ನಿರುತ್ಸಾಹವನ್ನು ನಿಭಾಯಿಸಲು ಸಾಧ್ಯವಿದೆ!
“ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ [“ನಿರುತ್ಸಾಹಗೊಂಡರೆ,” NW] ನಿನ್ನ ಬಲವೂ ಇಕ್ಕಟ್ಟೇ.” (ಜ್ಞಾನೋಕ್ತಿ 24:10) ನೀವು ಎಂದಾದರೂ ನಿರುತ್ಸಾಹಗೊಂಡಿರುವಲ್ಲಿ, ಈ ಹೇಳಿಕೆಯು ನೂರಕ್ಕೆ ನೂರು ಪ್ರತಿಶತ ಸರಿಯೆಂದು ನೀವು ಒಪ್ಪಿಕೊಳ್ಳಬಹುದು.
ನಿರುತ್ಸಾಹದಿಂದಾಗುವ ಪರಿಣಾಮಗಳಿಂದ ಯಾರೊಬ್ಬರೂ ತಪ್ಪಿಸಿಕೊಳ್ಳಲಾರರು. ನಿರುತ್ಸಾಹದ ಒಂದು ಸೌಮ್ಯ ದಾಳಿಯು, ಒಂದೊ ಎರಡೊ ದಿನಗಳ ವರೆಗಿದ್ದು, ಅನಂತರ ತಗ್ಗಬಹುದು. ಆದರೆ, ಯಾರೊ ಮನನೋಯಿಸಿರುವುದರಿಂದ ಅಥವಾ ತೀವ್ರವಾದ ಅಸಮಾಧಾನವನ್ನು ತೋರಿಸಿರುವ ಕಾರಣದಿಂದ ಇದು ಆಗಿರುವಲ್ಲಿ, ಸಮಸ್ಯೆಯು ಹೆಚ್ಚು ಸಮಯದ ವರೆಗೆ ಉಳಿಯಬಹುದು. ಅನೇಕ ವರ್ಷಗಳಿಂದ ನಂಬಿಗಸ್ತ ಕ್ರೈಸ್ತರಾಗಿದ್ದ ಕೆಲವರು ಎಷ್ಟು ಎದೆಗುಂದಿದ್ದರೆಂದರೆ, ಅವರು ಸಭಾ ಕೂಟಗಳಿಗೆ ಹಾಜರಾಗುವುದು ಮತ್ತು ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವುದನ್ನೂ ನಿಲ್ಲಿಸಿದ್ದಾರೆ.
ನಿಮಗೆ ನಿರುತ್ಸಾಹವಾಗಿರುವಲ್ಲಿ, ಎದೆಗುಂದದಿರಿ! ಹಿಂದಿನ ಕಾಲದಲ್ಲಿದ್ದ ದೇವರ ನಂಬಿಗಸ್ತ ಸೇವಕರು ಸಹ ನಿರುತ್ಸಾಹಕ್ಕೊಳಗಾಗಿದ್ದರು. ಆದರೆ ಅವರು ಅದನ್ನು ನಿಭಾಯಿಸಿದರು. ಮತ್ತು ನೀವು ಸಹ ದೇವರ ಸಹಾಯದೊಂದಿಗೆ ಹಾಗೆಯೇ ಮಾಡಬಹುದು.
ಬೇರೆಯವರು ನಿಮ್ಮ ಮನನೋಯಿಸುವಾಗ
ಯಾರೂ ನಿಮ್ಮೊಂದಿಗೆ ವಿಚಾರಹೀನವಾಗಿ ಮಾತಾಡದಿರುವರು ಅಥವಾ ನಡೆದುಕೊಳ್ಳದಿರುವರೆಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಒಂದು ಸಂಗತಿಯನ್ನು ಮಾತ್ರ ನೀವು ಖಂಡಿತವಾಗಿಯೂ ಮಾಡಸಾಧ್ಯವಿದೆ: ಯೆಹೋವನಿಗೆ ನೀವು ಸಲ್ಲಿಸುವ ಸೇವೆಯಲ್ಲಿ ಬೇರೆಯವರ ಅಪರಿಪೂರ್ಣತೆಗಳು ಅಡ್ಡಬರುವಂತೆ ಬಿಡದಿರುವುದೇ. ಯಾರಾದರೂ ನಿಮ್ಮ ಮನನೋಯಿಸಿರುವಲ್ಲಿ, ಸಮುವೇಲನ ತಾಯಿಯಾದ ಹನ್ನಳು, ಒಂದು ನಿರುತ್ಸಾಹದಾಯಕ ಸನ್ನಿವೇಶವನ್ನು ನಿಭಾಯಿಸಿದ ರೀತಿಯನ್ನು ಪರಿಗಣಿಸುವುದು ಸಹಾಯಕಾರಿಯಾಗಿರುವುದು.
ಈ ಹನ್ನಳು ಮಕ್ಕಳನ್ನು ಪಡೆಯಲಿಕ್ಕಾಗಿ ಹಂಬಲಿಸುತ್ತಿದ್ದಳು, ಆದರೆ ಅವಳು ಬಂಜೆಯಾಗಿದ್ದಳು. ಅವಳ ಗಂಡನ ಎರಡನೆಯ ಪತ್ನಿಯಾದ ಪೆನಿನ್ನ ಈಗಾಗಲೇ ಗಂಡುಹೆಣ್ಣು ಮಕ್ಕಳನ್ನು ಹಡೆದಿದ್ದಳು. ಪೆನಿನ್ನಳು ಹನ್ನಳ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಬದಲಿಗೆ, ಅವಳನ್ನು ತನ್ನ ಪ್ರತಿಸ್ಪರ್ಧಿಯೋಪಾದಿ ನೋಡುತ್ತಿದ್ದಳು. ಅಷ್ಟುಮಾತ್ರವಲ್ಲ, ಹನ್ನಳ ಕಡೆಗೆ ಅವಳು ತೋರಿಸುತ್ತಿದ್ದ ಕೆಟ್ಟ ಮನೋಭಾವದಿಂದಾಗಿ, ಹನ್ನಳು “ಉಣ್ಣಲೊಲ್ಲದೆ ಅಳುತ್ತಾ” ಇರುತ್ತಿದ್ದಳು.—1 ಸಮುವೇಲ 1:2, 4-7.
