ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w23 ಏಪ್ರಿಲ್‌ ಪು. 20-25
  • ಕೂಟಗಳಲ್ಲಿ ಒಬ್ರನ್ನೊಬ್ರು ಪ್ರೋತ್ಸಾಹಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೂಟಗಳಲ್ಲಿ ಒಬ್ರನ್ನೊಬ್ರು ಪ್ರೋತ್ಸಾಹಿಸಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಚಿಕ್ಕ ಸಭೆಯಲ್ಲಿ ಪ್ರೋತ್ಸಾಹಿಸೋದು ಹೇಗೆ?
  • ದೊಡ್ಡ ಸಭೆಯಲ್ಲಿ ಪ್ರೋತ್ಸಾಹಿಸೋದು ಹೇಗೆ?
  • ಇನ್ನೂ ಹೇಗೆಲ್ಲಾ ಪ್ರೋತ್ಸಾಹಿಸಬಹುದು?
  • ಸಭೆಯಲ್ಲಿ ಯೆಹೋವನನ್ನು ಸ್ತುತಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • “ಸಭಾಮಧ್ಯದಲ್ಲಿ” ಯೆಹೋವನನ್ನು ಸ್ತುತಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಕೂಟಗಳಲ್ಲಿ ಉತ್ತರಗಳನ್ನು ಹೇಳುವ ಮೂಲಕ ಒಬ್ಬರನ್ನೊಬ್ಬರನ್ನು ಪ್ರೋತ್ಸಾಹಿಸಿರಿ
    1998 ನಮ್ಮ ರಾಜ್ಯದ ಸೇವೆ
  • ಚೆನ್ನಾಗಿ ಉತ್ತರ ಕೊಡುವುದು ಹೇಗೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
w23 ಏಪ್ರಿಲ್‌ ಪು. 20-25

ಅಧ್ಯಯನ ಲೇಖನ 18

ಕೂಟಗಳಲ್ಲಿ ಒಬ್ರನ್ನೊಬ್ರು ಪ್ರೋತ್ಸಾಹಿಸಿ

“ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ . . . ಪ್ರೋತ್ಸಾಹಿಸ್ತಾ ಇರೋಣ.”—ಇಬ್ರಿ. 10:24, 25.

ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು

ಈ ಲೇಖನದಲ್ಲಿ ಏನಿದೆ?a

1. ನಾವ್ಯಾಕೆ ಕೂಟಗಳಲ್ಲಿ ಉತ್ರ ಹೇಳ್ತೀವಿ?

ನಾವು ಕೂಟಗಳಿಗೆ ಯಾಕೆ ಹೋಗ್ತೀವಿ? ಒಂದು, ಯೆಹೋವನನ್ನ ಹೊಗಳೋಕೆ. (ಕೀರ್ತ. 26:12; 111:1) ಇನ್ನೊಂದು, ಕಷ್ಟದಲ್ಲಿರೋ ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸೋಕೆ. (1 ಥೆಸ. 5:11) ನಾವು ಕೂಟಗಳಲ್ಲಿ ಕೈಯೆತ್ತಿ ಉತ್ರ ಕೊಟ್ಟಾಗ ಈ ಎರಡೂ ವಿಷ್ಯಗಳನ್ನ ಮಾಡ್ತೀವಿ.

2. ನಮಗೆ ಯಾವಾಗೆಲ್ಲಾ ಉತ್ರ ಕೊಡೋಕೆ ಅವಕಾಶ ಸಿಗುತ್ತೆ?

2 ಪ್ರತಿವಾರ ನಮಗೆ ಕೂಟಗಳಲ್ಲಿ ಉತ್ರ ಹೇಳೋಕೆ ಅವಕಾಶ ಸಿಗುತ್ತೆ. ವಾರಾಂತ್ಯ ಕೂಟದಲ್ಲಿ ಕಾವಲಿನಬುರುಜು ಅಧ್ಯಯನ ನಡೀವಾಗ ಉತ್ರ ಕೊಡಬಹುದು, ಮಧ್ಯವಾರದ ಕೂಟದಲ್ಲಿ, ಬೈಬಲಿನಲ್ಲಿರುವ ರತ್ನಗಳು ಭಾಗದಲ್ಲಿ, ಸಭಾ ಬೈಬಲ್‌ ಅಧ್ಯಯನದಲ್ಲಿ ಅಥವಾ ಬೇರೆ ಭಾಗಗಳಲ್ಲಿ ಚರ್ಚೆ ನಡೀವಾಗ ಉತ್ರ ಕೊಡಬಹುದು.

3. (ಎ) ನಮಗೆ ಯಾವಾಗ ಉತ್ರ ಕೊಡೋಕೆ ಆಗಲ್ಲ? (ಬಿ) ಆಗ ಇಬ್ರಿಯ 10:24, 25 ಹೇಗೆ ಸಹಾಯ ಮಾಡುತ್ತೆ?

3 ನಾವು ಯೆಹೋವ ದೇವರನ್ನ ಹೊಗಳಬೇಕು ನಮ್ಮ ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸಬೇಕು ಅಂತ ನಾವೆಲ್ಲರೂ ಆಸೆ ಪಡ್ತೀವಿ. ಆದ್ರೆ ಕೆಲವರಿಗೆ ಉತ್ರ ಹೇಳೋಕೆ ತುಂಬ ಭಯ ಆಗುತ್ತೆ. ಇನ್ನೂ ಕೆಲವರಿಗೆ ತುಂಬ ಉತ್ರಗಳನ್ನ ಹೇಳಬೇಕು ಅಂತ ಆಸೆ ಇರುತ್ತೆ. ಆದ್ರೆ ಅಷ್ಟು ಅವಕಾಶಗಳು ಸಿಗದೆ ಹೋಗಬಹುದು. ಆಗ ನಾವೇನು ಮಾಡೋದು? ಅದಕ್ಕೆ ಪೌಲ ಇಬ್ರಿಯರಿಗೆ ಏನು ಹೇಳಿದ ಅಂತ ನೋಡಿ. ಅಲ್ಲಿ ಅವನು ಕೂಟಗಳಿಗೆ ಸೇರಿ ಬರುವಾಗ ನಮ್ಮ ಗಮನ ‘ಒಬ್ರು ಇನ್ನೊಬ್ರನ್ನ ಪ್ರೋತ್ಸಾಹಿಸೋದ್ರ’ ಮೇಲೆ ಇರಬೇಕು ಅಂತ ಹೇಳಿದ. (ಇಬ್ರಿಯ 10:24, 25 ಓದಿ.) ಹಾಗಾಗಿ ನಾವು ಕೊಡೋ ಚಿಕ್ಕ ಚಿಕ್ಕ ಉತ್ರಗಳಿಂದಾನೂ ಬೇರೆಯವರಿಗೆ ಪ್ರೋತ್ಸಾಹ ಸಿಗುತ್ತೆ. ಇದನ್ನ ಮನಸ್ಸಲ್ಲಿಟ್ರೆ ನಮಗೆ ಉತ್ರ ಹೇಳೋಕೆ ಧೈರ್ಯ ಬರುತ್ತೆ. ಒಂದುವೇಳೆ ನಮಗೆ ಜಾಸ್ತಿ ಉತ್ರಗಳನ್ನ ಹೇಳೋಕೆ ಅವಕಾಶ ಸಿಕ್ಕಿಲ್ಲ ಅಂದ್ರೆ ಬೇಜಾರ್‌ ಮಾಡ್ಕೊಬಾರದು, ಬೇರೆಯವರಿಗೆ ಅವಕಾಶ ಸಿಕ್ಕಿದ್ದಕ್ಕೆ ಖುಷಿಪಡಬೇಕು.—1 ಪೇತ್ರ 3:8.      

