ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಅಕ್ಟೋಬರ್‌ ಪು. 24-29
  • ಎಲ್ರಿಗಾಗಿ ಪ್ರಾರ್ಥನೆ ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಲ್ರಿಗಾಗಿ ಪ್ರಾರ್ಥನೆ ಮಾಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೇರೆಯವ್ರಿಗೋಸ್ಕರ ಯಾಕೆ ಪ್ರಾರ್ಥನೆ ಮಾಡಬೇಕು?
  • ನಮ್ಮ ಪ್ರಾರ್ಥನೆ ಅವ್ರಿಗೆ ತುಂಬ ಮುಖ್ಯ
  • ಹೆಸರೆತ್ತಿ ಪ್ರಾರ್ಥನೆ ಮಾಡಿ
  • ದೀನತೆ ತೋರಿಸಿ
  • ಯೆಹೋವನಿಗೆ ಆಪ್ತರಾಗಲು ಪ್ರಾರ್ಥನೆ ಮಾಡಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಚೆನ್ನಾಗಿ ಪ್ರಾರ್ಥನೆ ಮಾಡೋಕೆ ಏನು ಮಾಡಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ದೇವರು ಕೊಟ್ಟಿರುವ ಪ್ರಾರ್ಥನೆ ಎಂಬ ವರ
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • “ಒಬ್ಬರಿಗೋಸ್ಕರ ಒಬ್ಬರು ದೇವರನ್ನು ಪ್ರಾರ್ಥಿಸಿರಿ”
    ಕಾವಲಿನಬುರುಜು—1991
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಅಕ್ಟೋಬರ್‌ ಪು. 24-29

ಅಧ್ಯಯನ ಲೇಖನ 43

ಗೀತೆ 88 ನಿನ್ನ ದಾರಿಗಳನ್ನ ನನಗೆ ಕಲಿಸು

ಎಲ್ರಿಗಾಗಿ ಪ್ರಾರ್ಥನೆ ಮಾಡಿ

“ ಒಬ್ರು ಇನ್ನೊಬ್ರ ಬಗ್ಗೆ ಪ್ರಾರ್ಥನೆ ಮಾಡಿ . . . ನೀತಿವಂತರು ಅಂಗಲಾಚಿ ಮಾಡೋ ಪ್ರಾರ್ಥನೆಗೆ ತುಂಬ ಶಕ್ತಿ ಇದೆ.”—ಯಾಕೋ. 5:16.

ಈ ಲೇಖನದಲ್ಲಿ ಏನಿದೆ?

ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡೋದು ಯಾಕೆ ಮುಖ್ಯ ಮತ್ತು ಅದನ್ನ ಹೇಗೆ ಮಾಡೋದು ಅಂತ ನೋಡೋಣ.

1. ನಾವು ಮಾಡೋ ಪ್ರಾರ್ಥನೆಗಳು ಯೆಹೋವನಿಗೆ ಮುಖ್ಯನಾ?

ಪ್ರಾರ್ಥನೆ ಒಂದು ದೊಡ್ಡ ವರ ಅಂತ ಹೇಳಬಹುದು. ಯೆಹೋವ ಕೆಲವು ಕೆಲಸಗಳನ್ನ ದೇವದೂತರಿಗೆ ಕೊಟ್ಟಿದ್ದಾನೆ. (ಕೀರ್ತ. 91:11) ತನ್ನ ಮಗ ಯೇಸುಗೂ ದೊಡ್ಡ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾನೆ. (ಮತ್ತಾ. 28:18) ಆದ್ರೆ ಪ್ರಾರ್ಥನೆ ಕೇಳಿಸ್ಕೊಳ್ಳೋ ಕೆಲಸನ ಬೇರೆ ಯಾರಿಗಾದ್ರೂ ಕೊಟ್ಟಿದ್ದಾನಾ? ಇಲ್ಲ. ಯೆಹೋವನೇ ಪ್ರಾರ್ಥನೆಗಳನ್ನ ಕೇಳಿಸ್ಕೊಳ್ಳೋಕೆ ಇಷ್ಟಪಡ್ತಾನೆ. ಅದಕ್ಕೆ ಬೈಬಲ್‌ ಯೆಹೋವನನ್ನ ‘ಪ್ರಾರ್ಥನೆಯನ್ನ ಕೇಳುವವನು’ ಅಂತ ಕರೆಯುತ್ತೆ. ಯೆಹೋವ ನಮ್ಮೆಲ್ಲರ ಪ್ರಾರ್ಥನೆನ ತಾನೇ ಗಮನ ಕೊಟ್ಟು ಕೇಳಿಸ್ಕೊಬೇಕು ಅಂತ ಇಷ್ಟಪಡ್ತಾನೆ.—ಕೀರ್ತ. 65:2.

2. ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡೋ ವಿಷ್ಯದಲ್ಲಿ ಪೌಲ ಹೇಗೆ ಒಳ್ಳೆ ಮಾದರಿ ಇಟ್ಟಿದ್ದಾನೆ?

2 ನಾವು ಯೆಹೋವನ ಹತ್ರ ಮನಸ್ಸು ಬಿಚ್ಚಿ, ನಮ್ಮ ಕಷ್ಟ-ಸುಖನೆಲ್ಲ ಹೇಳ್ಕೊಬಹುದು. ಆದ್ರೆ ಅದೇ ಟೈಮಲ್ಲಿ ನಾವು ಬೇರೆಯವ್ರಿಗೋಸ್ಕರನೂ ಪ್ರಾರ್ಥನೆ ಮಾಡೋಕೆ ಮರಿಬಾರದು. ಈ ವಿಷ್ಯದಲ್ಲಿ ಪೌಲ ಒಳ್ಳೆ ಮಾದರಿ. ಅವನಿಗೆ ಜೀವನದಲ್ಲಿ ನೂರಾರು ಕಷ್ಟಗಳಿತ್ತು. ಹಾಗಿದ್ರೂ ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡೋಕೆ ಅವನು ಟೈಮ್‌ ಮಾಡ್ಕೊಳ್ತಿದ್ದ. (2 ಕೊರಿಂ 11:23; 12:7, 8) ಉದಾಹರಣೆಗೆ, ಎಫೆಸ ಸಭೆಯವ್ರಿಗೆ ಪತ್ರ ಬರೆದಾಗ “ನಾನು ನಿಮಗಾಗಿ ಯಾವಾಗ್ಲೂ ಪ್ರಾರ್ಥಿಸ್ತೀನಿ” ಅಂತ ಹೇಳಿದ. (ಎಫೆ. 1:16) ಅಷ್ಟೇ ಅಲ್ಲ, ಅವನು ಕೆಲವು ವ್ಯಕ್ತಿಗಳಿಗೋಸ್ಕರ ಅವ್ರ ಹೆಸರೆತ್ತಿ ಪ್ರಾರ್ಥನೆ ಮಾಡ್ತಿದ್ದ. ಉದಾಹರಣೆಗೆ, ತಿಮೊತಿಗೆ ಪತ್ರ ಬರೆದಾಗ, “ನಾನು ದೇವರಿಗೆ ಚಿರಋಣಿ . . . ಹಗಲೂರಾತ್ರಿ ಆತನಿಗೆ ಅಂಗಲಾಚಿ ಬೇಡುವಾಗ ನಿನ್ನನ್ನ ಯಾವಾಗ್ಲೂ ನೆನಪಿಸ್ಕೊಳ್ತೀನಿ” ಅಂತ ಹೇಳಿದ. (2 ತಿಮೊ. 1:3) ನಾವೂ ಪೌಲನ ತರಾನೇ ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡಬೇಕಲ್ವಾ?

