ನೀವು ಎಲೀಯನಂತೆ ನಂಬಿಗಸ್ತರಾಗಿರುವಿರೊ?
“ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವದಕ್ಕೆ ಮುಂಚೆಯೇ ಪ್ರವಾದಿಯಾದ ಎಲೀಯನನ್ನು ನಿಮ್ಮ ಬಳಿಗೆ ಕಳುಹಿಸುವೆನು.” —ಮಲಾಕಿಯ 4:5.
1. ಇಸ್ರಾಯೇಲ್ ರಾಷ್ಟ್ರವು ವಾಗ್ದತ್ತ ದೇಶದಲ್ಲಿ ಸುಮಾರು 500 ವರ್ಷಗಳ ವರೆಗೆ ಇದ್ದ ಬಳಿಕ, ಯಾವ ಸಂದಿಗ್ಧತೆಯು ಸಂಭವಿಸುತ್ತದೆ?
“ಹಾಲೂ ಜೇನೂ ಹರಿಯುವ . . . ದೇಶ.” (ವಿಮೋಚನಕಾಂಡ 3:7, 8) ಸಾ.ಶ.ಪೂ. 16ನೆಯ ಶತಮಾನದಲ್ಲಿ ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡಿಸಿದ ಮೇಲೆ, ಯೆಹೋವ ದೇವರು ಅವರಿಗೆ ಕೊಟ್ಟದ್ದು ಇದನ್ನೇ. ಆದರೆ ನೋಡಿ! ಐದು ಶತಮಾನಗಳು ಗತಿಸಿಹೋಗಿವೆ, ಮತ್ತು ಈಗ ಇಸ್ರಾಯೇಲ್ನ ಹತ್ತು-ಕುಲ ರಾಜ್ಯವು ಉಗ್ರವಾದ ಕ್ಷಾಮದ ಹಿಡಿತದಲ್ಲಿದೆ. ಹಸುರು ಹುಲ್ಲನ್ನು ಕಂಡುಕೊಳ್ಳುವುದು ಕಷ್ಟಕರವಾಗಿದೆ. ಪ್ರಾಣಿಗಳು ಅಸುನೀಗುತ್ತಿವೆ, ಮತ್ತು ಮೂರೂವರೆ ವರ್ಷಗಳ ವರೆಗೆ ಮಳೆಯೇ ಬಿದ್ದಿಲ್ಲ. (1 ಅರಸುಗಳು 18:5; ಲೂಕ 4:25) ಈ ವಿಪತ್ತಿಗೆ ಯಾವುದು ಹೊಣೆಯಾಗಿದೆ?
2. ಇಸ್ರಾಯೇಲಿನ ರಾಷ್ಟ್ರೀಯ ಸಂದಿಗ್ಧತೆಗೆ ಯಾವುದು ಕಾರಣವಾಗಿದೆ?
2 ಈ ಸಂದಿಗ್ಧ ಸಮಯಕ್ಕೆ ಧರ್ಮಭ್ರಷ್ಟತೆಯು ಕಾರಣವಾಗಿದೆ. ದೇವರ ನಿಯಮವನ್ನು ಉಲ್ಲಂಘಿಸುತ್ತಾ, ರಾಜ ಅಹಾಬನು ಕಾನಾನ್ಯ ರಾಜಕುಮಾರಿಯಾದ ಈಜೆಬೆಲಳನ್ನು ವಿವಾಹವಾಗಿ, ಅವಳು ಇಸ್ರಾಯೇಲ್ನಲ್ಲಿ ಬಾಳನ ಆರಾಧನೆಯನ್ನು ಪರಿಚಯಿಸುವಂತೆ ಅನುಮತಿಸಿದ್ದಾನೆ. ಇನ್ನೂ ಕೆಟ್ಟದ್ದಾದ ಸಂಗತಿಯೇನೆಂದರೆ, ಈ ಸುಳ್ಳು ದೇವರಿಗಾಗಿ ಅವನು ರಾಜಧಾನಿ ನಗರವಾದ ಸಮಾರ್ಯದಲ್ಲಿ ಒಂದು ಆಲಯವನ್ನು ಕಟ್ಟಿಸಿದ್ದಾನೆ. ಅಷ್ಟೇಕೆ, ಬಾಳನ ಆರಾಧನೆಯು ತಮಗೆ ಸಮೃದ್ಧವಾದ ಬೆಳೆಯನ್ನು ತರುವುದೆಂದು ನಂಬುವಂತೆ ಇಸ್ರಾಯೇಲ್ಯರು ಸೆಳೆಯಲ್ಪಟ್ಟಿದ್ದಾರೆ! ಆದರೆ, ಯೆಹೋವನು ಎಚ್ಚರಿಸಿರುವಂತೆ, ಈಗ ಅವರು ‘ತಮ್ಮ ಉತ್ತಮದೇಶದಿಂದ ನಾಶವಾಗಿ ಹೋಗುವ’ ಅಪಾಯದಲ್ಲಿದ್ದಾರೆ.—ಧರ್ಮೋಪದೇಶಕಾಂಡ 7:3, 4; 11:16, 17; 1 ಅರಸುಗಳು 16:30-33.
ದೇವತ್ವದ ಒಂದು ಮನಮುಟ್ಟುವ ಪರೀಕ್ಷೆ
3. ಇಸ್ರಾಯೇಲಿನ ನಿಜವಾದ ಸಮಸ್ಯೆಯ ಮೇಲೆ ಪ್ರವಾದಿಯಾದ ಎಲೀಯನು ಹೇಗೆ ಗಮನವನ್ನು ಕೇಂದ್ರೀಕರಿಸುತ್ತಾನೆ?
3 ಕ್ಷಾಮವು ಆರಂಭವಾಗುವಾಗ, ದೇವರ ನಂಬಿಗಸ್ತ ಪ್ರವಾದಿಯಾದ ಎಲೀಯನು ರಾಜ ಅಹಾಬನಿಗೆ ಹೇಳುವುದು: “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ದೇವರಾದ ಯೆಹೋವನಾಣೆ, ನಾನು ಸೂಚಿಸಿದ ಹೊರತು ಇಂದಿನಿಂದ ಕೆಲವು ವರುಷಗಳ ವರೆಗೆ ಮಳೆಯಾಗಲಿ ಮಂಜಾಗಲಿ ಬೀಳುವದಿಲ್ಲ.” (1 ಅರಸುಗಳು 17:1) ಈ ಪ್ರಕಟನೆಯ ಭಯಂಕರ ನೆರವೇರಿಕೆಯನ್ನು ಅನುಭವಿಸಿದ ಬಳಿಕ, ಇಸ್ರಾಯೇಲ್ನ ಮೇಲೆ ಆಪತ್ತನ್ನು ತಂದುದಕ್ಕಾಗಿ ರಾಜನು ಎಲೀಯನ ಮೇಲೆ ಆರೋಪ ಹೊರಿಸುತ್ತಾನೆ. ಆದರೆ, ಬಾಳನ ಆರಾಧಕರೋಪಾದಿ ಅವರ ಧರ್ಮಭ್ರಷ್ಟತೆಯ ಕಾರಣ, ಅಹಾಬನೂ ಅವನ ಮನೆಯವರೂ ದೋಷಾರ್ಹರೆಂದು ಎಲೀಯನು ಉತ್ತರಿಸುತ್ತಾನೆ. ಈ ವಿವಾದವನ್ನು ಇತ್ಯರ್ಥಮಾಡಲು, ಬಾಳನ 450 ಪ್ರವಾದಿಗಳು ಮತ್ತು ಪವಿತ್ರ ಸ್ತಂಭದ 400 ಪ್ರವಾದಿಗಳೊಂದಿಗೆ, ಎಲ್ಲ ಇಸ್ರಾಯೇಲನ್ನು ಕಾರ್ಮೆಲ್ ಬೆಟ್ಟದಡಿ ಒಟ್ಟುಗೂಡಿಸುವಂತೆ ಯೆಹೋವನ ಪ್ರವಾದಿಯು ರಾಜ ಅಹಾಬನನ್ನು ಪ್ರೇರಿಸುತ್ತಾನೆ. ಈ ಸಂದರ್ಭವು ಬಹುಶಃ ಬರಗಾಲಕ್ಕೆ ಒಂದು ಅಂತ್ಯವನ್ನು ತರುವುದೆಂದು ಹಾರೈಸುತ್ತಾ, ಅಹಾಬನೂ ಅವನ ಪ್ರಜೆಗಳೂ ಅಲ್ಲಿ ಒಟ್ಟುಗೂಡುತ್ತಾರೆ. ಆದರೆ ಎಲೀಯನು ಹೆಚ್ಚು ಗಂಭೀರವಾದ ವಿವಾದಾಂಶದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾನೆ. ಅವನು ಕೇಳುವುದು, “ನೀವು ಎಷ್ಟರ ವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ.” ಏನು ಹೇಳಬೇಕೆಂದು ಇಸ್ರಾಯೇಲ್ಯರಿಗೆ ತೋಚುವುದಿಲ್ಲ.—1 ಅರಸುಗಳು 18:18-21.
