ಸುಗ್ಗಿಹಬ್ಬಗಳು ದೇವರನ್ನು ಮೆಚ್ಚಿಸುತ್ತವೆಯೆ?
ರಸಭರಿತ ಹಣ್ಣುಗಳು, ಆನಂದದಾಯಕ ಕಾಯಿಪಲ್ಯಗಳು ಮತ್ತು ಎತ್ತರಕ್ಕೆ ರಾಶಿ ಹಾಕಿರುವ ಪುಷ್ಟಿಕರ ಧಾನ್ಯದ ಸಿವುಡುಗಳು, ಮನಸ್ಸಿಗೆ ಹಿಡಿಸುವ ಚಿತ್ರವನ್ನು ಪ್ರದರ್ಶಿಸುತ್ತವೆ. ಸುಗ್ಗಿಯ ಕಾಲದಲ್ಲಿ ಇಂತಹ ಪ್ರದರ್ಶನಗಳು ಇಂಗ್ಲೆಂಡಿನಾದ್ಯಂತ ಚರ್ಚುಗಳ ಬಲಿಪೀಠ ಮತ್ತು ಉಪದೇಶ ವೇದಿಕೆಗಳನ್ನು ಅಲಂಕರಿಸುತ್ತವೆ. ಬೇರೆ ಕಡೆಗಳಲ್ಲಿರುವಂತೆಯೇ, ಯೂರೋಪಿನಲ್ಲಿ ಸುಗ್ಗಿಕಾಲದ ಆರಂಭ ಮತ್ತು ಅಂತ್ಯ—ಇವೆರಡನ್ನೂ ಅನೇಕ ಆಚರಣೆಗಳು ಗುರುತಿಸುತ್ತವೆ.
ಮಣ್ಣನ್ನು ಅವಲಂಬಿಸಿ ಜೀವನೋಪಾಯಮಾಡುವವರು, ಜಮೀನಿನ ಉತ್ಪನ್ನಕ್ಕಾಗಿ ವಿಶೇಷವಾಗಿ ಕೃತಜ್ಞರಾಗಿರುತ್ತಾರೆ. ವಾಸ್ತವವಾಗಿ, ಪುರಾತನಕಾಲದ ಇಸ್ರಾಯೇಲ್ ಜನಾಂಗವು ಸುಗ್ಗಿಯೊಂದಿಗೆ ಒತ್ತಾಗಿ ಕೂಡಿಕೊಂಡಿದ್ದ ಮೂರು ವಾರ್ಷಿಕ ಹಬ್ಬಗಳನ್ನು ಆಚರಿಸುವಂತೆ ದೇವರು ಕರೆಕೊಟ್ಟನು. ಬೇಸಗೆಯ ಆರಂಭದಲ್ಲಿ ನಡೆಯುತ್ತಿದ್ದ ಹುಳಿಯಿಲ್ಲದ ರೊಟ್ಟಿಯ ಹಬ್ಬದ ಸಮಯದಲ್ಲಿ, ಇಸ್ರಾಯೇಲ್ಯರು ದೇವರಿಗೆ ಜವೆ ಸುಗ್ಗಿಯ ಪ್ರಥಮಫಲಗಳ ಕಟ್ಟೊಂದನ್ನು ಅರ್ಪಿಸಿದರು. ಬೇಸಗೆಯ ಕೊನೆಯ ಭಾಗದಲ್ಲಿ ಬಂದ ಸುಗ್ಗಿಯ ಜಾತ್ರೆ (ಅಥವಾ, ಪಂಚಾಶತ್ತಮ)ಯಲ್ಲಿ ಅವರು ಗೋಧಿಯ ಸುಗ್ಗಿಯ ಪ್ರಥಮಫಲಗಳಿಂದ ಮಾಡಿದ ರೊಟ್ಟಿಯನ್ನು ಅರ್ಪಿಸಿದರು. ಇಸ್ರಾಯೇಲಿನ ಶರತ್ಕಾಲದಲ್ಲಿನ ಫಲಸಂಗ್ರಹದ ವ್ಯಾವಸಾಯಿಕ ವರ್ಷಾಂತ್ಯವನ್ನು ಗುರುತಿಸಿದ ಹಬ್ಬವು ಬಂತು. (ವಿಮೋಚನಕಾಂಡ 23:14-17) ಈ ಹಬ್ಬಗಳು “ಪವಿತ್ರ ಸಮ್ಮೇಳನಗಳು” (NW) ಮತ್ತು ಉಲ್ಲಾಸಿಸುವ ಸಮಯಗಳಾಗಿದ್ದವು.—ಯಾಜಕಕಾಂಡ 23:2; ಧರ್ಮೋಪದೇಶಕಾಂಡ 16:16.
