ಯುವಜನರ ಪ್ರಶ್ನೆಗಳು
ಒಡಹುಟ್ಟಿದವ್ರ ಜೊತೆ ಕಿತ್ತಾಡದೇ ಇರೋದು ಹೇಗೆ?
“ನಮ್ಮ ಮೊದಲ ಸ್ನೇಹಿತರು ಮತ್ತು ಶತ್ರುಗಳು”
“ನಮ್ಮ ಮೊದಲ ಸ್ನೇಹಿತರೂ ಶತ್ರುಗಳೂ ನಮ್ಮ ಒಡಹುಟ್ಟಿದವರೇ” ಅಂತ ಜನ ಹೇಳ್ತಾರೆ. ನಿಜ, ನೀವು ನಿಮ್ಮ ಒಡಹುಟ್ಟಿದವ್ರನ್ನ ಪ್ರೀತಿಸ್ತೀರ, ಅವರೂ ನಿಮ್ಮನ್ನ ಪ್ರೀತಿಸ್ತಾರೆ. ಆದ್ರೆ ಕೆಲವೊಮ್ಮೆ ಅವ್ರ ಜೊತೆ ಹೊಂದ್ಕೊಂಡು ಹೋಗೋಕೆ ಆಗಲ್ಲ ಅಂತ ನಿಮಗೆ ಅನಿಸಬಹುದು. “ನನ್ನ ತಮ್ಮ ಕೊಡೋ ಕಾಟ ಅಷ್ಟಿಷ್ಟಲ್ಲ. ಏನು ಹೇಳಿದ್ರೆ, ಏನು ಮಾಡಿದ್ರೆ ನನ್ನ ಕೋಪ ನೆತ್ತಿಗೇರುತ್ತೆ ಅಂತ ಅವನಿಗೆ ಚೆನ್ನಾಗಿ ಗೊತ್ತು!” ಅಂತ 18 ವರ್ಷದ ಹೆಲೆನ ಹೇಳ್ತಾಳೆ.
ಒಡಹುಟ್ಟಿದವ್ರ ಜೊತೆ ಆಗೋ ಕೆಲವು ಜಗಳಗಳನ್ನ ಸಮಾಧಾನವಾಗಿ ಮಾತಾಡಿ, ಅವ್ರಿಗೆ ಅರ್ಥಮಾಡಿಸಿ ಬಗೆಹರಿಸಬಹುದು. ಉದಾಹರಣೆಗೆ:
ಅಣ್ಣ-ತಮ್ಮ ಒಂದೇ ರೂಮಲ್ಲಿ ಇರೋಕೆ ಇಷ್ಟಪಡಲ್ಲ. ಅದಕ್ಕೆ ಅವರು ಯಾವಾಗ್ಲೂ ಜಗಳ ಮಾಡ್ತಿರ್ತಾರೆ. ಆಗೇನು ಮಾಡೋದು? ಒಬ್ರಿಗೊಬ್ರು ಬಿಟ್ಕೊಡೋಕೆ ಕಲೀರಿ. ಲೂಕ 6:31ರಲ್ಲಿರೋ ತತ್ವ ಪಾಲಿಸಿ.
ಅಕ್ಕ-ತಂಗಿ ಹೇಳದೇ ಕೇಳದೇ ಒಬ್ರು-ಇನ್ನೊಬ್ರ ಬಟ್ಟೆನ ಹಾಕೊಳ್ತಾರೆ. ಆಗೇನು ಮಾಡೋದು? ನಿಮಗೆ ಏನಿಷ್ಟ, ಏನಿಷ್ಟ ಆಗಲ್ಲ ಅನ್ನೋದನ್ನ ಮನಸ್ಸುಬಿಚ್ಚಿ ಮಾತಾಡಿ. 2 ತಿಮೊತಿ 2:24ರಲ್ಲಿರೋ ತತ್ವ ಪಾಲಿಸಿ.