4. ದೇವತ್ವದ ವಿವಾದವನ್ನು ಇತ್ಯರ್ಥಮಾಡಲು, ಎಲೀಯನು ಯಾವ ಪ್ರಸ್ತಾಪ ಮಾಡುತ್ತಾನೆ?
4 ಅನೇಕ ವರ್ಷಗಳಿಂದ ಇಸ್ರಾಯೇಲ್ಯರು ಯೆಹೋವನ ಆರಾಧನೆಯನ್ನು ಬಾಳನ ಆರಾಧನೆಯೊಂದಿಗೆ ಸೇರಿಸಲು ಪ್ರಯತ್ನಿಸಿದ್ದಾರೆ. ದೇವತ್ವದ ವಿವಾದವನ್ನು ಇತ್ಯರ್ಥಮಾಡಲು, ಎಲೀಯನು ಈಗ ಒಂದು ಸ್ಪರ್ಧೆಯ ಪ್ರಸ್ತಾಪ ಮಾಡುತ್ತಾನೆ. ಯಜ್ಞಕ್ಕಾಗಿ ಅವನೊಂದು ಎಳೆಯ ಹೋರಿಯನ್ನು ತಯಾರುಮಾಡುವನು, ಮತ್ತು ಇನ್ನೊಂದು ಬಾಳನ ಪ್ರವಾದಿಗಳಿಂದ ತಯಾರಿಸಲ್ಪಡುವುದು. ಅನಂತರ ಎಲೀಯನು ಹೇಳುವುದು: “ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ; ಅನಂತರ ನಾನು ಯೆಹೋವನ ಹೆಸರು ಹೇಳಿ ಪ್ರಾರ್ಥಿಸುವೆನು. ಆ ಇಬ್ಬರಲ್ಲಿ ಯಾವನು ಲಾಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ ದೇವರೆಂದು ನಿಶ್ಚಯಿಸೋಣ.” (1 ಅರಸುಗಳು 18:23, 24) ಒಂದು ಪ್ರಾರ್ಥನೆಗೆ ಉತ್ತರವಾಗಿ, ಸ್ವರ್ಗದಿಂದ ಬೆಂಕಿ ಬರುವುದನ್ನು ಊಹಿಸಿಕೊಳ್ಳಿರಿ!
5. ಬಾಳನ ಆರಾಧನೆಯ ನಿರುಪಯುಕ್ತತೆಯು ಹೇಗೆ ಬಯಲುಗೊಳಿಸಲ್ಪಡುತ್ತದೆ?
5 ಆರಂಭಿಸುವಂತೆ ಎಲೀಯನು ಬಾಳನ ಪ್ರವಾದಿಗಳಿಗೆ ಆಹ್ವಾನ ನೀಡುತ್ತಾನೆ. ಯಜ್ಞಕ್ಕಾಗಿ ಅವರೊಂದು ಹೋರಿಯನ್ನು ತಯಾರುಮಾಡಿ, ಅದನ್ನು ವೇದಿಯ ಮೇಲೆ ಇಡುತ್ತಾರೆ. ಅವರು ವೇದಿಯ ಸುತ್ತಲೂ ಕುಣಿದಾಡುತ್ತಾ, “ಬಾಳನೇ, ನಮಗೆ ಕಿವಿಗೊಡು” ಎಂದು ಪ್ರಾರ್ಥಿಸುತ್ತಾರೆ. ಇದು “ಹೊತ್ತಾರೆಯಿಂದ ಮಧ್ಯಾಹ್ನದ ವರೆಗೆ” ಮುಂದುವರಿಯುತ್ತದೆ. “ಗಟ್ಟಿಯಾಗಿ ಕೂಗಿರಿ” ಎಂದು ಎಲೀಯನು ಪರಿಹಾಸ್ಯಮಾಡುತ್ತಾನೆ. ಬಾಳನು ಯಾವುದೊ ತುರ್ತು ಕೆಲಸದಲ್ಲಿ ಮಗ್ನನಾಗಿರಬೇಕು, ಇಲ್ಲವೆ “ನಿದ್ರೆಮಾಡುತ್ತಿದ್ದಾನು, ಎಚ್ಚರವಾಗಬೇಕು.” ಬೇಗನೆ ಬಾಳನ ಪ್ರವಾದಿಗಳು ಭ್ರಮಾವೇಶಕ್ಕೊಳಗಾಗುತ್ತಾರೆ. ನೋಡಿ! ಈಟಿಕತ್ತಿಗಳಿಂದ ಅವರು ತಮ್ಮನ್ನು ಇರಿದುಕೊಳ್ಳುತ್ತಿದ್ದಾರೆ, ಮತ್ತು ಅವರ ಗಾಯಗಳಿಂದ ರಕ್ತವು ಹರಿಯುತ್ತಿದೆ. ಮತ್ತು ಎಲ್ಲ 450 ಪ್ರವಾದಿಗಳು ಗಟ್ಟಿಯಾಗಿ ಕೂಗುವುದರಿಂದ, ಎಂತಹ ಕೋಲಾಹಲ ಅಲ್ಲಿದೆ! ಆದರೆ ಯಾವ ಉತ್ತರವೂ ಇಲ್ಲ.—1 ಅರಸುಗಳು 18:26-29.
6. ದೇವತ್ವದ ಪರೀಕ್ಷೆಗಾಗಿ ಎಲೀಯನು ಯಾವ ಸಿದ್ಧತೆಯನ್ನು ಮಾಡುತ್ತಾನೆ?
6 ಈಗ ಎಲೀಯನ ಸರದಿಯು ಬರುತ್ತದೆ. ಅವನು ಯೆಹೋವನ ವೇದಿಯನ್ನು ಪುನಃ ಕಟ್ಟುತ್ತಾನೆ, ಅದರ ಸುತ್ತಲೂ ಒಂದು ಕಾಲುವೆಯನ್ನು ಮಾಡುತ್ತಾನೆ, ಮತ್ತು ಯಜ್ಞವನ್ನು ಕ್ರಮವಾಗಿ ಇಡುತ್ತಾನೆ. ಆಮೇಲೆ ಕಟ್ಟಿಗೆ ಹಾಗೂ ಯಜ್ಞದ ಮೇಲೆ ಅವನು ನೀರು ಸುರಿಸಿದನು. ಕಾಲುವೆಯು ತುಂಬುವ ತನಕ ವೇದಿಯ ಮೇಲೆ ಹನ್ನೆರಡು ದೊಡ್ಡ ಕೊಡಗಳಷ್ಟು ನೀರು ಸುರಿಸಲ್ಪಡುತ್ತದೆ. ಎಲೀಯನು ಹೀಗೆ ಪ್ರಾರ್ಥಿಸಿದಂತೆ ಅಲ್ಲಿದ್ದ ಸಂದಿಗ್ಧ ಸ್ಥಿತಿಯನ್ನು ಊಹಿಸಿಕೊಳ್ಳಿರಿ: “ಅಬ್ರಹಾಮ್ ಇಸಾಕ್ ಇಸ್ರಾಯೇಲ್ಯರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲ್ಯರ ದೇವರಾಗಿರುತ್ತೀ ಎಂಬದನ್ನೂ ನಾನು ನಿನ್ನ ಸೇವಕನಾಗಿರುತ್ತೇನೆಂಬದನ್ನೂ ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬದನ್ನೂ ಈಹೊತ್ತು ತೋರಿಸಿಕೊಡು; ಕಿವಿಗೊಡು; ಯೆಹೋವನೇ, ಕಿವಿಗೊಡು; ಯೆಹೋವನಾದ ನೀನೊಬ್ಬನೇ ದೇವರೂ ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ಆಗಿರುತ್ತೀ ಎಂಬದನ್ನು ಇವರಿಗೆ ತಿಳಿಯಪಡಿಸು.”—1 ಅರಸುಗಳು 18:30-37.
7, 8. (ಎ) ಯೆಹೋವನು ಎಲೀಯನ ಪ್ರಾರ್ಥನೆಗೆ ಹೇಗೆ ಉತ್ತರಿಸುತ್ತಾನೆ? (ಬಿ) ಕಾರ್ಮೆಲ್ ಬೆಟ್ಟದ ಮೇಲೆ ನಡೆದ ಘಟನೆಗಳಿಂದ ಏನು ಸಾಧಿಸಲ್ಪಡುತ್ತದೆ?