ಹಾಗಾದರೆ, ಆಧುನಿಕ ದಿನಗಳ ಸುಗ್ಗಿ ಆಚರಣೆಗಳ ವಿಷಯದಲ್ಲೇನು? ಅವು ದೇವರನ್ನು ಮೆಚ್ಚಿಸುತ್ತವೋ?
ವಿಧರ್ಮಿ ಸಂಬಂಧಗಳು
ಸಾಂಪ್ರದಾಯಿಕ ಸುಗ್ಗಿಸಮಯದ ಔತಣಕೂಟದ ಐಹಿಕ ಲಕ್ಷಣ ಮತ್ತು ಆ ಆಚರಣೆಯೊಂದಿಗೆ ಕೂಡಿರುವ ಕುಡುಕತನದಿಂದ ಚಿಂತಿತನಾಗಿ, ಇಂಗ್ಲೆಂಡಿನ ಕಾರ್ನ್ವಾಲ್ನಲ್ಲಿನ ಒಬ್ಬ ಆ್ಯಂಗ್ಲಿಕನ್ ಪುರೋಹಿತನು, 1843ರಲ್ಲಿ ಮಧ್ಯಯುಗದ ಸುಗ್ಗಿ ಪದ್ಧತಿಯನ್ನು ಸಚೇತನಗೊಳಿಸಲು ನಿರ್ಧರಿಸಿದನು. ಅವನು ಸುಗ್ಗಿಯ ಪ್ರಥಮ ಧಾನ್ಯದಲ್ಲಿ ಸ್ವಲ್ಪವನ್ನು ತೆಗೆದುಕೊಂಡು, ಅದರಿಂದ ತನ್ನ ಚರ್ಚಿನಲ್ಲಿ ಪ್ರಭುಭೋಜನ ಆಚರಣೆಗಾಗಿ ರೊಟ್ಟಿಯನ್ನು ಮಾಡಿದನು. ಹಾಗೆ ಮಾಡಿ, ಅವನು ಲಾಮಸ್ ಉತ್ಸವವನ್ನು—ಸೆಲ್ಟಿಕ್ ದೇವತೆ ಲೂಕ್ನ ಪುರಾತನ ಆರಾಧನೆಯಲ್ಲಿ ಈ “ಕ್ರೈಸ್ತ” ಆಚರಣೆಯ ಮೂಲವಿತ್ತು ಎಂದು ಕೆಲವರು ಹೇಳುತ್ತಾರೆ—ಚಿರಸ್ಮರಣೀಯವನ್ನಾಗಿ ಮಾಡಿದನು.a ಹೀಗೆ, ಆಧುನಿಕ ಆ್ಯಂಗ್ಲಿಕನ್ ಸುಗ್ಗಿಹಬ್ಬಕ್ಕೆ ಒಂದು ವಿಧರ್ಮಿ ಮೂಲವಿದೆ.
