ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ನವೆಂಬರ್‌ ಪು. 16-21
  • ಯೇಸು—ಅನುಕಂಪ ಇರೋ ಮಹಾ ಪುರೋಹಿತ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು—ಅನುಕಂಪ ಇರೋ ಮಹಾ ಪುರೋಹಿತ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರ ಮುದ್ದು ಮಗ ಭೂಮಿಗೆ ಬಂದನು
  • ಯೇಸು ಜನ್ರಿಗೆ ಅನುಕಂಪ ತೋರಿಸಿದನು
  • ಮಹಾ ಪುರೋಹಿತನನ್ನ ಅನುಕರಿಸಿ
  • ಮಹಾ ಪುರೋಹಿತ ನಿಮಗೂ ಸಹಾಯ ಮಾಡ್ತಾನೆ
  • ಪ್ರೀತಿ ನ್ಯಾಯಕ್ಕೆ ಸಾಕ್ಷಿಯಾದ ಬಿಡುಗಡೆ ಬೆಲೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಯೇಸು 40 ದಿನಗಳಲ್ಲಿ ಕಲಿಸಿದ ಪಾಠಗಳು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ನವೆಂಬರ್‌ ಪು. 16-21

ಅಧ್ಯಯನ ಲೇಖನ 46

ಗೀತೆ 17 “ ನನಗೆ ಮನಸ್ಸಿದೆ”

ಯೇಸು—ಅನುಕಂಪ ಇರೋ ಮಹಾ ಪುರೋಹಿತ

“ನಮ್ಮ ಮಹಾ ಪುರೋಹಿತನಿಗೆ ನಮ್ಮ ಬಲಹೀನತೆಗಳನ್ನ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ.”—ಇಬ್ರಿ. 4:15.

ಈ ಲೇಖನದಲ್ಲಿ ಏನಿದೆ?

ಯೇಸು ಅನುಕಂಪ ಮತ್ತು ದಯೆ ತೋರಿಸೋ ಮಹಾ ಪುರೋಹಿತ. ಆತನು ಮಾಡೋ ಈ ಸೇವೆಯಿಂದ ನಮಗೆ ಇವತ್ತು ಹೇಗೆ ಸಹಾಯ ಆಗುತ್ತೆ ಅಂತ ನೋಡೋಣ.

1-2. (ಎ) ಯೆಹೋವನು ತನ್ನ ಮಗನನ್ನ ಈ ಭೂಮಿಗೆ ಯಾಕೆ ಕಳುಹಿಸಿದನು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ? (ಇಬ್ರಿಯ 5:7-9)

ಸುಮಾರು 2000 ವರ್ಷಗಳ ಹಿಂದೆ, ಯೆಹೋವನು ತನ್ನ ಪ್ರೀತಿಯ ಮಗನನ್ನ ಭೂಮಿಗೆ ಕಳುಹಿಸಿದನು. ಯಾಕೆ? ಒಂದು, ಮನುಷ್ಯರು ಅನುಭವಿಸ್ತಿದ್ದ ಪಾಪ ಮತ್ತು ಮರಣವನ್ನ ತೆಗೆದುಹಾಕೋಕೆ. ಎರಡು, ಸೈತಾನನಿಂದ ಆಗ್ತಿರೋ ಎಲ್ಲ ಸಮಸ್ಯೆಗಳನ್ನ ತೆಗೆದುಹಾಕೋಕೆ. (ಯೋಹಾ. 3:16; 1 ಯೋಹಾ. 3:8) ಯೇಸು ಭೂಮಿಗೆ ಬಂದಿದ್ರಿಂದ ಮುಂದೆ ಆತನು ಅನುಕಂಪ ಮತ್ತು ದೀನತೆ ಇರೋ ಮಹಾ ಪುರೋಹಿತನಾಗೋಕೆ ಸಹಾಯ ಮಾಡುತ್ತೆ ಅಂತ ಯೆಹೋವನಿಗೆ ಗೊತ್ತಿತ್ತು. ಕ್ರಿಸ್ತ ಶಕ 29ರಲ್ಲಿ ಯೇಸು ದೀಕ್ಷಾಸ್ನಾನ ತಗೊಂಡ ಮೇಲೆ ಆತನು ಮಹಾ ಪುರೋಹಿತನಾದನು.a

2 ಈ ಲೇಖನದಲ್ಲಿ, ಯೇಸು ಭೂಮಿಗೆ ಮನುಷ್ಯನಾಗಿ ಬಂದಿದ್ದು ಆತನು ಮಹಾ ಪುರೋಹಿತನಾಗೋಕೆ ಹೇಗೆ ಸಹಾಯ ಮಾಡ್ತು ಅಂತ ನೋಡೋಣ. ಇದನ್ನ ತಿಳ್ಕೊಳ್ಳೋದು ಯಾಕೆ ಮುಖ್ಯ? ಇದನ್ನ ತಿಳ್ಕೊಂಡ್ರೆ, (1) ನಾವು ತಪ್ಪು ಮಾಡಿದಾಗ ಯೆಹೋವನಿಂದ ದೂರ ಹೋಗಲ್ಲ. (2) ನಾವು ಆತನಿಗೆ ಪ್ರಾರ್ಥನೆ ಮಾಡಿ ಇನ್ನೂ ಹತ್ರ ಆಗೋಕೆ ಇದು ಸಹಾಯ ಮಾಡುತ್ತೆ.—ಇಬ್ರಿಯ 5:7-9 ಓದಿ.

ದೇವರ ಮುದ್ದು ಮಗ ಭೂಮಿಗೆ ಬಂದನು

3-4. (ಎ) ಯೇಸು ಏನನ್ನ ಬಿಟ್ಟು ಬಂದನು? (ಬಿ) ಭೂಮಿಯಲ್ಲಿ ಆತನ ಜೀವನ ಹೇಗಿತ್ತು?