ಕೆಲವು ಸಲ ಒಡಹುಟ್ಟಿದವ್ರ ಮಧ್ಯ ತುಂಬ ದೊಡ್ಡದೊಡ್ಡ ಜಗಳ ನಡೆದುಬಿಡುತ್ತೆ. ಅದ್ರಿಂದ ತುಂಬ ಸಮಸ್ಯೆಗಳು ಬರುತ್ತೆ. ಇದಕ್ಕೆ ಬೈಬಲಲ್ಲಿರೋ ಎರಡು ಉದಾಹರಣೆಗಳನ್ನ ನೋಡಿ:
ಮಿರ್ಯಾಮ ಮತ್ತು ಆರೋನ ಅವ್ರ ತಮ್ಮ ಮೋಶೆ ಮೇಲೆ ಹೊಟ್ಟೆಕಿಚ್ಚುಪಟ್ರು. ಇದ್ರಿಂದ ಅವರು ತುಂಬ ತೊಂದ್ರೆ ಅನುಭವಿಸಬೇಕಾಯ್ತು. ಅರಣ್ಯಕಾಂಡ 12:1-15ರಲ್ಲಿರೋ ಘಟನೆ ಓದಿ. ಆಮೇಲೆ ‘ನಾನು ನನ್ನ ಒಡಹುಟ್ಟಿದವ್ರ ಮೇಲೆ ಹೊಟ್ಟೆಕಿಚ್ಚು ಪಡದೆ ಇರೋಕೆ ಏನು ಮಾಡಬೇಕು’ ಅಂತ ಕೇಳ್ಕೊಳ್ಳಿ.
ಕಾಯಿನನಿಗೆ ಅವನ ತಮ್ಮನ ಮೇಲೆ ಎಷ್ಟು ಕೋಪ ಬಂತಂದ್ರೆ ಅವನನ್ನ ಸಾಯಿಸೇಬಿಟ್ಟ. ಆದಿಕಾಂಡ 4:1-12ರಲ್ಲಿರೋ ಘಟನೆ ಓದಿ. ಆಮೇಲೆ ‘ನನಗೆ ಒಡಹುಟ್ಟಿದವ್ರ ಮೇಲೆ ಕೋಪ ಬಂದ್ರೆ ಅದನ್ನ ಹೇಗೆ ತಡೆದುಹಿಡಿಲಿ?’ ಅಂತ ಕೇಳ್ಕೊಳ್ಳಿ.
ಹೊಂದ್ಕೊಂಡು ಹೋಗೋಕೆ ಎರಡು ಕಾರಣಗಳು
ಎಷ್ಟೇ ಕಷ್ಟ ಆದ್ರೂ ನಿಮ್ಮ ಒಡಹುಟ್ಟಿದವ್ರ ಜೊತೆ ಹೊಂದ್ಕೊಂಡು ಹೋಗೋಕೆ ನೀವು ಮಾಡೋ ಪ್ರಯತ್ನ ಯಾವಾಗ್ಲೂ ಸಾರ್ಥಕ. ನಾವು ಯಾಕೆ ಹಾಗೆ ಹೇಳಬಹುದು ಅನ್ನೋದಕ್ಕೆ ಎರಡು ಕಾರಣ ನೋಡಿ.
ನೀವೀಗ ಚಿಕ್ಕವರಲ್ಲ, ದೊಡ್ಡವರಾಗಿದ್ದೀರ ಅಂತ ಗೊತ್ತಾಗುತ್ತೆ. “ನಾನು ನನ್ನ ತಂಗಿಯರ ಜೊತೆ ಮುಟ್ಟಿದ್ರೆ ಮುನಿ ಅನ್ನೋ ತರ ಇರ್ತಿದ್ದೆ. ಆದ್ರೆ ಈಗ ನಾನು ಅವ್ರ ಜೊತೆ ತುಂಬ ತಾಳ್ಮೆಯಿಂದ ಸಮಾಧಾನವಾಗಿ ಇರ್ತೀನಿ. ನಾನೀಗ ಚಿಕ್ಕ ಮಕ್ಕಳ ತರ ಅಲ್ಲ, ಸರಿಯಾಗಿ ಯೋಚ್ನೆ ಮಾಡೋಕೆ ಕಲ್ತಿದ್ದೀನಿ” ಅಂತ ಆ್ಯಲೆಕ್ಸ್ ಅನ್ನೋ ಯುವಕ ಹೇಳ್ತಾನೆ.