4. ಈ ಲೇಖನದಲ್ಲಿ ಏನ್‌ ಕಲಿತೀವಿ?

4 ಈ ಲೇಖನದಲ್ಲಿ ನಾವೇನು ಕಲಿತೀವಿ? ಚಿಕ್ಕ ಸಭೆಯಲ್ಲಿ ಕಮ್ಮಿ ಜನ ಇರ್ತಾರೆ. ಹಾಗಾಗಿ ಉತ್ರ ಹೇಳೋರೂ ಕಮ್ಮಿ ಇರ್ತಾರೆ. ಆಗ ನಾವು ಹೇಗೆ ಒಬ್ರನ್ನೊಬ್ರು ಪ್ರೋತ್ಸಾಹಿಸಬಹುದು? ದೊಡ್ಡ ಸಭೆಯಲ್ಲಿ ತುಂಬ ಜನ ಇರೋದ್ರಿಂದ ಉತ್ರ ಹೇಳೋಕೆ ಜಾಸ್ತಿ ಜನ ಕೈ ಎತ್ತುತ್ತಾರೆ. ಅಲ್ಲೂ ನಾವು ಒಬ್ರನ್ನೊಬ್ರು ಪ್ರೋತ್ಸಾಹಿಸೋಕೆ ಏನ್‌ ಮಾಡಬಹುದು? ಬೇರೆಯವರಿಗೆ ಪ್ರೋತ್ಸಾಹ ಕೊಡಬೇಕಂದ್ರೆ ನಮ್ಮ ಉತ್ರ ಹೇಗಿರಬೇಕು? ಇದನ್ನೆಲ್ಲಾ ನಾವು ಈ ಲೇಖನದಲ್ಲಿ ಕಲಿತೀವಿ.

ಚಿಕ್ಕ ಸಭೆಯಲ್ಲಿ ಪ್ರೋತ್ಸಾಹಿಸೋದು ಹೇಗೆ?

5. ಚಿಕ್ಕ ಸಭೆಯಲ್ಲಿದ್ರೆ ನೀವು ಹೇಗೆ ಬೇರೆಯವರಿಗೆ ಪ್ರೋತ್ಸಾಹ ಕೊಡಬಹುದು?

5 ಕೆಲವು ಸಭೆಗಳಲ್ಲಿ ಅಥವಾ ಗುಂಪುಗಳಲ್ಲಿ ಕಮ್ಮಿ ಜನ ಇರಬಹುದು. ಆಗ ನೀವೇ ಕೈಯೆತ್ತಿ ತುಂಬ ಉತ್ರಗಳನ್ನ ಕೊಡಬೇಕಾಗಬಹುದು. ನೀವು ಕೈಯೆತ್ತಿಲ್ಲಾಂದ್ರೆ ಕೂಟ ನಡೆಸುವವರು ಕಾಯಬೇಕಾಗುತ್ತೆ. ಅದಕ್ಕೆ ನೀವು ಆಗಾಗ ಉತ್ರ ಕೊಡಿ. ನೀವು ಹೀಗೆ ಮಾಡುವಾಗ ನಿಮ್ಮನ್ನ ನೋಡಿ ಬೇರೆಯವರಿಗೂ ಉತ್ರ ಕೊಡಬೇಕು ಅಂತ ಪ್ರೋತ್ಸಾಹ ಸಿಗುತ್ತೆ.

6-7. ಉತ್ರ ಹೇಳೋಕೆ ಭಯ ಆದ್ರೆ ಏನು ಮಾಡಬಹುದು?

6 ಉತ್ರ ಕೊಡೋಕೆ ತುಂಬ ಜನ್ರಿಗೆ ಭಯ ಆಗುತ್ತೆ. ನಿಮಗೂ ಭಯ ಆಗುತ್ತಾ? ಆದ್ರೆ ನಿಮ್ಮಿಂದ ಸಹೋದರ ಸಹೋದರಿಯರಿಗೆ ಪ್ರೋತ್ಸಾಹ ಸಿಗಬೇಕಂದ್ರೆ ನೀವು ಉತ್ರ ಕೊಡಬೇಕು. ಹಾಗಾಗಿ ಆ ಭಯ ಕಮ್ಮಿಯಾಗೋಕೆ ನೀವೇನ್‌ ಮಾಡಬಹುದು?

