ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನಿರೀಕ್ಷೆ ಬೇಕಾ ಬೇಡ್ವಾ?
    ಎಚ್ಚರ! —ನಿರೀಕ್ಷೆ ಎಲ್ಲಿ ಸಿಗುತ್ತೆ? 
    • ನಿರೀಕ್ಷೆ ಬೇಕಾ ಬೇಡ್ವಾ?

      ಡಾನ್ಯೆಲ್‌ಗೆ ಬರೀ ಹತ್ತು ವರ್ಷ. ಒಂದು ವರ್ಷದಿಂದ ಅವನು ಕ್ಯಾನ್ಸರ್‌ ರೋಗದಿಂದ ತುಂಬ ನರಳುತ್ತಿದ್ದ. ಅವನು ಬದುಕಲ್ಲ ಅಂತ ಫ್ರೆಂಡ್ಸ್‌, ಡಾಕ್ಟರ್ಸ್‌ ಅಂದುಕೊಂಡ್ರು, ನಿರೀಕ್ಷೆ ಕಳೆದುಕೊಂಡ್ರು. ಆದರೆ ಡಾನ್ಯೆಲ್‌ ‘ನಾನು ಖಂಡಿತ ಹುಷಾರಾಗ್ತೀನಿ. ದೊಡ್ಡವನಾದ ಮೇಲೆ ರಿಸರ್ಚರ್‌ ಆಗಿ ಒಂದು ದಿನ ನಾನೇ ಕ್ಯಾನ್ಸರ್‌ಗೆ ಔಷಧಿ ಕಂಡುಹಿಡಿಯುತ್ತೀನಿ’ ಎಂಬ ಆಶಾಭಾವನೆ ಇಟ್ಟುಕೊಂಡಿದ್ದ. ಕ್ಯಾನ್ಸರ್‌ ತಜ್ಞರೊಬ್ಬರು ಡಾನ್ಯೆಲ್‌ಗೆ ಚಿಕಿತ್ಸೆ ನೀಡಲು ಬರುತ್ತೇನೆಂದು ಹೇಳಿದಾಗಲಂತೂ ಅವನಿಗೆ ಬದುಕುವ ಆಸೆ ಜಾಸ್ತಿ ಆಯಿತು. ಆ ಡಾಕ್ಟರ್‌ನ ಭೇಟಿಯಾಗಲಿಕ್ಕಾಗಿ ಅವನು ಆಸೆ ಆಸೆಯಿಂದ ಕಾಯುತ್ತಿದ್ದ. ಆ ದಿನ ಬಂತು. ಆದರೆ ಹವಾಮಾನದಲ್ಲಿ ಏರುಪೇರಾದ ಕಾರಣ ಆ ಡಾಕ್ಟರ್‌ಗೆ ಬರಲಿಕ್ಕೆ ಆಗಲಿಲ್ಲ. ಡಾನ್ಯೆಲ್‌ನ ಆಸೆ, ಕನಸು ಎಲ್ಲ ನುಚ್ಚುನೂರಾಯಿತು. ಮೊದಲನೇ ಸಲ ಅವನು ಬದುಕುವ ನಿರೀಕ್ಷೆಯನ್ನೇ ಕಳೆದುಕೊಂಡ. ಇದಾಗಿ ಎರಡೇ ದಿನದಲ್ಲಿ ಸತ್ತುಹೋದ.

      ಡಾನ್ಯೆಲ್‌ ಬಗ್ಗೆ ಇದನ್ನೆಲ್ಲ ಹೇಳಿದ್ದು ಒಬ್ಬ ಆರೋಗ್ಯ ಕಾರ್ಯಕರ್ತನು. ಅವನು ನಿರೀಕ್ಷೆ ಇದ್ದಾಗ ಆರೋಗ್ಯ ಹೇಗೆ ಸುಧಾರಣೆ ಆಗುತ್ತೆ, ನಿರೀಕ್ಷೆ ಇಲ್ಲದಿದ್ದಾಗ ಆರೋಗ್ಯ ಹೇಗೆ ಕೆಟ್ಟುಹೋಗುತ್ತೆ ಎಂದು ಸ್ಟಡಿ ಮಾಡಿದ್ದನು. ಇದಕ್ಕೆ ಎಷ್ಟೋ ಉದಾಹರಣೆಗಳನ್ನು ನೀವು ಕೇಳಿರಬಹುದು. ಉದಾಹರಣೆಗೆ, ಸಾವಿನ ಅಂಚಿನಲ್ಲಿರುವ ವೃದ್ಧನಿಗೆ ತುಂಬ ಇಷ್ಟ ಆದವರು ಬರುತ್ತಾರೆ ಎಂದು ಕೇಳಿಸಿಕೊಂಡಾಗ ಅಥವಾ ಆನಿವರ್ಸರಿ ಹತ್ತಿರ ಬರುತ್ತಿದೆ ಎಂದು ಗೊತ್ತಾದಾಗ ಅವನಲ್ಲಿ ಏನೋ ಒಂತರ ಉಲ್ಲಾಸ ಉತ್ಸಾಹ ಬರುತ್ತೆ. ಆದರೆ ಅವನು ತುಂಬ ಕಾಯುತ್ತಿದ್ದ ದಿನ ಕಳೆದ ಮೇಲೆ ಬೇಗ ಸತ್ತು ಹೋಗುತ್ತಾನೆ. ಯಾಕೆ ಹೀಗಾಗುತ್ತೆ? ಕೆಲವರು ಹೇಳುವ ಹಾಗೆ ನಿರೀಕ್ಷೆಗೆ ಅಷ್ಟೊಂದು ಶಕ್ತಿ ಇದೆಯಾ?

      ಆಶಾಭಾವನೆ, ನಿರೀಕ್ಷೆ, ಭರವಸೆ, ನಂಬಿಕೆ, ಒಳ್ಳೇದಕ್ಕೆ ಮಾತ್ರ ಗಮನಕೊಡುವ ಗುಣ ಇದ್ದರೆ ಒಬ್ಬನ ಜೀವನ, ಆರೋಗ್ಯ ಸುಧಾರಣೆ ಆಗುತ್ತೆ ಎಂದು ಅನೇಕ ವೈದ್ಯಕೀಯ ಸಂಶೋಧಕರು ಹೇಳ್ತಾರೆ. ಆದರೆ ಹೆಚ್ಚಿನವರು ಇದನ್ನು ಒಪ್ಪಲ್ಲ. ಕೆಲವು ಸಂಶೋಧಕರು ಇದೆಲ್ಲ ಬರೀ ಮೂಢನಂಬಿಕೆ ಅಂತನೂ ಹೇಳ್ತಾರೆ. ಏಕೆಂದ್ರೆ ದೇಹದಲ್ಲಿರುವ ತೊಂದರೆಗಳೇ ಕಾಯಿಲೆಗಳಿಗೆ ಕಾರಣ ಎಂದು ಅವರು ನಂಬುತ್ತಾರೆ.

      ನಿರೀಕ್ಷೆಗಿರುವ ಶಕ್ತಿ ಬಗ್ಗೆ ಜನ ಸಂಶಯ ಪಡೋದು ಹೊಸದೇನಲ್ಲ. ಸಾವಿರಾರು ವರ್ಷಗಳ ಹಿಂದೆ ಗ್ರೀಕ್‌ ತತ್ವಜಾನಿ ಅರಿಸ್ಟಾಟಲ್‌ಗೆ ‘ನಿರೀಕ್ಷೆ ಬಗ್ಗೆ ನೀವೇನು ಅನ್ನುತ್ತೀರಾ’ ಎಂದು ಕೇಳಿದಾಗ ಅವನು “ಅದೊಂದು ಹಗಲುಗನಸು” ಎಂದು ಉತ್ತರ ಕೊಟ್ಟನು. ಇತ್ತೀಚಿಗೆ ಅಮೆರಿಕಾದ ರಾಜಕಾರಣಿ ಬೆಂಜಮಿನ್‌ ಫ್ರಾನ್‌ಕ್ಲಿನ್‌, “ನಿರೀಕ್ಷೆಯನ್ನು ನಂಬಿಕೊಂಡಿದ್ದರೆ ಸಾವೇ ಗತಿ” ಎಂದು ಮುಖಕ್ಕೆ ಹೊಡೆಯುವ ಹಾಗೆ ಹೇಳಿದರು.

      ಹಾಗಾದರೆ ನಿರೀಕ್ಷೆ ಅಂದರೇನು? ಏನೋ ಒಳ್ಳೇದಾಗುತ್ತೆ ಅಂತ ಸುಮ್ಮನೆ ಅಂದುಕೊಳ್ಳುವುದಾ? ಬರೀ ಕನಸಾ? ಅಥವಾ ನಿಜಾನಾ? ಆರೋಗ್ಯವಾಗಿ ಖುಷಿಯಾಗಿ ಇರಲು ಅದು ನಮಗೆ ಬೇಕೇ ಬೇಕಾ? ನಿರೀಕ್ಷೆಗೆ ಆಧಾರ ಇದೆಯಾ? ಅದರಿಂದ ನಮಗೆ ಪ್ರಯೋಜನ ಇದೆಯಾ?

  • ನಿರೀಕ್ಷೆ ಏಕೆ ಬೇಕು?
    ಎಚ್ಚರ! —ನಿರೀಕ್ಷೆ ಎಲ್ಲಿ ಸಿಗುತ್ತೆ? 
    • ನಿರೀಕ್ಷೆ ಏಕೆ ಬೇಕು?

      ಕ್ಯಾನ್ಸರ್‌ನಿಂದ ನರಳುತ್ತಿದ್ದ ಡಾನ್ಯೆಲ್‌ನ ಆಸೆ ನುಚ್ಚುನೂರು ಆಗದೇ ಇದ್ದಿದ್ರೆ ಏನಾಗುತ್ತಿತ್ತು? ಅವನು ಇವತ್ತಿನ ವರೆಗೂ ಬದುಕುತ್ತಿದ್ದನಾ? ರೋಗವನ್ನು ಜಯಿಸಿ ಸಾವಿಗೆ ಸಡ್ಡು ಹೊಡೆದು ಧೀರನಾಗುತ್ತಿದ್ದನಾ? ಹೀಗಾಗಿದ್ರೆ ‘ಆರೋಗ್ಯಕ್ಕೆ ಆಶಾಭಾವನೇ ಆಧಾರ’ ಎಂದು ವಾದಿಸುವವರು ಕೂಡ ನಂಬುತ್ತಿರಲಿಲ್ಲ. ಒಟ್ಟಿನಲ್ಲಿ ಎಲ್ಲದಕ್ಕೂ ಮದ್ದು ನಿರೀಕ್ಷೆ ಎಂದು ಹೇಳಲಿಕ್ಕೆ ಆಗಲ್ಲ.