ಒಂದು ದಿನ ಹನ್ನಳು, ಪ್ರಾರ್ಥನೆಮಾಡಲಿಕ್ಕೋಸ್ಕರ ದೇವಗುಡಾರಕ್ಕೆ ಹೋದಳು. ಅಲ್ಲಿದ್ದ, ಇಸ್ರಾಯೇಲಿನ ಮಹಾ ಯಾಜಕನಾದ ಏಲಿಯು, ಅವಳ ತುಟಿಗಳು ಅಲ್ಲಾಡುತ್ತಿರುವುದನ್ನು ಗಮನಿಸಿದನು. ಅವಳು ಪ್ರಾರ್ಥನೆಮಾಡುತ್ತಿದ್ದಾಳೆಂದು ಅವನಿಗೆ ಗೊತ್ತಿರಲಿಲ್ಲ. ಅವಳು ಕುಡಿದು ಮತ್ತಳಾಗಿದ್ದಾಳೆಂದು ಅವನು ನೆನಸಿದನು. ಆದುದರಿಂದ, “ನಿನ್ನ ಅಮಲು ಇನ್ನೂ ಇಳಿಯಲಿಲ್ಲವೋ? ದ್ರಾಕ್ಷಾರಸದ ಮದಡು ನಿನ್ನನ್ನು ಬಿಟ್ಟುಹೋಗಲಿ” ಎಂದು ಅಬ್ಬರಿಸಿದನು. (1 ಸಮುವೇಲ 1:12-14) ಆಗ ಹನ್ನಳಿಗೆ ಹೇಗಾಗಿರಬೇಕೆಂದು ನೀವು ಊಹಿಸಿಕೊಳ್ಳಬಲ್ಲಿರೊ? ಆಕೆ ಉತ್ತೇಜನವನ್ನು ಪಡೆದುಕೊಳ್ಳಲಿಕ್ಕಾಗಿ ದೇವಗುಡಾರಕ್ಕೆ ಹೋಗಿದ್ದಳು. ಆದರೆ ಇಸ್ರಾಯೇಲಿನಲ್ಲಿನ ಅತಿ ದೊಡ್ದ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಯೇ ಅವಳ ಮೇಲೆ ತಪ್ಪಾರೋಪ ಹೊರಿಸುವುದನ್ನು ಅವಳು ಖಂಡಿತವಾಗಿಯೂ ನಿರೀಕ್ಷಿಸಿರಲೇ ಇಲ್ಲ!
ಈ ಸನ್ನಿವೇಶದಿಂದಾಗಿ ಹನ್ನಳು ಸುಲಭವಾಗಿ ನಿರುತ್ಸಾಹಗೊಳ್ಳಬಹುದಿತ್ತು. ಅವಳು ಸರಸರನೆ ದೇವಗುಡಾರದಿಂದ ಹೊರಟುಹೋಗಿ, ಎಷ್ಟರ ವರೆಗೆ ಏಲಿ ಮಹಾ ಯಾಜಕನಾಗಿರುವನೊ ಅಷ್ಟರ ವರೆಗೆ ತಾನು ಅಲ್ಲಿ ಪುನಃ ಕಾಲಿಡುವುದಿಲ್ಲವೆಂದು ತೀರ್ಮಾನಮಾಡಬಹುದಿತ್ತು. ಆದರೆ ಹನ್ನಳಿಗೆ ಯೆಹೋವನೊಂದಿಗಿನ ತನ್ನ ಸಂಬಂಧವು ಹೆಚ್ಚು ಅಮೂಲ್ಯವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಅವಳು ಹಾಗೆ ಮಾಡುತ್ತಿದ್ದರೆ, ಆತನಿಗೆ ಸಂತೋಷವಾಗಲಿಕ್ಕಿಲ್ಲವೆಂದು ಅವಳಿಗೆ ತಿಳಿದಿತ್ತು. ಏಕೆಂದರೆ ದೇವಗುಡಾರವು ಶುದ್ಧಾರಾಧನೆಯ ಕೇಂದ್ರವಾಗಿತ್ತು. ಮತ್ತು ಯೆಹೋವನು ಅದಕ್ಕೆ ತನ್ನ ಹೆಸರನ್ನು ಕೊಟ್ಟಿದ್ದನು. ಅಲ್ಲದೆ, ಏಲಿಯು ಅಪರಿಪೂರ್ಣನಾಗಿದ್ದನಾದರೂ, ಅವನು ಯೆಹೋವನು ಆಯ್ಕೆಮಾಡಿದ ಪ್ರತಿನಿಧಿಯಾಗಿದ್ದನು.
