ವಾಚಕರಿಂದ ಪ್ರಶ್ನೆಗಳು
ಯೆಹೋವ ತುಂಬ ಬೇಗ ಸರ್ಕಾರಗಳ ಮನಸ್ಸಲ್ಲಿ ಯಾವ “ಯೋಚ್ನೆ” ಹಾಕ್ತಾನೆ?
ಮಹಾಸಂಕಟ ಶುರು ಆಗೋದ್ರ ಬಗ್ಗೆ ಪ್ರಕಟಣೆ 17:16, 17 ಹೀಗೆ ಹೇಳುತ್ತೆ, “ನೀನು ನೋಡಿದ ಆ ಹತ್ತು ಕೊಂಬುಗಳು ಮತ್ತು ಆ ಕಾಡುಪ್ರಾಣಿ ಆ ವೇಶ್ಯೆಯನ್ನ ದ್ವೇಷಿಸಿ ಅವಳ ಹತ್ರ ಇರೋದನ್ನೆಲ್ಲ ಕಿತ್ಕೊಂಡು ಬಟ್ಟೆ ತೆಗೆದುಹಾಕಿ ಅವಳ ಮಾಂಸವನ್ನ ತಿಂದು ಬೆಂಕಿಯಿಂದ ಅವಳನ್ನ ಪೂರ್ತಿಯಾಗಿ ಸುಟ್ಟು ಹಾಕುತ್ತೆ. ಯಾಕಂದ್ರೆ ತಾನು ಅಂದ್ಕೊಂಡಿದ್ದನ್ನ ಮಾಡೋಕೆ ದೇವರೇ ತನ್ನ ಯೋಚ್ನೆಯನ್ನ ಅವ್ರ ಮನಸ್ಸಿಗೆ ಹಾಕಿದ್ದಾನೆ. ಅದ್ರಿಂದ ಅವರೆಲ್ರ ಯೋಚ್ನೆ ಒಂದೇ ಆಗಿ, ದೇವರ ಮಾತುಗಳು ನಿಜ ಆಗೋ ತನಕ ಅವರು ತಮ್ಮ ಎಲ್ಲ ಅಧಿಕಾರವನ್ನ ಆ ಕಾಡುಪ್ರಾಣಿಗೆ ಕೊಡ್ತಾರೆ.” ಈ ಹಿಂದೆ ನಮ್ಮ ಪ್ರಕಾಶನಗಳಲ್ಲಿ ಯೆಹೋವನು ಹಾಕೋ ಆ “ಯೋಚ್ನೆ” ಮಾನವ ಸರ್ಕಾರಗಳೆಲ್ಲ ಸೇರಿ ಸುಳ್ಳು ಧರ್ಮಗಳನ್ನ ನಾಶ ಮಾಡೋದ್ರ ಬಗ್ಗೆ ಆಗಿದೆ ಅಂತ ಹೇಳಲಾಗಿತ್ತು.
ಆದ್ರೆ, ನಮ್ಮ ತಿಳುವಳಿಕೆಯಲ್ಲಿ ಈಗ ಹೊಂದಾಣಿಕೆ ಮಾಡಬೇಕಾಗಿದೆ. ಹಾಗಾದ್ರೆ ಯೆಹೋವನು ಹಾಕೋ ಈ “ಯೋಚ್ನೆ” ನಿಜವಾಗಿಯೂ ಏನಾಗಿದೆ? ಎಲ್ಲ ಸರ್ಕಾರಗಳು “ತಮ್ಮ ಅಧಿಕಾರವನ್ನ ಆ ಕಾಡುಪ್ರಾಣಿಗೆ” ಕೊಡೋ ಹಾಗೆ ಯೆಹೋವನು ಮಾನವ ಸರ್ಕಾರಗಳ ಮನಸ್ಸಿನಲ್ಲಿ ಒಂದು ಯೋಚನೆ ಹಾಕ್ತಾನೆ. ಇದು ಹೇಗೆ ನಡಿಯುತ್ತೆ ಅಂತ ತಿಳ್ಕೊಳೋಕೆ ನಾವು ಮುಂದಿನ ಪ್ರಶ್ನೆಗಳನ್ನ ನೋಡೋಣ.