      ದ ಕೊಲಂಬಿಯ ಬ್ರಾಡ್‌ಕಾಸ್ಟಿಂಗ್‌ ಸಿಸ್ಟಮ್‌ ನ್ಯೂಸ್‌ ಚಾನಲ್‌ನಲ್ಲಿ ಡಾಕ್ಟರ್‌ ನೇತನ್‌ ಚರ್ನಿ ಜೊತೆ ಒಂದು ಸಂದರ್ಶನ ನಡೆಯಿತು. ತುಂಬ ಹುಷಾರಿಲ್ಲದ ರೋಗಿಗೆ ಅತಿಯಾದ ನಿರೀಕ್ಷೆ ಕೊಡುವುದು ಸರಿಯಲ್ಲ ಅಂತ ಡಾಕ್ಟರ್‌ ಚರ್ನಿ ಆ ಸಂದರ್ಶನದಲ್ಲಿ ಎಚ್ಚರಿಸಿದರು. “ಕೆಲವು ಗಂಡಂದಿರು ಹೆಂಡತಿಯರಿಗೆ, ‘ನೀನು ಧ್ಯಾನ ಮಾಡ್ತಿಲ್ಲ, ಸಕಾರಾತ್ಮಕವಾಗಿ ಯೋಚಿಸ್ತಿಲ್ಲ’ ಎಂದು ಬಾಯಿಗೆ ಬಂದ ಹಾಗೆ ಬೈಯುತ್ತಾರೆ. ಏಕೆಂದ್ರೆ ಸಕಾರಾತ್ಮಕವಾಗಿ ಯೋಚಿಸಿದರೆ ಕ್ಯಾನ್ಸರ್‌ ಗಡ್ಡೆ ಬೆಳೆಯುವುದನ್ನು ಕೂಡ ತಡೆಯಬಹುದು ಎಂಬ ಭ್ರಮೆ ಅವರಿಗಿದೆ. ರೋಗಿಯ ಆರೋಗ್ಯ ಇನ್ನೂ ಹಾಳಾದರೆ, ‘ನೀನು ಗಟ್ಟಿಮನಸ್ಸು ಮಾಡಿ ಎಲ್ಲ ಸರಿಯಾಗುತ್ತೆ ಅಂತ ಯೋಚನೆ ಮಾಡ್ಲಿಲ್ಲ, ಅದಕ್ಕೇ ಇವತ್ತು ನಿನಗೆ ಈ ಗತಿ’ ಎಂದು ಹೇಳಿ ತಪ್ಪನ್ನೆಲ್ಲ ರೋಗಿಯ ಮೇಲೆ ಹೊರಿಸುತ್ತಾರೆ, ಇದು ಸರಿಯಲ್ಲ” ಎಂದು ಡಾಕ್ಟರ್‌ ಚರ್ನಿ ಹೇಳಿದರು.

      ಜೀವವನ್ನೇ ಬಲಿ ತೆಗೆದುಕೊಳ್ಳುವ ರೋಗ ಇರುವವರು ಪ್ರತಿ ಕ್ಷಣ ನರಳಿ ನರಳಿ ಸುಸ್ತಾಗಿ ಹೋಗಿರುತ್ತಾರೆ. ಅವರ ಮೇಲೆ ಪ್ರೀತಿ ಇದ್ರೆ ಮನಸ್ಸಿಗೆ ನೋವಾಗುವ ತರ ಮಾತಾಡಿ ಖಂಡಿತ ನಾವು ಅವರ ನೋವನ್ನು ಜಾಸ್ತಿ ಮಾಡಲ್ಲ. ಹಾಗಾದ್ರೆ ಆಶಾಭಾವದಿಂದ ಪ್ರಯೋಜನ ಇಲ್ಲವಾ?

      ಖಂಡಿತ ಇದೆ. ಉದಾಹರಣೆಗೆ ಡಾಕ್ಟರ್‌ ಚರ್ನಿ ನೋವು ನಿವಾರಣೆಯ ತಜ್ಞರು. ರೋಗಿ ರೋಗದೊಟ್ಟಿಗೆ ಹೋರಾಡಬೇಕು, ಅವನ ಆಯಸ್ಸನ್ನು ಜಾಸ್ತಿ ಮಾಡಬೇಕು ಅಂತ ಆ ಡಾಕ್ಟರ್‌ ನೆನಸುವುದಿಲ್ಲ. ರೋಗಿ ಇದ್ದಷ್ಟು ದಿನ ಆದಷ್ಟು ಆರಾಮವಾಗಿ ಖುಷಿಯಾಗಿ ಇರುವ ಹಾಗೆ ನೋಡಿಕೊಳ್ಳುತ್ತಾರೆ. ಇವರ ಹಾಗೆ ಎಷ್ಟೋ ಡಾಕ್ಟರ್‌ಗಳು ಕಾಯಿಲೆ ಜಾಸ್ತಿಯಾಗಿದ್ದರೂ ರೋಗಿಯ ಮನಸ್ಸು ಖುಷಿಖುಷಿಯಾಗಿ ಇರಲಿಕ್ಕೆ ಚಿಕಿತ್ಸೆ ಕೊಡುವುದೇ ಬೆಸ್ಟ್‌ ಎಂದು ದೃಢವಾಗಿ ನಂಬುತ್ತಾರೆ. ನಿರೀಕ್ಷೆ ಇದ್ರೆ ಮನಸ್ಸು ಉಲ್ಲಾಸವಾಗಿ ಇರುತ್ತೆ, ಅದ್ರಿಂದ ತುಂಬ ಪ್ರಯೋಜನನೂ ಇದೆ ಅನ್ನುವುದಕ್ಕೆ ತುಂಬ ಆಧಾರಗಳಿವೆ.

      ನಿರೀಕ್ಷೆಯ ಪ್ರಯೋಜನ

      “ನಿರೀಕ್ಷೆ ಒಂದು ಪರಿಣಾಮಕಾರಿ ಮದ್ದು” ಎನ್ನುತ್ತಾರೆ ವೈದ್ಯಕೀಯ ಪತ್ರಕರ್ತ ಡಾಕ್ಟರ್‌ W. ಗಿಫಾರ್ಡ್‌ ಜೋನ್ಸ್‌. ಮಾರಣಾಂತಿಕ ರೋಗ ಇರುವವರಿಗೆ ಭಾವನಾತ್ಮಕ ಬೆಂಬಲ ಕೊಡುವುದು ಎಷ್ಟು ಮುಖ್ಯ ಎಂದು ತಿಳಿದುಕೊಳ್ಳಲು ನಡೆಸಿದ ಬೇರೆಬೇರೆ ಅಧ್ಯಯನಗಳನ್ನು ಡಾ. ಜೋನ್ಸ್‌ ಪರಿಶೀಲಿಸಿದರು. ಆ ರೀತಿ ಬೆಂಬಲ ಕೊಟ್ರೆ ರೋಗಿಗಳು ಕುಗ್ಗಿ ಹೋಗದೆ ಸಕಾರಾತ್ಮಕವಾಗಿ ಯೋಚಿಸಬಹುದು. ಭಾವನಾತ್ಮಕ ಬೆಂಬಲ ಪಡೆದ ರೋಗಿಗಳು ಜಾಸ್ತಿ ದಿನ ಬದುಕಿದರು ಎಂದು 1989 ರಲ್ಲಿ ನಡೆಸಿದ ಒಂದು ಅಧ್ಯಯನ ತೋರಿಸಿತು. ಆದ್ರೆ ಇತ್ತೀಚಿಗೆ ನಡೆಸಿದ ಸಂಶೋಧನೆ ಅದನ್ನು ಪೂರ್ತಿ ಒಪ್ಪುವುದಿಲ್ಲ. ಒಟ್ಟಿನಲ್ಲಿ ಭಾವನಾತ್ಮಕ ಬೆಂಬಲ ಪಡೆಯದ ರೋಗಿಗಳಿಗಿಂತ ಅಂಥ ಬೆಂಬಲ ಪಡೆದ ರೋಗಿಗಳು ಖಿನ್ನತೆಗೆ ಒಳಗಾಗೋದು ಕಡಿಮೆ, ನೋವು ಅನುಭವಿಸೋದು ಕೂಡ ಕಡಿಮೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.

      ಪಾಸಿಟಿವ್‌ ಮತ್ತು ನೆಗೆಟಿವ್‌ ಯೋಚನೆ ಹೃದಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಇನ್ನೊಂದು ಅಧ್ಯಯನ ತೋರಿಸುತ್ತದೆ. ಜೀವನದ ಬಗ್ಗೆ ನೆಗೆಟಿವ್‌ ಯೋಚನೆ ಇದೆಯಾ ಪಾಸಿಟಿವ್‌ ಯೋಚನೆ ಇದೆಯಾ ಅಂತ ತಿಳಿಯಲು 1,300ಕ್ಕಿಂತ ಹೆಚ್ಚು ಗಂಡಸರನ್ನು ಪರೀಕ್ಷೆಗೆ ಒಳಪಡಿಸಲಾಯಿತು. 10 ವರ್ಷ ಆದಮೇಲೆ ಆ ಪರಿಶೀಲನೆ ಮಾಡಿದವರಲ್ಲಿ 12% ಗಂಡಸರು ಹೃದಯ ರೋಗದಿಂದ ನರಳುತ್ತಿದ್ದರು ಅಂತ ಗೊತ್ತಾಯಿತು. ಅವರಲ್ಲಿ ಪಾಸಿಟಿವ್‌ ಆಗಿ ಯೋಚನೆ ಮಾಡುವವರಿಗಿಂತ ನೆಗೆಟಿವ್‌ ಆಗಿ ಯೋಚನೆ ಮಾಡುವವರೇ ಜಾಸ್ತಿ ಇದ್ದರು, ಅಂದ್ರೆ ಇಬ್ಬರಿಗೆ ನೆಗೆಟಿವ್‌ ಯೋಚನೆ ಇದ್ರೆ ಒಬ್ಬರಿಗಷ್ಟೇ ಪಾಸಿಟಿವ್‌ ಯೋಚನೆ ಇತ್ತು. ಹಾವರ್ಡ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನಲ್ಲಿ ಆರೋಗ್ಯ ಮತ್ತು ಸಾಮಾಜಿಕ ವರ್ತನೆಯ ಅಸಿಸ್ಟೆಂಟ್‌ ಪ್ರೊಫೆಸರ್‌ ಲಾರಾ ಕುಬ್‌ಜ಼ಾನ್‌ಸ್ಕಿ ಏನು ಹೇಳ್ತಾರೆ ನೋಡಿ: “ಪಾಸಿಟಿವ್‌ ಆಗಿ ಯೋಚನೆ ಮಾಡುವುದು ಆರೋಗ್ಯಕ್ಕೆ ಒಳ್ಳೇದು ಅಂತ ಕೆಲವರ ಅಭಿಪ್ರಾಯ. ಇದು ಸರಿ ಅಂತ ಹೃದ್ರೋಗದ ವೈದ್ಯಕೀಯ ಕ್ಷೇತ್ರದಲ್ಲಿ ಮೊದಲನೇ ಸಲ ಸಾಬೀತಾಗಿರುವುದು ಆ ಅಧ್ಯಯನದಿಂದಲೇ.”

      ಆಪರೇಷನ್‌ ಆದ ಮೇಲೆ ‘ನನ್ನ ಆರೋಗ್ಯ ಹಾಳಾಯ್ತು’ ಅಂತ ಕೊರಗುವವರ ಆರೋಗ್ಯ ಇನ್ನೂ ಹಾಳಾಗಿದೆ, ಆದರೆ ‘ನಾನು ಚೆನ್ನಾಗಿ ಆಗ್ತಿದ್ದೀನಿ’ ಎಂದು ನೆನಸುವವರು ಬೇಗ ಚೇತರಿಸಿಕೊಂಡಿದ್ದಾರೆ ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ. ಸಕಾರಾತ್ಮಕವಾಗಿ ಯೋಚಿಸಿದರೆ ಆಯಸ್ಸು ಕೂಡ ಜಾಸ್ತಿ ಆಗುತ್ತದೆ. ವೃದ್ಧರು ತಮಗೆ ವಯಸ್ಸಾಗುತ್ತಾ ಇರುವುದನ್ನು ಪಾಸಿಟಿವ್‌ ಆಗಿ ತಗೊಂಡಾಗ ಏನಾಯ್ತು, ನೆಗೆಟಿವ್‌ ಆಗಿ ತಗೊಂಡಾಗ ಏನಾಯ್ತು ಅಂತ ತಿಳಿಯಲು ಒಂದು ಅಧ್ಯಯನ ನಡೆಸಲಾಯಿತು. ವಯಸ್ಸಾದವರಿಗೆ ವಿವೇಕ, ಅನುಭವ ಜಾಸ್ತಿ ಎಂಬ ಮೆಸೇಜುಗಳು ಕಂಪ್ಯೂಟರ್‌ ಸ್ಕ್ರೀನ್‌ ಮೇಲೆ ಆಗಾಗ ಕಾಣಿಸಿಕೊಂಡಾಗ ಅವರಲ್ಲಿದ್ದ ಬಲ ಜಾಸ್ತಿ ಆಯಿತು, ಚುರುಕಾಗಿ ನಡೆಯುತ್ತಿದ್ದರು. ಇದ್ರಿಂದ ಸಿಕ್ಕಿದ ಪ್ರಯೋಜನ 12 ವಾರ ವ್ಯಾಯಾಮದಿಂದ ಸಿಗುವ ಪ್ರಯೋಜನಕ್ಕೆ ಸಮವಾಗಿತ್ತು.