7 ಅದಕ್ಕೆ ಕಾವಲಿನಬುರುಜು ಪತ್ರಿಕೆಯಲ್ಲಿರೋ ಕೆಲವು ಸಲಹೆಗಳು ನಿಮಗೆ ಸಹಾಯ ಮಾಡುತ್ತೆ.b ಉದಾಹರಣೆಗೆ ಚೆನ್ನಾಗಿ ತಯಾರಿ ಮಾಡಿ. (ಜ್ಞಾನೋ. 21:5) ನೀವು ಚೆನ್ನಾಗಿ ತಯಾರಿ ಮಾಡಿದ್ರೆ ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ತೀರ. ಆಗ ಉತ್ರ ಹೇಳೋಕೆ ಸುಲಭ ಆಗುತ್ತೆ. ಅಷ್ಟೇ ಅಲ್ಲ, ನೀವು ಉತ್ರಗಳನ್ನ ಚಿಕ್ಕ-ಚಿಕ್ಕದಾಗಿ ಕೊಡೋಕೆ ಪ್ರಯತ್ನ ಮಾಡಿ. (ಜ್ಞಾನೋ. 15:23; 17:27) ಆಗ ನಿಮಗೆ ಭಯ ಆಗಲ್ಲ. ತುಂಬ ದೊಡ್ಡ ದೊಡ್ಡ ಉತ್ರಗಳನ್ನ ಹೇಳಿದ್ರೆ ಅದನ್ನ ಅರ್ಥ ಮಾಡ್ಕೊಳ್ಳೋಕೆ ಬೇರೆಯವ್ರಿಗೆ ಕಷ್ಟ ಆಗಬಹುದು. ಹಾಗಾಗಿ ನಿಮ್ಮ ಸ್ವಂತ ಮಾತಲ್ಲಿ ಚಿಕ್ಕ-ಚಿಕ್ಕ ಉತ್ರಗಳನ್ನ ಹೇಳಿ. ಆಗ ನೀವು ಚೆನ್ನಾಗಿ ತಯಾರಿ ಮಾಡಿದ್ದೀರ, ನೀವು ಹೇಳ್ತಿರೋದು ನಿಮಗೆ ಚೆನ್ನಾಗಿ ಅರ್ಥ ಆಗಿದೆ ಅಂತ ತೋರಿಸ್ತೀರ.

8. ನಮ್ಮಿಂದ ಆದಷ್ಟು ಪ್ರಯತ್ನ ಹಾಕಿದಾಗ ಯೆಹೋವನಿಗೆ ಹೇಗನಿಸುತ್ತೆ?

8 ಇಷ್ಟೆಲ್ಲ ಮಾಡಿದ ಮೇಲೂ ಒಂದು ಉತ್ರ ಹೇಳೋಕೂ ಆಗ್ತಿಲ್ಲಾಂದ್ರೆ ಬೇಜಾರ್‌ ಮಾಡ್ಕೊಬೇಡಿ. ಯೆಹೋವ ನಿಮ್ಮ ಪ್ರಯತ್ನನ ನೋಡ್ತಾ ಇದ್ದಾನೆ. ಅದನ್ನ ತುಂಬ ಮೆಚ್ಕೊಳ್ತಾನೆ. (ಲೂಕ 21:1-4) ಆತನು ಯಾವತ್ತೂ ನಿಮ್ಮಿಂದ ಮಾಡೋಕೆ ಆಗದೇ ಇರೋದನ್ನ ಕೇಳಲ್ಲ. (ಫಿಲಿ. 4:5) ಹಾಗಾಗಿ ನಿಮ್ಮಿಂದ ಏನು ಮಾಡಕ್ಕಾಗುತ್ತೆ ಅಂತ ಚೆನ್ನಾಗಿ ಯೋಚ್ನೆ ಮಾಡಿ. ಆಮೇಲೆ ಅದಕ್ಕೆ ತಕ್ಕ ಹಾಗೆ ಗುರಿಗಳನ್ನ ಇಡಿ. ಧೈರ್ಯ ಕೊಡಪ್ಪಾ ಅಂತ ಯೆಹೋವನ ಹತ್ರ ಬೇಡ್ಕೊಳ್ಳಿ. ಒಂದು ಉತ್ರ ಆದ್ರೂ ಹೇಳಬೇಕು ಅನ್ನೋ ಗುರಿ ಇಡಿ.    

ದೊಡ್ಡ ಸಭೆಯಲ್ಲಿ ಪ್ರೋತ್ಸಾಹಿಸೋದು ಹೇಗೆ?

9. ದೊಡ್ಡ ಸಭೆಯಲ್ಲಿ ಉತ್ರ ಹೇಳೋಕೆ ಯಾಕೆ ಕಷ್ಟ ಆಗಬಹುದು?

9 ದೊಡ್ಡ ಸಭೆ ಅಂದ್ಮೇಲೆ ಅಲ್ಲಿ ತುಂಬ ಜನ ಪ್ರಚಾರಕರು ಇರ್ತಾರೆ. ಹಾಗಾಗಿ ನಾವು ಉತ್ರ ಹೇಳಬೇಕು ಅಂತ ನಾವು ತುಂಬ ಸಲ ಕೈ ಎತ್ತಿದ್ರೂ ನಮಗೆ ಅವಕಾಶನೇ ಸಿಗದೇ ಹೋಗಬಹುದು. ಡ್ಯಾನಿಯೆಲಾ ಅನ್ನೋ ಸಹೋದರಿಗೂ ಹೀಗೇ ಆಯ್ತು.c ಅವ್ರಿಗೆ ಕೂಟಗಳಲ್ಲಿ ಉತ್ರ ಕೊಡೋದು ಅಂದ್ರೆ ತುಂಬಾ ಇಷ್ಟ. ‘ಉತ್ರ ಹೇಳೋದ್ರಿಂದ ಯೆಹೋವನನ್ನ ಆರಾಧಿಸೋಕೆ ಆಗುತ್ತೆ, ಬೇರೆಯವ್ರನ್ನ ಪ್ರೋತ್ಸಾಹಿಸೋಕೆ ಆಗುತ್ತೆ. ಅಷ್ಟೇ ಅಲ್ಲ, ಬೈಬಲಿಂದ ಕಲಿತ ವಿಷ್ಯಗಳು ನನಗಿನ್ನೂ ಚೆನ್ನಾಗಿ ಅರ್ಥ ಆಗುತ್ತೆ’ ಅಂತ ಅವರು ಹೇಳ್ತಾರೆ. ಆದ್ರೆ ಆ ಸಹೋದರಿ ಒಂದು ದೊಡ್ಡ ಸಭೆಗೆ ಹೋದಾಗ ಕೂಟಗಳಲ್ಲಿ ಉತ್ರ ಹೇಳೋಕೆ ಅವ್ರಿಗೆ ಜಾಸ್ತಿ ಅವಕಾಶಗಳು ಸಿಗ್ತಾ ಇರಲಿಲ್ಲ. ಕೆಲವೊಮ್ಮೆ ಒಂದು ಸಲನೂ ಅವಕಾಶ ಸಿಗ್ತಾ ಇರಲಿಲ್ಲ. “ಆಗ ನನಗೆ ತುಂಬಾ ಬೇಜಾರ್‌ ಆಗ್ತಿತ್ತು. ದೊಡ್ಡ ಅವಕಾಶನ ಕಳ್ಕೊಂಡುಬಿಟ್ಟೆ ಅಂತ ಅನಿಸ್ತಿತ್ತು. ಬೇಕುಬೇಕಂತಾನೇ ನನ್ನನ್ನ ಯಾರೂ ಕೇಳ್ತಿಲ್ಲ ಅಂದ್ಕೊಳ್ತಿದ್ದೆ” ಅಂತ ಡ್ಯಾನಿಯೆಲಾ ಹೇಳ್ತಾರೆ.      