3 ಅನೇಕರ ಪರಿಸ್ಥಿತಿ ಬದಲಾಗುತ್ತೆ. ಕೆಲವೊಂದು ಸರಿ ನಾವು ಇಷ್ಟಪಡೋ ಫ್ರೆಂಡ್ಸ್‌ನ, ಕುಟುಂಬನ, ಮನೆನ ಬಿಟ್ಟು ಬೇರೆ ಕಡೆ ಹೋಗಬೇಕಾಗುತ್ತೆ. ಅದು ನಮಗೆ ಕಷ್ಟನೇ. ಆದ್ರೆ ನಮ್ಮೆಲ್ರಿಗಿಂತ ಜಾಸ್ತಿ ಬದಲಾವಣೆ ಆಗಿದ್ದು ಯೇಸುಗೆ. ಯೇಸು ಸ್ವರ್ಗದಲ್ಲಿದ್ದಾಗ ಆತನಿಗೆ ದೊಡ್ಡ ಸ್ಥಾನಮಾನ ಇತ್ತು. ಪ್ರತಿಕ್ಷಣ ಯೆಹೋವನ ಜೊತೆ ಇದ್ದು ಆತನ ಪ್ರೀತಿನ ಸವಿದು ನೋಡ್ತಿದ್ದನು. ಯೆಹೋವನ “ಪಕ್ಕದಲ್ಲೇ” ಇದ್ದು ಖುಷಿ-ಖುಷಿಯಾಗಿ ಕೆಲಸ ಮಾಡ್ತಿದ್ದನು. (ಕೀರ್ತ. 16:11; ಜ್ಞಾನೋ. 8:30) ಆದ್ರೂ “ತನ್ನದು ಅಂತ ಏನೆಲ್ಲ ಇತ್ತೋ ಅದನ್ನೆಲ್ಲ ಬಿಟ್ಟು” ಯೇಸು ಈ ಭೂಮಿಗೆ ಬಂದನು, ಅಪರಿಪೂರ್ಣ ಮನುಷ್ಯರ ಜೊತೆ ಜೀವನ ಮಾಡಿದನು.—ಫಿಲಿ. 2:7.

4 ಯೇಸು ಹುಟ್ಟಿದಾಗ ಅವನ ಪರಿಸ್ಥಿತಿ ಹೇಗಿತ್ತು ಗೊತ್ತಾ? ಅವನ ಕುಟುಂಬ ತುಂಬ ಬಡತನದಲ್ಲಿತ್ತು. ಅದಕ್ಕೇ ಅವರು ಆಡು ಅಥವಾ ಕುರಿನ ಬಲಿ ಕೊಡೋಕಾಗ್ಲಿಲ್ಲ. ಬರೀ ಎರಡು ಪಾರಿವಾಳ ಮರಿಗಳನ್ನ ಬಲಿಯಾಗಿ ಕೊಟ್ರು. (ಯಾಜ. 12:8; ಲೂಕ 2:24) ಯೇಸು ಹುಟ್ಟಿದ್ದಾನೆ ಅಂತ ರಾಜ ಹೆರೋದನಿಗೆ ಗೊತ್ತಾದಾಗ ಆತನನ್ನ ಕೊಲ್ಲಬೇಕು ಅಂತ ಸಂಚು ಹಾಕಿದ. ಹೆರೋದನಿಂದ ತಪ್ಪಿಸ್ಕೊಳ್ಳೋಕೆ ಯೇಸುವಿನ ಕುಟುಂಬ ಈಜಿಪ್ಟ್‌ಗೆ ಓಡಿ ಹೋಯ್ತು. (ಮತ್ತಾ. 2:13, 15) ಸ್ವರ್ಗದಲ್ಲಿ ಯೇಸು ಇದ್ದ ಜೀವನಕ್ಕೂ ಭೂಮಿಯಲ್ಲಿದ್ದ ಜೀವನಕ್ಕೂ ಎಷ್ಟು ವ್ಯತ್ಯಾಸ ಅಲ್ವಾ!

5. (ಎ) ಯೇಸು ಭೂಮಿಲಿದ್ದಾಗ ಏನೆಲ್ಲ ನೋಡಿದನು? (ಬಿ) ಅನುಕಂಪ ಇರೋ ಮಹಾ ಪುರೋಹಿತನಾಗೋಕೆ ಇದು ಆತನಿಗೆ ಹೇಗೆ ಸಹಾಯ ಮಾಡ್ತು? (ಚಿತ್ರ ನೋಡಿ.)

5 ಯೇಸು ಬೆಳಿತಾ-ಬೆಳಿತಾ ತನ್ನ ಸುತ್ತಮುತ್ತ ಇರೋ ಜನ್ರು ಎಷ್ಟು ಕಷ್ಟ ಅನುಭವಿಸ್ತಿದ್ದಾರೆ ಅಂತ ನೋಡಿದನು. ಆತನು ತನಗೆ ತುಂಬ ಬೇಕಾದ ಕೆಲವ್ರನ್ನ ಕಳ್ಕೊಂಡನು. ಅವ್ರಲ್ಲಿ ತನ್ನ ಸಾಕು ತಂದೆ ಯೋಸೇಫನೂ ಒಬ್ಬ. ಯೇಸು ಸಿಹಿಸುದ್ದಿ ಸಾರುವಾಗ ಕುಷ್ಠ ರೋಗಿಗಳನ್ನ, ಕುಂಟರನ್ನ, ಅಂಗವಿಕಲರನ್ನ, ಕುರುಡರನ್ನ, ಮೂಕರನ್ನ ಮತ್ತು ಮಕ್ಕಳನ್ನ ಕಳ್ಕೊಂಡಿದ್ದ ಹೆತ್ತವ್ರನ್ನ, ಅವರ ನೋವನ್ನ ಕಣ್ಣಾರೆ ನೋಡ್ತಿದ್ದನು. (ಮತ್ತಾ. 9:2, 6; 15:30; 20:34; ಮಾರ್ಕ 1:40, 41; ಲೂಕ 7:13) ಯೇಸು ಸ್ವರ್ಗದಲ್ಲಿದ್ದಾಗ್ಲೂ ಜನ್ರು ಅನುಭವಿಸ್ತಿದ್ದ ಕಷ್ಟವನ್ನ ನೋಡ್ತಿದ್ದನು ನಿಜ. ಆದ್ರೆ ಭೂಮಿಯಲ್ಲಿದ್ದಾಗ ಜನ್ರು ಅನುಭವಿಸ್ತಿದ್ದ ಒಂದೊಂದು ಕಷ್ಟನ, ನೋವನ್ನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಂಡನು. (ಯೆಶಾ. 53:4) ಜನ್ರು ಅನುಭವಿಸ್ತಿದ್ದ ಕಷ್ಟಗಳಿಂದ ಅವ್ರಿಗೆ ಅಳು, ನೋವು, ಕೋಪ ಬರುತ್ತೆ ಅಂತಾನೂ ಅರ್ಥ ಮಾಡ್ಕೊಂಡನು. ಅಷ್ಟೇ ಅಲ್ಲ ಭೂಮಿಯಲ್ಲಿದ್ದಾಗ ಯೇಸುಗೂ ಸುಸ್ತಾಯ್ತು, ಬೇಜಾರಾಯ್ತು ಮತ್ತು ನೋವಾಯ್ತು.

