ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ಏಪ್ರಿಲ್‌ ಪು. 9-13
  • ದೇವರ ರಾಜ್ಯ ಬಂದಾಗ ಯಾವ ವಿಷಯಗಳು ಹೋಗುತ್ತವೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ರಾಜ್ಯ ಬಂದಾಗ ಯಾವ ವಿಷಯಗಳು ಹೋಗುತ್ತವೆ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದುಷ್ಟ ಜನರು
  • ಭ್ರಷ್ಟ ಸಂಘಟನೆಗಳು
  • ಕೆಟ್ಟ ಕೆಲಸಗಳು
  • ಕೆಟ್ಟ ಪರಿಸ್ಥಿತಿಗಳು
  • ದೇವರ ರಾಜ್ಯದ ಮೂಲಕ ಬಿಡುಗಡೆ ಸಮೀಪವಿದೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಈ ಲೋಕ ನಾಶ ಆಗುತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಕಷ್ಟಗಳಿಗೆಲ್ಲ ಕೊನೆ ಅತಿ ಶೀಘ್ರದಲ್ಲೇ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಭೂಮಿಗಾಗಿರುವ ದೇವರ ಉದ್ದೇಶವು ಶೀಘ್ರದಲ್ಲೇ ನೆರವೇರಲಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ಏಪ್ರಿಲ್‌ ಪು. 9-13
ಯೇಸು ಬಿಳಿ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದಾನೆ ಮತ್ತು ದೇವದೂತರ ಸೈನ್ಯ ಅವನನ್ನು ಹಿಂಬಾಲಿಸುತ್ತಿದೆ

ದೇವರ ರಾಜ್ಯ ಬಂದಾಗ ಯಾವ ವಿಷಯಗಳು ಹೋಗುತ್ತವೆ?

“ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿದೆ, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು.”—1 ಯೋಹಾ. 2:17.

ಗೀತೆಗಳು: 134, 24

ಉತ್ತರಿಸುವಿರಾ?

  • ಯೆಹೋವನು ದುಷ್ಟ ಜನರಿಗೆ ಮತ್ತು ಭ್ರಷ್ಟ ಸಂಘಟನೆಗಳಿಗೆ ಏನು ಮಾಡುತ್ತಾನೆ?

  • ಯೆಹೋವನು ಕೆಟ್ಟ ಕೆಲಸ ಹಾಗೂ ಕೆಟ್ಟ ಪರಿಸ್ಥಿತಿಗಳನ್ನು ಏನು ಮಾಡುತ್ತಾನೆ?

  • ಈ ದುಷ್ಟ ಲೋಕದ ನಾಶನವನ್ನು ಪಾರಾಗಲು ಏನು ಮಾಡಬೇಕು?

1, 2. (ಎ) ಈ ಲೋಕಕ್ಕೂ ಸಾವಿನ ಅಂಚಿನಲ್ಲಿರುವ ಅಪರಾಧಿಗೂ ಇರುವ ಹೋಲಿಕೆ ಏನು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಈ ದುಷ್ಟ ವ್ಯವಸ್ಥೆ ನಾಶ ಆಗುವಾಗ ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರಿಗೆ ಹೇಗನಿಸುವುದು?

ಕ್ರೂರ ಪಾತಕಿಯೊಬ್ಬನಿಗೆ ಮರಣದಂಡನೆ ವಿಧಿಸಲಾಗಿದೆ. ಆ ದಂಡನೆಯನ್ನು ಜಾರಿಗೊಳಿಸಲು ಅವನನ್ನು ಕರೆದುಕೊಂಡು ಹೋಗುವಾಗ ಕಾವಲುಗಾರರು “ಸತ್ತ ಮನುಷ್ಯ ನಡೆಯುತ್ತಿದ್ದಾನೆ!” ಎಂದು ಕೂಗುತ್ತಾರೆ.a ಯಾಕೆ? ಅವನು ನೋಡಲಿಕ್ಕೇನೋ ಆರೋಗ್ಯವಾಗಿ, ಗಟ್ಟಿಮುಟ್ಟಾಗಿ ಇದ್ದಾನೆ. ಆದರೆ ಇನ್ನು ಸ್ವಲ್ಪ ಸಮಯದಲ್ಲೇ ಅವನು ಸಾಯಲಿಕ್ಕಿರುವುದರಿಂದ ಅವನು ಬದುಕಿದ್ದರೂ ಸತ್ತವನಂತೆ.

2 ಈ ದುಷ್ಟ ಲೋಕ ಒಂದು ರೀತಿಯಲ್ಲಿ ಸಾವಿನ ದವಡೆಯಲ್ಲಿರುವ ಆ ಅಪರಾಧಿಯಂತೆಯೇ ಇದೆ. ಆದ್ದರಿಂದಲೇ ‘ಈ ಲೋಕವು ಗತಿಸಿಹೋಗುತ್ತಿದೆ’ ಎಂದು ಬೈಬಲ್‌ ಹೇಳುತ್ತದೆ. (1 ಯೋಹಾ. 2:17) ಈ ಕೆಟ್ಟ ವ್ಯವಸ್ಥೆಯನ್ನು ಬೇಗನೆ ನಾಶಮಾಡಬೇಕೆಂದು ಯೆಹೋವನು ತೀರ್ಮಾನಿಸಿದ್ದಾನೆ. ಹಾಗಾಗಿ ಅದರ ನಾಶನ ಖಚಿತ. ಆದರೆ ಈ ಲೋಕದ ನಾಶಕ್ಕೂ ಸಾವಿನ ಅಂಚಿನಲ್ಲಿರುವ ಅಪರಾಧಿಗೂ ಒಂದು ದೊಡ್ಡ ವ್ಯತ್ಯಾಸ ಇದೆ. ಅದೇನೆಂದರೆ ಕೆಲವರು ಆ ಅಪರಾಧಿಗೆ ವಿಧಿಸಿರುವ ತೀರ್ಪು ಸರಿಯಲ್ಲ ಎಂದು ಪ್ರತಿಭಟನೆ ಮಾಡಬಹುದು. ಇದರಿಂದ ಅವನ ಜೀವ ಉಳಿಯಬಹುದು. ಆದರೆ ಈ ದುಷ್ಟ ಲೋಕದ ನಾಶನದ ತೀರ್ಪು ಬದಲಾಗಲ್ಲ. ಯಾಕೆಂದರೆ ಆ ತೀರ್ಪು ಕೊಟ್ಟಿರುವುದು ಪರಿಪೂರ್ಣ ನ್ಯಾಯಾಧೀಶನಾದ ಯೆಹೋವನು. ಹಾಗಾಗಿ ಆತನ ತೀರ್ಪು ನ್ಯಾಯವಾಗಿಯೇ ಇರುತ್ತದೆ. (ಧರ್ಮೋ. 32:4) ಇದರ ನಾಶನ ಯಾವ ಕಾರಣಕ್ಕೂ ತಡವಾಗಲ್ಲ. ಲೋಕದ ದುಷ್ಟ ವ್ಯವಸ್ಥೆ ನಾಶವಾದಾಗ ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರೂ ಯೆಹೋವನ ತೀರ್ಪು ನ್ಯಾಯವಾಗಿದೆ ಎಂದು ಒಪ್ಪುತ್ತಾರೆ. ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯವದು!