ಏಲಿಯು ಹೊರಿಸಿದ ಆರೋಪಕ್ಕೆ ಹನ್ನಳ ಶ್ರದ್ಧಾಭಕ್ತಿಯುಳ್ಳ ಉತ್ತರವು ಇಂದು ನಮಗಾಗಿ ಒಂದು ಒಳ್ಳೆಯ ಮಾದರಿಯಾಗಿದೆ. ತನ್ನ ಮೇಲೆ ಹೊರಿಸಲ್ಪಟ್ಟ ಆರೋಪಕ್ಕೆ ಅವಳು ಸುಮ್ಮನಾಗಿರದೆ ಅದಕ್ಕೆ ಪ್ರತಿಕ್ರಿಯೆಯನ್ನು ತೋರಿಸಿದಳು. ಆದರೆ ಅದನ್ನು ಅವಳು ತುಂಬ ಗೌರವಪೂರ್ವಕವಾಗಿ ಮಾಡಿದಳು. ಅವಳು ಉತ್ತರಿಸಿದ್ದು: “ಸ್ವಾಮೀ ಹಾಗಲ್ಲ; ನಾನು ಬಹುದುಃಖಪೀಡಿತಳು; ದ್ರಾಕ್ಷಾರಸವನ್ನಾದರೂ ಬೇರೆ ಯಾವ ಮಧ್ಯವನ್ನಾದರೂ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಯೆಹೋವನ ಮುಂದೆ ಹೊಯ್ದಿದ್ದೇನೆ. ನಿನ್ನ ದಾಸಿಯಾದ ನನ್ನನ್ನು ಅಯೋಗ್ಯಳೆಂದು ನೆನಸಬೇಡ; ಈ ವರೆಗೆ ನನ್ನ ಹೆಚ್ಚಾದ ಚಿಂತೆಯನ್ನೂ ವ್ಯಥೆಯನ್ನೂ ಅರಿಕೆಮಾಡಿಕೊಳ್ಳುತ್ತಿದ್ದೆನು.”—1 ಸಮುವೇಲ 1:15, 16.
ಹನ್ನಳು ಏಲಿಗೆ ಹೇಳಬೇಕಾದದ್ದನ್ನು ಹೇಳಲು ಶಕ್ತಳಾದಳೊ? ಖಂಡಿತವಾಗಿಯೂ. ಆದರೆ ಅದನ್ನು ಅವಳು ಜಾಣ್ಮೆಯಿಂದ ಹೇಳಿದಳು. ಅವನು ಹೊರಿಸಿದ ತಪ್ಪಾರೋಪಕ್ಕಾಗಿ ಅವಳು ಅವನನ್ನು ಟೀಕಿಸುವ ಧೈರ್ಯಮಾಡಲಿಲ್ಲ. ಮತ್ತು ಅವನು ಪ್ರತಿಯಾಗಿ, ದಯೆಯಿಂದ ಪ್ರತಿಕ್ರಿಯಿಸುತ್ತಾ ಹೇಳಿದ್ದು: “ಸಮಾಧಾನದಿಂದ ಹೋಗು; ಇಸ್ರಾಯೇಲ್ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ.” ಈ ವಿಷಯವು ಇತ್ಯರ್ಥಗೊಳಿಸಲ್ಪಟ್ಟ ನಂತರ, ಹನ್ನಳು “ಹೊರಟುಹೋಗಿ ಊಟಮಾಡಿದಳು. ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ.”—1 ಸಮುವೇಲ 1:17, 18.
ಈ ವೃತ್ತಾಂತದಿಂದ ನಾವೇನು ಕಲಿಯುತ್ತೇವೆ? ಏನೆಂದರೆ, ಒಂದು ತಪ್ಪಾಭಿಪ್ರಾಯವನ್ನು ಸರಿಪಡಿಸಲಿಕ್ಕಾಗಿ ಹನ್ನಳು ಕೂಡಲೇ ಹೆಜ್ಜೆತೆಗೆದುಕೊಂಡಳು, ಆದರೆ ಅದೇ ಸಮಯದಲ್ಲಿ ಅವಳು ಅದನ್ನು ಗಾಢವಾದ ಗೌರವದೊಂದಿಗೆ ಮಾಡಿದಳು. ಇದರ ಫಲಿತಾಂಶವಾಗಿ, ಅವಳು ಯೆಹೋವನೊಂದಿಗೆ ಮತ್ತು ಏಲಿಯೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಕಾಪಾಡಿಕೊಂಡು ಹೋದಳು. ಎಷ್ಟೋ ಸಾರಿ, ಒಳ್ಳೆಯ ಸಂವಾದ ಮತ್ತು ಒಂದಿಷ್ಟು ಜಾಣ್ಮೆಯಿಂದಾಗಿ ಚಿಕ್ಕಪುಟ್ಟ ಸಮಸ್ಯೆಗಳು, ದೊಡ್ಡ ಸಮಸ್ಯೆಗಳಾಗಿ ಬೆಳೆಯುವುದರಿಂದ ತಡೆಯಸಾಧ್ಯವಿದೆ!
ಬೇರೆಯವರೊಂದಿಗಿನ ಮನಸ್ತಾಪಗಳನ್ನು ಬಗೆಹರಿಸಲಿಕ್ಕಾಗಿ, ಎರಡೂ ಪಕ್ಷದವರು ನಮ್ರರೂ, ನಮ್ಯತೆಯುಳ್ಳವರೂ ಆಗಿರುವುದು ಆವಶ್ಯಕ ಎಂಬುದನ್ನು ಅಂಗೀಕರಿಸಬೇಕು. ಮನಸ್ತಾಪವನ್ನು ಬಗೆಹರಿಸಲಿಕ್ಕಾಗಿ ನೀವು ಮಾಡುವ ಪ್ರಯತ್ನಗಳಿಗೆ ಒಬ್ಬ ಜೊತೆ ವಿಶ್ವಾಸಿಯು ಸ್ಪಂದಿಸದಿದ್ದರೆ, ಅದನ್ನು ಯೆಹೋವನ ಹಸ್ತದಲ್ಲಿ ಬಿಟ್ಟುಬಿಡಿರಿ. ಯೆಹೋವನು ತನ್ನದೇ ಆದ ಸಮಯದಲ್ಲಿ ಮತ್ತು ತನ್ನದೇ ಆದ ರೀತಿಯಲ್ಲಿ ಅದನ್ನು ನಿರ್ವಹಿಸುವನೆಂಬ ಭರವಸೆ ನಿಮಗಿರಲಿ.
