಾವು ಜೊತೆ ಸೇರಬೇಕಾಗುತ್ತೆ,” ಮತ್ತು “ನೀವು ಇದಕ್ಕೆ ಟೈಮ್ ಮಾಡ್ಕೊಳ್ಳಿ” ಅನ್ನೋ ಪದ ಹೇಳಿದ್ರೆ ಅವರು ‘ಅಯ್ಯೋ, ಇದನ್ನ ತಪ್ಪಿಸದೇ ವಾರವಾರ ಮಾಡಬೇಕಾಗುತ್ತೇನೋ’ ಅಂತ ಭಯಪಡಬಹುದು.
7. ಕೆಲವ್ರಿಗೆ ಯಾವಾಗ ಬೈಬಲ್ ಸತ್ಯ ಅರ್ಥ ಆಗಿದೆ? (1 ಕೊರಿಂಥ 14:23-25)
7 ಕೂಟಗಳಿಗೆ ಕರೀರಿ. ಪೌಲನ ದಿನಗಳಲ್ಲಿ ಜನ್ರು ಕೂಟಗಳಿಗೆ ಬಂದಾಗ ಮೊದಲನೇ ಸಲ ಸತ್ಯಾನ ಅರ್ಥ ಮಾಡ್ಕೊಂಡ್ರು ಅಂತ ನಮಗೆ ಗೊತ್ತಾಗುತ್ತೆ. (1 ಕೊರಿಂಥ 14:23-25 ಓದಿ.) ಇವತ್ತೂ ಕೂಟಗಳಿಗೆ ಬಂದ್ರೆ ಜನ್ರಿಗೆ ತುಂಬಾ ಪ್ರಯೋಜ್ನ ಆಗುತ್ತೆ. ಹೊಸಬರು ಕೂಟಗಳಿಗೆ ಬಂದ ತಕ್ಷಣ ಪ್ರಗತಿ ಮಾಡಿದ್ದಾರೆ. ಹಾಗಾದ್ರೆ ನೀವು ಜನ್ರನ್ನ ಯಾವಾಗ ಕೂಟಗಳಿಗೆ ಕರಿಬೇಕು? ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ 10ನೇ ಪಾಠದಲ್ಲಿ ಕೂಟಗಳಿಗೆ ಕರೆಯೋಕೆ ಒಂದು ಪ್ರೋತ್ಸಾಹ ಇದೆ. ಹಾಗಂತ ಆ ಪಾಠ ಬರೋವರೆಗೂ ನೀವು ಕಾಯಬೇಕು ಅಂತೇನಿಲ್ಲ. ಮೊದಲನೇ ಸಲ ಅವ್ರ ಹತ್ರ ಮಾತಾಡಿದಾಗ್ಲೇ ನೀವು ಅವ್ರನ್ನ ಭಾನುವಾರದ ಕೂಟಗಳಿಗೆ ಕರೀಬಹುದು. ಆಗ ನೀವು ಅವ್ರಿಗೆ ಆ ವಾರದ ಭಾಷಣದ ಶೀರ್ಷಿಕೆನ ಅಥವಾ ಕಾವಲಿನಬುರುಜುವಿನಲ್ಲಿರೋ ಒಂದು ಮುಖ್ಯ ವಿಷ್ಯಾನ ಹೇಳಬಹುದು.