7 ಎಲೀಯನ ಪ್ರಾರ್ಥನೆಗೆ ಉತ್ತರವಾಗಿ, ‘ಯೆಹೋವನ ಬೆಂಕಿಯು ಸ್ವರ್ಗದಿಂದ ಬಿದ್ದು, ಯಜ್ಞಮಾಂಸವನ್ನು, ಕಟ್ಟಿಗೆಯನ್ನು, ಕಲ್ಲುಮಣ್ಣುಗಳನ್ನು ದಹಿಸಿ, ಕಾಲುವೆಯಲ್ಲಿದ್ದ ನೀರನ್ನು ಹೀರಿಬಿಡುತ್ತದೆ.’ ಜನರು ಬೋರ್ಲಬಿದ್ದು, ಹೀಗೆ ಹೇಳುತ್ತಾರೆ: “ಯೆಹೋವನೇ ದೇವರು, ಯೆಹೋವನೇ ದೇವರು.” (1 ಅರಸುಗಳು 18:38, 39) ಈಗ ಎಲೀಯನು ನಿರ್ಧಾರಕವಾಗಿ ಕ್ರಿಯೆಕೈಗೊಳ್ಳುತ್ತಾನೆ. ಅವನು ಆಜ್ಞಾಪಿಸುವುದು: “ಬಾಳನ ಪ್ರವಾದಿಗಳೆಲ್ಲರನ್ನೂ ಹಿಡಿಯಿರಿ; ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು.” ಕೀಷೋನ್ ಕಣಿವೆಯಲ್ಲಿ ಅವರನ್ನು ಸಂಹರಿಸಿದ ಮೇಲೆ, ಕಾರ್ಮೋಡಗಳು ಆಕಾಶವನ್ನು ತುಂಬಿಕೊಳ್ಳುತ್ತವೆ. ಕಟ್ಟಕಡೆಗೆ, ಭಾರೀ ಮಳೆಯು ಬರಗಾಲಕ್ಕೆ ಒಂದು ಅಂತ್ಯವನ್ನು ತರುತ್ತದೆ!—1 ಅರಸುಗಳು 18:40-45; ಹೋಲಿಸಿ ಧರ್ಮೋಪದೇಶಕಾಂಡ 13:1-5.
8 ಎಂತಹ ಮಹಾ ದಿನ! ದೇವತ್ವದ ಈ ಗಮನಾರ್ಹವಾದ ಪರೀಕ್ಷೆಯಲ್ಲಿ ಯೆಹೋವನು ವಿಜಯಿಯಾಗಿದ್ದಾನೆ. ಅಲ್ಲದೆ, ಈ ಘಟನೆಗಳು ಅನೇಕ ಇಸ್ರಾಯೇಲ್ಯರ ಹೃದಯಗಳನ್ನು ಪುನಃ ದೇವರ ಕಡೆಗೆ ತಿರುಗಿಸುತ್ತವೆ. ಈ ವಿಧದಲ್ಲಿ ಮತ್ತು ಇತರ ವಿಧಗಳಲ್ಲಿ ಎಲೀಯನು ಒಬ್ಬ ಪ್ರವಾದಿಯಂತೆ ನಂಬಿಗಸ್ತನಾಗಿ ರುಜುವಾಗುತ್ತಾನೆ, ಮತ್ತು ಅವನು ವೈಯಕ್ತಿಕವಾಗಿ ಒಂದು ಪ್ರವಾದನಾತ್ಮಕ ಪಾತ್ರವನ್ನು ವಹಿಸುತ್ತಾನೆ.
‘ಪ್ರವಾದಿಯಾದ ಎಲೀಯನು’ ಇನ್ನೂ ಬರಲಿದ್ದಾನೊ?
9. ಮಲಾಕಿಯ 4:5, 6ರಲ್ಲಿ ಯಾವ ವಿಷಯವು ಪ್ರವಾದಿಸಲ್ಪಟ್ಟಿತು?
9 ತದನಂತರ, ಮಲಾಕಿಯನ ಮುಖಾಂತರ ದೇವರು ಮುಂತಿಳಿಸಿದ್ದು: “ನಾನು ಬಂದು ದೇಶವನ್ನು ಶಾಪದಿಂದ ಹತಮಾಡದಂತೆ ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವದಕ್ಕೆ ಮುಂಚೆಯೇ ಪ್ರವಾದಿಯಾದ ಎಲೀಯನನ್ನು ನಿಮ್ಮ ಬಳಿಗೆ ಕಳುಹಿಸುವೆನು; ಅವನು ತಂದೆಗಳ ಮನಸ್ಸನ್ನು ಮಕ್ಕಳ ಕಡೆಗೂ ಮಕ್ಕಳ ಮನಸ್ಸನ್ನು ತಂದೆಗಳ ಕಡೆಗೂ ತಿರುಗಿಸುವನು.” (ಮಲಾಕಿ 4:5, 6) ಆ ಮಾತುಗಳು ನುಡಿಯಲ್ಪಡುವುದಕ್ಕೆ ಸುಮಾರು 500 ವರ್ಷಗಳ ಮುಂಚೆಯೇ ಎಲೀಯನು ಬದುಕಿದ್ದನು. ಇದೊಂದು ಪ್ರವಾದನೆಯಾಗಿದ್ದ ಕಾರಣ, ಸಾ.ಶ. ಒಂದನೆಯ ಶತಮಾನದ ಯೆಹೂದ್ಯರು, ಅದನ್ನು ನೆರವೇರಿಸಲು ಎಲೀಯನ ಬರೋಣದ ನಿರೀಕ್ಷೆಯಲ್ಲಿದ್ದರು.—ಮತ್ತಾಯ 17:10.
10. ಮುಂತಿಳಿಸಲ್ಪಟ್ಟ ಎಲೀಯನು ಯಾರಾಗಿದ್ದನು, ಮತ್ತು ನಮಗೆ ಹೇಗೆ ಗೊತ್ತು?
10 ಹಾಗಾದರೆ, ಬರಲಿದ್ದ ಈ ಎಲೀಯನು ಯಾರಾಗಿದ್ದನು? ಯೇಸು ಕ್ರಿಸ್ತನು ಹೀಗೆ ಹೇಳಿದಾಗ, ಅವನ ಗುರುತು ಪ್ರಕಟವಾಯಿತು: “ಇದಲ್ಲದೆ ಸ್ನಾನಿಕನಾದ ಯೋಹಾನನ ಕಾಲದಿಂದ ಈ ವರೆಗೂ ಪರಲೋಕರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿರುತ್ತದೆ; ಬಲಾತ್ಕಾರಿಗಳು ನುಗ್ಗಿ ಅದನ್ನು ಸ್ವಾಧೀನಮಾಡಿಕೊಳ್ಳುತ್ತಾರೆ. ಪ್ರವಾದಿಗಳೆಲ್ಲರೂ ಧರ್ಮಶಾಸ್ತ್ರವೂ ಪ್ರವಾದಿಸುವದು ಯೋಹಾನನ ತನಕ ಇತ್ತು. ನಿಮಗೆ ಗ್ರಹಿಸುವದಕ್ಕೆ ಮನಸ್ಸಿದ್ದರೆ ಬರತಕ್ಕ ಎಲೀಯನು ಇವನೇ ಎಂದು ತಿಳುಕೊಳ್ಳಿರಿ.” ಹೌದು, ಸ್ನಾನಿಕನಾದ ಯೋಹಾನನು, ಎಲೀಯನ ಮುಂತಿಳಿಸಲ್ಪಟ್ಟ ಪ್ರತಿರೂಪವಾಗಿದ್ದನು. (ಮತ್ತಾಯ 11:12-14; ಮಾರ್ಕ 9:11-13) ಯೋಹಾನನಲ್ಲಿ “ಎಲೀಯನ ಗುಣಶಕ್ತಿ”ಗಳಿದ್ದು, ಅವನು “ಸಿದ್ಧವಾದ ಜನವನ್ನು ಕರ್ತ [“ಯೆಹೋವ,” NW]ನಿಗೆ ಒದಗಿಸುವನು” ಎಂದು, ದೇವದೂತನೊಬ್ಬನು ಯೋಹಾನನ ತಂದೆಯಾದ ಜಕರೀಯನಿಗೆ ಹೇಳಿದ್ದನು. (ಲೂಕ 1:16, 17) ಯೋಹಾನನು ಮಾಡಿಸಿದ ದೀಕ್ಷಾಸ್ನಾನವು, ಧರ್ಮಶಾಸ್ತ್ರದ—ಅದು ಯೆಹೂದ್ಯರನ್ನು ಕ್ರಿಸ್ತನ ಕಡೆಗೆ ನಡೆಸಲಿತ್ತು—ವಿರುದ್ಧವಾಗಿ ಒಬ್ಬ ವ್ಯಕ್ತಿಯು ಮಾಡಿದ ಪಾಪಗಳಿಗೆ ಅವನ ಪಶ್ಚಾತ್ತಾಪದ ಬಹಿರಂಗ ಸಂಕೇತವಾಗಿತ್ತು. (ಲೂಕ 3:3-6; ಗಲಾತ್ಯ 3:24) ಹೀಗೆ ಯೋಹಾನನ ಕೆಲಸವು, ‘ಯೆಹೋವನಿಗಾಗಿ ಒಂದು ಸಿದ್ಧವಾದ ಜನವನ್ನು ತಯಾರುಮಾಡಿತು.’