3. ದೇವರ ರಾಜ್ಯ ಬಂದಾಗ ಯಾವ ನಾಲ್ಕು ಸಮಸ್ಯೆಗಳು ಇಲ್ಲದೇ ಹೋಗುತ್ತವೆ?

3 ‘ಗತಿಸಿಹೋಗುತ್ತಿರುವ ಈ ಲೋಕ’ ಹೇಗಿದೆ? ಕೆಟ್ಟ ಜನ, ಕೆಟ್ಟತನದಿಂದ ತುಂಬಿದೆ. ಈ ಎಲ್ಲಾ ವಿಷಯಗಳು ಬೇಗನೆ ಕೊನೆಗಾಣಲಿವೆ. ಇದು ‘ದೇವರ ರಾಜ್ಯದ ಸುವಾರ್ತೆಯ’ ಒಂದು ಭಾಗ. (ಮತ್ತಾ. 24:14) ನಾವು ಈ ಲೇಖನದಲ್ಲಿ, ದೇವರ ರಾಜ್ಯ ಬಂದಾಗ ಇಲ್ಲದೇ ಹೋಗುವ ನಾಲ್ಕು ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದೇವೆ: ದುಷ್ಟ ಜನರು, ಭ್ರಷ್ಟ ಸಂಘಟನೆಗಳು, ಕೆಟ್ಟ ಕೆಲಸಗಳು ಹಾಗೂ ಕೆಟ್ಟ ಪರಿಸ್ಥಿತಿಗಳು. ಇದರಲ್ಲಿ ಪ್ರತಿಯೊಂದನ್ನು ಚರ್ಚಿಸುವಾಗ (1) ಇಂದು ಅದರಿಂದ ನಮಗೆ ಯಾವ ತೊಂದರೆ ಆಗುತ್ತಿದೆ? (2) ಯೆಹೋವನು ಅದನ್ನು ಏನು ಮಾಡುತ್ತಾನೆ? ಮತ್ತು (3) ಅದರ ಬದಲು ಆತನು ಏನನ್ನು ತರಲಿದ್ದಾನೆ? ಎಂದು ಕಲಿಯಲಿದ್ದೇವೆ.

ದುಷ್ಟ ಜನರು

4. ದುಷ್ಟ ಜನರಿಂದ ಇಂದು ನಮಗೆ ಯಾವ ತೊಂದರೆ ಆಗುತ್ತಿದೆ?

4 ದುಷ್ಟ ಜನರಿಂದ ಇಂದು ನಮಗೆ ಯಾವ ತೊಂದರೆ ಆಗುತ್ತಿದೆ? “ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು” ಎಂದು ಅಪೊಸ್ತಲ ಪೌಲ ಹೇಳಿದನು. ಆಗ ‘ದುಷ್ಟರೂ ವಂಚಕರೂ ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ ಹೋಗುವರು’ ಎಂದೂ ಹೇಳಿದನು. (2 ತಿಮೊ. 3:1-5, 13) ಗೂಂಡಾಗಳಿಂದ, ಜಾತೀಯವಾದಿಗಳಿಂದ, ಕ್ರೂರ ಪಾತಕಿಗಳಿಂದ ನಮ್ಮಲ್ಲಿ ಅನೇಕರು ತುಂಬ ತೊಂದರೆ ಅನುಭವಿಸಿದ್ದೇವೆ. ಕೆಲವು ದುಷ್ಟರು ರಾಜಾರೋಷವಾಗಿ ಕೆಟ್ಟದ್ದನ್ನು ಮಾಡುತ್ತಾರೆ. ಇನ್ನು ಕೆಲವರು ಗೋಮುಖ ವ್ಯಾಘ್ರರಂತೆ ಇರುತ್ತಾರೆ. ಇಂಥವರಿಂದ ನಮಗೆ ನೇರವಾಗಿ ತೊಂದರೆ ಆಗಿಲ್ಲವಾದರೂ ಅವರ ಕೆಟ್ಟತನದ ಬಿಸಿ ನಮಗೂ ತಟ್ಟುತ್ತದೆ. ಉದಾಹರಣೆಗೆ, ಪುಟ್ಟ ಮಕ್ಕಳ, ವೃದ್ಧರ ಹಾಗೂ ಅಮಾಯಕರ ಮೇಲೆ ನಡೆಯುವ ದೌರ್ಜನ್ಯವನ್ನು ಕೇಳಿ ಕೇಳಿ ನಾವು ಬೇಸತ್ತು ಹೋಗಿದ್ದೇವೆ. ದುಷ್ಟರು ಮೃಗಗಳಂತೆ, ದೆವ್ವಗಳಂತೆ ವರ್ತಿಸುತ್ತಿದ್ದಾರೆ. (ಯಾಕೋ. 3:15) ಸಂತೋಷದ ವಿಷಯ ಏನೆಂದರೆ, ದೇವರ ವಾಕ್ಯದಲ್ಲಿ ಒಂದು ಒಳ್ಳೇ ಸುದ್ದಿ ಇದೆ.