ಸುಗ್ಗಿಕಾಲದ ಅಂತ್ಯದಲ್ಲಿ ನಡೆಯುವ ಬೇರೆ ಆಚರಣೆಗಳ ವಿಷಯದಲ್ಲೇನು? ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕಕ್ಕನುಸಾರ, ಈ ಉತ್ಸವಗಳನ್ನು ಗುರುತಿಸುವ ಅನೇಕ ಪದ್ಧತಿಗಳು ತಮ್ಮ ಮೂಲವನ್ನು “ಧಾನ್ಯಾತ್ಮ ಅಥವಾ ಧಾನ್ಯಮಾತೆಯ ಚೇತನವಾದ ನಂಬಿಕೆ”ಯಲ್ಲಿ ಪತ್ತೆಹಚ್ಚುತ್ತವೆ. ಕೆಲವು ಪ್ರದೇಶಗಳಲ್ಲಿ ಬೇಸಾಯಗಾರರು, ತಾವು ಕೊಯ್ಯಲಿರುವ ಧಾನ್ಯದ ಕೊನೆಯ ಸಿವುಡಿನಲ್ಲಿ ಒಂದು ಆತ್ಮ ಜೀವಿಸುತ್ತದೆಂದು ನಂಬಿದರು. ಆ ಆತ್ಮವನ್ನು ಓಡಿಸಲಿಕ್ಕಾಗಿ ಅವರು ಆ ಧಾನ್ಯದ ಕೊನೆಯ ಸಿವುಡನ್ನು ಬಡಿದು ಪ್ರತಿಯೊಂದು ಕಾಳನ್ನೂ ನೆಲಕ್ಕುರುಳಿಸುತ್ತಿದ್ದರು. ಬೇರೆ ಕಡೆಗಳಲ್ಲಿ, ಅವರು ಆ ಧಾನ್ಯದ ಕೆಲವು ಎಲೆಗಳನ್ನು “ಧಾನ್ಯ ಬೊಂಬೆ”ಯಾಗಿ ಹೆಣೆದು, ಮುಂದಿನ ವರ್ಷ ಬೀಜ ಬಿತ್ತುವ ವರೆಗೆ “ಅದೃಷ್ಟ”ಕ್ಕಾಗಿ ಭದ್ರವಾಗಿಟ್ಟರು. ಬಳಿಕ ಅವರು ಧಾನ್ಯದ ತೆನೆಗಳನ್ನು, ಹೊಸ ಬೆಳೆಯನ್ನು ಆಶೀರ್ವದಿಸುವುದೆಂಬ ನಿರೀಕ್ಷೆಯಿಂದ ಮಣ್ಣಿನೊಳಗೆ ಉತ್ತರು.
ಕೆಲವು ಐತಿಹ್ಯಗಳು ಸುಗ್ಗಿಕಾಲವನ್ನು, ಫಲಶಕ್ತಿಯ ದೇವತೆಯಾದ ಇಷ್ಟಾರಳ ಪತಿಯೂ, ಬಾಬೆಲಿನ ದೇವನೂ ಆದ ತಮ್ಮೂಜ್ನ ಆರಾಧನೆಯೊಂದಿಗೆ ಜೋಡಿಸುತ್ತವೆ. ಧಾನ್ಯದ ಮಾಗಿದ ತೆನೆಯ ಕತ್ತರಿಸುವಿಕೆಯು, ತಮ್ಮೂಜ್ನ ಅಕಾಲಿಕ ಮರಣಕ್ಕೆ ಸಮಾನವಾಗಿತ್ತು. ಬೇರೆ ಐತಿಹ್ಯಗಳು ಸುಗ್ಗಿಕಾಲವನ್ನು, ಯೆಹೋವ ದೇವರು ಹೇಸುವ ಆಚಾರವಾದ ಮಾನವ ಬಲಿಗೂ ಸಂಬಂಧಿಸುತ್ತವೆ.—ಯಾಜಕಕಾಂಡ 20:2; ಯೆರೆಮೀಯ 7:30, 31.
ದೇವರ ವೀಕ್ಷಣವೇನು?