ನೀವು ಒಂದು ಸೇವಾ ಸುಯೋಗವನ್ನು ಕಳಕೊಂಡಿದ್ದೀರೊ?
ದೇವರ ಸೇವೆಯಲ್ಲಿ ತಮಗಿದ್ದ ಬಹುಮೂಲ್ಯವಾದ ಸುಯೋಗವೊಂದನ್ನು ಬಿಟ್ಟುಕೊಡಬೇಕಾದಾಗ ಕೆಲವರು ಖಿನ್ನರಾಗಿದ್ದಾರೆ. ತಮ್ಮ ಸಹೋದರರ ಸೇವೆ ಮಾಡುವುದರಲ್ಲಿ ಅವರಿಗೆ ತುಂಬ ಆನಂದ ಸಿಗುತ್ತಿತ್ತು. ಆದುದರಿಂದ ಆ ಸುಯೋಗವನ್ನು ಅವರು ಕಳಕೊಂಡಾಗ, ತಾವು ಈಗ ಯೆಹೋವನಿಗೂ ಆತನ ಸಂಸ್ಥೆಗೂ ಯಾವುದೇ ಪ್ರಯೋಜನಕ್ಕೆ ಬಾರದವರಾಗಿದ್ದೇವೆಂದು ಅವರಿಗೆ ಅನಿಸಿದೆ. ನಿಮಗೂ ಹಾಗನಿಸುತ್ತಿರುವಲ್ಲಿ, ಬೈಬಲ್ ಲೇಖಕನಾದ ಮಾರ್ಕನ ಮಾದರಿಯನ್ನು ಪರಿಗಣಿಸುವುದರಿಂದ ನಿಮಗೆ ಹೆಚ್ಚಿನ ಒಳನೋಟವು ಸಿಗುವುದು. ಅವನನ್ನು ಮಾರ್ಕನೆನಿಸಿಕೊಳ್ಳುವ ಯೋಹಾನ ಎಂದು ಸಹ ಕರೆಯಲಾಗುತ್ತಿತ್ತು.—ಅ. ಕೃತ್ಯಗಳು 12:12.
ಮಾರ್ಕನು, ಪೌಲ ಬಾರ್ನಬರ ಪ್ರಥಮ ಮಿಷನೆರಿ ಸಂಚಾರದಲ್ಲಿ ಅವರೊಂದಿಗೆ ಹೋದನು. ಆದರೆ ಆ ಪ್ರಯಾಣದ ಅರ್ಧದಾರಿಯಲ್ಲೇ ಅವನು ಅವರನ್ನು ಬಿಟ್ಟು ಯೆರೂಸಲೇಮಿಗೆ ಹಿಂದಿರುಗಿದನು. (ಅ. ಕೃತ್ಯಗಳು 13:13) ಅನಂತರ ಮುಂದೆ ಬಾರ್ನಬನು ಇನ್ನೊಂದು ಸಂಚಾರದಲ್ಲಿ ಮಾರ್ಕನನ್ನು ತಮ್ಮೊಂದಿಗೆ ಕರಕೊಂಡು ಹೋಗಲು ಬಯಸಿದನು. ಆದರೆ ಬೈಬಲ್ ಹೇಳುವುದು: “ಪೌಲನು—ನಮ್ಮೊಂದಿಗೆ ಕೆಲಸಕ್ಕೆ ಬಾರದೆ ಪಂಫುಲ್ಯದಲ್ಲಿ ನಮ್ಮನ್ನು ಬಿಟ್ಟವನನ್ನು ಕರೆದುಕೊಂಡು ಹೋಗುವದು ತಕ್ಕದ್ದಲ್ಲವೆಂದು ನೆನಸಿದನು.” ಇದನ್ನು ಬಾರ್ನಬನು ಒಪ್ಪಿಕೊಳ್ಳಲಿಲ್ಲ. ಆ ವೃತ್ತಾಂತವು ಮುಂದುವರಿಸುತ್ತಾ ಹೇಳುವುದು: “ಈ ವಿಷಯದಲ್ಲಿ ತೀಕ್ಷ್ಣ ವಾಗ್ವಾದವುಂಟಾಗಿ ಅವರು [ಪೌಲ ಬಾರ್ನಬರು] ಒಬ್ಬರನ್ನೊಬ್ಬರು ಅಗಲಿದರು. ಬಾರ್ನಬನು ಮಾರ್ಕನನ್ನು ಕರಕೊಂಡು ಸಮುದ್ರಮಾರ್ಗವಾಗಿ ಕುಪ್ರದ್ವೀಪಕ್ಕೆ ಹೋದನು. ಪೌಲನು ಸೀಲನನ್ನು ಆರಿಸಿಕೊಂಡು” ಹೊರಟುಹೋದನು.—ಅ. ಕೃತ್ಯಗಳು 15:36-40.
ಗೌರವಾನ್ವಿತ ಅಪೊಸ್ತಲನಾದ ಪೌಲನು ತನ್ನೊಂದಿಗೆ ಕೆಲಸಮಾಡಲು ಬಯಸುವುದಿಲ್ಲ, ಮತ್ತು ತನ್ನ ಅರ್ಹತೆಗಳ ಕುರಿತಾದ ವಾಗ್ವಾದವೇ ಪೌಲ ಬಾರ್ನಬರ ನಡುವಿನ ಬಿರುಕಿಗೆ ಕಾರಣವಾಗಿತ್ತೆಂದು ತಿಳಿದು ಮಾರ್ಕನಿಗೆ ಸಂಕಟವಾಗಿದ್ದಿರಬಹುದು. ಆದರೆ ವಿಷಯವು ಅಲ್ಲೇ ಅಂತ್ಯಗೊಳ್ಳಲಿಲ್ಲ.