5. (ಎ) ದುಷ್ಟರಿಗೆ ಯಾವ ಅವಕಾಶ ಇನ್ನೂ ಇದೆ? (ಬಿ) ಬದಲಾಗದೆ ಇರುವವರಿಗೆ ಏನಾಗುತ್ತದೆ?

5 ದುಷ್ಟರಿಗೆ ಯೆಹೋವನು ಏನು ಮಾಡುತ್ತಾನೆ? ಯೆಹೋವನು ದುಷ್ಟರಿಗೆ ಬದಲಾಗಲು ಅವಕಾಶ ಕೊಟ್ಟಿದ್ದಾನೆ. (ಯೆಶಾ. 55:7) ಈ ಲೋಕ ಬೇಗನೆ ನಾಶವಾಗುತ್ತಾದರೂ ದೇವರು ಜನರಲ್ಲಿ ಒಬ್ಬೊಬ್ಬರ ಬಗ್ಗೆ ಕೊನೆಯ ತೀರ್ಪನ್ನು ಇನ್ನು ಹೊರಡಿಸಿಲ್ಲ. ಮಹಾ ಸಂಕಟ ಬರುವವರೆಗೂ ಬದಲಾಗದೆ ಕೆಟ್ಟದ್ದನ್ನು ಮಾಡುತ್ತಾ ಹೋಗುವವರಿಗೆ ಏನಾಗುತ್ತದೆ? ದುಷ್ಟರನ್ನು ಹೇಳಹೆಸರಿಲ್ಲದ ಹಾಗೆ ಮಾಡುತ್ತೇನೆ ಎಂದು ಯೆಹೋವನು ಮಾತು ಕೊಟ್ಟಿದ್ದಾನೆ. (ಕೀರ್ತನೆ 37:10 ಓದಿ.) ಇಂದು ಎಷ್ಟೋ ಜನ ತಪ್ಪು ಮಾಡಿ ಅದನ್ನು ಮುಚ್ಚಿಹಾಕುತ್ತಾರೆ. ಹಾಗಾಗಿ ಅವರಿಗೆ ಶಿಕ್ಷೆ ಸಿಗುವುದಿಲ್ಲ. (ಯೋಬ 21:7, 9) ಆದರೆ ಯೆಹೋವನು “ಮನುಷ್ಯನ ಮಾರ್ಗಗಳ ಮೇಲೆ ಕಣ್ಣಿಟ್ಟು ಅವನ ಹೆಜ್ಜೆಗಳನ್ನೆಲ್ಲಾ ನೋಡುವನು. ಅಧರ್ಮಿಗಳು ಅಡಗಿಕೊಳ್ಳುವದಕ್ಕೆ ಅನುಕೂಲವಾದ ಯಾವ ಕತ್ತಲೂ ಯಾವ ಗಾಢಾಂಧಕಾರವೂ ಇರುವದಿಲ್ಲ” ಎಂದು ಬೈಬಲ್‌ ನೆನಪು ಹುಟ್ಟಿಸುತ್ತದೆ. (ಯೋಬ 34:21, 22) ಹಾಗಾಗಿ ಯೆಹೋವನ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯನೇ ಇಲ್ಲ. ದುಷ್ಟರು ಮಾಡುತ್ತಿರುವ ಪ್ರತಿಯೊಂದು ಕೆಲಸ ಆತನಿಗೆ ಬಟ್ಟಬಯಲಾಗಿದೆ. ಅರ್ಮಗೆದೋನಿನ ನಂತರ ನಾವು ದುಷ್ಟರನ್ನು ಹುಡುಕಿದರೂ ಅವರು ಸಿಗುವುದಿಲ್ಲ. ಅವರು ನಾಶವಾಗಿರುತ್ತಾರೆ!—ಕೀರ್ತ. 37:12-15.

6. (ಎ) ದುಷ್ಟರು ಹೋದ ಮೇಲೆ ಭೂಮಿಯಲ್ಲಿ ಯಾರಿರುತ್ತಾರೆ? (ಬಿ) ಅದು ಸಂತೋಷದ ವಿಷಯ ಯಾಕೆ?

6 ದುಷ್ಟರು ಹೋದ ಮೇಲೆ ಭೂಮಿಯಲ್ಲಿ ಯಾರಿರುತ್ತಾರೆ? “ದೀನರು ದೇಶವನ್ನು ಅನುಭವಿಸುವರು. ಅವರು ಮಹಾಸೌಖ್ಯದಿಂದ ಆನಂದಿಸುವರು” ಎಂದು ಯೆಹೋವನು ವಾಗ್ದಾನ ಮಾಡಿದ್ದಾನೆ. ಅದೇ ಕೀರ್ತನೆಯಲ್ಲಿ, “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂದು ತಿಳಿಸಲಾಗಿದೆ. (ಕೀರ್ತ. 37:11, 29) ಇಲ್ಲಿ ತಿಳಿಸಲಾಗಿರುವ “ದೀನರು” ಮತ್ತು “ನೀತಿವಂತರು” ಅಂದರೆ ಯಾರು? ದೀನರು ಅಂದರೆ ಯೆಹೋವನ ಬಗ್ಗೆ ಕಲಿತು ಆತನಿಗೆ ವಿಧೇಯತೆ ತೋರಿಸುವವರು. ನೀತಿವಂತರು ಅಂದರೆ ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿಯಾಗಿದೆಯೋ ಅದನ್ನು ಮಾಡುವವರು. ಇಂದು ಲೋಕದಲ್ಲಿ ಒಳ್ಳೆಯವರಿಗಿಂತ ಕೆಟ್ಟವರೇ ಜಾಸ್ತಿ. ಆದರೆ ಹೊಸ ಲೋಕದಲ್ಲಿ ದೀನರು ಮತ್ತು ನೀತಿವಂತರು ಮಾತ್ರ ಇರುತ್ತಾರೆ. ಅವರು ಭೂಮಿಯನ್ನು ಸುಂದರ ತೋಟವನ್ನಾಗಿ ಮಾಡುತ್ತಾರೆ!