      ಆಶಾಭಾವ, ನಿರೀಕ್ಷೆ, ಸಕಾರಾತ್ಮಕ ಮನೋಭಾವ ಇಂಥ ಭಾವನೆಗಳು ಯಾಕೆ ಆರೋಗ್ಯಕ್ಕೆ ಒಳ್ಳೇದು? ಇದಕ್ಕೆ ಸರಿಯಾದ ಉತ್ತರ ಕೊಡಲು ವಿಜ್ಞಾನಿಗಳಿಗೆ ಡಾಕ್ಟರ್‌ಗಳಿಗೆ ಆಗ್ತಿಲ್ಲ. ಯಾಕೆಂದ್ರೆ ಅವರಿಗೆ ಮನುಷ್ಯರ ಮನಸ್ಸು ಮತ್ತು ದೇಹದ ಬಗ್ಗೆ ಇನ್ನೂ ಅರ್ಥ ಆಗಿಲ್ಲ. ಆ ವಿಷಯದ ಬಗ್ಗೆ ಅಧ್ಯಯನ ಮಾಡುವವರು ಅನುಭವ, ಜ್ಞಾನ, ಮಾಹಿತಿ ಮೇಲೆ ಆಧರಿಸಿ ಊಹಾಪೋಹ ಮಾಡಬಹುದು. ಉದಾಹರಣೆಗೆ, ನರವಿಜ್ಞಾನದ ಪ್ರೊಫೆಸರ್‌ ಹೀಗೆ ಹೇಳುತ್ತಾರೆ: “ಖುಷಿಯಾಗಿ, ನಿರೀಕ್ಷೆಯಿಂದ ಇರುವುದು ಒಳ್ಳೇದು. ಖುಷಿಖುಷಿಯಾಗಿ ಇರುವವರಿಗೆ ಒತ್ತಡ ತುಂಬ ಕಡಿಮೆ, ಆರೋಗ್ಯವೂ ಚೆನ್ನಾಗಿರುತ್ತೆ. ಆರೋಗ್ಯವಾಗಿರಲು ಮಾಡುವ ವಿಷಯಗಳಲ್ಲಿ ನಿರೀಕ್ಷೆಯಿಂದ ಇರುವುದು ಕೂಡ ಒಂದು.”

      ಈ ವಿಷಯ ಕೆಲವು ವೈದ್ಯರು, ಮನಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳಿಗೆ ಹೊಸದು ಅಂತ ಅನಿಸಬಹುದು. ಆದರೆ ಬೈಬಲ್‌ ವಿದ್ಯಾರ್ಥಿಗಳಿಗೆ ಇದು ಹೊಸದಲ್ಲ. ಏಕೆಂದ್ರೆ ಹತ್ತಿರತ್ತಿರ 3,000 ವರ್ಷಗಳ ಹಿಂದೆ ತುಂಬ ವಿವೇಕವಿದ್ದ ರಾಜ ಸೊಲೊಮೋನ ಹೀಗೆ ಬರೆದಿದ್ದಾನೆ: “ಹರ್ಷಹೃದಯ ಒಳ್ಳೇ ಮದ್ದು, ಕುಗ್ಗಿದ ಮನಸ್ಸು ಒಬ್ಬನ ಶಕ್ತಿಯನ್ನೆಲ್ಲಾ ಹೀರಿಹಾಕುತ್ತೆ.” (ಜ್ಞಾನೋಕ್ತಿ 17:22) ಗಮನಿಸಿ, ಈ ವಚನ ಹರ್ಷಹೃದಯ ಕಾಯಿಲೆಯನ್ನು ಗುಣಮಾಡುತ್ತದೆ ಎಂದು ಹೇಳ್ತಿಲ್ಲ, ಬದಲಿಗೆ ಹರ್ಷಹೃದಯ ಒಂದು ಒಳ್ಳೇ ಮದ್ದು ತರ ಇದೆ ಎಂದು ಹೇಳ್ತಿದೆ.

      ನಿರೀಕ್ಷೆ ಮದ್ದಾದರೆ ಯಾವ ಡಾಕ್ಟರ್‌ ತಾನೇ ಅದನ್ನು ಶಿಫಾರಸ್ಸು ಮಾಡುವುದಿಲ್ಲ? ಅಲ್ಲದೆ ನಿರೀಕ್ಷೆಯಿಂದ ಬರೀ ಒಳ್ಳೇ ಆರೋಗ್ಯ ಮಾತ್ರ ಅಲ್ಲ ಬೇರೆ ಪ್ರಯೋಜನಗಳು ಸಹ ಸಿಗುತ್ತವೆ.

      ನಿಮ್ಮ ಮೇಲೆ ಆಶಾವಾದ, ನಿರಾಶಾವಾದ ಬೀರುವ ಪ್ರಭಾವ

      ಆಶಾವಾದಿಗಳು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವುದರಿಂದ ತುಂಬ ಪ್ರಯೋಜನ ಪಡೆದಿದ್ದಾರೆ ಮತ್ತು ಓದು, ಕೆಲಸ, ಆಟ ಎಲ್ಲದರಲ್ಲೂ ಅವರು ಎತ್ತಿದ ಕೈ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಮಹಿಳಾ ಅಥ್ಲೆಟಿಕ್‌ ತಂಡದ ಬಗ್ಗೆ ನಡೆಸಿದ ಒಂದು ಅಧ್ಯಯವನ್ನು ಗಮನಿಸಿ. ಕೋಚ್‌ಗಳು ಆ ತಂಡದಲ್ಲಿದ್ದ ಮಹಿಳೆಯರ ಸಾಮರ್ಥ್ಯಗಳ ಬಗ್ಗೆ ಪೂರ್ತಿ ವಿವರ ಕೊಟ್ಟರು. ಅದೇ ಸಮಯದಲ್ಲಿ ಆ ಮಹಿಳೆಯರು ಎಷ್ಟರ ಮಟ್ಟಿಗೆ ಆಶಾವಾದಿಗಳಾಗಿ ಇದ್ದಾರೆಂದು ಸರ್ವೆ ಮಾಡಲಾಯಿತು. ಕೋಚ್‌ಗಳು ಕೊಟ್ಟ ಮಾಹಿತಿಗಿಂತಲೂ ಆ ಮಹಿಳೆಯರಲ್ಲಿದ್ದ ಸಕಾರಾತ್ಮಕ ಮನೋಭಾವದಿಂದಲೇ ಅವರು ಚೆನ್ನಾಗಿ ಆಡುತ್ತಾರಾ ಇಲ್ಲವಾ ಎಂದು ಹೇಳಲಿಕ್ಕೆ ಆಯಿತು. ನಿರೀಕ್ಷೆಗೆ ಯಾಕೆ ಇಷ್ಟೊಂದು ಶಕ್ತಿ ಇದೆ?

      ನಿರಾಶಾವಾದದ ಬಗ್ಗೆ ಅಧ್ಯಯನ ಮಾಡಿದಾಗ ತುಂಬ ವಿಷಯ ಗೊತ್ತಾಗಿದೆ. 1960 ರ ದಶಕದಲ್ಲಿ ಪ್ರಾಣಿಗಳ ನಡವಳಿಕೆ ಬಗ್ಗೆ ಪ್ರಯೋಗಗಳನ್ನು ನಡೆಸಲಾಯಿತು. ಆಗ ಸಿಕ್ಕಿದ ಅನಿರೀಕ್ಷಿತ ಫಲಿತಾಂಶದಿಂದ ಸಂಶೋಧಕರು “ಕಲಿತ ನಿರಾಶಾಭಾವ” ಎಂಬ ಹೊಸ ಪದ ಕಂಡುಹಿಡಿದರು. ಈ ತರದ ರೋಗ ಮನುಷ್ಯರಿಗೂ ಬರುತ್ತದೆಂದು ಅವರು ಕಂಡುಹಿಡಿದರು. ಇದನ್ನು ಕಂಡುಹಿಡಿಯಲಿಕ್ಕಾಗಿ ಅವರು ಒಂದು ಗುಂಪಿನಲ್ಲಿ ಇರುವವರಿಗೆ ಕಿರಿಕಿರಿ ಶಬ್ದ ಜೋರಾಗಿ ಕೇಳಿಸುವಾಗ ಹಾಗೆ ಮಾಡಿದರು. ಆಮೇಲೆ ಆ ಶಬ್ದವನ್ನು ನಿಲ್ಲಿಸಲು ಯಾವ ಯಾವ ಬಟನ್‌ಗಳನ್ನು ಒತ್ತಬೇಕೆಂದು ಹೇಳಿಕೊಟ್ಟರು. ಅವರು ಅದೇ ತರ ಮಾಡಿ ಆ ಶಬ್ದ ನಿಲ್ಲಿಸಿದರು.

      ಇನ್ನೊಂದು ಗುಂಪಲ್ಲಿ ಇರುವವರಿಗೂ ಅದನ್ನೇ ಹೇಳಿಕೊಟ್ಟರು. ಆದ್ರೆ ಅವರು ಆ ಬಟನ್‌ಗಳನ್ನು ಒತ್ತಿದ್ರೂ ಶಬ್ದ ನಿಲ್ಲಲಿಲ್ಲ. ಆಗ ಆ ಗುಂಪಲ್ಲಿ ಹೆಚ್ಚಿನವರು ಕುಗ್ಗಿ ಹೋಗಿ ನಿರಾಶಾಭಾವವನ್ನು ಬೆಳೆಸಿಕೊಂಡರು. ಅದೇ ದಿನ ಬೇರೆ ಬೇರೆ ಪರೀಕ್ಷೆ ಕೊಟ್ಟಾಗಲೂ ಅವರು ಅದನ್ನು ಮಾಡಲೇ ಇಲ್ಲ. ‘ಏನು ಮಾಡಿದ್ರೂ ಅಷ್ಟೇ, ಏನೂ ಬದಲಾಗಲ್ಲ’ ಎಂದು ನಂಬಿದರು. ಆದ್ರೆ ಅದೇ ಗುಂಪಲ್ಲಿದ್ದ ಕೆಲವು ಆಶಾವಾದಿಗಳು ಅಂಥ ನಿರಾಶಾಭಾವನೆಯನ್ನು ಬೆಳೆಸಿಕೊಳ್ಳಲಿಲ್ಲ.

      ಆರಂಭದಲ್ಲಿ ತಿಳಿಸಲಾದ ಕೆಲವು ಪ್ರಯೋಗಗಳನ್ನು ಮಾಡಿದವರಲ್ಲಿ ಡಾಕ್ಟರ್‌ ಮಾರ್ಟಿನ್‌ ಸೆಲಿಗ್ಮಾನ್‌ ಒಬ್ಬ. ಆ ಪ್ರಯೋಗಗಳಿಂದ ಅವನಿಗೆ ಆಶಾಭಾವ ನಿರಾಶಾಭಾವದ ಬಗ್ಗೆ ಅಧ್ಯಯನ ನಡೆಸುವುದನ್ನೇ ವೃತ್ತಿಯಾಗಿ ಮಾಡಿಕೊಳ್ಳಲು ಸ್ಫೂರ್ತಿ ಸಿಕ್ಕಿತು. ನಿಸ್ಸಹಾಯಕರು ಎಂಬ ಭಾವನೆ ಇರುವವರಲ್ಲಿ ಎಂಥ ಯೋಚನೆ ಇರುತ್ತದೆ, ಹೇಗೆ ನಡೆದುಕೊಳ್ತಾರೆ ಎಂದು ಡಾ. ಸೆಲಿಗ್ಮಾನ್‌ ಸೂಕ್ಷ್ಮವಾಗಿ ಪರಿಶೀಲಿಸಿದನು. ಅಂಥ ನಕಾರಾತ್ಮಕ ಯೋಚನೆಗಳಿದ್ದಾಗ ದಿನನಿತ್ಯದ ಕೆಲಸಗಳನ್ನು ಮಾಡಲಿಕ್ಕೂ ಕಷ್ಟ ಆಗುತ್ತೆ ಅಥವಾ ಮಾಡಲಿಕ್ಕೆ ಆಗೋದೇ ಇಲ್ಲ. ನಕಾರಾತ್ಮಕ ಯೋಚನೆ ಮತ್ತು ಅದರ ಪರಿಣಾಮದ ಬಗ್ಗೆ ಡಾ. ಸೆಲಿಗ್ಮಾನ್‌ ಚುಟುಕಾಗಿ ಹೀಗನ್ನುತ್ತಾನೆ: “ನಿರಾಶಾವಾದಿಗಳ ತರ ಯಾವಾಗಲೂ ‘ಕೆಟ್ಟದಕ್ಕೆ ನಾನೇ ಕಾರಣ’ ಅಂತ ನೆನಸಿದರೆ, ‘ಇದು ಬದಲಾಗೋದೇ ಇಲ್ಲ’ ಅಂತ ಅಂದುಕೊಂಡ್ರೆ ಇನ್ನೂ ಕೆಟ್ಟದ್ದೇ ಆಗುತ್ತೆ, ನಾವು ಮಾಡುವ ಕೆಲಸಗಳೆಲ್ಲಾ ಹಾಳಾಗುತ್ತೆ ಎಂದು ನನ್ನ 25 ವರ್ಷಗಳ ಅಧ್ಯಯನ ಮನವರಿಕೆ ಮಾಡಿದೆ.”