8. ಒಬ್ಬ ವ್ಯಕ್ತಿನ ಕೂಟಕ್ಕೆ ಕರೆದಾಗ ಅವನಿಗೆ ಏನೆಲ್ಲ ಹೇಳಬಹುದು? (ಯೆಶಾಯ 54:13)
8 ಆಸಕ್ತ ವ್ಯಕ್ತಿನ ಕೂಟಕ್ಕೆ ಕರೀವಾಗ್ಲೇ ನಮ್ಮ ಕೂಟ ಹೇಗಿರುತ್ತೆ ಅಂತ ಹೇಳೋದು ತುಂಬ ಒಳ್ಳೇದು. ಒಬ್ಬ ಬೈಬಲ್ ವಿದ್ಯಾರ್ಥಿ ಕಾವಲಿನಬುರುಜು ಅಧ್ಯಯನಕ್ಕೆ ಬಂದ್ಮೇಲೆ ತನ್ನ ಬೈಬಲ್ ಟೀಚರ್ ಹತ್ರ “ಕಾವಲಿನಬುರುಜು ನಡಿಸ್ತಿರೋರಿಗೆ ಎಲ್ರ ಹೆಸ್ರು ಗೊತ್ತಿದ್ಯಾ?” ಅಂತ ಕೇಳಿದ್ರು. ಅದಕ್ಕೆ ಸಹೋದರಿ, “ನಮ್ಮ ಕುಟುಂಬದಲ್ಲಿ ಇರೋ ಎಲ್ರ ಹೆಸರು ನಮಗೆ ಗೊತ್ತಿರುತ್ತೆ ಅಲ್ವಾ, ನಮ್ಮ ಸಭೆನೂ ನಮ್ಮ ಕುಟುಂಬನೇ” ಅಂತ ಹೇಳಿದ್ಳು. ಅದಕ್ಕೆ ಆ ವಿದ್ಯಾರ್ಥಿ “ನಮ್ಮ ಚರ್ಚ್‌ನಲ್ಲಿ ಈ ತರ ಇಲ್ಲ, ಅಲ್ಲಿ ಒಬ್ರಿಗೆ ಇನ್ನೊಬ್ರ ಪರಿಚಯನೇ ಇರಲ್ಲ” ಅಂತ ಹೇಳಿದ್ಳು. ನಮ್ಮ ಕೂಟಗಳು ಇನ್ನೊಂದು ರೀತಿಲೂ ಭಿನ್ನವಾಗಿದೆ. (ಯೆಶಾಯ 54:13 ಓದಿ.) ನಾವಿಲ್ಲಿ ಯೆಹೋವನನ್ನ ಆರಾಧನೆ ಮಾಡೋಕೆ, ಆತನಿಂದ ಕಲಿಯೋಕೆ ಮತ್ತು ಒಬ್ರನೊಬ್ರು ಪ್ರೋತ್ಸಾಹಿಸೋಕೆ ಬರ್ತೀವಿ. (ಇಬ್ರಿ. 2:12; 10:24, 25) ಅದಕ್ಕೆ ನಮ್ಮ ಕೂಟಗಳೆಲ್ಲ ಅಚ್ಚುಕಟ್ಟಾಗಿ ನಡೆಯುತ್ತೆ, ಇಲ್ಲಿ ಯಾವುದೇ ಸಂಪ್ರದಾಯಗಳಿರಲ್ಲ. (1 ಕೊರಿಂ. 14:40) ನಮ್ಮ ರಾಜ್ಯ ಸಭಾಗೃಹಗಳು ನೀಟಾಗಿ, ಸರಳವಾಗಿರುತ್ತೆ. ನಾವಿಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ಕೊಡೋದಿಲ್ಲ, ತಟಸ್ಥರಾಗಿ ಇರ್ತೀವಿ. ಇಲ್ಲಿ ನಾವು ಜೋರಾಗಿ ಕೂಗೋದಾಗಲಿ, ಗಲಾಟೆ ಮಾಡೋದಾಗಲಿ ಮಾಡಲ್ಲ. ನಿಮ್ಮ ವಿದ್ಯಾರ್ಥಿಗೆ ಮೊದಲೇ ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಅನ್ನೋ ವಿಡಿಯೋ ತೋರಿಸಿದ್ರೆ ಕೂಟಗಳಲ್ಲಿ ಏನಿರುತ್ತೆ, ಏನಿರಲ್ಲ ಅಂತ ಅವನು ತಿಳ್ಕೊಳ್ಳೋಕೆ ಸಹಾಯ ಆಗುತ್ತೆ.
9-10. ಹೊಸದಾಗಿ ಮೀಟಿಂಗ್ ಬರೋರಿಗೆ ಭಯ ಆಗಬಾರ್ದು ಅಂದ್ರೆ ನಾವು ಏನೆಲ್ಲ ಹೇಳೋದು ಒಳ್ಳೇದು? (ಚಿತ್ರ ನೋಡಿ.)
