ಅಧ್ಯಯನ ಲೇಖನ 42
ಗೀತೆ 38 ಮಾಡುವನು ಸ್ಥಿರ, ನೀಡುವನು ಬಲ!
ಚೆನ್ನಾಗಿ ಪ್ರಾರ್ಥನೆ ಮಾಡೋಕೆ ಏನು ಮಾಡಬೇಕು?
“ ಯೆಹೋವನೇ, ಪೂರ್ಣಹೃದಯದಿಂದ ನಾನು ನಿನಗೆ ಪ್ರಾರ್ಥಿಸ್ತೀನಿ. ನನಗೆ ಉತ್ರಕೊಡು.”—ಕೀರ್ತ. 119:145.
ಈ ಲೇಖನದಲ್ಲಿ ಏನಿದೆ?
ಬೈಬಲಲ್ಲಿ ಕೆಲವು ಪ್ರಾರ್ಥನೆಗಳಿವೆ. ಅವುಗಳ ಬಗ್ಗೆ ಚೆನ್ನಾಗಿ ತಿಳ್ಕೊಂಡ್ರೆ ನಾವೂ ಚೆನ್ನಾಗಿ ಪ್ರಾರ್ಥನೆ ಮಾಡೋಕೆ ಕಲಿಬಹುದು.
1-2. (ಎ) ಮನಸಾರೆ ಯೆಹೋವನಿಗೆ ಪ್ರಾರ್ಥನೆ ಮಾಡೋಕೆ ಯಾಕೆ ಒಂದೊಂದ್ಸಲ ಕಷ್ಟ ಆಗುತ್ತೆ? (ಬಿ) ನಾವು ಮಾಡೋ ಪ್ರಾರ್ಥನೆನ ಯೆಹೋವ ಚೆನ್ನಾಗಿ ಕೇಳಿಸ್ಕೊಳ್ತಾನೆ ಅಂತ ಹೇಗೆ ಹೇಳಬಹುದು?
ನೀವು ಬರ್ತಾಬರ್ತಾ ಪ್ರಾರ್ಥನೆ ಮಾಡುವಾಗ ಹೇಳಿದ್ದನ್ನೇ ಹೇಳ್ತಿದ್ದೀರಾ? ಏನೋ ಮಾಡಬೇಕಲ್ಲ ಅಂತ ಮಾಡ್ತಿದ್ದೀರಾ? ತುಂಬ ಜನ್ರಿಗೆ ಹೀಗೆ ಆಗುತ್ತೆ. ನಾವೆಲ್ಲ ಜೀವನದಲ್ಲಿ ತುಂಬ ಬಿಜ಼ಿ ಆಗಿದ್ದೀವಿ. ಅದಕ್ಕೆ ಕೆಲವೊಮ್ಮೆ ಬೇಗಬೇಗ ಪ್ರಾರ್ಥನೆ ಮಾಡಿಬಿಡಬಹುದು ಅಥವಾ ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡೋಕೆ ನಮಗೆ ಮನಸ್ಸೇ ಬರದಿರಬಹುದು. ‘ದೇವ್ರಿಗೆ ಪ್ರಾರ್ಥನೆ ಮಾಡೋಷ್ಟು ಅರ್ಹತೆ ನನಗಿಲ್ಲ’ ಅಂತಾನೂ ಕೆಲವೊಮ್ಮೆ ಅನಿಸಬಹುದು.
2 ನಾವು ಎಷ್ಟೊತ್ತು, ಎಷ್ಟು ಉದ್ದ ಮತ್ತು ಯಾವೆಲ್ಲ ಪದ ಬಳಸಿ ಪ್ರಾರ್ಥನೆ ಮಾಡ್ತೀವಿ ಅಂತ ದೇವರು ನೋಡಲ್ಲ. ಬದ್ಲಿಗೆ ನಾವು ಮನಸಾರೆ, ದೀನತೆಯಿಂದ ಪ್ರಾರ್ಥನೆ ಮಾಡ್ತೀವ ಇಲ್ವಾ ಅಂತ ನೋಡ್ತಾನೆ. ಅದಕ್ಕೆ ಬೈಬಲ್, “ಯೆಹೋವನೇ, ನೀನು ದೀನರ ಕೋರಿಕೆಯನ್ನ ಕೇಳಿಸಿಕೊಳ್ತೀಯ” ಅಂತ ಹೇಳುತ್ತೆ. (ಕೀರ್ತ. 10:17) ಯೆಹೋವ ದೇವರು ನಾವು ಹೇಳೋ ಒಂದೊಂದು ಮಾತನ್ನೂ ಚೆನ್ನಾಗಿ ಗಮನ ಕೊಟ್ಟು ಕೇಳಿಸ್ಕೊಳ್ತಾನೆ, ಯಾಕಂದ್ರೆ ಯೆಹೋವನಿಗೆ ನಮ್ಮೇಲೆ ಅಷ್ಟು ಪ್ರೀತಿ ಇದೆ!—ಕೀರ್ತ. 139:1-3.
3. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ತೀವಿ?
3 ನಾವು ಯೆಹೋವನಿಗೆ ಪ್ರಾರ್ಥನೆ ಮಾಡೋಕೆ ಯಾಕೆ ಭಯಪಡಬೇಕಿಲ್ಲ? ನಾನು ಮಾಡೋ ಪ್ರಾರ್ಥನೆಯಿಂದ ಯೆಹೋವನ ಜೊತೆ ನನಗಿರೋ ಸ್ನೇಹ ಇನ್ನೂ ಬಲ ಆಗಬೇಕಂದ್ರೆ ಏನು ಮಾಡಬೇಕು? ಬೈಬಲಲ್ಲಿರೋ ಪ್ರಾರ್ಥನೆಗಳನ್ನ ಚೆನ್ನಾಗಿ ಗಮನಿಸಿದ್ರೆ ನಾವು ನಮ್ಮ ಪ್ರಾರ್ಥನೆನ ಇನ್ನೂ ಚೆನ್ನಾಗಿ ಮಾಡೋಕೆ ಹೇಗೆ ಸಹಾಯ ಆಗುತ್ತೆ? ಒಂದುವೇಳೆ ಪ್ರಾರ್ಥನೆ ಮಾಡೋಕೆ ಪದಗಳೇ ಬರ್ತಿಲ್ಲ, ಮನಸ್ಸೇ ಆಗ್ತಿಲ್ಲ ಅಂದ್ರೆ ಏನು ಮಾಡಬಹುದು? ಇಂಥ ಪ್ರಶ್ನೆಗಳು ನಿಮಗಿರಬಹುದು. ಈ ಎಲ್ಲ ಪ್ರಶ್ನೆಗಳಿಗೆ ಈಗ ಉತ್ರ ನೋಡೋಣ.
ಪ್ರಾರ್ಥಿಸೋಕೆ ಯಾವತ್ತೂ ಭಯಪಡಬೇಡಿ!