      ಈಗಾಗಲೇ ತಿಳಿಸಿದಂತೆ ಇಂಥ ವಿಚಾರಗಳು ಇವತ್ತು ಕೆಲವರಿಗೆ ಹೊಸದು. ಆದರೆ ಬೈಬಲ್‌ ವಿದ್ಯಾರ್ಥಿಗಳಿಗೆ ಅದು ಹೊಸದಲ್ಲ. ಏಕೆಂದ್ರೆ ಬೈಬಲಲ್ಲಿ ಈ ನಾಣ್ಣುಡಿ ಇದೆ: “ಕಷ್ಟ ಬಂದಾಗ ಧೈರ್ಯ ಕಳ್ಕೊಂಡ್ರೆ ಇರೋ ಬಲನೂ ಹೋಗುತ್ತೆ.” (ಜ್ಞಾನೋಕ್ತಿ 24:10) ನಿರಾಶೆ ಆದಾಗ, ನಕಾರಾತ್ಮಕ ಯೋಚನೆಗಳು ಬಂದಾಗ ನಮ್ಮಿಂದ ಏನೂ ಮಾಡಲಿಕ್ಕೆ ಆಗಲ್ಲ ಎಂದು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. ನಕಾರಾತ್ಮಕ ಯೋಚನೆಗಳನ್ನು ಹೊಡೆದೋಡಿಸಲು, ಸಕಾರಾತ್ಮಕವಾಗಿ ಯೋಚಿಸಲು, ನಿರೀಕ್ಷೆಯಿಂದ ಜೀವಿಸಲು ಏನು ಮಾಡಬೇಕು?

      [ಪುಟ 4, 5 ರಲ್ಲಿರುವ ಚಿತ್ರ]

      ನಿರೀಕ್ಷೆಯಿಂದ ಖಂಡಿತ ಪ್ರಯೋಜನ ಇದೆ

  • ಹತಾಶೆಯನ್ನು ಹೋಗಲಾಡಿಸಲು...
    ಎಚ್ಚರ! —ನಿರೀಕ್ಷೆ ಎಲ್ಲಿ ಸಿಗುತ್ತೆ? 
    • ಹತಾಶೆಯನ್ನು ಹೋಗಲಾಡಿಸಲು...

      ಕಷ್ಟ ಯಾರಿಗೂ ತಪ್ಪಿದ್ದಲ್ಲ, ಕೆಲವರಿಗಂತೂ ಕಷ್ಟ ಜಾಸ್ತಿ. ಆದರೆ ಆ ಕಷ್ಟವನ್ನು ನೀವು ಹೇಗೆ ತಗೊಳ್ತೀರೋ ಅದ್ರಿಂದ ನೀವು ಆಶಾವಾದಿನಾ ನಿರಾಶಾವಾದಿನಾ ಅಂತ ಗೊತ್ತಾಗುತ್ತದೆ. ಇದು ಇಂದಿನ ಅನೇಕ ತಜ್ಞರ ನಂಬಿಕೆ. ಕೆಲವರಿಗೆ ಕಷ್ಟಗಳು ಬಂದರೂ ಸೋತುಹೋಗಲ್ಲ, ಗುರಿ ಸಾಧಿಸುವ ತನಕ ಪ್ರಯತ್ನ ಬಿಡಲ್ಲ. ಇನ್ನು ಕೆಲವರು ಚಿಕ್ಕಪುಟ್ಟ ಕಷ್ಟಕ್ಕೇ ಆಕಾಶ ತಲೆ ಮೇಲೆ ಬಿದ್ದ ಹಾಗೆ ಕೂತು ಪ್ರಯತ್ನ ಮಾಡುವುದನ್ನೇ ಬಿಟ್ಟುಬಿಡುತ್ತಾರೆ. ಯಾಕೆ?

      ನೀವು ಕೆಲಸ ಹುಡುಕುತ್ತಾ ಇದ್ದೀರ ಅಂತ ನೆನಸಿ. ಇಂಟರ್‌ವ್ಯುಗೆ ಹೋಗಿದ್ದೀರ. ಆದರೆ ನಿಮ್ಮನ್ನು ರಿಜೆಕ್ಟ್‌ ಮಾಡಿಬಿಡ್ತಾರೆ. ಆಗ ನಿಮಗೆ ಹೇಗೆ ಅನಿಸುತ್ತೆ? ನಿಮ್ಮನ್ನೇ ಅವರು ರಿಜೆಕ್ಟ್‌ ಮಾಡಿದ್ದಾರೆ ಅಂತ ನೆನಸಿ ‘ನನ್ನಂಥವರಿಗೆ ಯಾರೂ ಕೆಲಸ ಕೊಡಲ್ಲ, ಈ ಜನ್ಮದಲ್ಲಿ ನನಗೆ ಕೆಲಸ ಸಿಗಲ್ಲ’ ಅಂತ ಅಂದುಕೊಳ್ಳಬಹುದು. ಅಥವಾ ಒಂದು ಕೆಲಸ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಜೀವನಪೂರ್ತಿ ‘ನಾನೊಬ್ಬ ನಾಲಾಯಕ್ಕು. ನನ್ನಿಂದ ಯಾರಿಗೂ ಉಪಯೋಗ ಇಲ್ಲ’ ಅಂತ ನೆನಸಬಹುದು. ಒಟ್ಟಿನಲ್ಲಿ ಇಂಥ ಯೋಚನೆಯೇ ಹತಾಶೆ.

      ಹತಾಶೆಯನ್ನು ಹೊಡೆದೋಡಿಸಿ

      ಮನಸ್ಸಿನಲ್ಲಿ ಮೂಡುವ ಹತಾಶೆಯ ಭಾವನೆಯನ್ನು ಹೊಡೆದೋಡಿಸಲು ನೀವು ಏನು ಮಾಡಬೇಕು? ಮೊದಲು ಅಂಥ ನಕಾರಾತ್ಮಕ ಯೋಚನೆಗಳನ್ನು ಗುರುತಿಸಿ. ಎರಡನೇದು, ಅಂಥ ಯೋಚನೆಗಳನ್ನು ಕಿತ್ತೆಸೆಯಿರಿ. ಇಂಟರ್‌ವ್ಯುನಲ್ಲಿ ನೀವು ಸೆಲೆಕ್ಟ್‌ ಆಗದೇ ಇರಲಿಕ್ಕಾಗಿ ಬೇರೆ ಏನಾದ್ರೂ ಕಾರಣ ಇರಬಹುದಾ ಅಂತ ಯೋಚಿಸಿ. ಆ ಕಂಪನಿಯ ಬಾಸ್‌ ನಿಮ್ಮನ್ನು ಕಂಡರೆ ಇಷ್ಟ ಆಗಿಲ್ಲ ಅಂತ ರಿಜೆಕ್ಟ್‌ ಮಾಡಿದ್ರಾ? ಅಥವಾ ಆ ಕೆಲಸಕ್ಕೆ ಬೇಕಾದ ಅರ್ಹತೆಗಳಿರುವ ಇನ್ನೊಬ್ಬರನ್ನು ಎದುರುನೋಡುತ್ತಿದ್ರಾ?

      ನೀವು ಕುಗ್ಗಿ ಹೋಗದೆ ಇರಲಿಕ್ಕೆ ಇನ್ನೊಂದು ವಿಷಯವನ್ನು ಮಾಡಿ. ಯಾವಾಗಲೋ ಒಂದು ಸಲ ಇಂಟರ್‌ವ್ಯುನಲ್ಲಿ ಫೇಲ್‌ ಆದ್ರಿ ಅಂದ ತಕ್ಷಣ ಜೀವನದಲ್ಲೇ ಫೇಲ್‌ ಆಗಿಬಿಟ್ರಿ ಅಂತಾನಾ? ನೀವು ದೇವರ ಸೇವೆಯಲ್ಲಿ ಎಷ್ಟೆಷ್ಟೋ ಮಾಡಿರಬಹುದು, ಕುಟುಂಬದಲ್ಲಿ ಒಳ್ಳೇ ವ್ಯಕ್ತಿ ಆಗಿರಬಹುದು, ಒಳ್ಳೇ ಫ್ರೆಂಡ್ಸ್‌ ಮಾಡಿಕೊಂಡಿರಬಹುದು. ಇವೆಲ್ಲಾ ನಿಮಗೆ ಸಿಕ್ಕಿದ ಯಶಸ್ಸುಗಳು ಅಲ್ವಾ? ‘ಮುಂದೆ ಹಾಗೆ ಆಗಬಹುದು, ಹೀಗೆ ಆಗಬಹುದು’ ಅಂತ ನೀವೇ ಏನೇನೋ ಕಲ್ಪನೆ ಮಾಡಿಕೊಳ್ಳಬೇಡಿ. ಕೆಲಸನೇ ಸಿಗಲ್ಲ ಅಂತ ಹೇಗೆ ಹೇಳುತ್ತೀರಾ? ನಿಮಗೇನು ಗೊತ್ತಾ? ನಕಾರಾತ್ಮಕ ಯೋಚನೆಗಳನ್ನು ತೆಗೆದುಹಾಕಲಿಕ್ಕೆ ನೀವು ಇನ್ನೇನು ಮಾಡಬಹುದು ನೋಡಿ.

      ಗುರಿ ಇಡಿ

      ಇತ್ತೀಚಿನ ವರ್ಷಗಳಲ್ಲಿ ಸಂಶೋಧಕರು ನಿರೀಕ್ಷೆಗೆ ಆಸಕ್ತಿಕರ ವಿವರಣೆ ಕೊಟ್ಟಿದ್ದಾರೆ. ಅವರ ಪ್ರಕಾರ ನಿರೀಕ್ಷೆ ಅಂದ್ರೆ ನೀವಿಟ್ಟಿರುವ ಗುರಿಗಳನ್ನು ಮುಟ್ಟಲಿಕ್ಕೆ ಆಗುತ್ತದೆ ಅಂತ ನಂಬುವುದೇ. ಹೀಗೆ ನಂಬುವುದರಿಂದ ಸಕಾರಾತ್ಮಕವಾಗಿ ಯೋಚಿಸಲು, ಗುರಿ ಮುಟ್ಟಲು ಆಗುತ್ತದೆ. ನಿರೀಕ್ಷೆ ಬಗ್ಗೆ ಇನ್ನೂ ಹೆಚ್ಚು ವಿಷಯ ಮುಂದಿನ ಲೇಖನದಲ್ಲಿ ನೋಡ್ತೇವೆ.