ಭ್ರಷ್ಟ ಸಂಘಟನೆಗಳು

7. ಭ್ರಷ್ಟ ಸಂಘಟನೆಗಳಿಂದ ಇಂದು ನಮಗೆ ಯಾವ ತೊಂದರೆ ಆಗುತ್ತಿದೆ?

7 ಭ್ರಷ್ಟ ಸಂಘಟನೆಗಳಿಂದ ಇಂದು ನಮಗೆ ಯಾವ ತೊಂದರೆ ಆಗುತ್ತಿದೆ? ಇವತ್ತು ನಡೆಯುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಕೆಲವು ವ್ಯಕ್ತಿಗಳಲ್ಲ, ದೊಡ್ಡ ಸಂಘಟನೆಗಳು ಕಾರಣವಾಗಿವೆ. ಧಾರ್ಮಿಕ ಸಂಘಟನೆಗಳು ಕೋಟಿಗಟ್ಟಲೆ ಜನರಿಗೆ ಮೋಸ ಮಾಡುತ್ತಿವೆ. ಉದಾಹರಣೆಗೆ, ಜನರಿಗೆ ದೇವರ ಬಗ್ಗೆ ಸುಳ್ಳು ಹೇಳುತ್ತಿವೆ, ಬೈಬಲ್‌ನಲ್ಲಿರುವ ವಿಷಯಗಳು ಕಟ್ಟುಕಥೆ ಎಂದು ಹೇಳುತ್ತಿವೆ, ಈ ಭೂಮಿ ಮತ್ತು ಮನುಷ್ಯರಿಗೆ ಮುಂದೆ ಏನಾಗುತ್ತದೆ ಅನ್ನುವ ವಿಷಯದಲ್ಲೂ ಸುಳ್ಳುಗಳನ್ನು ಕಲಿಸಿ ಜನರ ತಲೆಕೆಡಿಸುತ್ತಿವೆ. ಭ್ರಷ್ಟ ಸರ್ಕಾರಗಳು ಯುದ್ಧ ಮತ್ತು ಜಾತೀಯ ಹಿಂಸಾಚಾರಗಳಿಗೆ ಕುಮ್ಮಕ್ಕು ಕೊಡುತ್ತಿವೆ, ಬಡಬಗ್ಗರ ರಕ್ತ ಹೀರುತ್ತಿವೆ. ಇಂಥ ಸರ್ಕಾರಗಳು ಪಕ್ಷಪಾತ ತೋರಿಸುತ್ತವೆ ಮತ್ತು ಲಂಚ ಪಡೆದು ದಿನೇ ದಿನೇ ಶ್ರೀಮಂತವಾಗುತ್ತಿವೆ. ಇತರ ಸಂಸ್ಥೆಗಳು ದುಡ್ಡು ಮಾಡಲಿಕ್ಕಾಗಿ ಪರಿಸರವನ್ನು ಮಲಿನಮಾಡಿ ನೈಸರ್ಗಿಕ ಸಂಪನ್ಮೂಲಗಳನ್ನು ಹಾಳುಮಾಡುತ್ತಿವೆ. ಇವರ ಸ್ವಾರ್ಥದಿಂದಾಗಿ ಬಡವರು ತೀರ ಬಡತನಕ್ಕೆ ಇಳಿಯುತ್ತಿದ್ದಾರೆ, ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುತ್ತಿದ್ದಾರೆ. ಇಂದು ಲೋಕದಲ್ಲಿ ನಡೆಯುತ್ತಿರುವ ಹೆಚ್ಚಿನಾಂಶ ಅನ್ಯಾಯಗಳ ಹಿಂದೆ ಭ್ರಷ್ಟ ಸಂಘಟನೆಗಳ ಕೈವಾಡ ಇದೆ ಎನ್ನುವುದಂತೂ ಸತ್ಯ.

8. ಇಂದು ಜನರ ಕಣ್ಣಿಗೆ ಪರ್ವತಗಳಂತೆ ಸ್ಥಿರವಾಗಿ ಕಾಣುವ ಸಂಘಟನೆಗಳಿಗೆ ಏನಾಗಲಿದೆ ಎಂದು ಬೈಬಲ್‌ ತಿಳಿಸುತ್ತದೆ?

8 ಭ್ರಷ್ಟ ಸಂಘಟನೆಗಳಿಗೆ ಯೆಹೋವನು ಏನು ಮಾಡುತ್ತಾನೆ? ರಾಜಕೀಯ ಶಕ್ತಿಗಳು ಸುಳ್ಳು ಧಾರ್ಮಿಕ ಸಂಘಟನೆಗಳ ಮೇಲೆ ಆಕ್ರಮಣ ಮಾಡುವಾಗ ಮಹಾ ಸಂಕಟ ಆರಂಭವಾಗುತ್ತದೆ. ಬೈಬಲು ಸುಳ್ಳು ಧರ್ಮಗಳನ್ನು ವೇಶ್ಯೆಯಾದ ಮಹಾ ಬಾಬೆಲ್‌ ಎಂದು ವರ್ಣಿಸುತ್ತದೆ. (ಪ್ರಕ. 17:1, 2, 16; 18:1-4) ಈ ಧಾರ್ಮಿಕ ಸಂಘಟನೆಗಳೆಲ್ಲ ನಿರ್ನಾಮವಾಗಲಿವೆ. ಉಳಿದಿರುವ ಬೇರೆಲ್ಲಾ ಭ್ರಷ್ಟ ಸಂಘಟನೆಗಳಿಗೆ ಏನಾಗುತ್ತದೆ? ಈ ಸಂಘಟನೆಗಳು ದೃಢವಾಗಿರುವಂತೆ ಮತ್ತು ಸ್ಥಿರವಾಗಿರುವಂತೆ ಕಾಣುವುದರಿಂದ ಬೈಬಲು ಅವುಗಳನ್ನು ಪರ್ವತಗಳಿಗೆ ಮತ್ತು ದ್ವೀಪಗಳಿಗೆ ಹೋಲಿಸಿದೆ. (ಪ್ರಕಟನೆ 6:14 ಓದಿ.) ಆದರೆ ದೇವರ ರಾಜ್ಯವನ್ನು ಬೆಂಬಲಿಸದಿರುವ ಸರ್ಕಾರಗಳು ಮತ್ತು ಸಂಘಟನೆಗಳು ನಾಶವಾಗುತ್ತವೆ ಎಂದೂ ತಿಳಿಸುತ್ತದೆ. ಈ ನಾಶನದೊಂದಿಗೆ ಮಹಾ ಸಂಕಟ ಕೊನೆಗೊಳ್ಳುತ್ತದೆ. (ಯೆರೆ. 25:31-33) ಆಗ ಯಾವ ಭ್ರಷ್ಟ ಸಂಘಟನೆಯೂ ಇರುವುದಿಲ್ಲ!