9 ಇವ್ರ ಕೂಟಕ್ಕೆ ಹೋದ್ರೆ “ಚರ್ಚ್‌ಗೆ ಸೇರಿಕೋಬೇಕು” ಅಥವಾ “ನಮ್ಮನ್ನ ಕನ್ವರ್ಟ್ ಮಾಡ್ತಾರೇನೋ” ಅಂತ ಸ್ವಲ್ಪ ಜನ ಭಯಪಡಬಹುದು. ಆದ್ರೆ ‘ಆ ತರ ಎಲ್ಲ ಏನಿಲ್ಲ. ಹೊಸಬರು ನಮ್ಮ ಕೂಟಗಳಿಗೆ ಬರೋದು ನಮಗೆ ತುಂಬ ಇಷ್ಟ. ಅವರು ಇಲ್ಲಿ ಬಂದ್ಮೇಲೆ ಉತ್ತರ ಹೇಳಬೇಕು ಅಂತ ಒತ್ತಡ ಏನು ಇರಲ್ಲ’ ಅಂತ ಹೇಳಿ. ಅವರು ತಮ್ಮ ಇಡೀ ಕುಟುಂಬದ ಜೊತೆ, ಚಿಕ್ಕ ಮಕ್ಕಳ ಜೊತೆನೂ ಬರಬಹುದು. ನಮ್ಮ ಕೂಟಗಳಲ್ಲಿ ಅಪ್ಪಅಮ್ಮ ಮಕ್ಕಳು ಎಲ್ಲಾ ಒಂದೇ ಕಡೆ ಕೂತು ಕಲಿಬಹುದು. ಹೀಗೆ ಮಕ್ಕಳು ಏನು ಕಲಿತಿದ್ದಾರೆ, ಯಾರ ಜೊತೆ ಇದ್ದಾರೆ ಅಂತ ಅಪ್ಪಅಮ್ಮ ನೋಡಬಹುದು. (ಧರ್ಮೋ. 31:12) ನಾವು ಯಾರ ಹತ್ರಾನೂ ಹಣ ಕೊಡಿ ಅಂತ ಒತ್ತಾಯ ಮಾಡಲ್ಲ ಅಥವಾ ಕೂತಿರೋ ಕಡೆನೇ ಹಣ ಕೊಡಲಿ ಅಂತ ನಿಮ್ಮ ಮುಂದೆ ಯಾವ ಕವರನ್ನೂ ತಗೊಂಡು ಬರಲ್ಲ. ಬದಲಿಗೆ ಯೇಸು ಹೇಳಿದಂತೆ “ಉಚಿತವಾಗಿ ಸಿಕ್ಕಿದೆ, ಉಚಿತವಾಗಿ ಕೊಡಿ” ಅನ್ನೋ ಸಲಹೆನ ನಾವು ಪಾಲಿಸ್ತೀವಿ. (ಮತ್ತಾ. 10:8) ನಮ್ಮ ಕೂಟಗಳಿಗೆ ಬರುವಾಗ ಜನ ಚೆನ್ನಾಗಿರೋ ಹೊಸ ಬಟ್ಟೆನೇ ಹಾಕ್ಕೊಂಡು ಬರ್ಬೇಕು ಅಂತೇನಿಲ್ಲ. ದೇವರು ಜನ ಹೇಗೆ ಕಾಣಿಸ್ತಾರೆ ಅಂತ ನೋಡಲ್ಲ ಅವರ ಹೃದಯ ಹೇಗಿದೆ ಅಂತ ನೋಡ್ತಾನೆ.—1 ಸಮು. 16:7.
10 ಹೊಸದಾಗಿ ಯಾರಾದ್ರೂ ಕೂಟಕ್ಕೆ ಬಂದ್ರೆ ಅವ್ರನ್ನ ಚೆನ್ನಾಗಿ ಮಾತಾಡ್ಸಿ. ನಗುನಗ್ತಾ ಸ್ವಾಗತಿಸಿ. ಹಿರಿಯರನ್ನ, ಬೇರೆ ಪ್ರಚಾರಕರನ್ನ ಪರಿಚಯ ಮಾಡಿಸಿ. ‘ಇಲ್ಲಿ ಇರೋರೆಲ್ಲ ಸ್ನೇಹಿತರ ತರ ಚೆನ್ನಾಗಿ ಮಾತಾಡಿಸ್ತಾರೆ’ ಅಂತ ಅವ್ರಿಗೆ ಅನ್ಸಿದ್ರೆ ಖಂಡಿತ ಅವರು ಮತ್ತೆ ಕೂಟಕ್ಕೆ ಬರ್ತಾರೆ. ಕೂಟ ನಡೀವಾಗ ಅವ್ರ ಹತ್ರ ಬೈಬಲ್ ಇಲ್ಲದಿದ್ರೆ ನಿಮ್ಮ ಹತ್ರ ಇರೋದನ್ನ ತೋರಿಸಿ. ಭಾಷಣ ಮತ್ತು ಕಾವಲಿನಬುರುಜುನ ಅರ್ಥ ಮಾಡ್ಕೊಳೋಕೆ ಪಕ್ಕದಲ್ಲೇ ಕೂತು ಸಹಾಯ ಮಾಡಿ.