4. ಭಯಪಡದೆ ಯೆಹೋವನಿಗೆ ಪ್ರಾರ್ಥನೆ ಮಾಡೋಕೆ ಯಾವುದು ಸಹಾಯ ಮಾಡುತ್ತೆ? (ಕೀರ್ತನೆ 119:145)
4 ಯೆಹೋವ ನಮ್ಮ ಪ್ರಾಣ ಸ್ನೇಹಿತ, ನಾವು ಚೆನ್ನಾಗಿರ್ಬೇಕು ಅಂತ ಇಷ್ಟಪಡ್ತಾನೆ. ನಾವಿದನ್ನ ಅರ್ಥ ಮಾಡ್ಕೊಂಡ್ರೆ ಆತನಿಗೆ ಪ್ರಾರ್ಥನೆ ಮಾಡೋಕೆ ಯಾವತ್ತೂ ಭಯಪಡಲ್ಲ. 119ನೇ ಕೀರ್ತನೆ ಬರೆದವನೂ ಯೆಹೋವನಿಗೆ ಒಳ್ಳೆ ಸ್ನೇಹಿತನಾಗಿದ್ದ. ಆದ್ರೂ ಅವನ ಜೀವನದಲ್ಲಿ ಕಷ್ಟಗಳಿತ್ತು. ಜನ ಅವನಿಗೆ ಮೋಸ ಮಾಡಿದ್ರು, ಸುಳ್ಳಾರೋಪ ಹಾಕಿದ್ರು. (ಕೀರ್ತ. 119:23, 69, 78) ಅವನು ತಪ್ಪು ಮಾಡಿದ್ರಿಂದ ಅವನ ಮನಸ್ಸೂ ಚುಚ್ತಾ ಇತ್ತು. ಅವನು ಇದ್ರ ವಿರುದ್ಧ ಹೋರಾಡ್ತಿದ್ದ. (ಕೀರ್ತ. 119:5) ಆದ್ರೂ ಪ್ರಾರ್ಥನೆ ಮಾಡೋಕೆ ಅವನು ಯಾವತ್ತೂ ಹಿಂಜರಿಲಿಲ್ಲ.—ಕೀರ್ತನೆ 119:145 ಓದಿ.
5. ‘ನಾನು ಪಾಪಿ, ಪ್ರಾರ್ಥನೆ ಮಾಡೋ ಯೋಗ್ಯತೆ ನಂಗಿಲ್ಲ’ ಅಂತ ನಾವ್ಯಾಕೆ ಅಂದ್ಕೊಬಾರದು? ಉದಾಹರಣೆ ಕೊಡಿ.
5 ‘ನಾನು ಪಾಪಿ, ಪ್ರಾರ್ಥನೆ ಮಾಡೋ ಯೋಗ್ಯತೆ ನಂಗಿಲ್ಲ’ ಅಂತ ನಿಮಗೆ ಅನಿಸಬಹುದು. ಆದ್ರೆ ಯೆಹೋವನು, ‘ಪರ್ವಾಗಿಲ್ಲ, ನಂಗೆ ಪ್ರಾರ್ಥನೆ ಮಾಡಿ’ ಅಂತ ಹೇಳಿದ್ದಾನೆ. (ಯೆಶಾ. 55:6, 7) ಹಾಗಾಗಿ ನಾವು ಪ್ರಾರ್ಥನೆ ಮಾಡದೇ ಇರೋಕೆ ಬೇರೇನಾದ್ರೂ ಕಾರಣ ಇದ್ಯಾ? ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ಏರೋಪ್ಲೇನ್ ಓಡಿಸೋ ಪೈಲಟ್ ದಾರಿ ತಪ್ಪಿದ್ದಾನೆ ಅಂದ್ಕೊಳಿ. ಆಗ ಅವನು ಕಂಟ್ರೋಲ್ ಸೆಂಟರ್‌ಗೆ ಫೋನ್ ಮಾಡಿ, ‘ನಾನು ದಾರಿ ತಪ್ಪಿದ್ದೀನಿ ನನಗೆ ಸಹಾಯ ಮಾಡಿ’ ಅಂತ ಕೇಳ್ತಾನೆ. ಇದನ್ನ ಕೇಳೋಕೆ ನಾಚಿಕೆ ಪಡಬೇಕಾ? ಇಲ್ಲ. ನಾವೂ ದಾರಿ ತಪ್ಪಿರಬಹುದು, ಪಾಪ ಮಾಡಿರಬಹುದು. ಆದ್ರೂ ಪರ್ವಾಗಿಲ್ಲ, ಯೆಹೋವನತ್ರ ಭಯಪಡದೆ ಅದನ್ನ ಮತ್ತೆ ಮಾಡದೇ ಇರೋಕೆ ಮತ್ತು ಸಹಾಯ ಮಾಡೋಕೆ ಪ್ರಾರ್ಥನೆ ಮಾಡಿ.—ಕೀರ್ತ. 119:25, 176.
ಚೆನ್ನಾಗಿ ಪ್ರಾರ್ಥಿಸೋಕೆ ಸಲಹೆಗಳು . . .
6-7. ಯೆಹೋವನ ಗುಣಗಳ ಬಗ್ಗೆ ಯೋಚ್ನೆ ಮಾಡಿದ್ರೆ ಚೆನ್ನಾಗಿ ಪ್ರಾರ್ಥನೆ ಮಾಡೋಕೆ ಹೇಗೆ ಸಹಾಯ ಆಗುತ್ತೆ? ಒಂದು ಅನುಭವ ಹೇಳಿ. (ಪಾದಟಿಪ್ಪಣಿ ನೋಡಿ.)
6 ಚೆನ್ನಾಗಿ ಪ್ರಾರ್ಥನೆ ಮಾಡೋದು ಅಂದ್ರೆ ಏನು ಗೊತ್ತಾ? ಮನಸ್ಸು ಬಿಚ್ಚಿ ಯೆಹೋವನ ಹತ್ರ ಮಾತಾಡೋದು. ನಿಮಗೆ ಏನು ಅನಿಸ್ತಿದೆ, ಹೇಗೆ ಅನಿಸ್ತಿದೆ ಅಂತೆಲ್ಲ ನಿಮ್ಮ ಭಾವನೆಗಳನ್ನ ಆತನ ಹತ್ರ ಹೇಳ್ಕೊಳ್ಳೋದು! ಈ ತರ ನೀವು ಯೆಹೋವನಿಗೆ ಚೆನ್ನಾಗಿ ಪ್ರಾರ್ಥನೆ ಮಾಡೋಕೆ ಕೆಲವು ಸಲಹೆಗಳನ್ನ ನೋಡೋಣ.