9. ನೂತನ ಭೂಮಿಯಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತದೆ ಎಂದು ನಾವು ಹೇಗೆ ಖಂಡಿತವಾಗಿ ಹೇಳಬಹುದು?

9 ಭ್ರಷ್ಟ ಸಂಘಟನೆಗಳು ಹೋದ ಮೇಲೆ ಏನು ಬರುತ್ತದೆ? ಅರ್ಮಗೆದೋನಿನ ನಂತರ ಭೂಮಿಯಲ್ಲಿ ಯಾವುದಾದರೂ ಸಂಘಟನೆ ಇರುತ್ತಾ? ಯೆಹೋವನ “ವಾಗ್ದಾನಕ್ಕನುಸಾರ ನಾವು ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಿದ್ದೇವೆ ಮತ್ತು ಇವುಗಳಲ್ಲಿ ನೀತಿಯು ವಾಸವಾಗಿರುವುದು” ಎನ್ನುತ್ತದೆ ಬೈಬಲ್‌. (2 ಪೇತ್ರ 3:13) ಹಳೆಯ ಆಕಾಶ ಅಂದರೆ ಭ್ರಷ್ಟ ಸರ್ಕಾರಗಳು. ಹಳೆಯ ಭೂಮಿ ಅಂದರೆ ಸರ್ಕಾರಗಳ ಕೆಳಗಿರುವ ಜನರು. ಹಳೆಯ ಆಕಾಶ ಮತ್ತು ಭೂಮಿ ಹೋದ ಮೇಲೆ ಏನು ಬರುತ್ತದೆ? “ನೂತನ ಆಕಾಶ ಮತ್ತು ನೂತನ ಭೂಮಿ.” ನೂತನ ಆಕಾಶ ಹೊಸ ಸರ್ಕಾರವನ್ನು ಸೂಚಿಸುತ್ತದೆ. ಈ ಸರ್ಕಾರ ದೇವರ ರಾಜ್ಯವಾಗಿದ್ದು, ಯೇಸು ಅದರ ರಾಜನಾಗಿರುತ್ತಾನೆ ಮತ್ತು ಆತನೊಂದಿಗೆ 1,44,000 ಮಂದಿ ರಾಜರಿರುತ್ತಾರೆ. ನೂತನ ಭೂಮಿ ದೇವರ ರಾಜ್ಯದ ಕೆಳಗಿರುವ ಜನರನ್ನು ಸೂಚಿಸುತ್ತದೆ. ಯೇಸು ಮತ್ತು ಅವನೊಂದಿಗಿರುವ ರಾಜರು, ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡುವ ದೇವರಾಗಿರುವ ಯೆಹೋವನನ್ನು ಪರಿಪೂರ್ಣವಾಗಿ ಅನುಕರಿಸುತ್ತಾರೆ. (1 ಕೊರಿಂ. 14:33) ಆದ್ದರಿಂದ “ನೂತನ ಭೂಮಿ” ವ್ಯವಸ್ಥಿತವಾಗಿ ಇರುತ್ತದೆ. ಅದನ್ನು ನೋಡಿಕೊಳ್ಳಲು ಭೂಮಿಯಲ್ಲಿ ಉತ್ತಮ ಪುರುಷರಿರುತ್ತಾರೆ. (ಕೀರ್ತ. 45:16) ಈ ಪುರುಷರನ್ನು ಯೇಸು ಕ್ರಿಸ್ತ ಮತ್ತು 1,44,000 ಮಂದಿ ಮಾರ್ಗದರ್ಶಿಸುತ್ತಾರೆ. ಭ್ರಷ್ಟ ಸಂಘಟನೆಗಳ ಬದಲಿಗೆ ಐಕ್ಯವಾಗಿ ಕೆಲಸ ಮಾಡುವ, ಎಂದಿಗೂ ಭ್ರಷ್ಟಗೊಳ್ಳದ ಒಂದೇ ಒಂದು ಸಂಘಟನೆ ಇರುವಾಗ ಎಷ್ಟು ಚೆನ್ನಾಗಿರುತ್ತೆ ಅಲ್ವಾ?

ಕೆಟ್ಟ ಕೆಲಸಗಳು

10. (ಎ) ನಿಮ್ಮ ಸುತ್ತಮುತ್ತ ಯಾವ ಕೆಟ್ಟ ಕೆಲಸಗಳು ನಡೆಯುತ್ತಿವೆ? (ಬಿ) ಇದರಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯಾವ ತೊಂದರೆ ಆಗುತ್ತಿದೆ?