ಪುರಾತನ ಇಸ್ರಾಯೇಲಿನೊಂದಿಗೆ ದೇವರು ಮಾಡಿದ ವ್ಯವಹಾರಗಳು, ಜೀವದ ಮೂಲನೂ ಸೃಷ್ಟಿಕರ್ತನೂ ಆದ ಯೆಹೋವ ದೇವರು ತನ್ನ ಆರಾಧಕರಿಂದ ಅನನ್ಯ ಭಕ್ತಿಯನ್ನು ಅಗತ್ಯಪಡಿಸಿದನೆಂದು ಸ್ಪಷ್ಟವಾಗಿ ತೋರಿಸುತ್ತವೆ. (ಕೀರ್ತನೆ 36:9; ನಹೂಮ 1:2) ಪ್ರವಾದಿ ಯೆಹೆಜ್ಕೇಲನ ದಿನದಲ್ಲಿ, ತಮ್ಮೂಜ್ ದೇವನಿಗಾಗಿ ಅಳುವ ಪದ್ಧತಿಯು, ಯೆಹೋವನ ದೃಷ್ಟಿಯಲ್ಲಿ ‘ಭಾರಿ ಅಸಹ್ಯಕರವಾದ ವಿಷಯ’ವಾಗಿತ್ತು (NW). ಇದು ಮತ್ತು ಇತರ ಸುಳ್ಳು ಧಾರ್ಮಿಕ ಸಂಸ್ಕಾರಗಳು, ಆ ಮಿಥ್ಯಾರಾಧಕರ ಪ್ರಾರ್ಥನೆಗಳಿಗೆ ದೇವರು ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವಂತೆ ಮಾಡಿದವು.—ಯೆಹೆಜ್ಕೇಲ 8:6, 13, 14, 18.
ಇದನ್ನು, ಸುಗ್ಗಿಯ ಸಂಬಂಧದಲ್ಲಿ ಇಸ್ರಾಯೇಲ್ಯರು ಆಚರಿಸುವಂತೆ ಯೆಹೋವ ದೇವರು ತಿಳಿಸಿದ್ದರೊಂದಿಗೆ ಹೋಲಿಸಿರಿ. ಫಲಸಂಗ್ರಹ ಹಬ್ಬದಲ್ಲಿ, ಇಸ್ರಾಯೇಲ್ಯರು ಒಂದು ಗಂಭೀರ ಸಮ್ಮೇಳನವನ್ನು ನಡೆಸಿದರು. ಆ ಸಮಯದಲ್ಲಿ ಆಬಾಲವೃದ್ಧರು, ಧನಿಕರೂ ಬಡವರೂ, ಶೋಭಾಯಮಾನವಾದ ಮರಗಳ ಸೊಂಪಾದ ಹಸಿರು ಪರ್ಣಾಲಂಕೃತ ತಾತ್ಕಾಲಿಕ ವಾಸಸ್ಥಳಗಳಲ್ಲಿ ವಾಸಿಸಿದರು. ಇದು ಅವರಿಗೆ ಮಹಾ ಸಂತೋಷದ ಸಮಯವಾಗಿತ್ತು ಮಾತ್ರವಲ್ಲ, ದೇವರು ತಮ್ಮ ಪಿತೃಗಳಿಗೆ ಐಗುಪ್ತದಿಂದ ನಿರ್ಗಮನದ ಸಮಯದಲ್ಲಿ ಕೊಟ್ಟ ವಿಮೋಚನೆಯ ಕುರಿತು ಚಿಂತನೆ ಮಾಡುವ ಸಮಯವೂ ಆಗಿತ್ತು.—ಯಾಜಕಕಾಂಡ 23:40-43.