10. ಕೂಟದಲ್ಲಿ ಉತ್ರ ಹೇಳೋಕೆ ಅವಕಾಶಗಳು ಕಮ್ಮಿ ಇದ್ದಾಗ ನೀವು ಏನೆಲ್ಲ ಮಾಡಬಹುದು?

10 ಸಹೋದರಿ ಡ್ಯಾನಿಯೆಲಾ ತರಾನೇ ನಿಮಗೂ ಯಾವತ್ತಾದ್ರೂ ಅನಿಸಿದ್ಯಾ? ಹಾಗಿದ್ರೆ ಕೂಟಗಳಲ್ಲಿ ಉತ್ರ ಹೇಳೋದನ್ನ ನಿಲ್ಲಿಸಿಬಿಡಬೇಡಿ. ಪ್ರಯತ್ನ ಮಾಡ್ತಾನೇ ಇರಿ. ಅದಕ್ಕೆ ಏನೆಲ್ಲಾ ಮಾಡಬಹುದು? ಕೂಟಗಳಲ್ಲಿರೋ ಎಲ್ಲಾ ಭಾಗಗಳನ್ನೂ ಚೆನ್ನಾಗಿ ತಯಾರಿ ಮಾಡ್ಕೊಂಡು ಬನ್ನಿ. ಆಗ ಉತ್ರ ಹೇಳೋಕೆ ಒಂದಲ್ಲ ಒಂದು ಅವಕಾಶ ಖಂಡಿತ ಸಿಗುತ್ತೆ. ಕಾವಲಿನಬುರುಜು ಅಧ್ಯಯನದಲ್ಲಿ ಉತ್ರ ಹೇಳೋಕೆ ನೀವು ಏನೆಲ್ಲ ಮಾಡಬಹುದು? ಮುಖ್ಯ ವಿಷ್ಯಕ್ಕೂ ಒಂದೊಂದು ಪ್ಯಾರಗೂ ಏನು ಸಂಬಂಧ ಅಂತ ಯೋಚ್ನೆ ಮಾಡಿ ಉತ್ರಗಳನ್ನ ತಯಾರಿ ಮಾಡ್ಕೊಳ್ಳಿ. ಕೆಲವೊಮ್ಮೆ ಸುಲಭವಾಗಿ ಅರ್ಥ ಆಗದಿರೋ ಬೈಬಲ್‌ ವಿಷ್ಯಗಳು ಪ್ಯಾರದಲ್ಲಿ ಇರಬಹುದು. ಅಂಥ ಪ್ಯಾರಗಳನ್ನ ಚೆನ್ನಾಗಿ ತಯಾರಿ ಮಾಡ್ಕೊಂಡು ಬನ್ನಿ. ಆಗ ಉತ್ರ ಹೇಳೋಕೆ ಅವಕಾಶ ಸಿಕ್ಕೇ ಸಿಗುತ್ತೆ. (1 ಕೊರಿಂ. 2:10) ಇಷ್ಟೆಲ್ಲಾ ಪ್ರಯತ್ನ ಮಾಡಿದ್ರೂ ಕೂಟದಲ್ಲಿ ಒಂದು ಉತ್ರ ಹೇಳೋಕೂ ಅವಕಾಶ ಸಿಗಲಿಲ್ಲಾಂದ್ರೆ ಆಗೇನು ಮಾಡೋದು? ಕೂಟ ಆರಂಭ ಆಗೋ ಮುಂಚೆನೇ ಚರ್ಚೆಯನ್ನ ನಡೆಸೋ ಸಹೋದರನ ಹತ್ರ ಮಾತಾಡಿ. ಯಾವ ಪ್ಯಾರಗೆ ಉತ್ರ ತಯಾರಿ ಮಾಡ್ಕೊಂಡು ಬಂದಿದ್ದೀರ ಅಂತ ಅವ್ರಿಗೆ ಹೇಳಿ. ಆಗ ಕೂಟದಲ್ಲಿ ಉತ್ರ ಹೇಳೋಕೆ ಒಂದು ಅವಕಾಶ ಆದ್ರೂ ಸಿಕ್ಕೇ ಸಿಗುತ್ತೆ.

11. ಫಿಲಿಪ್ಪಿ 2:4ರಲ್ಲಿ ಇರೋ ತರ ನಾವೇನು ಮಾಡಬೇಕು?

11 ಫಿಲಿಪ್ಪಿ 2:4 ಓದಿ. ಅಪೊಸ್ತಲ ಪೌಲ ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ತಮ್ಮ ಬಗ್ಗೆ ಮಾತ್ರ ಅಲ್ಲ ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಬೇಕು ಅಂತ ಹೇಳಿದ. ಕೂಟಗಳಲ್ಲಿ ಪೌಲ ಹೇಳಿದ ತರ ನಾವು ಹೇಗೆ ನಡ್ಕೊಳ್ಳೋದು? ಉತ್ರ ಹೇಳೋಕೆ ಬೇರೆಯವ್ರಿಗೂ ಆಸೆ ಇರುತ್ತೆ ಅನ್ನೋದನ್ನ ನಾವು ನೆನಪಲ್ಲಿ ಇಟ್ಕೊಬೇಕು. ಹಾಗಾಗಿ ಉತ್ರ ಹೇಳೋಕೆ ಅವ್ರಿಗೂ ಅವಕಾಶ ಮಾಡ್ಕೊಡಬೇಕು.        

ಕೆಲವು ಸಹೋದರ ಸಹೋದರಿಯರು ಒಟ್ಟಿಗೆ ಸೇರಿ ಊಟ ಮಾಡ್ತಿದ್ದಾರೆ. ಒಬ್ಬ ಸಹೋದರ ಮಾತಾಡುವಾಗ ಬೇರೆಯವರು ಗಮನಕೊಟ್ಟು ಕೇಳ್ತಿದ್ದಾರೆ.