10 ಕೆಟ್ಟ ಕೆಲಸಗಳಿಂದ ಇಂದು ನಮಗೆ ಯಾವ ತೊಂದರೆ ಆಗುತ್ತಿದೆ? ಇಂದು ಲೋಕದಲ್ಲಿ ಅನೈತಿಕತೆ, ಅಪ್ರಾಮಾಣಿಕತೆ, ಕ್ರೂರವಾದ ಹಿಂಸಾಚಾರ ರಾರಾಜಿಸುತ್ತಿದೆ. ಲೋಕದ ಮನೋರಂಜನೆ ಇಂಥ ಕೆಟ್ಟ ಕೆಲಸಗಳು ತಪ್ಪಲ್ಲ ಎಂಬಂತೆ ಬಿಂಬಿಸುತ್ತಿದೆ. ಹೀಗೆ ಇವುಗಳ ಬಗ್ಗೆ ದೇವರಿಟ್ಟಿರುವ ಮಟ್ಟಗಳಿಗೆ ಬೆಲೆನೇ ಇಲ್ಲದ ಹಾಗೆ ಮಾಡುತ್ತಿದೆ. (ಯೆಶಾ. 5:20) ವಿಶೇಷವಾಗಿ ಹೆತ್ತವರು ತಮ್ಮ ಮಕ್ಕಳನ್ನು ಈ ಕೆಟ್ಟ ಪ್ರಭಾವದಿಂದ ಕಾಪಾಡಬೇಕು. ಇಂದು ಲೋಕದಲ್ಲಿ ದೇವರ ಮಟ್ಟಗಳಿಗೆ ಕಿಂಚಿತ್ತೂ ಗೌರವ ಇಲ್ಲ. ಆದ್ದರಿಂದ ಎಲ್ಲ ಕ್ರೈಸ್ತರು ಯೆಹೋವನೊಂದಿಗಿರುವ ಅಮೂಲ್ಯ ಸಂಬಂಧವನ್ನು ಕಾಪಾಡಿಕೊಳ್ಳಲು ಶತಪ್ರಯತ್ನ ಮಾಡಬೇಕು.

11. ಯೆಹೋವನು ಸೊದೋಮ್‌ ಮತ್ತು ಗೊಮೋರ ಪಟ್ಟಣಗಳನ್ನು ನಾಶಮಾಡಿದ ವಿಷಯದಿಂದ ನಮಗೇನು ಗೊತ್ತಾಗುತ್ತದೆ?

11 ಕೆಟ್ಟ ಕೆಲಸಗಳಿಗೆ ಯೆಹೋವನು ಏನು ಮಾಡುತ್ತಾನೆ? ಸೊದೋಮ್‌ ಮತ್ತು ಗೊಮೋರ ಪಟ್ಟಣಗಳಲ್ಲಿ ಕೆಟ್ಟ ಕೆಲಸಗಳು ನಡೆಯುತ್ತಿದ್ದಾಗ ಆತನು ಏನು ಮಾಡಿದನು ಎಂದು ಯೋಚಿಸಿ. (2 ಪೇತ್ರ 2:6-8 ಓದಿ.) ಲೋಟನು ನೀತಿವಂತನಾಗಿದ್ದನು. ಆದರೆ ಸುತ್ತಮುತ್ತ ಇದ್ದ ಜನರು ಮಾಡುತ್ತಿದ್ದ ಕೆಟ್ಟ ಕೆಲಸಗಳಿಂದ ಅವನಿಗೆ ಮತ್ತವನ ಕುಟುಂಬಕ್ಕೆ ತುಂಬ ತೊಂದರೆ ಆಗುತ್ತಿತ್ತು. ಆದ್ದರಿಂದ ಯೆಹೋವನು ಆ ಇಡೀ ಪ್ರದೇಶದಲ್ಲಿದ್ದ ಜನರನ್ನು ನಾಶಮಾಡಿ ಅಲ್ಲಿ ನಡೆಯುತ್ತಿದ್ದ ಕೆಟ್ಟ ಕೆಲಸಗಳಿಗೆ ಅಂತ್ಯ ಹಾಡಿದನು. ಹೀಗೆ ಆತನು ಇಂದಿರುವ ಕೆಟ್ಟ ಜನರಿಗೆ ಏನು ಮಾಡುತ್ತಾನೆ ಎನ್ನುವುದಕ್ಕೆ “ಒಂದು ನಮೂನೆಯನ್ನು ಇಟ್ಟನು.” ಯೆಹೋವನು ಅಂದು ಅನೈತಿಕ ನಡವಳಿಕೆಯನ್ನು ಕೊನೆಗೊಳಿಸಿದಂತೆಯೇ ಇಂದಿರುವ ಎಲ್ಲಾ ಕೆಟ್ಟ ಕೆಲಸಗಳನ್ನು ಕೊನೆಗೊಳಿಸುತ್ತಾನೆ.

12. ಹೊಸ ಲೋಕದಲ್ಲಿ ನೀವು ಯಾವ ಕೆಲಸಗಳನ್ನು ಮಾಡಲು ಎದುರುನೋಡುತ್ತಿದ್ದೀರಾ?

12 ಕೆಟ್ಟ ಕೆಲಸಗಳು ಹೋದ ಮೇಲೆ ನಮಗೆ ಯಾವ ಕೆಲಸಗಳು ಇರುತ್ತವೆ? ಹೊಸ ಲೋಕದಲ್ಲಿ ನಮಗೆ ಮಾಡಲು ಒಳ್ಳೊಳ್ಳೆ ಕೆಲಸಗಳಿರುತ್ತವೆ. ಉದಾಹರಣೆಗೆ, ಇಡೀ ಭೂಮಿಯನ್ನು ಅಂದವಾದ ತೋಟವನ್ನಾಗಿ ಮಾಡುತ್ತೇವೆ, ನಮಗಾಗಿ ಮತ್ತು ನಮ್ಮವರಿಗಾಗಿ ಸುಂದರ ಮನೆಗಳನ್ನು ಕಟ್ಟುತ್ತೇವೆ. ಅಷ್ಟೇ ಅಲ್ಲ, ಪುನರುತ್ಥಾನವಾಗಿ ಬರುವ ಕೋಟ್ಯಾಂತರ ಜನರಿಗೆ ಯೆಹೋವನ ಬಗ್ಗೆ ಮತ್ತು ಆತನು ನಮಗಾಗಿ ಮಾಡಿರುವ ಎಲ್ಲಾ ವಿಷಯಗಳ ಬಗ್ಗೆ ಕಲಿಸುತ್ತೇವೆ. (ಯೆಶಾ. 65:21, 22; ಅ. ಕಾ. 24:15) ನಾವಾಗ ನಮಗೆ ಖುಷಿ ಕೊಡುವಂಥ ಮತ್ತು ಯೆಹೋವನಿಗೆ ಸ್ತುತಿ ತರುವಂಥ ಕೆಲಸಗಳನ್ನು ಮಾಡುತ್ತಾ ಇರುತ್ತೇವೆ.