      ಈಗಾಗಲೇ ನಾವು ಗುರಿಗಳನ್ನು ಇಟ್ಟು ಅವನ್ನು ಮುಟ್ಟಿದ್ದರೆ ಇನ್ನು ಮುಂದೆನೂ ಗುರಿಗಳನ್ನು ಮುಟ್ಟುತ್ತೇವೆ ಎಂಬ ನಂಬಿಕೆ ಬರುತ್ತದೆ. ಒಂದು ಸಲನೂ ಗುರಿ ಇಟ್ಟಿಲ್ಲ ಅಂದ್ರೆ ಮುಂದಕ್ಕೆ ಗುರಿ ಇಡೋದೇ ಕಷ್ಟ. ನಿಮಗೆ ಏನಾದ್ರೂ ಗುರಿ ಇದೆಯಾ? ಪ್ರತಿದಿನದ ಕೆಲಸಗಳಲ್ಲಿ ಮುಳುಗಿ ಹೋದ್ರೆ ಜೀವನದಲ್ಲಿ ಯಾವುದು ಮುಖ್ಯ, ನಮ್ಮ ಗುರಿ ಏನು ಅಂತನೇ ಮರೆತುಹೋಗುತ್ತೇವೆ. ಹಾಗಾಗಿ ಬೈಬಲ್‌ ಹೇಳುವ ಪ್ರಕಾರ “ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು.”—ಫಿಲಿಪ್ಪಿ 1:10.

      ನಮ್ಮ ಜೀವನದಲ್ಲಿ ಯಾವುದು ಮುಖ್ಯ ಅಂತ ಗುರುತಿಸಿದರೆ ಕೆಲವು ಪ್ರಾಮುಖ್ಯ ಗುರಿಗಳನ್ನು ಮುಟ್ಟಲು ಆಗುತ್ತದೆ. ಆ ಗುರಿ ದೇವರ ಸೇವೆಗೆ, ಕುಟುಂಬಕ್ಕೆ ಅಥವಾ ನಮ್ಮ ಜೀವನಕ್ಕೆ ಸಂಬಂಧಪಟ್ಟದ್ದಾಗಿ ಇರಬಹುದು. ಒಂದೇ ಸಲಕ್ಕೆ ಹತ್ತಾರು ಗುರಿಗಳನ್ನು ಇಡಬಾರದು. ಅಲ್ಲದೆ, ನಮ್ಮಿಂದ ಮುಟ್ಟಲಿಕ್ಕೆ ಆಗುವ ಗುರಿಗಳನ್ನೇ ಇಡಬೇಕು. ಮುಟ್ಟಲಿಕ್ಕೆ ಆಗದೇ ಇರುವ ಗುರಿ ಇಟ್ಟರೆ ಟೆನ್‌ಶನ್‌ ಜಾಸ್ತಿ ಆಗುತ್ತೆ, ಕುಗ್ಗಿ ಹೋಗುತ್ತೇವೆ. ಆಮೇಲೆ ಗುರಿನೂ ಬೇಡ, ಏನೂ ಬೇಡ ಅಂತ ಸುಮ್ಮನಾಗುತ್ತೇವೆ. ಹಾಗಾಗಿ ದೊಡ್ಡ ದೊಡ್ಡ ಗುರಿ ಮುಟ್ಟಬೇಕಾದರೆ ಸ್ವಲ್ಪ ಸಮಯದಲ್ಲಿ ಮುಟ್ಟಲಿಕ್ಕೆ ಆಗುವಂಥ ಚಿಕ್ಕ ಚಿಕ್ಕ ಗುರಿಗಳನ್ನು ಇಡಬೇಕು.

      “ಮನಸ್ಸಿದ್ದರೆ ಮಾರ್ಗ” ಅಲ್ವಾ? ಒಂದು ಗುರಿ ಮುಟ್ಟಬೇಕು ಅಂತ ತೀರ್ಮಾನ ಮಾಡಿಕೊಂಡರೆ ಅದನ್ನು ಮುಟ್ಟಲಿಕ್ಕೆ ಛಲ ಬೇಕು, ಆಸೆ ಬೇಕು, ಗಟ್ಟಿಮನಸ್ಸು ಬೇಕು. ನಾವಿಟ್ಟಿರುವ ಗುರಿ ಎಷ್ಟು ಮುಖ್ಯ, ಅದನ್ನು ಮುಟ್ಟಿದರೆ ಏನೇನು ಪ್ರಯೋಜನ ಸಿಗುತ್ತೆ ಅಂತ ಯೋಚಿಸುತ್ತಾ ಇದ್ದರೆ ಛಲ ಬಿಡಲ್ಲ. ಅಡೆತಡೆಗಳು ಬಂದೇ ಬರುತ್ತೆ. ಆಗ ಎಲ್ಲ ಮುಗಿದು ಹೋಯಿತು ಅಂತ ಅಂದುಕೊಳ್ಳದೆ ಆ ಅಡೆತಡೆಗಳನ್ನು ಸವಾಲಾಗಿ ತಕ್ಕೊಳ್ಳಬೇಕು.

      ನಮ್ಮ ಗುರಿ ಮುಟ್ಟಲಿಕ್ಕೆ ಏನೆಲ್ಲ ದಾರಿಗಳಿವೆ ಎಂದು ಯೋಚಿಸಬೇಕು. ನಿರೀಕ್ಷೆ ಎಷ್ಟು ಮುಖ್ಯ ಎಂದು ತಿಳಿದುಕೊಳ್ಳಲು ಆಥರ್‌ C.R. ಸ್ನಯ್‌ಡರ್‌ ಆಳವಾಗಿ ಅಧ್ಯಯನ ಮಾಡಿದ್ದಾನೆ. ಒಂದು ಗುರಿ ಮುಟ್ಟಲಿಕ್ಕೆ ಬೇರೆ ಬೇರೆ ದಾರಿಗಳನ್ನು ಹುಡುಕಬೇಕು ಅನ್ನೋದು ಅವನ ಸಲಹೆ. ಆಗ ಗುರಿ ಮುಟ್ಟಲಿಕ್ಕೆ ನಾವು ಹಿಡಿದಿರುವ ದಾರಿಯಲ್ಲಿ ಯಶಸ್ಸು ಕಾಣಲಿಲ್ಲ ಅಂದ್ರೆ ಇನ್ನೊಂದು ದಾರಿ ಹಿಡಿಯಬೇಕು. ಅದೂ ಆಗಲಿಲ್ಲಾಂದ್ರೆ ಮತ್ತೊಂದು ದಾರಿ ಹಿಡಿಯಬೇಕು.

      ಇಟ್ಟಿರುವ ಗುರಿಯನ್ನು ಯಾವಾಗ ಬದಲಾಯಿಸಬೇಕು ಅಂತನೂ ಕಲಿಯಬೇಕು ಎಂದು ಸ್ನಯ್‌ಡರ್‌ ಹೇಳುತ್ತಾನೆ. ಇಟ್ಟಿರುವ ಗುರಿಯನ್ನು ಮುಟ್ಟಲಿಕ್ಕೆ ಆಗೋದೇ ಇಲ್ಲ ಅಂತ ಗೊತ್ತಾದಾಗ ಕೊರಗುತ್ತಾ ಇದ್ದರೆ ಕುಗ್ಗಿ ಹೋಗುತ್ತೇವೆ. ಹಾಗಾಗಿ ಅಂಥ ಸಮಯದಲ್ಲಿ ಮುಟ್ಟಲಿಕ್ಕೆ ಆಗುವಂಥ ಬೇರೆ ಗುರಿ ಇಟ್ಟರೆ ಮನಸ್ಸು ಉಲ್ಲಾಸದಿಂದ ಅರಳುತ್ತದೆ.

      ಇದಕ್ಕೊಂದು ಒಳ್ಳೇ ಉದಾಹರಣೆ ಬೈಬಲಲ್ಲಿದೆ. ರಾಜ ದಾವೀದನಿಗೆ ತನ್ನ ದೇವರಾದ ಯೆಹೋವನಿಗೋಸ್ಕರ ಒಂದು ದೇವಾಲಯ ಕಟ್ಟುವ ಗುರಿಯಿತ್ತು. ಇದು ಅವನಿಗೆ ತುಂಬ ಇಷ್ಟವಾದ ಗುರಿ. ಆದರೆ ದೇವರು ದಾವೀದನಿಗೆ ದೇವಾಲಯವನ್ನು ನಿನ್ನ ಮಗ ಸೊಲೊಮೋನ ಕಟ್ಟಲಿ ಅಂದ. ಆಗ ದಾವೀದನಿಗೆ ತುಂಬ ನಿರಾಶೆ ಆಯಿತು. ಆದರೆ ಅವನು ಕುಗ್ಗಿ ಹೋಗಲಿಲ್ಲ. ಬದಲಿಗೆ ಆ ಗುರಿ ಬಿಟ್ಟು ಬೇರೆ ಗುರಿ ಇಟ್ಟ. ದೇವಾಲಯ ಕಟ್ಟಲಿಕ್ಕೆ ಬೇಕಾದ ಹಣ, ಸಾಮಗ್ರಿಗಳನ್ನೆಲ್ಲ ಕೂಡಿಸಿಡುವ ಗುರಿ ಇಟ್ಟ. ತುಂಬ ಶ್ರಮ ಹಾಕಿ ಆ ಗುರಿ ಮುಟ್ಟಿದ.—1 ಅರಸು 8:17-19; 1 ಪೂರ್ವಕಾಲವೃತ್ತಾಂತ 29:3-7.

      ಹತಾಶೆ ಹೊಡೆದೋಡಿಸುವುದರಲ್ಲಿ, ಸಕಾರಾತ್ಮಕವಾಗಿ ಯೋಚಿಸುವುದರಲ್ಲಿ, ಗುರಿ ಸಾಧಿಸುವುದರಲ್ಲಿ ನಾವು ಯಶಸ್ಸು ಗಳಿಸಬಹುದು. ಆದರೂ ಕೆಲವೊಮ್ಮೆ ನಿರೀಕ್ಷೆ ಕಳೆದುಕೊಳ್ಳುವ ಸನ್ನಿವೇಶಗಳು ಬರುತ್ತವೆ. ಬಡತನ, ಯುದ್ಧ, ಅನ್ಯಾಯ, ಕಾಯಿಲೆ, ಸಾವು ಇವೆಲ್ಲ ಕೈಮೀರಿದ ಸನ್ನಿವೇಶಗಳು. ಆಗಲೂ ನಾವು ಹೇಗೆ ನಿರೀಕ್ಷೆಯಿಂದ ಇರಬಹುದು?

      [ಪುಟ 7 ರಲ್ಲಿರುವ ಚಿತ್ರ]

      ನೀವು ಇಷ್ಟಪಟ್ಟಿದ ಕೆಲಸ ಸಿಗಲಿಲ್ಲ ಅಂದ್ರೆ ನಿಮಗೆ ಈ ಜನ್ಮದಲ್ಲಿ ಕೆಲಸ ಸಿಗಲ್ಲ ಅಂತ ಅಂದುಕೊಳ್ತೀರಾ?

      [ಪುಟ 8 ರಲ್ಲಿರುವ ಚಿತ್ರ]

      ರಾಜ ದಾವೀದ ಅವನಿಟ್ಟ ಗುರಿ ಮುಟ್ಟಲು ಆಗಲ್ಲ ಅಂತ ಗೊತ್ತಾದಾಗ ಬೇರೆ ಗುರಿ ಇಟ್ಟ

  • ಯಾರು ಮಾತ್ರ ನಿರೀಕ್ಷೆ ಕೊಡಲು ಸಾಧ್ಯ?
    ಎಚ್ಚರ! —ನಿರೀಕ್ಷೆ ಎಲ್ಲಿ ಸಿಗುತ್ತೆ? 
    • ಯಾರು ಮಾತ್ರ ನಿರೀಕ್ಷೆ ಕೊಡಲು ಸಾಧ್ಯ?