11. ಪಂಚಾಶತ್ತಮದಂದು, “ಯೆಹೋವನ ದಿನ”ದ ಬಗ್ಗೆ ಪೇತ್ರನು ಏನು ಹೇಳಿದನು, ಮತ್ತು ಅದು ಯಾವಾಗ ಸಂಭವಿಸಿತು?
11 “ಎಲೀಯ”ನಂತೆ ಸ್ನಾನಿಕನಾದ ಯೋಹಾನನ ಕೆಲಸವು, “ಯೆಹೋವನ ದಿನವು” ನಿಕಟವಾಗಿತ್ತೆಂಬುದನ್ನು ತೋರಿಸಿತು. ದೇವರು ತನ್ನ ವೈರಿಗಳ ವಿರುದ್ಧ ಕ್ರಿಯೆಗೈದು, ತನ್ನ ಜನರನ್ನು ಸಂರಕ್ಷಿಸುವ ಆ ದಿನದ ನಿಕಟತೆಯು, ಅಪೊಸ್ತಲ ಪೇತ್ರನಿಂದಲೂ ಸೂಚಿಸಲ್ಪಟ್ಟಿತು. ಸಾ.ಶ. 33ರ ಪಂಚಾಶತ್ತಮದಂದು ಸಂಭವಿಸಿದ ಅದ್ಭುತಕರ ಘಟನೆಗಳು, ದೇವರಾತ್ಮದ ಸುರಿಸುವಿಕೆಯ ಕುರಿತಾದ ಯೋವೇಲನ ಪ್ರವಾದನೆಯ ನೆರವೇರಿಕೆಯಾಗಿದ್ದವೆಂದು ಅವನು ಸೂಚಿಸಿದನು. ಇದು, “ಯೆಹೋವನ ಆಗಮನದ ಭಯಂಕರವಾದ ಮಹಾದಿನ”ಕ್ಕೆ ಮುಂಚೆ ಸಂಭವಿಸಲಿತ್ತೆಂದು ಪೇತ್ರನು ತೋರಿಸಿದನು. (ಅ. ಕೃತ್ಯಗಳು 2:16-21; ಯೋವೇಲ 2:28-32) ಆಗ, ತನ್ನ ಮಗನನ್ನು ತಿರಸ್ಕರಿಸಿದ ರಾಷ್ಟ್ರದ ಮೇಲೆ ದೈವಿಕ ನ್ಯಾಯತೀರ್ಪನ್ನು ಜಾರಿಗೊಳಿಸಲು ರೋಮನ್ ಸೇನೆಗಳನ್ನು ಪ್ರಚೋದಿಸುವ ಮೂಲಕ, ಯೆಹೋವನು ತನ್ನ ಮಾತನ್ನು ಸಾ.ಶ. 70ರಲ್ಲಿ ನೆರವೇರಿಸಿದನು.—ದಾನಿಯೇಲ 9:24-27; ಯೋಹಾನ 19:15.
12. (ಎ) ಬರಲಿರುವ “ಯೆಹೋವನ ದಿನ”ದ ಬಗ್ಗೆ ಪೌಲ ಮತ್ತು ಪೇತ್ರರು ಏನು ಹೇಳಿದರು? (ಬಿ) ಎಲೀಯನ ಕೆಲಸದಿಂದ ಪ್ರತಿನಿಧಿಸಲ್ಪಟ್ಟಂತೆ, ಯಾವುದೋ ವಿಷಯವು ಖಂಡಿತವಾಗಿ ಸಂಭವಿಸಲಿತ್ತು ಏಕೆ?
12 ಆದರೂ, ಸಾ.ಶ. 70ರ ತರುವಾಯ ಇನ್ನೇನೊ ಸಂಭವಿಸಲಿಕ್ಕಿತ್ತು. ಅಪೊಸ್ತಲ ಪೌಲನು, ಬರಲಿರುವ “ಯೆಹೋವನ ದಿನ”ವನ್ನು ಯೇಸು ಕ್ರಿಸ್ತನ ಸಾನ್ನಿಧ್ಯದೊಂದಿಗೆ ಸಂಬಂಧಿಸಿದನು. ಇದಲ್ಲದೆ ಅಪೊಸ್ತಲ ಪೇತ್ರನು, ಇನ್ನೂ ಭವಿಷ್ಯತ್ತಿನ ವಿಷಯಗಳಾಗಿದ್ದ “ನೂತನಾಕಾಶಮಂಡಲ ನೂತನಭೂಮಂಡಲ”ಗಳ ಸಂಬಂಧದಲ್ಲಿ ಆ ದಿನದ ಕುರಿತಾಗಿ ಮಾತಾಡಿದನು. (2 ಥೆಸಲೊನೀಕ 2:1, 2; 2 ಪೇತ್ರ 3:10-13) ಸಾ.ಶ. 70ರಲ್ಲಿ “ಯೆಹೋವನ ದಿನ”ವು ಬರುವುದಕ್ಕೆ ಮುಂಚೆ, ಸ್ನಾನಿಕನಾದ ಯೋಹಾನನು ಎಲೀಯನಂತಹ ಒಂದು ಕೆಲಸವನ್ನು ಮಾಡಿದನೆಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಒಟ್ಟಾಗಿ ಪರಿಗಣಿಸಲ್ಪಟ್ಟ ಇದೆಲ್ಲವೂ, ಎಲೀಯನು ಮಾಡಿದ್ದ ಕೆಲಸದಿಂದ ಪ್ರತಿನಿಧಿಸಲ್ಪಟ್ಟಂತೆ, ಹೆಚ್ಚಿನದ್ದೇನೊ ಸಂಭವಿಸಲಿಕ್ಕಿತ್ತು ಎಂಬುದನ್ನು ಸೂಚಿಸಿತು. ಅದು ಏನಾಗಿದೆ?
ಅವರಲ್ಲಿ ಎಲೀಯನ ಮನೋಭಾವವಿದೆ
13, 14. (ಎ) ಎಲೀಯನ ಮತ್ತು ಪ್ರಚಲಿತ ದಿನದ ಅಭಿಷಿಕ್ತ ಕ್ರೈಸ್ತರ ಚಟುವಟಿಕೆಗಳ ನಡುವೆ ಯಾವ ಸಮಾಂತರವಿದೆ? (ಬಿ) ಕ್ರೈಸ್ತಪ್ರಪಂಚದ ಧರ್ಮಭ್ರಷ್ಟರು ಏನು ಮಾಡಿದ್ದಾರೆ?