ಒಬ್ಬ ವ್ಯಕ್ತಿ ಎಷ್ಟು ಬೇಗ ಕೂಟಕ್ಕೆ ಬರ್ತಾನೋ ಅಷ್ಟು ಬೇಗ ಯೆಹೋವನಿಗೆ ಹತ್ರ ಆಗ್ತಾನೆ (ಪ್ಯಾರ 9-10 ನೋಡಿ)
ಬೈಬಲ್ ಸ್ಟಡಿ ಶುರು ಆದ್ಮೇಲೆ . . .
11. ವಿದ್ಯಾರ್ಥಿನ ನೀವು ಗೌರವಿಸ್ತೀರ ಅಂತ ಹೇಗೆ ತೋರಿಸ್ತೀರಾ?
11 ಬೈಬಲ್ ಸ್ಟಡಿ ಶುರು ಮಾಡ್ವಾಗ ಏನನ್ನ ಮನಸ್ಸಲ್ಲಿಡಬೇಕು? ವಿದ್ಯಾರ್ಥಿ ಬಿಜ಼ಿ ಆಗಿದ್ದಾನೆ, ಅವನಿಗೆ ಇರೋದು ಸ್ವಲ್ಪ ಸಮ್ಯ ಅಂತ ಮನಸ್ಸಲ್ಲಿಡಿ. ಉದಾಹರಣೆಗೆ, ‘ಈ ದಿನ, ಇಷ್ಟು ಗಂಟೆಗೆ ಬರ್ತೀನಿ’ ಅಂತ ನೀವು ಹೇಳಿದ್ರೆ ದಯವಿಟ್ಟು ಆ ಟೈಮ್‌ಗೆ ಹೋಗಿ. ನೀವು ಇರೋ ಕಡೆ ಜನ ಸಮಯನ ಪಾಲಿಸ್ತಾರೋ ಇಲ್ವೋ ನೀವಂತೂ ಪಾಲಿಸಿ. ಇದ್ರ ಜೊತೆಗೆ ಮೊದಲನೇ ಸಲ ಅವ್ರ ಜೊತೇಲಿ ಸ್ಟಡಿ ಮಾಡ್ವಾಗ ಅದನ್ನ ಚುಟುಕಾಗಿ ಇಡೋದು ತುಂಬ ಒಳ್ಳೇದು. “ಮೊದಲನೇ ಸಲ ಸ್ಟಡಿ ಮಾಡ್ವಾಗ ಆ ವ್ಯಕ್ತಿಗೆ ಇನ್ನೂ ಕೇಳೋಕೆ ಆಸಕ್ತಿ ಇದ್ರೂ ಅದನ್ನ ಚುಟುಕಾಗಿ ಇಡೋದು ಒಳ್ಳೇದು” ಅಂತ ಅನುಭವ ಇರೋರು ಹೇಳಿದ್ದಾರೆ. ನೀವೇ ಜಾಸ್ತಿ ಮಾತಾಡೋಕೆ ಹೋಗಬೇಡಿ. ವಿದ್ಯಾರ್ಥಿ ಮನಸಾರೆ ಮಾತಾಡೋಕೆ ಅವಕಾಶ ಮಾಡಿಕೊಡಿ.—ಜ್ಞಾನೋ. 10:19.
12. ಬೈಬಲ್ ಸ್ಟಡಿ ಮಾಡ್ವಾಗ ನಮ್ಮ ಗುರಿ ಏನಾಗಿರಬೇಕು?