ಇಸ್ರಾಯೇಲ್ಯರ ಹಬ್ಬಗಳ ಸಮಯದಲ್ಲಿ, ಏಕೈಕ ಸತ್ಯ ದೇವರಾದ ಯೆಹೋವನಿಗೆ ಅರ್ಪಣೆಗಳನ್ನು ಮಾಡಲಾಯಿತು. (ಧರ್ಮೋಪದೇಶಕಾಂಡ 8:10-20) ಮೇಲೆ ಹೇಳಲಾಗಿರುವ ಚೇತನವಾದಾತ್ಮಕ ನಂಬಿಕೆಗಳ ವಿಷಯದಲ್ಲಿಯೊ, ಗೋಧಿಯ ಸಿವುಡುಗಳಂತಹ ಉತ್ಪನ್ನವು ಪ್ರಾಣವುಳ್ಳದ್ದಾಗಿದೆಯೆಂದು ಬೈಬಲು ಎಲ್ಲಿಯೂ ಹೇಳುವುದಿಲ್ಲ.b ಮತ್ತು ವಿಗ್ರಹಗಳು ಮಾತನಾಡಲು, ನೋಡಲು, ಕೇಳಲು, ವಾಸನೆ ತಿಳಿಯಲು, ಸ್ಪರ್ಶಜ್ಞಾನವಿರಲು ಅಥವಾ ತಮ್ಮ ಆರಾಧಕರಿಗೆ ಯಾವುದೇ ಸಹಾಯವನ್ನು ನೀಡಲು ಅಶಕ್ತವಾಗಿದ್ದು, ಅಚೇತನವಾಗಿ ಇರುತ್ತವೆಂದು ಶಾಸ್ತ್ರಗಳು ಸ್ಪಷ್ಟವಾಗಿ ತೋರಿಸುತ್ತವೆ.—ಕೀರ್ತನೆ 115:5-8; ರೋಮಾಪುರ 1:23-25.
ಕ್ರೈಸ್ತರು ಇಂದು, ಪುರಾತನ ಇಸ್ರಾಯೇಲ್ ಜನಾಂಗದೊಂದಿಗೆ ದೇವರು ಮಾಡಿದ ನಿಯಮದ ಒಡಂಬಡಿಕೆಯ ಕೆಳಗಿರುವುದಿಲ್ಲ. ಹೌದು, ದೇವರು ಅದನ್ನು, ‘ಯೇಸುವಿನ ಯಾತನೆಯ ಕಂಬಕ್ಕೆ ಜಡಿದು ತೆಗೆದುಹಾಕಿದನು.’ (ಕೊಲೊಸ್ಸೆ 2:13, 14) ಯೆಹೋವನ ಆಧುನಿಕ ದಿನದ ಸೇವಕರು “ಕ್ರಿಸ್ತನ ನಿಯಮ”ದ ಪ್ರಕಾರ ಜೀವಿಸಿ, ದೇವರು ಒದಗಿಸುವ ಸಕಲ ವಿಷಯಗಳಿಗೆ ಗಣ್ಯತಾಪೂರ್ವಕವಾಗಿ ಪ್ರತಿವರ್ತನೆ ತೋರಿಸುತ್ತಾರೆ.—ಗಲಾತ್ಯ 6:2.
ಯೆಹೂದಿ ಹಬ್ಬಗಳು “ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆ”ಯಾಗಿದ್ದವೆಂದೂ, ಇದಕ್ಕೆ ಕೂಡಿಸಿ “ವಾಸ್ತವಿಕತೆಯು ಕ್ರಿಸ್ತನಿಗೆ ಸೇರಿದ್ದಾಗಿದೆ” (NW) ಎಂದೂ ಅಪೊಸ್ತಲ ಪೌಲನು ಸರಳವಾಗಿ ಹೇಳಿದನು. (ಕೊಲೊಸ್ಸೆ 2:16, 17) ಆದುದರಿಂದ, ಸತ್ಯ ಕ್ರೈಸ್ತರು ಶಾಸ್ತ್ರಾಧಾರಿತವಾದ ಈ ತರ್ಕಬದ್ಧತೆಯನ್ನು ಅಂಗೀಕರಿಸುತ್ತಾರೆ: “ಆದರೆ ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ ದೆವ್ವಗಳಿಗೆ ಅರ್ಪಿಸುತ್ತಾರೆಂದು