7 ಯೆಹೋವನ ಗುಣಗಳ ಬಗ್ಗೆ ಯೋಚಿಸಿ.a ಆತನ ಬಗ್ಗೆ ನೀವು ಎಷ್ಟು ಹೆಚ್ಚು ಯೋಚಿಸ್ತಿರೋ, ಅಷ್ಟು ಸುಲಭವಾಗಿ ಆತನ ಹತ್ರ ಮಾತಾಡ್ತೀರ. (ಕೀರ್ತ. 145:8, 9, 18) ಸಹೋದರಿ ಕ್ರಿಸ್ಟಿನ್ ಅವರ ಅನುಭವ ನೋಡಿ, ಚಿಕ್ಕ ವಯಸ್ಸಲ್ಲಿ ಇವ್ರ ತಂದೆ ಇವ್ರನ್ನ ತುಂಬ ಹೊಡೀತಿದ್ರು. ಅವರು ಹೀಗೆ ಹೇಳ್ತಾರೆ, “ಯೆಹೋವ ದೇವರು ನನಗೆ ತಂದೆ ತರ ಇದ್ದಾನೆ ಅಂತ ಅರ್ಥಮಾಡ್ಕೊಂಡು, ಆತನಿಗೆ ಪ್ರಾರ್ಥನೆ ಮಾಡೋದು ನಂಗೆ ಕಷ್ಟ ಆಯ್ತು. ನಾನು ಪಾಪಿ, ಯೆಹೋವ ನನ್ನ ಪ್ರಾರ್ಥನೆ ಕೇಳಲ್ಲ ಅಂದ್ಕೊಂಡಿದ್ದೆ.” ಆದ್ರೆ ಆಕೆ ಯೆಹೋವನ ಗುಣಗಳ ಬಗ್ಗೆ ಯೋಚನೆ ಮಾಡಿದ್ಳು. ಅದು ಪ್ರಾರ್ಥನೆ ಮಾಡೋಕೆ ಆಕೆ ಮನಸ್ಸು ಪ್ರೇರಿಸ್ತು. ಆಕೆ ಹೇಳ್ತಾಳೆ, “ಯೆಹೋವ ದೇವ್ರಲ್ಲಿರೋ ಶಾಶ್ವತ ಪ್ರೀತಿ ಬಗ್ಗೆ ನಾನು ಯೋಚ್ನೆ ಮಾಡಿದಾಗ ನಂಗೆ ಖುಷಿ ಆಗುತ್ತೆ. ಯೆಹೋವ ದೇವರು ಯಾವತ್ತೂ ನನ್ನ ಕೈ ಬಿಡಲ್ಲ ಅಂತ ನಂಗೆ ಅನಿಸುತ್ತೆ. ಒಂದುವೇಳೆ ನಾನು ತಪ್ಪು ಮಾಡಿ, ಜಾರಿ ಬೀಳೋದಾದ್ರೆ ಆತನು ನನ್ನ ಬಾಚಿ ಎತ್ಕೊಳ್ತಾನೆ ಅಂತ ಅನಿಸುತ್ತೆ. ಹಾಗಾಗಿ ನಾನು ದೇವ್ರ ಹತ್ರ ನನ್ನ ನೋವು, ಖುಷಿ ಎಲ್ಲನೂ ಹೇಳ್ಕೊತೀನಿ.”
8-9. ಪ್ರಾರ್ಥನೆ ಮಾಡೋಕ್ಕಿಂತ ಮುಂಚೆ ಯೋಚ್ನೆ ಮಾಡೋದ್ರಿಂದ ಏನು ಪ್ರಯೋಜ್ನ ಇದೆ? ಅನುಭವ ಹೇಳಿ.
8 ಏನು ಹೇಳಬೇಕು ಅಂತ ಯೋಚ್ನೆ ಮಾಡಿ. ಪ್ರಾರ್ಥನೆ ಮಾಡೋಕ್ಕಿಂತ ಮುಂಚೆ ನೀವು, ‘ಈಗ ನನಗೆ ಯಾವ ಕಷ್ಟ ಇದೆ? ನಾನು ಯಾರನ್ನಾದ್ರೂ ಕ್ಷಮಿಸಬೇಕಾ? ನನಗಿರೋ ಯಾವುದಾದ್ರೂ ಕಷ್ಟಕ್ಕೆ ಯೆಹೋವನ ಸಹಾಯ ಬೇಕಿದ್ಯಾ?’ ಅಂತ ಕೇಳ್ಕೊಳ್ಳಿ. (2 ಅರ. 19:15-19) ನೀವು ಯೇಸು ತರನೂ ಪ್ರಾರ್ಥನೆ ಮಾಡಬಹುದು. ನೀವೂ ಯೇಸು ತರಾನೇ ಯೆಹೋವ ದೇವ್ರ ಹೆಸ್ರಿನ ಬಗ್ಗೆ, ಆತನ ರಾಜ್ಯದ ಬಗ್ಗೆ ಮತ್ತು ಆತನ ಉದ್ದೇಶದ ಬಗ್ಗೆ ಪ್ರಾರ್ಥನೆ ಮಾಡಬಹುದು.—ಮತ್ತಾ. 6:9, 10.
9 ಸಹೋದರಿ ಅಲಿಸ್ಕಾ ಅವ್ರ ಗಂಡನಿಗೆ ಮೆದುಳಿನ ಕ್ಯಾನ್ಸರ್ ಬಂತು. ಆದ್ರಿಂದ ಅವರು ಜಾಸ್ತಿ ದಿನ ಬದುಕಲ್ಲ ಅಂತ ಗೊತ್ತಾಯ್ತು. ಆಗ ಆ ಸಹೋದರಿಗೆ ಪ್ರಾರ್ಥನೆ ಮಾಡೋಕೆ ತುಂಬ ಕಷ್ಟ ಆಯ್ತು. ಅವರು ಹೇಳೋದು, “ನನಗೆ ಎಷ್ಟು ಕಷ್ಟ ಆಗಿತ್ತು ಅಂದ್ರೆ ಸರಿಯಾಗಿ ಯೋಚ್ನೆ ಮಾಡೋಕೂ ಆಗ್ತಿರ್ಲಿಲ್ಲ. ಪ್ರಾರ್ಥನೆಲಿ ಏನು ಹೇಳಬೇಕು ಅಂತಾನೇ ಗೊತ್ತಾಗ್ತಾ ಇರ್ಲಿಲ್ಲ.” ಆಗ ಸಹೋದರಿ ಏನು ಮಾಡಿದಳು ಗೊತ್ತಾ? “ಪ್ರಾರ್ಥನೆ ಮಾಡೋಕ್ಕಿಂತ ಮುಂಚೆ ನಾನು ಏನೆಲ್ಲ ಹೇಳಬೇಕು ಅಂತ ಮೊದ್ಲೇ ಯೋಚ್ನೆ ಮಾಡ್ತಿದ್ದೆ. ಆಗ ನಾನು ಬರೀ ನನ್ನ ಬಗ್ಗೆ, ನನ್ನ ಗಂಡನ ಕಾಯಿಲೆ ಬಗ್ಗೆನೇ ಮಾತಾಡದೆ ಇರೋಕೆ ಸಹಾಯ ಆಯ್ತು. ಇದ್ರಿಂದ ನಾನು ಪ್ರಾರ್ಥನೆ ಮಾಡ್ವಾಗ ಸಮಾಧಾನವಾಗಿ, ಶಾಂತಿಯಿಂದ ಇರೋಕೆ ಆಯ್ತು.”
10. ನಾವು ಒಬ್ರೇ ಇದ್ದಾಗ ಜಾಸ್ತಿ ಹೊತ್ತು ಪ್ರಾರ್ಥನೆ ಮಾಡೋದು ಯಾಕೆ ಒಳ್ಳೇದು? (ಚಿತ್ರ ನೋಡಿ.)