ಬೈಬಲ್ ಹೇಳೋದು: “ಬೇಗ ಕೋಪ ಮಾಡ್ಕೊಳ್ಳದವನು ಬುದ್ಧಿವಂತ, ಮುಂಗೋಪಿ ತನ್ನ ಮೂರ್ಖತನವನ್ನ ತೋರಿಸಿ ಬಿಡ್ತಾನೆ.”—ಜ್ಞಾನೋಕ್ತಿ 14:29.
ಮುಂದೆ ನಿಮಗೆ ಪ್ರಯೋಜ್ನ ಆಗುತ್ತೆ. ನಿಮ್ಮ ಒಡಹುಟ್ಟಿದವ್ರ ಜೊತೆನೇ ನಿಮಗೆ ಹೊಂದ್ಕೊಂಡು ಹೋಗೋಕೆ ಆಗ್ಲಿಲ್ಲಾಂದ್ರೆ ನೀವು ದೊಡ್ಡವರಾದ ಮೇಲೆ ನಿಮ್ಮ ಗಂಡ ಅಥವಾ ಹೆಂಡ್ತಿ ಜೊತೆ, ನಿಮ್ಮ ಕೆಲಸದಲ್ಲಿ ಇರೋರ ಜೊತೆ, ನಿಮ್ಮ ಬಾಸ್ ಜೊತೆ ಮತ್ತು ಬೇರೆಯವ್ರ ಜೊತೆ ಹೇಗೆ ಹೊಂದ್ಕೊಂಡು ಹೋಗಕ್ಕಾಗುತ್ತೆ?
ನಿಜ ಏನಂದ್ರೆ, ಈಗಿಂದನೇ ನೀವು ಒಡಹುಟ್ಟಿದವ್ರ ಜೊತೆ ಚೆನ್ನಾಗಿ ಮಾತಾಡೋಕೆ, ಸಮಸ್ಯೆನ ಬಗೆಹರಿಸೋಕೆ ಕಲಿತ್ರೆ ಮುಂದೆ ನೀವು ಎಲ್ರ ಜೊತೆ ಚೆನ್ನಾಗಿರ್ತೀರ. ಇದನ್ನೆಲ್ಲ ಕಲಿಯೋಕೆ ನಿಮ್ಮ ಮನೆನೇ ಮೊದಲ ಪಾಠಶಾಲೆ.
ಬೈಬಲ್ ಹೇಳೋದು: “ಸಾಧ್ಯವಾದ್ರೆ ಎಲ್ರ ಜೊತೆ ಶಾಂತಿಯಿಂದ ಇರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ.”—ರೋಮನ್ನರಿಗೆ 12:18.
ನಿಮ್ಮ ಒಡಹುಟ್ಟಿದವ್ರ ಜೊತೆ ಸಮಸ್ಯೆನ ಸರಿ ಮಾಡ್ಕೊಳ್ಳೋಕೆ ನಿಮಗೆ ಟಿಪ್ಸ್ ಬೇಕಾ? ಹಾಗಾದ್ರೆ “ನಿಮ್ಮ ವಯಸ್ಸಿನವರು ಏನಂತಾರೆ” ಅನ್ನೋ ಭಾಗ ಓದಿ. ಆಮೇಲೆ ಅದ್ರ ಜೊತೆ ಇರೋ “ಒಡಹುಟ್ಟಿದವ್ರ ಜೊತೆ ಹೊಂದ್ಕೊಂಡು ಹೋಗೋದು ಹೇಗೆ?” ಅನ್ನೋ ವರ್ಕ್ಶೀಟ್ ನೋಡಿ.