ಯೇಸು ಸುತ್ತಲೂ ಜನ ಗುಂಪುಗೂಡಿ ತಮ್ಮ ಕಾಯಿಲೆಗಳನ್ನ ವಾಸಿ ಮಾಡುವಂತೆ ಬೇಡ್ತಿದ್ದಾರೆ. ನಡೆಯಲಾಗದ ವಯಸ್ಸಾದ ವ್ಯಕ್ತಿಯ ಕೈಯನ್ನ ಯೇಸು ಕನಿಕರದಿಂದ ಹಿಡಿದಿದ್ದಾನೆ.

ಜನ್ರ ಕಡೆಗೆ ಯೇಸುಗೆ ಅನುಕಂಪ ಮತ್ತು ಕಾಳಜಿ ಇತ್ತು (ಪ್ಯಾರ 5 ನೋಡಿ)


ಯೇಸು ಜನ್ರಿಗೆ ಅನುಕಂಪ ತೋರಿಸಿದನು

6. ಯೆಶಾಯನ ಭವಿಷ್ಯವಾಣಿ ಯೇಸುವಿನ ಅನುಕಂಪ ಮತ್ತು ದಯೆ ಬಗ್ಗೆ ಏನು ಹೇಳುತ್ತೆ? (ಯೆಶಾಯ 42:3)

6 ಸಮಾಜ ಕೀಳಾಗಿ ನೋಡ್ತಿದ್ದ ಜನ್ರಿಗೂ ಯೇಸು ಅನುಕಂಪ ತೋರಿಸಿದನು. ಆತನು ಈ ತರ ನಡ್ಕೊಂಡಿದ್ರಿಂದ ಎಷ್ಟೋ ಭವಿಷ್ಯವಾಣಿಗಳನ್ನ ನೆರವೇರಿಸಿದನು. ಅದ್ರಲ್ಲಿ ಒಂದು, ಯೆಶಾಯನ ಭವಿಷ್ಯವಾಣಿ. ಹೀಬ್ರು ವಚನಗಳಲ್ಲಿ, ಯೆಹೋವನ ಮೇಲೆ ಬಲವಾದ ನಂಬಿಕೆ ಇರೋರನ್ನ ಕೆಲವೊಮ್ಮೆ ‘ಚೆನ್ನಾಗಿ ನೀರು ಹಾಕಿ ಬೆಳೆಸಿದ ತೋಟಕ್ಕೆ ಅಥವಾ ಒಂದು ದೊಡ್ಡ ಬೆಳೆದ ಮರಕ್ಕೆ’ ಹೋಲಿಸಲಾಗಿದೆ. (ಕೀರ್ತ. 92:12; ಯೆಶಾ. 61:3; ಯೆರೆ. 31:12) ಆದ್ರೆ ದಿಕ್ಕುದೆಸೆ ಇಲ್ಲದ ಜನ್ರನ್ನ ‘ಜಜ್ಜಿದ ದಂಟಿಗೆ ಮತ್ತು ಆರಿಹೋಗೋ ದೀಪಕ್ಕೆ’ ಹೋಲಿಸಲಾಗಿದೆ. (ಯೆಶಾಯ 42:3 ಓದಿ; ಮತ್ತಾ. 12:20) ಯೆಹೋವನ ಸಹಾಯದಿಂದ ಯೆಶಾಯನು ಈ ಮಾತುಗಳನ್ನ ಬರೆದ. ಇದ್ರಿಂದ ಸಮಾಜದಲ್ಲಿ ಕೀಳಾಗಿ ನೋಡ್ತಿದ್ದ ಜನ್ರ ಕಡೆಗೆ ಯೇಸು ಪ್ರೀತಿ ಮತ್ತು ಕಾಳಜಿ ತೋರಿಸ್ತಾನೆ ಅಂತ ಅರ್ಥ ಮಾಡ್ಕೊಳ್ಳೋಕಾಯ್ತು.

7-8. ಯೆಶಾಯನ ಭವಿಷ್ಯವಾಣಿಯನ್ನ ಯೇಸು ಹೇಗೆ ನೆರವೇರಿಸಿದನು?

7 ಯೆಶಾಯ ಹೇಳಿದ ಭವಿಷ್ಯವಾಣಿಯನ್ನ ಯೇಸು ನೆರವೇರಿಸಿದನು ಅಂತ ಮತ್ತಾಯ ಬರೆದ. ಅದಕ್ಕೆ ಅವನು, ‘ಯೇಸು ಜಜ್ಜಿದ ದಂಟನ್ನ ಮುರಿದು ಹಾಕಲ್ಲ, ಆರಿಹೋಗೋ ದೀಪವನ್ನ ಆರಿಸಲ್ಲ’ ಅಂತ ಹೇಳಿದ. ಬೇರೆಯವ್ರಿಂದ ಅನ್ಯಾಯ ಅನುಭವಿಸಿದವ್ರಿಗೆ, ಜೀವನದಲ್ಲಿ ನಿರೀಕ್ಷೆ ಇಲ್ಲದವ್ರಿಗೆ ಯೇಸು ಅನೇಕ ಅದ್ಭುತಗಳನ್ನ ಮಾಡಿದನು. ಉದಾಹರಣೆಗೆ, ಒಬ್ಬ ವ್ಯಕ್ತಿಗೆ ಮೈಯೆಲ್ಲಾ ಕುಷ್ಠ ಇತ್ತು. ಅವನು ತನ್ನ ಕುಟುಂಬದವ್ರ ಜೊತೆ, ಸ್ನೇಹಿತರ ಜೊತೆ ಸಮಯ ಕಳೆದು ಎಷ್ಟೋ ವರ್ಷ ಆಗಿತ್ತು. ‘ನಾನಿನ್ನು ಯಾವತ್ತೂ ವಾಸಿ ಆಗಲ್ಲ’ ಅನ್ನೋ ಕೊರಗು ಅವನಿಗಿತ್ತು. (ಲೂಕ 5:12, 13) ಯೇಸು ಇನ್ನೊಬ್ಬ ವ್ಯಕ್ತಿಯನ್ನ ಭೇಟಿ ಮಾಡ್ತಾನೆ. ಅವನಿಗೆ ಕಿವಿ ಕೇಳಿಸ್ತಿರಲಿಲ್ಲ, ತೊದಲು ಮಾತಾಡ್ತಿದ್ದ. ಬೇರೆಯವರು ಪಟಪಟ ಅಂತ ಮಾತಾಡ್ತಿದ್ದನ್ನ ನೋಡಿ ‘ಅಯ್ಯೋ, ನಾನು ಇವ್ರ ತರ ಇಲ್ವಲ್ಲಾ’ ಅನ್ನೋ ನೋವಿದ್ದಿರಬಹುದು. ಇವ್ರಿಬ್ರಿಗೂ ಯಾರು ಸಹಾಯ ಮಾಡ್ತಾರೆ?—ಮಾರ್ಕ 7:32, 33.