      ನೆನಸಿ, ನಿಮ್ಮ ವಾಚ್‌ ನಿಂತುಹೋಗಿದೆ. ರಿಪೇರಿ ಮಾಡಲಿಕ್ಕೆ ಆಗಲ್ವೇನೋ ಅನಿಸುತ್ತೆ. ವಾಚ್‌ ಸರಿಮಾಡುತ್ತೇವೆಂದು ಹೇಳುವ ನೂರಾರು ಅಡ್ವಟೈಸ್‌ಮೆಂಟ್‌ಗಳನ್ನು ನೋಡಿ ಯಾವುದನ್ನು ನಂಬಬೇಕು, ಬಿಡಬೇಕು ಅಂತ ಗೊತ್ತಾಗದೆ ನಿಮಗೆ ತಲೆ ಕೆಟ್ಟು ಹೋಗುತ್ತದೆ. ಆದ್ರೆ ಆ ವಾಚ್‌ ಕಂಡುಹಿಡಿದ ಬುದ್ಧಿವಂತ ನಿಮ್ಮ ಮನೆ ಹತ್ತಿರ ಇದ್ದಾನೆ ಅಂತ ಗೊತ್ತಾದಾಗ ಹೇಗೆ ಅನಿಸುತ್ತೆ? ಅದೂ ಅಲ್ಲದೆ ಅವನು ನಿಮ್ಮ ವಾಚ್‌ನ ಫ್ರೀಯಾಗಿ ರಿಪೇರಿ ಮಾಡಿಕೊಡಲಿಕ್ಕೆ ರೆಡಿ ಇದ್ದಾನೆಂದು ಗೊತ್ತಾದರೆ ಏನು ಮಾಡ್ತಿರಾ? ವಾಚ್‌ನ ಅವನ ಹತ್ತಿರನೇ ರಿಪೇರಿಗೆ ಕೊಡ್ತಿರಾ ಅಲ್ವಾ?

      ಆ ವಾಚನ್ನು ನಿಮ್ಮಲ್ಲಿರೋ ನಿರೀಕ್ಷಿಸುವ ಸಾಮರ್ಥ್ಯಕ್ಕೆ ಹೋಲಿಸಿ. ನೀವು ನಿರೀಕ್ಷೆ ಕಳೆದುಕೊಳ್ತಿದ್ರೆ ಯಾರ ಸಹಾಯ ಪಡೆಯುತ್ತೀರಾ? ಎಷ್ಟೋ ಜನ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೇವೆಂದು ಹೇಳಬಹುದು, ಸಾವಿರಾರು ಸಲಹೆಗಳನ್ನೂ ಕೊಡಬಹುದು. ಆಗ ನಿಮಗೆ ಯಾರನ್ನು ನಂಬಬೇಕು ಬಿಡಬೇಕು ಅಂತ ಗೊತ್ತಾಗದೆ ತಲೆ ಕೆಟ್ಟು ಹೋಗಬಹುದು. ಸುಮ್ಮನೆ ಅವರು-ಇವರು ಹೇಳೋದನ್ನು ಕೇಳುವುದಕ್ಕಿಂತ ನಿಮ್ಮಲ್ಲಿ ನಿರೀಕ್ಷಿಸುವ ಸಾಮರ್ಥ್ಯವನ್ನು ಇಟ್ಟ ದೇವರ ಹತ್ತಿರನೇ ಹೋಗಬಹುದಲ್ಲಾ? ಏಕೆಂದ್ರೆ “ದೇವರು ನಮ್ಮಲ್ಲಿ ಒಬ್ರಿಗೂ ದೂರವಾಗಿಲ್ಲ,” ನಮಗೆ ಸಹಾಯ ಮಾಡಲು ಸಿದ್ಧನಿದ್ದಾನೆ.—ಅಪೊಸ್ತಲರ ಕಾರ್ಯ 17:27; 1 ಪೇತ್ರ 5:7.

      ನಿರೀಕ್ಷೆಯ ನಿಜಾರ್ಥ

      ನಿರೀಕ್ಷೆಗೆ ವೈದ್ಯರು, ವಿಜ್ಞಾನಿಗಳು, ಮನೋವಿಜ್ಞಾನಿಗಳು ಇವತ್ತು ಕೊಡುವ ವಿವರಣೆಗಿಂತ ಬೈಬಲ್‌ ಹೆಚ್ಚು ವಿವರಣೆ ಕೊಡುತ್ತದೆ. ನಿರೀಕ್ಷೆಗೆ ಮೂಲಭಾಷೆಯಲ್ಲಿರುವ ಪದದ ಅರ್ಥ ಕಾತರದಿಂದ ಕಾಯುವುದು ಮತ್ತು ಒಳ್ಳೇದಾಗುತ್ತೆ ಅಂತ ನೆನಸುವುದು. ಇದರಲ್ಲಿ ಎರಡು ವಿಷಯ ಇದೆ. ಒಂದು ಆಸೆ, ಇನ್ನೊಂದು ಆಧಾರ. ಬೈಬಲಲ್ಲಿ ತಿಳಿಸಿರುವ ನಿರೀಕ್ಷೆ ಒಂದು ಭ್ರಮೆ ಅಲ್ಲ. ಅದು ನಿಜ ಮತ್ತು ಅದಕ್ಕೆ ಆಧಾರನೂ ಇದೆ.

      ನಿರೀಕ್ಷೆ ಮತ್ತು ನಂಬಿಕೆ ಒಂದೇ ತರ. ಏಕೆಂದ್ರೆ ಎರಡಕ್ಕೂ ಆಧಾರ ಇರುತ್ತದೆ, ಕಣ್ಮುಚ್ಚಿ ನಂಬುವಂಥ ವಿಷಯ ಅಲ್ಲ. (ಇಬ್ರಿಯ 11:1) ಆದರೂ ನಂಬಿಕೆ ಮತ್ತು ನಿರೀಕ್ಷೆಗೆ ವ್ಯತ್ಯಾಸ ಇದೆ ಎಂದು ಬೈಬಲ್‌ ಹೇಳುತ್ತದೆ.—1 ಕೊರಿಂಥ 13:13.

      ಇದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ನೋಡಿ. ನೀವು ನಿಮ್ಮ ಬೆಸ್ಟ್‌ ಫ್ರೆಂಡ್‌ ಹತ್ತಿರ ಒಂದು ಸಹಾಯ ಕೇಳ್ತೀರಿ. ಅವರು ನಿಮಗೆ ಸಹಾಯ ಮಾಡೇ ಮಾಡುತ್ತಾರೆ ಎಂಬ ನಿರೀಕ್ಷೆ ನಿಮಗಿದೆ. ಆ ನಿರೀಕ್ಷೆಗೆ ಆಧಾರ ಇದೆ. ಏಕೆಂದ್ರೆ ನಿಮ್ಮ ಫ್ರೆಂಡ್‌ ಎಷ್ಟೋ ಸಲ ಉದಾರವಾಗಿ ನಿಮಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಅವನ ಮೇಲೆ ನಿಮಗೆ ತುಂಬ ನಂಬಿಕೆ ಇದೆ. ಇಲ್ಲಿ ನಿಮ್ಮ ನಂಬಿಕೆಗೂ ನಿರೀಕ್ಷೆಗೂ ಸಂಬಂಧ ಇದೆ. ಒಂದು ಇನ್ನೊಂದರ ಮೇಲೆ ಹೊಂದಿಕೊಂಡಿದೆ. ಆದರೆ ಇವೆರಡೂ ಬೇರೆ ಬೇರೆ. ದೇವರು ನಿಮಗೆ ಸಹಾಯ ಮಾಡೇ ಮಾಡುತ್ತಾನೆ ಅಂತ ನೀವು ನಿರೀಕ್ಷೆ ಇಡಬಹುದಾ? ಖಂಡಿತ ಇಡಬಹುದು.

      ನಿರೀಕ್ಷೆಗೆ ಆಧಾರ

      ನಿಜ ನಿರೀಕ್ಷೆಯನ್ನು ಕೊಡಲಿಕ್ಕೆ ಆಗೋದು ಯೆಹೋವ ದೇವರಿಗೆ ಮಾತ್ರ. ಆತನು ತನ್ನ ಜನರಾದ ಇಸ್ರಾಯೇಲ್ಯರಿಗೆ ಅನೇಕ ಮಾತುಗಳನ್ನು ಕೊಟ್ಟಿದ್ದನು. ಹಾಗಾಗಿನೇ ‘ಇಸ್ರಾಯೇಲ್ಯರಿಗೆ ನಿರೀಕ್ಷೆ ಕೊಡುವವನು’ ಎಂಬ ಹೆಸರು ಆತನಿಗಿದೆ. (ಯೆರೆಮೀಯ 14:8) ಅವರ ನಿರೀಕ್ಷೆಗೆ ಆಧಾರ ಆತನೇ ಆಗಿದ್ದನು. ಆ ನಿರೀಕ್ಷೆ ಬರೀ ಆಸೆ ಹಾರೈಕೆ ಆಗಿರಲಿಲ್ಲ. ಆತನು ಅವರಿಗೆ ಕೊಟ್ಟ ಮಾತನ್ನೆಲ್ಲ ನಿಜ ಮಾಡಿದನು. ಹಾಗಾಗಿನೇ ಇಸ್ರಾಯೇಲ್ಯರ ನಾಯಕ ಯೆಹೋಶುವ ಹೀಗಂದ: “ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟ ಮಾತಲ್ಲಿ ಒಂದೂ ಸುಳ್ಳಾಗಲಿಲ್ಲ ಅಂತ ನೀವು ... ಚೆನ್ನಾಗಿ ತಿಳ್ಕೊಂಡಿದ್ದೀರ.”—ಯೆಹೋಶುವ 23:14.

      ಆ ಮಾತು ಹೇಳಿ ಸಾವಿರಾರು ವರ್ಷಗಳು ಕಳೆದರೂ ಇವತ್ತಿಗೂ ಆ ಮಾತು ನೂರಕ್ಕೆ ನೂರು ಸತ್ಯ. ಬೈಬಲ್‌ ತುಂಬ ದೇವರು ಕೊಟ್ಟಿರುವ ಮಾತುಗಳೇ ಇವೆ. ಕೊಟ್ಟ ಮಾತನ್ನು ದೇವರು ಹೇಗೆ ನಿಜ ಮಾಡಿದನು ಎಂಬ ನಿಖರ ದಾಖಲೆನೂ ಇದೆ. ಕೆಲವು ಭವಿಷ್ಯವಾಣಿಗಳನ್ನು ಈಗಾಗಲೆ ನೆರವೇರಿದೆಯೆನೋ ಅನ್ನೋ ತರ ದಾಖಲೆ ಮಾಡಲಾಗಿದೆ. ಏಕೆಂದ್ರೆ ದೇವರು ಕೊಟ್ಟ ಮಾತಿಗೆ ತಪ್ಪಲ್ಲ.

      ಅದಕ್ಕೇ ಬೈಬಲನ್ನು ‘ನಿರೀಕ್ಷೆಯ ಪುಸ್ತಕ’ ಎಂದು ಹೇಳಬಹುದು. ದೇವರು ಮನುಷ್ಯರೊಟ್ಟಿಗೆ ನಡೆದುಕೊಂಡ ರೀತಿ ಬಗ್ಗೆ ನೀವು ಅಧ್ಯಯನ ಮಾಡಿದ್ರೆ ಆತನ ಮೇಲೆ ನಿರೀಕ್ಷೆ ಇಡಲು ನಿಮಗೆ ನೂರಾರು ಕಾರಣಗಳು ಸಿಗುತ್ತವೆ. ಹಾಗಾಗಿನೇ ಅಪೊಸ್ತಲ ಪೌಲ ಹೀಗೆ ಬರೆದನು: “ಹಿಂದಿನ ಕಾಲದಲ್ಲಿ ಬರೆದ ವಿಷ್ಯಗಳನ್ನೆಲ್ಲ ನಾವು ಕಲಿಬೇಕಂತ ಬರೆದ್ರು. ಈ ಪವಿತ್ರ ಬರಹಗಳು ತಾಳಿಕೊಳ್ಳೋಕೆ, ಸಾಂತ್ವನ ಪಡಿಯೋಕೆ ಸಹಾಯ ಮಾಡೋದ್ರಿಂದ ನಮಗೀಗ ನಿರೀಕ್ಷೆಯಿದೆ.”—ರೋಮನ್ನರಿಗೆ 15:4.