ನೀವು ಬೇರೆಯವ್ರಿಗೆ ಮಾತಾಡೋಕೆ ಬಿಟ್ಟುಕೊಡೋ ತರಾನೇ ಬೇರೆಯವ್ರಿಗೆ ಉತ್ರ ಹೇಳೋಕೂ ಅವಕಾಶ ಮಾಡ್ಕೊಡಿ (ಪ್ಯಾರ 12 ನೋಡಿ)

12. ಕೂಟಗಳಲ್ಲಿ ಬೇರೆಯವ್ರನ್ನ ಪ್ರೋತ್ಸಾಹಿಸೋಕೆ ನಾವೇನು ಮಾಡಬೇಕು? (ಚಿತ್ರನೂ ನೋಡಿ.)

12 ನೆನಸಿ, ನೀವು ಫ್ರೆಂಡ್ಸೆಲ್ಲ ಕೂತ್ಕೊಂಡು ಮಾತಾಡ್ತಾ ಇದ್ದೀರ. ಆಗ ಬರೀ ನೀವೇ ಮಾತಾಡ್ತಾ ಇದ್ರೆ ಚೆನ್ನಾಗಿರುತ್ತಾ? ಇಲ್ಲ ಅಲ್ವಾ. ಅವ್ರಿಗೂ ಮಾತಾಡೋಕೆ ಅವಕಾಶ ಕೊಡ್ತೀರ. ಅದೇ ತರ ನಮ್ಮ ಸಹೋದರ ಸಹೋದರಿಯರು ಕೂಟಗಳಲ್ಲಿ ಉತ್ರ ಹೇಳೋಕೆ ನಾವು ಅವಕಾಶ ಮಾಡ್ಕೊಡಬೇಕು. (1 ಕೊರಿಂ. 10:24) ನಾವು ಇದನ್ನ ಹೇಗೆ ಮಾಡೋದು ಅಂತ ಈಗ ನೋಡೋಣ.

13. ಬೇರೆಯವ್ರಿಗೂ ಉತ್ರ ಹೇಳೋಕೆ ಅವಕಾಶ ಸಿಗಬೇಕಂದ್ರೆ ನಾವೇನು ಮಾಡಬೇಕು?

13 ಒಂದು, ನಿಮ್ಮ ಉತ್ರ ಚಿಕ್ಕದಾಗಿರಬೇಕು. ಹೀಗೆ ಮಾಡಿದ್ರೆ ಬೇರೆ ಸಹೋದರ ಸಹೋದರಿಯರಿಗೂ ಉತ್ರ ಕೊಡೋಕೆ ಅವಕಾಶ ಸಿಗುತ್ತೆ. ಹಿರಿಯರು ಮತ್ತು ಅನುಭವ ಇರೋ ಸಹೋದರ ಸಹೋದರಿಯರು ಹೀಗೆ ಮಾಡಿದ್ರೆ ಅವರು ಬೇರೆಯವ್ರಿಗೆ ಮಾದರಿ ಆಗಿರ್ತಾರೆ. ಎರಡು, ಉತ್ರ ಕೊಡುವಾಗ ಪ್ಯಾರದಲ್ಲಿರೋ ಒಂದು ಅಂಶ ಮಾತ್ರ ಹೇಳಿ. ಆಗ ಉಳಿದಿರೋ ವಿಷ್ಯಗಳನ್ನ ಹೇಳೋಕೆ ಬೇರೆಯವ್ರಿಗೂ ಅವಕಾಶ ಸಿಗುತ್ತೆ. ಈಗ ಈ ಪ್ಯಾರನೇ ಉದಾಹರಣೆಯಾಗಿ ತಗೊಳ್ಳೋಣ. ಇದ್ರಲ್ಲಿ ನಾವು ಎರಡು ವಿಷ್ಯನ ಕಲಿತ್ವಿ. ಈ ಪ್ಯಾರಗೆ ಮೊದಲು ಉತ್ರ ಹೇಳೋಕೆ ನಿಮಗೆ ಅವಕಾಶ ಸಿಕ್ತು ಅಂತ ಅಂದ್ಕೊಳ್ಳಿ. ಆಗ ನೀವು ಒಂದು ವಿಷ್ಯ ಮಾತ್ರ ಹೇಳಿದ್ರೆ ಚೆನ್ನಾಗಿರುತ್ತೆ ಅಲ್ವಾ?

ಚಿತ್ರಗಳು: 1. ಹಿಂದಿನ ಚಿತ್ರದಲ್ಲಿ ತೋರಿಸೋ ಅದೇ ಸಹೋದರ ಕೂಟದಲ್ಲಿ ಉತ್ರ ಕೊಡೋಕೆ ಕೈ ಎತ್ತಿದ್ದಾನೆ. 2. ಬೇರೆ ಸಹೋದರ ಸಹೋದರಿಯರು ಉತ್ರ ಕೊಡೋಕೆ ಕೈ ಎತ್ತಿದಾಗ ಆ ಸಹೋದರ ಕೈ ಎತ್ತಲ್ಲ.

ಉತ್ರ ಹೇಳೋಕೆ ನಾವು ಹೇಗೆ ಬೇರೆಯವ್ರಿಗೆ ಅವಕಾಶ ಮಾಡ್ಕೊಡಬಹುದು? (ಪ್ಯಾರ 14 ನೋಡಿ)f

14. ಉತ್ರ ಹೇಳೋಕೆ ನಾವು ಯಾವಾಗ್ಲೂ ಕೈ ಎತ್ತುತ್ತಾ ಇದ್ರೆ ಏನಾಗುತ್ತೆ? (ಚಿತ್ರನೂ ನೋಡಿ.)

14 ನಾವು ಎಷ್ಟು ಸಲ ಕೈ ಎತ್ತುತ್ತೀವಿ ಅಂತನೂ ಯೋಚ್ನೆ ಮಾಡಬೇಕು. ನಾವು ಯಾವಾಗ್ಲೂ ಕೈ ಎತ್ತುತ್ತಾ ಇದ್ರೆ ಕೂಟ ನಡೆಸ್ತಿರೋ ಸಹೋದರನಿಗೆ ನಮ್ಮನ್ನೇ ಕೇಳಬೇಕು ಅಂತ ಒತ್ತಾಯ ಮಾಡಿದ ಹಾಗಿರುತ್ತೆ. ಇದ್ರಿಂದ ನಮಗೆ ಜಾಸ್ತಿ ಅವಕಾಶಗಳು ಸಿಗುತ್ತೆ. ಬೇರೆಯವ್ರಿಗೆ ಅವಕಾಶನೇ ಸಿಗಲ್ಲ. ಆಗ ಅವ್ರಿಗೆ ಬೇಜಾರಾಗಿ ಕೈ ಎತ್ತೋದನ್ನೇ ನಿಲ್ಲಿಸಿಬಿಡ್ತಾರೆ.—ಪ್ರಸಂ. 3:7.