12 ಬೈಬಲ್ ಸ್ಟಡಿಯಲ್ಲಿ ಮೊದಲಿಂದಾನೇ ಬೈಬಲ್‌ನ ತೆರೆದು ಮಾತಾಡಿ. ಆಗ ವಿದ್ಯಾರ್ಥಿ ಯೆಹೋವನ ಬಗ್ಗೆ, ಯೇಸು ಬಗ್ಗೆ ಕಲಿತು, ಅವ್ರ ಮೇಲೆ ಪ್ರೀತಿ ಬೆಳೆಸ್ಕೊಳ್ಳೋಕೆ ಆಗುತ್ತೆ. ಹೀಗೆ ಮಾಡಿಲ್ಲಾಂದ್ರೆ ಅವರು ನಿಮ್ಮ ಬಗ್ಗೆ ಮತ್ತು ನಿಮಗಿರೋ ಬೈಬಲ್ ಜ್ಞಾನದ ಬಗ್ಗೆನೇ ಜಾಸ್ತಿ ಗಮನ ಕೊಟ್ಟುಬಿಡ್ತಾರೆ. (ಅ. ಕಾ. 10:25, 26) ನಾವೆಲ್ಲ ಅಪೊಸ್ತಲ ಪೌಲನ ಮಾದರಿನ ಅನುಕರಿಸಬೇಕು. ಯೆಹೋವ ಯಾರನ್ನ ಕಳಿಸಿದ್ನೋ ಆ ಯೇಸು ಬಗ್ಗೆನೇ ಪೌಲ ಚೆನ್ನಾಗಿ ಸಾರಿದ. ಹೀಗೆ ಜನ ಯೇಸು ಮತ್ತು ಯೆಹೋವನನ್ನ ಪ್ರೀತಿಸೋ ತರ ಮಾಡ್ದ. (1 ಕೊರಿಂ. 2:1, 2) ಅದ್ರ ಜೊತೆಗೆ ಪೌಲ ಬೆಳ್ಳಿ, ಬಂಗಾರ, ರತ್ನ ಮಣಿಗಳ ತರ ಇರೋ ಒಳ್ಳೆ ಗುಣಗಳನ್ನ ಬೆಳೆಸ್ಕೊಳ್ಳೋಕೆ ಹೊಸ ಶಿಷ್ಯರಿಗೆ ಸಹಾಯ ಮಾಡೋದು ಎಷ್ಟು ಮುಖ್ಯ ಅಂತಾನೂ ಬೇರೆ ಸಹೋದರರಿಗೆ ತಿಳಿಸಿದ. (1 ಕೊರಿಂ. 3:11-15) ನಂಬಿಕೆ, ವಿವೇಕ, ವಿವೇಚನೆ ಮತ್ತು ದೇವ ಭಯನೇ ಆ ಗುಣಗಳು. (ಕೀರ್ತ. 19:9, 10; ಜ್ಞಾನೋ. 3:13-15; 1 ಪೇತ್ರ 1:7) ಪೌಲನ ತರಾನೇ ನೀವೂ ಚೆನ್ನಾಗಿ ಬೋಧಿಸೋದಾದ್ರೆ ವಿದ್ಯಾರ್ಥಿಗಳು ಯೆಹೋವನ ಮೇಲೆ ನಂಬಿಕೆ ಬೆಳೆಸ್ಕೊಳ್ಳೋಕೆ, ಆತನ ಜೊತೇಲಿ ಸ್ನೇಹ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತೀರ.—2 ಕೊರಿಂ. 1:24.
13. ಬೈಬಲ್ ಸ್ಟಡಿ ಮಾಡುವಾಗ ನಾವು ವಿದ್ಯಾರ್ಥಿನ ಅರ್ಥ ಮಾಡ್ಕೊಂಡಿದ್ದೀವಿ, ತಾಳ್ಮೆ ತೋರಿಸ್ತಿದ್ದೀವಿ ಅಂತ ಹೇಗೆ ತೋರಿಸಬಹುದು? (2 ಕೊರಿಂಥ 10:4, 5) (ಚಿತ್ರ ನೋಡಿ.)