3. ಕೆಲವು ಸಲ ನಾವು ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡೋಕೆ ಯಾಕೆ ಮರೀತೀವಿ?

3 ನಾವು ಕೆಲವು ಸಲ ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡೋದನ್ನೇ ಮರೆತು ಬಿಡ್ತೀವಿ. ಯಾಕೆ? ಸಹೋದರಿ ಸೆಬ್ರಿನa ಇದಕ್ಕೆ ಕಾರಣ ಏನಂತ ಹೇಳ್ತಾರೆ ನೋಡಿ, “ನಾವೆಲ್ಲ ಜೀವನದಲ್ಲಿ ತುಂಬ ಬಿಜ಼ಿ ಆಗ್ಬಿಟ್ಟಿದ್ದೀವಿ. ಜೀವನದಲ್ಲಿ ನಮಗಿರೋ ಕಷ್ಟಗಳ ಬಗ್ಗೆನೇ ನಾವು ಯಾವಾಗ್ಲೂ ಯೋಚನೆ ಮಾಡ್ತಾ ಇರ್ತೀವಿ. ಇದ್ರಿಂದ ಪ್ರಾರ್ಥನೆಯಲ್ಲೂ ಬರೀ ನಮಗೇನು ಬೇಕೋ ಅದನ್ನೇ ಕೇಳ್ತಿರ್ತೀವಿ.” ನೀವೂ ಹೀಗೇ ಮಾಡ್ತಿದ್ದೀರಾ? ಹಾಗಾದ್ರೆ ಈ ಲೇಖನ ನಿಮಗೆ ಸಹಾಯ ಮಾಡುತ್ತೆ. ಈ ಲೇಖನದಲ್ಲಿ ನಾವು (1) ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡೋದು ಯಾಕೆ ಮುಖ್ಯ? (2) ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡೋಕೆ ಯಾವ ಸಲಹೆಗಳಿವೆ ಅಂತ ನೋಡೋಣ.

ಬೇರೆಯವ್ರಿಗೋಸ್ಕರ ಯಾಕೆ ಪ್ರಾರ್ಥನೆ ಮಾಡಬೇಕು?

4-5. ಬೇರೆಯವ್ರಿಗೋಸ್ಕರ ನಾವು ಮಾಡೋ ಪ್ರಾರ್ಥನೆಗೆ ತುಂಬ ಶಕ್ತಿ ಇದೆ ಅಂತ ಯಾಕೆ ಹೇಳಬಹುದು? (ಯಾಕೋಬ 5:16)

4 ಬೇರೆಯವ್ರಿಗೋಸ್ಕರ ಮಾಡೋ ಪ್ರಾರ್ಥನೆಗೆ “ತುಂಬ ಶಕ್ತಿ ಇದೆ.” (ಯಾಕೋಬ 5:16 ಓದಿ.) ನಾವು ಪ್ರಾರ್ಥನೆ ಮಾಡೋದ್ರಿಂದ ಬೇರೆಯವ್ರ ಪರಿಸ್ಥಿತಿ ಬದಲಾಗುತ್ತಾ? ಹೌದು ಬದಲಾಗುತ್ತೆ. ಉದಾಹರಣೆಗೆ, ತನ್ನ ‘ಪರಿಚಯ ಇಲ್ಲ’ ಅಂತ ಪೇತ್ರ ಹೇಳ್ತಾನೆ ಅಂತ ಯೇಸುಗೆ ಗೊತ್ತಿತ್ತು. ಅದಕ್ಕೆ ಯೇಸು ಪೇತ್ರನಿಗೆ, “ನಿನ್ನ ನಂಬಿಕೆ ಕಡಿಮೆ ಆಗಬಾರದು ಅಂತ ದೇವರ ಹತ್ರ ನಿನಗೋಸ್ಕರ ಬೇಡ್ಕೊಂಡಿದ್ದೀನಿ” ಅಂತ ಹೇಳಿದನು. (ಲೂಕ 22:32) ಪ್ರಾರ್ಥನೆಗೆ ತುಂಬ ಶಕ್ತಿ ಇದೆ ಅಂತ ಪೌಲನಿಗೂ ಗೊತ್ತಿತ್ತು. ಅದಕ್ಕೆ ಅವನನ್ನ ಅನ್ಯಾಯವಾಗಿ ಜೈಲಲ್ಲಿ ಹಾಕಿದ್ದಾಗ ಅವನು ಫಿಲೆಮೋನನಿಗೆ, “ನೀವು ಪ್ರಾರ್ಥನೆ ಮಾಡ್ತಾ ಇರೋದ್ರಿಂದ ನನಗೆ ಆದಷ್ಟು ಬೇಗ ಬಿಡುಗಡೆ ಆಗಬಹುದು” ಅಂತ ಹೇಳಿದ. (ಫಿಲೆ. 22) ಅವರು ಪ್ರಾರ್ಥನೆ ಮಾಡಿದ್ರಿಂದ ಪೌಲನಿಗೆ ಬಿಡುಗಡೆ ಆಯ್ತು. ಅವನು ಹೊರಗಡೆ ಬಂದು ಮತ್ತೆ ಸಿಹಿಸುದ್ದಿ ಸಾರಿದ.

5 ಹಾಗಂದ್ರೆ ನಾವು ಪ್ರಾರ್ಥನೆಯಲ್ಲಿ ಕೇಳಿದನ್ನೆಲ್ಲ ಯೆಹೋವ ಖಂಡಿತ ಕೊಟ್ಟು ಬಿಡ್ತಾನೆ ಅಂತಾನಾ? ಯೆಹೋವ ದೇವ್ರಿಗೆ ನಾವು, ‘ಹೀಗೆ ಮಾಡು, ಹಾಗೆ ಮಾಡು’ ಅಂತ ಒತ್ತಾಯ ಮಾಡೋಕ್ಕಾಗಲ್ಲ. ನಾವು ಪ್ರಾರ್ಥನೆಯಲ್ಲಿ ನಮ್ಮ ಕಷ್ಟಾನ ಹೇಳ್ಕೊಂಡಾಗ ಆತನು ನಮ್ಮ ಚಿಂತೆ ಏನಂತ ಗಮನಿಸ್ತಾನೆ. ನಮಗೆ ಬೇಕಾಗೋ ಸಹಾಯ ಮಾಡ್ತಾನೆ. ಇದನ್ನ ಅರ್ಥ ಮಾಡ್ಕೊಂಡ್ರೆ ನಮಗೆ ಎಂಥದ್ದೇ ಕಷ್ಟ ಬಂದ್ರೂ ನಾವು ಯೆಹೋವನಿಗೆ ಯಾವಾಗ್ಲೂ ಪ್ರಾರ್ಥನೆ ಮಾಡ್ತೀವಿ. ಆತನು ಯಾವುದು ಸರಿಯಾಗಿದ್ಯೋ ಅದನ್ನ ಖಂಡಿತ ಕೊಟ್ಟು ನಮಗೆ ಸಹಾಯ ಮಾಡ್ತಾನೆ ಅನ್ನೋ ಭರವಸೆಯಿಂದ ಇರ್ತೀವಿ.—ಕೀರ್ತ. 37:5; 2 ಕೊರಿಂ. 1:11.