8 ಯೇಸುವಿನ ದಿನಗಳಲ್ಲಿ, ಯೆಹೂದ್ಯರು ಅಂಗವಿಕಲರನ್ನ ತುಂಬ ಕೀಳಾಗಿ ನೋಡ್ತಿದ್ರು. ಅವ್ರ ಈ ಸ್ಥಿತಿಗೆ ಅವರು ಮಾಡಿದ ಪಾಪ ಅಥವಾ ಅವ್ರ ಅಪ್ಪ-ಅಮ್ಮ ಮಾಡಿದ ಪಾಪನೇ ಕಾರಣ ಅಂತ ನಂಬ್ತಿದ್ರು. (ಯೋಹಾ. 9:2) ಅವ್ರನ್ನ ಮೂಲೆ ಗುಂಪು ಮಾಡ್ತಿದ್ರು. ಹೀಗೆ ಅವ್ರಿಗೆ ‘ನಾವು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸ್ತಿತ್ತು. ಆದ್ರೆ ಯೇಸು ಅಂಥವ್ರನ್ನ ವಾಸಿ ಮಾಡಿದನು ಮತ್ತು ಯೆಹೋವ ಅವ್ರನ್ನ ಎಷ್ಟು ಪ್ರೀತಿಸ್ತಾನೆ ಅಂತ ಧೈರ್ಯ ತುಂಬಿಸಿದನು. ಇದ್ರಿಂದ ಯೇಸು ಬಗ್ಗೆ ನಮಗೇನು ಗೊತ್ತಾಗುತ್ತೆ?

9. ಯೇಸು ಹೇಗೆಲ್ಲ ಅನುಕಂಪ ತೋರಿಸಿದನು? (ಇಬ್ರಿಯ 4:15, 16)

9 ಇಬ್ರಿಯ 4:15, 16 ಓದಿ. ಯೇಸು ಜನ್ರಿಗೆ ಹೇಗೆ ಅನುಕಂಪ ತೋರಿಸಿದ್ನೋ, ನಮಗೂ ಹಾಗೆ ಅನುಕಂಪ ತೋರಿಸ್ತಾನೆ ಅಂತ ಭರವಸೆಯಿಂದ ಹೇಳಬಹುದು. ಅನುಕಂಪ ಇರೋ ವ್ಯಕ್ತಿ ಇನ್ನೊಬ್ರ ನೋವನ್ನ, ಭಾವನೆಗಳನ್ನ ಅರ್ಥ ಮಾಡ್ಕೊಳ್ತಾನೆ ಮತ್ತು ಸಹಾಯ ಮಾಡೋಕೆ ಮುಂದೆ ಬರ್ತಾನೆ. “ಅನುಕಂಪ” ಅನ್ನೋ ಗ್ರೀಕ್‌ ಪದದ ಅರ್ಥ, ಒಬ್ಬ ವ್ಯಕ್ತಿಯ ಕಷ್ಟ, ನೋವನ್ನ ಅರ್ಥ ಮಾಡ್ಕೊಂಡು ನಾವೂ ಆ ನೋವನ್ನ ಅನುಭವಿಸೋದನ್ನ ಸೂಚಿಸುತ್ತೆ. (ಇಬ್ರಿಯ 10:34 ನೋಡಿ, ಇಲ್ಲಿ ಪೌಲನೂ ಅದೇ ಗ್ರೀಕ್‌ ಪದವನ್ನ ಬಳಸಿದ್ದಾನೆ.) ಜನ್ರನ್ನ ವಾಸಿ ಮಾಡೋದನ್ನ ಯೇಸು, ಬರೀ ಒಂದು ಕೆಲಸದ ತರ ನೋಡಲಿಲ್ಲ. ಬದಲಿಗೆ ಅವರ ನೋವು, ಕಷ್ಟವನ್ನ ಅರ್ಥ ಮಾಡ್ಕೊಂಡು ಅವ್ರಿಗೆ ಸಹಾಯ ಮಾಡಿದನು. ಉದಾಹರಣೆಗೆ, ಯೇಸು ಕುಷ್ಠ ರೋಗಿಯನ್ನ ದೂರದಿಂದಲೇ ನಿಂತು ವಾಸಿ ಮಾಡಬಹುದಿತ್ತು. ಆದ್ರೆ ಯೇಸು ಅವನನ್ನ ಮುಟ್ಟಿ ವಾಸಿ ಮಾಡಿದನು. ಬಹುಶಃ ಎಷ್ಟೋ ವರ್ಷಗಳ ನಂತ್ರ ಬೇರೊಬ್ಬ ವ್ಯಕ್ತಿ ತನ್ನನ್ನ ಪ್ರೀತಿಯಿಂದ ಮುಟ್ಟೋದನ್ನ ಅವನು ನೋಡಿದ! ಆಮೇಲೆ ಕಿವಿ ಕೇಳದೇ ಇರೋ ವ್ಯಕ್ತಿನ ಜನ್ರಿಂದ ದೂರ ಕರ್ಕೊಂಡು ಹೋಗಿ ಗದ್ದಲ ಇಲ್ಲದ ಜಾಗದಲ್ಲಿ ಯೇಸು ವಾಸಿ ಮಾಡಿದನು. ಅಷ್ಟೇ ಅಲ್ಲ, ಒಬ್ಬ ಸ್ತ್ರೀ ಈ ಹಿಂದೆ ತುಂಬ ಕೆಟ್ಟ ಕೆಲಸಗಳನ್ನ ಮಾಡಿದ್ದಳು. ಆದ್ರೆ ಈಗ ಬದಲಾಗಿ ಕಣ್ಣೀರಿಂದ ಯೇಸುವಿನ ಕಾಲನ್ನ ತೊಳೆದಳು. ಆದ್ರೆ ಒಬ್ಬ ಫರಿಸಾಯ ಅವಳನ್ನ ಕೀಳಾಗಿ ನೋಡಿದನು. ಆದ್ರೆ ಯೇಸು ಆ ಸ್ತ್ರೀ ಪರವಾಗಿ ಮಾತಾಡಿ, ಆ ಫರಿಸಾಯನನ್ನ ತಿದ್ದಿದನು. (ಮತ್ತಾ. 8:3; ಮಾರ್ಕ 7:33; ಲೂಕ 7:44) ಇದ್ರಿಂದ ಏನು ಗೊತ್ತಾಗುತ್ತೆ? ಕಷ್ಟ ಪಡ್ತಿದ್ದವ್ರನ್ನ, ಗಂಭೀರ ತಪ್ಪು ಮಾಡಿದವ್ರನ್ನ ಯೇಸು ಯಾವತ್ತೂ ಕೀಳಾಗಿ ನೋಡಲಿಲ್ಲ. ಬದಲಿಗೆ ಪ್ರೀತಿಯಿಂದ ಅವ್ರನ್ನ ಹತ್ರ ಕರ್ಕೊಂಡು ಅನುಕಂಪ ತೋರಿಸಿದನು. ಯೇಸು ನಮಗೂ ಅನುಕಂಪ ತೋರಿಸ್ತಾನೆ ಅನ್ನೋದ್ರಲ್ಲಿ ಸಂಶಯನೇ ಇಲ್ಲ ಅಂತ ಗೊತ್ತಾಗುತ್ತೆ.