15. (ಎ) ಉತ್ರ ಹೇಳೋಕೆ ನಮಗೆ ಅವಕಾಶ ಸಿಗದೆ ಇದ್ರೆ ಏನು ಮಾಡಬಾರದು? (ಬಿ) ಕೂಟ ನಡೆಸೋರು ಏನನ್ನ ಮನಸ್ಸಲ್ಲಿ ಇಡಬೇಕು? (“ನೀವು ಚರ್ಚೆ ನಡಿಸ್ತಿರುವಾಗ” ಅನ್ನೋ ಚೌಕ ನೋಡಿ.)

15 ತುಂಬ ಜನ ಉತ್ರ ಹೇಳೋಕೆ ಕೈ ಎತ್ತಿದಾಗ ನಮಗೆ ಜಾಸ್ತಿ ಅವಕಾಶ ಸಿಗದೇ ಹೋಗಬಹುದು. ಕೆಲವೊಮ್ಮೆ ಒಂದು ಅವಕಾಶನೂ ಸಿಗದೇ ಹೋಗಬಹುದು. ಆಗ ನಾವು ಬೇಜಾರ್‌ ಮಾಡ್ಕೊಬಾರದು. ಅವರು ಬೇಕುಬೇಕು ಅಂತಾನೇ ನನ್ನನ್ನ ಕೇಳ್ತಿಲ್ಲ ಅಂತ ಅಂದ್ಕೊಬಾರದು.—ಪ್ರಸಂ. 7:9.

ನೀವು ಚರ್ಚೆ ನಡಿಸ್ತಿರುವಾಗ

ನೀವು ಪ್ರಶ್ನೋತ್ತರ ಚರ್ಚೆ ಮಾಡ್ತಾ ಇರೋದಾದ್ರೆ ತುಂಬ ಜನ ಉತ್ರ ಹೇಳೋಕೆ ಅವಕಾಶ ಮಾಡ್ಕೊಡಿ. ಅದನ್ನ ಮಾಡೋದು ಹೇಗೆ?

  • ನೀವೇ ಜಾಸ್ತಿ ಮಾತಾಡ್ತಾ ಇರಬೇಡಿ. ಚರ್ಚೆ ಆರಂಭದಲ್ಲಿ ಮತ್ತು ಕೊನೇಲಿ ನಿಮ್ಮ ಹೇಳಿಕೆ ಚಿಕ್ಕದಾಗಿರಲಿ. ಚರ್ಚೆ ನಡೀತಾ ಇರುವಾಗ ಅಗತ್ಯ ಇದ್ರೆ ಒಂದೆರಡು ವಿಷ್ಯಗಳನ್ನ ಚುಟುಕಾಗಿ ಹೇಳಿ.e ಪ್ರತಿಯೊಂದು ಪ್ಯಾರನೂ ಪರಿಚಯ ಮಾಡಿಸಬೇಕು ಅಂತೇನಿಲ್ಲ.

  • ಪ್ರಶ್ನೆ ಕೇಳಿದ ಮೇಲೆ ಸ್ವಲ್ಪ ಹೊತ್ತು ಕಾಯಿರಿ. ಇನ್ನೂ ಉತ್ರ ಕೊಡದೇ ಇರೋರು ಯಾರಾದ್ರೂ ಕೈ ಎತ್ತಿದ್ದಾರಾ ಅಂತ ಮೊದ್ಲು ನೋಡಿ. ಯಾವಾಗ್ಲೂ ಕೇಳಿದವ್ರನ್ನೇ ಕೇಳಬೇಡಿ. ಉತ್ರ ಹೇಳೋಕೆ ಒಂದು ಅವಕಾಶನೂ ಸಿಗಲಿಲ್ಲಾಂದ್ರೆ ಅನುಭವ ಇರೋ ಪ್ರಚಾರಕರಿಗೂ ಬೇಜಾರಾಗುತ್ತೆ.

  • “ಹೊಸ ಕೈಗಳು ಯಾವುದಾದ್ರೂ ಇದ್ಯಾ?” “ಉತ್ರ ಹೇಳದೇ ಇರೋರು ಇನ್ಯಾರಾದ್ರೂ ಇದ್ದೀರಾ?” ಅಂತೆಲ್ಲ ಕೇಳಬೇಡಿ.

  • ಮಧ್ಯವಾರದ ಕೂಟದಲ್ಲಿ ಕೊನೇಲಿ ಪ್ರಶ್ನೋತ್ತರ ಚರ್ಚೆ ಮಾಡ್ತಾ ಇದ್ದೀರ ಅಂದ್ಕೊಳ್ಳಿ. ಯಾರೆಲ್ಲ ಈ ಮುಂಚೆ ಉತ್ರ ಹೇಳಿದ್ದಾರೆ ಅನ್ನೋದನ್ನ ನೆನಪಲ್ಲಿ ಇಟ್ಕೊಳ್ಳಿ. ಅವಕಾಶ ಸಿಗದವ್ರಿಗೆ ನಿಮ್ಮ ಭಾಗದಲ್ಲಿ ಅವಕಾಶ ಕೊಡಿ.

  • ಎಲ್ಲಿ, ಎಷ್ಟು ಸಮಯ ಕೊಡಬೇಕು ಅನ್ನೋದನ್ನ ಗಮನದಲ್ಲಿಡಿ. ಆರಂಭದ ಪ್ಯಾರಗಳಿಗೆ ತುಂಬ ಸಮಯ ಕೊಟ್ಟುಬಿಟ್ರೆ ಕೊನೇಲಿ ಸಮಯನೇ ಉಳಿಯಲ್ಲ. ಆಗ ತುಂಬ ಜನ್ರಿಗೆ ಉತ್ರ ಕೊಡೋಕೆ ಅವಕಾಶ ಕೊಡಕ್ಕಾಗಲ್ಲ.

16. ನಿಮಗೆ ಉತ್ರ ಹೇಳೋಕೆ ಅವಕಾಶ ಸಿಕ್ಕಿಲ್ಲ ಅಂದ್ರೆ ಏನು ಮಾಡಬೇಕು?