6. ನಾವು ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡಿದ್ರೆ ಏನಾಗುತ್ತೆ? (1 ಪೇತ್ರ 3:8)

6 ನಾವು ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡಿದ್ರೆ, “ದಯೆಯಿಂದ ಮೃದುವಾಗಿ” ನಡ್ಕೊಳ್ಳೋಕೆ ಕಲಿತೀವಿ. (1 ಪೇತ್ರ 3:8 ಓದಿ.) ಆಗ ಬೇರೆಯವ್ರ ಕಷ್ಟನ, ನೋವನ್ನ ಅರ್ಥ ಮಾಡ್ಕೊಳ್ತೀವಿ. ಅವರಿಗೆ ಸಹಾಯ ಮಾಡಬೇಕು ಅಂತ ನಮ್ಮ ಹೃದಯ ತುಡಿಯುತ್ತೆ. (ಮಾರ್ಕ 1:40, 41) ಮೈಕಲ್‌ ಅನ್ನೋ ಒಬ್ಬ ಹಿರಿಯ ಏನ್‌ ಹೇಳ್ತಾರೆ ನೋಡಿ, “ಬೇರೆಯವ್ರಿಗೋಸ್ಕರ ನಾನು ಪ್ರಾರ್ಥನೆ ಮಾಡ್ವಾಗ, ಅವ್ರ ಕಷ್ಟ ನನಗೆ ಚೆನ್ನಾಗಿ ಅರ್ಥ ಆಗುತ್ತೆ. ಅವ್ರ ಮೇಲೆ ನನಗಿರೋ ಪ್ರೀತಿ ಜಾಸ್ತಿ ಆಗುತ್ತೆ. ಇದು ಅವ್ರಿಗೆ ಗೊತ್ತಿಲ್ಲದೇ ಇರಬಹುದು. ಆದ್ರೂ ಅವರು ನನಗೆ ನನ್ನ ಕುಟುಂಬದವರ ತರ ಅನಿಸ್ತಾರೆ.” ರಿಚರ್ಡ್‌ ಅನ್ನೋ ಇನ್ನೊಬ್ಬ ಹಿರಿಯ ಈ ತರ ಪ್ರಾರ್ಥನೆ ಮಾಡೋದ್ರಿಂದ ಏನು ಪ್ರಯೋಜ್ನ ಅಂತ ಹೇಳ್ತಾರೆ, “ನಾವು ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡಿದಾಗ, ಅವ್ರಿಗೆ ಏನಾದ್ರೂ ಸಹಾಯ ಮಾಡಬೇಕು ಅಂತ ನಮ್ಮ ಮನಸ್ಸು ಹೇಳುತ್ತೆ. ಈ ತರ ಸಹಾಯ ಮಾಡಿದಾಗ ಅವ್ರಿಗೋಸ್ಕರ ನಾವು ಮಾಡಿದ ಪ್ರಾರ್ಥನೆಗೆ, ಒಂದು ಅರ್ಥದಲ್ಲಿ ಯೆಹೋವ ನಮ್ಮಿಂದನೇ ಉತ್ತರ ಕೊಟ್ಟಂಗೆ ಇರುತ್ತೆ.”

7. ಬೇರೆಯವ್ರಿಗೋಸ್ಕರ ನಾವು ಪ್ರಾರ್ಥನೆ ಮಾಡಿದ್ರೆ ನಮ್ಮ ಕಷ್ಟಗಳನ್ನ ನಾವು ಹೇಗೆ ನೋಡ್ತೀವಿ? (ಫಿಲಿಪ್ಪಿ 2:3, 4) (ಚಿತ್ರ ನೋಡಿ.)

7 ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡಿದ್ರೆ ನಮಗಿರೋ ಕಷ್ಟಗಳ ಬಗ್ಗೆನೇ ಜಾಸ್ತಿ ತಲೆ ಕೆಡಸ್ಕೊಳ್ಳಲ್ಲ. (ಫಿಲಿಪ್ಪಿ 2:3, 4 ಓದಿ.) ಪ್ರತಿಯೊಬ್ರಿಗೂ ಈ ಲೋಕದಲ್ಲಿ ಒಂದಲ್ಲ ಒಂದು ಕಷ್ಟ ಇದ್ದಿದ್ದೇ. ಯಾಕಂದ್ರೆ ಇಡೀ ಲೋಕ ಸೈತಾನ ಕೈಯಲ್ಲಿದೆ. (1 ಯೋಹಾ. 5:19; ಪ್ರಕ. 12:12) ಆದ್ರೆ ನಾವು ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡೋದನ್ನ ಅಭ್ಯಾಸ ಮಾಡ್ಕೊಳ್ಳೋದಾದ್ರೆ, ‘ಲೋಕದ ಎಲ್ಲ ಕಡೆ ಇರೋ ನಮ್ಮ ಸಹೋದರರು ಇಂಥ ಕಷ್ಟಗಳನ್ನೇ ಅನುಭವಿಸ್ತಿದ್ದಾರೆ’ ಅಂತ ನಮಗೆ ಅರ್ಥ ಆಗುತ್ತೆ. (1 ಪೇತ್ರ 5:9) ಕ್ಯಾಥರಿನ್‌ ಅನ್ನೋ ಪಯನೀಯರ್‌ ಸಹೋದರಿ ಹೀಗೆ ಹೇಳ್ತಾರೆ, “ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡಿದಾಗ ಕಷ್ಟಗಳು ಬರೀ ನನ್ನೊಬ್ಬಳಿಗೆ ಅಲ್ಲ, ಬೇರೆಯವ್ರಿಗೂ ಇದೆ ಅಂತ ನನಗೆ ಅರ್ಥ ಆಗುತ್ತೆ. ಆಗ ನಾನು ನನಗಿರೋ ಕಷ್ಟಗಳ ಬಗ್ಗೆನೇ ಜಾಸ್ತಿ ತಲೆ ಕೆಡಿಸ್ಕೊಳ್ತಾ ಕೂತ್ಕೊಳಲ್ಲ.”