ಈ ಭವಿಷ್ಯವಾಣಿಯಲ್ಲಿ ಮುಖ್ಯವಾಗಿ ಯಾರೆಲ್ಲರ ಬಗ್ಗೆ ಹೇಳಲಾಗಿದೆ? ಇಲ್ಲಿ ಹೇಳಿರೋ “ವೇಶ್ಯೆ,” “ಮಹಾ ಬಾಬೆಲ್” ಆಗಿದೆ. ಇದು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವನ್ನ ಸೂಚಿಸುತ್ತೆ. “ಕೆಂಪು ಕಾಡುಪ್ರಾಣಿ” 1919ರಲ್ಲಿ ವಿಶ್ವದ ಶಾಂತಿಗಾಗಿ ಸ್ಥಾಪನೆಯಾದ ರಾಷ್ಟ್ರ ಸಂಘ ಆಗಿದೆ, ಅದನ್ನ ಈಗ ವಿಶ್ವ ಸಂಸ್ಥೆ ಅಂತ ಕರಿತಾರೆ. (ಪ್ರಕ. 17:3-5) “ಹತ್ತು ಕೊಂಬುಗಳು,” ಕಾಡುಪ್ರಾಣಿಗೆ ಬೆಂಬಲ ಕೊಡೋ ಎಲ್ಲಾ ಮಾನವ ಸರ್ಕಾರಗಳನ್ನ ಸೂಚಿಸುತ್ತೆ.
ವೇಶ್ಯೆಗೂ ಕೆಂಪು ಕಾಡುಪ್ರಾಣಿಗೂ ಏನು ಸಂಬಂಧ? ವೇಶ್ಯೆ, ಕಾಡುಪ್ರಾಣಿ ಮೇಲೆ ‘ಕೂತಿದ್ದಾಳೆ.’ ಅಂದ್ರೆ ಅಧಿಕಾರ ಚಲಾಯಿಸ್ತಿದ್ದಾಳೆ ಮತ್ತು ಕಾಡುಪ್ರಾಣಿಗೆ ಬೆಂಬಲ ಕೊಡ್ತಿದ್ದಾಳೆ.
ವೇಶ್ಯೆಗೆ ಏನಾಗುತ್ತೆ? ಕಾಡುಪ್ರಾಣಿ, ಹತ್ತು ಕೊಂಬುಗಳ ಜೊತೆ ಸೇರ್ಕೊಂಡು ‘ವೇಶ್ಯೆಯನ್ನ ದ್ವೇಷಿಸುತ್ತೆ.’ ಅವಳ ಹತ್ರ ಇರೋದನ್ನೆಲ್ಲ ಕಿತ್ಕೊಂಡು ಅವಳೆಷ್ಟು ಕೆಟ್ಟವಳು ಅಂತ ಎಲ್ರಿಗೂ ಬಟ್ಟ ಬಯಲು ಮಾಡುತ್ತೆ. ಅವಳನ್ನ ಸಂಪೂರ್ಣವಾಗಿ ನಾಶ ಮಾಡಿಬಿಡುತ್ತೆ. ಹೀಗೆ ಯೆಹೋವ ದೇವರು ಹೇಳಿರೋ ತರಾನೇ ಆಗುತ್ತೆ. (ಪ್ರಕ. 17:1; 18:8) ಆಗ ಸುಳ್ಳು ಧರ್ಮಗಳೆಲ್ಲ ಸರ್ವನಾಶ ಆಗುತ್ತೆ. ಆದ್ರೆ ಇದೆಲ್ಲ ಆಗೋ ಮುಂಚೆ ಏನಾಗುತ್ತೆ ಗೊತ್ತಾ? ಇದುವರೆಗೆ ಮನುಷ್ಯನ ಇತಿಹಾಸದಲ್ಲಿ ಯಾವತ್ತೂ ಆಗದೇ ಇರೋ ಒಂದು ವಿಷ್ಯ ನಡೆಯೋ ತರ ಯೆಹೋವ ಮಾಡ್ತಾನೆ.