13 ಯೇಸು ತಾಳ್ಮೆಯಿಂದ ಜನ್ರನ್ನ ಅರ್ಥಮಾಡ್ಕೊಂಡು ಕಲಿಸಿದನು. ನಾವೂ ಅದೇ ತರ ಕಲಿಸಬೇಕು. ಹಾಗಾಗಿ ವಿದ್ಯಾರ್ಥಿಗೆ ಮುಜುಗರ ಆಗೋ ಪ್ರಶ್ನೆಗಳನ್ನ ಕೇಳಬಾರದು. ಒಂದು ವಿಷ್ಯ ವಿದ್ಯಾರ್ಥಿಗೆ ಅರ್ಥ ಆಗ್ತಿಲ್ಲಾಂದ್ರೆ, ಅದ್ರ ಬಗ್ಗೆನೇ ಜಾಸ್ತಿ ಮಾತಾಡದೆ ಮುಂದಿನ ಪಾಯಿಂಟ್‌ಗೆ ಹೋಗಿ. ಒಂದುವೇಳೆ ಒಂದು ಬೋಧನೆಯನ್ನ ಒಪ್ಕೊಳೋಕೆ ಅವನಿಗೆ ಕಷ್ಟ ಆಗ್ತಿರೋದಾದ್ರೆ ಒತ್ತಾಯ ಮಾಡಿ ಒಪ್ಪಿಸೋಕೆ ಹೋಗ್ಬೇಡಿ. ಅವನಿಗೆ ಸಮಯ ಕೊಡಿ. ಆಗ ಅವನು ಅದ್ರ ಬಗ್ಗೆ ಯೋಚ್ನೆ ಮಾಡಿ ಬೇಕಾಗಿರೋ ಹೊಂದಾಣಿಕೆ ಮಾಡ್ಕೊಳ್ತಾನೆ. (ಯೋಹಾ. 16:12; ಕೊಲೊ. 2:6, 7) ಬೈಬಲ್ ಸುಳ್ಳು ಬೋಧನೆಗಳನ್ನ ಕೋಟೆಗೆ ಹೋಲಿಸಿ ಮಾತಾಡುತ್ತೆ. (2 ಕೊರಿಂಥ 10:4, 5 ಓದಿ.) ಅವನ ಆ ಕೋಟೆಯನ್ನ ಬೀಳಿಸೋಕ್ಕಿಂತ ಮುಂಚೆ ಒಂದು ಹೊಸ ಕೋಟೆ ಕಟ್ಕೊಳ್ಳೋಕೆ ಅವನಿಗೆ ಸಹಾಯ ಮಾಡಿ. ಯೆಹೋವನ ಮೇಲಿರೋ ನಂಬಿಕೆನೇ ಅವನ ಆ ಹೊಸ ಕೋಟೆ. ಯಾವಾಗ ಅವನು ಯೆಹೋವನನ್ನ ನಂಬ್ತಾನೋ ಅವಾಗ ಇಷ್ಟು ದಿವಸ ನಂಬ್ತಾ ಬಂದಿದ್ದ ಸುಳ್ಳು ಬೋಧನೆಗಳನ್ನ ತಾನಾಗೇ ಬಿಟ್ಟುಬಿಡ್ತಾನೆ.—ಕೀರ್ತ. 91:9.
ನಿಮ್ಮ ವಿದ್ಯಾರ್ಥಿ ಹೃದಯದಲ್ಲಿ ಸತ್ಯ ಬೇರೂರೋಕೆ ಸಮಯ ಹಿಡಿಯುತ್ತೆ (ಪ್ಯಾರ 13 ನೋಡಿ)
ಕೂಟಗಳಿಗೆ ಹೊಸಬರು ಬಂದಾಗ . . .
14. ಸಭೆಗೆ ಹೊಸಬರು ಬಂದಾಗ ನಾವೇನು ಮಾಡಬಾರದು?
14 ‘ಮುಖ ನೋಡಿ ಮಣೆ ಹಾಕೋದು’ ಯೆಹೋವನಿಗೆ ಇಷ್ಟ ಇಲ್ಲ. ಹಾಗಾಗಿ ಜನರು ಬಡವರಾ, ಶ್ರೀಮಂತರಾ, ಅವರದು ಯಾವ ಭಾಷೆ, ಯಾವ ಊರು ಮತ್ತು ಯಾವ ಸಂಸ್ಕೃತಿ ಅಂತ ನೋಡಿ ನಾವು ಭೇದಭಾವ ಮಾಡಬಾರದು. (ಯಾಕೋ. 2:1-4, 9) ಹಾಗಾಗಿ ಬನ್ನಿ, ಸಭೆಗೆ ಬರೋರಿಗೆ ಭೇದಭಾವ ಮಾಡದೇ ನಾವು ಹೇಗೆ ಪ್ರೀತಿ ತೋರಿಸೋದು ಅಂತ ನೋಡೋಣ.
15-16. (ಎ) ಹೊಸಬರು ಕೂಟಕ್ಕೆ ಬಂದಾಗ ಅವರು ಆರಾಮಾಗಿ ಇರ್ಬೇಕಾದ್ರೆ ನಾವು ಏನು ಮಾಡಬೇಕು? (ಬಿ) ಏನ್ ಮಾಡಿದ್ರೆ ಅವ್ರಿಗೆ ಬೇಜಾರಾಗಬಹುದು?