ಪೌಲ ಸೀಲರಿಗೆ ಇನ್ನೂ ಒಬ್ಬ ಯಾತ್ರಿ ಸಂಗಡಿಗನ ಅಗತ್ಯವಿತ್ತು. ಅವರು ಲುಸ್ತ್ರಕ್ಕೆ ಆಗಮಿಸಿದಾಗ, ಮಾರ್ಕನ ಸ್ಥಾನವನ್ನು ತುಂಬಿಸುವ ಒಬ್ಬ ವ್ಯಕ್ತಿಯನ್ನು ಕಂಡುಕೊಂಡರು. ಅವನು ತಿಮೊಥೆಯನೆಂಬ ಯುವ ಪುರುಷನಾಗಿದ್ದನು. ತಿಮೊಥೆಯನು ಆಯ್ಕೆಮಾಡಲ್ಪಟ್ಟಾಗ, ಅವನ ದೀಕ್ಷಾಸ್ನಾನವಾಗಿ ಕೇವಲ ಎರಡು ಅಥವಾ ಮೂರು ವರ್ಷವಾಗಿರಬಹುದು. ಆದರೆ ಇನ್ನೊಂದು ಬದಿ, ಮಾರ್ಕನು ಕ್ರೈಸ್ತ ಸಭೆಯು ಆರಂಭವಾದಂದಿನಿಂದ, ಅಂದರೆ ವಾಸ್ತವದಲ್ಲಿ ಪೌಲನಿಗಿಂತಲೂ ಹೆಚ್ಚು ಸಮಯದಿಂದ ಕ್ರೈಸ್ತ ಸಭೆಯೊಂದಿಗೆ ಸಹವಾಸವನ್ನು ಮಾಡಿದ್ದನು. ಆದರೆ, ಆ ಸುಯೋಗಭರಿತ ನೇಮಕವು ತಿಮೊಥೆಯನಿಗೆ ಸಿಕ್ಕಿತು.—ಅ. ಕೃತ್ಯಗಳು 16:1-3.
ತನಗಿಂತಲೂ ಚಿಕ್ಕವನಾಗಿರುವ ಮತ್ತು ಕಡಿಮೆ ಅನುಭವಿ ವ್ಯಕ್ತಿಯು ತನ್ನ ಸ್ಥಾನದಲ್ಲಿ ತೆಗೆದುಕೊಳ್ಳಲ್ಪಟ್ಟಿದ್ದಾನೆಂದು ತಿಳಿದುಬಂದಾಗ, ಮಾರ್ಕನ ಪ್ರತಿಕ್ರಿಯೆ ಏನಾಗಿತ್ತು? ಬೈಬಲ್ ಅದನ್ನು ತಿಳಿಸುವುದಿಲ್ಲ. ಆದರೆ ಮಾರ್ಕನು ಯೆಹೋವನ ಸೇವೆಯಲ್ಲಿ ಕ್ರಿಯಾಶೀಲನಾಗಿ ಮುಂದುವರಿದನೆಂಬುದನ್ನು ಅದು ಸೂಚಿಸುತ್ತದೆ. ತನಗೆ ಲಭ್ಯವಿದ್ದ ಸುಯೋಗಗಳನ್ನು ಅವನು ಉಪಯೋಗಿಸಿಕೊಂಡನು. ಪೌಲಸೀಲರೊಂದಿಗೆ ಅವನು ಸೇವೆ ಮಾಡಲಾಗದಿದ್ದರೂ, ಅವನು ಬಾರ್ನಬನೊಂದಿಗೆ ಕುಪ್ರದ್ವೀಪಕ್ಕೆ ಪ್ರಯಾಣಿಸಲು ಶಕ್ತನಾಗಿದ್ದನು. ಇದು ಬಾರ್ನಬನ ಸ್ವದೇಶ ಟೆರಿಟೊರಿಯಾಗಿತ್ತು. ಮಾರ್ಕನು ಪೇತ್ರನೊಂದಿಗೂ ಬಾಬೆಲಿನಲ್ಲಿ ಸೇವೆಸಲ್ಲಿಸಿದನು. ಕಟ್ಟಕಡೆಗೆ, ಅವನಿಗೆ ಪೌಲನೊಂದಿಗೆ ಮತ್ತು ತಿಮೊಥೆಯನೊಂದಿಗೆ ರೋಮಿನಲ್ಲಿ ಕೆಲಸಮಾಡುವ ಅವಕಾಶ ಸಿಕ್ಕಿತು. (ಕೊಲೊಸ್ಸೆ 1:1; 4:10; 1 ಪೇತ್ರ 5:13) ಅನಂತರ, ಮಾರ್ಕನು ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ ಒಂದನ್ನು ಬರೆಯಲಿಕ್ಕಾಗಿ ಪವಿತ್ರಾತ್ಮದಿಂದ ಪ್ರೇರಿಸಲ್ಪಟ್ಟನು!
ನಮಗೆಲ್ಲರಿಗೂ ಇದರಲ್ಲಿ ಒಂದು ಅಮೂಲ್ಯವಾದ ಪಾಠವಿದೆ. ಮಾರ್ಕನು, ತಾನು ಕಳೆದುಕೊಂಡಂಥ ಆ ಸುಯೋಗದ ಕುರಿತಾಗಿಯೇ ಚಿಂತಿಸುತ್ತಾ, ತನಗೆ ಇನ್ನೂ ಲಭ್ಯವಿದ್ದ ಬೇರೆ ಸುಯೋಗಗಳು ಕೈಜಾರಿಹೋಗುವಂತೆ ಬಿಡಲಿಲ್ಲ. ಮಾರ್ಕನು ಯೆಹೋವನ ಸೇವೆಯಲ್ಲಿ ಕಾರ್ಯಮಗ್ನನಾಗಿದ್ದನು, ಮತ್ತು ಯೆಹೋವನು ಅವನನ್ನು ಆಶೀರ್ವದಿಸಿದನು.