ಚಿತ್ರ: ತಮ್ಮ ಜೀವನದಲ್ಲೇ ತುಂಬ ಸಮಸ್ಯೆ ಇದ್ರೂ ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡ್ತಿರೋ ಸಹೋದರ ಸಹೋದರಿಯರು. 1. ಒಬ್ಬ ಚಿಕ್ಕ ಹುಡುಗಿ ತನ್ನ ಬೆಡ್‌ ಮೇಲೆ ಕೂತು ಪ್ರಾರ್ಥನೆ ಮಾಡ್ತಿದ್ದಾಳೆ; ಪ್ರಳಯದಿಂದಾಗಿ ತಮ್ಮ ಮನೆ ಬಿಟ್ಟು ದೋಣಿಯಲ್ಲಿ ಹೋಗ್ತಿರೋ ಒಂದು ಕುಟುಂಬ. 2. ಹಿಂದಿನ ಚಿತ್ರದಲ್ಲಿರೋ ಕುಟುಂಬ ಒಟ್ಟಾಗಿ ಪ್ರಾರ್ಥನೆ ಮಾಡ್ತಿದ್ದಾರೆ; ಒಬ್ಬ ಸಹೋದರ ಜೈಲಿನಲ್ಲಿದ್ದಾನೆ. 3. ಜೈಲಿನಲ್ಲಿರೋ ಸಹೋದರ ಪ್ರಾರ್ಥನೆ ಮಾಡ್ತಿದ್ದಾನೆ; ವಯಸ್ಸಾದ ಒಬ್ಬ ಸಹೋದರಿ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದಾರೆ. 4. ವಯಸ್ಸಾದ ಸಹೋದರಿ ಪ್ರಾರ್ಥನೆ ಮಾಡ್ತಿದ್ದಾರೆ; ಮೊದಲನೇ ಚಿತ್ರದಲ್ಲಿದ್ದ ಹುಡುಗಿ ತನ್ನ ಕ್ಲಾಸ್‌ಮೇಟ್ಸ್‌ ಹುಟ್ಟುಹಬ್ಬ ಆಚರಿಸ್ತಿರುವಾಗ ಸುಮ್ನೆ ಕೂತಿದ್ದಾಳೆ.

ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡಿದ್ರೆ ನಮಗಿರೋ ಕಷ್ಟಗಳ ಬಗ್ಗೆ ನಾವು ಜಾಸ್ತಿ ತಲೆ ಕೆಡಿಸ್ಕೊಳ್ಳಲ್ಲ (ಪ್ಯಾರ 7 ನೋಡಿ)d


ನಮ್ಮ ಪ್ರಾರ್ಥನೆ ಅವ್ರಿಗೆ ತುಂಬ ಮುಖ್ಯ

8. ನಾವು ಯಾರಿಗೆಲ್ಲಾ ಪ್ರಾರ್ಥನೆ ಮಾಡಬಹುದು?

8 ನಾವು ಯಾರಿಗೆಲ್ಲಾ ಪ್ರಾರ್ಥನೆ ಮಾಡಬಹುದು? ಕಾಯಿಲೆಯಿಂದ ನರಳ್ತಿರೋರಿಗೆ, ಸ್ಕೂಲ್‌ ಕಾಲೇಜ್‌ಗಳಲ್ಲಿ, ಒತ್ತಡ ನಿಭಾಯಿಸ್ತಿರೋ ಯುವಜನ್ರಿಗೆ, ವಯಸ್ಸಾಗಿ ಕಷ್ಟ ಪಡ್ತಿರೋ ವೃದ್ಧರಿಗೆ, ಸ್ವಂತ ಕುಟುಂಬದವ್ರಿಂದ ಅಥವಾ ಸರ್ಕಾರದಿಂದ ಹಿಂಸೆ ಅನುಭವಿಸ್ತಿರೋ ನಮ್ಮ ಜೊತೆ ಸ್ನೇಹಿತರಿಗೆ. (ಮತ್ತಾ. 10:18, 36; ಅ. ಕಾ. 12:5) ಅಷ್ಟೇ ಅಲ್ಲ, ಜಗಳಗಳು, ಗಲಾಟೆಗಳು ಜಾಸ್ತಿ ಆಗ್ತಿರೋದ್ರಿಂದ ಮನೆ ಬಿಟ್ಟು ಬಂದವ್ರಿಗೆ, ಪ್ರಕೃತಿ ವಿಕೋಪದಲ್ಲಿ ಮನೆ ಕಳ್ಕೊಂಡ ಜನ್ರಿಗೂ ಪ್ರಾರ್ಥನೆ ಮಾಡಬಹುದು. ಈ ಎಲ್ಲಾ ಸಹೋದರ ಸಹೋದರಿಯರು ನಮಗೆ ನೇರವಾಗಿ ಪರಿಚಯ ಇಲ್ಲದೇ ಇರಬಹುದು. ಆದ್ರೆ ನಾವು ಅವ್ರಿಗೋಸ್ಕರನೂ ಪ್ರಾರ್ಥನೆ ಮಾಡಿದಾಗ ಯೇಸು ಹೇಳಿದಂತೆ “ಒಬ್ಬರನ್ನೊಬ್ರು ಪ್ರೀತಿಸಬೇಕು” ಅನ್ನೋ ಆಜ್ಞೆಯನ್ನ ನಾವು ಪಾಲಿಸದಂತೆ ಆಗುತ್ತೆ.—ಯೋಹಾ. 13:34.

9. ಸಂಘಟನೆಯನ್ನ ನಡೆಸ್ತಿರೋ ಸಹೋದರರಿಗೆ ಮತ್ತು ಅವ್ರ ಹೆಂಡತಿಯರಿಗೆ ನಾವು ಯಾಕೆ ಪ್ರಾರ್ಥನೆ ಮಾಡಬೇಕು?