15 ಕೆಲವರು ‘ಇಲ್ಲಿ ಏನ್ ನಡೀತಿದೆ’ ಅಂತ ತಿಳ್ಕೊಳ್ಳೋಕೆ ಕುತೂಹಲದಿಂದ ನಮ್ಮ ಕೂಟಗಳಿಗೆ ಬರಬಹುದು ಅಥವಾ ಬೇರೆ ಊರಲ್ಲಿ ಇರೋರು ‘ಸಾಕ್ಷಿಗಳ ಕೂಟಗಳಿಗೆ ಹೋಗು’ ಅಂತ ಪ್ರೋತ್ಸಾಹ ಮಾಡಿರಬಹುದು. ಅಂಥವರು ನಮ್ಮ ಕೂಟಗಳಿಗೆ ಬಂದಾಗ ಅವ್ರಿಗೆ ಮುಜುಗರ ಆಗೋ ತರ ಮಾಡದೆ ಖುಷಿಖುಷಿಯಾಗಿ ನಾವು ಮಾತಾಡಿಸಬೇಕು. ನಿಮ್ಮ ಜೊತೆ ಕೂತ್ಕೊಳೋಕೆ ಕರಿಬಹುದು. ನಿಮ್ಮ ಹತ್ರ ಇರೋ ಬೈಬಲ್‌ನ, ಕಾವಲಿನಬುರುಜುನ ತೋರಿಸಬಹುದು. ಸಾಧ್ಯವಾದ್ರೆ ಅವ್ರಿಗೂ ಒಂದು ಪತ್ರಿಕೆ ಕೊಡಬಹುದು. ಇದ್ರ ಜೊತೆಗೆ ಅವ್ರಿಗೆ ಮನಸ್ಸಲ್ಲೇ ಏನೆಲ್ಲಾ ಅನಿಸ್ತಿರಬಹುದು ಅಂತ ನೀವು ಯೋಚ್ನೆ ಮಾಡ್ಬೇಕು. ಒಂದ್ಸಲ ಒಬ್ಬ ವ್ಯಕ್ತಿ ನಮ್ಮ ರಾಜ್ಯ ಸಭಾಗೃಹಕ್ಕೆ ಬಂದ. ಇದನ್ನ ನೋಡಿದ ಒಬ್ಬ ಸಹೋದರ ಹೋಗಿ ಖುಷಿಖುಷಿಯಾಗಿ ಅವನನ್ನ ಮಾತಾಡ್ಸಿದ್ರು. ಆಗ ಆ ವ್ಯಕ್ತಿ, “ನೀವೆಲ್ಲ ತುಂಬಾ ಚೆನ್ನಾಗಿ ಬಟ್ಟೆ ಹಾಕೊಂಡು ಬಂದಿದ್ದೀರ. ನಾನು ಮಾಮೂಲಿ ಬಟ್ಟೆಯಲ್ಲಿ ಬಂದಿದ್ದೀನಿ” ಅಂತ ಹೇಳಿದ. ಆಗ ಸಹೋದರ “ಅಯ್ಯೋ, ಆ ತರ ಅಂದ್ಕೊಬೇಡಿ. ನಾವೂ ಮಾಮೂಲಿ ಜನ್ರೇ. ನೀವು ನಮ್ಮ ಜೊತೇಲಿ ಆರಾಮಾಗಿ ಇರಬಹುದು” ಅಂತ ಹೇಳಿದ್ರು. ಈಗ ಆ ವ್ಯಕ್ತಿ ಚೆನ್ನಾಗಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಂಡಿದ್ದಾನೆ. ಈಗ್ಲೂ ನಮ್ಮ ಸಹೋದರ ಮೊದಮೊದ್ಲು ಮಾತಾಡ್ಸಿದ್ದನ್ನ ಅವನು ಮರೆತೇ ಇಲ್ಲ. ಆದ್ರೆ ನಾವು ಒಂದು ವಿಷ್ಯದಲ್ಲಿ ಎಚ್ಚರಿಕೆ ವಹಿಸಬೇಕು. ಕೂಟಕ್ಕೆ ಮುಂಚೆ ಮತ್ತೆ ಆದ್ಮೇಲೆ ಇಂಥವ್ರ ಹತ್ರ ಮಾತಾಡ್ವಾಗ ನಾವು ವೈಯಕ್ತಿಕ ಆಸಕ್ತಿ ತೋರಿಸಬೇಕು ನಿಜ, ಹಾಗಂತ ನಮಗೆ ಬೇಡದೇ ಇರೋ ಅವ್ರ ವೈಯಕ್ತಿಕ ವಿಷ್ಯಗಳಿಗೆಲ್ಲ ತಲೆ ಹಾಕಬಾರದು.—1 ಪೇತ್ರ 4:15.
