ಪಾಠ 60
ಸದಾಕಾಲ ಇರುವ ಆಳ್ವಿಕೆ
ಒಂದು ರಾತ್ರಿ, ನೆಬೂಕದ್ನೆಚ್ಚರನಿಗೆ ವಿಚಿತ್ರವಾದ ಒಂದು ಕನಸು ಬಿತ್ತು. ಇದ್ರಿಂದಾಗಿ ಅವನಿಗೆ ಎಷ್ಟು ಚಿಂತೆ ಆಯ್ತು ಅಂದ್ರೆ ನಿದ್ದೆನೇ ಬರಲಿಲ್ಲ. ಆಗ ಅವನು ಮಂತ್ರವಾದಿಗಳನ್ನ ಕರೆದು, ‘ನನ್ನ ಕನಸಿನ ಅರ್ಥ ಹೇಳಿ’ ಅಂದನು. ಆಗ ಅವರು ರಾಜನಿಗೆ ‘ರಾಜನೇ ನಿಮಗೆ ಏನು ಕನಸು ಬಿತ್ತು ಎಂದು ಹೇಳಿ’ ಎಂದರು. ಆಗ ನೆಬೂಕದ್ನಚ್ಚರನು ಅವರಿಗೆ, ‘ಇಲ್ಲ! ನನಗೆ ಏನು ಕನಸು ಬಿತ್ತು ಎಂದು ನೀವೇ ಹೇಳಿರಿ, ಇಲ್ಲವಾದರೆ ಕೊಂದುಬಿಡುತ್ತೇನೆ’ ಅಂದ. ನಂತರ ಅವರು ಮತ್ತೆ ರಾಜನಿಗೆ, ‘ನಿಮಗೆ ಏನು ಕನಸು ಬಿತ್ತು ಎಂದು ದಯವಿಟ್ಟು ಹೇಳಿ, ಆಗ ನಾವು ಅದ್ರ ಅರ್ಥ ಹೇಳ್ತೀವಿ’ ಎಂದರು. ಆಗ ಅವನು, ‘ನನಗೆ ಮೋಸ ಮಾಡಬೇಕಂತ ಇದ್ದೀರಾ? ನನ್ನ ಕನಸನ್ನು ನೀವು ಹೇಳಲೇಬೇಕು’ ಎಂದನು. ಅದಕ್ಕವರು ‘ರಾಜನೇ, ಯಾವ ಮನುಷ್ಯನ ಕೈಯಲ್ಲೂ ಇದನ್ನು ಮಾಡಲು ಸಾಧ್ಯವಿಲ್ಲ, ಇದು ಅಸಾಧ್ಯ’ ಎಂದರು.
ಇದನ್ನು ಕೇಳಿ ನೆಬೂಕದ್ನೆಚ್ಚರನಿಗೆ ಎಷ್ಟು ಕೋಪ ಬಂತೆಂದರೆ ತನ್ನ ರಾಜ್ಯದಲ್ಲಿರುವ ವಿವೇಕಿಗಳನ್ನೆಲ್ಲ ಕೊಂದುಹಾಕುವಂತೆ ಹೇಳಿದನು. ಅವರಲ್ಲಿ ದಾನಿಯೇಲ, ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಕೂಡ ಸೇರಿದ್ದರು. ಆಗ ದಾನಿಯೇಲ ರಾಜನ ಹತ್ತಿರ ಹೋಗಿ ತನಗೆ ಸ್ವಲ್ಪ ಸಮಯ ಕೊಡುವಂತೆ ಕೇಳಿಕೊಂಡ. ನಂತರ, ಅವನೂ ಅವನ ಗೆಳೆಯರೂ ಯೆಹೋವನಿಗೆ ಪ್ರಾರ್ಥಿಸಿ ತಮಗೆ ಸಹಾಯ ಮಾಡುವಂತೆ ಕೇಳಿಕೊಂಡರು. ಯೆಹೋವನು ಅವರಿಗೆ ಸಹಾಯ ಮಾಡಿದನಾ?