9 ಯೆಹೋವನ ಸಂಘಟನೆಯನ್ನ ನಡೆಸ್ತಿರೋ ಸಹೋದರರಿಗೋಸ್ಕರ ನಾವು ಪ್ರಾರ್ಥನೆ ಮಾಡಬಹುದು. ಇವ್ರಲ್ಲಿ ಆಡಳಿತ ಮಂಡಲಿಯ ಸದಸ್ಯರು ಮತ್ತು ಅವರ ಸಹಾಯಕರು, ಬ್ರಾಂಚ್‌ ಕಮಿಟಿ ಸದಸ್ಯರು, ಬ್ರಾಂಚ್‌ ಆಫೀಸ್‌ನಲ್ಲಿರೋ ಮೇಲ್ವಿಚಾರಕರು, ಸರ್ಕಿಟ್‌ ಮೇಲ್ವಿಚಾರಕರು, ಸಭೆಯ ಹಿರಿಯರು ಮತ್ತು ಸಹಾಯಕ ಸೇವಕರು ಸೇರಿದ್ದಾರೆ. ಇವ್ರೆಲ್ರಿಗೂ ಎಷ್ಟೋ ಕಷ್ಟಗಳಿವೆ. ಹಾಗಿದ್ರೂ ಇವ್ರೆಲ್ಲಾ ನಮಗೋಸ್ಕರ ಬೆವರು ಸುರಿಸಿ ಸೇವೆ ಮಾಡ್ತಿದ್ದಾರೆ. (2 ಕೊರಿಂ. 12:15) ಉದಾಹರಣೆಗೆ, ಮಾರ್ಕ್‌ ಅನ್ನೋ ಸರ್ಕಿಟ್‌ ಮೇಲ್ವಿಚಾರಕರು ಏನ್‌ ಹೇಳ್ತಾರೆ ನೋಡಿ, “ನಾನು ನನ್ನ ವಯಸ್ಸಾಗಿರೋ ಅಪ್ಪ-ಅಮ್ಮನಿಂದ ದೂರ ಇದ್ದೀನಿ. ಅವ್ರಿಗೆ ಆರೋಗ್ಯ ಚೆನ್ನಾಗಿಲ್ಲ. ನಮ್ಮ ಅಕ್ಕ-ಬಾವ ಅವ್ರನ್ನ ಚೆನ್ನಾಗೇ ನೋಡ್ಕೊಳ್ತಿದ್ದಾರೆ. ಆದ್ರೂ ನನ್ನ ಕೈಯಲ್ಲಿ ಅಪ್ಪ-ಅಮ್ಮನಿಗೆ ಅಷ್ಟು ಸಹಾಯ ಮಾಡೋಕೆ ಆಗ್ತಿಲ್ಲಲ್ವಾ ಅನ್ನೋ ಕೊರಗು ನನಗಿದೆ.” ಇಂಥ ಸಹೋದರರು ಪಡ್ತಿರೋ ಪ್ರತಿಯೊಂದು ಕಷ್ಟ ನಮಗೆ ಗೊತ್ತಿರಲ್ಲ. ಹಾಗಿದ್ರೂ ಅವ್ರೆಲ್ರಿಗೋಸ್ಕರ ನಾವು ಪ್ರಾರ್ಥನೆ ಮಾಡಬಹುದು. (1 ಥೆಸ. 5:12, 13) ನಾವು ಅವ್ರ ಹೆಂಡತಿಯರಿಗಾಗಿ ಸಹ ಪ್ರಾರ್ಥನೆ ಮಾಡಬೇಕು. ಯಾಕಂದ್ರೆ ಈ ಎಲ್ಲಾ ಸಹೋದರರು ತಮ್ಮ ನೇಮಕಗಳನ್ನ ಚೆನ್ನಾಗಿ ಮಾಡೋಕೆ ಅವರ ಬೆಂಬಲ ತುಂಬ ಇರುತ್ತೆ.

10-11. ನಮ್ಮ ಸಹೋದರ ಸಹೋದರಿಯರನ್ನೆಲ್ಲಾ ಮನಸ್ಸಲ್ಲಿಟ್ಟು ಮಾಡೋ ಪ್ರಾರ್ಥನೆ ಯೆಹೋವನಿಗೆ ಇಷ್ಟ ಆಗುತ್ತಾ? ವಿವರಿಸಿ.

10 ನಾವು ತುಂಬ ಸಹೋದರ ಸಹೋದರಿಯರಿಗೋಸ್ಕರ ಒಟ್ಟಾಗಿ ಪ್ರಾರ್ಥನೆ ಮಾಡ್ತೀವಿ ಅಂತ ಇಲ್ಲಿವರೆಗೂ ಕಲಿತ್ವಿ. ಉದಾಹರಣೆಗೆ, ಜೈಲಲ್ಲಿ ಇರೋರಿಗೆ ಅಥವಾ ತಮ್ಮವ್ರನ್ನ ಕಳ್ಕೊಂಡಿರೋ ಕುಟುಂಬದವರಿಗೋಸ್ಕರ ನಾವು ಪ್ರಾರ್ಥನೆ ಮಾಡ್ತೀವಿ. ಡೊನಾಲ್ಡ್‌ ಅನ್ನೋ ಹಿರಿಯ ಏನು ಹೇಳ್ತಾರೆ ನೋಡಿ, “ನಮ್ಮ ಎಷ್ಟೋ ಸಹೋದರ ಸಹೋದರಿಯರು ತುಂಬ ಕಷ್ಟಗಳನ್ನ ಎದುರಿಸ್ತಿದ್ದಾರೆ. ಹಾಗಾಗಿ ನಾವು ಅವ್ರೆಲ್ರನ್ನ ನೆನಪು ಮಾಡ್ಕೊಂಡು ಒಟ್ಟಾಗಿ ಪ್ರಾರ್ಥನೆ ಮಾಡಬೇಕು. ನಾವು ಹೀಗೆ ಮಾಡಿದ್ರೆ ಅವ್ರೆಲ್ರ ಕಷ್ಟನ ಅರ್ಥ ಮಾಡ್ಕೊಂಡಂತೆ ಆಗುತ್ತೆ.”

11 ನಾವು ಈ ತರ ಪ್ರಾರ್ಥನೆ ಮಾಡಿದ್ರೆ ಯೆಹೋವನಿಗೆ ಇಷ್ಟ ಆಗುತ್ತಾ? ಖಂಡಿತ ಇಷ್ಟ ಆಗುತ್ತೆ. ಯಾಕಂದ್ರೆ ಒಬ್ಬೊಬ್ರಿಗೂ ಏನೇನು ಬೇಕು ಅಂತ ನಮಗೆ ಗೊತ್ತಿಲ್ಲ. ಹಾಗಾಗಿ ನಾವು ಅವ್ರೆಲ್ರನ್ನೂ ಮನಸ್ಸಲ್ಲಿಟ್ಟು ಪ್ರಾರ್ಥನೆ ಮಾಡೋದು ತುಂಬಾ ಚೆನ್ನಾಗಿರುತ್ತೆ. (ಯೋಹಾ. 17:20; ಎಫೆ. 6:18) ಆ ಪ್ರಾರ್ಥನೆಗಳು ‘ಲೋಕದಲ್ಲಿ ಎಲ್ಲ ಕಡೆ ಇರೋ ಸಹೋದರರನ್ನ ನಾವು ಪ್ರೀತಿಸ್ತೀವಿ’ ಅಂತ ತೋರಿಸ್ಕೊಡುತ್ತೆ.—1 ಪೇತ್ರ 2:17.

ಹೆಸರೆತ್ತಿ ಪ್ರಾರ್ಥನೆ ಮಾಡಿ

12. ನಾವು ಸಭೆಯಲ್ಲಿ ಚೆನ್ನಾಗಿ ಗಮನಿಸೋದ್ರಿಂದ ಏನು ಪ್ರಯೋಜ್ನ ಆಗುತ್ತೆ?