ಮಹಾ ಪುರೋಹಿತನನ್ನ ಅನುಕರಿಸಿ

10. ಯೆಹೋವನಿಗೆ ಹತ್ರ ಆಗೋಕೆ ಕಿವಿ ಕೇಳಿಸದವ್ರಿಗೆ ಮತ್ತು ಕಣ್ಣು ಕಾಣಿಸದವ್ರಿಗೆ ಯಾವೆಲ್ಲ ಸಾಧನಗಳಿವೆ? (ಚಿತ್ರ ನೋಡಿ.)

10 ಯೇಸುವಿನ ಹಿಂಬಾಲಕರಾದ ನಾವು ಆತನ ತರ ಬೇರೆಯವ್ರಿಗೆ ಪ್ರೀತಿ, ಅನುಕಂಪ ಮತ್ತು ಕರುಣೆ ತೋರಿಸಬೇಕು. (1 ಪೇತ್ರ 2:21; 3:8) ನಿಜ, ನಾವು ಯೇಸು ತರ ಅದ್ಭುತ ಮಾಡಿ ವಾಸಿ ಮಾಡೋಕ್ಕಾಗಲ್ಲ. ಆದ್ರೆ ಯೆಹೋವನ ಬಗ್ಗೆ ತಿಳ್ಕೊಳ್ಳೋಕೆ, ಆತನಿಗೆ ಹತ್ರ ಆಗೋಕೆ ನಾವು ಜನ್ರಿಗೆ ಸಹಾಯ ಮಾಡಬಹುದು. ಉದಾಹರಣೆಗೆ, ಕಿವಿ ಕೇಳಿಸದವ್ರಿಗಂತ ಈಗ 100ಕ್ಕೂ ಹೆಚ್ಚು ಸನ್ನೆ ಭಾಷೆಗಳಲ್ಲಿ ಬೈಬಲ್‌ ಪ್ರಕಾಶನಗಳಿವೆ. ಸರಿಯಾಗಿ ಕಣ್ಣು ಕಾಣಿಸದವ್ರಿಗೆ ಬ್ರೇಲ್‌ ಪ್ರಕಾಶನಗಳು 60ಕ್ಕೂ ಹೆಚ್ಚು ಭಾಷೆಗಳಲ್ಲಿವೆ. ಇದ್ರ ಜೊತೆಗೆ 100ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಡಿಯೋಗಳ ಆಡಿಯೋ ವಿವರಣೆಗಳಿವೆ. ಈ ಎಲ್ಲಾ ಸಾಧನಗಳಿಂದ ಇಂಥವರು ಯೆಹೋವನಿಗೆ ಮತ್ತು ಆತನ ಮಗನಿಗೆ ಹತ್ರ ಆಗೋಕೆ ಆಗ್ತಿದೆ.

ಚಿತ್ರ: 1. ಸನ್ನೆ ಭಾಷೆಯ ಕೂಟದಲ್ಲಿ ಸಹೋದರ ಸಹೋದರಿಯರು ರಾಜ್ಯಗೀತೆನ ಸನ್ನೆ ಭಾಷೆಯಲ್ಲಿ ಹಾಡ್ತಿದ್ದಾರೆ. 2. ಕಣ್ಣು ಕಾಣದ ಒಬ್ಬ ಸಹೋದರಿ ಬೈಬಲನ್ನ ಬ್ರೈಲ್‌ ಭಾಷೆಯಲ್ಲಿ ಓದುತ್ತಿದ್ದಾರೆ.

ನಮ್ಮ ಪ್ರಕಾಶನಗಳು 1000ಕ್ಕೂ ಹೆಚ್ಚು ಭಾಷೆಗಳಲ್ಲಿವೆ

ಎಡ: ನಮ್ಮ ಪ್ರಕಾಶನಗಳು 100ಕ್ಕೂ ಹೆಚ್ಚು ಸನ್ನೆ ಭಾಷೆಗಳಲ್ಲಿವೆ

ಬಲ: ನಮ್ಮ ಪ್ರಕಾಶನಗಳು ಬ್ರೇಲ್‌ನಲ್ಲಿ 60ಕ್ಕೂ ಹೆಚ್ಚು ಭಾಷೆಗಳಲ್ಲಿವೆ

(ಪ್ಯಾರ 10 ನೋಡಿ)


11. ಯೇಸು ತರಾನೇ ಇವತ್ತು ಯೆಹೋವನ ಸಂಘಟನೆ ಎಲ್ಲ ಜನ್ರಿಗೆ ಹೇಗೆ ಅನುಕಂಪ ತೋರಿಸ್ತಿದೆ? (ಅಪೊಸ್ತಲರ ಕಾರ್ಯ 2:5-7, 33) (ಚಿತ್ರ ನೋಡಿ.)