10 ಬೇಗಬೇಗ ಪ್ರಾರ್ಥನೆ ಮಾಡಬೇಡಿ. ಚಿಕ್ಕಚಿಕ್ಕ ಪ್ರಾರ್ಥನೆಗಳೂ ಚೆನ್ನಾಗಿರುತ್ತೆ. ಆದ್ರೆ ನೀವು ಒಬ್ರೇ ಇದ್ದಾಗ ಸ್ವಲ್ಪ ಜಾಸ್ತಿ ಹೊತ್ತು ಪ್ರಾರ್ಥನೆ ಮಾಡಿದ್ರೆ ನಿಮ್ಮ ಭಾವನೆಗಳನ್ನೆಲ್ಲ ಯೆಹೋವನ ಹತ್ರ ಹೇಳ್ಕೊಬಹುದು.b ಅಲಿಸ್ಕಾ ಅವರ ಗಂಡ ಎಲಿಜಾ ಹೀಗೆ ಹೇಳ್ತಾರೆ, “ನಾನು ದಿನಕ್ಕೆ ತುಂಬ ಸಲ ಪ್ರಾರ್ಥನೆ ಮಾಡ್ತೀನಿ. ಇದ್ರಿಂದ ನಾನು ಯೆಹೋವನಿಗೆ ಹತ್ರ ಆಗ್ತಿದ್ದೀನಿ. ‘ನೀನು ಬೇಗ ಪ್ರಾರ್ಥನೆ ಮಾಡಿ ಮುಗಿಸಪ್ಪ’ ಅಂತ ಯೆಹೋವ ಯಾವತ್ತೂ ಹೇಳಲ್ಲ. ತಾಳ್ಮೆಯಿಂದ ಕೇಳಿಸ್ಕೊಳ್ತಾನೆ. ಹಾಗಾಗಿ ನಾನು ಆರಾಮಾಗಿ ಪ್ರಾರ್ಥನೆ ಮಾಡ್ತೀನಿ.” ನೀವು ಹೀಗೆ ಮಾಡಿ: ಪ್ರಾರ್ಥನೆ ಮಾಡೋಕೆ ಅಂತ ಒಂದು ಒಳ್ಳೆ ಜಾಗ, ಒಳ್ಳೆ ಸಮಯ ಯಾವುದು ಅಂತ ಯೋಚ್ನೆ ಮಾಡಿ. ಅಲ್ಲಿ ನೀವು ಯೆಹೋವನಿಗೆ ಗಟ್ಟಿಯಾಗಿ ಪ್ರಾರ್ಥನೆ ಮಾಡಬಹುದು. ಯಾವುದೇ ಅಪಕರ್ಷಣೆ ಇಲ್ಲದೇ ಜಾಸ್ತಿ ಹೊತ್ತು ಪ್ರಾರ್ಥನೆ ಮಾಡೋ ರೂಢಿ ಬೆಳೆಸ್ಕೊಬಹುದು.
ಜಾಸ್ತಿ ಹೊತ್ತು ಪ್ರಾರ್ಥನೆ ಮಾಡೋಕೆ ಯಾವ ಜಾಗ ಮತ್ತು ಸಮಯ ಚೆನ್ನಾಗಿರುತ್ತೆ ಅಂತ ಕಂಡುಹಿಡೀರಿ (ಪ್ಯಾರ 10 ನೋಡಿ)
ಬೈಬಲಿನಲ್ಲಿರೋ ಪ್ರಾರ್ಥನೆಗಳ ಬಗ್ಗೆ ಯೋಚ್ನೆ ಮಾಡಿ
11. ಬೈಬಲಿನಲ್ಲಿರೋ ಪ್ರಾರ್ಥನೆಗಳ ಬಗ್ಗೆ ಯೋಚ್ನೆ ಮಾಡೋದ್ರಿಂದ ನಿಮಗೆ ಹೇಗೆ ಪ್ರಯೋಜ್ನ ಸಿಗುತ್ತೆ? (“ಅವ್ರಿಗೆ ಹೇಗನಿಸ್ತು ಅಂತ ನಿಮಗೆ ಅರ್ಥ ಆಗಿದ್ಯಾ?” ಅನ್ನೋ ಚೌಕ ನೋಡಿ.)
11 ಬೈಬಲಿನಲ್ಲಿ ದೇವರ ಸೇವಕರ ಮನದಾಳದ ಪ್ರಾರ್ಥನೆಗಳು, ಹಾಡುಗಳು ಮತ್ತು ಕೀರ್ತನೆಗಳಿವೆ. ಇವುಗಳ ಬಗ್ಗೆ ನೀವು ಚೆನ್ನಾಗಿ ಯೋಚ್ನೆ ಮಾಡಿದ್ರೆ ತುಂಬ ಪ್ರಯೋಜ್ನ ಸಿಗುತ್ತೆ. ದೇವರ ಸೇವಕರು ಹಿಂದಿನ ಕಾಲದಲ್ಲಿ ಅವ್ರ ಭಾವನೆಗಳನ್ನ ಯೆಹೋವನ ಹತ್ರ ಹೇಗೆ ಹೇಳ್ಕೊಂಡ್ರು ಅಂತ ನೋಡ್ದಾಗ ‘ನಾನೂ ಮನಸ್ಸು ಬಿಚ್ಚಿ ಆತನಿಗೆ ಪ್ರಾರ್ಥನೆ ಮಾಡಬೇಕು’ ಅಂತ ನಿಮಗನಿಸುತ್ತೆ. ನಿಮ್ಮ ಭಾವನೆಗಳನ್ನ ಹೇಳೋಕೆ ಸೂಕ್ತವಾಗಿರೋ ಪದಗಳನ್ನ ಅವ್ರಿಂದ ಕಲಿಬಹುದು. ಅಷ್ಟೇ ಅಲ್ಲ ನಿಮ್ಮ ಪರಿಸ್ಥಿತಿಗೆ ಸರಿ ಹೋಲೋ ಪ್ರಾರ್ಥನೆಗಳನ್ನೂ ನೀವು ಕಂಡ್ಕೊಬಹುದು.
12. ಬೈಬಲಲ್ಲಿರೋ ಪ್ರಾರ್ಥನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಯಾವ ಪ್ರಶ್ನೆಗಳನ್ನ ಕೇಳ್ಕೊಬೇಕು?
12 ಬೈಬಲಿನ ಪ್ರಾರ್ಥನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಬೇಕಂದ್ರೆ ಅದ್ರ ಬಗ್ಗೆ ಯೋಚಿಸಬೇಕು. ಅದಕ್ಕೆ ಕೆಲವು ಪ್ರಶ್ನೆಗಳನ್ನ ಕೇಳ್ಕೊಬೇಕು. ‘ಈ ಪ್ರಾರ್ಥನೆನ ಯಾರು ಮಾಡಿದ್ರು? ಯಾವ ಪರಿಸ್ಥಿತಿಲಿ ಮಾಡಿದ್ರು? ಅವರು ಹೇಳಿರೋ ತರಾನೇ ನನಗೂ ಅನ್ಸುತ್ತಾ? ಈ ಪ್ರಾರ್ಥನೆಯಿಂದ ನಾನು ಯಾವ ಪಾಠ ಕಲಿಬಹುದು?’ ಈ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳೋಕೆ ಒಂದೊಂದ್ಸಲ ನೀವು ಹೆಚ್ಚು ಸಂಶೋಧನೆ ಮಾಡಬೇಕಾಗುತ್ತೆ. ಆಗ ಖಂಡಿತ ನಿಮಗೆ ಪ್ರಯೋಜ್ನ ಆಗೋ ವಿಷ್ಯಗಳನ್ನ ಕಲಿತೀರ. ಇದ್ರ ಬಗ್ಗೆ ಈಗ ಒಂದೆರಡು ಉದಾಹರಣೆ ನೋಡೋಣ.