12 ಚೆನ್ನಾಗಿ ಗಮನಿಸಿ. ನಮ್ಮ ಸಹೋದರ ಸಹೋದರಿಯರನ್ನೆಲ್ಲಾ ಮನಸ್ಸಲ್ಲಿಟ್ಟು ಪ್ರಾರ್ಥನೆ ಮಾಡೋದ್ರ ಜೊತೆಗೆ ನಾವು ಅವರ ವೈಯಕ್ತಿಕ ಹೆಸರೆತ್ತಿ ಪ್ರಾರ್ಥನೆ ಮಾಡಬೇಕು. ನಿಮ್ಮ ಸಭೆಯಲ್ಲಿ, ಯಾರಾದ್ರೂ ಗಂಭೀರ ಕಾಯಿಲೆಯಿಂದ ನರಳ್ತಿದ್ದಾರಾ? ಶಾಲೆಯಲ್ಲಿ ಆಗ್ತಿರೋ ಒತ್ತಡದಿಂದಾಗಿ ಯುವ ಜನ್ರು ಕುಗ್ಗಿ ಹೋಗ್ತಿದ್ದಾರಾ? ಒಂಟಿ ಹೆತ್ತವರು ಮಕ್ಕಳನ್ನ “ಯೆಹೋವ ಹೇಳೋ ತರಾನೇ ಅವ್ರಿಗೆ ಕಲಿಸ್ತಾ ತರಬೇತಿ” ಕೊಡೋಕೆ ಪರದಾಡ್ತಿದ್ದಾರಾ? (ಎಫೆ. 6:4) ನೀವು ಇದನ್ನೆಲ್ಲಾ ಸಭೆಯಲ್ಲಿ ಗಮನಿಸಬೇಕು. ಆಗ ಅವ್ರ ಕಷ್ಟದ ಪರಿಸ್ಥಿತಿ ನಿಮಗೆ ಅರ್ಥ ಆಗುತ್ತೆ. ಅವ್ರ ಮೇಲೆ ನಿಮಗೆ ಪ್ರೀತಿ ಜಾಸ್ತಿ ಆಗುತ್ತೆ. ಅವ್ರಿಗೋಸ್ಕರ ಪ್ರಾರ್ಥನೆ ಮಾಡಬೇಕು ಅನ್ನೋ ಆಸೆನೂ ಬರುತ್ತೆ.b—ರೋಮ. 12:15.

13. ನಮಗೆ ಗೊತ್ತಿಲ್ಲದೆ ಇರೋರ ಹೆಸರೆತ್ತಿ ಪ್ರಾರ್ಥನೆ ಮಾಡೋಕೆ ಏನು ಮಾಡಬೇಕು?

13 ಬೇರೆಯವ್ರ ಹೆಸರು ಹೇಳಿ ಪ್ರಾರ್ಥನೆ ಮಾಡಿ. ನಾವು ಇದುವರೆಗೂ ಭೇಟಿನೇ ಮಾಡದಿರೋ ವ್ಯಕ್ತಿಗೋಸ್ಕರನೂ ಪ್ರಾರ್ಥನೆ ಮಾಡಬಹುದು. ಉದಾಹರಣೆಗೆ, ಕ್ರೈಮಿಯಾ, ಎರಿಟ್ರಿಯ, ರಷ್ಯಾ, ಸಿಂಗಾಪೂರ್‌ ಜೈಲಿನಲ್ಲಿರೋ ನಮ್ಮ ಸಹೋದರ ಸಹೋದರಿಯರ ಬಗ್ಗೆ ಯೋಚ್ನೆ ಮಾಡಿ. ಅವ್ರೆಲ್ರ ಹೆಸ್ರನ್ನ jw.orgನಲ್ಲಿ ನೀವು ನೋಡಬಹುದು.c ಬ್ರಯನ್‌ ಅನ್ನೋ ಸರ್ಕಿಟ್‌ ಮೇಲ್ವಿಚಾರಕರು ಏನ್‌ ಹೇಳ್ತಾರೆ ನೋಡಿ, “ಇವ್ರೆಲ್ರ ಹೆಸ್ರನ್ನ ನಾನು ಬರೆದಿಟ್ಕೊಂಡು ಜೋರಾಗಿ ಓದ್ತಿನಿ. ಇದ್ರಿಂದ ಅವರ ಹೆಸ್ರುಗಳು ನನಗೆ ನೆನಪಿರುತ್ತೆ, ಅವ್ರ ಹೆಸರೆತ್ತಿ ಪ್ರಾರ್ಥನೆ ಮಾಡೋಕೆ ಸುಲಭ ಆಗುತ್ತೆ.”

14-15. ನಾವು ನಿರ್ದಿಷ್ಟವಾಗಿ ಪ್ರಾರ್ಥನೆ ಮಾಡೋಕೆ ಏನು ಮಾಡಬೇಕು?

14 ಏನು ಸಹಾಯ ಬೇಕಂತ ನಿರ್ದಿಷ್ಟವಾಗಿ ಹೇಳಿ. ಈ ಹಿಂದೆ ಹೇಳಿದಂತಹ ಮೈಕೆಲ್‌ ಹೀಗೆ ಹೇಳ್ತಾರೆ, “jw.org ವೆಬ್‌ಸೈಟ್‌ನಲ್ಲಿ ಜೈಲಲ್ಲಿರೋ ಸಹೋದರರ ಕಥೆಗಳನ್ನೆಲ್ಲ ಓದಿದಾಗ, ನಾನು ಅವರ ಜಾಗದಲ್ಲಿ ಇದ್ದಿದ್ರೆ ನನಗೆ ಹೇಗೆ ಅನಿಸ್ತಿತ್ತು ಅಂತ ಯೋಚ್ನೆ ಮಾಡ್ತೀನಿ. ನಾನು ನನ್ನ ಹೆಂಡತಿ ಬಗ್ಗೆ ಯೋಚನೆ ಮಾಡ್ತಿದ್ದೆ. ಅವಳು ಹೇಗಿದ್ದಾಳೋ ಏನೋ, ಅವಳು ಜೀವನ ಮಾಡೋಕೆ ಬೇಕಾಗಿರೋದು ಸಿಗ್ತಿದ್ಯೋ ಇಲ್ವೋ ಅಂತೆಲ್ಲಾ ಚಿಂತೆ ಆಗ್ತಿತ್ತು ಅಂತ ಅರ್ಥ ಮಾಡ್ಕೊತ್ತೀನಿ. ಈ ತರ ಮಾಡೋದ್ರಿಂದ ಜೈಲಲ್ಲಿರೋ ಸಹೋದರರಿಗೋಸ್ಕರ ಪ್ರಾರ್ಥನೆ ಮಾಡ್ವಾಗ ನಿರ್ದಿಷ್ಟವಾಗಿ ಏನು ಸಹಾಯ ಬೇಕಂತ ಕೇಳೋಕೆ ಆಗಿದೆ.”—ಇಬ್ರಿ. 13:3, ಪಾದಟಿಪ್ಪಣಿ.