ಆದುದರಿಂದ ನೀವು ಒಂದು ಸುಯೋಗವನ್ನು ಕಳೆದುಕೊಂಡಿರುವಲ್ಲಿ, ನಿರುತ್ಸಾಹಗೊಳ್ಳಬೇಡಿರಿ. ನೀವು ಒಂದು ಸಕಾರಾತ್ಮಕ ಮನೋಭಾವವನ್ನಿಟ್ಟು ಕಾರ್ಯಮಗ್ನರಾಗಿರುವಲ್ಲಿ, ನಿಮಗೆ ಬೇರೆ ಸುಯೋಗಗಳು ಕೊಡಲ್ಪಡಬಹುದು. ಏಕೆಂದರೆ ಕರ್ತನ ಕೆಲಸದಲ್ಲಿ ಮಾಡಲು ಬಹಳಷ್ಟಿದೆ.—1 ಕೊರಿಂಥ 15:58.
ಒಬ್ಬ ನಂಬಿಗಸ್ತ ಸೇವಕನು ನಿರುತ್ಸಾಹಿತನಾಗುತ್ತಾನೆ
ನಂಬಿಕೆಗಾಗಿ ಕಠಿನವಾದ ಹೋರಾಟವನ್ನು ನಡೆಸುವುದು ಸುಲಭವಲ್ಲ. ಇದರಿಂದಾಗಿ ಕೆಲವೊಮ್ಮೆ ನೀವು ನಿರುತ್ಸಾಹಿತರಾಗಬಹುದು. ಆಗ, ನೀವು ನಿರುತ್ಸಾಹಗೊಂಡದಕ್ಕಾಗಿ ಅಪರಾಧಿಭಾವವು ನಿಮ್ಮನ್ನು ಕಾಡಬಹುದು. ದೇವರ ನಂಬಿಗಸ್ತ ಸೇವಕರಿಗೆ ಎಂದೂ ಹಾಗನಿಸಬಾರದೆಂದು ನೀವು ತೀರ್ಮಾನಿಸಬಹುದು. ಇಸ್ರಾಯೇಲಿನ ಪ್ರಮುಖ ಪ್ರವಾದಿಗಳಲ್ಲಿ ಒಬ್ಬನಾಗಿರುವ ಎಲೀಯನ ಕುರಿತಾಗಿ ಯೋಚಿಸಿರಿ.
ಬಾಳನ ಪ್ರವಾದಿಗಳು ಎಲೀಯನಿಂದ ಕೊಲ್ಲಲ್ಪಟ್ಟಿದ್ದಾರೆಂದು ಬಾಳ್ ಆರಾಧನೆಯ ಒಬ್ಬ ಧರ್ಮಾಂಧ ಪ್ರವರ್ತಕಳಾಗಿದ್ದ ಇಸ್ರಾಯೇಲಿನ ರಾಣಿ ಈಜೆಬೆಲಳಿಗೆ ಗೊತ್ತಾದಾಗ, ತಾನು ಎಲೀಯನನ್ನು ಕೊಲ್ಲುವೆನೆಂದು ಪ್ರಮಾಣಮಾಡಿದಳು. ಈಜೆಬೆಲಳಿಗಿಂತಲೂ ಶಕ್ತಿಶಾಲಿಯಾಗಿದ್ದ ಶತ್ರುಗಳನ್ನು ಎಲೀಯನು ಈ ಹಿಂದೆ ಎದುರಿಸಿದ್ದನು. ಆದರೆ ಒಮ್ಮೆಲೇ ಈಗ ಅವನು ಎಷ್ಟು ನಿರುತ್ಸಾಹಿತನಾಗುತ್ತಾನೆಂದರೆ, ಅವನು ಸಾಯಲು ಬಯಸುತ್ತಾನೆ. (1 ಅರಸುಗಳು 19:1-4) ಇದು ಹೇಗಾಯಿತು? ಅವನು ಏನನ್ನೋ ಮರೆತುಬಿಟ್ಟಿದ್ದನು.
ತನ್ನ ಬಲದ ಮೂಲನು ಯೆಹೋವನಾಗಿದ್ದಾನೆ, ತಾನು ಅವನ ಕಡೆಗೆ ತಿರುಗಬೇಕೆಂಬುದನ್ನು ಎಲೀಯನು ಮರೆತಿದ್ದನು. ಸತ್ತವರನ್ನು ಎಬ್ಬಿಸುವ ಮತ್ತು ಬಾಳನ ಪ್ರವಾದಿಗಳನ್ನು ಎದುರಿಸಲಿಕ್ಕಾಗಿ ಎಲೀಯನಿಗೆ ಶಕ್ತಿಯನ್ನು ಕೊಟ್ಟವರು ಯಾರು? ಯೆಹೋವನೇ. ಆದುದರಿಂದ, ರಾಣಿ ಈಜೆಬೆಲಳ ಕೋಪವನ್ನು ಎದುರಿಸಿನಿಲ್ಲಲು ಬೇಕಾದಂತಹ ಶಕ್ತಿಯನ್ನು ಯೆಹೋವನೇ ಕೊಡಸಾಧ್ಯವಿತ್ತು.—1 ಅರಸುಗಳು 17:17-24; 18:21-40; 2 ಕೊರಿಂಥ 4:7.
ಒಬ್ಬ ವ್ಯಕ್ತಿಗೆ ಯೆಹೋವನಲ್ಲಿರುವ ಭರವಸೆಯು ಕ್ಷಣಮಾತ್ರಕ್ಕೆ ಕದಲಿಹೋಗಬಲ್ಲದು. ಎಲೀಯನಂತೆ, ಒಂದು ನಿರ್ದಿಷ್ಟ ಸಮಸ್ಯೆಯನ್ನು ನಿಭಾಯಿಸಲಿಕ್ಕಾಗಿ “ಮೇಲಣಿಂದ ಬರುವ ಜ್ಞಾನ”ವನ್ನು ಉಪಯೋಗಿಸುವ ಬದಲು, ನೀವು ಕೆಲವೊಮ್ಮೆ ಅದನ್ನು ಮಾನವ ದೃಷ್ಟಿಕೋನದಿಂದ ನೋಡಲಾರಂಭಿಸಬಹುದು. (ಯಾಕೋಬ 3:17) ಆದರೆ, ಎಲೀಯನ ಈ ತಾತ್ಕಾಲಿಕ ಚ್ಯುತಿಗಾಗಿ ಅವನನ್ನು ಯೆಹೋವನು ತೊರೆದುಬಿಡಲಿಲ್ಲ.