ಕೆಟ್ಟ ಪರಿಸ್ಥಿತಿಗಳು

13. ಸೈತಾನ, ಆದಾಮ ಮತ್ತು ಹವ್ವ ಯೆಹೋವನ ವಿರುದ್ಧ ತಿರುಗಿ ಬಿದ್ದದ್ದರ ಪರಿಣಾಮ ಏನಾಗಿದೆ?

13 ಕೆಟ್ಟ ಪರಿಸ್ಥಿತಿಗಳಿಂದ ಇಂದು ನಮಗೆ ಯಾವ ತೊಂದರೆ ಆಗುತ್ತಿದೆ? ಲೋಕದಲ್ಲಿ ದುಷ್ಟ ಜನರು, ಭ್ರಷ್ಟ ಸಂಘಟನೆಗಳು ಮತ್ತು ಕೆಟ್ಟ ಕೆಲಸಗಳು ತುಂಬಿ ತುಳುಕುತ್ತಿರುವುದರಿಂದ ಪರಿಸ್ಥಿತಿ ತುಂಬ ಹದಗೆಟ್ಟಿದೆ. ಯುದ್ಧ, ಬಡತನ, ಜಾತೀಯವಾದ, ಕಾಯಿಲೆ, ಸಾವು, ನೋವಿನಿಂದ ನಾವೆಲ್ಲರೂ ತೊಂದರೆ ಅನುಭವಿಸುತ್ತಿದ್ದೇವೆ. ಈ ಎಲ್ಲಾ ಕೆಟ್ಟ ಪರಿಸ್ಥಿತಿಗಳಿಗೆ ಮುಖ್ಯ ಕಾರಣ ಸೈತಾನ, ಆದಾಮ ಮತ್ತು ಹವ್ವ. ಅವರು ಯೆಹೋವನ ವಿರುದ್ಧ ತಿರುಗಿ ಬಿದ್ದದ್ದರಿಂದ ನಾವೆಲ್ಲರೂ ಕಷ್ಟ ಅನುಭವಿಸುತ್ತಿದ್ದೇವೆ.

14. ಯೆಹೋವನು ಕೆಟ್ಟ ಪರಿಸ್ಥಿತಿಗಳನ್ನು ಏನು ಮಾಡುತ್ತಾನೆ?

14 ಕೆಟ್ಟ ಪರಿಸ್ಥಿತಿಗಳಿಗೆ ಯೆಹೋವನು ಏನು ಮಾಡುತ್ತಾನೆ? ಮುಂದಿನ ವಿಷಯಗಳಿಗೆ ಗಮನಕೊಡಿ. ಯೆಹೋವನು ಯುದ್ಧಗಳೇ ಇಲ್ಲದಂತೆ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದಾನೆ. (ಕೀರ್ತನೆ 46:8, 9 ಓದಿ.) ಕಾಯಿಲೆಯನ್ನು ತೆಗೆದುಹಾಕುತ್ತಾನೆ. (ಯೆಶಾ. 33:24) ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುತ್ತಾನೆ. (ಯೆಶಾ. 25:8) ಬಡತನವನ್ನು ನೀಗಿಸುತ್ತಾನೆ. (ಕೀರ್ತ. 72:12-16) ನಮ್ಮ ಕಷ್ಟ, ದುಃಖ, ಕಣ್ಣೀರಿಗೆ ಕಾರಣವಾಗಿರುವ ಎಲ್ಲಾ ಕೆಟ್ಟ ಪರಿಸ್ಥಿತಿಗಳನ್ನು ಯೆಹೋವನು ಇಲ್ಲವಾಗಿಸುತ್ತಾನೆ. ಜೊತೆಗೆ ಸೈತಾನ ಮತ್ತವನ ದೆವ್ವಗಳ ಕೆಟ್ಟ ಪ್ರಭಾವವನ್ನೂ ತೆಗೆದುಹಾಕುತ್ತಾನೆ!—ಎಫೆ. 2:2.

ಯುದ್ಧ, ಕಾಯಿಲೆ, ಮರಣ ಇಲ್ಲದ ಲೋಕದಲ್ಲಿ ದೊಡ್ಡವರು ಚಿಕ್ಕವರು ಎಲ್ಲರೂ ಜೀವನ ಆನಂದಿಸುತ್ತಿದ್ದಾರೆ

ಯುದ್ಧ, ಕಾಯಿಲೆ, ಮರಣ ಇಲ್ಲದ ಜೀವನ ಎಷ್ಟು ಚೆನ್ನಾಗಿರುತ್ತೆ ಅಲ್ವಾ! (ಪ್ಯಾರ 15 ನೋಡಿ)

15. ಅರ್ಮಗೆದೋನಿನ ನಂತರ ಯಾವ ಪರಿಸ್ಥಿತಿಗಳು ಶಾಶ್ವತವಾಗಿ ಇಲ್ಲದೆ ಹೋಗುತ್ತವೆ?