13. ಹನ್ನಳು ಮಾಡಿದ ಪ್ರಾರ್ಥನೆಯಿಂದ ನಾವೇನು ಕಲಿಬಹುದು? (1 ಸಮುವೇಲ 1:10, 11) (ಚಿತ್ರ ನೋಡಿ.)
13 1 ಸಮುವೇಲ 1:10, 11 ಓದಿ. ಈ ಪ್ರಾರ್ಥನೆನ ಹನ್ನ ಮಾಡಿದ್ಳು. ಅವಳಿಗೆ ಎರಡು ದೊಡ್ಡ ಸಮಸ್ಯೆಗಳಿತ್ತು. ಒಂದು, ಅವಳು ಬಂಜೆ ಆಗಿದ್ಳು. ಎರಡು, ಅವಳ ಗಂಡನ ಎರಡನೇ ಹೆಂಡ್ತಿ ಪ್ರತಿದಿನ ಚುಚ್ಚಿಚುಚ್ಚಿ ಮಾತಾಡ್ತಿದ್ಳು. (1 ಸಮು. 1:4-7) ನಿಮಗೂ ಹನ್ನಳ ತರ ಕಷ್ಟ ಇದ್ರೆ, ಅವಳು ಮಾಡಿದ ಪ್ರಾರ್ಥನೆಯಿಂದ ಏನಾದ್ರೂ ಕಲಿಬಹುದಾ? ಅವಳು ತುಂಬ ಹೊತ್ತು ಯೆಹೋವನಿಗೆ ಪ್ರಾರ್ಥನೆ ಮಾಡಿದ್ಳು ಮತ್ತು ತನ್ನ ಮನಸ್ಸಲ್ಲಿ ಇರೋದನ್ನೆಲ್ಲ ಆತನ ಹತ್ರ ಹೇಳ್ಕೊಂಡ್ಳು. ಅದಕ್ಕೇ ಅವಳಿಗೆ ಸಮಾಧಾನ ಸಿಕ್ತು. (1 ಸಮು. 1:12, 18) ನಿಮಗೂ ಸಮಾಧಾನ ಬೇಕಂದ್ರೆ ನಿಮ್ಗೆ ಏನೆಲ್ಲ ಅನ್ಸುತ್ತೆ, ನಿಮ್ಮ ಪರಿಸ್ಥಿತಿ ಹೇಗಿದೆ ಅಂತ ಹೇಳ್ಕೊಳ್ಳಿ. ನಿಮ್ಮ ಕಷ್ಟದ ‘ಭಾರನೆಲ್ಲ ಯೆಹೋವನ ಮೇಲೆ ಹಾಕಿ.’—ಕೀರ್ತ. 55:22.
ಮಕ್ಕಳಿಲ್ಲದ ನೋವನ್ನ ಮತ್ತು ಗಂಡನ ಎರಡನೇ ಹೆಂಡ್ತಿ ಕೊಡ್ತಿದ್ದ ಕಿರುಕುಳನ ಹನ್ನ ಯೆಹೋವನ ಹತ್ರ ಮನಸ್ಸು ಬಿಚ್ಚಿ ಹೇಳ್ಕೊಂಡ್ಳು (ಪ್ಯಾರ 13 ನೋಡಿ)
14. (ಎ) ಹನ್ನಳಿಂದ ನಾವೇನು ಕಲಿಬಹುದು? (ಬಿ) ಬೈಬಲ್ ವಚನಗಳ ಬಗ್ಗೆ ಧ್ಯಾನ ಮಾಡೋದ್ರಿಂದ ನಾವು ಹೇಗೆ ಇನ್ನೂ ಚೆನ್ನಾಗಿ ಪ್ರಾರ್ಥನೆ ಮಾಡಬಹುದು? (ಪಾದಟಿಪ್ಪಣಿ ನೋಡಿ.)
14 ಹನ್ನಳಿಗೆ ಸಮುವೇಲ ಹುಟ್ಟಿ ಕೆಲವು ವರ್ಷ ಆದ್ಮೇಲೆ ಅವನನ್ನ ಮಹಾ ಪುರೋಹಿತ ಏಲಿ ಹತ್ರ ಕರ್ಕೊಂಡು ಬಂದ್ಳು. (1 ಸಮು. 1:24-28) ಆಗ ಯೆಹೋವನಿಗೆ ಪ್ರಾರ್ಥನೆ ಮಾಡ್ತಾ, ‘ಯೆಹೋವನು ತನ್ನ ಜನ್ರನ್ನ ಕಾಪಾಡಿ ತನ್ನ ನಿಷ್ಠಾವಂತ ಸೇವಕರನ್ನ ಚೆನ್ನಾಗಿ ನೋಡ್ಕೊಳ್ತಾನೆ’ ಅಂತ ದೃಢ ಭರವಸೆಯಿಂದ ಹೇಳಿದ್ಳು.c (1 ಸಮು. 2:1, 8, 9) ಇದ್ರರ್ಥ ಅವಳಿಗೆ ಮನೇಲಿದ್ದ ಸಮಸ್ಯೆಗಳೆಲ್ಲ ಮಾಯಾ ಆಯ್ತು ಅಂತಲ್ಲ. ಅವಳು ತನಗಿದ್ದ ಸಮಸ್ಯೆಗಳಿಗಿಂತ ಯೆಹೋವ ತನ್ನನ್ನ ಹೇಗೆ ಕಾಪಾಡಿ ಆಶೀರ್ವದಿಸಿದನು ಅನ್ನೋದ್ರ ಕಡೆ ಜಾಸ್ತಿ ಗಮನ ಕೊಟ್ಟಳು. ಯೆಹೋವನು ಇಲ್ಲಿವರೆಗೂ ನಮ್ಮನ್ನ ಹೇಗೆ ಕಾಪಾಡಿದ್ದಾನೆ ಅಂತ ನಾವು ಯಾವಾಗ್ಲೂ ಯೋಚ್ನೆ ಮಾಡೋದಾದ್ರೆ ಈಗಿರೋ ಸಮಸ್ಯೆನ ಇನ್ನೂ ಚೆನ್ನಾಗಿ ನಿಭಾಯಿಸೋಕೆ ಬೇಕಾಗಿರೋ ಸಹಾಯ ಸಿಗುತ್ತೆ.