16 ನಿಮಗೆ ಉತ್ರ ಹೇಳೋಕೆ ಅವಕಾಶ ಸಿಕ್ಕಿಲ್ಲ ಅಂದ್ರೆ ಏನು ಮಾಡಬೇಕು? ಬೇರೆಯವರು ಉತ್ರ ಹೇಳುವಾಗ ಚೆನ್ನಾಗಿ ಕೇಳಿಸ್ಕೊಳ್ಳಿ. ಅವರು ಕೊಟ್ಟ ಉತ್ರ ಚೆನ್ನಾಗಿತ್ತು ಅಂತ ಕೂಟ ಮುಗಿದ ಮೇಲೆ ಅವ್ರ ಹತ್ರ ಹೇಳಿ. ನೀವು ಉತ್ರ ಹೇಳಿದಾಗ ಮಾತ್ರ ಅಲ್ಲ, ಅವ್ರನ್ನ ಹೊಗಳಿದಾಗಲೂ ಅವ್ರಿಗೆ ಪ್ರೋತ್ಸಾಹ ಸಿಗುತ್ತೆ.—ಜ್ಞಾನೋ. 10:21.

ಇನ್ನೂ ಹೇಗೆಲ್ಲಾ ಪ್ರೋತ್ಸಾಹಿಸಬಹುದು?

17. (ಎ) ಮಕ್ಕಳು ಉತ್ರ ಕೊಡೋಕೆ ಅಪ್ಪಅಮ್ಮಂದಿರು ಹೇಗೆ ಸಹಾಯ ಮಾಡಬಹುದು? (ಬಿ) ವಿಡಿಯೋದಲ್ಲಿ ಇರೋ ಹಾಗೆ ಉತ್ರ ತಯಾರಿ ಮಾಡೋಕೆ ಯಾವ ನಾಲ್ಕು ವಿಷ್ಯಗಳನ್ನ ಮಾಡಬೇಕು? (ಪಾದಟಿಪ್ಪಣಿಯನ್ನೂ ನೋಡಿ.)

17 ಅಪ್ಪಅಮ್ಮಂದಿರೇ, ನಿಮ್ಮ ಮಕ್ಕಳು ಚೆನ್ನಾಗಿ ಅರ್ಥ ಮಾಡ್ಕೊಂಡು ಉತ್ರ ಹೇಳೋ ತರ ಮನೆಯಲ್ಲೇ ತಯಾರಿ ಮಾಡಿಸಿ. (ಮತ್ತಾ. 21:16) ಕೆಲವೊಮ್ಮೆ ದೊಡ್ಡವರಿಗಂತಾನೇ ಕೆಲವು ಲೇಖನಗಳು ಬರುತ್ತೆ. ಅದ್ರಲ್ಲಿ ಗಂಡ-ಹೆಂಡತಿಯರ ಮಧ್ಯ ಆಗೋ ಸಮಸ್ಯೆಗಳ ಬಗ್ಗೆ, ನೈತಿಕತೆ ಬಗ್ಗೆ ಇರುತ್ತೆ. ಅದ್ರಲ್ಲೂ ಮಕ್ಕಳು ಉತ್ರ ಕೊಡೋ ತರ ಒಂದೆರಡು ಪ್ಯಾರಗಳು ಇರಬಹುದು. ಅದನ್ನ ಅವ್ರಿಗೆ ತಯಾರಿ ಮಾಡಿಸಿ. ಮಕ್ಕಳಿಗೆ ಇನ್ನೊಂದು ವಿಷ್ಯನೂ ಹೇಳಿಕೊಡಿ. ಅವರು ಕೈ ಎತ್ತಿದಾಗ ಕೆಲವೊಮ್ಮೆ ಯಾಕೆ ಅವ್ರಿಗೆ ಅವಕಾಶ ಸಿಗಲ್ಲ ಅನ್ನೋದನ್ನ ಅರ್ಥ ಮಾಡಿಸಿ. ಆಗ ಅವ್ರಿಗೆ ಅವಕಾಶ ಸಿಗಲಿಲ್ಲಾಂದ್ರೆ ಬೇಜಾರ್‌ ಮಾಡ್ಕೊಳಲ್ಲ.—1 ತಿಮೊ. 6:18.d

18. ಉತ್ರ ಹೇಳುವಾಗ ಜನ್ರ ಗಮನ ನಮ್ಮ ಮೇಲೆ ಬರದೆ ಇರೋಕೆ ಏನು ಮಾಡಬೇಕು? (ಜ್ಞಾನೋಕ್ತಿ 27:2)

18 ನಾವು ಯೆಹೋವನಿಗೆ ಹೊಗಳಿಕೆ ಸಿಗೋ ತರ ಮತ್ತು ನಮ್ಮ ಸಹೋದರ ಸಹೋದರಿಯರಿಗೆ ಪ್ರೋತ್ಸಾಹ ಕೊಡೋ ತರ ಉತ್ರಗಳನ್ನ ಹೇಳೋಣ. (ಜ್ಞಾನೋ. 25:11) ಕೆಲವೊಮ್ಮೆ ಉತ್ರ ಕೊಡುವಾಗ ನಮ್ಮ ಅನುಭವಗಳನ್ನ ಹೇಳಬಹುದು. ಆದ್ರೆ ಆಗ ನಮ್ಮ ಬಗ್ಗೆನೇ ತುಂಬ ಮಾತಾಡಬಾರದು. (ಜ್ಞಾನೋಕ್ತಿ 27:2 ಓದಿ; 2 ಕೊರಿಂ. 10:18) ಬದಲಿಗೆ ಜನ್ರ ಗಮನ ಯೆಹೋವನ ಮೇಲೆ, ಆತನ ವಾಕ್ಯದ ಮೇಲೆ, ಆತನ ಜನ್ರ ಮೇಲೆ ಹೋಗೋ ತರ ಉತ್ರ ಹೇಳಬೇಕು. (ಪ್ರಕ. 4:11) ಕೆಲವೊಮ್ಮೆ ನಿಮ್ಮ ಅನಿಸಿಕೆನ ಹೇಳೋ ತರ ಪ್ರಶ್ನೆಗಳು ಬರಬಹುದು. ಆಗ ನಿಮ್‌ ಅನಿಸಿಕೆನ ಹೇಳಬಹುದು. ಆ ಅವಕಾಶ ನಿಮಗೆ ಮುಂದಿನ ಪ್ಯಾರದಲ್ಲಿದೆ.