ಎಲೀಯನು ಬೇರ್ಷೆಬಕ್ಕೆ ಓಡಿ, ಅಲ್ಲಿಂದ ಇನ್ನು ಮುಂದಕ್ಕೆ ಅರಣ್ಯಪ್ರದೇಶಕ್ಕೆ ಹೋದನು. ಅಲ್ಲಿ ಯಾರೂ ತನ್ನನ್ನು ಕಂಡುಕೊಳ್ಳಲಾರರೆಂದು ಅವನು ನೆನಸಿದನು. ಆದರೆ ಯೆಹೋವನು ಅವನನ್ನು ಕಂಡುಹಿಡಿದನು. ಅವನನ್ನು ಸಂತೈಸಲಿಕ್ಕಾಗಿ ಒಬ್ಬ ದೇವದೂತನನ್ನು ಕಳುಹಿಸಿದನು. ಎಲೀಯನಿಗೆ, ತಾಜಾ ರೊಟ್ಟಿಯನ್ನು ತಿಂದು ಚೇತೋಹಾರಿ ನೀರನ್ನು ಕುಡಿಯುವಂತೆ ಆ ದೇವದೂತನು ನೋಡಿಕೊಂಡನು. ಎಲೀಯನು ವಿಶ್ರಾಂತಿಯನ್ನು ಪಡೆದ ಬಳಿಕ, ಅವನು ಸುಮಾರು 300 ಕಿಲೊಮೀಟರ್ ಮುಂದಕ್ಕೆ ಹೋರೇಬ್ ಪರ್ವತಕ್ಕೆ ಹೋಗುವಂತೆ ದೇವದೂತನು ನಿರ್ದೇಶಿಸಿದನು. ಅಲ್ಲಿ ಯೆಹೋವನು ಅವನನ್ನು ಇನ್ನೂ ಹೆಚ್ಚು ಬಲಪಡಿಸಲಿದ್ದನು.—1 ಅರಸುಗಳು 19:5-8.
ಹೋರೇಬ್ ಪರ್ವತದಲ್ಲಿ, ಎಲೀಯನು ಯೆಹೋವನ ಶಕ್ತಿಯಲ್ಲಿನ ನಂಬಿಕೆಯನ್ನು ಬಲಪಡಿಸುವಂಥ ಪ್ರದರ್ಶನವನ್ನು ನೋಡಿದನು. ಅದರ ನಂತರ, ಯೆಹೋವನು ಒಂದು ಪ್ರಶಾಂತವಾದ, ಮಂದ ಸ್ವರದಲ್ಲಿ ಎಲೀಯನು ಒಂಟಿಯಾಗಿಲ್ಲವೆಂಬ ಆಶ್ವಾಸನೆಯನ್ನು ಕೊಟ್ಟನು. ಯೆಹೋವನಲ್ಲದೆ, 7,000 ಮಂದಿ ಸಹೋದರರೂ ಅವನೊಂದಿಗಿದ್ದರು. ಇದು ಎಲೀಯನಿಗೆ ತಿಳಿದಿರಲಿಲ್ಲ. ಕೊನೆಗೆ, ಯೆಹೋವನು ಅವನಿಗೆ ಒಂದು ಕೆಲಸವನ್ನು ನೇಮಿಸಿದನು. ಅವನು ಎಲೀಯನನ್ನು ತನ್ನ ಪ್ರವಾದಿಯೋಪಾದಿ ತಿರಸ್ಕರಿಸಿಬಿಡಲಿಲ್ಲ!—1 ಅರಸುಗಳು 19:11-18.
ಸಹಾಯವು ಲಭ್ಯವಿದೆ
ನಿಮಗೆ ಆಗಾಗ್ಗೆ ಸ್ವಲ್ಪ ನಿರುತ್ಸಾಹವಾಗುತ್ತಿರುವಲ್ಲಿ, ಸ್ವಲ್ಪ ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳುವುದರಿಂದ ಅಥವಾ ಒಂದು ಪೌಷ್ಠಿಕ ಊಟವನ್ನು ಸೇವಿಸುವ ಮೂಲಕ ನಿಮಗೆ ಹೆಚ್ಚು ಹಿತಕರವಾದ ಅನಿಸಿಕೆಯಾಗಬಹುದು. 1977ರಲ್ಲಿ ತನ್ನ ಮರಣದ ಪರ್ಯಂತ ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಸದಸ್ಯನೋಪಾದಿ ಸೇವೆಸಲ್ಲಿಸಿದ ನೇತನ್ ಏಚ್. ನಾರ್ರವರು ಒಮ್ಮೆ ಹೇಳಿದ್ದೇನೆಂದರೆ, ರಾತ್ರಿ ಒಂದು ಒಳ್ಳೇ ನಿದ್ರೆಯನ್ನು ಪಡೆದ ನಂತರ, ದೊಡ್ಡ ಸಮಸ್ಯೆಗಳು ಹೆಚ್ಚು ಚಿಕ್ಕದ್ದಾಗಿ ತೋರುತ್ತವೆ. ಆದರೆ ಸಮಸ್ಯೆಯು ಇನ್ನೂ ಹಾಗೆಯೇ ಉಳಿದಿರುವಲ್ಲಿ, ಅಂಥ ಚಿಕಿತ್ಸೆಯು ಸಾಕಾಗಲಿಕ್ಕಿಲ್ಲ. ಅಂಥ ನಿರುತ್ಸಾಹದೊಂದಿಗೆ ಹೋರಾಡಲಿಕ್ಕಾಗಿ ನಿಮಗೆ ಸಹಾಯವು ಬೇಕಾಗಬಹುದು.