11 ಎಲ್ಲಾ ರೀತಿಯ ಜನ್ರು ಯೆಹೋವನಿಗೆ ಹತ್ರ ಆಗೋಕೆ ಆತನ ಸಂಘಟನೆ ಸಹಾಯ ಮಾಡುತ್ತೆ. ಒಂದನೇ ಶತಮಾನದಲ್ಲಿ ನಡೆದ ಐವತ್ತನೇ ದಿನದ ಹಬ್ಬದಲ್ಲಿ ಏನಾಯ್ತು ಅಂತ ನೆನಪಿದ್ಯಾ? ಅಲ್ಲಿ ಒಟ್ಟು ಸೇರಿದ್ದ ಶಿಷ್ಯರಿಗೆ ಯೇಸು ಪವಿತ್ರಶಕ್ತಿಯನ್ನ ಸುರಿಸಿದನು. ಆಗ ಅವರು ಜನ್ರ ಹತ್ರ ಅವ್ರವ್ರ “ಮಾತೃಭಾಷೆಯಲ್ಲಿ” ಸಿಹಿಸುದ್ದಿಯನ್ನ ಸಾರಿದ್ರು. (ಅಪೊಸ್ತಲರ ಕಾರ್ಯ 2:5-7, 33 ಓದಿ.) ಅದೇ ತರ ಇವತ್ತು ಯೇಸುವಿನ ಸಹಾಯದಿಂದ ಸಂಘಟನೆ ಸುಮಾರು 1000ಕ್ಕೂ ಹೆಚ್ಚು ಭಾಷೆಗಳಲ್ಲಿ ಬೈಬಲ್‌ ಪ್ರಕಾಶನಗಳನ್ನ ಬಿಡುಗಡೆ ಮಾಡಿದೆ. ಕೇವಲ ಕೆಲವು ಜನ್ರು ಮಾತಾಡೋ ಭಾಷೆಯಲ್ಲೂ ಪ್ರಕಾಶನಗಳನ್ನ ಬಿಡುಗಡೆ ಮಾಡಿದೆ. ಉದಾಹರಣೆಗೆ, ಉತ್ತರ ಮತ್ತು ದಕ್ಷಿಣ ಅಮೆರಿಕದಲ್ಲಿ ಸ್ವಲ್ಪ ಜನ್ರು ಮಾತ್ರ ಅಲ್ಲಿನ ಬುಡಕಟ್ಟು ಭಾಷೆಗಳನ್ನ ಮಾತಾಡ್ತಾರೆ. ಆದ್ರೂ ನಮ್ಮ ಸಂಘಟನೆ ಅಲ್ಲಿನ ಇಂಥ 160ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಾಶನಗಳನ್ನ ಬಿಡುಗಡೆ ಮಾಡಿದೆ. ಹೀಗೆ ಆ ಭಾಷೆಗಳನ್ನ ಮಾತಾಡೋ ಜನ್ರು ಸಿಹಿಸುದ್ದಿಯನ್ನ ತಿಳ್ಕೊಳ್ತಿದ್ದಾರೆ. ಅಷ್ಟೇ ಅಲ್ಲ, ಹತ್ರತ್ರ 20 ರೊಮಾನಿ ಭಾಷೆಗಳಲ್ಲಿ ನಮ್ಮ ಪ್ರಕಾಶನಗಳಿವೆ. ಈ ಭಾಷೆಗಳನ್ನ ಮಾತಾಡೋ ಸಾವಿರಾರು ಜನ್ರು ಇವತ್ತು ಸತ್ಯವನ್ನ ತಿಳ್ಕೊಂಡು ಯೆಹೋವನನ್ನ ಒಟ್ಟಾಗಿ ಆರಾಧಿಸ್ತಿದ್ದಾರೆ.

ಚಿತ್ರ: 1. ಅಮರಿಂಡಿಯನ್‌ ಸಹೋದರಿ ತನ್ನ ಭಾಷೆಯಲ್ಲಿ ಬೈಬಲ್‌ ಪಡ್ಕೊಂಡಿರೋದ್ರಿಂದ ಖುಷಿಯಾಗಿದ್ದಾಳೆ. 2. ರೋಮಾನಿ ಸಹೋದರಿ ಮತ್ತು ಅವಳ ಮಗಳು ಅಧಿವೇಶನ ಆನಂದಿಸ್ತಿದ್ದಾರೆ.

ಎಡ: ನಮ್ಮ ಪ್ರಕಾಶನಗಳು 160ಕ್ಕೂ ಹೆಚ್ಚು ಅಮೆರಿಕಾದ ಬುಡಕಟ್ಟು ಭಾಷೆಗಳಲ್ಲಿವೆ

ಬಲ: ನಮ್ಮ ಪ್ರಕಾಶನಗಳು 20ಕ್ಕೂ ಹೆಚ್ಚು ರೊಮಾನಿ ಭಾಷೆಗಳಲ್ಲಿವೆ

(ಪ್ಯಾರ 11 ನೋಡಿ)


12. ಯೆಹೋವನ ಸಂಘಟನೆ ಇನ್ನೂ ಯಾವೆಲ್ಲ ಕೆಲಸಗಳನ್ನ ಮಾಡ್ತಿದೆ?

12 ಸಿಹಿಸುದ್ದಿನ ಸಾರೋದ್ರ ಜೊತೆಗೆ, ನೈಸರ್ಗಿಕ ವಿಪತ್ತುಗಳಿಂದ ನಷ್ಟ ಅನುಭವಿಸೋರಿಗೂ ಯೆಹೋವನ ಸಂಘಟನೆ ಸಹಾಯ ಮಾಡುತ್ತೆ. ಅದಕ್ಕೇ ಸಾವಿರಾರು ಸ್ವಯಂ ಸೇವಕರು ತಮ್ಮ ಸಮಯ, ಶಕ್ತಿನ ಮುಡಿಪಾಗಿಟ್ಟಿದ್ದಾರೆ. ಅಷ್ಟೇ ಅಲ್ಲ, ಜನ್ರು ಯೆಹೋವನ ಬಗ್ಗೆ, ಆತನ ಪ್ರೀತಿ ಬಗ್ಗೆ ತಿಳ್ಕೊಳ್ಳೋಕೆ ರಾಜ್ಯ ಸಭಾಗೃಹಗಳನ್ನ ಸಂಘಟನೆ ಕಟ್ಟುತ್ತಿದೆ.