ನನ್ನ ಅಭಿಪ್ರಾಯವು. . . . ನೀವು ಕರ್ತನ [“ಯೆಹೋವನ,” NW] ಪಾತ್ರೆ ಮತ್ತು ದೆವ್ವಗಳ ಪಾತ್ರೆ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಕುಡಿಯಲಾರಿರಿ.” (1 ಕೊರಿಂಥ 10:20, 21) ಇದಲ್ಲದೆ, “ಅಶುದ್ಧವಾದ ಯಾವದನ್ನೂ ಮುಟ್ಟದಿರಿ” ಎಂಬ ಆದೇಶಕ್ಕೆ ಕ್ರೈಸ್ತರು ಕಿವಿಗೊಡುತ್ತಾರೆ. ನಿಮ್ಮ ನೆರೆಹೊರೆಯಲ್ಲಿರುವ ಸುಗ್ಗಿಹಬ್ಬಗಳಿಗೆ, ವಿಧರ್ಮಿ ಅಥವಾ ಸುಳ್ಳು ಧಾರ್ಮಿಕ ಲಕ್ಷಣಗಳಿವೆಯೆ? ಹಾಗಿರುವಲ್ಲಿ, ಸತ್ಯ ಕ್ರೈಸ್ತರು ಅಂತಹ ಮಲಿನಗೊಂಡ ಆರಾಧನೆಯಲ್ಲಿ ಯಾವುದೇ ರೀತಿಯಲ್ಲಿ ಒಳಗೂಡಲು ನಿರಾಕರಿಸುವ ಮೂಲಕ, ಯೆಹೋವನನ್ನು ಅಪ್ರಸನ್ನಗೊಳಿಸುವುದರಿಂದ ದೂರವಿರಬಹುದು.—2 ಕೊರಿಂಥ 6:17.
ಗುಣಗ್ರಾಹಿಯಾದ ಒಬ್ಬ ಹುಡುಗನು ಅವನ ತಂದೆಯಿಂದ ಒಂದು ಕೊಡುಗೆಯನ್ನು ಪಡೆಯುವಲ್ಲಿ, ಅವನು ಯಾರಿಗೆ ಕೃತಜ್ಞತೆ ಹೇಳುವನು? ತೀರ ಅಪರಿಚಿತನಿಗೊ, ತಂದೆಗೊ? ದೇವರ ಆರಾಧಕರು ಹಾರ್ದಿಕ ಪ್ರಾರ್ಥನೆಯ ಮೂಲಕ, ಆತನ ಹೇರಳವಾದ ಉದಾರಭಾವಕ್ಕಾಗಿ ದಿನಾಲೂ ತಮ್ಮ ಸ್ವರ್ಗೀಯ ಪಿತನಾದ ಯೆಹೋವನಿಗೆ ಕೃತಜ್ಞತೆ ಸಲ್ಲಿಸುತ್ತಾರೆ.—2 ಕೊರಿಂಥ 6:18; 1 ಥೆಸಲೊನೀಕ 5:17, 18.
[ಅಧ್ಯಯನ ಪ್ರಶ್ನೆಗಳು]
a “ಲಾಮಸ್” ಎಂಬ ಪದವು “ಲೋಫ್-ಮ್ಯಾಸ್” ಎಂಬರ್ಥವುಳ್ಳ ಹಳೆಯ ಇಂಗ್ಲಿಷ್ ಪದದಿಂದ ಬಂದಿದೆ.
b ಶಾಸ್ತ್ರಗಳ ಮೇಲೆ ಒಳನೋಟ (ಇಂಗ್ಲಿಷ್) ಪುಸ್ತಕವು ಹೇಳುವುದು: “ಮೂರನೆಯ ಸೃಷ್ಟಿ ‘ದಿನ’ದಲ್ಲಿ (ಆದಿ 1:11-13) ಮಾಡಿದ ಸಸ್ಯಜೀವ ಸೃಷ್ಟಿಯ ಸಂಬಂಧದಲ್ಲಿ ಅಥವಾ ಆ ಬಳಿಕ, ಸಸ್ಯವು ರಕ್ತರಹಿತವಾಗಿರುವುದರಿಂದ, ನೆಫೆಷ್ (ಪ್ರಾಣ) ಎಂಬ ಪದವನ್ನು ಉಪಯೋಗಿಸಲಾಗುವುದಿಲ್ಲ.”—ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.