15. ಅನ್ಯಾಯ ಆಗೋದನ್ನ ನೋಡಿದಾಗ ನಾವು ಯೆರೆಮೀಯ ಮಾಡಿದ ಪ್ರಾರ್ಥನೆಯಿಂದ ಏನು ಕಲಿಬಹುದು? (ಯೆರೆಮೀಯ 12:1)
15 ಯೆರೆಮೀಯ 12:1 ಓದಿ. ಯೆರೆಮೀಯ ತನ್ನ ಸುತ್ತಮುತ್ತ ಕೆಟ್ಟವರು ಕೆಟ್ಟ ಕೆಲಸಗಳನ್ನ ಮಾಡ್ತಾ ಖುಷಿ-ಖುಷಿಯಾಗಿ ಜೀವನ ಮಾಡ್ತಿರೋದನ್ನ ನೋಡಿದ. ಅವನ ಜೊತೇಲಿದ್ದ ಇಸ್ರಾಯೇಲ್ಯರು ಇವನನ್ನ ಗೇಲಿ ಮಾಡ್ತಿದ್ರು. ಇದನ್ನೆಲ್ಲಾ ನೋಡಿ ಅವನಿಗೆ ತುಂಬ ಬೇಜಾರಾಯ್ತು. (ಯೆರೆ. 20:7, 8) ನಮ್ಮ ಸುತ್ತಲೂ ಕೆಟ್ಟ ಕೆಲಸಗಳನ್ನ ಮಾಡ್ತಾ ಖುಷಿಯಾಗಿರೋರನ್ನ, ನಮ್ಮನ್ನ ಗೇಲಿ ಮಾಡೋರನ್ನ ನಾವೂ ನೋಡ್ತಾ ಇರ್ತೀವಿ. ಯೆರೆಮೀಯನಿಗೆ ಬೇಜಾರಾದ್ರೂ ಯೆಹೋವ ಅನ್ಯಾಯ ಮಾಡ್ತಿದ್ದಾನೆ ಅಂತ ಅವನು ಯಾವತ್ತೂ ಹೇಳಿಲ್ಲ. ಆ ಕೆಟ್ಟ ಜನ್ರಿಗೆ ಯೆಹೋವ ಶಿಕ್ಷೆ ಕೊಡೋದನ್ನ ಅವನು ನೋಡಿದ. ಹಾಗಾಗಿ ಯೆಹೋವನು ನ್ಯಾಯ ಮಾಡೇ ಮಾಡ್ತಾನೆ ಅನ್ನೋ ನಂಬಿಕೆ ಅವನಿಗೆ ಹೆಚ್ಚಾಯ್ತು. (ಯೆರೆ. 32:19) ನಮಗೂ ಬೇಜಾರಾದ್ರೆ, ನೋವಾದ್ರೆ ಪ್ರಾರ್ಥನೇಲಿ ಅದ್ರ ಬಗ್ಗೆ ಮನಸ್ಸು ಬಿಚ್ಚಿ ಹೇಳ್ಕೊಬಹುದು. ಯೆಹೋವ ಸರಿಯಾಗಿರೋ ಸಮ್ಯದಲ್ಲಿ ನ್ಯಾಯ ಮಾಡ್ತಾನೆ ಅನ್ನೋ ನಂಬಿಕೆಯಿಂದ ನಾವಿರಬಹುದು.
16. ಲೇವಿ ಮಾಡಿದ ಪ್ರಾರ್ಥನೆಯಿಂದ ನಾವೇನು ಕಲಿಬಹುದು? (ಕೀರ್ತನೆ 42:1-4) (ಚಿತ್ರ ನೋಡಿ.)
16 ಕೀರ್ತನೆ 42:1-4 ಓದಿ. ಈ ಪ್ರಾರ್ಥನೆ ಬರೆದ ಲೇವಿ ಬಂಧಿವಾಸದಲ್ಲಿದ್ದ. ಅವನಿಗೆ ದೇವಾಲಯಕ್ಕೆ ಹೋಗೋ ಅವಕಾಶ ಇರಲಿಲ್ಲ. ಅವನ ನೋವನ್ನ ಈ ಪ್ರಾರ್ಥನೆಲಿ ನಾವು ನೋಡಬಹುದು. ಒಂದುವೇಳೆ ನೀವು ಮನೆಯಿಂದ ಹೊರಗೆ ಬರೋಕಾಗದ ಪರಿಸ್ಥಿತಿಲಿದ್ರೆ ಅಥವಾ ಸಿಹಿಸುದ್ದಿ ಸಾರಿದ್ರಿಂದ ಜೈಲಲ್ಲಿ ಇದ್ರೆ ಅವನ ಭಾವನೆಗಳು ನಿಮಗೆ ಚೆನ್ನಾಗಿ ಅರ್ಥ ಆಗುತ್ತೆ. ನಮ್ಮ ಭಾವನೆಗಳು ಒಂದೊಂದ್ಸಲ ಒಂದೊಂದು ತರ ಇರುತ್ತೆ. ಆದ್ರೆ ಅದನ್ನೆಲ್ಲ ನಾವು ಯೆಹೋವನ ಹತ್ರ ಹೇಳ್ಕೊಬಹುದು. ಆಗ ನಮ್ಮ ಭಾವನೆಗಳನ್ನ ನಾವು ಅರ್ಥ ಮಾಡ್ಕೊಲ್ತೀವಿ ಮತ್ತು ಯಾವುದು ಮುಖ್ಯ ಅಂತ ಯೋಚ್ನೆ ಮಾಡೋಕೆ ಕಲಿತೀವಿ. ಉದಾಹರಣೆಗೆ, ಆ ಲೇವಿಯ ತನ್ನ ಭಾವನೆಗಳನ್ನ ಹೇಳ್ಕೊಂಡಿದ್ರಿಂದ ಯೆಹೋವನನ್ನ ಆರಾಧನೆ ಮಾಡೋಕೆ ಹೊಸ ಅವಕಾಶಗಳು ಇವೆ ಅಂತ ಅರ್ಥ ಮಾಡ್ಕೊಂಡ. (ಕೀರ್ತ. 42:5) ಇಲ್ಲಿವರೆಗೂ ಯೆಹೋವ ಅವನನ್ನ ಹೇಗೆ ಕಾಪಾಡಿದ್ದಾನೆ ಅಂತ ತಿಳ್ಕೊಂಡ. (ಕೀರ್ತ. 42:8) ನಾವೂ ನಮ್ಮ ಭಾವನೆಗಳನ್ನೆಲ್ಲ ಯೆಹೋವನ ಹತ್ರ ಹೇಳ್ಕೊಬೇಕು. ಆಗ ಅವುಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ತೀವಿ, ಶಾಂತಿ ನೆಮ್ಮದಿ ಪಡ್ಕೋತೀವಿ.
42ನೇ ಕೀರ್ತನೆಯನ್ನ ಬರೆದ ಲೇವಿಯ ತನ್ನ ನೋವನ್ನೆಲ್ಲ ಯೆಹೋವನ ಹತ್ರ ತೋಡ್ಕೊಂಡ. ನಾವೂ ನಮ್ಮ ನೋವು, ಕಷ್ಟನೆಲ್ಲಾ ಪ್ರಾರ್ಥನೆಲಿ ಹೇಳ್ಕೊಂಡಾಗ ಅವುಗಳ ಬಗ್ಗೆ ಸರಿಯಾಗಿ ಯೋಚಿಸೋಕೆ ಕಲಿತೀವಿ (ಪ್ಯಾರ 16 ನೋಡಿ)
17. (ಎ) ಯೋನ ಮಾಡಿದ ಪ್ರಾರ್ಥನೆಯಿಂದ ನಾವೇನು ಕಲಿಬಹುದು? (ಯೋನ 2:1, 2) (ಬಿ) ನಾವು ಕಷ್ಟದಲ್ಲಿದ್ದಾಗ ಕೀರ್ತನೆಗಳಲ್ಲಿರೋ ಕೆಲವು ವಚನಗಳನ್ನ ನೆನಪು ಮಾಡ್ಕೊಳ್ಳೋದು ಹೇಗೆ ಸಹಾಯ ಮಾಡುತ್ತೆ? (ಪಾದಟಿಪ್ಪಣಿ ನೋಡಿ.)