16 ಹೊಸದಾಗಿ ಯಾರಾದ್ರೂ ಕೂಟಕ್ಕೆ ಬಂದಾಗ ನಾವು ಅವ್ರ ಹತ್ರ ಗೌರವದಿಂದ ನಡ್ಕೊಬೇಕು. ನಾವು ಅವ್ರ ಹತ್ರ ಮಾತಾಡ್ವಾಗ, ಉತ್ರ ಹೇಳ್ವಾಗ ಅಥವಾ ಭಾಷಣ ಕೊಡುವಾಗ ಸತ್ಯದಲ್ಲಿ ಇಲ್ಲದವ್ರ ಬಗ್ಗೆ ಮತ್ತು ಅವ್ರ ನಂಬಿಕೆ ಬಗ್ಗೆ ತಾತ್ಸಾರ ಮಾಡಿ ಮಾತಾಡ್ಬಾರ್ದು. ಅವರು ಎಡವೋ ತರ ಅಥವಾ ಅವ್ರಿಗೆ ಅವಮಾನ ಆಗೋ ತರ ಏನನ್ನೂ ಹೇಳ್ಬಾರ್ದು. (ತೀತ 2:8; 3:2) ಉದಾಹರಣೆಗೆ, ‘ಅವ್ರ ನಂಬಿಕೆಗಳಿಗೆ ತಲೆ ಬುಡನೇ ಇಲ್ಲ, ಅದೆಲ್ಲ ಮೂಢನಂಬಿಕೆಗಳು’ ಅನ್ನೋ ತರ ನಾವು ಮಾತಾಡಬಾರದು. (2 ಕೊರಿಂ. 6:3) ಈ ವಿಷ್ಯದಲ್ಲಿ ಸಾರ್ವಜನಿಕ ಭಾಷಣ ಕೊಡೋರಂತೂ ತುಂಬಾನೇ ಹುಷಾರಾಗಿ ಇರ್ಬೇಕು. ಉದಾಹರಣೆಗೆ, ಅವರು ಭಾಷಣ ಕೊಡ್ವಾಗ ಹಾಜರಾಗಿರೋರಲ್ಲಿ ಸಾಕ್ಷಿಗಳಲ್ಲದ ಹೊಸಬರು ಇದ್ದಾರೆ ಅನ್ನೋದನ್ನ ಮನಸ್ಸಲ್ಲಿಟ್ಟು ಅವ್ರಿಗೆ ಅರ್ಥ ಆಗೋ ಸುಲಭ ಪದಗಳನ್ನ ಬಳಸಬೇಕು.
17. ಯೋಗ್ಯತೆ ಇರೋ ಜನರು ಸಿಕ್ಕಿದ್ರೆ ನಮ್ಮ ಗುರಿ ಏನಾಗಿರಬೇಕು?
17 ಒಂದೊಂದು ದಿನ ಕಳೀತಿದ್ದಂತೆ ಸಿಹಿಸುದ್ದಿ ಸಾರೋ ಕೆಲಸ ಇನ್ನೂ ಹೆಚ್ಚು ಪ್ರಾಮುಖ್ಯ ಆಗ್ತಾ ಇದೆ. ಹಾಗಾಗಿ ‘ಯೋಗ್ಯತೆ ಇರೋ ಒಳ್ಳೆ ಮನಸ್ಸಿನ ಜನ್ರನ್ನೆಲ್ಲ’ ಹುಡುಕಿ ಅವ್ರಿಗೆ ನಾವು ಸಾರ್ತಾ ಇರ್ಬೇಕು. (ಅ. ಕಾ. 13:48) ನಾವು ಇದನ್ನ ಮಾಡೋದಾದ್ರೆ ಬೈಬಲ್ ಸ್ಟಡಿ ಬಗ್ಗೆ ಹೇಳೋಕೆ ಅಥವಾ ಅವ್ರನ್ನ ಕೂಟಗಳಿಗೆ ಕರೆಯೋಕೆ ಹಿಂದೆ ಮುಂದೆ ನೋಡಲ್ಲ. ನಾವೇ ಮೊದಲ ಹೆಜ್ಜೆ ತಗೊಂಡ್ರೆ ಜನ್ರನ್ನ “ಜೀವಕ್ಕೆ ನಡೆಸೋ . . . ದಾರೀಲಿ” ನಡೆಸೋಕೆ ಸಹಾಯ ಮಾಡ್ತೀವಿ.—ಮತ್ತಾ. 7:14.
ಗೀತೆ 81 ನಿನ್ನ ಸೇವೆಯಿಂದ ಬಾಳು ಚೆಂದ!
a ಚಿತ್ರ ವಿವರಣೆ: ಇಬ್ರು ಸಹೋದರರು ಚೇರಲ್ಲಿ ಕೂತಿರೋ ಮಾಜಿ ಸೈನಿಕನ ಹತ್ರ ಮಾತಾಡ್ತಿದ್ದಾರೆ; ಇಬ್ರು ಸಹೋದರಿಯರು ಬಿಜ಼ಿಯಾಗಿರೋ ತಾಯಿಗೆ ಸಾಕ್ಷಿ ಕೊಡ್ತಿದ್ದಾರೆ