15 ಯುದ್ಧ, ಕಾಯಿಲೆ ಮತ್ತು ಮರಣ ಇಲ್ಲದ ಜೀವನ ಎಷ್ಟು ಚೆನ್ನಾಗಿರುತ್ತೆ ಅಂತ ಸ್ವಲ್ಪ ಯೋಚಿಸಿ! ಇನ್ನು ಮುಂದೆ ಸೈನ್ಯ, ಆಯುಧ, ಹುತಾತ್ಮ ಯೋಧರ ಸ್ಮಾರಕ ಇದ್ಯಾವುದೂ ಇರಲ್ಲ. ಆಸ್ಪತ್ರೆ, ಡಾಕ್ಟರು, ನರ್ಸು, ಶವಾಗಾರ, ಸಮಾಧಿ ಇವುಗಳ ಅವಶ್ಯಕತೆನೇ ಇರಲ್ಲ. ಗೂಂಡಾಗಿರಿ ಇರುವುದಿಲ್ಲ. ಹಾಗಾಗಿ ನಮಗೆ ಪೊಲೀಸರ ಅಗತ್ಯ ಇರಲ್ಲ. ಅಷ್ಟೇ ಯಾಕೆ ಮನೆಗಳಿಗೆ ಬೀಗ ಹಾಕುವ ಅಗತ್ಯನೂ ಇರಲ್ಲ! ನಮ್ಮ ಚಿಂತೆಗೆ ಕಾರಣವಾಗಿರುವ ಎಲ್ಲಾ ಕೆಟ್ಟ ಪರಿಸ್ಥಿತಿಗಳು ಶಾಶ್ವತವಾಗಿ ಇಲ್ಲದೆ ಹೋಗುತ್ತವೆ.

16, 17. (ಎ) ಅರ್ಮಗೆದೋನಿನ ನಂತರ ನಮ್ಮ ಜೀವನ ಹೇಗಿರುತ್ತದೆ? ಉದಾಹರಣೆ ಕೊಡಿ. (ಬಿ) ಈ ಲೋಕದ ಅಂತ್ಯವನ್ನು ಪಾರಾಗಲು ನಾವೀಗ ಏನು ಮಾಡಬೇಕು?

16 ಕೆಟ್ಟ ಪರಿಸ್ಥಿತಿಗಳು ಹೋದ ಮೇಲೆ ನಮ್ಮ ಜೀವನ ಹೇಗಿರುತ್ತದೆ? ರೈಲು ನಿಲ್ದಾಣದ ಹತ್ತಿರ ವಾಸಿಸುವ ಜನರಿಗೆ ಶಬ್ದ ಕೇಳಿ ಕೇಳಿ ರೂಢಿಯಾಗಿರುತ್ತದೆ. ಹಾಗಾಗಿ ಆ ಶಬ್ದ ಇಲ್ಲದ ಜೀವನ ಹೇಗಿರುತ್ತೆ ಎಂದು ಊಹಿಸಲು ಅವರಿಗೆ ಸ್ವಲ್ಪ ಕಷ್ಟ ಆಗುತ್ತದೆ. ಕಸದ ಕೊಂಪೆ ಹತ್ತಿರ ವಾಸಿಸುವ ಜನರಿಗೆ ಆ ವಾಸನೆ ಇಲ್ಲದ ಜೀವನ ಹೇಗಿರುತ್ತೆ ಎಂದು ಊಹಿಸಲು ಕಷ್ಟ ಆಗುತ್ತದೆ. ಅದೇ ರೀತಿ, ನಾವು ಹುಟ್ಟಿದಾಗಿಂದ ಕೆಟ್ಟ ಪರಿಸ್ಥಿತಿಗಳನ್ನೇ ನೋಡಿರುವುದರಿಂದ ಅದು ಹೋದ ಮೇಲೆ ಜೀವನ ಹೇಗಿರುತ್ತದೆ ಅಂತ ಊಹಿಸುವುದು ಸ್ವಲ್ಪ ಕಷ್ಟಾನೇ. ವಿಷಯ ಏನೇ ಇರಲಿ, ಯೆಹೋವನು ಕೆಟ್ಟ ಪರಿಸ್ಥಿತಿಗಳನ್ನು ತೆಗೆದುಹಾಕುವಾಗ ನಾವೆಲ್ಲರೂ ನೆಮ್ಮದಿಯಿಂದ ಅಬ್ಬಾ! ಅನ್ನುವುದಂತೂ ಖಂಡಿತ.

17 ಚಿಂತೆ ಒತ್ತಡ ಹೋದ ಮೇಲೆ ನಾವು ಹೇಗಿರುತ್ತೇವೆ? ಉತ್ತರ ಕೀರ್ತನೆ 37:11 ರಲ್ಲಿದೆ. “ದೀನರು . . . ಮಹಾಸೌಖ್ಯದಿಂದ ಆನಂದಿಸುವರು.” ಯೆಹೋವನು ನಮಗಾಗಿ ಏನೆಲ್ಲಾ ಮಾಡುತ್ತಾನೆ ಎಂದು ಯೋಚಿಸುವಾಗ ಎಷ್ಟೊಂದು ಖುಷಿ ಆಗುತ್ತಲ್ವಾ! ಈಗಿರುವ ಒತ್ತಡಭರಿತ ಸಮಯದಲ್ಲಿ ಯೆಹೋವನಿಗೆ ಮತ್ತು ಆತನ ಸಂಘಟನೆಗೆ ಇನ್ನಷ್ಟು ಹತ್ತಿರವಾಗೋಣ. ಅತ್ಯಮೂಲ್ಯವಾದ ನಮ್ಮ ಭವಿಷ್ಯದ ನಿರೀಕ್ಷೆಯ ಬಗ್ಗೆ ಯೋಚಿಸುತ್ತಾ ಇರೋಣ. ಅದು ಖಂಡಿತ ಸಿಗುತ್ತದೆ ಎಂಬ ಭರವಸೆ ಬೆಳೆಸಿಕೊಳ್ಳೋಣ. ಅದರ ಬಗ್ಗೆ ಇತರರಿಗೂ ತಿಳಿಸೋಣ. (1 ತಿಮೊ. 4:15, 16; 1 ಪೇತ್ರ 3:15) ಹೀಗೆ ಈ ಲೋಕದ ಅಂತ್ಯವನ್ನು ಪಾರಾಗಿ ಸದಾ ಸಂತೋಷವಾಗಿ ಬಾಳೋಣ!

a ಈ ಪದ್ಧತಿ ಅನೇಕ ವರ್ಷಗಳ ಹಿಂದೆ ಅಮೆರಿಕದ ಕೆಲವು ಕಡೆ ಜೈಲುಗಳಲ್ಲಿ ಸಾಮಾನ್ಯವಾಗಿತ್ತು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