ಮಹಾ ಪುರೋಹಿತ ನಿಮಗೂ ಸಹಾಯ ಮಾಡ್ತಾನೆ

13. (ಎ) ಕೆಲವೊಂದು ಸಾರಿ ನಮಗೆ ಹೇಗೆ ಅನಿಸಬಹುದು? (ಬಿ) ಅಂಥ ಟೈಮಲ್ಲಿ ಯೇಸು ನಮಗೆ ಹೇಗೆ ಸಹಾಯ ಮಾಡ್ತಾನೆ?

13 ಯೇಸು ಒಬ್ಬ ಮಹಾ ಕುರುಬನಾಗಿ ನಾವು ಯೆಹೋವನಿಗೆ ಹತ್ರ ಆಗೋಕೆ ನಮಗೆ ಏನೆಲ್ಲಾ ಬೇಕೋ ಅದೆಲ್ಲವನ್ನ ಕೊಡ್ತಾನೆ. (ಯೋಹಾ. 10:14; ಎಫೆ. 4:7) ಕಷ್ಟಗಳು ಬಂದಾಗ ನಮ್ಮ ಜೀವನ ‘ಆರಿಹೋಗೋ ದೀಪದ ತರ, ಜಜ್ಜಿದ ದಂಟಿನ ತರ’ ಆಗಿಬಿಡುತ್ತೆ. ಸಹೋದರ ಸಹೋದರಿಯರು ನಮ್ಮ ಮನಸ್ಸನ್ನ ನೋವು ಮಾಡಿದಾಗ, ಆರೋಗ್ಯ ಹಾಳಾದಾಗ ಅಥವಾ ನಾವೇ ಒಂದು ತಪ್ಪು ಮಾಡಿದಾಗ ನೋವಲ್ಲಿ ಕುಗ್ಗಿ ಹೋಗ್ತೀವಿ. ಆಗ ಮೂರು ಹೊತ್ತೂ ಕಷ್ಟಗಳ ಬಗ್ಗೆನೇ ಯೋಚ್ನೆ ಮಾಡಿ ಬಿಡ್ತೀವಿ. ಭವಿಷ್ಯದ ಬಗ್ಗೆ, ಒಳ್ಳೇ ನಿರೀಕ್ಷೆ ಬಗ್ಗೆ ಯೋಚ್ನೆ ಮಾಡೋಕೆ ತಪ್ಪಿ ಹೋಗ್ತೀವಿ. ಆದ್ರೆ ನೆನಪಿಡಿ, ಯೇಸುಗೆ ನಮ್ಮ ಕಷ್ಟಗಳು, ನಮ್ಮ ಭಾವನೆಗಳೆಲ್ಲ ಚೆನ್ನಾಗಿ ಅರ್ಥ ಆಗುತ್ತೆ. ಆತನಿಗೆ ನಮ್ಮ ಮೇಲೆ ಅನುಕಂಪ ಇರೋದ್ರಿಂದ ನಮಗೆ ಸಹಾಯ ಮಾಡೋಕೆ ತುದಿಗಾಲಲ್ಲಿ ಇರ್ತಾನೆ. ಉದಾಹರಣೆಗೆ, ನೀವು ಕುಗ್ಗಿ ಹೋದಾಗ ನಿಮಗೆ ಬಲ ತುಂಬೋಕೆ ಪವಿತ್ರಶಕ್ತಿ ಕೊಡ್ತಾನೆ. (ಯೋಹಾ. 16:7; ತೀತ 3:6) ಅಷ್ಟೇ ಅಲ್ಲ, ‘ಉಡುಗೊರೆಗಳಾದ’ ಹಿರಿಯರನ್ನ ಮತ್ತು ಸಭೆಯಲ್ಲಿರೋ ಸಹೋದರ ಸಹೋದರಿಯರನ್ನ ನಿಮಗೆ ಪ್ರೋತ್ಸಾಹಿಸೋಕೆ, ಬೆಂಬಲ ಕೊಡೋಕೆ ಮತ್ತು ಸಹಾಯ ಮಾಡೋಕೆ ಬಳಸ್ತಾನೆ.—ಎಫೆ. 4:8.

14. ನಾವು ನೋವಲ್ಲಿ ಬಳಲಿ ಬೆಂಡಾದಾಗ ಏನು ಮಾಡಬೇಕು?

14 ನೀವು ಕಷ್ಟ, ನೋವಲ್ಲಿ ಬಳಲಿ ಬೆಂಡಾದಾಗ ಮಹಾ ಪುರೋಹಿತನಾದ ಯೇಸುವನ್ನ ನೆನಪಿಸ್ಕೊಳ್ಳಿ. ಯೆಹೋವ, ಯೇಸುವನ್ನ ಭೂಮಿಗೆ ಕಳಿಸಿದ್ದು ಕೇವಲ ನಮಗೋಸ್ಕರ ಪ್ರಾಣ ಕೊಡೋಕಷ್ಟೇ ಅಲ್ಲ. ನಾವು ಅನುಭವಿಸೋ ಒಂದೊಂದು ಕಷ್ಟನೂ ಅರ್ಥ ಮಾಡ್ಕೊಳ್ಳೋಕೆ ಯೇಸು ಭೂಮಿಗೆ ಬಂದನು. ನಾವು ತಪ್ಪು ಮಾಡಿದಾಗ ನಮಗೆ ಬೇಜಾರಾಗುತ್ತೆ ನಿಜ. ಆದ್ರೆ ಅಂಥ ಟೈಮಲ್ಲಿ ಯೇಸು ನಮಗೆ ‘ಸಹಾಯ ಮಾಡೋಕೆ’ ರೆಡಿ ಇದ್ದಾನೆ ಅನ್ನೋದನ್ನ ನೆನಪಿಡಿ.—ಇಬ್ರಿ. 4:15, 16.

15. ಸ್ಟಿಫಾನೋಗೆ ವಾಪಸ್‌ ಸಭೆಗೆ ಬರೋಕೆ ಯಾವುದು ಸಹಾಯ ಮಾಡ್ತು?