15 ಜೈಲಲ್ಲಿ ನಮ್ಮ ಸಹೋದರರ ಜೀವನ ಹೇಗಿರುತ್ತೆ ಅಂತ ನಾವು ಯೋಚ್ನೆ ಮಾಡಬೇಕು. ಆಗ ಇನ್ನೂ ನಿರ್ದಿಷ್ಟವಾಗಿ ಪ್ರಾರ್ಥನೆ ಮಾಡೋಕೆ ಆಗುತ್ತೆ. ಉದಾಹರಣೆಗೆ, ಅಲ್ಲಿರೋ ಪೊಲೀಸರು ನಮ್ಮ ಸಹೋದರರ ಜೊತೆ ದಯೆಯಿಂದ ನಡ್ಕೊಳ್ಳೋಕೆ, ನಮ್ಮ ಸಹೋದರರು ಆರಾಧನೆ ಮಾಡೋಕೆ ಅಧಿಕಾರಿಗಳು ಸ್ವಲ್ಪ ಸ್ವಾತಂತ್ರ್ಯ ಕೊಡೋಕೆ ನಾವು ಪ್ರಾರ್ಥನೆ ಮಾಡಬಹುದು. (1 ತಿಮೊ. 2:1, 2) ಜೈಲಿಗೆ ಹೋಗಿರೋ ನಮ್ಮ ಸಹೋದರನನ್ನ ನೋಡಿ, ಇಡೀ ಸಭೆಯವರು ಪ್ರೋತ್ಸಾಹ ಪಡೆಯೋ ತರ ಮತ್ತು ಆ ಸಹೋದರನ ಒಳ್ಳೆ ನಡತೆ ನೋಡಿ ಅಲ್ಲಿರೋ ಎಲ್ರೂ ಸಿಹಿಸುದ್ದಿನ ಕೇಳಿಸ್ಕೊಳ್ಳೋ ತರ ಸಹಾಯ ಮಾಡೋಕೆ ನಾವು ಪ್ರಾರ್ಥನೆ ಮಾಡಬಹುದು. (1 ಪೇತ್ರ 2:12) ಯಾವುದೇ ರೀತಿ ಕಷ್ಟಪಡ್ತಿರೋ ಸಹೋದರರಿಗಾಗಿ ಪ್ರಾರ್ಥನೆ ಮಾಡುವಾಗ್ಲೂ ನಾವು ಇದೇ ತರಾನೇ ಯೋಚ್ನೆ ಮಾಡಬೇಕು. ನಾವು ಈ ತರ ಚೆನ್ನಾಗಿ ಗಮನಿಸಿದ್ರೆ, ಅವರ ಹೆಸರೆತ್ತಿ ಪ್ರಾರ್ಥನೆ ಮಾಡಿದ್ರೆ ಮತ್ತು ನಿರ್ದಿಷ್ಟವಾಗಿ ಏನು ಸಹಾಯ ಬೇಕು ಅಂತ ಕೇಳಿದ್ರೆ, ‘ಒಬ್ರ ಮೇಲೊಬ್ರಿಗೆ ಜಾಸ್ತಿ ಪ್ರೀತಿ’ ಇದೆ ಅಂತ ತೋರಿಸ್ಕೊಡ್ತೀವಿ.—1 ಥೆಸ. 3:12.

ದೀನತೆ ತೋರಿಸಿ

16. ಪ್ರಾರ್ಥನೆ ಮಾಡ್ವಾಗ ನಾವು ಹೇಗೆ ದೀನತೆ ತೋರಿಸಬಹುದು? (ಮತ್ತಾಯ 6:8)

16 ಪ್ರಾರ್ಥನೆಗಳಿಗೆ ಎಷ್ಟು ಶಕ್ತಿ ಇದೆ, ಅದು ಪರಿಸ್ಥಿತಿನ ಹೇಗೆ ಬದಲಾಯಿಸುತ್ತೆ ಅಂತ ನಾವು ಇಲ್ಲಿವರೆಗೂ ನೋಡಿದ್ವಿ. ಆದ್ರೆ ನಾವು ಪ್ರಾರ್ಥನೆ ಮಾಡ್ವಾಗ ದೀನತೆ ತೋರಿಸಬೇಕು. ನೆನಪಿಡಿ, ನಾವು ಪ್ರಾರ್ಥನೇಲಿ ಯೆಹೋವನಿಗೆ ಗೊತ್ತಿಲ್ಲದಿರೋ ಯಾವುದೋ ಹೊಸ ವಿಷ್ಯ ಹೇಳ್ತಿಲ್ಲ. ಯೆಹೋವನಿಗೆ ನಾವು ಹೇಳೋ ಮುಂಚೆನೇ ಎಲ್ಲಾ ಗೊತ್ತಿರುತ್ತೆ. ಈ ಕಷ್ಟನ ಹೇಗೆ ಚೆನ್ನಾಗಿ ನಿಭಾಯಿಸಬೇಕು ಅಂತ ನಾವು ಯೆಹೋವನಿಗೆ ಸಲಹೆ ಕೊಡೋ ಅಗತ್ಯನೂ ಇಲ್ಲ. ಯಾಕಂದ್ರೆ ನಾವು ಬಾಯಿ ಬಿಟ್ಟು ಕೇಳೋ ಮುಂಚೆನೇ ತನ್ನ ಸೇವಕರಿಗೆ ಏನು ಬೇಕಂತ ಆತನಿಗೆ ಗೊತ್ತಿದೆ. (ಮತ್ತಾಯ 6:8 ಓದಿ.) ಆತನಿಗೆ ಎಲ್ಲಾ ಗೊತ್ತಿದೆ ಅಂದ್ಮೇಲೆ ನಾವು ಯಾಕೆ ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡಬೇಕು? ನಮ್ಮಲ್ಲಿ ಬೇರೆಯವ್ರಿಗೋಸ್ಕರ ನಿಜವಾಗ್ಲೂ ಪ್ರೀತಿ, ಕಾಳಜಿ ಇದೆ ಅಂತ ತೋರಿಸೋಕೆ ಅವ್ರಿಗೋಸ್ಕರ ಪ್ರಾರ್ಥನೆ ಮಾಡ್ತೀವಿ. ನಾವು ಈ ತರ ಪ್ರೀತಿ ತೋರಿಸಿದಾಗ ಯೆಹೋವನಿಗೆ ತುಂಬ ಖುಷಿಯಾಗುತ್ತೆ.

17-18. ನಾವು ಬೇರೆಯವ್ರಿಗೋಸ್ಕರ ಮಾಡೋ ಪ್ರಾರ್ಥನೆ ನೋಡಿ ಯೆಹೋವನಿಗೆ ಹೇಗೆ ಅನಿಸುತ್ತೆ? ಉದಾಹರಣೆ ಕೊಡಿ.