19. (ಎ) ಬೇರೆಯವ್ರಿಗೆ ಉತ್ರ ಹೇಳೋಕೆ ಅವಕಾಶ ಮಾಡ್ಕೊಡೋದ್ರಿಂದ ಹೇಗೆ ಒಳ್ಳೇದಾಗುತ್ತೆ? (ರೋಮನ್ನರಿಗೆ 1:11, 12) (ಬಿ) ಈ ಲೇಖನದಲ್ಲಿ ನಿಮಗೆ ಏನ್‌ ಇಷ್ಟ ಆಯ್ತು?

19 ನಾವು ಹೇಗೆ ಉತ್ರ ಕೊಡಬೇಕು, ಹೇಗೆ ಉತ್ರ ಕೊಡಬಾರದು ಅಂತ ರೂಲ್ಸ್‌ ಏನೂ ಇಲ್ಲ. ಆದ್ರೆ ನಾವು ಬೇರೆಯವ್ರನ್ನ ಪ್ರೋತ್ಸಾಹಿಸೋ ತರ ಉತ್ರಗಳನ್ನ ಕೊಟ್ರೆ ಚೆನ್ನಾಗಿರುತ್ತೆ ಅಲ್ವಾ? ಹಾಗಾಗಿ ನಾವು ಒಂದು ಉತ್ರ ಹೇಳಿ ಸುಮ್ಮನಾಗದೇ ಜಾಸ್ತಿ ಉತ್ರಗಳನ್ನ ಹೇಳೋಕೆ ಪ್ರಯತ್ನ ಮಾಡ್ತಾ ಇರೋಣ. ಕೈ ಎತ್ತಿದಾಗೆಲ್ಲ ಅವಕಾಶ ಸಿಗಲಿಲ್ಲ ಅಂತ ಬೇಜಾರು ಮಾಡ್ಕೊಳ್ಳೋದು ಬೇಡ. ಉತ್ರ ಹೇಳೋಕೆ ನಮ್ಮ ಸಹೋದರ ಸಹೋದರಿಯರಿಗೆ ಅವಕಾಶಗಳು ಸಿಕ್ಕಿದಾಗ ಅದನ್ನ ನೋಡಿ ಖುಷಿ ಪಡೋಣ. ಈ ತರ ನಮ್ಮ ಸಹೋದರ ಸಹೋದರಿಯರ ಮೇಲೆ ಪ್ರೀತಿ ತೋರಿಸುವಾಗ ‘ನಮ್ಮ ನಂಬಿಕೆಯಿಂದ ಅವರು, ಅವ್ರ ನಂಬಿಕೆಯಿಂದ ನಾವು ಪ್ರೋತ್ಸಾಹ ಪಡಿಯೋಕೆ ಆಗುತ್ತೆ.’—ರೋಮನ್ನರಿಗೆ 1:11, 12 ಓದಿ.

ನಾವು ಒಬ್ರನ್ನೊಬ್ರು ಪ್ರೋತ್ಸಾಹಿಸೋಕೆ ಏನು ಮಾಡಬೇಕು?

  • ಜಾಸ್ತಿ ಜನ ಉತ್ರ ಹೇಳೋಕೆ ಕೈ ಎತ್ತದೇ ಇದ್ದಾಗ

  • ತುಂಬ ಜನ ಉತ್ರ ಹೇಳೋಕೆ ಕೈ ಎತ್ತಿದಾಗ

  • ಉತ್ರಗಳನ್ನ ನಾವು ತಯಾರಿ ಮಾಡುವಾಗ

ಗೀತೆ 20 ನಮ್ಮ ಕೂಟವನ್ನು ಹರಸು

a ನಾವು ಕೂಟಗಳಲ್ಲಿ ಉತ್ರ ಕೊಟ್ಟಾಗ ಎಲ್ರಿಗೂ ಪ್ರೋತ್ಸಾಹ ಸಿಗುತ್ತೆ. ಆದ್ರೆ, ಕೆಲವರು ಉತ್ರ ಹೇಳೋಕೆ ತುಂಬ ಭಯಪಡ್ತಾರೆ. ಇನ್ನು ಕೆಲವರು ತಮಗೆ ಜಾಸ್ತಿ ಅವಕಾಶ ಸಿಕ್ಕಿದ್ರೆ ಚೆನ್ನಾಗಿರುತ್ತೆ ಅಂತ ಅಂದ್ಕೊಳ್ತಾರೆ. ಆಗ ಏನ್‌ ಮಾಡೋದು? ಪ್ರೀತಿ ತೋರಿಸೋಕೆ ಒಳ್ಳೆ ಕೆಲಸಗಳನ್ನ ಮಾಡೋಕೆ ಬೇರೆಯವರಿಗೆ ಪ್ರೋತ್ಸಾಹ ಕೊಡೋ ತರ ಉತ್ರ ಹೇಳೋದು ಹೇಗೆ?

b ಇನ್ನೂ ಕೆಲವು ಸಲಹೆಗಳಿಗಾಗಿ, ಜನವರಿ 2019ರ ಕಾವಲಿನಬುರುಜುವಿನ ಪುಟ 8-13 ಮತ್ತು ಸೆಪ್ಟೆಂಬರ್‌ 1, 2003ರ ಕಾವಲಿನಬುರುಜುವಿನ ಪುಟ 19-22 ನೋಡಿ.

c ಕೆಲವು ಹೆಸರುಗಳು ಬದಲಾಗಿದೆ.

d jw.orgನಲ್ಲಿ ಯೆಹೋವ ದೇವರ ಗೆಳೆಯರಾಗೋಣ—ಉತ್ರಗಳನ್ನು ತಯಾರಿಸಿ ಅನ್ನೋ ವಿಡಿಯೋ ನೋಡಿ.

e ಜುಲೈ 15, 2013ರ ಕಾವಲಿನಬುರುಜುವಿನ ಪುಟ 32 ಮತ್ತು ಸೆಪ್ಟೆಂಬರ್‌ 1, 2003ರ ಕಾವಲಿನಬುರುಜುವಿನ ಪುಟ 21-22 ನೋಡಿ.

f ಚಿತ್ರ ವಿವರಣೆ: ಈಗಾಗಲೇ ಉತ್ರ ಹೇಳಿದ ಸಹೋದರ ಬೇರೆಯವರು ಕೈ ಎತ್ತಿರುವಾಗ ಅವ್ರಿಗೆ ಅವಕಾಶ ಸಿಗಲಿ ಅಂತ ಬಿಟ್ಟುಕೊಡ್ತಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