15 ಯೆಹೋವನಿಂದ ದೂರ ಆದವರು ವಾಪಾಸ್‌ ಬರೋಕೆ ಯೇಸು ಸಹಾಯ ಮಾಡ್ತಾನೆ. (ಮತ್ತಾ. 18:12, 13) ಸ್ಟಿಫಾನೋb ಅವ್ರ ಅನುಭವ ನೋಡಿ. ಅವರು 12 ವರ್ಷ ಸಭೆಯಿಂದ ದೂರ ಇದ್ರು. ಆದ್ರೆ ಈಗ ವಾಪಸ್‌ ಸಭೆಗೆ ಬರೋಕೆ ನಿರ್ಧರಿಸಿದ್ರು. ಅವರು ಹೇಳೋದು, “ವಾಪಾಸ್‌ ಬರೋಕೆ ಕಷ್ಟ ಆಯ್ತು. ಆದ್ರೂ ಬ್ರದರ್‌ ಸಿಸ್ಟರ್ಸ್‌ ಜೊತೆ ಸೇರಿ ಯೆಹೋವನನ್ನ ಆರಾಧಿಸಬೇಕು ಅನ್ನೋ ಆಸೆ ನನಗಿತ್ತು. ಹಿರಿಯರು ನನ್ನನ್ನ ಕೂಟಗಳಿಗೆ ಪ್ರೀತಿಯಿಂದ ಸ್ವಾಗತಿಸಿದ್ರು. ಕೆಲವೊಂದು ಸಾರಿ ನಾನು ಯೆಹೋವನನ್ನ ಯಾಕೆ ಬಿಟ್ಟು ಹೋದೆ ಅನ್ನೋ ಭಾವನೆ ನನ್ನನ್ನ ಕಿತ್ತು ತಿನ್ನುತ್ತಿತ್ತು. ಆದ್ರೆ ಹಿರಿಯರು, ‘ನೀನು ಪ್ರಯತ್ನ ಬಿಡಬೇಡ, ನೀನು ವಾಪಸ್‌ ಬರಬೇಕು ಅನ್ನೋದೇ ಯೆಹೋವ ಮತ್ತು ಯೇಸುವಿನ ಆಸೆ’ ಅಂತ ನೆನಪಿಸಿದ್ರು. ನಾನು ವಾಪಸ್‌ ಬಂದಾಗ ನನ್ನನ್ನ ಮತ್ತು ನನ್ನ ಕುಟುಂಬನ ಇಡೀ ಸಭೆ ಪ್ರೀತಿಯಿಂದ ಸ್ವಾಗತಿಸ್ತು. ನನ್ನ ಹೆಂಡತಿ ಬೈಬಲ್‌ ಕಲಿಯೋಕೆ ಶುರು ಮಾಡಿದಳು. ಈಗ ನಾವು ಇಡೀ ಕುಟುಂಬ ಯೆಹೋವನನ್ನ ಒಟ್ಟಾಗಿ ಆರಾಧಿಸ್ತಿದ್ದೀವಿ.” ಈ ತರ ತಪ್ಪು ಮಾಡಿದವರು ವಾಪಸ್‌ ಬರೋಕೆ ಸಭೆ ಸಹಾಯ ಮಾಡೋದನ್ನ ನೋಡುವಾಗ ನಮ್ಮ ಪ್ರೀತಿಯ ಮಹಾ ಪುರೋಹಿತನಿಗೆ ಎಷ್ಟು ಖುಷಿಯಾಗುತ್ತಲ್ವಾ?

16. ಅನುಕಂಪ ತೋರಿಸೋ ಮಹಾ ಪುರೋಹಿತನ ಬಗ್ಗೆ ನಿಮಗೆ ಹೇಗನಿಸುತ್ತೆ?

16 ಯೇಸು ಭೂಮಿಯಲ್ಲಿದ್ದಾಗ ತುಂಬ ಜನ್ರಿಗೆ ಸಮಯಕ್ಕೆ ಸರಿಯಾಗಿ ಸಹಾಯ ಮಾಡಿದನು. ಇವತ್ತು ನಮಗೆ ಅಗತ್ಯ ಇದ್ದಾಗ್ಲೂ ಯೇಸು ಸಹಾಯ ಮಾಡ್ತಾನೆ ಅಂತ ನಾವು ಕಣ್ಮುಚ್ಚಿ ನಂಬೋದು. ಹೊಸ ಲೋಕದಲ್ಲಿ ಪಾಪ ಇಲ್ಲದೆ ನಾವೆಲ್ರೂ ಪರಿಪೂರ್ಣರಾಗೋಕೆ ಆತನು ಸಹಾಯ ಮಾಡ್ತಾನೆ. ಪ್ರೀತಿ ಮತ್ತು ಅನುಕಂಪ ಇರೋ ಯೆಹೋವ ದೇವರು ತನ್ನ ಮಗನನ್ನ ಮಹಾ ಪುರೋಹಿತನಾಗಿ ನಮಗೆ ಕೊಟ್ಟನು. ಇದಕ್ಕೆ ನಾವು ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರು ಸಾಕಾಗಲ್ಲ!

ನೀವೇನು ಹೇಳ್ತೀರಾ?

  • ಯೇಸು ಭೂಮಿಯಲ್ಲಿ ಇದ್ದಿದ್ದು ಮಹಾ ಪುರೋಹಿತನಾಗೋಕೆ ಹೇಗೆ ಸಹಾಯ ಮಾಡ್ತು?

  • ಯೆಶಾಯ 42:3ರ ಭವಿಷ್ಯವಾಣಿಯನ್ನ ಯೇಸು ಹೇಗೆ ನೆರವೇರಿಸಿದನು?

  • ಮಹಾ ಪುರೋಹಿತ ಇವತ್ತು ನಮಗೆ ಹೇಗೆ ಸಹಾಯ ಮಾಡ್ತಾನೆ?

ಗೀತೆ 20 ಕೊಟ್ಟೆ ನೀ ಮಗನ

a ಯೆಹೂದಿ ಪುರೋಹಿತರ ಬದಲಿಗೆ ಯೇಸು ಹೇಗೆ ಮಹಾ ಪುರೋಹಿತನಾದನು ಅಂತ ತಿಳ್ಕೊಳ್ಳೋಕೆ ಅಕ್ಟೋಬರ್‌ 2023ರ ಕಾವಲಿನಬುರುಜು ಪುಟ 26 ಪ್ಯಾರ 7-9ರಲ್ಲಿರೋ “ಯೆಹೋವನ ಆಧ್ಯಾತ್ಮಿಕ ಆಲಯದಲ್ಲಿ ಆರಾಧಿಸೋದು ದೊಡ್ಡ ಆಶೀರ್ವಾದ!” ಅನ್ನೋ ಲೇಖನ ನೋಡಿ.

b ಕೆಲವ್ರ ಹೆಸ್ರನ್ನ ಬದಲಾಯಿಸಲಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