ಎಲೀಯನನ್ನು ಬಲಪಡಿಸಲಿಕ್ಕಾಗಿ ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಿದನು. ಇಂದು ದೇವರು ಹಿರಿಯರು ಮತ್ತು ಇತರ ಪ್ರೌಢ ಕ್ರೈಸ್ತರ ಮೂಲಕ ಉತ್ತೇಜನವನ್ನು ಕೊಡುತ್ತಾನೆ. ಹಿರಿಯರು ನಿಜವಾಗಿಯೂ, “ಗಾಳಿಯಲ್ಲಿ ಮರೆಯಂತೆ” ಇರಬಲ್ಲರು. (ಯೆಶಾಯ 32:1, 2) ಆದರೆ ಅವರಿಂದ ಉತ್ತೇಜನವನ್ನು ಪಡೆಯಲಿಕ್ಕಾಗಿ, ನೀವು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬೇಕಾದೀತು. ಎಲೀಯನು ತುಂಬ ನಿರುತ್ಸಾಹಗೊಂಡಿದ್ದರೂ, ಯೆಹೋವನಿಂದ ಉಪದೇಶವನ್ನು ಪಡೆಯಲಿಕ್ಕಾಗಿ ಹೋರೇಬ್ ಪರ್ವತಕ್ಕೆ ಪ್ರಯಾಣಿಸಿದನು. ಇಂದು ನಾವು ಕ್ರೈಸ್ತ ಸಭೆಯ ಮೂಲಕ ಬಲಪಡಿಸುವಂಥ ಉಪದೇಶವನ್ನು ಪಡೆಯುತ್ತೇವೆ.
ಇಂದು ಯಾರಾದರೂ ನಮ್ಮ ಮನನೋಯಿಸಿರಬಹುದು ಅಥವಾ ನಾವು ಸುಯೋಗಗಳನ್ನು ಕಳೆದುಕೊಂಡಿರಬಹುದು. ಇಂಥ ಪರೀಕ್ಷೆಗಳನ್ನು ಎದುರಿಸಲಿಕ್ಕಾಗಿ ನಾವು ಸಹಾಯವನ್ನು ಸ್ವೀಕರಿಸಿ, ಧೈರ್ಯದಿಂದ ನಿಭಾಯಿಸುವಾಗ, ಒಂದು ಪ್ರಮುಖವಾದ ವಿವಾದಾಂಶದಲ್ಲಿ ಯೆಹೋವನ ಪಕ್ಷವನ್ನು ಎತ್ತಿಹಿಡಿಯುತ್ತೇವೆ. ಇದು ಯಾವ ವಿವಾದಾಂಶ? ಮನುಷ್ಯರು ಯೆಹೋವನನ್ನು ಕೇವಲ ಸ್ವಾರ್ಥ ಕಾರಣಗಳಿಗಾಗಿ ಸೇವಿಸುತ್ತಾರೆಂದು ಸೈತಾನನು ವಾದಿಸಿದನು. ನಮ್ಮ ಜೀವನವು ಸುಗಮವಾಗಿ ಸಾಗುತ್ತಿರುವಾಗ ಮತ್ತು ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ನಾವು ದೇವರನ್ನು ಸೇವಿಸುವೆವು ಎಂಬುದನ್ನು ಸೈತಾನನು ಅಲ್ಲಗಳೆಯುವುದಿಲ್ಲ. ಅವನ ವಾದವೇನೆಂದರೆ, ನಮಗೆ ಸಮಸ್ಯೆಗಳಿರುವಾಗಲೇ ನಾವು ದೇವರನ್ನು ಸೇವಿಸುವುದನ್ನು ನಿಲ್ಲಿಸುವೆವು ಎಂದೇ. (ಯೋಬ, 1 ಮತ್ತು 2ನೆಯ ಅಧ್ಯಾಯಗಳು) ನಿರುತ್ಸಾಹದ ಎದುರಿನಲ್ಲೂ ಯೆಹೋವನ ಸೇವೆಯನ್ನು ಅಚಲವಾಗಿ ಮುಂದುವರಿಸುವ ಮೂಲಕ, ನಾವು ಪಿಶಾಚನ ಈ ನಿಂದಾತ್ಮಕ ಆರೋಪಕ್ಕೆ ಉತ್ತರವನ್ನು ಕೊಡಲು ಸಹಾಯಮಾಡಬಲ್ಲೆವು.—ಜ್ಞಾನೋಕ್ತಿ 27:11.
ಹನ್ನ, ಮಾರ್ಕ ಮತ್ತು ಎಲೀಯರಿಗೆ ಸಮಸ್ಯೆಗಳು ಖಂಡಿತವಾಗಿಯೂ ಇದ್ದವು ಮತ್ತು ಇವು ಅವರ ಆನಂದವನ್ನು ಅಲ್ಪಕಾಲಿಕವಾಗಿ ಕಸಿದುಕೊಂಡವು. ಆದರೂ, ಅವರು ಆ ಸಮಸ್ಯೆಗಳನ್ನು ನಿಭಾಯಿಸಿದರು ಮತ್ತು ಫಲಪ್ರದ ಜೀವಿತಗಳನ್ನು ನಡೆಸಿದರು. ಯೆಹೋವನ ಸಹಾಯದೊಂದಿಗೆ ನೀವು ಸಹ ನಿರುತ್ಸಾಹವನ್ನು ನಿಭಾಯಿಸಬಲ್ಲಿರಿ!