      ದೇವರು ಕೊಡುವ ನಿರೀಕ್ಷೆ

      ಒಂದಲ್ಲ ಒಂದು ದಿನ ಎಲ್ಲರೂ ಸಾಯುತ್ತಾರೆ. ನಮಗೆ ತುಂಬ ಇಷ್ಟ ಆದವರು ಸತ್ತಾಗ ಅಲ್ಲಿಗೆ ಕಥೆ ಮುಗಿದುಹೋಯಿತು ಅಂತ ಅನಿಸಬಹುದು, ನಮ್ಮ ನಿರೀಕ್ಷೆ ನುಚ್ಚುನೂರಾಗಬಹುದು. ಕೋಟಿಕೋಟಿ ಕೊಟ್ರೂ ಅವರನ್ನು ವಾಪಸ್‌ ತರಲಿಕ್ಕೆ ನಮಗೆ ಆಗಲ್ಲ. ಹಾಗಾಗಿನೇ ಬೈಬಲ್‌ ಸಾವನ್ನು “ಕೊನೇ ಶತ್ರು” ಎಂದು ಕರೆಯುತ್ತೆ. (1 ಕೊರಿಂಥ 15:26) ಈ ಸಮಯದಲ್ಲೇ ನಮಗೆ ನಿರೀಕ್ಷೆ ಬೇಕಾಗಿದೆ.

      ಕೊನೇ ಶತ್ರುವಾದ ಸಾವನ್ನು ಯೆಹೋವ ದೇವರು “ನಾಶಮಾಡ್ತಾನೆ” ಎಂದು ಬೈಬಲ್‌ ಹೇಳುತ್ತೆ. ಅಷ್ಟು ಶಕ್ತಿ ದೇವರಿಗಿದೆ. ಆತನು ಸತ್ತು ಹೋದ ಅನೇಕರನ್ನು ಜೀವಂತವಾಗಿ ಎಬ್ಬಿಸಿದ್ದಾನೆ. ಇದಕ್ಕೆ 9 ಉದಾಹರಣೆಗಳು ಬೈಬಲಲ್ಲಿವೆ.

      ಗಮನ ಸೆಳೆಯುವ ಒಂದು ಉದಾಹರಣೆ ಯೇಸುವಿನ ಆಪ್ತ ಸ್ನೇಹಿತ ಲಾಜರನದ್ದು. ಅವನು ಸತ್ತು ನಾಲ್ಕು ದಿನ ಆಗಿತ್ತು. ಅವನನ್ನು ಜೀವಂತವಾಗಿ ಎಬ್ಬಿಸಲು ಯೆಹೋವ ದೇವರು ತನ್ನ ಮಗ ಯೇಸುವಿಗೆ ಶಕ್ತಿ ಕೊಟ್ಟನು. ಯೇಸು ಲಾಜರನನ್ನು ಗುಟ್ಟಾಗಿ ಪುನರುತ್ಥಾನ ಮಾಡಲಿಲ್ಲ, ಎಷ್ಟೋ ಜನರ ಕಣ್ಣೆದುರಲ್ಲೇ ಮಾಡಿದ.—ಯೋಹಾನ 11:38-48, 53; 12:9, 10.

      ‘ಪುನರುತ್ಥಾನ ಆದವರು ವಯಸ್ಸಾಗಿ ಮತ್ತೆ ಸತ್ತುಹೋದರಲ್ಲಾ? ಹೀಗಿರಬೇಕಾದರೆ ಪುನರುತ್ಥಾನ ಮಾಡಿದ್ರಿಂದ ಏನು ಪ್ರಯೋಜನ ಆಯ್ತು?’ ಎಂದು ನಿಮಗೆ ಅನಿಸಬಹುದು. ನಿಜ ಅವರು ಸತ್ತುಹೋದರು. ಬೈಬಲಲ್ಲಿರುವ ಪುನರುತ್ಥಾನದ ಉದಾಹರಣೆಗಳು ಸತ್ತವರನ್ನು ದೇವರು ಖಂಡಿತ ಜೀವಂತವಾಗಿ ಎಬ್ಬಿಸುತ್ತಾನೆ ಎಂದು ದೃಢವಾಗಿ ನಂಬಲಿಕ್ಕೆ ಆಧಾರ ಕೊಡುತ್ತವೆ. ಸತ್ತವರು ಮತ್ತೆ ಜೀವಂತವಾಗಿ ಬರುತ್ತಾರೆ ಅನ್ನುವುದು ಮನಸ್ಸಿನ ಆಸೆ ಮಾತ್ರ ಅಲ್ಲ, ಆ ನಂಬಿಕೆಗೆ ಆಧಾರನೂ ಇದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ನಿಜವಾದ ನಿರೀಕ್ಷೆ ನಮಗಿದೆ.

      “ಸತ್ತವ್ರನ್ನ ಬದುಕಿಸೋದೂ ಅವ್ರಿಗೆ ಜೀವ ಕೊಡೋದೂ ನಾನೇ” ಎಂದು ಯೇಸು ಹೇಳಿದನು. (ಯೋಹಾನ 11:25) ಸತ್ತವರನ್ನು ಜೀವಂತವಾಗಿ ಎಬ್ಬಿಸಲು ಯೆಹೋವನು ಯೇಸುವಿಗೆ ಶಕ್ತಿಯನ್ನು ಕೊಡುತ್ತಾನೆ. ಯೇಸು ಹೀಗಂದನು: “ಒಂದು ಸಮಯ ಬರುತ್ತೆ, ಆಗ ಸಮಾಧಿಗಳಲ್ಲಿ ಇರೋರೆಲ್ಲ ಆತನ [ಕ್ರಿಸ್ತನ] ಸ್ವರ ಕೇಳಿ ಜೀವಂತ ಎದ್ದು ಬರ್ತಾರೆ.” (ಯೋಹಾನ 5:28, 29) ಸಮಾಧಿಯಲ್ಲಿ ಇರುವವರೆಲ್ಲರೂ ಜೀವಂತವಾಗಿ ಎದ್ದು ಬರುತ್ತಾರೆ ಮತ್ತು ಪರದೈಸ್‌ ಭೂಮಿಯಲ್ಲಿ ಸದಾ ಜೀವಿಸುತ್ತಾರೆ.

      ಪ್ರವಾದಿ ಯೆಶಾಯ ಪುನರುತ್ಥಾನವನ್ನು ಮನಮುಟ್ಟುವ ರೀತಿಯಲ್ಲಿ ಹೀಗೆ ವರ್ಣಿಸಿದನು: “ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಜೀವದಿಂದೇಳುವವು, ಮಣ್ಣಿನಲ್ಲಿ ಪವಳಿಸಿರುವವರೇ, ಎಚ್ಚತ್ತು ಹರ್ಷಧ್ವನಿ ಗೈಯಿರಿ! [ಯೆಹೋವನೇ,] ನೀನು ಸುರಿಯುವ ಇಬ್ಬನಿಯು ಜ್ಯೋತಿರ್ಮಯವಾದದ್ದು, ಭೂಮಿಯು ಸತ್ತವರನ್ನು ಹೊರಪಡಿಸುವದು.”—ಯೆಶಾಯ 26:19, ಸತ್ಯವೇದವು.

      ಈ ಮಾತು ಓದಿ ಮನಸ್ಸಿಗೆ ತುಂಬ ಸಮಾಧಾನ ಆಗುತ್ತೆ ಅಲ್ವಾ? ಗರ್ಭಿಣಿ ಹೊಟ್ಟೆಯಲ್ಲಿ ಮಗು ಸುರಕ್ಷಿತವಾಗಿ ಇರುವ ಹಾಗೆ ಸತ್ತವರು ಸುರಕ್ಷಿತ ಜಾಗದಲ್ಲಿ ಇದ್ದಾರೆ ಅಂದ್ರೆ ಸರ್ವಶಕ್ತ ದೇವರ ನೆನಪಲ್ಲಿ ಇದ್ದಾರೆ. (ಲೂಕ 20:37, 38) ಮಗು ಹುಟ್ಟಿದಾಗ ಕುಟುಂಬದವರಿಗೆ, ಬೇರೆ ಎಲ್ಲರಿಗೆ ಎಷ್ಟು ಸಂತೋಷ ಆಗುತ್ತದೋ ಅದೇ ತರ ಸತ್ತವರು ಪುನಃ ಜೀವಂತವಾಗಿ ಎದ್ದು ಬರುವಾಗ ಎಲ್ರಿಗೂ ತುಂಬ ಖುಷಿ ಆಗುತ್ತದೆ. ಒಬ್ಬರು ಸತ್ತ ಮೇಲೆ ಎಲ್ಲ ಮುಗಿಯಿತು ಅಂತಲ್ಲ. ಅವರನ್ನು ಮತ್ತೆ ನೋಡುವ ನಿರೀಕ್ಷೆ ನಮಗಿದೆ.

      ನಿರೀಕ್ಷೆಯಿಂದ ನಿಮಗೆ ಸಿಗುವ ಪ್ರಯೋಜನ

      ನಿರೀಕ್ಷೆ ಎಷ್ಟು ಮುಖ್ಯ ಅಂತ ಪೌಲ ಹೇಳಿದನು. ನಿರೀಕ್ಷೆ ಶಿರಸ್ತ್ರಾಣದಂತೆ ಅಂದ್ರೆ ಹೆಲ್ಮೆಟ್‌ ತರ ಇದೆ ಎಂದು ಹೇಳಿದನು. (1 ಥೆಸಲೊನೀಕ 5:8) ಹಿಂದಿನ ಕಾಲದಲ್ಲಿ ಒಬ್ಬ ಸೈನಿಕ ಯುದ್ಧಕ್ಕೆ ಹೋಗುವಾಗ ತಲೆಗೆ ಚರ್ಮದ ಟೋಪಿಯನ್ನು ಹಾಕಿಕೊಂಡು ಅದರ ಮೇಲೆ ಲೋಹದ ಶಿರಸ್ತ್ರಾಣವನ್ನು ಹಾಕಿಕೊಳ್ತಿದ್ದ. ಇದ್ರಿಂದ ಅವನ ತಲೆಗೆ ಗಾಯ ಆಗ್ತಿರಲಿಲ್ಲ. ಹೆಲ್ಮೆಟ್‌ ತಲೆಯನ್ನು ಕಾಪಾಡುವ ಹಾಗೆ ನಿರೀಕ್ಷೆ ಮನಸ್ಸನ್ನು, ಯೋಚಿಸುವ ಸಾಮರ್ಥ್ಯವನ್ನು ಕಾಪಾಡುತ್ತದೆ. ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿರುವ ದೃಢ ನಿರೀಕ್ಷೆ ನಮಗಿದ್ದರೆ ಕಷ್ಟಗಳು ಬಂದ್ರೂ ನಾವು ಹೆದರಿಕೊಂಡು ಕುಗ್ಗಿ ಹೋಗಿ ಮನಶ್ಶಾಂತಿ ಹಾಳು ಮಾಡಿಕೊಳ್ಳುವುದಿಲ್ಲ. ನಮ್ಮೆಲ್ಲರಿಗೂ ಅಂಥ ನಿರೀಕ್ಷೆ ಬೇಕೇಬೇಕು ಅಲ್ವಾ?

      ನಿರೀಕ್ಷೆ ಎಷ್ಟು ಮುಖ್ಯ ಅಂತ ತೋರಿಸಲು ಪೌಲ ಇನ್ನೊಂದು ಉದಾಹರಣೆ ಕೊಟ್ಟನು. ಅವನು ಹೀಗಂದ: “ಈ ನಿರೀಕ್ಷೆ ನಮ್ಮ ಜೀವನಕ್ಕೆ ಲಂಗರದ ಹಾಗಿದೆ. ಸಂಶಯಪಡದೆ ದೃಢವಾಗಿರೋಕೆ ಅದು ಸಹಾಯ ಮಾಡುತ್ತೆ.” (ಇಬ್ರಿಯ 6:19) ಈ ವಚನದಲ್ಲಿ ಪೌಲ ನಿರೀಕ್ಷೆಯನ್ನು ಲಂಗರಕ್ಕೆ ಹೋಲಿಸಿದ್ದಾನೆ. ಲಂಗರ ಎಷ್ಟು ಮುಖ್ಯ ಅಂತ ಅವನಿಗೆ ಗೊತ್ತಿತ್ತು. ಯಾಕಂದ್ರೆ ಅವನು ತುಂಬ ಸಲ ಹಡಗು ಪ್ರಯಾಣ ಮಾಡಿದ್ದ. ಚಂಡಮಾರುತ ಬಂದಾಗ ನಾವಿಕರು ನೀರಿನಲ್ಲಿ ಲಂಗರು ಹಾಕುತ್ತಾರೆ. ಲಂಗರು ಸಮುದ್ರದ ತಳಕ್ಕೆ ಹೋಗಿ ಒಂದು ಕಡೆ ಬಿಗಿಯಾಗಿ ಸಿಕ್ಕಿಕೊಂಡಾಗ ಚಂಡಮಾರುತದ ಅಬ್ಬರಕ್ಕೆ ಹಡಗು ಬಂಡೆಗಳಿಗೆ ಅಪ್ಪಳಿಸಿ ಹೊಡೆದು ಹೋಗುತ್ತಿರಲಿಲ್ಲ.