ಯೆಹೋವನು ದಾನಿಯೇಲನಿಗೆ ದರ್ಶನದಲ್ಲಿ ನೆಬೂಕದ್ನೆಚ್ಚರನ ಕನಸನ್ನು ಮತ್ತು ಅದರ ಅರ್ಥವನ್ನು ತಿಳಿಸಿದನು. ಮಾರನೇ ದಿನ, ದಾನಿಯೇಲನು ರಾಜನ ಸೇವಕನ ಹತ್ತಿರ ಹೋಗಿ, ‘ಯಾವುದೇ ವಿವೇಕಿಯನ್ನೂ ಕೊಲ್ಲಬೇಡ. ನಾನು ರಾಜನಿಗೆ ಆ ಕನಸಿನ ಅರ್ಥ ಹೇಳ್ತೀನಿ’ ಎಂದನು. ಆಗ ಸೇವಕನು ದಾನಿಯೇಲನನ್ನು ನೆಬೂಕದ್ನೆಚ್ಚರನ ಹತ್ತಿರ ಕರೆದುಕೊಂಡು ಹೋದನು. ದಾನಿಯೇಲ ರಾಜನಿಗೆ ‘ಮುಂದೆ ಆಗೋ ವಿಷ್ಯಗಳನ್ನ ದೇವರು ನಿನಗೆ ಹೇಳಿದ್ದಾನೆ. ನಿನ್ನ ಕನಸು ಹೀಗಿತ್ತು: ನೀನು ನಿನ್ನ ಕನಸಿನಲ್ಲಿ ಒಂದು ದೊಡ್ಡ ಮೂರ್ತಿಯನ್ನು ನೋಡಿದ್ದೆ. ಅದಕ್ಕೆ ಚಿನ್ನದ ತಲೆ, ಬೆಳ್ಳಿಯ ಎದೆ ಮತ್ತು ಕೈಗಳು, ತಾಮ್ರದ ಹೊಟ್ಟೆ ಮತ್ತು ತೊಡೆಗಳು, ಕಬ್ಬಿಣದ ಕಾಲುಗಳು, ಕಬ್ಬಿಣ ಮತ್ತು ಜೇಡಿಮಣ್ಣಿನ ಮಿಶ್ರಣವಾಗಿದ್ದ ಪಾದಗಳು ಇದ್ದವು. ನಂತರ, ಬೆಟ್ಟದೊಳಗಿಂದ ಒಂದು ಕಲ್ಲು ಜೋರಾಗಿ ಮೂರ್ತಿಯ ಪಾದಗಳಿಗೆ ಬಂದು ಬಡಿಯಿತು. ಆಗ ಮೂರ್ತಿ ಪುಡಿಪುಡಿಯಾಗಿ ಗಾಳಿಯಲ್ಲಿ ತೂರಿಹೋಯಿತು. ಆ ಕಲ್ಲು ಒಂದು ದೊಡ್ಡ ಬೆಟ್ಟ ಆಗಿ ಇಡೀ ಭೂಮಿ ತುಂಬ್ಕೊಂಡಿತು’ ಎಂದು ಹೇಳಿದನು.
ಆಮೇಲೆ ದಾನಿಯೇಲ, ‘ಆ ಚಿನ್ನದ ತಲೆ ನಿನ್ನ ಸಾಮ್ರಾಜ್ಯ. ನಿನ್ನ ನಂತರ ಬರುವ ಸಾಮ್ರಾಜ್ಯ ಬೆಳ್ಳಿ. ಅದಾದ ಮೇಲೆ ತಾಮ್ರದಂತಿರುವ ಸಾಮ್ರಾಜ್ಯ ಬರುವದು, ಅದು ಇಡೀ ಲೋಕವನ್ನು ಆಳುವುದು. ಆಮೇಲೆ ಬರುವ ಸಾಮ್ರಾಜ್ಯ ಕಬ್ಬಿಣದ ಹಾಗೆ ಗಟ್ಟಿ. ಕೊನೆಗೆ, ಸ್ವಲ್ಪ ಭಾಗ ಕಬ್ಬಿಣದಂತೆ ಗಟ್ಟಿ ಮತ್ತು ಇನ್ನು ಸ್ವಲ್ಪ ಭಾಗ ಜೇಡಿಮಣ್ಣಿನಂತೆ ನಾಜೂಕಾಗಿರೋ ಸಾಮ್ರಾಜ್ಯ ಬರುವುದು. ದೊಡ್ಡ ಬೆಟ್ಟವಾಗುವ ಆ ಕಲ್ಲೇ ದೇವರ ಆಡಳಿತ ಅಥವಾ ಆಳ್ವಿಕೆ. ಅದು ಆ ಎಲ್ಲ ಸಾಮ್ರಾಜ್ಯಗಳನ್ನ ಪುಡಿಪುಡಿ ಮಾಡಿ ಸದಾಕಾಲ ಇರುತ್ತೆ. ಇದೇ ನಿನ್ನ ಕನಸಿನ ಅರ್ಥ’ ಎಂದನು.
ಆಗ ನೆಬೂಕದ್ನೆಚ್ಚರನು ದಾನಿಯೇಲನ ಮುಂದೆ ಅಡ್ಡಬಿದ್ದನು. ಅವನು ದಾನಿಯೇಲನಿಗೆ ‘ಈ ಕನಸನ್ನು ನಿನಗೆ ತಿಳಿಸಿರುವುದು ನಿನ್ನ ದೇವರೇ. ಆತನಂಥ ದೇವರು ಬೇರೆ ಯಾರೂ ಇಲ್ಲ’ ಅಂದನು. ಸ್ವಲ್ಪ ಸಮಯದ ಹಿಂದಷ್ಟೇ, ಸಾಯಿಸುವ ಯೋಚನೆ ಮಾಡಿದ ನೆಬೂಕದ್ನೆಚ್ಚರನು ಈಗ ದಾನಿಯೇಲನನ್ನು ಎಲ್ಲಾ ವಿವೇಕಿಗಳ ಮೇಲೆ ಮುಖ್ಯಾಧಿಕಾರಿಯಾಗಿ ಮತ್ತು ಬಾಬೆಲ್ ರಾಜ್ಯದ ಅಧಿಕಾರಿಯಾಗಿ ನೇಮಿಸಿದನು. ದಾನಿಯೇಲನ ಪ್ರಾರ್ಥನೆಗೆ ಯೆಹೋವನು ಹೇಗೆ ಉತ್ತರ ಕೊಟ್ಟನು ಅಂತ ಗಮನಿಸಿದೆಯಾ?
“ಕೆಟ್ಟ ದೇವದೂತರು ರಾಜರನ್ನ ಒಂದು ಜಾಗದಲ್ಲಿ ಒಟ್ಟು ಸೇರಿಸಿದ್ರು. ಹೀಬ್ರು ಭಾಷೆಯಲ್ಲಿ ಆ ಜಾಗದ ಹೆಸ್ರು ಹರ್ಮಗೆದೋನ್.”—ಪ್ರಕಟನೆ 16:16