17 ಕೆಲವೊಮ್ಮೆ ನಾವು ಎಷ್ಟೇ ಪ್ರಾರ್ಥನೆ ಮಾಡಿದ್ರು ಕಷ್ಟದ ಪರಿಸ್ಥಿತಿ ಬದಲಾಗದೆ ಇರಬಹುದು. ಹಾಗಿದ್ರೂ ನಾವು ಮಾಡಿದ ಪ್ರಾರ್ಥನೆ ಸಹೋದರ ಸಹೋದರಿಯರ ಮೇಲೆ ನಮಗೆ ಎಷ್ಟು ಪ್ರೀತಿ ಇದೆ ಅಂತ ಯೆಹೋವನಿಗೆ ತೋರಿಸುತ್ತೆ. ಯೆಹೋವ ಅದನ್ನ ನೋಡಿ ಖುಷಿಪಡ್ತಾನೆ. ಇದನ್ನ ಅರ್ಥ ಮಾಡ್ಕೊಳ್ಳೋಕ್ಕೆ ಒಂದು ಉದಾಹರಣೆ ನೋಡೋಣ. ಒಬ್ಬ ತಂದೆಗೆ ಇಬ್ರು ಮಕ್ಕಳು ಇದ್ದಾರೆ ಅಂದ್ಕೊಳ್ಳಿ. ಒಂದು ಹುಡುಗ, ಒಂದು ಹುಡುಗಿ. ಹುಡುಗ ಹುಷಾರಿಲ್ಲದೆ ನರಳ್ತಿದ್ದಾನೆ. ಆಗ ಅವನ ತಂಗಿ, ಅಪ್ಪನ ಹತ್ರ ಬಂದು, ‘ಅಪ್ಪಾ-ಅಪ್ಪಾ ಅಣ್ಣನಿಗೆ ತುಂಬಾ ಹುಷಾರಿಲ್ಲ. ದಯವಿಟ್ಟು ಏನಾದ್ರೂ ಮಾಡು . . . ಡಾಕ್ಟರ್‌ ಹತ್ರ ಹೋಗೋಣ ಬಾ’ ಅಂತ ಹೇಳ್ತಾಳೆ. ಅಪ್ಪನಿಗೆ ಈಗಾಗಲೇ ಮಗನಿಗೆ ಹುಷಾರಿಲ್ಲ ಅಂತ ಗೊತ್ತಿದೆ. ಏನು ಮಾಡಬೇಕು ಅಂತ ಅವರು ಯೋಚ್ನೆನೂ ಮಾಡಿದ್ದಾರೆ. ಹಾಗಿದ್ರೂ ತಂಗಿ ಅಣ್ಣನಿಗೋಸ್ಕರ ಈ ತರ ಪ್ರೀತಿ ತೋರಿಸೋದನ್ನ ನೋಡಿದಾಗ ಅಪ್ಪನಿಗೆ ಎಷ್ಟು ಖುಷಿ ಆಗುತ್ತಲ್ವಾ?

18 ಆ ತಂಗಿ ತರಾನೇ ನಾವು ನಡ್ಕೊಬೇಕು ಅಂತ ಯೆಹೋವನು ಇಷ್ಟಪಡ್ತಾನೆ. ನಾವು ಒಬ್ರನ್ನೊಬ್ರು ಪ್ರೀತಿಸಬೇಕು, ಒಬ್ರು ಇನ್ನೊಬ್ರಿಗೋಸ್ಕರ ಪ್ರಾರ್ಥಿಸಬೇಕು. ನಾವು ಬೇರೆಯವ್ರಿಗೋಸ್ಕರ ಮಾಡೋ ಪ್ರಾರ್ಥನೆಗಳು ನಮ್ಮಲ್ಲಿ ಎಷ್ಟರ ಮಟ್ಟಿಗೆ ನಿಸ್ವಾರ್ಥ ಪ್ರೀತಿ ಇದೆ ಅಂತ ತೋರಿಸುತ್ತೆ. ಯೆಹೋವನು ಅದನ್ನ ಗಮನಿಸ್ತಾನೆ, ನಮ್ಮನ್ನ ನೋಡಿ ಖುಷಿಪಡ್ತಾನೆ. (2 ಥೆಸ. 1:3; ಇಬ್ರಿ. 6:10) ನಾವು ಇಲ್ಲಿವರೆಗೂ ಕಲಿತಂತೆ, ಕೆಲವೊಮ್ಮೆ ನಾವು ಮಾಡೋ ಪ್ರಾರ್ಥನೆಗಳು ಪರಿಸ್ಥಿತಿಯನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಡುತ್ತೆ. ಹಾಗಾಗಿ ಇದನ್ನ ನಾವು ಯಾವಾಗ್ಲೂ ಮನಸ್ಸಲ್ಲಿ ಇಟ್ಕೊಳ್ಳೋಣ ಒಬ್ರು ಇನ್ನೊಬ್ರಿಗೋಸ್ಕರ ಯಾವಾಗ್ಲೂ ಪ್ರಾರ್ಥಿಸ್ತಾ ಇರೋಣ.

ನೀವೇನು ಹೇಳ್ತೀರಾ?

  • ‘ಪ್ರಾರ್ಥನೆಗೆ ತುಂಬ ಶಕ್ತಿ’ ಇದೆ ಅಂತ ನಾವು ಯಾಕೆ ಹೇಳಬಹುದು?

  • ನಮ್ಮ ಸಹೋದರರನ್ನೆಲ್ಲಾ ಮನಸ್ಸಲ್ಲಿಟ್ಟು ನಾವು ಯಾಕೆ ಪ್ರಾರ್ಥನೆ ಮಾಡಬೇಕು?

  • ನಾವು ಒಬ್ಬೊಬ್ರ ಹೆಸರೆತ್ತಿ ಪ್ರಾರ್ಥನೆ ಮಾಡೋಕೆ ಏನು ಮಾಡಬೇಕು?

ಗೀತೆ 101 ಬಾಳೋಣ ಐಕ್ಯದಿ

a ಕೆಲವ್ರ ಹೆಸ್ರನ್ನ ಬದಲಾಯಿಸಲಾಗಿದೆ.

b jw.orgನಲ್ಲಿ ಟಕೇಶಿ ಶಿಮಿಜು: ಯೆಹೋವನು “ಪ್ರಾರ್ಥನೆಯನ್ನು ಕೇಳುವವನು” ಅನ್ನೋ ವಿಡಿಯೋ ನೋಡಿ.

c ಜೈಲಲ್ಲಿರೋ ನಮ್ಮ ಸಹೋದರ ಸಹೋದರಿಯರ ಹೆಸ್ರುಗಳನ್ನ ತಿಳ್ಕೊಳ್ಳೋಕೆ, jw.orgನಲ್ಲಿ “Jehovah’s Witnesses Imprisoned for Their Faith—By Location” ಅಂತ ಹುಡುಕಿ.

d ಚಿತ್ರ ವಿವರಣೆ: ಸಹೋದರ ಸಹೋದರಿಯರಿಗೆ ತಮ್ಮದೇ ಆದ ಕಷ್ಟಗಳಿದ್ರೂ ಬೇರೆಯವ್ರಿಗೋಸ್ಕರ ಪ್ರಾರ್ಥನೆ ಮಾಡ್ತಿದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