      ಅದೇ ತರ ದೇವರು ಕೊಟ್ಟಿರುವ ಮಾತುಗಳು ನಮಗೆ ಎಷ್ಟೇ ಕಷ್ಟಗಳು ಇದ್ರೂ ನಿರೀಕ್ಷೆ ಕಳಕೊಳ್ಳದೆ “ದೃಢವಾಗಿರೋಕೆ” ಸಹಾಯ ಮಾಡುತ್ತದೆ. ಯುದ್ಧ, ಹಿಂಸಾಚಾರ, ದುಃಖ, ಸಾವು ಕೂಡ ಇಲ್ಲದ ಕಾಲ ಬೇಗನೆ ಬರುತ್ತೆ ಎಂದು ಯೆಹೋವ ದೇವರು ಮಾತುಕೊಟ್ಟಿದ್ದಾನೆ. (ಪುಟ 10 ರಲ್ಲಿರುವ ಚೌಕ ನೋಡಿ.) ದೇವರು ಕೊಟ್ಟ ಆ ಮಾತಿನ ಮೇಲೆ ನಂಬಿಕೆಯಿದ್ದರೆ ನಮಗೆ ಈ ಲೋಕದಿಂದ ಎಷ್ಟೇ ಒತ್ತಡ ಬಂದ್ರೂ ದೇವರ ಮಟ್ಟಗಳಿಗೆ ಅನುಸಾರ ಬದುಕುವುದನ್ನು ನಾವು ಬಿಟ್ಟುಬಿಡಲ್ಲ.

      ಯೆಹೋವ ದೇವರು ನಿಮಗೂ ಆ ನಿರೀಕ್ಷೆ ಕೊಟ್ಟಿದ್ದಾನೆ. ನೀವು ಸಂತೋಷವಾಗಿ ಶಾಶ್ವತವಾಗಿ ಬದುಕಬೇಕು ಅನ್ನೋದೇ ಆತನ ಆಸೆ. “ಎಲ್ಲ ತರದ ಜನ್ರು ರಕ್ಷಣೆ ಪಡಿಬೇಕು” ಅಂತ ಆತನು ಇಷ್ಟಪಡುತ್ತಾನೆ. ನೀವು ರಕ್ಷಣೆ ಪಡೆಯಬೇಕಾದ್ರೆ “ಸತ್ಯದ ಬಗ್ಗೆ ಸರಿಯಾದ ಜ್ಞಾನ ಪಡ್ಕೊಬೇಕು.” (1 ತಿಮೊತಿ 2:4) ಈ ಪತ್ರಿಕೆಯ ಪ್ರಕಾಶಕರು ನೀವು ಬೈಬಲ್‌ ಸ್ಟಡಿ ಮಾಡಿ ಜೀವ ಕೊಡುವ ಜ್ಞಾನ ಪಡೆದುಕೊಳ್ಳಬೇಕು ಎಂದು ಪ್ರೋತ್ಸಾಹಿಸ್ತಾರೆ. ದೇವರು ಕೊಡುವ ನಿರೀಕ್ಷೆ ಈ ಲೋಕ ಕೊಡುವ ನಿರೀಕ್ಷೆಗಿಂತ ತುಂಬ ಶ್ರೇಷ್ಠ.

      ಈ ನಿರೀಕ್ಷೆ ನಿಮಗಿದ್ರೆ ನೀವು ಯಾವತ್ತೂ ಧೈರ್ಯ ಕಳೆದುಕೊಳ್ಳಲ್ಲ. ಏಕೆಂದ್ರೆ ನೀವಿಟ್ಟಿರುವ ಒಳ್ಳೇ ಗುರಿಗಳನ್ನು ಮುಟ್ಟಲು ದೇವರು ಸಹಾಯ ಮಾಡ್ತಾನೆ. (2 ಕೊರಿಂ. 4:7; ಫಿಲಿ. 4:13) ಈ ತರ ನಿರೀಕ್ಷೆ ಯಾರಿಗೆ ತಾನೇ ಬೇಡ. ಈ ನಿರೀಕ್ಷೆ ನಂಬಿಕೆ ಕಳಕೊಳ್ಳದೇ ಇರಲು ಸಹಾಯ ಮಾಡುತ್ತೆ. ಹಾಗಾಗಿ ಆ ನಿರೀಕ್ಷೆಯನ್ನು ಬಿಡಬೇಡಿ.

      [ಪುಟ 11 ರಲ್ಲಿರುವ ಚೌಕ/ಚಿತ್ರ]

      ನಿರೀಕ್ಷೆಯಿಂದ ಇರಲು ಕಾರಣಗಳು

      ನಿರೀಕ್ಷೆಯಿಂದ ಇರಲು ನಮಗೆ ಸಹಾಯ ಮಾಡುವ ವಚನಗಳು:

      ◼ ನಾವು ಮುಂದೆ ಖುಷಿಯಾಗಿ ಇರುತ್ತೇವೆ ಎಂದು ದೇವರು ಮಾತುಕೊಟ್ಟಿದ್ದಾನೆ.

      ಇಡೀ ಭೂಮಿ ಸುಂದರ ತೋಟದಂತೆ ಆಗ್ತದೆ. ಎಲ್ಲರೂ ಖುಷಿಯಾಗಿ ಒಂದೇ ಕುಟುಂಬದ ತರ ಜೀವನ ಮಾಡ್ತಾರೆ ಅಂತ ಬೈಬಲ್‌ ಹೇಳುತ್ತದೆ.—ಕೀರ್ತನೆ 37:11, 29; ಯೆಶಾಯ 25:8; ಪ್ರಕಟನೆ 21:3, 4.

      ◼ ದೇವರು ಯಾವತ್ತೂ ಸುಳ್ಳು ಹೇಳಲ್ಲ.

      ಯೆಹೋವನು ಪವಿತ್ರ ಅಂದ್ರೆ ಪರಿಶುದ್ಧ ದೇವರು. ಹಾಗಾಗಿ ಆತನು ಯಾವತ್ತೂ ಸುಳ್ಳು ಹೇಳಲ್ಲ. ಎಲ್ಲ ತರದ ಸುಳ್ಳನ್ನು ಆತನು ದ್ವೇಷಿಸುತ್ತಾನೆ.—ಜ್ಞಾನೋಕ್ತಿ 6:16-19; ಯೆಶಾಯ 6:2, 3; ತೀತ 1:2; ಇಬ್ರಿಯ 6:18.

      ◼ ದೇವರಿಗೆ ಅಪಾರ ಶಕ್ತಿಯಿದೆ.

      ಯೆಹೋವ ಒಬ್ಬನೇ ಸರ್ವಶಕ್ತ ದೇವರು. ಆತನು ಹೇಳಿದ್ದನ್ನು ಮಾಡೇ ಮಾಡುತ್ತಾನೆ. ಅದನ್ನು ತಡೆಯಲು ಯಾರಿಂದನೂ ಯಾವುದರಿಂದನೂ ಆಗಲ್ಲ.—ವಿಮೋಚನಕಾಂಡ 15:11; ಯೆಶಾಯ 40:25, 26.

      ◼ ನಾವು ಶಾಶ್ವತವಾಗಿ ಬದುಕಬೇಕು ಅನ್ನೋದೇ ದೇವರ ಇಷ್ಟ.

      —ಯೋಹಾನ 3:16; 1 ತಿಮೊತಿ 2:3, 4.

      ◼ ದೇವರು ನಮ್ಮನ್ನು ನಂಬುತ್ತಾನೆ.

      ದೇವರು ನಮ್ಮಲ್ಲಿ ಯಾವಾಗಲೂ ತಪ್ಪನ್ನೇ ಹುಡುಕುತ್ತಾ ಇರಲ್ಲ. ಆತನು ನಮ್ಮಲ್ಲಿರುವ ಒಳ್ಳೇ ಗುಣಗಳನ್ನು, ಸರಿಯಾದದ್ದನ್ನು ಮಾಡಲು ನಾವು ಹಾಕುವ ಪ್ರಯತ್ನಗಳನ್ನು ಗಮನಿಸ್ತಾನೆ. (ಕೀರ್ತನೆ 103:12-14; 130:3; ಇಬ್ರಿಯ 6:10) ಯಾವುದು ಸರಿನೋ ಅದನ್ನು ನಾವು ಮಾಡ್ತೀವಿ ಅನ್ನೋ ನಂಬಿಕೆ ಆತನಿಗಿದೆ. ನಾವು ಸರಿಯಾದದ್ದನ್ನು ಮಾಡಿದಾಗ ಆತನಿಗೆ ತುಂಬ ಖುಷಿ ಆಗುತ್ತೆ.—ಜ್ಞಾನೋಕ್ತಿ 27:11.

      ◼ ದೇವರಿಗೆ ಇಷ್ಟ ಆಗುವಂಥ ಗುರಿಗಳನ್ನು ಇಟ್ರೆ ಅವುಗಳನ್ನು ಮುಟ್ಟಲಿಕ್ಕೆ ಆತನು ನಮಗೆ ಸಹಾಯ ಮಾಡ್ತಾನೆ.

      ನಮಗೆ ಸಹಾಯ ಮಾಡಲಿಕ್ಕೆ ಯಾರೂ ಇಲ್ಲ ಅಂತ ನಾವು ಅಂದುಕೊಳ್ಳಬಾರದು. ಏಕೆಂದ್ರೆ ದೇವರು ನಮಗೆ ಉದಾರವಾಗಿ ಪವಿತ್ರಶಕ್ತಿಯನ್ನು ಕೊಟ್ಟು ಸಹಾಯ ಮಾಡುತ್ತಾನೆ.—ಫಿಲಿಪ್ಪಿ 4:13.

      ◼ ನಾವು ದೇವರಲ್ಲಿ ಭರವಸೆಯಿಟ್ಟರೆ ಯಾವತ್ತೂ ನಿರಾಶೆ ಆಗಲ್ಲ.

      ನಾವು ದೇವರನ್ನು ಪೂರ್ತಿ ನಂಬಬಹುದು. ಆತನ ಮೇಲೆ ಭರವಸೆ ಇಟ್ರೆ ಆತನು ನಮಗೆ ನಿರಾಶೆ ಮಾಡಲ್ಲ.—ಕೀರ್ತನೆ 25:3.

      [ಪುಟ 12 ರಲ್ಲಿರುವ ಚಿತ್ರ]

      ಹೆಲ್ಮೆಟ್‌ ತಲೆಯನ್ನು ಕಾಪಾಡುವ ಹಾಗೆ ನಿರೀಕ್ಷೆ ಮನಸ್ಸನ್ನು ಕಾಪಾಡುತ್ತೆ

      [ಪುಟ 12 ರಲ್ಲಿರುವ ಚಿತ್ರ]

      ನಿರೀಕ್ಷೆ ಲಂಗರದಂತೆ ಇದೆ, ಅದು ದೃಢವಾಗಿರೋಕೆ ಸಹಾಯ ಮಾಡುತ್ತೆ

      [ಕೃಪೆ]

      Courtesy René Seindal/Su concessione del Museo Archeologico Regionale A. Salinas di Palermo

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