13 ಎಲೀಯನ ಕೆಲಸಕ್ಕೆ ಸ್ನಾನಿಕನಾದ ಯೋಹಾನನ ಚಟುವಟಿಕೆಗಳಲ್ಲಿ ಸಮಾಂತರವಿತ್ತು ಮಾತ್ರವಲ್ಲ, ಬರಲಿರುವ “ಯೆಹೋವನ ದಿನ”ಕ್ಕೆ ನಡೆಸುವ ಈ ಕಠಿನ ಕಾಲಾವಧಿಯಲ್ಲಿರುವ ಅಭಿಷಿಕ್ತ ಕ್ರೈಸ್ತರ ಚಟುವಟಿಕೆಗಳಲ್ಲಿಯೂ ಒಂದು ಸಮಾಂತರವಿದೆ. (2 ತಿಮೊಥೆಯ 3:1-5) ಎಲೀಯನ ಮನೋಭಾವ ಮತ್ತು ಬಲದೊಂದಿಗೆ, ಅವರು ಸತ್ಯಾರಾಧನೆಯ ನಿಷ್ಠಾವಂತ ಬೆಂಬಲಿಗರಾಗಿದ್ದಾರೆ. ಮತ್ತು ಇದು ಎಷ್ಟೊಂದು ಅನಿವಾರ್ಯವಾಗಿ ಪರಿಣಮಿಸಿದೆ! ಕ್ರಿಸ್ತನ ಅಪೊಸ್ತಲರ ಮರಣದ ತರುವಾಯ, ಎಲೀಯನ ದಿನದ ಇಸ್ರಾಯೇಲ್ನಲ್ಲಿ ಬಾಳನ ಆರಾಧನೆಯು ಅಭಿವೃದ್ಧಿಗೊಂಡಂತೆಯೇ ಸತ್ಯ ಕ್ರೈಸ್ತತ್ವದಲ್ಲಿ ಧರ್ಮಭ್ರಷ್ಟತೆಯು ಉಂಟಾಯಿತು. (2 ಪೇತ್ರ 2:1) ನಾಮಮಾತ್ರದ ಕ್ರೈಸ್ತರು ಕ್ರೈಸ್ತತ್ವವನ್ನು ಸುಳ್ಳು ಧಾರ್ಮಿಕ ತತ್ವಗಳು ಹಾಗೂ ಆಚರಣೆಗಳೊಂದಿಗೆ ಮಿಶ್ರಗೊಳಿಸತೊಡಗಿದರು. ಉದಾಹರಣೆಗೆ, ಮನುಷ್ಯನಲ್ಲಿ ಒಂದು ಅಮರ ಆತ್ಮವಿದೆಯೆಂಬ ವಿಧರ್ಮಿ ಹಾಗೂ ಅಶಾಸ್ತ್ರೀಯ ಬೋಧನೆಯನ್ನು ಅವರು ಅಂಗೀಕರಿಸಿದರು. (ಪ್ರಸಂಗಿ 9:5, 10; ಯೆಹೆಜ್ಕೇಲ 18:4) ಕ್ರೈಸ್ತಪ್ರಪಂಚದ ಧರ್ಮಭ್ರಷ್ಟರು ಏಕೈಕ ಸತ್ಯ ದೇವರಾದ ಯೆಹೋವನ ನಾಮವನ್ನು ಉಪಯೋಗಿಸುವುದನ್ನು ನಿಲ್ಲಿಸಿದ್ದಾರೆ. ಬದಲಿಗೆ, ಅವರು ತ್ರಯೈಕ್ಯವನ್ನು ಆರಾಧಿಸುತ್ತಿದ್ದಾರೆ. ಅವರು, ಯೇಸು ಮತ್ತು ಅವನ ತಾಯಿಯಾದ ಮರಿಯಳ ವಿಗ್ರಹಗಳಿಗೆ ತಲೆಬಾಗುವ, ಬಾಳನಂತಹ ಆಚರಣೆಯನ್ನೂ ಅಂಗೀಕರಿಸಿದ್ದಾರೆ. (ರೋಮಾಪುರ 1:23; 1 ಯೋಹಾನ 5:21) ಆದರೆ, ವಿಷಯವು ಅಷ್ಟೇ ಆಗಿರುವುದಿಲ್ಲ.
14 ಹತ್ತೊಂಬತ್ತನೆಯ ಶತಮಾನದಿಂದ, ಕ್ರೈಸ್ತಪ್ರಪಂಚದ ಚರ್ಚುಗಳ ನಾಯಕರು, ಬೈಬಲಿನ ಅನೇಕ ಭಾಗಗಳ ಕುರಿತು ಸಂದೇಹವನ್ನು ವ್ಯಕ್ತಪಡಿಸತೊಡಗಿದರು. ದೃಷ್ಟಾಂತಕ್ಕೆ, ಸೃಷ್ಟಿಯ ಕುರಿತಾದ ಆದಿಕಾಂಡದ ವೃತ್ತಾಂತವನ್ನು ಅವರು ನಿರಾಕರಿಸಿ, ವಿಕಾಸವಾದವನ್ನು “ವೈಜ್ಞಾನಿಕ”ವೆಂದು ಹೆಸರಿಸುತ್ತಾ, ಅದಕ್ಕೆ ತಲೆಬಾಗಿದರು. ಇದು ನೇರವಾಗಿ ಯೇಸು ಕ್ರಿಸ್ತನ ಮತ್ತು ಅವನ ಅಪೊಸ್ತಲರ ಬೋಧನೆಗಳಿಗೆ ವಿರುದ್ಧವಾಗಿತ್ತು. (ಮತ್ತಾಯ 19:4, 5; 1 ಕೊರಿಂಥ 15:47) ಆದರೆ, ಯೇಸು ಮತ್ತು ಅವನ ಆದಿ ಹಿಂಬಾಲಕರಂತೆ, ಇಂದು ಆತ್ಮಾಭಿಷಿಕ್ತ ಕ್ರೈಸ್ತರು ಸೃಷ್ಟಿಯ ಕುರಿತಾದ ಬೈಬಲಿನ ವೃತ್ತಾಂತವನ್ನು ಎತ್ತಿಹಿಡಿಯುತ್ತಾರೆ.—ಆದಿಕಾಂಡ 1:27.
15, 16. ಕ್ರೈಸ್ತಪ್ರಪಂಚಕ್ಕೆ ವೈದೃಶ್ಯದಲ್ಲಿ, ಯಾರು ಆತ್ಮಿಕ ಆಹಾರದ ನಿಯತಕಾಲಿಕ ಸರಬರಾಯಿಗಳಲ್ಲಿ ಆನಂದಿಸಿದ್ದಾರೆ, ಮತ್ತು ಯಾವ ಮಾಧ್ಯಮದ ಮೂಲಕ?
15 ಲೋಕವು “ಅಂತ್ಯ ಕಾಲ”ವನ್ನು ಪ್ರವೇಶಿಸಿದಂತೆ, ಒಂದು ಆತ್ಮಿಕ ಕ್ಷಾಮವು ಕ್ರೈಸ್ತಪ್ರಪಂಚವನ್ನು ಸ್ವಾಧೀನಪಡಿಸಿಕೊಂಡಿತು. (ದಾನಿಯೇಲ 12:4; ಆಮೋಸ 8:11, 12) ಆದರೆ, ತನ್ನ ದಿನದ ಕ್ಷಾಮದ ಸಮಯದಲ್ಲಿ ಎಲೀಯನು ಪೋಷಿಸಲ್ಪಡುವಂತೆ ಯೆಹೋವನು ನೋಡಿಕೊಂಡಂತೆಯೇ, ಅಭಿಷಿಕ್ತ ಕ್ರೈಸ್ತರ ಈ ಚಿಕ್ಕ ಗುಂಪು, “ಹೊತ್ತುಹೊತ್ತಿಗೆ” ದೇವದತ್ತ ಆತ್ಮಿಕ ಆಹಾರದ ನಿಯತಕಾಲಿಕ ಒದಗಿಸುವಿಕೆಗಳಲ್ಲಿ ಆನಂದಿಸಿತು. (ಮತ್ತಾಯ 24:45; 1 ಅರಸುಗಳು 17:6, 13-16) ಒಂದು ಸಮಯದಲ್ಲಿ ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳೆಂದು ಜ್ಞಾತರಾಗಿದ್ದ ದೇವರ ಈ ನಂಬಿಗಸ್ತ ಸೇವಕರು, ತದನಂತರ ಯೆಹೋವನ ಸಾಕ್ಷಿಗಳು ಎಂಬ ಶಾಸ್ತ್ರೀಯ ನಾಮವನ್ನು ಪಡೆದುಕೊಂಡರು.—ಯೆಶಾಯ 43:10.
16 ಎಲೀಯನು, “ನನ್ನ ದೇವರು ಯೆಹೋವನಾಗಿದ್ದಾನೆ” ಎಂಬ ಅರ್ಥಕೊಡುವ ತನ್ನ ಹೆಸರಿಗೆ ಅನುಗುಣವಾಗಿ ಜೀವಿಸಿದನು. ಯೆಹೋವನ ಭೌಮಿಕ ಸೇವಕರ ಅಧಿಕೃತ ಪತ್ರಿಕೆಯೋಪಾದಿ, ಕಾವಲಿನಬುರುಜು ಪತ್ರಿಕೆಯು ಸುಸಂಗತವಾಗಿ ದೇವರ ನಾಮವನ್ನು ಉಪಯೋಗಿಸಿದೆ. ವಾಸ್ತವದಲ್ಲಿ, ಈ ಪತ್ರಿಕೆಗೆ ಅದರ ಬೆಂಬಲಿಗನಾಗಿ ಯೆಹೋವನಿದ್ದನೆಂಬ ಭರವಸೆಯನ್ನು ಅದರ ಎರಡನೆಯ ಸಂಚಿಕೆಯು (ಆಗಸ್ಟ್ 1879) ವ್ಯಕ್ತಪಡಿಸಿತು. ಈ ಪತ್ರಿಕೆ ಮತ್ತು ವಾಚ್ ಟವರ್ ಸೊಸೈಟಿಯ ಇತರ ಪ್ರಕಾಶನಗಳು, ದೇವರ ವಾಕ್ಯವಾದ ಬೈಬಲಿನ ಸತ್ಯತೆಯನ್ನು ಎತ್ತಿಹಿಡಿಯುವಾಗ, ಕ್ರೈಸ್ತಪ್ರಪಂಚ ಹಾಗೂ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಉಳಿದ ಧರ್ಮಗಳ ಅಶಾಸ್ತ್ರೀಯ ಬೋಧನೆಗಳನ್ನು ಬಯಲುಮಾಡುತ್ತವೆ.—2 ತಿಮೊಥೆಯ 3:16, 17; ಪ್ರಕಟನೆ 18:1-5.