17 ಯೋನ 2:1, 2 ಓದಿ. ಈ ಪ್ರಾರ್ಥನೆನ ಪ್ರವಾದಿ ಯೋನ, ದೊಡ್ಡ ಮೀನಿನ ಹೊಟ್ಟೆ ಒಳಗಿಂದ ಮಾಡಿದ. ಅಷ್ಟೊತ್ತಿಗಾಗ್ಲೇ ಅವನು ಯೆಹೋವನ ಮಾತನ್ನ ಮೀರಿ ನಡೆದಿದ್ದ. ಹಾಗಿದ್ರೂ ಅವನು ಮಾಡೋ ಪ್ರಾರ್ಥನೆನ ಯೆಹೋವ ಕೇಳ್ತಾನೆ ಅಂತ ನಂಬಿದ. ಅವನು ಆ ಪ್ರಾರ್ಥನೆಲಿ ಹೇಳಿದ ಎಷ್ಟೋ ಮಾತುಗಳು ಕೀರ್ತನೆ ಪುಸ್ತಕದಲ್ಲಿದೆ.d ಅದ್ರರ್ಥ ಅವನು ಕೀರ್ತನೆ ಪುಸ್ತಕದಲ್ಲಿದ್ದ ಆ ಮಾತುಗಳನ್ನ ಈಗಾಗ್ಲೇ ಓದಿ ತಿಳ್ಕೊಂಡಿದ್ದ. ಅವುಗಳ ಬಗ್ಗೆ ಅವನು ಚೆನ್ನಾಗಿ ಯೋಚ್ನೆ ಮಾಡಿದ್ರಿಂದ, ‘ಈ ಕಷ್ಟ ಕಾಲದಲ್ಲಿ ಖಂಡಿತ ಯೆಹೋವ ನನ್ನ ಕಾಪಾಡ್ತಾನೆ’ ಅನ್ನೋ ನಂಬಿಕೆ ಅವನಿಗೆ ಬಂತು. ನಾವೂ ಕೆಲವು ಬೈಬಲ್ ವಚನಗಳನ್ನ ಓದಿ ನೆನಪಿಡಬೇಕು. ಆಗ ಕಷ್ಟ ಕಾಲದಲ್ಲಿ ಅದು ನಮ್ಮ ನೆನಪಿಗೆ ಬರುತ್ತೆ. ‘ಸಹಾಯ ಮಾಡಪ್ಪ’ ಅಂತ ನಾವು ಯೆಹೋವನಿಗೆ ಪ್ರಾರ್ಥನೆ ಮಾಡಿದಾಗ ಅದು ನಮಗೆ ಸಾಂತ್ವನ ಕೊಡುತ್ತೆ.
ಪ್ರಾರ್ಥನೆ ಮಾಡ್ತಾ ಯೆಹೋವನಿಗೆ ಹತ್ರ ಆಗಿ
18-19. ನಿಮ್ಮ ಭಾವನೆಗಳನ್ನ ಹೇಳ್ಕೊಳ್ಳೋಕೆ ಪದಗಳೇ ಇಲ್ಲದಿದ್ದಾಗ, ನಿಮಗೆ ಯಾವ ಸಹಾಯ ಇದೆ? ಒಂದು ಅನುಭವ ಹೇಳಿ. (ರೋಮನ್ನರಿಗೆ 8:26, 27)
18 ರೋಮನ್ನರಿಗೆ 8:26, 27 ಓದಿ. ಒಂದೊಂದ್ಸಲ ನಮಗೆ ಎಂಥ ಪರಿಸ್ಥಿತಿ ಬಂದು ಬಿಡುತ್ತೆ ಅಂದ್ರೆ, ನಮ್ಮ ನೋವನ್ನ ಹೇಳ್ಕೊಳ್ಳೋಕೆ ಪದಗಳೇ ಸಿಗಲ್ಲ. ಆಗ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ? ಆತನು ತನ್ನ ಪವಿತ್ರಶಕ್ತಿ ಕೊಡ್ತಾನೆ. ಅದು ನಮ್ಮ ಪರವಾಗಿ ಯೆಹೋವನ ಹತ್ರ ‘ಬೇಡ್ಕೊಳ್ಳುತ್ತೆ.’ ಅದು ಹೇಗೆ? ಯೆಹೋವ ತನ್ನ ಪವಿತ್ರಶಕ್ತಿ ಬಳಸಿ ಬೈಬಲಲ್ಲಿ ಎಷ್ಟೋ ಪ್ರಾರ್ಥನೆಗಳನ್ನ ಬರೆಸಿಟ್ಟಿದ್ದಾನೆ. ನಾವು ನಮ್ಮ ಭಾವನೆಗಳನ್ನ, ಕಷ್ಟಗಳನ್ನ ಆತನ ಹತ್ರ ಹೇಳ್ಕೊಳ್ಳೋಕೆ ಆಗದೆ ಇದ್ದಾಗ ಅವು ನಮಗೆ ಸಹಾಯ ಮಾಡುತ್ತೆ. ನಮ್ಮ ಪರಿಸ್ಥಿತಿಲಿದ್ದ ಸೇವಕರು ಮಾಡಿರೋ ಬೈಬಲಲ್ಲಿರೋ ಪ್ರಾರ್ಥನೆಗಳನ್ನ ನಾವೇ ಮಾಡ್ತಿರೋ ಪ್ರಾರ್ಥನೆ ತರ ಯೆಹೋವ ಭಾವಿಸ್ತಾನೆ. ಅವುಗಳಿಗೆ ಬೇಕಾದ ಸರಿಯಾದ ಉತ್ರನ ಕೊಡ್ತಾನೆ.
19 ಈ ವಿಷ್ಯ ರಷ್ಯಾದ ಸಹೋದರಿ ಎಲೆನಾ ಅವ್ರಿಗೆ ತುಂಬ ಸಹಾಯ ಮಾಡ್ತು. ಪ್ರಾರ್ಥನೆ ಮಾಡಿದ್ದಕ್ಕೆ ಮತ್ತೆ ಬೈಬಲ್ ಓದಿದ್ದಕ್ಕೆ ಅವ್ರನ್ನ ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ರು. ಆಗ ಎಲೆನಾ ಅವ್ರಿಗೆ ಪ್ರಾರ್ಥನೆ ಮಾಡೋಕೂ ತುಂಬ ಕಷ್ಟ ಆಯ್ತು. ಅವರು ಹೇಳೋದು, “ನಾನು ತುಂಬ ಒತ್ತಡದಲ್ಲಿದ್ದೆ. ಹೇಗೆ ಪ್ರಾರ್ಥನೆ ಮಾಡಬೇಕು, ಪ್ರಾರ್ಥನೆಲಿ ಏನು ಹೇಳಬೇಕು ಅಂತಾನೇ ನಂಗೆ ಗೊತ್ತಾಗ್ಲಿಲ್ಲ. ಆಗ ನಂಗೆ ಬೈಬಲಲ್ಲಿ ದೇವ ಜನರು ಮಾಡಿರೋ ಪ್ರಾರ್ಥನೆಗಳನ್ನ ಯೆಹೋವ, ನಾನು ಮಾಡ್ತಿರೋ ಪ್ರಾರ್ಥನೆ ತರ ಭಾವಿಸ್ತಾನೆ ಅನ್ನೋ ವಿಷ್ಯ ನೆನಪಾಯ್ತು. ಈ ವಿಷ್ಯ ನನಗೆ ಆ ಕಷ್ಟದ ಪರಿಸ್ಥಿತಿನ ನಿಭಾಯಿಸೋಕೆ ತುಂಬ ಸಹಾಯ ಮಾಡ್ತು. ನಂಗೆ ತುಂಬ ಸಾಂತ್ವನ ಕೊಡ್ತು.”