ಯೆಹೋವನು ಸರ್ಕಾರಗಳಿಗೆ ಏನು ಮಾಡೋಕೆ ಹೇಳ್ತಾನೆ? ಯೆಹೋವನು ಹತ್ತು ಕೊಂಬುಗಳ ಅಂದ್ರೆ ಸರ್ಕಾರಗಳ ಮನಸ್ಸಲ್ಲಿ ‘ತನ್ನ ಯೋಚ್ನೆಯನ್ನ’ ಹಾಕ್ತಾನೆ. ಆಗ ಸರ್ಕಾರಗಳು ‘ತಮ್ಮ ಶಕ್ತಿ ಮತ್ತು ಅಧಿಕಾರವನ್ನ ಕೆಂಪು ಕಾಡುಪ್ರಾಣಿಗೆ’ ಅಂದ್ರೆ ವಿಶ್ವ ಸಂಸ್ಥೆಗೆ ಕೊಡ್ತಾರೆ. (ಪ್ರಕ. 17:13) ಇದರರ್ಥ, ಎಲ್ಲ ಸರ್ಕಾರಗಳು ತಾವಾಗಿ ತಾವೇ ತಮ್ಮ ಅಧಿಕಾರನ ಕಾಡುಪ್ರಾಣಿಗೆ ಕೊಟ್ಟು ಬಿಡುತ್ತೆ ಅಂತಾನಾ? ಇಲ್ಲ. ಭವಿಷ್ಯವಾಣಿ ಹೇಳೋ ತರ ಈ ರೀತಿ ತಮ್ಮ ಅಧಿಕಾರನ ಕೊಡೋಕೆ ಪ್ರೇರೇಪಿಸೋದು ಯೆಹೋವ ದೇವರೇ. (ಜ್ಞಾನೋ. 21:1; ಯೆಶಾಯ 44:28 ಹೋಲಿಸಿ.) ಈ ಬದಲಾವಣೆ ನಿಧಾನವಾಗಿ ಆಗುತ್ತಾ? ಇಲ್ಲ. ಇದು ದಿಢೀರ್ ಅಂತ ಆಗೋ ಒಂದು ದೊಡ್ಡ ಬದಲಾವಣೆ. ಈ ಹೊಸ ಅಧಿಕಾರ ಪಡ್ಕೊಂಡ ಮೇಲೆ ವಿಶ್ವ ಸಂಸ್ಥೆ ಯೆಹೋವ ದೇವರು ನಿರ್ಧರಿಸಿರೋ ತರ ಸುಳ್ಳು ಧರ್ಮಗಳನ್ನ ಸರ್ವನಾಶ ಮಾಡುತ್ತೆ.
ಮುಂದೆ ನಾವೇನನ್ನ ಎದುರು ನೋಡಬಹುದು? ಸರ್ಕಾರಗಳೆಲ್ಲ ನಿಧಾನವಾಗಿ ವಿಶ್ವಸಂಸ್ಥೆಗೆ ಹೇಗೆ ತಮ್ಮ ಬೆಂಬಲ ಕೊಡುತ್ತೆ ಅಂತ ತೋರಿಸೋ ವಾರ್ತೆಗಳಿಗಾಗಿ ನಾವು ಕಾಯ್ತಾ ಇರಬೇಕಿಲ್ಲ. ಯಾಕಂದ್ರೆ ಇದು ದಿಢೀರ್ ಅಂತ ಆಗೋ ಬದಲಾವಣೆ. ಯೆಹೋವನು ಎಲ್ಲ ಸರ್ಕಾರಗಳ ಮನಸ್ಸಲ್ಲಿ ತಮ್ಮ ಅಧಿಕಾರವನ್ನ ವಿಶ್ವ ಸಂಸ್ಥೆಗೆ ಕೊಡೋ ತರ ಇದ್ದಕ್ಕಿದ್ದಂತೆ ಪ್ರೇರೇಪಿಸ್ತಾನೆ. ಅದು ಯಾವಾಗ ಆಗುತ್ತೋ ಆಗ ಮಹಾಸಂಕಟ ಇನ್ನೇನು ಶುರುವಾಗುತ್ತೆ ಅಂತ ನಮಗೆ ಅರ್ಥ ಆಗುತ್ತೆ. ಇದು ತುಂಬ ಬೇಗ ಮತ್ತು ದಿಢೀರ್ ಅಂತ ಆಗೋ ಬದಲಾವಣೆ ಆಗಿರೋದ್ರಿಂದ ನಾವು ಸದಾ “ಎಚ್ಚರವಾಗಿ ಇರೋಣ, ಬುದ್ಧಿ ಉಪಯೋಗಿಸಿ ನಡಿಯೋಣ.”—1 ಥೆಸ. 5:6.