ಪರೀಕ್ಷೆಯ ಕೆಳಗೆ ನಂಬಿಗಸ್ತರು
17, 18. ಬಾಳನ ಪ್ರವಾದಿಗಳ ವಧೆಗೆ ಈಜೆಬೆಲಳು ಹೇಗೆ ಪ್ರತಿಕ್ರಿಯಿಸಿದಳು, ಆದರೆ ಎಲೀಯನು ಹೇಗೆ ಸಹಾಯಿಸಲ್ಪಟ್ಟನು?
17 ಈ ಬಯಲುಮಾಡುವಿಕೆಗೆ ವೈದಿಕರು ತೋರಿಸಿದ ಪ್ರತಿಕ್ರಿಯೆಯು, ಎಲೀಯನು ಬಾಳನ ಪ್ರವಾದಿಗಳನ್ನು ಕೊಂದಿದ್ದನೆಂದು ತಿಳಿದುಕೊಂಡ ತರುವಾಯ ಈಜೆಬೆಲಳು ತೋರಿಸಿದ ಪ್ರತಿಕ್ರಿಯೆಗೆ ಸಮಾನವಾಗಿತ್ತು. ಅವಳು, ಯೆಹೋವನ ನಂಬಿಗಸ್ತ ಪ್ರವಾದಿಯನ್ನು ಕೊಲ್ಲಿಸುವ ಪ್ರತಿಜ್ಞೆಮಾಡುತ್ತಾ, ಅವನಿಗೆ ಒಂದು ಸಂದೇಶವನ್ನು ಕಳುಹಿಸಿದಳು. ಇದೊಂದು ಪೊಳ್ಳು ಬೆದರಿಕೆಯಾಗಿರಲಿಲ್ಲ, ಏಕೆಂದರೆ ಈಗಾಗಲೇ ಈಜೆಬೆಲಳು ದೇವರ ಪ್ರವಾದಿಗಳಲ್ಲಿ ಅನೇಕರನ್ನು ಕೊಲ್ಲಿಸಿದ್ದಳು. ಭಯಗ್ರಸ್ತನಾಗಿ ಎಲೀಯನು ಆಗ್ನೇಯ ದಿಕ್ಕಿಗೆ, ಬೇರ್ಷೆಬಕ್ಕೆ ಓಡಿಹೋದನು. ತನ್ನ ಸೇವಕನನ್ನು ಅಲ್ಲಿಯೇ ಬಿಟ್ಟು, ಸಾಯಲಿಕ್ಕಾಗಿ ಪ್ರಾರ್ಥಿಸುತ್ತಾ, ಅರಣ್ಯದೊಳಗೆ ಇನ್ನೂ ದೂರಕ್ಕೆ ಹೋದನು. ಆದರೆ ಯೆಹೋವನು ತನ್ನ ಪ್ರವಾದಿಯನ್ನು ತೊರೆದಿರಲಿಲ್ಲ. ಹೋರೇಬ್ ಪರ್ವತದ ಕಡೆಗಿನ ಆ ದೀರ್ಘ ಪ್ರಯಾಣಕ್ಕಾಗಿ ಎಲೀಯನನ್ನು ತಯಾರುಮಾಡಲು ಒಬ್ಬ ದೇವದೂತನು ಅವನಿಗೆ ಕಾಣಿಸಿಕೊಂಡನು. ಹೀಗೆ ಅವನು 300ಕ್ಕಿಂತಲೂ ಹೆಚ್ಚು ಕಿಲೊಮೀಟರುಗಳಷ್ಟು ದೂರದ ಆ 40 ದಿನದ ಪ್ರಯಾಣಕ್ಕಾಗಿ ಪೋಷಣೆಯನ್ನು ಪಡೆದುಕೊಂಡನು. ಹೋರೇಬ್ನಲ್ಲಿ, ದೊಡ್ಡ ಬಿರುಗಾಳಿ, ಭೂಕಂಪ, ಮತ್ತು ಬೆಂಕಿಯ ಮೂಲಕ ಶಕ್ತಿಯ ಒಂದು ಭಯಂಕರ ಪ್ರದರ್ಶನದ ಬಳಿಕ, ದೇವರು ಅವನೊಂದಿಗೆ ಮಾತಾಡಿದನು. ಯೆಹೋವನು ಈ ಪ್ರದರ್ಶನಗಳಲ್ಲಿ ಇರಲಿಲ್ಲ. ಅವು ಆತನ ಪವಿತ್ರಾತ್ಮ ಇಲ್ಲವೆ ಕಾರ್ಯಕಾರಿ ಶಕ್ತಿಯ ಅಭಿವ್ಯಕ್ತಿಗಳಾಗಿದ್ದವು. ಅನಂತರ ಯೆಹೋವನು ತನ್ನ ಪ್ರವಾದಿಯೊಂದಿಗೆ ಮಾತಾಡಿದನು. ಈ ಅನುಭವವು ಎಲೀಯನನ್ನು ಹೇಗೆ ಬಲಪಡಿಸಿತೆಂಬುದನ್ನು ಊಹಿಸಿಕೊಳ್ಳಿರಿ. (1 ಅರಸುಗಳು 19:1-12) ಎಲೀಯನಂತೆ ನಾವು, ಸತ್ಯಾರಾಧನೆಯ ವೈರಿಗಳಿಂದ ಬೆದರಿಸಲ್ಪಟ್ಟಾಗ, ಕೊಂಚಮಟ್ಟಿಗೆ ಭಯಗ್ರಸ್ತರಾಗುವುದಾದರೆ ಆಗೇನು? ಯೆಹೋವನು ತನ್ನ ಜನರನ್ನು ತೊರೆದುಬಿಡುವುದಿಲ್ಲವೆಂಬುದನ್ನು ಗ್ರಹಿಸುವಂತೆ ಅವನ ಅನುಭವವು ನಮಗೆ ಸಹಾಯ ಮಾಡಬೇಕು.—1 ಸಮುವೇಲ 12:22.
18 ಒಬ್ಬ ಪ್ರವಾದಿಯಂತೆ ಎಲೀಯನಿಗೆ ಇನ್ನೂ ಕೆಲಸಮಾಡಲಿಕ್ಕಿತ್ತು ಎಂಬುದನ್ನು ದೇವರು ಸ್ಪಷ್ಟಪಡಿಸಿದನು. ಅಲ್ಲದೆ, ಇಸ್ರಾಯೇಲ್ನಲ್ಲಿ ಸತ್ಯ ದೇವರ ಏಕೈಕ ಆರಾಧಕನು ತಾನೊಬ್ಬನೇ ಆಗಿದ್ದೇನೆಂದು ಎಲೀಯನು ನೆನಸಿದರೂ, 7,000 ಜನರು ಬಾಳನಿಗೆ ತಲೆಬಾಗಿಸಿರಲಿಲ್ಲವೆಂಬುದನ್ನು ಯೆಹೋವನು ಅವನಿಗೆ ತೋರಿಸಿದನು. ಅನಂತರ ದೇವರು ಎಲೀಯನನ್ನು ಅವನ ನೇಮಕಕ್ಕೆ ತಿರುಗಿ ಕಳುಹಿಸಿದನು. (1 ಅರಸುಗಳು 19:13-18) ಎಲೀಯನಂತೆ, ನಾವು ಸತ್ಯಾರಾಧನೆಯ ವೈರಿಗಳಿಂದ ಬೆನ್ನಟ್ಟಲ್ಪಡಬಹುದು. ಯೇಸು ಮುಂತಿಳಿಸಿದಂತೆ, ನಾವು ತೀಕ್ಷ್ಣವಾದ ಹಿಂಸೆಗೆ ಗುರಿಯಾಗಬಹುದು. (ಯೋಹಾನ 15:17-20) ಕೆಲವೊಮ್ಮೆ ನಾವು ಭಯಪಡಲೂಬಹುದು. ಆದರೂ, ದೈವಿಕ ಆಶ್ವಾಸನೆಗಳನ್ನು ಪಡೆದುಕೊಂಡು, ಅನಂತರ ಯೆಹೋವನ ಸೇವೆಯಲ್ಲಿ ನಂಬಿಗಸ್ತಿಕೆಯಿಂದ ಬಿಡದೆ ಮುಂದುವರಿದ ಎಲೀಯನಂತೆ ನಾವು ಇರಬಲ್ಲೆವು.
19. ಒಂದನೆಯ ಜಾಗತಿಕ ಯುದ್ಧದ ಸಮಯದಲ್ಲಿ, ಅಭಿಷಿಕ್ತ ಕ್ರೈಸ್ತರು ಏನನ್ನು ಅನುಭವಿಸಿದರು?