20. ನೀವು ಚಿಂತೆ ಒತ್ತಡದಲ್ಲಿದ್ದಾಗ ಸುಲಭವಾಗಿ ಪ್ರಾರ್ಥನೆ ಮಾಡೋಕೆ ಯಾವುದು ಸಹಾಯ ಮಾಡುತ್ತೆ?
20 ನಾವು ಒತ್ತಡದಲ್ಲಿದ್ದಾಗ ಪ್ರಾರ್ಥನೆಯಲ್ಲಿ ಏನು ಹೇಳ್ತಿದ್ದೀವಿ ಅನ್ನೋದಕ್ಕೆ ಗಮನ ಕೊಡೋಕಾಗಲ್ಲ. ಅದಕ್ಕೆ ಮೊದಲೇ ನಮ್ಮ ಮನಸ್ಸನ್ನ ನಾವು ತಯಾರಿ ಮಾಡ್ಕೊಬೇಕು. ಕೀರ್ತನೆ ಪುಸ್ತಕದ ಆಡಿಯೋ ರೆಕಾರ್ಡಿಂಗ್ ಕೇಳಿಸ್ಕೊಬಹುದು ಅಥವಾ ನಮಗೆ ಹೇಗೆ ಅನಿಸ್ತಿದೆ ಅಂತ ನಮ್ಮ ಭಾವನೆಗಳನ್ನ ರಾಜ ದಾವೀದನ ತರ ಬರೆದಿಡಬಹುದು. (ಕೀರ್ತ. 18, 34, 142 ಮತ್ತು ಮೇಲ್ಬರಹ.) ಬೇರೆಬೇರೆ ರೀತಿಲಿ ನಾವು ನಮ್ಮ ಮನಸ್ಸನ್ನ ತಯಾರಿ ಮಾಡ್ಕೋಬಹುದು. (ಕೀರ್ತ. 141:2) ಏನು ಮಾಡಿದ್ರೆ ನಿಮಗೆ ಸಹಾಯ ಆಗುತ್ತೋ ಅದನ್ನೇ ನೀವು ಮಾಡಬಹುದು.
21. ಮನಸ್ಸು ಬಿಚ್ಚಿ ಯೆಹೋವನಿಗೆ ಯಾಕೆ ಪ್ರಾರ್ಥನೆ ಮಾಡಬೇಕು?
21 ನಾವು ಬಾಯಿ ಬಿಟ್ಟು ಏನಾದ್ರೂ ಹೇಳೋ ಮುಂಚೆನೇ ನಮ್ಮ ಭಾವನೆಗಳನ್ನ ಯೆಹೋವ ಅರ್ಥ ಮಾಡ್ಕೊಳ್ತಾನೆ ಅಂತ ಕೇಳಿದಾಗ ಎಷ್ಟು ಖುಷಿ ಆಗುತ್ತಲ್ವಾ? (ಕೀರ್ತ. 139:4) ನಿಮಗೆ ಆತನ ಮೇಲೆ ಎಷ್ಟು ನಂಬಿಕೆ ಇದೆ ಅಂತ ನೀವು ಹೇಳೋದನ್ನ ಕೇಳಿಸ್ಕೊಳ್ಳೋಕೆ ಆತನು ಖುಷಿಪಡ್ತಾನೆ. ಹಾಗಾಗಿ ನಿಮ್ಮ ಸ್ವರ್ಗೀಯ ತಂದೆ ಯೆಹೋವನಿಗೆ ಪ್ರಾರ್ಥನೆ ಮಾಡೋಕೆ ಯಾವತ್ತೂ ಹಿಂಜರಿಬೇಡಿ. ಬೈಬಲಿನಲ್ಲಿರೋ ಪ್ರಾರ್ಥನೆಗಳಲ್ಲಿ ಮನಮುಟ್ಟೋ ಒಳ್ಳೊಳ್ಳೆ ಮಾತುಗಳಿವೆ. ನೀವೂ ನಿಮ್ಮ ಪ್ರಾರ್ಥನೆಲಿ ಆ ಮಾತುಗಳನ್ನ ಬಳಸಿ. ಯೆಹೋವನಿಗೆ ನೀವು ಯಾವಾಗ್ಲೂ ಮನಸಾರೆ ಪ್ರಾರ್ಥನೆ ಮಾಡಿ. ಯೆಹೋವನ ಹತ್ರ ನಿಮಗೆ ಖುಷಿ ಕೊಟ್ಟ ವಿಷ್ಯದ ಬಗ್ಗೆ ಹೇಳಿ, ನಿಮಗೆ ನೋವು ಮಾಡ್ತಿರೋ ವಿಷ್ಯದ ಬಗ್ಗೆನೂ ಹೇಳಿ. ನಿಮಗೆ ಗೊತ್ತಾ, ಒಬ್ಬ ಪ್ರಾಣ ಸ್ನೇಹಿತನಂತೆ ಯೆಹೋವನು ನಿಮ್ಮ ಪ್ರಾರ್ಥನೆ ಕೇಳಿಸ್ಕೊಳ್ತಾನೆ!
ಗೀತೆ 45 ನನ್ನ ಹೃದಯದ ಧ್ಯಾನ
a ಬಾಳಿಗೆ ಬೆಳಕಾಗೋ ಬೈಬಲ್ ವಚನಗಳು ಪುಸ್ತಕದಲ್ಲಿರೋ “ಯೆಹೋವನ ಗುಣಗಳು” ಅನ್ನೋ ಶೀರ್ಷಿಕೆ ನೋಡಿ.
b ಸಭೆಯ ಪರವಾಗಿ ಮಾಡೋ ಸಾರ್ವಜನಿಕ ಪ್ರಾರ್ಥನೆಗಳು ಸಾಮಾನ್ಯವಾಗಿ ಚುಟುಕಾಗಿರುತ್ತೆ.
c ಹನ್ನ ಪ್ರಾರ್ಥನೆಲಿ ಬಳಸಿದ ಕೆಲವು ಮಾತುಗಳು ಮೋಶೆಯ ಪುಸ್ತಕದಲ್ಲಿದ್ದ ಮಾತುಗಳಾಗಿತ್ತು. ಅದ್ರ ಅರ್ಥ ಅವಳು ಖಂಡಿತ ಆ ವಚನಗಳನ್ನೆಲ್ಲ ಓದಿ ಚೆನ್ನಾಗಿ ಯೋಚನೆ ಮಾಡಿರ್ತಾಳೆ. (ಧರ್ಮೋ. 4:35; 8:18; 32:4, 39; 1 ಸಮು. 2:2, 6, 7) ನೂರಾರು ವರ್ಷಗಳಾದ್ಮೇಲೆ ಯೇಸುವಿನ ತಾಯಿ ಮರಿಯ ಹನ್ನ ಬಳಸಿದ ಪದಗಳನ್ನೇ ಬಳಸ್ತಾ ಯೆಹೋವನಿಗೆ ಪ್ರಾರ್ಥನೆ ಮಾಡಿದಳು.—ಲೂಕ 1:46-55.