19 ಒಂದನೆಯ ಜಾಗತಿಕ ಯುದ್ಧದ ಸಮಯದಲ್ಲಿನ ತೀಕ್ಷ್ಣವಾದ ಹಿಂಸೆಯ ಕಾರಣ, ಕೆಲವು ಅಭಿಷಿಕ್ತ ಕ್ರೈಸ್ತರು ಭಯಕ್ಕೆ ಒಳಗಾಗಿ, ಸಾರುವುದನ್ನು ನಿಲ್ಲಿಸಿದರು. ಭೂಮಿಯ ಮೇಲಿನ ತಮ್ಮ ಕೆಲಸವು ಕೊನೆಗೊಂಡಿತ್ತೆಂದು ನೆನಸುವುದರಲ್ಲಿ ಅವರು ತಪ್ಪುಮಾಡಿದರು. ಆದರೆ ದೇವರು ಅವರನ್ನು ತಿರಸ್ಕರಿಸಲಿಲ್ಲ. ಬದಲಿಗೆ, ಎಲೀಯನಿಗೆ ಆತನು ಆಹಾರವನ್ನು ಒದಗಿಸಿದಂತೆಯೇ ಅವರನ್ನು ಕರುಣಾಮಯವಾಗಿ ಪೋಷಿಸಿದನು. ಎಲೀಯನಂತೆ, ನಂಬಿಗಸ್ತ ಅಭಿಷಿಕ್ತ ಜನರು ದೈವಿಕ ತಿದ್ದುಪಾಟನ್ನು ಸ್ವೀಕರಿಸಿ, ನಿಷ್ಕ್ರಿಯತೆಯಿಂದ ಚೇತರಿಸಿಕೊಂಡರು. ರಾಜ್ಯದ ಸಂದೇಶವನ್ನು ಸಾರುವ ಮಹಾ ಸುಯೋಗಕ್ಕೆ ಅವರ ಕಣ್ಣುಗಳು ತೆರೆದುಕೊಂಡವು.
20. ಇಂದು, ಎಲೀಯನಂತೆ ನಂಬಿಗಸ್ತರಾಗಿರುವವರಿಗೆ ಯಾವ ಸುಯೋಗವು ಅನುಗ್ರಹಿಸಲ್ಪಟ್ಟಿದೆ?
20 ತನ್ನ ಸಾನ್ನಿಧ್ಯದ ಕುರಿತಾದ ಪ್ರವಾದನೆಯಲ್ಲಿ ಯೇಸು, ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೆ ಮೊದಲು ಪೂರ್ಣಗೊಳ್ಳಲಿರುವ ಲೋಕವ್ಯಾಪಕ ಕೆಲಸದ ಕುರಿತು ವಿವರಣೆ ನೀಡಿದನು. (ಮತ್ತಾಯ 24:14) ಇಂದು ಈ ಕೆಲಸವು, ಅಭಿಷಿಕ್ತ ಕ್ರೈಸ್ತರಿಂದ ಮತ್ತು ಪ್ರಮೋದವನ ಭೂಮಿಯ ಮೇಲೆ ಜೀವನಕ್ಕಾಗಿ ಎದುರುನೋಡುವ ಅವರ ಲಕ್ಷಾಂತರ ಸಂಗಾತಿಗಳಿಂದ ಪೂರೈಸಲ್ಪಡುತ್ತಿದೆ. ಅದು ಪೂರ್ಣಗೊಳ್ಳುವ ತನಕ ರಾಜ್ಯದ ಸಾರುವಿಕೆಯ ಕೆಲಸವನ್ನು ನೆರವೇರಿಸುವುದು, ಎಲೀಯನಂತೆ ನಂಬಿಗಸ್ತರಾಗಿರುವವರಿಗೆ ಮಾತ್ರ ಅನುಗ್ರಹಿಸಲ್ಪಡುವ ಸುಯೋಗವಾಗಿದೆ.
ಎಲೀಯನಂತೆ ನಂಬಿಗಸ್ತರಾಗಿರಿ
21, 22. (ಎ) ಇಂದು ಅಭಿಷಿಕ್ತ ಕ್ರೈಸ್ತರು ಯಾವ ಕೆಲಸದಲ್ಲಿ ನುಗ್ಗುಮೊನೆಯಾಗಿದ್ದಾರೆ? (ಬಿ) ಸಾರುವ ಕೆಲಸವು ಯಾವ ಸಹಾಯದಿಂದ ಸಾಧಿಸಲ್ಪಡುತ್ತಿದೆ, ಮತ್ತು ಅದರ ಅಗತ್ಯ ಏಕೆ ಇದೆ?
21 ಎಲೀಯನಿಗಿದ್ದಂತಹ ಹುರುಪಿನೊಂದಿಗೆ, ಯಥಾರ್ಥರಾದ ಅಭಿಷಿಕ್ತ ಕ್ರೈಸ್ತರ ಈ ಚಿಕ್ಕ ಉಳಿಕೆಯ ಗುಂಪಿನವರು, ಸಿಂಹಾಸನಾರೂಢನಾಗಿರುವ ಅರಸನಾದ ಯೇಸು ಕ್ರಿಸ್ತನ ಭೌಮಿಕ ಅಭಿರುಚಿಗಳಿಗಾಗಿ ಕಾಳಜಿ ವಹಿಸುವ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. (ಮತ್ತಾಯ 24:47) ಮತ್ತು ಈಗ 60ಕ್ಕಿಂತಲೂ ಹೆಚ್ಚಿನ ವರ್ಷಗಳಿಂದ, ದೇವರು ಯಾರಿಗೆ ಪ್ರಮೋದವನ ಭೂಮಿಯ ಮೇಲೆ ಅನಂತ ಜೀವನದ ಅದ್ಭುತಕರ ನಿರೀಕ್ಷೆಯನ್ನು ಕೊಟ್ಟಿದ್ದಾನೊ ಆ ಜನರನ್ನು, ಶಿಷ್ಯರನ್ನಾಗಿ ಮಾಡುವ ಕೆಲಸದ ನುಗ್ಗುಮೊನೆಯಾಗಿರಲು ಈ ಅಭಿಷಿಕ್ತ ಜನರನ್ನು ಉಪಯೋಗಿಸುತ್ತಿದ್ದಾನೆ. (ಮತ್ತಾಯ 28:19, 20) ಉಳಿದಿರುವ ಅಭಿಷಿಕ್ತ ಜನರಲ್ಲಿ ಸಾಪೇಕ್ಷವಾಗಿ ಕೆಲವರು ಹುರುಪಿನಿಂದ ಮತ್ತು ನಂಬಿಗಸ್ತಿಕೆಯಿಂದ ತಮ್ಮ ಜವಾಬ್ದಾರಿಗಳನ್ನು ನೆರವೇರಿಸುತ್ತಿರುವುದಕ್ಕಾಗಿ ಈ ಲಕ್ಷಾಂತರ ಜನರು ಎಷ್ಟೊಂದು ಕೃತಜ್ಞರಾಗಿರಬಲ್ಲರು!
22 ಈ ರಾಜ್ಯದ ಸಾರುವಿಕೆಯ ಕೆಲಸವು ಅಪರಿಪೂರ್ಣ ಮಾನವರಿಂದ ಮತ್ತು ಯೆಹೋವನ ಮೇಲೆ ಪ್ರಾರ್ಥನಾಪೂರ್ವಕವಾಗಿ ಆತುಕೊಳ್ಳುವವರಿಗೆ ಆತನು ಕೊಡುವ ಬಲದಿಂದ ಮಾತ್ರ ಸಾಧಿಸಲ್ಪಟ್ಟಿದೆ. ಒಬ್ಬ ನೀತಿವಂತ ಪುರುಷನ ಪ್ರಾರ್ಥನೆಯ ಶಕ್ತಿಯನ್ನು ತೋರಿಸುವ ಸಲುವಾಗಿ, ಪ್ರಾರ್ಥನೆಯ ವಿಷಯದಲ್ಲಿ ಆ ಪ್ರವಾದಿಯ ಮಾದರಿಯನ್ನು ಉದ್ಧರಿಸುತ್ತಾ, “ಎಲೀಯನು ನಮ್ಮಂಥ ಸ್ವಭಾವವುಳ್ಳವನಾಗಿದ್ದನು” ಎಂದು ಶಿಷ್ಯನಾದ ಯಾಕೋಬನು ಹೇಳಿದನು. (ಯಾಕೋಬ 5:16-18) ಎಲೀಯನು ಯಾವಾಗಲೂ ಪ್ರವಾದಿಸುತ್ತಾ ಇರಲಿಲ್ಲ ಇಲ್ಲವೆ ಅದ್ಭುತಗಳನ್ನು ಮಾಡುತ್ತಾ ಇರಲಿಲ್ಲ. ನಮ್ಮಲ್ಲಿರುವಂತಹ ಅದೇ ರೀತಿಯ ಮಾನವ ಅನಿಸಿಕೆಗಳು ಹಾಗೂ ಬಲಹೀನತೆಗಳು ಅವನಲ್ಲಿದ್ದವು, ಆದರೆ ಅವನು ನಂಬಿಗಸ್ತಿಕೆಯಿಂದ ದೇವರ ಸೇವೆಮಾಡಿದನು. ನಮಗೂ ದೇವರ ಸಹಾಯ ಇರುವುದರಿಂದ ಮತ್ತು ಆತನು ನಮ್ಮನ್ನು ಬಲಪಡಿಸುವುದರಿಂದ, ನಾವು ಎಲೀಯನಂತೆ ನಂಬಿಗಸ್ತರಾಗಿರಬಲ್ಲೆವು.
23. ನಂಬಿಗಸ್ತಿಕೆ ಹಾಗೂ ಆಶಾವಾದಕ್ಕೆ ನಮ್ಮಲ್ಲಿ ಸಕಾರಣವಿದೆ ಏಕೆ?
23 ನಂಬಿಗಸ್ತಿಕೆ ಹಾಗೂ ಆಶಾವಾದಕ್ಕೆ ನಮ್ಮಲ್ಲಿ ಸಕಾರಣವಿದೆ. ಸಾ.ಶ. 70ರಲ್ಲಿ “ಯೆಹೋವನ ದಿನವು” ಬಂದೆರಗುವ ಮೊದಲು, ಸ್ನಾನಿಕನಾದ ಯೋಹಾನನು ಎಲೀಯನಂತಹ ಕೆಲಸವನ್ನು ಮಾಡಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಎಲೀಯನ ಮನೋಭಾವ ಮತ್ತು ಶಕ್ತಿಯೊಂದಿಗೆ, ಅಭಿಷಿಕ್ತ ಕ್ರೈಸ್ತರು ತದ್ರೀತಿಯ ದೇವದತ್ತ ಕೆಲಸವನ್ನು ಭೂಮಿಯಾದ್ಯಂತ ಮಾಡಿದ್ದಾರೆ. “ಯೆಹೋವನ” ಮಹಾ “ದಿನವು” ನಿಕಟವಿದೆ ಎಂಬುದನ್ನು ಇದು ಸ್ಪಷ್ಟವಾಗಿ ರುಜುಪಡಿಸುತ್ತದೆ.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
◻ ಕಾರ್ಮೆಲ್ ಬೆಟ್ಟದ ಮೇಲೆ ಯೆಹೋವನ ದೇವತ್ವವು ಹೇಗೆ ದೃಢಪಡಿಸಲ್ಪಟ್ಟಿತು?
◻ ‘ಬರಲಿದ್ದ ಎಲೀಯನು’ ಯಾರಾಗಿದ್ದನು, ಮತ್ತು ಅವನು ಏನು ಮಾಡಿದನು?
◻ ತಮ್ಮಲ್ಲಿ ಎಲೀಯನ ಮನೋಭಾವವಿದೆಯೆಂಬುದನ್ನು ಪ್ರಚಲಿತ ದಿನದ ಅಭಿಷಿಕ್ತ ಕ್ರೈಸ್ತರು ಹೇಗೆ ತೋರಿಸಿದ್ದಾರೆ?
◻ ನಾವು ಎಲೀಯನಂತೆ ನಂಬಿಗಸ್ತರಾಗಿರಸಾಧ್ಯವಿದೆ ಏಕೆ?
[ಪುಟ 15 ರಲ್ಲಿರುವ ಚೌಕ]
ಎಲೀಯನು ಯಾವ ಪರಲೋಕಕ್ಕೆ ಏರಿಹೋದನು?
“ಅವರು [“ಎಲಿಯನು ಮತ್ತು ಎಲೀಷನು,” NW] ಮಾತಾಡುತ್ತಾ ಮುಂದೆ ಹೋಗುತ್ತಿರುವಾಗ ಫಕ್ಕನೆ ಅಗ್ನಿಮಯವಾದ ರಥರಥಾಶ್ವಗಳು ನಡುವೆ ಬಂದು ಅವರನ್ನು ವಿಂಗಡಿಸಿದವು. ಎಲೀಯನು ಸುಳಿಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಹೋದನು.”—2 ಅರಸುಗಳು 2:11.
ಈ ಸಂದರ್ಭದಲ್ಲಿ “ಪರಲೋಕ” ಎಂಬ ಪದದ ಅರ್ಥವೇನಾಗಿದೆ? ಆ ಪದವು ಕೆಲವೊಮ್ಮೆ ದೇವರ ಮತ್ತು ಆತನ ದೇವದೂತ ಪುತ್ರರ ಆತ್ಮಿಕ ವಾಸಸ್ಥಾನಕ್ಕೆ ಅನ್ವಯವಾಗುತ್ತದೆ. (ಮತ್ತಾಯ 6:9; 18:10) “ಪರಲೋಕ”ವು ಭೌತಿಕ ವಿಶ್ವವನ್ನೂ ಸೂಚಿಸಬಹುದು. (ಧರ್ಮೋಪದೇಶಕಾಂಡ 4:19) ಮತ್ತು ಬೈಬಲು ಈ ಪದವನ್ನು, ಪಕ್ಷಿಗಳು ಹಾರಾಡುವ ಮತ್ತು ಗಾಳಿಯು ಬೀಸುವ, ಭೂಮಿಯ ಅತಿ ಹತ್ತಿರದ ವಾಯುಮಂಡಲವನ್ನು ಸೂಚಿಸಲು ಉಪಯೋಗಿಸುತ್ತದೆ.—ಕೀರ್ತನೆ 78:26; ಮತ್ತಾಯ 6:26.
ಇವುಗಳಲ್ಲಿ ಯಾವ ಪರಲೋಕಕ್ಕೆ ಪ್ರವಾದಿಯಾದ ಎಲೀಯನು ಏರಿಹೋದನು? ಸ್ಪಷ್ಟವಾಗಿ, ಅವನು ಭೂಮಿಯ ವಾಯುಮಂಡಲದ ಮಾರ್ಗವಾಗಿ ಸ್ಥಳಾಂತರಿಸಲ್ಪಟ್ಟು, ಭೂಮಂಡಲದ ಮತ್ತೊಂದು ಭಾಗದಲ್ಲಿ ಇರಿಸಲ್ಪಟ್ಟನು. ತದನಂತರ ಅನೇಕ ವರ್ಷಗಳ ಕಾಲ ಎಲೀಯನು ಭೂಮಿಯ ಮೇಲಿದ್ದನು, ಏಕೆಂದರೆ ಅವನು ಯೆಹೂದದ ರಾಜ ಯೆಹೋರಾಮನಿಗೆ ಒಂದು ಪತ್ರವನ್ನು ಬರೆದನು. (2 ಪೂರ್ವಕಾಲವೃತ್ತಾಂತ 21:1, 12-15) ಎಲೀಯನು ಯೆಹೋವ ದೇವರ ಆತ್ಮಿಕ ವಾಸಸ್ಥಾನಕ್ಕೆ ಹೋಗಲಿಲ್ಲವೆಂಬ ವಿಷಯವು ತದನಂತರ ಯೇಸು ಕ್ರಿಸ್ತನಿಂದ ದೃಢೀಕರಿಸಲ್ಪಟ್ಟಿತು. ಅವನು ಹೀಗೆ ಪ್ರಕಟಿಸಿದನು: “ಪರಲೋಕದಿಂದ ಇಳಿದುಬಂದವನೇ ಅಂದರೆ ಮನುಷ್ಯಕುಮಾರನೇ,” ಅಂದರೆ, ಸ್ವತಃ ಯೇಸುವೇ “ಹೊರತು ಮತ್ತಾರೂ ಪರಲೋಕಕ್ಕೆ ಏರಿಹೋದವನಲ್ಲ.” (ಯೋಹಾನ 3:13) ಅಪರಿಪೂರ್ಣ ಮಾನವರಿಗೆ ಸ್ವರ್ಗೀಯ ಜೀವಿತಕ್ಕಾಗಿ ದಾರಿಯು, ಯೇಸು ಕ್ರಿಸ್ತನ ಮರಣ, ಪುನರುತ್ಥಾನ, ಮತ್ತು ದಿವಾರೋಹಣದ ಅನಂತರವೇ ಪ್ರಥಮವಾಗಿ ತೆರೆಯಲ್ಪಟ್ಟಿತು.—ಯೋಹಾನ 14:2, 3; ಇಬ್ರಿಯ 9:24; 10:19, 20.